Tag: ಬೇಳಗಾವಿ

  • ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ನೀರು ಕೊಟ್ಟು ವೋಟು ಕೇಳೋಕೆ ಬನ್ನಿ – ನೀರಿಗಾಗಿ ಮತದಾನ ಬಹಿಷ್ಕಾರಿಸಿದ ಗ್ರಾಮಸ್ಥರು

    ಬೆಳಗಾವಿ (ಚಿಕ್ಕೋಡಿ): ಈ ಬಾರಿ ಲೋಕಸಭಾ ಚುನಾವಣೆ ನಮಗೆ ಬೇಡ, ನಮ್ಮೂರಿಗೆ ಜನಪ್ರತಿನಿಧಿಗಳು ಮತ ಕೇಳೋಕೆ ಬರೋದು ಬೇಡ ಅಂತ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

    ನೀರು ಕೊಟ್ಟು ನಂತರ ವೋಟು ಕೇಳೋಕೆ ಬನ್ನಿ. ಪ್ರಜಾಪ್ರಭುತ್ವಕ್ಕೆ ಮತಬೇಕು, ಬದುಕಲು ನೀರು ಬೇಕು ಅಂತ ಕೈಯಲ್ಲಿ ಸ್ಲೋಗನ್ ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರ ಈ ಗೋಳು ಕಳೆದ 30 ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳು ಕೇಳಿಲ್ಲ. ರಾಜ್ಯ ಸರ್ಕಾರದ ಮಾಸ್ಟರ್ ಮೈಂಡ್ ಅಂತಾನೇ ಕರೆಸಿಕೊಳ್ಳುವ ಸಚಿವ ಸತೀಶ್ ಜಾರಕಿಹೊಳಿಯವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ಹಂಚಿನಾಳ ಗ್ರಾಮ ಹಾಗೂ ಉಳ್ಳಾಗಡ್ಡಿ ಖಾನಾಪುರ, ಕುರಣಿ, ಚಿಕ್ಕಾಲಗುಡ್ಡ ಸೇರಿದಂತೆ ಐದು ಊರಿಗೆ ಸರಿಯಾಗಿ ಕುಡಿಯೋಕೆ ಮತ್ತು ಕೃಷಿಗೆ ನೀರು ಸಿಗುತ್ತಿಲ್ಲ. ತಮಗೆ ನೀರು ಕೊಡುವವರೆಗೂ ನಾವು ಮತದಾನ ಮಾಡುವುದಿಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ಈ ಗ್ರಾಮಗಳಿಗೆ ನೀರ ಹರಿಸುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಹಿಡಕಲ್ ಜಲಾಶಯದಿಂದ ಕುರಣಿ ಏತನೀರಾವರಿ ಯೋಜನೆ ನಿರ್ಮಾಣ ಮಾಡಲಾಗಿದೆ. ಈ ಗ್ರಾಮಗಳಿಂದ ಕುರಣಿ ಏತನೀರಾವರಿ ಯೋಜನೆಯ ನೀರೆತ್ತುವ ಜಾಗವಿರೋದು ಕೇವಲ 3 ಕಿ.ಮೀ ಅಷ್ಟೇ. ಆದರೆ ಅಲ್ಲಿಂದ ಇಲ್ಲಿಯವರೆಗೂ ಒಂದ ಬಾರಿ ಬಿಟ್ಟರೆ ಮತ್ಯಾವತ್ತೂ ಸಹ ನೀರು ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

    ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸದ್ಯ ಎರಡು ಜಿಲ್ಲೆಗಳ ನೀರಿನ ಬವಣೆ ಹೋಗಲಾಡಿಸ್ತಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಹುಕ್ಕೇರಿ ತಾಲೂಕಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೃಷಿಗೆ ಸಮರ್ಪಕ ನೀರಿನ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ಬರೀ ಆಶ್ವಾಸನೆ ನೀಡಿ ಕೈ ತೊಳೆದುಕೊಂಡು ಹೋಗುವ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ಬಾರಿ ಈ ನಾಲ್ಕು ಗ್ರಾಮದ ಜನರು ಮತದಾನ ಬಹಿಷ್ಕಾರದ ಹಾದಿ ಹಿಡಿದಿದ್ದು, ಆದಷ್ಟು ಬೇಗ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಬೇಕು ಅಂತ ಆಗ್ರಹಿಸಿದ್ದಾರೆ.