Tag: ಬೇಸಿಗೆ ಕಾಲ

  • ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ಬೇಸಿಗೆಯಲ್ಲಿ (Summer) ಹೇಳಿ ಮಾಡಿಸಿದ ಹಣ್ಣು ಕಲ್ಲಂಗಡಿ (Watermelon). ಬೇಸಿಗೆಯಲ್ಲಿ ಆಗುವ ಆಯಾಸ, ಬಾಯಾರಿಕೆ ಹೋಗಲಾಡಿಸಲು ಇದು ಈ ರಸಭರಿತ ಹಣ್ಣನ್ನು ಹೆಚ್ಚಾಗಿ ಖರೀದಿಸುತ್ತಾರೆ. ಈ ಹಣ್ಣನ್ನು ತಿನ್ನುವುದರಿಂದ ಟೇಸ್ಟ್ ಜೊತೆಗೆ ಅನೇಕ ಪ್ರಯೋಜನಗಳಿವೆ.

    ತೂಕ ಇಳಿಕೆ: ಕಲ್ಲಂಗಡಿ ತಿನ್ನುವುದರಿಂದ ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರದಲ್ಲಿ ನೀವು ಕಲ್ಲಂಗಡಿಯನ್ನು ತಿನ್ನಬೇಕು. ಇದರಿಂದಾಗಿ ದಿನವಿಡೀ ಫ್ರೆಶ್ ಆಗಿರುತ್ತೀರಿ. ಜೊತೆಗೆ ತೂಕದ ಇಳಿಕೆಯು ಆಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಹಣ್ಣುಗಳು ನೆಗೆಟಿವ್ ಕ್ಯಾಲೋರಿಯನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.

    ಜೀರ್ಣಕ್ರಿಯೆಗೆ ಸಹಾಯ: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ಆರೋಗ್ಯ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ಚಯಾಪಚಯ ಹಾಗೂ ಹಸಿವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು

    ಕಡಿಮೆ ಆಗುತ್ತೆ ಮೂತ್ರಪಿಂಡದ ಅಸ್ವಸ್ಥತೆ: ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಕಲ್ಲಂಗಡಿಯಲ್ಲಿ ಹೇರಳವಾಗಿ ದೊರೆಯುತ್ತದೆ. ಇದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

    ಕಡಿಮೆ ರಕ್ತದೊತ್ತಡ: ಕಲ್ಲಂಗಡಿಯಲ್ಲಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲವಿದೆ. ಇದನ್ನು ದೇಹದಿಂದ ಅರ್ಜಿನೈನ್ ಆಗಿ ಪರಿವರ್ತಿಸಲಾಗುತ್ತದೆ. ಸಿಟ್ರುಲಿನ್ ಜೊತೆಗೆ ಈ ಅರ್ಜಿನೈನ್ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ಸಡಿಲಗೊಳಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

    ನಿಮ್ಮ ತ್ವಚೆಗೆ ಒಳ್ಳೆಯದು: 95 ಪ್ರತಿಶತದಷ್ಟು ಕಲ್ಲಂಗಡಿಯುವ ಕೇವಲ ನೀರಿನ್ನು ಹೊಂದಿರುತ್ತದೆ. ಇದು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಚರ್ಮವು ಹೆಚ್ಚು ಕಾಂತಿಯುತವಾಗಿಸುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ

  • ಪ್ರಾಣ ಪಣಕ್ಕಿಟ್ಟು ಹನಿನೀರಿಗಾಗಿ ಬಾವಿಗಿಳಿದ ದಿಟ್ಟ ಮಹಿಳೆಯ ವೀಡಿಯೋ ವೈರಲ್

    ಪ್ರಾಣ ಪಣಕ್ಕಿಟ್ಟು ಹನಿನೀರಿಗಾಗಿ ಬಾವಿಗಿಳಿದ ದಿಟ್ಟ ಮಹಿಳೆಯ ವೀಡಿಯೋ ವೈರಲ್

    ಮುಂಬೈ: ಬೇಸಿಗೆಯಲ್ಲಿ, ಭಾರತದ ಅನೇಕ ಭಾಗಗಳು ಬರ ಮತ್ತು ಶಾಖದ ಪರಿಸ್ಥಿತಿಗಳಲ್ಲಿ ತತ್ತರಿಸಿದಾಗ, ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಮಹಿಳೆಯರು ತಮ್ಮ ಕುಟುಂಬಗಳಿಗೆ ನೀರು ತರಲು ತಮ್ಮ ಜೀವವನ್ನು ಪಣಕ್ಕಿಡಬೇಕಾಗುತ್ತದೆ. ಅಂತಹ ಒಂದು ಮನಕಲಕುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುದ್ಧ ಕುಡಿಯುವ ನೀರಿಗಾಗಿ ಮಹಾರಾಷ್ಟ್ರದ ಮಹಿಳೆಯೊಬ್ಬರು ಬಹುತೇಕ ಬತ್ತಿಹೋಗಿರುವ ಆಳವಾದ ಬಾವಿಗೆ ಇಳಿದು ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೇ ನೀರು ತರುತ್ತಿರುವ ವೀಡಿಯೋವೊಂದು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಮಹಿಳೆಯೊಬ್ಬರು ಬಾವಿಗೆ ಇಳಿಯುವುದನ್ನು ನೀವು ಕಾಣಬಹುದಾಗಿದೆ. ಈ ದೃಶ್ಯಾವಳಿಯು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹಳ್ಳಿಯೊಂದರದ್ದಾಗಿದೆ. ಬಾವಿಯಲ್ಲಿ ಅಳವಡಿಸಿರುವ ಚಿಕ್ಕ ಚಿಕ್ಕ ಕಲ್ಲುಗಳ ಸಹಾಯದಿಂದ ಆಳವಾಗಿರುವ ಬಾವಿಯಲ್ಲಿ ಇಳಿಯುತ್ತಿದ್ದಾರೆ. ಬಾವಿಯಲ್ಲಿ ಒಂದು ಬಿಳಿಯ ಬಣ್ಣದ ಬಕೆಟ್‍ಗೆ ಹಗ್ಗ ಕಟ್ಟಿ ಜೋತು ಬಿಟ್ಟಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಈ ವೀಡಿಯೋದಲ್ಲಿನ ದೃಶ್ಯಾವಳಿಯು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಬಳಿಯ ಮೆಟ್‍ಘರ್ ಹಳ್ಳಿಯೊಂದರದ್ದಾಗಿದೆ. ಕುಡಿಯಲು ನೀರಿಲ್ಲ. ಗ್ರಾಮದ ಮಹಿಳೆಯರು ಜೀವವನ್ನೇ ಪಣಕ್ಕಿಟ್ಟು ನೀರು ತುಂಬಿಸಿಕೊಂಡು ತರುತ್ತಿದ್ದಾರೆ ಎಂದು ಸಾಲುಗಳನ್ನು ಬರೆದು ಕೊಂಡು ಹರಿಬಿಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಬಿಸಿಗಾಳಿ ತೀವ್ರವಾಗಿ ಕಾಡುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಏಪ್ರಿಲ್ 10 ರವರೆಗೆ ವಿದರ್ಭದಲ್ಲಿ ಅತೀ ಹೆಚ್ಚು ಶಾಖದ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    ಬುಧವಾರ ಟ್ವೀಟ್ ಮಾಡಿದ ಪುಣೆಯ ಹವಾಮಾನ ಸಂಶೋಧನೆ ಮತ್ತು ಸೇವೆಗಳ ಮುಖ್ಯಸ್ಥ ಕೆಎಸ್ ಹೊಸಲಿಕರ್, ಮುಂದಿನ 48 ಗಂಟೆಗಳಲ್ಲಿ ಉತ್ತರ ಮಧ್ಯ ಮಹಾರಾಷ್ಟ್ರ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

    ಬೇಸಿಗೆಯ ಕಾಲದಲ್ಲಿ ಶಾಖದ ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಿಗೆ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ತಲುಪುವ ಸಾಧ್ಯತೆಯಿರುತ್ತದೆ. ಗುಡ್ಡಗಾಡು ಪ್ರದೇಶಗಳಿಗೆ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಎಂದು ವರ್ಗೀಕರಿಸಲಾಗುತ್ತದೆ. ಸಾಮಾನ್ಯದಿಂದ ಗರಿಷ್ಠ ತಾಪಮಾನ ವ್ಯತ್ಯಾಸವು 4.5 ಡಿಗ್ರಿ ಸೆಲ್ಸಿಯಸ್ ನಿಂದ 6.4 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಬೇಕು. ದಾಖಲಾದ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 6.4 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾದಾಗ ತೀವ್ರವಾದ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ.

    ಹವಾಮಾನ ವರದಿಯ ಪ್ರಕಾರ, ವಿದರ್ಭದ ಅಕೋಲಾವು 40 ಡಿಗ್ರಿ ಸೆಲ್ಸಿಯಸ್‍ಗಿಂತ ಗರಿಷ್ಠ ತಾಪಮಾನವನ್ನು ಎದುರಿಸುತ್ತಿದೆ. ಭೂಮಿಯಲ್ಲಿರುವ ಪಾದರಸದ ಮಟ್ಟವು 44 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಲುಪುವ ಸಂಭವವಿದೆ. ಅಕೋಲಾ ವಿದರ್ಭದಲ್ಲಿ ಇಲ್ಲಿಯವರೆಗೆ 44 ಡಿಗ್ರಿ ಶಾಖವನ್ನು ಹೊಂದಿದೆ ಎಂದು ವರದಿಯಾಗಿದೆ.

  • ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

    ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

    ಕೊಪ್ಪಳ: ಬೇಸಿಗೆ ಕಾಲದ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲೆಯ ಗ್ರಾಮವೊಂದರಲ್ಲಿ ಕಳೆದ 15 ದಿನಗಳಿಂದ ನೀರು ಬಾರದ ಕಾರಣ ಗ್ರಾಮಸ್ಥರು ಹೊಲದಲ್ಲಿರುವ ಕೃಷಿಹೊಂಡಗಳ ನೀರನ್ನು ಕುಡಿದು ಬದುಕು ಸಾಗಿಸುತ್ತಿದ್ದಾರೆ.

    ಜಿಲ್ಲೆಯ ಕುಕನೂರು ತಾಲೂಕಿನ ಭಟಪ್ಪನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಬೋರ್ ವೇಲ್ ನೀರು ಸ್ಥಗಿತಗೊಂಡ ಕಾರಣ, ಗ್ರಾಮಸ್ಥರು ದೂರದಲ್ಲಿರುವ ಕೃಷಿ ಹೊಂಡಗಳಿಗೆ ಹೋಗಿ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಂಡಲಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಜನತೆಗೆ ನೀರು ಪೂರೈಕೆ ಮಾಡಬೇಕಾದ ಗ್ರಾ.ಪಂಯವರು 15 ದಿನಗಳಾದರೂ ಮಷಿನ್ ದುರಸ್ತಿಗೊಳಿಸಿಲ್ಲ. ಪರಿಣಾಮ ಈ ಗ್ರಾಮಸ್ಥರು ಬೆಳಗ್ಗೆಯಿಂದ ಸಂಜೆ ತನಕ ಹೊಲದಲ್ಲಿ ನಿರ್ಮಿಸಿರುವ ರೈತರ ಕೃಷಿಹೊಂಡಗಳನ್ನು ಹುಡುಕಿಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಮೈಲುಗಟ್ಟಲೇ ನಡೆದು ಹೋದರೆ ಮಾತ್ರ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ಪಂಪ್‍ಸೆಟ್ ಕಳೆದ 15 ದಿನಗಳ ಹಿಂದೆ ಕೈಕೊಟ್ಟಿದೆ. ಇಂದು ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಗ್ರಾಮಸ್ಥರು ದೊಡ್ಡ ಮನಸ್ಸು ಮಾಡಿ, ಮೈಲುಗಟ್ಟಲೇ ನಡೆದುಕೊಂಡು ಹೋಗಿ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನೇ ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾ.ಪಂ.ಯವರು ಮಾತ್ರ ಇದುವರೆಗೂ ಮಷಿನ್ ರಿಪೇರಿ ಮಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮದ ಮತ್ತೊಬ್ಬರು ಹೇಳುವ ಪ್ರಕಾರ, ಮಷಿನ್ ರಿಪೇರಿ ಮಾಡಿಸಿದ್ದಾರೆ. ಆದರೆ ಪೈಪ್‍ಲೈನ್ ಒಡೆದು ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ನಮ್ಮ ಊರಿಗೆ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

    ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ ನೀರು ತರಬೇಕು. ದೂರದಲ್ಲಿರುವ ಕೃಷಿಹೊಂಡಗಳಿಗೆ ಸುಡು ಬಿಸಿಲಿನಲ್ಲಿ ನಡೆದುಕೊಂಡು ಹೋಗಿ ತಲೆ ಮೇಲೆ ಕೊಡ ಹೊತ್ತುಕೊಂಡು ವಿದ್ಯಾರ್ಥಿಗಳು ನೀರು ತರುತ್ತಿರುವ ದೃಶ್ಯವಂತೂ ಪ್ರಜ್ಞಾವಂತರ ಕರಳು ಕಿತ್ತು ಬರುವುಂತಿದೆ. ತುಂಬಿದ ಕೊಡಗಳನ್ನು ಹೊತ್ತುಕೊಂಡು ಪುಟ್ಟಪುಟ್ಟ ಮಕ್ಕಳು ನಡುರಸ್ತೆಯಲ್ಲಿ ಭಾರವನ್ನು ತಾಳದೇ ಮುಖ ಕಿವಿಚಿಕೊಂಡು ಮನೆ ಕಡೆ ದಾವಿಸುತ್ತಿರುವಾಗ, ಜನಪ್ರತಿನಿಧಿಗಳ ಹಾಗೂ ಗ್ರಾ.ಪಂ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ನೀರಿನ ರಾಜಕೀಯಕ್ಕೆ ಹೆಸರಾದ ತಾಲೂಕು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ನೀರು ಮತ್ತು ನೀರಾವರಿ ರಾಜಕೀಯಕ್ಕೆ ಹೆಸರಾಗಿದೆ. ಇಲ್ಲಿನ ರಾಜಕಾರಣಿಗಳು ಪ್ರತಿ ಚುನಾವಣೆಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಸ್ತಂಗಳನ್ನು ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಈ ಕ್ಷೇತ್ರದ ಜನರಿಗೆ ಮಾತ್ರ ಶಾಶ್ವತವಾಗಿ ನೀರಾವರಿ ಸೌಲಭ್ಯವೂ ಕಲ್ಪಿಸಿಲ್ಲ. ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಭರವಸೆಯಲ್ಲಿಯೇ ಬೆಂದು ಹೋಗುತ್ತಿರುವ ಜನ ಗ್ರಾ.ಪಂಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರವರೆಗೂ ಜಿಲ್ಲೆಯ ಜನತೆಗೆ ಪ್ರತಿ ವರ್ಷ ಭರವಸೆಗಳನ್ನು ಕೊಟ್ಟು, ನಿಮ್ಮೂರಿನ ರೈತರಿಗೆ ನೀರಿವಾರಿ ಸೌಲಭ್ಯ ಕಲ್ಪಿಸ್ತಿವಿ. ನಿಮ್ಮೂರಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತೇವೆ. ಹಾಗೇ ಹೀಗೇ ಎಂದು ಕೇವಲ ಭರವಸೆಗಳನ್ನೇ ಕೊಟ್ಟು ಈ ಭಾಗದ ಜನರನ್ನು ಭರವಸೆಯಲ್ಲಿಯೇ ಬೆಂದು ಹೋಗುವುಂತೆ ಮಾಡಿದ್ದಾರೆ. ತುಂಗಭದ್ರಾ ಹಿನ್ನೀರಿನಿಂದ ಬನ್ನಿಕೊಪ್ಪ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ನಾರಾಯಣಪುರ ಜಲಾಶಯದಿಂದ ಈ ಗ್ರಾಮಗಳಿಗೆ ತಲುಪಬೇಕಾಗಿದ್ದ 762 ಕೋಟಿ ರೂ. ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಲ್ಲದೇ ಈ ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗಿ ವರ್ಷ ಕಳೆದರೂ ಇದುವರೆಗೂ ಈ ಘಟಕವನ್ನು ರಿಪೇರಿ ಮಾಡಿಲ್ಲ ಎಂದು ಗ್ರಾಮಸ್ಥರಾದ ಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನಾದರೂ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಕಾರಣ ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಯಿಂದ ಕೃಷಿ ಹೊಂಡಗಳಲ್ಲಿ ಸಂಗ್ರಹಗೊಂಡ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. 15 ದಿನಗಳಿಂದ ಇದೇ ನೀರನ್ನು ಕುಡಿಯುತ್ತಿರುವ ಈ ಗ್ರಾಮಸ್ಥರು, ಆರೋಗ್ಯದಲ್ಲಿ ಏರುಪೇರಾದರೆ ಜವಾಬ್ದಾರರು ಯಾರು ಎನ್ನುವ ಪ್ರಶ್ನೆಗೆ ಕೇವಲ ಗ್ರಾ.ಪಂ. ಮಾತ್ರವಲ್ಲ ಇಡೀ ಜಿಲ್ಲಾಡಳಿತವೇ ಉತ್ತರಿಸಬೇಕಾಗುತ್ತದೆ.

  • ಬೇಸಿಗೆಯಲ್ಲಿ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಸಮಸ್ಯೆ – ಶಿಬಿರ ಆಯೋಜಿಸಿದ ಅಧಿಕಾರಿಗಳು

    ಬೇಸಿಗೆಯಲ್ಲಿ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಸಮಸ್ಯೆ – ಶಿಬಿರ ಆಯೋಜಿಸಿದ ಅಧಿಕಾರಿಗಳು

    ಹಾವೇರಿ: ಬೇಸಿಗೆಯ ಎರಡು ಮೂರು ತಿಂಗಳು ರಾಜ್ಯದ ನಾನಾ ಭಾಗಗಳಲ್ಲಿ ಜೀವಜಲದ ಸಮಸ್ಯೆ ಜೋರಾಗಿರುರತ್ತದೆ. ಆದರೆ ಈಗ ಬೇಸಿಗೆಯ ಮೂರು ತಿಂಗಳ ಅವಧಿಯಲ್ಲಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಹಾವೇರಿಯ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದಾರೆ.

    ಹಾವೇರಿ ತಾಲೂಕು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಯೋಗಶಾಲೆಯ ತಂತ್ರಜ್ಞಾನರ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾವೈದ್ಯಾಧಿಕಾರಿ ಡಾ.ರಾಘವೇಂದ್ರ ಚಾಲನೆ ನೀಡಿದ್ದರು. ಸದ್ಯ ಶಾಲಾ ಕಾಲೇಜುಗಳು ರಜೆ ಇವೆ. ಬೇರೆ ಅವಧಿಯಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿತ್ತು.

    ಶಾಲಾ-ಕಾಲೇಜು ಆರಂಭದ ದಿನದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಬ್ಲಡ್ ಬ್ಯಾಂಕ್‍ಗೆ ರಕ್ತವನ್ನು ಸಂಗ್ರಹಿಸುವ ಕಾರ್ಯ ಮಾಡಿತ್ತು. ಆದರೆ ಬೇಸಿಗೆಯಲ್ಲಿ ನೀರಿಗೆ ಹೇಗೆ ಬರ ಬಂದಿದೆ. ಹಾಗೆ ರಕ್ತದಾನಿಗಳ ಸಂಖ್ಯೆ ಬೇಸಿಗೆಯಲ್ಲಿ ಕಡಿಮೆ ಆಗಿದೆ. ಹಾಗಾಗಿ ಜಿಲ್ಲೆಯ ಬ್ಲಡ್ ಬ್ಯಾಂಕ್ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಯ ಸದ್ಯಸರು ಸೇರಿದಂತೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದರು.

    ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸರಿ ಮಾಡಲು ಬಡರೋಗಿಗಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಅನುಕೂಲಕರ ಆಗಲಿ ಎನ್ನುವ ಉದ್ದೇಶದಿಂದ 108 ಆಸ್ಪತ್ರೆಯ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ. ಇದರಿಂದ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಿ. ಇನ್ನೊಂದು ಜೀವಕ್ಕೆ ಸಹಾಯ ಮಾಡಿ ಎಂದು ರಕ್ತದಾನ ಮಾಡಿದ ಸಿಬ್ಬಂದಿ ಹೇಳಿದ್ದಾರೆ.

  • ನೀರಿಲ್ಲದೇ ಪೇಪರ್ ಪ್ಲೇಟ್‍ನಲ್ಲಿ ಊಟ ಮಾಡ್ತಾರೆ- ವಾರಕ್ಕೊಮ್ಮೆ ಸ್ನಾನ, ತಿಂಗಳಿಗೊಮ್ಮೆ ಬಟ್ಟೆ ಸ್ವಚ್ಛತೆ

    ನೀರಿಲ್ಲದೇ ಪೇಪರ್ ಪ್ಲೇಟ್‍ನಲ್ಲಿ ಊಟ ಮಾಡ್ತಾರೆ- ವಾರಕ್ಕೊಮ್ಮೆ ಸ್ನಾನ, ತಿಂಗಳಿಗೊಮ್ಮೆ ಬಟ್ಟೆ ಸ್ವಚ್ಛತೆ

    ಬಳ್ಳಾರಿ: ಬೇಸಿಗೆ ಕಾಲ ಎಂದರೆ ನೀರಿನ ಸಮಸ್ಯೆ ಬರೋದು ಸಹಜ. ಆದರೆ ಈ ಊರಲ್ಲಿ ಎಷ್ಟರ ಮಟ್ಟಿಗೆ ನೀರಿನ ಬರ ಇದೆ ಎಂದರೆ ಊಟಕ್ಕೆ ತಟ್ಟೆ ಬಳಸಿದ್ರೇ, ತೊಳೆಯ- ಬೇಕಾಗುತ್ತದೆ ಎಂದು ಪ್ಲಾಸ್ಟಿಕ್ ಪ್ಲೇಟ್‍ಗಳನ್ನು ಬಳಸುತ್ತಿದ್ದಾರೆ. ಕುಡಿಯೋಕು ಜಗಳವಾಡಿ ನೀರು ತರೋ ಇಲ್ಲಿಯ ಜನರು ಸ್ನಾನಕ್ಕೆ ವಾರಗಟ್ಟಲೇ ಕಾಯೋಸ್ಥಿತಿ ಬಂದಿದೆ.

    ಬಳ್ಳಾರಿ ನಗರದಿಂದ 10 ಕಿ.ಮಿ ದೂರದಲ್ಲಿರೋ ಹರಗಿನಡೋಣಿ ಗ್ರಾಮ ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಾಣ ಮಾಡಬೇಕೆಂದು ಅದೆಷ್ಟೋ ಬಾರಿ ಹೋರಾಟ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ನೀರಿಗಾಗಿ ಕಳೆದ ಉಪಚುನಾವಣೆಯಲ್ಲಿ ಒಂದು ಮತವನ್ನು ಹಾಕದೇ ಬಹಿಷ್ಕಾರ ಹಾಕಿದ್ರು. ಇದರಿಂದ ಎಚ್ಚತ್ತ ಜಿಲ್ಲಾಡಳಿತ ಇಲ್ಲಿಗೆ ನಿತ್ಯ ಟ್ಯಾಂಕರ್ ನೀರು ಪೂರೈಸುತ್ತಿದೆ.

    5000ಕ್ಕೂ ಹೆಚ್ಚು ಜನರು ಇರೋ ಈ ಊರಲ್ಲಿ ಒಂದರೆಡು ಟ್ಯಾಂಕರ್ ನೀರು ಯಾವುದಕ್ಕೂ ಸಾಲಲ್ಲ. ಹೀಗಾಗಿ ಇದೀಗ ವಾರಕ್ಕೊಮ್ಮೆ ಸ್ನಾನ ಮಾಡೋ ಜನರು ಊಟ ಮಾಡಿದ್ರೇ, ತಟ್ಟೆ ತೊಳೆಯಲು ನೀರು ಬೇಕೆಂದು ಪೇಪರ್ ಪ್ಲೇಟ್ ಬಳಸುತ್ತಿದ್ದಾರೆ. ಅಲ್ಲದೇ ಕೈಯನ್ನು ಕೂಡ ಪೇಪರ್ ಗೆ ಒರೆಸಿಕೊಳ್ಳುತ್ತಿದ್ದಾರೆ.

    ಮಳೆಗಾಲದಲ್ಲಿ ಊರಲ್ಲಿರೋ ಬೋರ್ ವೆಲ್ ಕೆಲಸ ಮಾಡುತ್ತವೆ. ಆದರೆ ಬೇಸಿಗೆಯಲ್ಲಿ ಮಾತ್ರ ಇಲ್ಲಿ ನೀರಿಗಾಗಿ ಪ್ರತಿ ವರ್ಷ ಹಾಹಾಕಾರ ಪ್ರಾರಂಭವಾಗುತ್ತದೆ. ಅದರಲ್ಲೂ ಈ ಬಾರಿ ಮೀತಿ ಮೀರಿದ ಬಿಸಿಲು ಮತ್ತು ಗ್ರಾಮಕ್ಕೆ ಬೇಕಾದಷ್ಟು ಟ್ಯಾಂಕರ್ ನೀರು ಬಾರದೇ ಇರುವುದಕ್ಕೆ ಇಲ್ಲಿಯ ಜನರು ತತ್ತರಿಸಿ ಹೋಗಿದ್ದಾರೆ.

    ಟ್ಯಾಂಕರ್ ಬಂದಾಗ ಜಗಳವಾಡೋ ಇಲ್ಲಿಯ ಜನರು ಸಿಕ್ಕಷ್ಟು ನೀರನ್ನು ಬಳಸಿ ಕೊಂಡು ಜೀವನ ಮಾಡುತ್ತಿದ್ದಾರೆ. ಸ್ನಾನ, ಬಟ್ಟೆ ಒಗೆಯೋದ್ರಲ್ಲೂ ಇತಿಮಿತಿ ಮಾಡಿಕೊಂಡಿದ್ದು, ಇದೀಗ ಕುಡಿಯೋ ನೀರಿಗೂ ಕೂಡ ಕಡಿವಾಣ ಹಾಕೋ ಪರಿಸ್ಥಿತಿ ಬಂದಿದೆ.

  • ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಸೇವನೆಯಿಂದ ನಮ್ಮ ದೇಹ ತಣ್ಣಗೆ ಇರುತ್ತದೆ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಇದು ಸುಳ್ಳು. ಏಕೆಂದರೆ ಈ ಪದಾರ್ಥಗಳು ಸೇವಿಸುವುದರಿಂದ ಇನ್ನಷ್ಟು ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.

    ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

    ಮೆಣಸಿನಕಾಯಿಯಿಂದ ಆಗುವ ಲಾಭಗಳು:
    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant) ಜೊತೆಗೆ ಡೈಯಟ್ರಿ ಫೈಬರ್(Dietary fiber) ಅಂಶಗಳು ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಿತ ಪ್ರಮಾಣದ ಹಸಿಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ ಟ್ರಬಲ್, ಮಲಬದ್ಧತೆ ರೋಗದಿಂದ ದೂರ ಇರಬಹುದಾಗಿದೆ.

    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ(Antibacterial) ಅಂಶ ಕೂಡ ಇರುತ್ತದೆ. ಹಸಿಮೆಣಸಿನಕಾಯಿ ಸೇವಿಸುವುದರಿಂದ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ ಹೋಗುತ್ತದೆ. ಇದರಿಂದ ಇಮ್ಯೂನ್ಯೂ ಸಿಸ್ಟಮ್(Immune System) ಶಕ್ತಿಯುತವಾಗುತ್ತದೆ ಹಾಗೂ ಅಲರ್ಜಿ, ಸೋಂಕಿನಿಂದ ರಕ್ಷಿಸುತ್ತದೆ.

    ಸಂಶೋಧನೆ ಪ್ರಕಾರ ಹಸಿಮೆಣಸಿನಕಾಯಿ ಸೇವನೆಯಿಂದ ರಕ್ತದಲ್ಲಿ ಇರುವ ಶುಗರ್ ನಾರ್ಮಲ್ ಆಗುತ್ತದೆ. ಡಯಾಬಿಟಿಸ್(Diabetes) ರೋಗ ಇರುವವರು ಹಸಿ ಮೆಣಸಿನಕಾಯಿಯನ್ನು ಮಿತಿಯಲ್ಲಿ ಸೇವಿಸಬೇಕು. ಮೆಣಸಿನಕಾಯಿ ಸೇವನೆಯಿಂದ ವಿಟಮಿನ್-ಎ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.

  • ಬೆಂಗ್ಳೂರಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ – ತಲೆ ಎತ್ತಿತು ಟ್ಯಾಂಕರ್ ನೀರಿನ ಮಾಫಿಯಾ

    ಬೆಂಗ್ಳೂರಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ – ತಲೆ ಎತ್ತಿತು ಟ್ಯಾಂಕರ್ ನೀರಿನ ಮಾಫಿಯಾ

    ಬೆಂಗಳೂರು: ನಗರದಲ್ಲಿ ಈ ಬಾರಿ ನೆತ್ತಿ ಸುಡುವ ಬಿಸಿಲಿನ ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆ ನಗರದಲ್ಲಿ ಟ್ಯಾಂಕರ್ ನೀರಿನ ದಂಧೆ ಜೋರಾಗಿದೆ. ಒಂದು ಲೋಡ್ ಟ್ಯಾಂಕರ್ ನೀರಿನ ದರ ಕೇಳಿದ್ರೆ ನೀವೂ ಅಚ್ಚರಿ ಪಡುತ್ತೀರಿ. ಟ್ಯಾಂಕರ್ ನೀರಿನ ದಂಧೆಯನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.

    ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾದವರ ಆಟಾಟೋಪ ಜೋರಾಗಿರುತ್ತೆ. ಸಾಮಾನ್ಯ ಸಂದರ್ಭದಲ್ಲಿ ಟ್ಯಾಂಕರ್ ನೀರಿಗೆ 500 ರಿಂದ 600 ರೂ ಇರುತ್ತದೆ. ಆದ್ರೆ ಬೇಸಿಗೆಯಲ್ಲಿ 1 ಟ್ಯಾಂಕರ್ ನೀರನ್ನು ದುಪ್ಪಟ್ಟು ದರದಲ್ಲಿ ಮಾರುತ್ತಾರೆ. ಟ್ಯಾಂಕರ್ ನೀರಿನ ದಂಧೆಕೋರರು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

    ವರದಿಗಾರ: ಸರ್.. 1 ಟ್ಯಾಂಕರ್ ನೀರೆಷ್ಟು..?
    ಟ್ಯಾಂಕರ್ ಮಾಲೀಕ: 1 ಸಾವಿರ ರೂ. ಆಗುತ್ತೆ
    ವರದಿಗಾರ: ಅಷ್ಟಾಗುತ್ತಾ?
    ಟ್ಯಾಂಕರ್ ಮಾಲೀಕ: ನೀರು ಎಲ್ಲೂ ಸಿಕ್ತಿಲ್ಲ. ನಾನೇ 400 ರೂ. ಕೊಟ್ಟು ತರುತ್ತಿದ್ದೀನಿ..

    ನೀರು ತರಿಸಿಕೊಂಡವರು: ಕೆಂಪಾಪುರ ಆ ಕಡೆಯೆಲ್ಲ 2 ಸಾವಿರ ಆಗುತ್ತೆ ಒಂದ್ ಲೋಡ್‍ಗೆ. ನೀರೇ ಎಲ್ಲೂ ಇಲ್ಲ. ಬೋರ್‍ವೆಲ್‍ಗಳಲ್ಲಿ ನೀರ್ ಬರ್ತಿಲ್ಲ. ಇಲ್ಲೆಲ್ಲ 1 ಸಾವಿರ ರೂ..
    ಟ್ಯಾಂಕರ್ ಮಾಲೀಕ: ನಮ್ ಹತ್ರ 1 ಸಾವಿರ ರೂ. ಈಗ ಆರ್ಡರ್ ಕೊಟ್ರೆ ಸಂಜೆಗೆ ತಂದು ಕೊಡ್ತೀವಿ. ಇಮ್ಮಿಡಿಯೇಟ್ ನೀರು ಕೊಡಲ್ಲ. ಇವ್ರೇ ನಿನ್ನೆ ಹೇಳಿರೋದು. ಇವತ್ ತಂದ್ಕೊಡ್ತಿದ್ದೀವಿ..
    ವರದಿಗಾರ: ಬೇಸಿಗೆ ಮುಗಿದ್ಮೇಲೆ ಕಡಿಮೆ ಆಗುತ್ತಾ..?
    ಟ್ಯಾಂಕರ್ ಮಾಲೀಕ : ಹೌದು ಬೇಸಿಗೆ ಮುಗಿದ್ಮೇಲೆ ಕಡಿಮೆ ಆಗುತ್ತೆ. ಆಗ 600 ರೂ. ಆಗುತ್ತೆ ಲೋಡ್‍ಗೆ..

    ನೀರು ಕೊಡೋರು 1 ಸಾವಿರ ಅಂದ್ರೆ ನೀರ್ ತರಿಸ್ಕೊಳ್ಳೋರೇ ಬೇರೆ ಕಡೆ 2 ಸಾವಿರ ಇದೆ. ಇಲ್ಲೇ ಪರವಾಗಿಲ್ಲ ಅಂತಾರೆ. ಇಷ್ಟೊಂದು ಹಣ ಕೊಟ್ರೂ ತಕ್ಷಣಕ್ಕೆ ನಿಮಗೆ ನೀರು ಸಿಗಲ್ಲ ಎಂದು ಬೇರೆ ನಾಟಕ ಆಡ್ತಾರೆ. ಕನಿಷ್ಠ ಇನ್ನೆರಡು ತಿಂಗಳು ನಗರದಲ್ಲಿ ಟ್ಯಾಂಕರ್ ದಂಧೆ ಎಗ್ಗಿಲ್ಲದೇ ನಡೆಯೋದಂತೂ ಪಕ್ಕಾ. ಪಾಪ ಜನಕ್ಕೆ ಬೇರೆ ದಾರಿ ಇಲ್ಲದೇ ಕೊಳ್ಳಲೇಬೇಕು. ಇವರ ಆಟಕ್ಕೆ ಬಿಬಿಎಂಪಿ ಕಡಿವಾಣ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv