Tag: ಬೇಸಿಗೆ ಬೆಳೆ

  • ಬೇಸಿಗೆ ಬೆಳೆ ನಾಟಿ ಆರಂಭ – ಎತ್ತ ನೋಡಿದರೂ ಬೆಳ್ಳಕ್ಕಿ ಕಲರವ

    ಬೇಸಿಗೆ ಬೆಳೆ ನಾಟಿ ಆರಂಭ – ಎತ್ತ ನೋಡಿದರೂ ಬೆಳ್ಳಕ್ಕಿ ಕಲರವ

    ಕೊಪ್ಪಳ: ಹೊಲ ಗದ್ದೆಗಳಲ್ಲಿ ಬೇಸಿಗೆ ಬೆಳೆಯ ಭತ್ತ ನಾಟಿ ಮಾಡುವ ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದಂತೆ ಆಹಾರ ಅರಸಿ ಹೊಲಗಳಿಗೆ ಆಗಮಿಸುತ್ತಿರುವ ಬೆಳ್ಳಕ್ಕಿಗಳ ಹಿಡ್ಡು ಗದ್ದೆಗಳಿಗೆ ರಂಗು ಮೂಡಿಸುತ್ತಿವೆ.

    ಪ್ರತಿ ವರ್ಷ ಮುಂಗಾರು ಬೆಳೆ ಕಟಾವು ಮಾಡಿದ ನಂತರ ಬೇಸಿಗೆ ಬೆಳೆಗಾಗಿ ಭತ್ತದ ಸಸಿ ಮಡಿಗಳನ್ನು ಹಾಕಿ, ಎರಡ್ಮೂರು ತಿಂಗಳುಗಳ ಕಾಲ ಸಾವಯುವ ಗೊಬ್ಬರ, ಸಗಣೆ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದರು. ಆದರೆ ಈ ಬಾರಿ ಕಟಾವು ಮಾಡಿದ 15 ದಿನಗಳಲ್ಲಿಯೇ ಪುನಃ ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಜಮೀನು ಸಿದ್ಧಗೊಳಿಸಲು ರೈತರು ಮುಂದಾಗಿದ್ದಾರೆ. ಅದಕ್ಕಾಗಿ ಹೊಲಗಳಿಗೆ ನೀರು ಹರಸಿ ಭೂಮಿಯನ್ನು ಹದಗೊಳಿಸಲಾಗುತ್ತಿದೆ.

    ಈ ವೇಳೆಯಲ್ಲಿ ಬೆಳ್ಳಕ್ಕಿಗಳಿಗೆ ಬೇಕಾಗುವ ಕೀಟಗಳು ಜಮೀನಿನಲ್ಲಿ ಸುಲಭವಾಗಿಯೇ ದೊರೆಯುತ್ತವೆ. ಕೀಟಗಳ ಜೊತೆಗೆ ನೀರು ದೊರೆಯುತ್ತಿರುವುದರಿಂದ ಕೆಲವು ದಿನಗಳಿಂದ ಗಂಗಾವತಿ ತಾಲೂಕಿನ ನಾನಾ ಭಾಗಗಳ ಜಮೀನುಗಳಲ್ಲಿ ನೂರಾರು ಬೆಳ್ಳಕ್ಕಿಗಳ ಹಿಂಡು ಸ್ವಚ್ಛಂದವಾಗಿ ಹಾರಾಡುವ ಮೂಲಕ ರೈತರಿಗೂ ಸಹ ಆನಂದವನ್ನು ನೀಡುತ್ತಿವೆ.

    ಎಲ್ಲೆಲ್ಲಿ ಹೆಚ್ಚಾಗಿವೆ ಹಕ್ಕಿಗಳ ಕಲರವ?
    ತುಂಗಭದ್ರಾ ನದಿ ಪಾತ್ರಗಳಲ್ಲಿ ಹಾಗೂ ಕೊಳವೆ ಬಾವಿ ಹೊಂದಿರುವ ರೈತರು ಸೇರಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗುತ್ತದೆ. ನದಿ ಪಾತ್ರ ಮತ್ತು ಕೊಳವೆ ಬಾವಿ ನೀರು ಬಳಸಿ ರೈತರು ಬೇಸಿಗೆ ಬೆಳೆಯನ್ನು ನಾಟಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸರಿಸುಮಾರು 400ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡುವ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಹಾಗಾಗಿಯೇ ಹಕ್ಕಿಗಳು ಆಹಾರವನ್ನು ಅರಸಿ ತಾಲೂಕಿನ ಆನೆಗೊಂದಿ, ಚಿಕ್ಕರಂಪೂರ, ಮಲ್ಲಾಪೂರ, ಸಣಾಪೂರ, ಢಣಾಪೂರ, ಚಿಕ್ಕಜಂತಕಲ್, ಮುಸ್ಟೂರು, ವಡ್ಡರಹಟ್ಟಿ, ಸಂಗಾಪೂರ, ಬಸವನದುರ್ಗ, ಹನುಮನಹಳ್ಳಿ, ಹಿರೇಜಂತಕಲ್, ಸಿದ್ದಿಕೇರಿ, ಮರಳಿ, ಪ್ರಗತಿನಗರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬೆಳ್ಳಕ್ಕಿಗಳ ಹಿಂಡು ಬೀಡು ಬಿಟ್ಟಿವೆ.

    ಕೃಷಿ ಕಾರ್ಮಿಕರಲ್ಲಿ ಸಂತಸ:
    ಭತ್ತ ನಾಟಿ ಮಾಡುವ ಜಮೀನುಗಳಲ್ಲಿ ಮುಂಚಿತವಾಗಿಯೇ ಭೂಮಿಗೆ ನೀರು ಬಿಟ್ಟು, ಟ್ರ್ಯಾಕ್ಟರ್ ಗಳ ಸಹಾಯದಿಂದ ಹದಗೊಳಿಸಲಾಗುವುದು. ಹದಗೊಳಿಸುವ ವೇಳೆಯಲ್ಲಿ ಭೂಮಿಯಲ್ಲಿ ಇರುವ ಕೀಟಗಳು ಮೇಲೆ ಕಾಣಿಸಿಕೊಳ್ಳುತ್ತವೆ. ಅವುಗಳು ತಿನ್ನುವ ಉದ್ದೇಶದಿಂದ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಬೆಳಗಿನ ಜಾವದಲ್ಲಿ ಕಾಣಿಸಿಕೊಳ್ಳುವ ಹಕ್ಕಿಗಳ ಗುಂಪಿನ ಕಲರವ ಕೃಷಿ ಕಾರ್ಮಿಕರನ್ನು ಸಂತಸಗೊಳಿಸುತ್ತಿದೆ.

    ಅಲ್ಲದೆ ದಾರಿಯಲ್ಲಿ ಹೋಗುವ ಜನರು ಜಮೀನಿನಲ್ಲಿ ಹಾರಾಡುವ ಬೆಳ್ಳಕ್ಕಿಗಳ ಗುಂಪುಗಳನ್ನು ನೋಡಿ, ಫೋಟೊ ಸೆರೆ ಹಿಡಿದು ಸಂತಸ ಪಡುತ್ತಿದ್ದಾರೆ. ಬೆಳ್ಳಕ್ಕಿಗಳು ಆಹಾರ ಅರಸಿ ಜಮೀನುಗಳ ಕಡೆ ಬಂದಿರುವುದು ನೋಡುಗರಿಗೆ ಹಾಗೂ ರೈತರ ಕಣ್ಣುಗಳನ್ನು ತಂಪಾಗಿಸುತ್ತಿವೆ.

  • ಈ ಬಾರಿ ಬೇಸಿಗೆ ಬೆಳೆಗೆ ನೀರು ಕಟ್- ಸರ್ಕಾರದ ಪತ್ರದಲ್ಲಿ ಏನಿದೆ?

    ಈ ಬಾರಿ ಬೇಸಿಗೆ ಬೆಳೆಗೆ ನೀರು ಕಟ್- ಸರ್ಕಾರದ ಪತ್ರದಲ್ಲಿ ಏನಿದೆ?

    ಬೆಂಗಳೂರು: ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯ ಇಳಿಕೆ ಹಿನ್ನಲೆಯಲ್ಲಿ ಈ ಬಾರಿ ಬೇಸಿಗೆ ಬೆಳೆಗೆ ರೈತರ ಜಮೀನಿಗೆ ನೀರು ಬಿಡದಂತೆ ಜಲಸಂಪನ್ಮೂಲ ಇಲಾಖೆಯ ಸೂಚನೆ ನೀಡಿದೆ.

    ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗುತ್ತದೆ. ಸದ್ಯ ಜಲಾಶಯಗಳಲ್ಲಿ ಇರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಬಳಸಬೇಕು. ಯಾವುದೇ ಕಾರಣಕ್ಕೂ ಬೇಸಿಗೆ ಬೆಳೆಗೆ ನೀರು ಬಿಡುಗಡೆ ಮಾಡಬಾರದು ಎಂದು ಜಲಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪತ್ರದ ಮೂಲಕ ವಿವಿಧ ಜಲಾಶಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಬೆಳಗಾವಿ, ಕಲಬುರಗಿ, ಬೆಂಗಳೂರು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾವೇರಿ ನಿರಾವರಿ ನಿಗಮ ನಿಯಮಿತ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಬೇಸಿಗೆ ಬೆಳಗೆ ರೈತರಿಗೆ ನೀರು ಬಿಡದಂತೆ ಸೂಚಿಸಲಾಗಿದೆ.

    ಪತ್ರದಲ್ಲಿ ಏನಿದೆ?
    ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿನ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಬೇಸಿಗೆಯಲ್ಲಿ ಹಾಗೂ ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲು ಆಯಾ ಪ್ರಾದೇಶಿಕ ಆಯುಕ್ತರುಗಳಿಗೆ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. 2018 ಡಿಸೆಂಬರ್ 16ರಂದು ಕಂದಾಯ ಸಚಿವರ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮಳೆ ಕೊರತೆಯ ಹಿನ್ನೆಲೆಗಳಲ್ಲಿ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಲಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಜಲಾಶಯದ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲು ನಿರ್ಣಯಿಸಲಾಗಿದೆ.

    ಪ್ರಸ್ತುತ ಜಲಾಶಯಗಳಲ್ಲಿ ಒಳಹರಿವು ಇಲ್ಲದ ಕಾರಣದಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುವುದನ್ನು ತಪ್ಪಿಸಲು, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ವ್ಯವಸ್ಥಿತವಾಗಿ ಆಧ್ಯತೆಯ ಮೇರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂಕ ಪ್ರಾಣಿಗಳಿಗಾಗಿ ನದಿಗೇ ಬೋರ್‍ವೆಲ್ ನೀರು ಬಿಟ್ರು, ಐದಾರು ಊರುಗಳ ಪ್ರಾಣಿಗಳಿಗೆಲ್ಲಾ ಇವರೇ ಭಗೀರಥ..!

    ಮೂಕ ಪ್ರಾಣಿಗಳಿಗಾಗಿ ನದಿಗೇ ಬೋರ್‍ವೆಲ್ ನೀರು ಬಿಟ್ರು, ಐದಾರು ಊರುಗಳ ಪ್ರಾಣಿಗಳಿಗೆಲ್ಲಾ ಇವರೇ ಭಗೀರಥ..!

    ಹಾವೇರಿ: ಈ ವರ್ಷ ನದಿ, ಹಳ್ಳಗಳಲ್ಲೂ ಕುಡಿಯೋಕೆ ನೀರಿಲ್ಲ. ನೀರಿಗಾಗಿ ಜನ ಮತ್ತು ಜಾನುವಾರುಗಳು ನಿತ್ಯವೂ ಪರದಾಡು ಪರಿಸ್ಥಿತಿ ಇದೆ. ಆದ್ರೆ ಇಲ್ಲೊಬ್ಬ ರೈತ ತಮ್ಮ ಬೋರ್‍ವೆಲ್ ನೀರಲ್ಲಿ ಪೈರು ಬೆಳೆಯೋದು ಬಿಟ್ಟು, ನದಿಗೇ ನೇರವಾಗಿ ನೀರು ಬಿಡ್ತಿದಾರೆ. ಪ್ರತಿನಿತ್ಯವೂ ಸಾವಿರಾರು ಕುರಿ, ಮೇಕೆ, ಕಾಡುಪ್ರಾಣಿ ಹಾಗೂ ಪಕ್ಷಿಗಳು ದಾಹ ತಣಿಸುತ್ತಿದ್ದಾರೆ.

    ಬೋರ್‍ವೆಲ್ ನೀರನ್ನು ನೇರವಾಗಿ ನದಿಗೇ ಬಿಡ್ತಿರೋ ರಾಜು ಸಿಂಗಣ್ಣನವರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಜು ಅವರು ಜಿಲ್ಲೆಯ ವಣೂರು ತಾಲೂಕಿನ ಕಳಸೂರು ಗ್ರಾಮದ ನಿವಾಸಿ. ಈ ಬಾರಿ ವರದಾ ನದಿ ಬತ್ತಿ ಹೋಗಿರೋದ್ರಿಂದ ಜನ, ಜಾನುವಾರು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಲ್ಲ. ಪ್ರಾಣಿ, ಪಕ್ಷಿ, ಜನರ ಕಷ್ಟ ನೋಡಿದ ರಾಜು ಪೈರು ಬೆಳೆಯಲು ಕೊರೆಸಿದ್ದ ಬೋರ್‍ವೆಲ್ ನೀರನ್ನೇ ನದಿಗೆ ಬಿಡ್ತಿದ್ದಾರೆ. ನದಿಯ ಗುಂಡಿಯಲ್ಲಿ ನಿಂತ ನೀರು ಕುಡಿದು ಮೂಕ ಪ್ರಾಣಿಗಳು ದಾಹ ನೀಗಿಸಿಕೊಳ್ತಿವೆ. ಮಳೆ ಬಂದು ನದಿಗೆ ನೀರು ಬರೋತನಕ ನದಿಗೆ ನೀರು ಬಿಡ್ತೀನಿ ಎಂದು ರಾಜು ಹೇಳುತ್ತಾರೆ.

    ಪ್ರಾಣಿ, ಪಕ್ಷಿಗಳಿಗೆ ನೀರು ಕೊಡುವ ಉದ್ದೇಶದಿಂದಲೇ ಈ ಬಾರಿ ರಾಜು ಬೇಸಿಗೆ ಬೆಳೆ ಬೆಳೆದಿಲ್ಲ. ರಾಜು ಅವರ ಬೋರ್‍ವೆಲ್‍ನಿಂದ ಕಳಸೂರು, ದೇವಗಿರಿ, ಕೋಳೂರು ಸೇರಿದಂತೆ ಸುತಮುತ್ತಲಿನ ಗ್ರಾಮದ ರೈತರ ಜಾನುವಾರುಗಳು ತಮ್ಮ ದಾಹವನ್ನು ತಣಿಸಿಸೂಳ್ಳುತ್ತಿವೆ.

    ಬೆಂಗಳೂರಂತಹ ಮಹಾನಗರಗಳಲ್ಲಿ ಹನಿ ನೀರಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಇದೆ. ನೀರಿಗಾಗಿ ದಿನಗಟ್ಟಲೆ ಕೊಡ ಹಿಡಿದು ನಿಲ್ಲಬೇಕಾದ ದೃಶ್ಯ ಕಾಣ್ತಿವೆ. ಆದರೆ ರಾಜು ಅವರ ಈ ಕಾರ್ಯ ನೋಡಿದ್ರೆ ಜಾನುವಾರುಗಳಿಗೆ ಬರಗಾಲದ ಭಗೀರಥನಾಗಿದ್ದಾರೆ.

    https://www.youtube.com/watch?v=wIs_onT-jM4