Tag: ಬೇವು-ಬೆಲ್ಲ

  • ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಹಿಂದೂಗಳ ವರ್ಷಾರಂಭ ಎಂದೇ ಪರಿಗಣಿಸಲ್ಪಡುವ ಯುಗಾದಿ (Ugadi Festival), ಪ್ರಕೃತಿಯಲ್ಲೂ ಹೊಸ ಚಿಗುರು ಸೃಷ್ಟಿಯ ಕಾಲ. ವಸಂತ ಮಾಸದ ಆರಂಭ. ಋತುಗಳ ರಾಜ ವಸಂತನ ಆಗಮನವನ್ನು ಸೂಚಿಸುವ ಹಬ್ಬ. ಗಿಡಮರಗಳೆಲ್ಲ ತನ್ನ ಹಣ್ಣೆಲೆ ಕಳಚಿಕೊಂಡು ಹೊಸ ಚಿಗುರಿನೊಂದಿಗೆ ಹಸಿರಿನಿಂದ ಕಂಗೊಳಿಸುವ ಸಮಯವಿದು. ಯುಗಾದಿ ಎಲ್ಲರ ಪಾಲಿಗೂ ಸ್ಪೂರ್ತಿ, ಚೈತನ್ಯದ ಚಿಲುಮೆಯಿದ್ದಂತೆ. ಯುಗಾದಿಯನ್ನು ಹಿಂದೂಗಳಷ್ಟೇ ಅಲ್ಲ, ಇಡೀ ಪ್ರಕೃತಿಯೇ ಸಂಭ್ರಮಿಸುತ್ತದೆ. ಯುಗಾದಿ ಬೇಸಾಯದ ಆರಂಭದ ಸೂಚಕವೂ ಹೌದು. ಹಬ್ಬದ ದಿನ ಹಾಗೂ ಮರುದಿನ ಹೊನ್ನಾರು ಹೂಡಿ ಜಮೀನುಗಳಲ್ಲಿ ಶಾಸ್ತ್ರೋಕ್ತವಾಗಿ ನೇಗಿಲು ಉಳುವ ಪದ್ಧತಿ ಇಂದಿಗೂ ನಾಡಿನೆಲ್ಲೆಡೆ ಜೀವಂತವಾಗಿದೆ. ಇದನ್ನು ರೈತರು ಶುಭಸೂಚಕ ಎಂದೇ ಪರಿಗಣಿಸುತ್ತಾರೆ.

    ಬೇವು-ಬೆಲ್ಲ
    ಒಂದೊಂದು ಹಬ್ಬಕ್ಕೂ ಒಂದೊಂದು ಸದಾಶಯದ ಸಂದೇಶವಿರುತ್ತದೆ. ಯುಗಾದಿ ಹಬ್ಬದ ಕೇಂದ್ರಬಿಂದು ಬೇವು-ಬೆಲ್ಲ. ಬಾಯಿಗೆ ಸಿಹಿ ಮತ್ತು ಕಹಿ ರುಚಿ. ಹಾಗೆಯೇ ಬಾಳಿಗೆ ಸುಖ-ದುಃಖದ ಊರಣ. ಬೇವು ನಾಲಿಗೆಗೆ ಕಹಿ ಇರಬಹುದು. ಆದರೆ, ಹಲವು ರೋಗಗಳಿಗೆ ಔಷಧ. ಜೀವನದಲ್ಲಿ ಸುಖದೊಂದಿಗೆ ಬರುವ ಕಷ್ಟಗಳು ಎಂತಹ ಸಂದರ್ಭದಲ್ಲೂ ದಿಟ್ಟವಾಗಿ ನಿಲ್ಲುವ ಛಲವನ್ನು ಕಲಿಸುತ್ತವೆ. ಯುಗಾದಿಯಲ್ಲಿ ನಾವು ಸವಿಯುವ ಬೇವು-ಬೆಲ್ಲ, ಬದುಕಿನ ಪಾಠದ ಸಂಕೇತ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ಪಾನಕ-ಮಜ್ಜಿಗೆ
    ಯುಗಾದಿ ಹಬ್ಬದ ದಿನ ಹಳ್ಳಿಗಳಲ್ಲಿ ಪಾನಕ-ಮಜ್ಜಿಗೆಯದ್ದೇ ಗಮ್ಮತ್ತು. ಬಾಯಿಗೆ ರುಚಿ, ದೇಹಕ್ಕೆ ತಂಪು. ಯುಗಾದಿ ಬೇಸಿಗೆಯ ಆರಂಭದ ಸೂಚಕವಾದ್ದರಿಂದ ದೇಹವನ್ನು ತಂಪಾಗಿಡಬೇಕು. ಅದಕ್ಕಾಗಿ ಎಲ್ಲೆಲ್ಲೂ ಪಾನಕ-ಮಜ್ಜಿಗೆಯನ್ನು ವಿತರಿಸಲಾಗುತ್ತದೆ. ಹಬ್ಬದ ದಿನ ಈ ಪಾನೀಯಗಳ ರುಚಿಗೆ ಮಾರುಹೋಗದವರಿಲ್ಲ. ಯುಗಾದಿಗೆ ಹೋಳಿಗೆ ಊಟ ಮತ್ತೊಂದು ವಿಶೇಷ.

    ಜೂಜಾಟ
    ಗ್ರಾಮೀಣ ಕ್ರೀಡೆಗಳ ಮೆರುಗು ಯುಗಾದಿ ಹಬ್ಬದಲ್ಲಿರುತ್ತದೆ. ಯುಗಾದಿ ಅಂದಾಕ್ಷಣ ಥಟ್ಟನೆ ನೆನಪಾಗುವುದು ಜೂಜಾಟ. ‘ಅಪರಾಧ’ವೇ ಆಗಿರುವ ಈ ಕ್ರೀಡೆಗೆ ಅದೊಂದು ದಿನ ಮಾಫಿ ಇರುತ್ತದೆ. ಪೊಲೀಸರ ಭಯವಿಲ್ಲದೇ ನೂರು, ಇನ್ನೂರು, ಸಾವಿರ ಎನ್ನುತ್ತಾ ಬೆಟ್ಟು ಕಟ್ಟಿ ಜನ ಇಸ್ಪೀಟ್ ಆಡುತ್ತಾರೆ. ಮೂರೆಲೆ, ಅಂದರ್‌ಬಾಹರ್, ರಮ್ಮಿ, ಜಾಕ್‌ಪಟ್ ಇತ್ಯಾದಿ ಆಟಗಳನ್ನು ಆಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನಿಂಬೆಹಣ್ಣನ್ನು ದೂರಕ್ಕೆ ಎಸೆಯುವ ವಿಶೇಷ ಆಟವನ್ನು ಆಡುತ್ತಾರೆ. ಹಿಂದೆಲ್ಲ ಪಚ್ಚೆಯಾಟ, ಚೌಕಾಭಾರ ಆಟಗಳನ್ನು ಆಡುತ್ತಿದ್ದರು. ಈಗ ಅವುಗಳ ಸ್ಥಾನವನ್ನು ಇಸ್ಪೀಟ್ ಆಟ ಅತಿಕ್ರಮಿಸಿಕೊಂಡಿದೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ‘ಯುಗ ಯುಗವೇ ಕಳೆದರೂ.. ಯುಗಾದಿ ಮರಳಿ ಬರುತಿದೆ..’ ಎಂಬ ಕವಿವಾಣಿಯಂತೆ ಯುಗಾದಿ ಮತ್ತೆ ಬಂದಿದೆ. ಹಿಂದೂಗಳ ಹೊಸವರುಷ, ಹೊಸ ಹರುಷದೊಂದಿಗೆ ಆಗಮಿಸಿದೆ. ಮನೆ ತೊಳೆದು, ಹೂವು-ತೋರಣಗಳಿಂದ ಅಲಂಕರಿಸಿ, ಹೊಸ ಉಡುಗೆ ತೊಟ್ಟು, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮನೆಯಲ್ಲಿ ವಿಶೇಷ ಅಡುಗೆ ಮಾಡಿ ಹಬ್ಬದೂಟ ಮಾಡುವ ಸಂಭ್ರಮಕ್ಕೆ ಎಣೆಯಿಲ್ಲ.

  • ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಯುಗಾದಿ ಹಬ್ಬದ (Ugadi 2025) ದಿನ ಬೇವು ಬೆಲ್ಲಕ್ಕೆ (Bevu Bella) ವಿಶೇಷ ಸ್ಥಾನವಿದೆ. ವಿಶೇಷ ಅರ್ಥವನ್ನೊಳಗೊಂಡಿರುವ ಈ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವ ಸಂಪ್ರದಾಯವಿದೆ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಜೀವನದಲ್ಲಿ ಸುಖ-ದುಃಖ ಇರುತ್ತದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥವನ್ನು ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಅಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಬಂದಿದ್ದಾರೆ.

    ಬೇವು-ಬೆಲ್ಲ ಸೇವನೆ ಹಿಂದಿದೆ ವೈಜ್ಞಾನಿಕ ಕಾರಣ
    ಮನುಷ್ಯ ಬೇವು-ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂದು ತಿಳಿದು ಬಂದಿದೆ.

    ಬೇವು: ಬೇವಿನಲ್ಲಿರುವ ಔಷಧೀಯ ಗುಣಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಸಂತ ಋತುವಿನ ಆರಂಭದೊಂದಿಗೆ ಸಮೃದ್ಧವಾಗಿ ಬೆಳೆಯುವ ಬೇವು ಇಡೀ ವರ್ಷ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನೂ ಓದಿ: ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!

    ಬೇವು ಕಹಿಯಾದ ರಸವನ್ನೊಳಗೊಂಡಿರುತ್ತದೆ. ಬೆಲ್ಲದ ಜೊತೆಗೆ ಸೇವಿಸಿದರೆ ಪಿತ್ತದ ಅಂಶ ಕಡಿಮೆಯಾಗಿ ದೇಹ ತಂಪಾಗುತ್ತದೆ. ಇದು ಮುಖ್ಯವಾಗಿ ಪಿತ್ತರಸ ಲವಣಗಳು, ಫಾಸ್ಫೋಲಿಪಿಡ್ ಗಳು, ಕೊಲೆಸ್ಟ್ರಾಲ್, ಎಲೆಕ್ಟೋಲೈಟ್ ಗಳು ಸೇರಿದಂತೆ ನೀರಿನಾಂಶ ಹೊಂದಿರುತ್ತದೆ. ಹಲವು ಗುಣಗಳಿಂದ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಔಷಧಿಯಾಗಿದೆ.

    ಬೆಲ್ಲ: ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶಗಳು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೆಸಿಯಮ್, ಪೊಟ್ಯಾಶಿಯಂ ಅಪಾರವಾಗಿರುತ್ತದೆ. ಬೆಲ್ಲ ಸೇವಿಸಿದರೆ ತೂಕ ನಷ್ಟದ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಬೆಲ್ಲದಲ್ಲಿರುವ ಪೊಟ್ಯಾಶಿಯಂ ಚಯಾಪಚಯವನ್ನು ಉತ್ತಮಗೊಳಿಸುತ್ತದೆ. ಮನುಷ್ಯನಿಗೆ ನಿಶಕ್ತಿಯನ್ನು ದೂರ ಮಾಡುತ್ತದೆ. ಬೆಲ್ಲವನ್ನು ಸೇವಿಸುವುದರಿಂದ ದೇಹ ಚೈತನ್ಯವಾಗಿರುತ್ತದೆ. ಜೀವನದ ಸಿಹಿ ಕಹಿಯ ಪಾಠದ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಈ ಬೇವು ಬೆಲ್ಲ ಸಹಕಾರಿಯಾಗಿದೆ. ಇದನ್ನೂ ಓದಿ: ಯುಗಾದಿ ವಿಶೇಷ – ಪಂಚಾಂಗ ಪಠಣ ಮಾಡೋದು ಯಾಕೆ?

  • ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಹೊಸ ವರ್ಷದ ಆರಂಭದ ಸಂಕೇತವಾಗಿ ಯುಗಾದಿ ಹಬ್ಬ ಬರುತ್ತಿದೆ. ಹಬ್ಬದ ತಯಾರಿಗೆ ಈಗಾಗಲೇ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಎಂದರೆ ಸಿಹಿ-ಕಹಿಯ ಹಬ್ಬವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಬೇವು-ಬೆಲ್ಲ ಮಾಡುವುದು ಸಂಪ್ರದಾಯ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಬೇವು ಬೆಲ್ಲ ಮಾಡುವ ವಿಧಾನ ಇಲ್ಲಿದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಬೇಕಾಗುವ ಸಾಮಾಗ್ರಿ
    1. ಹುರಿಗಡಲೆ- 2 ಚಮಚ
    2. ಬೆಲ್ಲ- 1 ಚಮಚ
    3. ಒಣ ಕೊಬ್ಬರಿ ತುರಿ- 2 ಚಮಚ
    4. ಬೇವಿನ ಹೂವಿನ ದಳಗಳು -ಸ್ವಲ್ಪ ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ಮಾಡುವ ವಿಧಾನ:
    * ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
    * ನಂತರ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ.
    * ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು.
    * ಬೇವು ಸೊಪ್ಪಿನಲ್ಲಿನ ಕೇವಲ ಹೂವಿನ ದಳಗಳನ್ನು ಮಾತ್ರ ಬಿಡಿಸಿಟ್ಟುಕೊಳ್ಳಬೇಕು. ಇಲ್ಲಿ ಎಲೆಗಳ ಬದಲಾಗಿಯೇ ಹೂವಿನ ದಳ ತೆಗೆದುಕೊಳ್ಳಲಾಗಿರುತ್ತದೆ.
    * ಮೊದಲಿಗೆ ಹುರಿಗಡಲೆ ಪೌಡರ್‍ಗೆ ಬೇವು ಹೂವಿನ ದಳಗಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
    * ಕೊನೆಗೆ ಬೆಲ್ಲದ ಪುಡಿಯನ್ನು ಮಿಶ್ರಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಯುಗಾದಿ ಹಬ್ಬ ಆಚರಿಸಲು ಬೇವು-ಬೆಲ್ಲ ರೆಡಿ ಇದನ್ನೂ ಓದಿ: ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

  • ಯುಗಾದಿಗೆ ಮಾಡಿ ಸ್ಪೆಷಲ್ ಬೇವು-ಬೆಲ್ಲ

    ಯುಗಾದಿಗೆ ಮಾಡಿ ಸ್ಪೆಷಲ್ ಬೇವು-ಬೆಲ್ಲ

    ಯುಗಾದಿ ಎಂದರೆ ಮೊದಲಿಗೆ ನೆನಪಿಗೆ ಬರುವುದು ವಿಧವಿಧವಾದ ಸಿಹಿ ತಿನಿಸುಗಳು, ಮತ್ತು ಬೇವು-ಬೆಲ್ಲ. ಯುಗಾದಿಗೆ ಬೇವು ಮತ್ತು ಬೆಲ್ಲ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯುಗಾದಿ ಎಂದರೆ ಸಿಹಿ-ಕಹಿಯ ಹಬ್ಬವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಬೇವು-ಬೆಲ್ಲ ಮಾಡುವುದು ಸಂಪ್ರದಾಯ. ಹಬ್ಬಕ್ಕೆ ಹೋಳಿಗೆ, ಪಾನಕ ಎಂದು ಮಾಡುತ್ತೇವೆ ಆದರೆ ಸಿಹಿ, ಕಹಿ ಒಟ್ಟೊಟ್ಟಿಗೆ ಸೇರಿ ನಾಲಿಗೆಗೆ ರುಚಿಕೊಡುವ ಬೇವು-ಬೆಲ್ಲ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿ
    1. ಹುರಿಗಡಲೆ- 2 ಚಮಚ
    2. ಬೆಲ್ಲ- 1 ಚಮಚ
    3. ಒಣ ಕೊಬ್ಬರಿ ತುರಿ- 2 ಚಮಚ
    4. ಬೇವಿನ ಹೂವಿನ ದಳಗಳು -ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
    * ನಂತರ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ.
    * ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು.
    * ಬೇವು ಸೊಪ್ಪಿನಲ್ಲಿನ ಕೇವಲ ಹೂವಿನ ದಳಗಳನ್ನು ಮಾತ್ರ ಬಿಡಿಸಿಟ್ಟುಕೊಳ್ಳಬೇಕು. ಇಲ್ಲಿ ಎಲೆಗಳ ಬದಲಾಗಿಯೇ ಹೂವಿನ ದಳ ತೆಗೆದುಕೊಳ್ಳಲಾಗಿರುತ್ತದೆ.


    * ಮೊದಲಿಗೆ ಹುರಿಗಡಲೆ ಪೌಡರ್‍ಗೆ ಬೇವು ಹೂವಿನ ದಳಗಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
    * ಕೊನೆಗೆ ಬೆಲ್ಲದ ಪುಡಿಯನ್ನು ಮಿಶ್ರಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಯುಗಾದಿ ಹಬ್ಬ ಆಚರಿಸಲು ಬೇವು-ಬೆಲ್ಲ ರೆಡಿ

  • ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

    ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

    ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

    ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ಯುಗಾದಿ’ ಎಂಬ ಪದ ವ್ಯುತ್ಪತ್ತಿಯಾಗಿದೆ. ಈ ಯುಗಾದಿ ಕೃತಯುಗದ ಚೈತ್ರ, ಶುದ್ಧ, ಪಾಡ್ಯ, ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ. ಋತುಗಳು, ಗ್ರಹಗಳು, ನಕ್ಷತ್ರಗಳು ಈ ದಿನ ಸೃಷ್ಟಿ ಆಯಿತು ಎನ್ನುವ ನಂಬಿಕೆಯೂ ಇದೆ.

    ಯುಗಾದಿ ಹಬ್ಬವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಿಸುತ್ತಾರೆ. ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ.

    ಚಾಂದ್ರಮಾನ ಯುಗಾದಿ:
    ಚಿತ್ತ ನಕ್ಷತ್ರ ಇದ್ದರೆ ಚೈತ್ರ ಮಾಸ, ವಿಶಾಖ ನಕ್ಷತ್ರ ಇದ್ದರೆ ವೈಶಾಖ ಮಾಸ, ಜೇಷ್ಠ ನಕ್ಷತ್ರ-ಜೇಷ್ಠ ಮಾಸ, ಉತ್ತರಾಷಡ ನಕ್ಷತ್ರ-ಆಷಾಢ ಮಾಸ, ಶ್ರವಣ ನಕ್ಷತ್ರ- ಶ್ರಾವಣ ಮಾಸ, ಪೂರ್ವಭದ್ರ ನಕ್ಷತ್ರ-ಭಾದಪ್ರದ ಮಾಸ, ಅಶ್ವಿನಿ ನಕ್ಷತ್ರ-ಅಶ್ವಯುಜ ಮಾಸ, ಕೃತಿಕಾ ಮಾಸ-ಕಾರ್ತಿಕ ಮಾಸ, ಮೃಗಶಿರಾ ನಕ್ಷತ್ರ-ಮಾರ್ಗಶಿರ ಮಾಸ, ಪುಷ್ಯ ನಕ್ಷತ್ರ-ಪುಷ್ಯ ಮಾಸ, ಮಖಾ ನಕ್ಷತ್ರ-ಮಾಘ ಮಾಸ ಮತ್ತು ಉತ್ತರ ನಕ್ಷತ್ರ-ಪಾಲ್ಗುಣ ಮಾಸ ಹೀಗೆ 12 ಮಾಸಗಳು ಆಯಾ ನಕ್ಷತ್ರಗಳ ಹೆಸರಿನಿಂದ ಕರೆಯುತ್ತಾರೆ. ಈ ರೀತಿ ಚಂದ್ರನಿಂದಲೇ ಎಲ್ಲಾ ಲೆಕ್ಕಚಾರ ಮಾಡುವುದರಿಂದ ಇದಕ್ಕೆ ಚಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಚಾಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

    ಸೌರಮಾನ ಯುಗಾದಿ:
    ರವಿ ಗ್ರಹವು ಒಂದು ಕ್ರಾಂತಿಯಿಂದ ಮತ್ತೊಂದು ರಾಶಿಯ ಕ್ರಾಂತಿವರೆಗೆ ಭ್ರಮಣ ಮಾಡಲು ಸುತ್ತುವ ಕಾಲಕ್ಕೆ ಮಾಸ ಎಂದು ಹೇಳಲಾಗುತ್ತದೆ. ಅಂದರೆ ರವಿಯು ಅಮಾವಾಸ್ಯೆ ದಿವಸ ಮೇಷ ರಾಶಿಯಲ್ಲಿದ್ದರೆ ಆ ಮಾಸವನ್ನು ಚೈತ್ರ ಮಾಸ ಎನ್ನುವರು. ವೃಷಭ ರಾಶಿಗೆ ರವಿ ಬಂದರೆ ಅದನ್ನು ವೈಶಾಖ ಮಾಸ ಎಂದು ಕರೆಯಲಾಗುತ್ತದೆ. ಮಿಥುನ-ಜೇಷ್ಠ ಮಾಸ, ಕಟಕಕ್ಕೆ-ಆಷಾಢ ಮಾಸ, ಸಿಂಹ-ಶ್ರಾವಣ ಮಾಸ, ಕನ್ಯಾ-ಭಾದ್ರಪದ, ತುಲಾ-ಅಶ್ವಿಜ ಮಾಸ, ವೃಶ್ಚಿಕ-ಕಾರ್ತಿಕ ಮಾಸ, ಧನಸ್ಸು-ಮಾರ್ಗಶಿರಾ, ಮಕರ-ಪುಷ್ಯ ಮಾಸ, ಕುಂಭ-ಮಾಘ ಮಾಸ ಮತ್ತು ಮೀನ-ಪಾಲ್ಗುಣ ಮಾಸ ಎಂದು ಕರೆಯಲಾಗುತ್ತದೆ. ಈ ರೀತಿ ರವಿ ಗ್ರಹದಿಂದ ಎಲ್ಲ ಲೆಕ್ಕಾಚಾರ ಮಾಡುವುದರಿಂದ ಸೌರಮಾನ ಯುಗಾದಿ ಎಂದು ಕರೆಯಲಾಗುತ್ತದೆ.

    ಇವರೆಡು 15 ದಿನಗಳ ಅಂತರದಲ್ಲಿ ಬರುತ್ತವೆ. ಈ ಸೌರಮಾನ ಯುಗಾದಿಯನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಚರಿಸುತ್ತಾರೆ. ವೇದ ಕಾಲದಲ್ಲಿ ಸೌರಮಾನ ಅನುಸಾರವಾಗಿ ಮಾಸಗಳು ಪ್ರಚಾರದಲ್ಲಿದ್ದವು.

    ಇತಿಹಾಸ:
    ಯುಗಾದಿಯ ಚಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ ‘ಉಂಡಿದ್ದೆ ಉಗಾದಿ ಮಿಂದಿದ್ದೆ ದೀಪಾವಳಿ’. ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವ ವೇದ, ಶತಪಥಬ್ರಾಹಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

    ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಯುಗಾದಿಯನ್ನು ಗುಡಿಪಾಡ್ಯ ಹೆಸರಿನಲ್ಲಿ ಆಚರಿಸಲಾಗುತ್ತದೆ

    ರೋಮನ್ನರಿಗೆ ಜನವರಿಯ ಮೊದಲ ದಿನವಿದ್ದಂತೆ, ಹಿಂದೂಗಳಿಗೆ ‘ಯುಗಾದಿ’ ಆದಿಯ ದಿನವಾಗಿದೆ. ಯುಗಾದಿಯ ಶಕ್ತಿ ಉಪವಾಸನೆಯ ಆರಂಭದ ದಿನವಾಗಿದ್ದು, ಈ ದಿನದಿಂದ ವಸಂತ ನವರಾತ್ರಿ ಆರಂಭವಾಗುತ್ತದೆ. ವರ್ಷಾಧಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭ ಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ ಇದೆ. ಅಂದರೆ ಯುಗಾದಿಯ ದಿನ ಬೆಳಗ್ಗೆ ಎದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನಲಾಗುತ್ತದೆ.

    ಯುಗಾದಿಯ ವಿಶೇಷತೆ:
    ಈ ಹಬ್ಬದಂದು ಬೆಲ್ಲ ಮತ್ತು ಕಹಿಯಾದ ಬೇವು ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.

    ಬೇವು-ಬೆಲ್ಲದ ವಿಶೇಷತೆ ಏನು?
    * ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ.
    * ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ.
    * ಮಾನವ ವಜ್ರದ್ರೇಹಿಯಾಗುತ್ತಾನೆ.
    * ಸಂಪತ್ತು ಉಂಟಾಗುತ್ತದೆ.
    * ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

    ಪಂಚಾಂಗ ಶ್ರವಣ:
    ಸಾಯಾಂಕಾಲ ಪಂಚಾಂಗ ಶ್ರವಣ ಮಾಡುವುದು ಈ ಹಬ್ಬದ ಮತ್ತೊಂದು ವಿಶೇಷ ಆಚರಣೆಯಾಗಿದೆ. ಪಂಚಾಂಗದ ಪ್ರಕಾರ ಫಲಾಫಲಗಳನ್ನು, ಉಪಯುಕ್ತ ದಿನಗಳನ್ನೂ ತಿಳಿದುಕೊಂಡು ವ್ಯಾಪಾರ, ವಹಿವಾಟು, ವ್ಯವಸಾಯ ನಿಯೋಜಿಸಿಕೊಳ್ಳಬಹುದು. ಯುಗಾದಿಯಂದು ಪಾಡ್ಯ ಬರುವಾಗ ಹೊಸ ಸಂವತ್ಸರದ ತಿಥಿ, ವಾರ, ನಕ್ಷತ್ರಾದಿಗಳು ಉದಯಿಸುತ್ತವೆ. ಆದ್ದರಿಂದ ಪಾಡ್ಯಮಿಯಂದು ಹಬ್ಬದ ಆಚರಣೆ ಮಾಡುತ್ತಾರೆ.

    ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸಿ, ಬಿತ್ತನೆ ಮಾಡುವ ಎಲ್ಲಾ ಧಾನ್ಯಗಳ ಮಾದರಿಯ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿಯ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ಧ ಎಂದರ್ಥ. ಸೌರಮಾನ ಯುಗಾದಿಯನ್ನು ಸೌರಮಾನದ ರೀತಿಯಲ್ಲಿ ಆಚರಿಸುವವರು. ಸೂರ್ಯ ಮೇಷ ಸಂಕ್ರಾಂತಿ ವೃತ್ತವನ್ನ ಪ್ರವೇಶಿಸುವ ದಿನ. ಈ ಹಬ್ಬದ ಆಚರಣೆ ಸಹ ಚಂದ್ರಮಾನ ಯುಗಾದಿಯಂತೆಯೇ ನಡೆಯುತ್ತದೆ. ಯುಗಾದಿಯ ದಿನ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳುವುದು ವಾಡಿಕೆ.