Tag: ಬೇಡಿ

  • ಶ್ರೀಕಂಠೇಗೌಡ ಪಟಾಲಂಗೆ ಬೇಲ್, ಕೋಬ್ರಾ ಕಮಾಂಡೋ ಯೋಧನಿಗೆ ಕೋಳ – ಪೊಲೀಸರ ವಿರುದ್ಧ ಆಕ್ರೋಶ

    ಶ್ರೀಕಂಠೇಗೌಡ ಪಟಾಲಂಗೆ ಬೇಲ್, ಕೋಬ್ರಾ ಕಮಾಂಡೋ ಯೋಧನಿಗೆ ಕೋಳ – ಪೊಲೀಸರ ವಿರುದ್ಧ ಆಕ್ರೋಶ

    ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿ.ಆರ್.ಪಿ.ಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಏಪ್ರಿಲ್ 23ರಂದು ಈ ಘಟನೆ ನಡೆದಿದ್ದು, ಯೋಧ ಸಚಿನ ಸಾವಂತ್ ಅವರನ್ನು ಪೊಲೀಸ್ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದಲಾಗ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಬೇಡಿ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿ.ಆರ್.ಪಿ.ಎಫ್ ಕೊಬ್ರಾ ಬಟಾಲಿಯನ್ ಕಾನ್ಸ್‍ಟೇಬಲ್ ಆಗಿರುವ ಸಚಿನ್ ಸಾವಂತ್‍ಗೆ ಇನ್ನೂ ಜಾಮೀನು ಕೂಡ ಸಿಕ್ಕಿಲ್ಲ.

    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾ ಡಿದ ಮಂಡ್ಯ ಎಂ.ಎಲ್.ಸಿ ಶ್ರೀಕಂಠೇಗೌಡ ಹಾಗೂ ಅವರ ಪಟಾಲಂಗೆ ಬೇಲ್ ಸಿಕ್ಕಿದೆ. ಆದರೆ ದೇಶವನ್ನು ಕಾಪಾಡಿದ ಕೋಬ್ರಾ ಕಮಾಂಡೋ ಇನ್ನು ಜೈಲಿನಲ್ಲೇ ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಮಾಸ್ಕ್ ಹಾಕಿಲ್ಲವೆಂಬ ಕಾರಣಕ್ಕೆ ಯೋಧನನ್ನು ಅಮಾನವೀಯವಾಗಿ ನಡೆಸಿಕೊಂಡ ಸದಲಗಾ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಪೊಲೀಸರ ಕ್ರಮಕ್ಕೆ ಸಿ.ಆರ್.ಪಿ.ಎಫ್ ಕೋಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ್ ಅವರು ಕೂಡ ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ನಂತರ ಎಫ್‍ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಟಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿದಾ ಳಿ ಮಾಡಿದ್ದಾನೆ. ಆದರೆ ಪೊಲೀಸರು ಯೋಧ ಎಂದು ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದು ಸರಿಯಲ್ಲ ಎಂದು ಖಾರವಾಗಿ ಪತ್ರ ಬರೆದಿದ್ದಾರೆ.

    ಪ್ರಕರಣದ ಕುರಿತು ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಕೆಲ ಪೊಲೀಸರು ಮಾತ್ರ ಇದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೈಗೆ ಬೇಡಿ ಹಾಕಿ ಕೂರಿಸಲಾಗಿದೆ. ಪೊಲೀಸರು ಲಾಕ್‍ಡೌನ್ ಕರ್ತವ್ಯದಲ್ಲಿ ಇರುವುದರಿಂದ ಠಾಣೆಯಲ್ಲಿ ಕಡಿಮೆ ಸಿಬ್ಬಂದಿ ಇರುತ್ತಾರೆ. ಘಟನೆ ನಡೆದ ದಿನ ಯೋಧ ಬಹಳ ಅಕ್ರಮಣಕಾರಿಯಾಗಿದ್ದ ಆದ್ದರಿಂದ ಹಾಗೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜೊತೆಗೆ ಕೋರ್ಟ್ ಮಂಗಳವಾರ ಹಾಗೂ ಶುಕ್ರವಾರ ಕಾರ್ಯ ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ಯೋಧ ಸಚಿನ್ ಸಾಂವತ್‍ಗೆ ಇನ್ನೂ ಬೇಲ್ ಸಿಕ್ಕಿಲ್ಲ. ಮಂಗಳವಾರ ಕೋರ್ಟ್ ನಲ್ಲಿ ಬೇಲ್ ಸಿಗುವ ಸಾಧ್ಯತೆಯಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

  • ಮದ್ವೆಯಾಗಿ ಬೇಡಿ ತೊಟ್ಟರೆ, ಕಳಚಲು ದೇವರ ಅಪ್ಪಣೆಯಾಗಲೇಬೇಕು

    ಮದ್ವೆಯಾಗಿ ಬೇಡಿ ತೊಟ್ಟರೆ, ಕಳಚಲು ದೇವರ ಅಪ್ಪಣೆಯಾಗಲೇಬೇಕು

    – ಬೇಡಿ ಕಳಚೋವರೆಗೆ ಮನೆಗೆ ಹೋಗುವಂತಿಲ್ಲ
    – ದೇವಸ್ಥಾನದಲ್ಲೇ 18 ಜನ ವಾಸ್ತವ್ಯ

    ವಿಜಯಪುರ: ಅಪರಾಧ ಮಾಡಿ ಬೇಡಿ ತೊಟ್ಟ ಕೈದಿ ಜಾಮೀನಿನ ಮೇಲಾದರೂ ಬಿಡುಗಡೆಯಾಗಬಹುದು. ಅದರೆ ಇಲ್ಲಿ ಮದುವೆಯಾಗಿ ಬೇಡಿ ತೊಟ್ಟರೆ ಮುಗೀತು ಯಾರೊಬ್ಬರ ವಕಾಲತ್ತು ನಡೆಯುವುದಿಲ್ಲ. ಬೇಡಿ ಕಳಚಲು ದೇವರ ಅಪ್ಪಣೆಯಾಗಲೇಬೇಕು.

    ಹೌದು. ಅಚ್ಚರಿಯಾದರೂ ಸತ್ಯ. ಇಂಥದ್ದೊಂದು ಸಂಪ್ರದಾಯ ನೂರಾರು ವರ್ಷಗಳಿಂದ ಸದ್ದಿಲ್ಲದೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಮದುವೆಯಾಗಿ ಬೇಡಿ ತೊಟ್ಟು ದೇವಸ್ಥಾನಕ್ಕೆ ಬಂದರೆ ನಂತರ ಬೇಡಿ ಕಳಚಿ ಬೀಳುವವರೆಗೂ ಅವರು ಮನೆಗೆ ಹೋಗುವ ಆಗಿಲ್ಲ.

    ಇಲ್ಲಿನ ಮುಜಾವರ್ ಎಂಬ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆ ಆದರೆ ಈ ರೀತಿ ಕಾಲಿಗೆ ಕಬ್ಬಿಣದ ಕೋಳ ಹಾಕಿಕೊಳ್ಳುವ ಸಂಪ್ರದಾಯವಿದೆ. ಇದರ ಪ್ರಕಾರ ಬೇಡಿ ತೊಟ್ಟ ಸುಮಾರು 18 ಜನ ದೇವಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ 15 ದಿನಗಳಿಂದ ಕಾಲಿಗೆ ಕಬ್ಬಿಣದ ಸಣ್ಣ ಸರಳಿನಿಂದ ಮಾಡಿದ ಬೇಡಿ ಕಟ್ಟಿಕೊಂಡು ದೇವಸ್ಥಾನದಲ್ಲೇ ಅಡ್ಡಾಡುತ್ತಿದ್ದಾರೆ. ಎಷ್ಟೇ ದಿನಗಳಾಗಲಿ ಬೇಡಿ ತನ್ನಿಂತಾನೆ ಕಳಚುವವರೆಗೂ ಮನೆಗೆ ಹೋಗುವಂತಿಲ್ಲ.

    ಸ್ಥಳೀಯ ದಾವಲ್‍ಮಲ್ಲಿಕ್ ದೇವಸ್ಥಾನದ ಅರ್ಚಕರಾದ ಹಿಂದೂ ಕುರುಬ ಸಮುದಾಯ ಅರ್ಜುನ ಮುಜಾವರ್ ಆಗಿದ್ದಾರೆ. ಮುಜಾವರ ಕುಟುಂಬ ಸದ್ಯಸರೇ ಬೇಡಿ ಹಾಕಿಕೊಂಡು ದೇವರ ಅಪ್ಪಣೆಗಾಗಿ ಕಾಯುತ್ತಿದ್ದಾರೆ. ಮುಜಾವರ್ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆ ಆದರೆ ಈ ರೀತಿ ಕಾಲಿಗೆ ಕಬ್ಬಿಣದ ಕೋಳ ಹಾಕಿಕೊಳ್ಳುವ ಸಂಪ್ರದಾಯವಿದೆ. ಕಾಲಿಗೆ ಕೋಳ ಹಾಕಿಕೊಂಡು ದಾವಲ್‍ಮಲ್ಲಿಕ್ ದೇವರ ಮೊರೆ ಹೋಗುತ್ತಾರೆ.

    ದೇವರು ಅಪ್ಪಣೆ ಕೊಟ್ಟು ತನ್ನಿಂದ ತಾನೇ ಕೋಳ ಮುರಿಯುವ ವರೆಗೂ ಯಾವೊಬ್ಬ ಕುಟುಂಬದ ಸದಸ್ಯ ಕೂಡ ಮನೆಗೆ ಹೋಗಿ ಸಂಸಾರ ಮಾಡುವಂತಿಲ್ಲ. ಈಗಾಗಲೇ 6 ಜನರ ಬೇಡಿ ಕಳಚಿದ್ದು ಇನ್ನುಳಿದ 18 ಜನ ದೇವರ ಕೃಪೆಗಾಗಿ ಕಾದಿದ್ದಾರೆ.