Tag: ಬೈಲೂರು

  • ನೀಲಿಕುರುಂಜಿ ಹೂಗಳ ಚಾದರ – ಪುಣಜನೂರು, ಬೈಲೂರಿನ ಹಸಿರಿನ ಬೆಟ್ಟಗಳು ನೀಲಿಮಯ

    ನೀಲಿಕುರುಂಜಿ ಹೂಗಳ ಚಾದರ – ಪುಣಜನೂರು, ಬೈಲೂರಿನ ಹಸಿರಿನ ಬೆಟ್ಟಗಳು ನೀಲಿಮಯ

    ಚಾಮರಾಜನಗರ: ಹಸಿರಿನಿಂದ ಕಂಗೊಳಿಸುತ್ತಿರುವ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೈಲೂರು ವಲಯಗಳ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಂಡಿದ್ದು, ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುತ್ತಿವೆ.

    ಪ್ರತಿ 12 ವರ್ಷಗಳಿಗೊಮ್ಮೆ ಅರಳುವ “ನೀಲಿಕುರುಂಜಿ” ಹೂಗಳು ಘಟ್ಟ ಪ್ರದೇಶಗಳಲ್ಲಿ ಅರಳಿ ನಿಂತಿದ್ದು, ಹಸಿರಿನ ಬೆಟ್ಟಕ್ಕೆ ನೀಲಿ ಚಾದರ ಹೊದಿಸಿವೆ. ಅಪರೂಪದ ಜೀವ ವೈವಿಧ್ಯ ತಾಣವಾಗಿರುವ ಬಿಆರ್‍ಟಿ ಪ್ರದೇಶದಲ್ಲಿ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಡನ್ನು ಭೂ ಲೋಕದ ಸ್ವರ್ಗವಾಗಿಸುತ್ತದೆ.  ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಹೂವನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತ ಕೇರಳ ಹಾಗೂ ತಮಿಳುನಾಡಿಗರು ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಬೆಟ್ಟದ ಹೂ ನೀಲಿಕುರುಂಜಿ ಸೊಬಗು ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಪರಿಚಯವಾದ ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ

  • ಕಾಮಿಡಿ ಕಿಲಾಡಿ ಗೆಲ್ಲಲು ಕೊರಗಜ್ಜ ದೈವದ ಆಶೀರ್ವಾದ: ರಾಕೇಶ್ ಪೂಜಾರಿ

    ಕಾಮಿಡಿ ಕಿಲಾಡಿ ಗೆಲ್ಲಲು ಕೊರಗಜ್ಜ ದೈವದ ಆಶೀರ್ವಾದ: ರಾಕೇಶ್ ಪೂಜಾರಿ

    -ಹರಕೆ ತೀರಿಸಿದ ರಾಕೇಶ್ ಪೂಜಾರಿ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯ ಜನ ದೇವರನ್ನು ಪೂಜಿಸುವಷ್ಟೇ ದೈವಗಳನ್ನು ಆರಾಧಿಸುತ್ತಾರೆ. ದೈವ ಕೊರಗಜ್ಜ ಪವಾಡಗಳ ದೈವ ಎಂದೇ ಪ್ರತೀತಿ ಪಡೆದ ಶಕ್ತಿ. ಇತ್ತೀಚೆಗಷ್ಟೇ ಖಾಸಗಿ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ ಶೋ ಗೆದ್ದ ರಾಕೇಶ್ ಪೂಜಾರಿ ಮೂಲತಃ ಉಡುಪಿ ಜಿಲ್ಲೆಯವರು. ಕಾಮಿಡಿ ಕಿಲಾಡಿ ಪ್ರಶಸ್ತಿ ಗೆದ್ದ ಕೂಡಲೇ ರಾಕೇಶ್ ಹರಕೆ ಒಪ್ಪಿಸಲು ಕೊರಗಜ್ಜನ ಸನ್ನಿಧಾನಕ್ಕೆ ಓಡೋಡಿ ಬಂದಿದ್ದಾರೆ.

    ಉಡುಪಿಯ ಬೈಲೂರಿನಲ್ಲಿರುವ ನೀಲಕಂಠ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ರಾಕೇಶ್ ಪೂಜಾರಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ರಿಯಾಲಿಟಿ ಶೋ ಆರಂಭಕ್ಕೆ ಮುನ್ನ ಕೊರಗಜ್ಜನಿಗೆ ಹರಕೆ ಹೇಳಿದ್ದ ರಾಕೇಶ್, ತನ್ನ ಹರಕೆಯನ್ನು ತೀರಿಸಿದ್ದಾರೆ. ಎಲ್ಲಾ ಕಡೆ ದೈವ ದೇವರುಗಳಿಗೆ ದುಬಾರಿ ವೆಚ್ಚದ ಹರಕೆಯನ್ನು ತೀರಿಸಲಾಗುತ್ತದೆ. ಆದರೆ ಉಡುಪಿಯ ಕೊರಗಜ್ಜನಿಗೆ ಎಲೆ ಅಡಿಕೆ, ಚಕ್ಕುಲಿ ಮತ್ತು ಮದ್ಯವೇ ಹರಕೆ. ರಿಯಾಲಿಟಿ ಶೋದಲ್ಲಿ ಪ್ರತಿ ಬಾರಿ ವೇದಿಕೆ ಪ್ರವೇಶಕ್ಕೆ ಮುನ್ನ ಬೈಲೂರು ಬಬ್ಬುಸ್ವಾಮಿ ಕೊರಗಜ್ಜ ದೈವವನ್ನು ರಾಕೇಶ್ ಮನಸ್ಸಿನಲ್ಲಿ ನೆನೆಯುತ್ತಿದ್ದರಂತೆ. ತಾನು ಹೇಳಿದ ಹರಕೆಯಂತೆ ರಾಕೇಶ್ ಗೆಳೆಯರ ಜೊತೆ ಬಂದು ದೇವರಿಗೆ ಹರಕೆ ತೀರಿಸಿದ್ದಾರೆ.

    76 ಬಡಗಬೆಟ್ಟು ಬೈಲೂರು ನೀಲಕಂಠ ಮಹಾಸ್ವಾಮಿ ದೈವಸ್ಥಾನಕ್ಕೆ ಸೆಲೆಬ್ರಿಟಿಗಳ ದಂಡೇ ಹರಿದು ಬರುತ್ತದೆ. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಯಶಸ್ವಿಯಾದಾಗ ನಿರ್ದೇಶಕ ರಿಷಬ್ ಶೆಟ್ಟಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸಿದ್ದರು. ಉಳಿದವರು ಕಂಡಂತೆ ಚಿತ್ರದ ಸಂದರ್ಭದಿಂದ ಅವನೇ ಶ್ರೀಮನ್ನಾರಾಯಣ ಚಿತ್ರದವರೆಗೂ ನಟ ರಕ್ಷಿತ್ ಶೆಟ್ಟಿ ಕ್ಷೇತ್ರದ ಭಕ್ತ. ಇದೀಗ ರಾಕೇಶ್ ಗೆಲುವು ಕ್ಷೇತ್ರದಲ್ಲಿ ಹೇಳಿಕೊಂಡ ಹರಕೆಯಿಂದ ಸಿದ್ಧಿ ಪಡೆಯುತ್ತದೆ, ದೈವಕ್ಕೆ ಕಾರಣಿಕ ಇದೆ ಎಂಬೂದಕ್ಕೆ ಸಾಕ್ಷಿಯಿದು. ಇದನ್ನೂ ಓದಿ: ರಕ್ಷಿತ್, ರಿಷಬ್‌ಗೆ ಬೈಲೂರು ಕೊರಗಜ್ಜನ ಅಭಯ

    ಸ್ಥಳೀಯ ಚೇತನ್ ಮಾತನಾಡಿ, ಕೊರಗಜ್ಜ ದೈವ ತುಳುನಾಡಿನಲ್ಲಿ ಅದರಲ್ಲೂ ಕಲಿಯುಗದಲ್ಲಿ ಬಹಳ ಶಕ್ತಿ ಇರುವ ದೈವ. ಯಾವುದೇ ಕಷ್ಟ ಬಂದ್ರೆ ಕೊರಗಜ್ಜ ದೈವದ ಬಳಿ ತನ್ನ ಕಷ್ಟವನ್ನು ಹೇಳಿಕೊಂಡರೆ ಹಲವಾರು ಜನರಿಗೆ ಇದರಲ್ಲಿ ಉಪಯೋಗವಾಗಿದೆ. ದೈವ ಅವರ ಕಷ್ಟವನ್ನೆಲ್ಲಾ ನಿವಾರಿಸಿ ಕೊಟ್ಟಿದ್ದಾರೆ. ಹಲವಾರು ಮಂದಿ ಚಲನ ಚಿತ್ರ ನಟರು ಬಂದಿದ್ದಾರೆ. ನಂಬಿದವರಿಗೆ ಇಂಬು ಕೊಡುವ ದೈವ ಅಂದ್ರೆ ಅದು ಕೊರಗಜ್ಜ.

    ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಾಕೇಶ್ ಮೊದಲು ಹರಕೆ ತೀರಿಸಲು ಆಗಮಿಸಿದರು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ನಾನು ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ. ಈ ಕ್ಷೇತ್ರದ ಬಗ್ಗೆ ಆರು ತಿಂಗಳ ಹಿಂದೆ ನನಗೆ ತಿಳಿದು ಬಂತು. ಕಾಮಿಡಿ ಕಿಲಾಡಿಗೆ ಸೆಲೆಕ್ಟ್ ಆಗಬೇಕು ಎಂದು ಈ ಕ್ಷೇತ್ರಕ್ಕೆ ಹರಕೆ ಹೇಳಿದ್ದೆ. ಆದರೆ ಈ ದೈವ ನನ್ನನ್ನು ಸ್ಪರ್ಧೆಯಲ್ಲಿ ಗೆಲ್ಲಿಸಿ ಕೊಟ್ಟಿದೆ ಎಂದು ಖುಷಿ ಹಂಚಿಕೊಂಡರು.

    ನನ್ನ ಜೀವನದಲ್ಲಿ ಈ ದೇವರನ್ನು ಆರಾಧನೆ ಮಾಡಿದ ಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅನುಭವ ಹೇಳಿಕೊಂಡರು. ಪ್ರತಿ ಬಾರಿ ಒಂದೊಂದೇ ಮೆಟ್ಟಿಲು ಮೇಲಕ್ಕೆ ಈ ದೈವ ನನ್ನನ್ನು ತೆಗೆದುಕೊಂಡು ಹೋಗಿದೆ. ಪ್ರತಿ ಬಾರಿ ವೇದಿಕೆ ಹತ್ತುವ ಮೊದಲು ಸ್ವಾಮಿ ಕೊರಗಜ್ಜ ಎಂದು ಮನಸ್ಸಿನಲ್ಲಿ ಒಂದು ಬಾರಿ ನೆನಪು ಮಾಡಿಕೊಳ್ಳುತ್ತಿದ್ದೆ. ಈ ಕ್ಷೇತ್ರದ ಪ್ರಸಾದವನ್ನು ಹಣೆಗೆ ಇಟ್ಟುಕೊಂಡರೆ ಏನೋ ಒಂದು ವಿಶೇಷ ಶಕ್ತಿ ಬರುತ್ತಿತ್ತು. ವೇದಿಕೆ ಹತ್ತಲು ಯಾವುದೇ ಅಳುಕು ಆತಂಕ ಇಲ್ಲದಂತಾಗುತ್ತಿತ್ತು. ಮುಂದೆಯೂ ನಾನು ಊರಿಗೆ ಬಂದಾಗ ವಿಶೇಷ ದಿನಗಳಲ್ಲಿ ಕೊರಗಜ್ಜ ದೈವದ ಆರಾಧನೆ ಮಾಡುತ್ತೇನೆ ಹರಕೆ ತೀರಿಸುತ್ತೇನೆ ಎಂದು ಹೇಳಿದರು.

  • ರಕ್ಷಿತ್, ರಿಷಬ್‌ಗೆ ಬೈಲೂರು ಕೊರಗಜ್ಜನ ಅಭಯ

    ರಕ್ಷಿತ್, ರಿಷಬ್‌ಗೆ ಬೈಲೂರು ಕೊರಗಜ್ಜನ ಅಭಯ

    – ಗುಡಿಯಿಲ್ಲದೆ ಕಲದಲ್ಲಿ ನೆಲೆನಿಂತ ದೈವಕ್ಕಿದೆ ವಿಶೇಷ ಶಕ್ತಿ
    – ಹರಕೆ ಹೇಳಿದ್ರೆ ಈಡೇರುತ್ತೆ ಅಂತಾರೆ ಭಕ್ತರು
    – ಸಮಸ್ಯೆ ಎದುರಾದಾಗ ಕೊರಗಜ್ಜನ ಸನ್ನಿಧಿಗೆ ಬರುತ್ತಾರೆ ನಟರು

    ಉಡುಪಿ: ಸ್ವಂತ ಟ್ಯಾಲೆಂಟ್ ಎಷ್ಟೇ ಇರಬಹುದು. ಆದರೆ ವ್ಯಕ್ತಿಯ ಹಿಂದೆ ಒಂದು ಶಕ್ತಿ ಇದ್ದೇ ಇರುತ್ತದೆ ಎಂಬ ಮಾತಿದೆ. ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಸ್ಯಾಂಡಲ್‍ವುಡ್‍ನಲ್ಲಿ ಸಕ್ಸಸ್‍ಫುಲ್ ಆ್ಯಕ್ಟರ್ ಕಂ ಡೈರೆಕ್ಟರ್ ಆಗಿದ್ದಾರೆ. ಈ ನಟರ ಹಿಂದೆ ಒಂದು ಶಕ್ತಿ ಬೆನ್ನೆಲುಬಾಗಿ ನಿಂತಿದೆ. ಆ ದೈವಶಕ್ತಿಯೇ ಅವರನ್ನು ಕಾಪಾಡಿದ್ದು, ಎತ್ತರಕ್ಕೆ ಕೊಂಡೊಯ್ದಿದೆ ಎನ್ನುವ ಮಾತು ಈಗ ಕೇಳಿಬಂದಿದೆ.

    ಒಂದೊಂದು ಕಾಲಕ್ಕೆ, ಒಂದೊಂದು ಭಾಗಕ್ಕೆ ಜನರ ನಂಬಿಕೆಗಳು ಆಚರಣೆಗಳು ಬದಲಾಗುತ್ತಾ ಹೋಗುತ್ತವೆ. ಕರಾವಳಿ ತೀರದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವರ ಜೊತೆ ದೈವಗಳನ್ನು ಬಹಳ ನಂಬಿಕೆಯಿಂದ ಆರಾಧಿಸಲಾಗುತ್ತದೆ. ಸಮುದ್ರ ತೀರಕ್ಕೆ ಅಂಟಿಕೊಂಡಿರುವ ಊರುಗಳಲ್ಲಿ ಕೊರಗಜ್ಜ ದೈವದ ಪವಾಡಗಳು ಅಲ್ಲಲ್ಲಿ ನಡೆಯುತ್ತಿದೆ. ನಂಬಿಕೆ ಮತ್ತು ಶ್ರದ್ಧಾಪೂರ್ವಕವಾಗಿ ಕೊರಗಜ್ಜ ದೈವಕ್ಕೆ ಹರಕೆ ಹೇಳಿದರೆ ಕೇಳಿದ್ದೆಲ್ಲ ಆಗುತ್ತೆ ಎಂಬ ವಿಶ್ವಾಸ ಜನರಲ್ಲಿದೆ.

    ಕೊರಗಜ್ಜ ಕರಾವಳಿಯ ಪವರ್ ಫುಲ್ ದೈವ. ನಂಬಿದವರಿಗೆ ಸದಾ ಒಳ್ಳೆಯದನ್ನೇ ಮಾಡುವ ದೈವಕ್ಕೆ ಹರಕೆ ಹೇಳಿ ಒಳ್ಳೆಯ ಮನಸ್ಸಿನಲ್ಲಿ ಕೇಳಿಕೊಂಡರೆ ಅದನ್ನು ದೈವ ಕೈಗೂಡಿಸಿಕೊಡುತ್ತದೆ. ಚಲನಚಿತ್ರ, ರಾಜಕೀಯ ಸಾಮಾನ್ಯ ಜನರೂ ಕೊರಗಜ್ಜ ದೈವವನ್ನು ನಂಬಿಕೊಂಡು ಬರುತ್ತಾರೆ. ಬೈಲೂರು ದೈವಸ್ಥಾನದಲ್ಲಿ ಗುಡಿ ಬಿಟ್ಟು ಕಲದಲ್ಲಿ ನೆಲೆಯಾಗಿರುವ ದೈವ ಬಹಳ ಶಕ್ತಿಯುತ ಎನ್ನುವ ನಂಬಿಕೆ ಭಕ್ತರಲ್ಲಿದೆ.

    ಸ್ಯಾಂಡಲ್‍ವುಡ್ ನಟ ನಿರ್ದೇಶಕರಾದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಬೈಲೂರಿನ ಕೊರಗಜ್ಜ ದೈವದ ಭಕ್ತರು. ತಮ್ಮ ಸಿನಿಮಾ ಭವಿಷ್ಯ ಆರಂಭದ ದಿನಗಳಿಂದ ಉಡುಪಿಯ ಬೈಲೂರಿನ ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನದ ಭಕ್ತರು. ಎಲ್ಲಾ ದೈವಸ್ಥಾನಗಳಲ್ಲಿ ಕೊರಗಜ್ಜ ದೇವರಿಗೆ ಕಟ್ಟೆ, ಗುಡಿ ಇರುತ್ತದೆ. ಆದರೆ ಬೈಲೂರಿನಲ್ಲಿ ಪ್ರಾಕೃತಿಕವಾಗಿ ಮರದಡಿಯಲ್ಲಿದೆ. ಕೊರಗಜ್ಜನ ಕಲ ಇದೆ. ಪಕ್ಕದಲ್ಲೇ ನಾಗದೇವರ ಕಲವೂ ಇದೆ. ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ದೈವಸ್ಥಾನದ ವತಿಯಿಂದ ಮೂವತ್ತಕ್ಕೂ ಹೆಚ್ಚು ಹುಡುಗರು ಹುಲಿವೇಷ ಸೇವೆ ನೀಡಿದ್ದು ನಟ ರಕ್ಷಿತ್ ಶೆಟ್ಟಿಯೇ ಲೋಬಾನ ಹಾಕುವ ಪ್ರಕ್ರಿಯೆಗೆ ಬಂದಿದ್ದಾರೆ. ತಂಡದ ಜೊತೆ ಹೆಜ್ಜೆ ಹಾಕಿದ್ದಾರೆ. ಎರಡು ದಿನ ಹುಲಿವೇಷ ತಂಡದ ಜೊತೆಗೇ ಇದ್ದರು.

    ಸ್ಥಳೀಯರಾದ ಅಶ್ವಥ್ ಮತ್ತು ಗಣೇಶ್ ಮಾತನಾಡಿ, ಉಳಿದವರು ಕಂಡಂತೆ ಚಿತ್ರದ ನಂತರ ನಮಗೆ ರಕ್ಷಿತ್ ತಂಡದ ಪರಿಚಯವಾಗಿದೆ. ಎಲ್ಲಾ ಚಿತ್ರಕ್ಕೂ ನಮ್ಮ ಹುಲಿವೇಷ ತಂಡದ ಯುವಕರು ನಟಿಸುತ್ತಾರೆ. ಆರ್ಥಿಕವಾಗಿಯೂ ದೈವಸ್ಥಾನಕ್ಕೆ ಸಹಾಯ ಮಾಡಿದ್ದಾರೆ ಎಂದರು. ಹುಲಿವೇಷದ ಕಲೆಯೂ ಈ ಕ್ಷೇತ್ರದಿಂದಲೇ ಇವರಿಗೆ ಸಿದ್ಧಿಸಿದ್ಯಂತೆ.

    ಫಿಲ್ಮ್ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದ ರಿಷಬ್ ಶೆಟ್ಟಿ ಅಷ್ಟಮಿ ಮುಗಿದು ಎರಡನೇ ದಿನಕ್ಕೆ ಬೈಲೂರಿಗೆ ಬಂದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿ ಹೋಗಿದ್ದಾರೆ. ಕೃಷ್ಣಜನ್ಮಾಷ್ಟಮಿಗೆ ಬರಬೇಕಿತ್ತು. ಚಿತ್ರದ ಆದರೆ ಒತ್ತಡದಲ್ಲಿ ಸಾಧ್ಯವಾಗಿಲ್ಲ. ಕೊರಗಜ್ಜನ ಕ್ಷೇತ್ರಕ್ಕೆ ಬಂದ ಮೇಲೆ ಮನಸ್ಸಿಗೆ ನೆಮ್ಮದಿಯಾಗಿದೆ ಎಂದು ಹೇಳಿದರು.

    ಸಿನಿಮಾ ಚಿತ್ರೀಕರಣದ ನಡುವೆ ಸಮಸ್ಯೆಗಳಾದಗ, ವಿಘ್ನಗಳು ಬಂದಾಗ ರಕ್ಷಿತ್ ಮತ್ತು ರಿಷಬ್ ಬೈಲೂರು ಕೊರಗಜ್ಜ ದೈವಸ್ಥಾನಕ್ಕೆ ಹರಕೆ ಹೇಳಿ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದಾರೆ. ವಿಜ್ಞಾನ ಶಿಕ್ಷಣ ಎಷ್ಟೇ ಮುಂದೆ ಹೋಗಲಿ ತಂತ್ರಜ್ಞಾನ ಎಷ್ಟೇ ಬೆಳೆಯಲಿ, ನಂಬಿಕೆ ಎನ್ನುವುದು ಆಯಾಯ ಕಾಲಕ್ಕೆ ಎಷ್ಟೆಷ್ಟು ಬೇಕೋ ಅಷ್ಟಷ್ಟು ಉಳಿದುಕೊಂಡು ಬಂದಿದೆ ಎನ್ನುವುದಕ್ಕೆ ಇಂತಹ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ.