Tag: ಬೇಪೂರ್

  • ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

    ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

    ತಿರುವನಂತಪುರಂ/ಮಂಗಳೂರು: ಕೇರಳದ (Kerala) ಕರಾವಳಿಯಲ್ಲಿ ಸಿಂಗಾಪುರದ ಹಡಗು (Cargo Ship) ಮೂಡಿಸಿದ ಆತಂಕ ಇನ್ನೂ ಕೊನೆಯಾಗಿಲ್ಲ. ಬೆಂಕಿಯುಗುಳುತ್ತಲೇ ಇರುವ ಹಡಗನ್ನು 48 ಗಂಟೆ ಕಳೆದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.

    ಕ್ಷಣಕ್ಷಣಕ್ಕೂ ಸ್ಫೋಟಗೊಳ್ಳುತ್ತಿರುವ ಸಿಂಗಾಪುರದ ಎಂ.ವಿ. ವಾನ್‌ಹೇ 503 ಕೇರಳ-ಮಂಗಳೂರು ಕಡಲತೀರವನ್ನು ಆತಂಕಕ್ಕೆ ತಳ್ಳಿದೆ. ಈ ಮಧ್ಯೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಹಡಗಿನಲ್ಲಿ ಇನ್ನಷ್ಟು ಪ್ರಖರವಾಗಿ ಬೆಂಕಿ ಪಸರಿಸಲು ಬೇಕಾದ ಸಾಮಗ್ರಿಗಳಿರೋದು ಆತಂಕಕ್ಕೆ ಕಾರಣವಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಹಡಗಿನಲ್ಲಿ ಪೆಟ್ರೋಲ್, ಡೀಸೆಲ್, ನೈಟ್ರೋ ಸೆಲ್ಯೂಲೋಸ್ ನಂತಹ ಕಂಟೇನರ್‌ಗಳು ಇರೋದೆ ಈ ಆತಂಕಕ್ಕೆ ಕಾರಣ. ಒಟ್ಟಾರೆ ಅದರಲ್ಲಿರುವ 600ಕ್ಕೂ ಅಧಿಕ ಕಂಟೇನರ್‌ಗಳಲ್ಲಿ 157 ಕಂಟೇನರ್‌ಗಳಲ್ಲಿ ಅಪಾಯಕಾರಿ ಐಟಂಗಳನ್ನು ಸಂಗ್ರಹಿಸಿಟ್ಟಿರುವುದು ದೃಢಪಟ್ಟಿದೆ. ಈಗಾಗಲೇ ಹಡಗಿನಲ್ಲಿದ್ದ 18 ಮಂದಿಯನ್ನು ಭಾರತೀಯ ನೌಕಾದಳ ರಕ್ಷಿಸಿ, ಮಂಗಳೂರಿಗೆ ಕರೆ ತಂದಿದೆ. ಉಳಿದಂತೆ ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರೆದಿದೆ. ಈ ನಡುವೆ ನೌಕಾದಳ ಬೆಂಕಿಯನ್ನು ನಿಯಂತ್ರಿಸಲು ಭಾರೀ ಸಾಹಸ ಪಡುತ್ತಿದೆ. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ 21 ಕೋಟಿ ಹಣ ಬಳಕೆ ಆರೋಪ – ಸಂಸದ ತುಕಾರಾಂ ಇಡಿ ವಶಕ್ಕೆ

    ಬೆಂಕಿ ಈ ಮಟ್ಟಿಗೆ ಹರಡೋದಕ್ಕೆ ಅದರಲ್ಲಿದ್ದ ಸಾಮಗ್ರಿಗಳೇ ಕಾರಣ ಎನ್ನಲಾಗುತ್ತಿದೆ. 240 ಟನ್ ಡೀಸೆಲ್, 2,000 ಟನ್ ಇಂಧನ ತೈಲ ಇದ್ದು, ಅದಲ್ಲದೇ ಇತರೆ ತೈಲ ಸಾಮಗ್ರಿಗಳು, ಪ್ಲಾಸ್ಟಿಕ್ ಇವೆಲ್ಲವೂ ಬೆಂಕಿ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಗಾಳಿ ಮಳೆಯೂ ಬೆಂಕಿ ಹರಡಲು ಕಾರಣವಾಗುತ್ತಿದೆ. ಅದಾಗ್ಯೂ ನೌಕಾದಳ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಬೇಕಾದ ಪ್ರಯತ್ನದಲ್ಲಿದೆ. ಹಡಗು ತುಂಡರಿದು ಸಮುದ್ರ ಸೇರುವ ಸಾಧ್ಯತೆಯೂ ಇದ್ದು, ಯಾವುದಕ್ಕೂ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದು ಕೂಡಾ ಗೊತ್ತಾಗಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 4 ದಿನಗಳವರೆಗೆ ಭಾರೀ ಮಳೆ – 30 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಹಡಗಿನಲ್ಲಿದ್ದ ತಂಡದಲ್ಲಿ ಇಂಜಿನಿಯರ್‌ಗಳಿದ್ರೂ, ಇಂಜಿನ್ ವಿಭಾಗಗಳನ್ನು ಪರಿಶೀಲಿಸುತ್ತಿದ್ದರೂ ಇಂತಹ ಅವಘಡ ಸಂಭವಿಸಿರುವುದು ಆಶ್ಚರ್ಯ ಮೂಡಿಸಿದೆ. ಯಾವೊಂದು ಸಿಗ್ನಲ್ ಅನ್ನು ಕೂಡಾ ಹಡಗು ನೀಡಿರಲಿಲ್ಲವೇ ಎಂಬ ಪ್ರಶ್ನೆಗೂ ಸದ್ಯ ಉತ್ತರವಿಲ್ಲದಾಗಿದೆ. ಅಗ್ನಿ ಅನಾಹುತದ ಬಗ್ಗೆ ಎಚ್ಚರಿಕೆ ನೀಡುವ ಹಡಗು ಇಲ್ಲಿ ಯಾಕೆ ಅನಾಹುತಕ್ಕೆ ಸಿಲುಕಿತು ಎಂಬುದಕ್ಕೂ ಸೂಕ್ತ ಉತ್ತರವಿಲ್ಲ. ಒಟ್ಟಿನಲ್ಲಿ ಕೊಲಂಬೋದಿಂದ ಹೊರಟು ಮುಂಬೈ ಸೇರಬೇಕಿದ್ದ ಸಿಂಗಾಪುರದ ಕಾರ್ಗೋ ಹಡಗು ಕೇರಳದ ಕಣ್ಣೂರು ಕರಾವಳಿ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿರುವುದು ಸದ್ಯ ಇಡೀ ಕರಾವಳಿಯನ್ನು ಆತಂಕಕ್ಕೆ ತಳ್ಳಿದೆ.  ಇದನ್ನೂ ಓದಿ: ವಾಲ್ಮೀಕಿ ಹಗರಣ; ಸಂಸದ ತುಕಾರಾಂ, ಮೂವರು ಶಾಸಕರ ಮನೆ ಮೇಲೆ ED ದಾಳಿ

  • ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    – ಕಣ್ಮರೆಯಾದ ನಾಲ್ವರು ಸಿಬ್ಬಂದಿಗಾಗಿ ಶೋಧಕಾರ್ಯ

    ತಿರುವನಂತಪುರಂ/ಮಂಗಳೂರು: ಕೇರಳದ (Kerala) ಬೇಪೂರ್ (Beypore) ಹಡಗು ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಡಗಿನಲ್ಲಿದ್ದ (Cargo Ship) 18 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದು, ನಾಲ್ವರಿಗೆ ಭಾಗಶಃ ಗಾಯಗಳಾಗಿದೆ. ಸದ್ಯ ಗಾಯಗೊಂಡ 6 ಮಂದಿಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಉಳಿದ 12 ಮಂದಿಗೆ ನಗರದ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಐಎನ್‌ಎಸ್ ಸೂರತ್ (INS Surat) ಮೂಲಕ ಆಳಸಮುದ್ರದಿಂದ ಸಿಬ್ಬಂದಿಯನ್ನು ಮಂಗಳೂರಿನ ನವಬಂದರಿಗೆ ಕರೆತರಲಾಗಿದೆ. ಬಳಿಕ ಬಂದರಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ರವಾನಿಸಲಾಗಿದೆ. ಇನ್ನು ಎಜೆ ಆಸ್ಪತ್ರೆಯ ವೈದ್ಯ ದಿನೇಶ್ ಕಂದಮ್ ಗಾಯಾಳುಗಳ ಕುರಿತು ಮಾತನಾಡಿ, ಈಗಾಗಲೇ ಆರು ಜನರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಆರು ಜನರ ಪೈಕಿ ಮೂರು ಜನ ಚೀನಾ ದೇಶದವರು, ಇಬ್ಬರು ಬರ್ಮಾ ಹಾಗೂ ಒಬ್ಬರು ಇಂಡೋನೆಶೀಯದವರು. ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. 30% ರಿಂದ 40% ದೇಹದ ಭಾಗಗಳು ಸುಟ್ಟಿದೆ. ಜೊತೆಗೆ ಶ್ವಾಸಕೋಶದಲ್ಲೂ ಸುಟ್ಟಗಾಯಗಳಾಗಿದೆ. ಉಳಿದ ನಾಲ್ಕು ಜನರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಗಂಭೀರ ಗಾಯಗೊಂಡ ಇಬ್ಬರಿಗೂ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Bengaluru | ಸರಣಿ ಅಪಘಾತದಲ್ಲಿ ಮಹಿಳೆ ಸಾವು

    ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಹಡಗಿನಲ್ಲಿ ಪೈಂಟ್, ಗನ್ ಪೌಡರ್ ಸೇರಿದಂತೆ ಹಲವು ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಕೇರಳದ ಬೇಪೂರ್ ಕಡಲ ಕಿನಾರೆಯಿಂದ 78 ನಾಟಿಕಲ್ ಮೈಲ್ ದೂರದಲ್ಲಿ ಹಡಗಿಗೆ ಬೆಂಕಿ ಆವರಿಸಿದೆ. 22 ಮಂದಿ ಸಿಬ್ಬಂದಿಯಿದ್ದ ಹಡಗಿನಲ್ಲಿ 18 ಮಂದಿಯನ್ನು ರಕ್ಷಣೆ ಮಾಡಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ. ಕಣ್ಮರೆಯಾದ ಸಿಬ್ಬಂದಿಗಾಗಿ ಕೋಸ್ಟ್ ಗಾರ್ಡ್ ಶೋಧಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೈ ನಾಯಕ ಮಂಜುನಾಥ ಗೌಡಗೆ ಇಡಿ ಶಾಕ್‌ – 13.91 ಕೋಟಿ ಆಸ್ತಿ ಮುಟ್ಟುಗೋಲು

    ತೈವಾನ್‌ನ ಸೆಕೆಂಡ್ ಎಂಜಿನಿಯರ್ ಯು ಬೊ ಫಾಂಗ್, ಮ್ಯಾನ್ಮರ್‌ನ ಕಾರ್ಪೆಂಟರ್ ಸಾನ್ ವಿನ್, ಇಂಡೋನೇಷ್ಯಾದ ಎಬಿ ಜಾನಲ್ ಅಹಿದಿನ್, ತೈವಾನ್‌ನ ಮೋಟರ್ ಮ್ಯಾನ್ ಸಿಹ್ ಚಾಯ್ ವೆನ್ ಕಣ್ಮರೆಯಾಗಿದ್ದಾರೆ. ಚೀನಾ ಮೂಲದ ನಂ 1 ಆಯ್ಲಿರ್ ಲೂಯನ್ಲಿ ಮತ್ತು ಇಂಡೋನೇಷ್ಯಾದ ಫಿಟ್ಟರ್ ಸೋನಿಟೂರ್ ಹೆನಿಗೆ ಗಂಭೀರ ಗಾಯಗಳಾಗಿದೆ. ಚೈನಾದ ಸೆಕೆಂಡ್ ಫಿಟ್ಟರ್‌ಗಳಾದ ಕ್ಸೂ ಪಬೋ, ಗೋ ಲಿನಿಂಗ್, ಮ್ಯಾನ್ಮರ್‌ನ ಎಬಿಗಳಾದ ಥೆನ್ ಥಾನ್ ತ್ವಾಯ್, ಕಿ ಜಾವ್ ತ್ವೂ ಗೆ ಗಾಯಗಳಾಗಿವೆ. ಉಳಿದ 12 ಜನ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.  ಇದನ್ನೂ ಓದಿ: ಪತ್ನಿ ಮನೆಬಿಟ್ಟು ಹೋಗಿದ್ದಕ್ಕೆ ಬೇಸತ್ತು ಪತಿ ಆತ್ಮಹತ್ಯೆ