Tag: ಬೈಕ್ ಸವಾರರು

  • ತಿರಂಗಾ ಯಾತ್ರೆಗೆ ಬಂದವರಿಗೆ ಫ್ರೀ ಪೆಟ್ರೋಲ್, ಹೆಲ್ಮೆಟ್ ಆಫರ್ – ಕೊಡದಿದ್ದಕ್ಕೆ ಬೈಕ್ ಸವಾರರ ಗಲಾಟೆ

    ತಿರಂಗಾ ಯಾತ್ರೆಗೆ ಬಂದವರಿಗೆ ಫ್ರೀ ಪೆಟ್ರೋಲ್, ಹೆಲ್ಮೆಟ್ ಆಫರ್ – ಕೊಡದಿದ್ದಕ್ಕೆ ಬೈಕ್ ಸವಾರರ ಗಲಾಟೆ

    ಚಿಕ್ಕಬಳ್ಳಾಪುರ: ತಿರಂಗಾ ಯಾತ್ರೆಗೆ ಬಂದ ಬೈಕ್ ಸವಾರರಿಗೆ ಫ್ರೀ ಪೆಟ್ರೋಲ್ ಹಾಗೂ ಫ್ರೀ ಹೆಲ್ಮೆಟ್ ಕೊಡ್ತೀವಿ ಅಂತ ಬಿಜೆಪಿ ಮುಖಂಡ ಆಫರ್ ಕೊಟ್ಟಿದ್ದು, ಫ್ರೀ ಪೆಟ್ರೋಲ್ ಹಾಕ್ತಿಲ್ಲ ಅಂತ ಬಂಕ್‌ನಲ್ಲಿ ಬೈಕ್ ಸವಾರರು ಗಲಾಟೆ ಮಾಡಿದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.

    ಬಾಗೇಪಲ್ಲಿ-ಬೆಂಗಳೂರು ಹೈವೇಯಲ್ಲಿರುವ ಗಂಗೋತ್ರಿ ಪೆಟ್ರೋಲಿಯಂ ಬಂಕ್‌ಗೆ ಸಾವಿರಾರು ಜನ ಮುತ್ತಿಗೆ ಹಾಕಿ ಫ್ರೀ ಪೆಟ್ರೋಲ್ ಕೊಡ್ತೀರಾ ಇಲ್ವಾ ಅಂತ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದರು.

    ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ ತಿರಂಗಾ ಬೈಕ್ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸಿ ಮುನಿರಾಜು ಅವರು ಆಯೋಜನೆ ಮಾಡಿದ್ದರು. ಇದನ್ನೂ ಓದಿ: ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು

     

    ಈ ಹಿನ್ನೆಲೆ ಹಳ್ಳಿ ಹಳ್ಳಿಗಳಿಂದ ತಿರಂಗಾ ಯಾತ್ರೆಗೆ ಬರುವ ಬೈಕ್ ಸವಾರರಿಗೆ ಮೊದಲೇ ಸುಧಾಕರ್ ಹಾಗೂ ಮುನಿರಾಜು ಭಾವಚಿತ್ರ ಇರುವ ಟೋಕನ್ ಸ್ಟಿಕ್ಕರ್ ನೀಡಲಾಗಿತ್ತು. ಅದನ್ನು ತೋರಿಸಿ ಮೊದಲೇ ನಿಗದಿ ಮಾಡಿದ್ದ ಗಂಗೋತ್ರಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಬೇಕಾಗಿತ್ತು. ಜನರೂ ಸಹ ಬೆಳಗ್ಗೆಯಿಂದಲೇ ಬಂಕ್‌ಗೆ ಆಗಮಿಸಿ ಫ್ರೀ ಪೆಟ್ರೋಲ್ ಪಡೆದಿದ್ದಾರೆ. ಆದರೆ ರ‍್ಯಾಲಿಗೆ ಹೋಗಿಲ್ವಂತೆ! ಫ್ರೀ ಪೆಟ್ರೋಲ್ ಹಾಕಿಸಿಕೊಂಡು ಮನೆ ಕಡೆ ಹೊರಟಿದ್ದಾರಂತೆ.

    ಈ ಹಿನ್ನೆಲೆ ದಿಢೀರ್ ಎಂದು ಫ್ರೀ ಪೆಟ್ರೋಲ್ ಆಫರ್ ಅನ್ನು ಸ್ಥಗಿತ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರರು ಫ್ರೀ ಪೆಟ್ರೋಲ್ ಹಾಕ್ತೀರಾ ಇಲ್ವಾ ಅಂತ ಗಲಾಟೆ ಮಾಡಿದ್ದಾರೆ. ನೂರಾರು ಮಂದಿ ಗಂಟೆಗಟ್ಟಲೆ ಗಲಾಟೆ ಮಾಡಿದರೂ ಫ್ರೀ ಪೆಟ್ರೋಲ್ ಹಾಕಿಲ್ಲ. ಕಾರ್ಯಕ್ರಮ ಮುಕ್ತಾಯವಾಗಿದ್ದು ಇನ್ನು ಪೆಟ್ರೋಲ್ ಹಾಕಲು ಆಗುವುದಿಲ್ಲ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ಕಾರ್ಯಕ್ರಮ ಮುಗಿದ ಬಳಿಕ ಸಚಿವ ಸುಧಾಕರ್ ಮೂಲಕ ಕೆಲವರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಣೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತೆಲಂಗಾಣದಿಂದ ರಾಜ್ಯಕ್ಕೆ ನುಸುಳುತ್ತಿದ್ದವರನ್ನು ಚೇಸ್ ಮಾಡಿ ಹಿಡಿದ ಪೊಲೀಸರು

    ತೆಲಂಗಾಣದಿಂದ ರಾಜ್ಯಕ್ಕೆ ನುಸುಳುತ್ತಿದ್ದವರನ್ನು ಚೇಸ್ ಮಾಡಿ ಹಿಡಿದ ಪೊಲೀಸರು

    ರಾಯಚೂರು: ಜಿಲ್ಲೆ ಗ್ರೀನ್ ಝೋನ್ ನಲ್ಲಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಗಡಿದಾಟಿ ಬರುವ ಜನರದ್ದೇ ಆತಂಕವಾಗಿದೆ. ಹೀಗಾಗಿ ಅಡ್ಡದಾರಿಗಳಲ್ಲಿ ಬರುವ ಜನರನ್ನು ಪೊಲೀಸರು ಹಾಗೂ ಗ್ರಾಮಸ್ಥರು ವಾಪಸ್ ಕಳುಹಿಸುತ್ತಿದ್ದಾರೆ.

    ತೆಲಂಗಾಣ ಗಡಿಯಿಂದ ರಾಯಚೂರಿನ ಸಿಂಗನೊಡಿ ಗ್ರಾಮಕ್ಕೆ ಬರುತ್ತಿದ್ದ ಬೈಕ್ ಸವಾರರನ್ನು ಪೊಲೀಸ್ ಅಧಿಕಾರಿಯೊಬ್ಬರು ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಹಿಡಿದು, ತೆಲಂಗಾಣಕ್ಕೆ ವಾಪಸ್ ಕಳುಹಿಸಿದ್ದಾರೆ.

    ಅಕ್ರಮ ಮಾರ್ಗದ ಮೂಲಕ ರಾಯಚೂರು ಪ್ರವೇಶ ಮಾಡುತ್ತಿರುವ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಜನರು ಜಿಲ್ಲೆಗೆ ತಲೆನೋವಾಗಿದ್ದಾರೆ. ಚೆಕ್ ಪೋಸ್ಟ್ ಹಾಗೂ ಚಿಕ್ಕ ರಸ್ತೆಗಳಲ್ಲಿ ಗುಂಡಿ ತೋಡುವ ಮೂಲಕ ಗಡಿಗಳನ್ನು ಬಂದ್ ಮಾಡಿದರೂ ಜನ ರಾಯಚೂರಿಗೆ ನುಸುಳುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲ. ಆದರೆ ಆಂಧ್ರ ಹಾಗೂ ತೆಲಂಗಾಣದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

    ಕೃಷಿ ಉತ್ಪನ್ನ ಹಾಗೂ ಅವಶ್ಯಕ ವಸ್ತುಗಳ ಸಾಗಣೆ ನಿರಂತರವಾಗಿ ನಡೆದಿದೆ. ಕೃಷಿ ಚಟುವಟಿಕೆಗಳ ಯಂತ್ರೋಪಕರಣಗಳು ಸಹ ಗಡಿ ರಾಜ್ಯಗಳಿಂದ ಬರುತ್ತಲೇ ಇವೆ. ಪ್ರತಿ ದಿನ ಲಾರಿ, ಟ್ರಾಕ್ಟರ್ ಸೇರಿದಂತೆ ಎರಡು ನೂರಕ್ಕೂ ಹೆಚ್ಚು ವಾಹನಗಳು ಭತ್ತ, ಈರುಳ್ಳಿಯನ್ನು ಜಿಲ್ಲೆಗೆ ತರುತ್ತಿವೆ. ಇದರ ಜೊತೆ ಗಡಿ ಗ್ರಾಮ, ಪಟ್ಟಣಗಳ ಜನ ಅಡ್ಡದಾರಿಗಳ ಮೂಲಕ ಬರುತ್ತಿರುವುದು ಕೊರೊನಾ ಆತಂಕ ಹೆಚ್ಚಿಸಿದೆ.

  • ಫುಟ್‍ಪಾತ್ ಮೇಲೆ ಬರ್ತಿದ್ದ ಸವಾರರಿಗೆ ಮಹಿಳೆಯಿಂದ ಕ್ಲಾಸ್ – ವಿಡಿಯೋ

    ಫುಟ್‍ಪಾತ್ ಮೇಲೆ ಬರ್ತಿದ್ದ ಸವಾರರಿಗೆ ಮಹಿಳೆಯಿಂದ ಕ್ಲಾಸ್ – ವಿಡಿಯೋ

    – ‘ನನ್ನ ಮೇಲೆ ಬೈಕ್ ಹತ್ತಿಸಿ’
    – ಮಹಿಳೆಯ ಕಾರ್ಯಕ್ಕೆ ನೆಟ್ಟಿಗರು ಫಿದಾ
    – ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ತರಾಟೆ

    ಪುಣೆ: ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರನ್ನು ಕೆಳಗಿಳಿಸಿ ಹಿರಿಯ ನಾಗರಿಕ ಮಹಿಳೆಯೊಬ್ಬರು ಸಂಚಾರಿ ನಿಯಮ ಪಾಲಿಸಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಟ್ರಾಫಿಕ್‍ನಿಂದ ತಪ್ಪಿಸಿಕೊಳ್ಳಲು ಅಥವಾ ವಾಹನ ಪಾಕಿಂಗ್ ಮಾಡಲು ಬಹುತೇಕ ವಾಹನ ಸವಾರರು ಫುಟ್‍ಪಾತ್‍ನನ್ನು ಬಳಸಿಕೊಳ್ಳುತ್ತಾರೆ. ಇದರಿಂದ ವಾಹನ ಸವಾರರಿಗೇನೋ ಲಾಭವಾಗುತ್ತೆ. ಆದ್ರೆ ತೊಂದರೆ ಆಗೋದು ಮಾತ್ರ ಪಾದಚಾರಿಗಳಿಗೆ. ಹೀಗೆ ಬೈಕ್ ಸವಾರರ ಉಪಟಳಕ್ಕೆ ಬೇಸತ್ತ ಹಿರಿಯ ನಾಗರಿಕ ಮಹಿಳೆಯೊಬ್ಬರು ಸವಾರರಿಗೆ ಸಂಚಾರಿ ನಿಯಮ ತಿಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪುಣೆಯ ಎಸ್‍ಎನ್‍ದಿಟಿ ಕಾಲೇಜಿನ ಬಳಿ ಇರುವ ಕೆನಲ್ ರಸ್ತೆಯಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆಗುತ್ತಿರುತ್ತೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ಫುಟ್‍ಪಾತ್ ಮೇಲೆ ವಾಹನ ತಂದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ. ಇದನ್ನು ನೋಡಿ ನೋಡಿ ಬೇಸತ್ತ ನಿರ್ಮಲಾ ಗೋಖಲೆ ಎಂಬವರು ಫುಟ್‍ಪಾತ್ ಮಧ್ಯೆ ನಿಂತು ವಾಹನ ಸವಾರರಿಗೆ ಸಂಚಾರಿ ನಿಯಮವನ್ನು ತಿಳಿಸಿ ತರಾಟೆಗೆ ತಗೆದುಕೊಂಡಿದ್ದಾರೆ. ಇಲ್ಲಿ ಪಾದಚಾರಿಗಳು ಓಡಾಡುತ್ತಾರೆ ನಿಮ್ಮ ವಾಹನಕ್ಕೆ ಸಂಚಾರಕ್ಕೆ ರಸ್ತೆ ಇದೆ ತಾನೆ. ಅದನ್ನ ಬಿಟ್ಟು ಇಲ್ಲಿ ಯಾಕೆ ಬಂದು ತೊಂದರೆ ಕೊಡುತ್ತೀರಾ? ಸಂಚಾರಿ ನಿಯಮ ಪಾಲನೆ ಮಾಡಲು ಆಗಲ್ವಾ? ಬೈಕ್, ಸ್ಕೂಟಿಗಳನ್ನು ರಸ್ತೆ ಮೇಲೆ ಓಡಿಸಿ ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    https://twitter.com/IAnticommunist/status/1230785136607866880

    ಅಲ್ಲದೇ ಅವರ ಮಾತು ಕೇಳದೆ ಮುನ್ನುಗ್ಗುತ್ತಿದ್ದವರನ್ನು ಅಡ್ಡಗಟ್ಟಿ ಸಂಚಾರಿ ನಿಯಮ ಪಾಲಿಸಿ, ಇಲ್ಲ ನನ್ನ ಮೇಲೆ ಬೈಕ್ ಹತ್ತಿಸಿಕೊಂಡಿ ಹೋಗಿ ಎಂದು ಮಾತಿನ ಚಾಟಿ ಬೀಸಿದ್ದಾರೆ. ಈ ಮೂಲಕ ನಿರ್ಮಲಾ ಅವರು ಓರ್ವ ಜವಾಬ್ದಾರಿ ಪ್ರಜೆಯ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ನಿರ್ಮಲಾ ಅವರ ಕಾರ್ಯ ಮೆಚ್ಚಿದ ಇತರೆ ಪಾದಾಚಾರಿಗಳು ಕೂಡ ಅವರಿಗೆ ಸಾಥ್ ಕೊಟ್ಟು ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

    https://twitter.com/h_thake/status/1230884223613095936

    ಧರ್ಯವಾಗಿ ನಿಂತು ತಪ್ಪು ಮಾಡುತ್ತಿದ್ದ ವಾಹನ ಸವಾರರಿಗೆ ಬುದ್ಧಿ ಹೇಳಿ ತಿದ್ದಿದ ನಿರ್ಮಲಾ ಅವರ ಕಾರ್ಯ ಎಲ್ಲರ ಮನ ಗೆದ್ದಿದೆ. ಬೈಕ್ ಸವಾರರಿಗೆ ನಿರ್ಮಲಾ ಅವರು ತರಾಟೆಗೆ ತೆಗೆದುಕೊಂಡ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿರ್ಮಲಾ ಅವರ ಧೈರ್ಯಕ್ಕೆ, ಕಾರ್ಯಕ್ಕೆ ಭೇಷ್ ಎಂದು ಹೊಗಳಿದ್ದಾರೆ.

  • ಬೈಕಿಗೆ ದಾರಿ ಬಿಡಲಿಲ್ಲವೆಂದು KSRTC ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

    ಬೈಕಿಗೆ ದಾರಿ ಬಿಡಲಿಲ್ಲವೆಂದು KSRTC ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

    ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ. ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

    ಅಕ್ರಂ, ನಹೀಮುಲ್ಲಾ ಹಾಗೂ ಇನಾಯತ್ ಹಲ್ಲೆ ಮಾಡಿದ ಯುವಕರು. ಅಕ್ರಂ, ನಹೀಮುಲ್ಲಾ ಹಾಗೂ ಇನಾಯತ್ ಬಾಗೇಪಲ್ಲಿ ಗ್ರಾಮದವರಾಗಿದ್ದು, ಇದೇ ಗ್ರಾಮದ ಡಿಪೋಗೆ ಸೇರಿದ ಕೆಎಸ್ಆರ್‌ಟಿಸಿ ಚಾಲಕ ಸಿದ್ದಪ್ಪ ಹಾಗೂ ನಿರ್ವಾಹಕ ನರಸಿಂಹಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಇ. ತಿಮ್ಮಸಂದ್ರ ಗ್ರಾಮದಲ್ಲಿ ಸಂತೆ ನಡೆಯುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಕಿರಿದಾದ ರಸ್ತೆಯಲ್ಲಿ ಜನಸಂದಣಿ ನಡುವೆ ಬಸ್ ಸಾಗಿತ್ತು. ಆದರೆ ಹಿಂಬದಿಯಲ್ಲಿದ್ದ ಬೈಕ್‍ಗೆ ದಾರಿ ಬಿಡಲಿಲ್ಲ ಯಾಕೆ ಎಂದು ಚಾಲಕ ಸಿದ್ದಪ್ಪ ಜೊತೆ ಯುವಕರು ಪ್ರಶ್ನೆ ಮಾಡಿ ಹಲ್ಲೆ ನಡೆಸಿದ್ದಾರೆ.

    ಈ ವೇಳೆ ಅಡ್ಡ ಹೋದ ನಿರ್ವಾಹಕನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

  • ಫೆಬ್ರವರಿ 1ರಿಂದ ಕೆ.ಆರ್ ಪೇಟೆಯಲ್ಲಿ ಹೆಲ್ಮೆಟ್ ಕಡ್ಡಾಯ

    ಫೆಬ್ರವರಿ 1ರಿಂದ ಕೆ.ಆರ್ ಪೇಟೆಯಲ್ಲಿ ಹೆಲ್ಮೆಟ್ ಕಡ್ಡಾಯ

    ಮಂಡ್ಯ: ಫೆಬ್ರವರಿ 1ರಿಂದ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ನಿಯಮ ಜಾರಿಗೆ ತರಲಾಗುತ್ತಿದೆ. ಆದ್ದರಿಂದ ಪೊಲೀಸರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೆ.ಆರ್ ಪೇಟೆ ಪಟ್ಟಣ ಪೋಲಿಸ್ ಠಾಣೆಯ ಎಸ್‍ಐ ಬಿ.ಪಿ ಬ್ಯಾಟರಾಯಗೌಡ ಮನವಿ ಮಾಡಿಕೊಂಡರು.

    ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದ ನಾಗರೀಕರ ಸಮಿತಿ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಎಸ್‍ಐ ಮಾತನಾಡಿದರು. ಕೃಷ್ಣರಾಜಪೇಟೆ ಪಟ್ಟಣವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಜನಸಾಮಾನ್ಯರಿಗೆ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರವನ್ನು ಒದಗಿಸಿಕೊಡಲು ಪೊಲೀಸ್ ಇಲಾಖೆಯು ಬದ್ಧವಾಗಿದ್ದು, ಫೆಬ್ರವರಿ 1ನೇ ತಾರೀಖಿನಿಂದ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಆದ್ದರಿಂದ ಪೊಲೀಸರೊಂದಿಗೆ ಸಾರ್ವಜನಿಕರು ಪೂರಕವಾದ ಸಹಕರಿಸಿ ಎಂದರು.

    ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಾರ್ವಜನಿಕರು ಪೊಲೀಸರಿಗೆ ಸಹಕಾರ ಮಾಡಬೇಕು. ದ್ವಿಚಕ್ರ ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡೇ ತಮ್ಮ ಮೋಟಾರ್ ಬೈಕುಗಳನ್ನು ಚಾಲನೆ ಮಾಡಬೇಕು. ವಾಹನಗಳ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರಬೇಕು. ಡಿಎಲ್, ವಾಹನದ ವಿಮಾ ಪ್ರತಿ ಚಾಲ್ತಿಯಲ್ಲಿರಬೇಕು ಎಂದು ತಿಳಿಸಿದರು.

    ಜೊತೆಗೆ ಹೆಲ್ಮೆಟ್ ಧರಿಸದ ಸವಾರರಿಗೆ 500 ರೂಪಾಯಿ ದಂಡವನ್ನು ವಿಧಿಸಲಾಗುವುದು. ಈ ದಿಕ್ಕಿನಲ್ಲಿ ದ್ವಿಚಕ್ರ ವಾಹನಗಳ ಸವಾರರು ಮಾನಸಿಕವಾಗಿ ಸಿದ್ಧರಾಗಿ, ತಮ್ಮ ವಾಹನಗಳ ಎಲ್ಲಾ ದಾಖಲಾತಿಗಳನ್ನು ಚಾಲ್ತಿಯಲ್ಲಿರುವಂತೆ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಎಂದು ಎಸ್‍ಐ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಎಸ್‍ಐ ಶಿವಣ್ಣ, ಕ್ರೈಂ ವಿಭಾಗದ ನಾಗರಾಜು ಮತ್ತು ಸಾರ್ವಜನಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

  • ಬೈಕ್ ಸವಾರರನ್ನು ಅಟ್ಟಿಸಿಕೊಂಡು ಬಂದ ಹುಲಿ

    ಬೈಕ್ ಸವಾರರನ್ನು ಅಟ್ಟಿಸಿಕೊಂಡು ಬಂದ ಹುಲಿ

    ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಹುಲಿ ರಕ್ಷಿತಾರಣ್ಯದಲ್ಲಿ ಹೋಗುತ್ತಿದ್ದ ಬೈಕ್ ಸವಾರರನ್ನು ಹುಲಿಯೊಂದು ಅಟ್ಟಿಸಿಕೊಂಡು ಬಂದಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಇರುವ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವೈನಾಡಿನ ಮಧ್ಯೆ ಈ ಘಟನೆ ನಡೆದಿದೆ. ಈ ಮೂಲಕ ಬಂಡೀಪುರ ಮತ್ತು ವೈನಾಡು ಭಾಗದಲ್ಲಿ ಭಾರೀ ಅನಾಹುತ ತಪ್ಪಿದ್ದು, ಹುಲಿ ದಾಳಿಯಿಂದ ದ್ವಿಚಕ್ರ ವಾಹನ ಸವಾರರು ತಪ್ಪಿಸಿಕೊಂಡಿದ್ದಾರೆ.

    ದ್ವಿಚಕ್ರ ವಾಹನ ಸವಾರರು ಕಾಡಿನ ಮಧ್ಯೆ ಹೋಗುತ್ತಿದ್ದರು. ಈ ವೇಳೆ ಕಾಡಲ್ಲಿದ್ದ ಹಸಿದ ಹುಲಿ ಬೈಕ್ ಸವಾರರನ್ನು ನೋಡುತ್ತಲೇ ದಾಳಿ ಮಾಡಲು ಬಂದಿದೆ. ದ್ವಿಚಕ್ರ ವಾಹನ ಸವಾರನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

    ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಹುಲಿ ದಾಳಿ ಮಾಡುವ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಹುಲಿ ದಾಳಿಯಿಂದ ದ್ವಿಚಕ್ರ ವಾಹನ ಸವಾರರು ತಬ್ಬಿಬಾಗಿದ್ದರು.

  • ರಸ್ತೆಯಲ್ಲಿ ಸಂಚರಿಸುವಾಗ ಏಕಾಏಕಿ ಚಿರತೆ ದಾಳಿ- ಮರವೇರಿ ಕುಳಿತ ಬೈಕ್ ಸವಾರರು

    ರಸ್ತೆಯಲ್ಲಿ ಸಂಚರಿಸುವಾಗ ಏಕಾಏಕಿ ಚಿರತೆ ದಾಳಿ- ಮರವೇರಿ ಕುಳಿತ ಬೈಕ್ ಸವಾರರು

    ಬೆಳಗಾವಿ: ರಸ್ತೆಯಲ್ಲಿ ಸಂಚರಿಸುವಾಗ ಚಿರತೆಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಬೈಕ್ ಸವಾರರು ಮರವೇರಿ ಕುಳಿತಿರುವ ಘಟನೆ ಖಾನಾಪುರ ಬಳಿಯ ಚೋರಲಾ ಘಾಟಿಯಲ್ಲಿ ನಡೆದಿದೆ.

    ಬೆಳಗಾವಿಯಿಂದ ಗೋವಾಕ್ಕೆ ತೆರಳುವ ಚೋರಲಾ ಘಾಟಿ ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿದೆ. ವ್ಯಕ್ತಿಯೋರ್ವ ಬೈಕ್‍ನಲ್ಲಿ ಚೋರಲಾ ಘಾಟಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದ ಪರಿಣಾಮ ಗಾಯಗೊಂಡಿದ್ದಾನೆ. ಇದನ್ನು ಕಂಡ ಇತರೇ ಬೈಕ್ ಸವಾರರು ಭಯದಿಂದ ಮರವೇರಿ ಕುಳಿತ್ತಿದ್ದಾರೆ.

    ಬೆಳಗಾವಿ ಮತ್ತು ಗೋವಾ ಮಧ್ಯೆ ಇರುವ ಚೋರಲಾ ಘಾಟಿ ಸುತ್ತಮುತ್ತ ದಟ್ಟವಾದ ಅರಣ್ಯ ಪ್ರದೇಶವಿದೆ. ಹೀಗಾಗಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ರಸ್ತೆಯಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆಯನ್ನು ಕಂಡು ತಬ್ಬಿಬ್ಬಾದ ಬೈಕ್ ಸವಾರರು, ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಬಿಟ್ಟು ಪ್ರಾಣ ಉಳಿಕೊಂಡರೆ ಸಾಕು ಅಂತ ಮರಗಳನ್ನು ಹತ್ತಿ ಕುಳಿತಿದ್ದಾರೆ. ಚಿರತೆ ದಾಳಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಖಾನಾಪುರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟ್ರಾಫಿಕ್ ರೂಲ್ಸ್ ಬ್ರೇಕ್ – ಸೆಂಚುರಿ ಬಾರಿಸಿದ್ದ ಸವಾರರು ತಪಾಸಣೆಯಲ್ಲಿ ಸಿಕ್ಕಿಬಿದ್ರು!

    ಟ್ರಾಫಿಕ್ ರೂಲ್ಸ್ ಬ್ರೇಕ್ – ಸೆಂಚುರಿ ಬಾರಿಸಿದ್ದ ಸವಾರರು ತಪಾಸಣೆಯಲ್ಲಿ ಸಿಕ್ಕಿಬಿದ್ರು!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘನೇ ಮಾಡಿ, ದಂಡ ಕಟ್ಟದೆ ತಲೆ ಮರೆಸಿಕೊಂಡು ತಿರುಗುತ್ತಿದ್ದ ನಾಲ್ವರು ಬೈಕ್ ಸವಾರರನ್ನು ವಿವಿ ಪುರಂ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬುಧವಾರ ಎಂದಿನಂತೆ ವಿವಿ ಪುರಂ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅಕ್ತರ್ ಹಾಗೂ ಶಬ್ಬೀರ್ ಅಹಮ್ಮದ್ ಸೇರಿದಂತೆ ಒಟ್ಟು ನಾಲ್ವರ ಬೈಕ್‍ಗಳನ್ನು ತಪಾಸಣೆ ಮಾಡಿದ್ದಾಗ, ಸವಾರರ ಮೇಲೆ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ನಾಲ್ವರನ್ನು ಬೈಕಿನೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.

    ವರದಿಗಳ ಪ್ರಕಾರ ನಾಲ್ವರು ಬೈಕ್ ಸವಾರರ ಮೇಲೆ ವಿವಿಧ ಠಾಣೆಗಳಲ್ಲಿ ನೂರಕ್ಕು ಅಧಿಕ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಸವಾರರು ಸಿಗ್ನಲ್ ಜಂಪ್, ಒನ್ ವೇ ರೈಡ್, ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದರು. ಈ ಬಗ್ಗೆ ಸವಾರರಿಗೆ ಸಂಚಾರಿ ಪೊಲೀಸ್ ಠಾಣೆಯಿಂದ ಎಷ್ಟೇ ನೋಟಿಸ್ ಕಳುಹಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೇ ಪೊಲೀಸರ ಕೈಗೂ ಸಿಗದೇ, ತಪ್ಪಿಸಿಕೊಂಡು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಸವಾರರಿಂದ ಬೈಕನ್ನು ಜಪ್ತಿಮಾಡಿಕೊಂಡಿರುವ ಪೊಲೀಸರು, ನ್ಯಾಯಾಲಯದಲ್ಲಿ ದಂಡ ಕಟ್ಟಿ ಬೈಕ್ ಬಿಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಘಟನೆ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv