Tag: ಬೇಗೂರು ಕೆರೆ

  • ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

    ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

    – ಹಿಂದೂ ಸಂಘಟನೆಗಳಿಂದ ಪೂಜೆಗೆ ಯತ್ನ
    – ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದ ಸತೀಶ್ ರೆಡ್ಡಿ

    ಬೆಂಗಳೂರು: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆಯನ್ನು ಬೆಂಬಲಿಸಿದ್ದಕ್ಕೆ  ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಲಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ಕಳೆದ ವರ್ಷ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಾಗ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಈಗ ಬಿಜೆಪಿ ಶಾಸಕನ ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಆದರೆ ಬೇಗೂರು ಕೆರೆಯಲ್ಲಿ ಶಿವನ ಮೂರ್ತಿ ಅನಾವರಣ ಸಂಬಂಧ ಗಲಾಟೆ ಎಬ್ಬಿಸಲು ಈ ಕೃತ್ಯ ನಡೆದಿರಬಹುದೇ ಎಂಬ ಶಂಕೆ ಎದ್ದಿದೆ.  ಇದನ್ನೂ ಓದಿ: ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ 

    ಏನಿದು ವಿವಾದ?
    ಬೆಂಗಳೂರು ದಕ್ಷಿಣ ನಾಗನಾಥೇಶ್ವರ ಸನ್ನಿಧಿ ತಟದಲ್ಲಿರುವ ಬೇಗೂರು ಕೆರೆ ಅಭಿವೃದ್ಧಿ ಸಮಯದಲ್ಲಿ ಬೃಹತ್ ಶಿವನ ಮೂರ್ತಿಯನ್ನು ನಿರ್ಮಾಣ ಮಾಡಲಾಗಿತ್ತು. ಈ ಪ್ರತಿಮೆ ಸ್ಥಾಪನೆಗೆ ಅನ್ಯಕೋಮಿನವರು ವಿರೋಧ ವ್ಯಕ್ತಪಡಿಸಿ ಶಿವನ ಮೂರ್ತಿಯನ್ನು ತೆರವು ಮಾಡಬೇಕೆಂದು ಆಗ್ರಹಿಸಿದ್ದರು.

    ವಿಚಾರ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು. ವಿಚಾರಣೆ ನಡೆಸಿದ ಕೋರ್ಟ್ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶ ನೀಡಿತ್ತು. ಈ ಆದೇಶದ ಅನ್ವಯ ತಾಲೂಕು ಆಡಳಿತ ಶಿವನ ಮೂರ್ತಿಗೆ ಪ್ಲಾಸ್ಟಿಕ್ ಕವರ್ ಸುತ್ತಿ ದರ್ಶನವನ್ನು ಮರೆ ಮಾಡಿತ್ತು. ವಿರೋಧದ ನಡುವೆಯೂ ಹಿಂದೂ ಸಂಘಟನೆಗಳು ಶಿವನ ಮೂರ್ತಿಗೆ ಸುತ್ತಿರುವ ಪ್ಲಾಸ್ಟಿಕ್ ಹೊದಿಕೆಯನ್ನು ತೆರವುಗೊಳಿಸಿ ಮೂರ್ತಿಯನ್ನು ಭಕ್ತರ ವೀಕ್ಷಣೆಗೆ ಮುಕ್ತಗೊಳಿಸಿದ್ದರು.

    ಪರಿಸ್ಥಿತಿ ಗಂಭೀರವಾಗಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಆಗಮಿಸಿದ್ದ ಸತೀಶ್ ರೆಡ್ಡಿ, ಹಿಂದೂಗಳ ಭಾವನೆಯನ್ನು ಅನ್ಯ ಕೋಮಿನವರು ಗೌರವಿಸಿ ಸಹಕಾರ ನೀಡಬೇಕು. ದೇಶದ ಎಲ್ಲ ನದಿ ತೀರದಲ್ಲಿ ಶಿವನ ದೇಗುಲಗಳು ಎದ್ದು ನಿಂತಿವೆ. ಇದರಿಂದಾಗಿ ಆ ಪ್ರದೇಶಕ್ಕೆ ಹೆಸರು ಬರುತ್ತದೆ. ಹೀಗಾಗಿ ನಾಗನಾಥೇಶ್ವರ ದೇವಸ್ಥಾನ ಇತಿಹಾಸ ಅರಿತು ಈ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದರು.

    ಇಂದು ಹೇಳಿದ್ದೇನು?
    ತನ್ನ ಕಾರಿಗೆ ಬೆಂಕಿ ಬಿದ್ದ ಬಳಿಕ ಪ್ರತಿಕ್ರಿಯೆ ನೀಡಿದ ಸತೀಶ್ ರೆಡ್ಡಿ, ಕೋರ್ಟ್ ನಲ್ಲಿ ಈ ವಿಚಾರ ಕಾರಣ ಕಾನೂನು ರೀತಿಯಲ್ಲಿ ಈ ಪ್ರಕರಣವನ್ನು ಬಗೆಹರಿಸುವ ಕೆಲಸ ಮಾಡುವ ಎಂದು ಹೇಳಿ ಬಂದಿದ್ದೆ. ಆ ವಿಚಾರವಾಗಿ ಕೃತ್ಯ ನಡೆದಿರಬಹುದೆಂದು ಶಂಕಿಸಿ ತನಿಖೆ ಮಾಡಲಾಗುತ್ತಿದೆ. ಕೆರೆಯಲ್ಲಿರುವ ಮೂರ್ತಿಯನ್ನು ತೆರವು ಮಾಡುವಂತೆ ಕೇಸ್ ಹಾಕಿದ್ದಾರೆ. ಕಳೆದ ವಾರದ ಹಿಂದೆ ಪ್ರತಿಭಟನೆ ಮಾಡಿದ್ದರು. ನಾನು ನಿನ್ನೆ ಸಂಜೆ ಮೂರ್ತಿ ಇರುವ ಸ್ಥಳಕ್ಕೆ ಹೋಗಿದ್ದೆ. ನಿನ್ನೆ ಹೋಗಿ ಬಂದ ಮೇಲೆ ಈ ಘಟನೆ ನಡೆದಿದೆ ಎಂದು ತಿಳಿಸಿದರು.

  • ಬೆಳ್ಳಂಬೆಳಗ್ಗೆ ಬೇಗೂರು ಕೆರೆ ಪ್ರದಕ್ಷಿಣೆ ಮಾಡಿದ್ರು ಜಿಲ್ಲಾಧಿಕಾರಿ

    ಬೆಳ್ಳಂಬೆಳಗ್ಗೆ ಬೇಗೂರು ಕೆರೆ ಪ್ರದಕ್ಷಿಣೆ ಮಾಡಿದ್ರು ಜಿಲ್ಲಾಧಿಕಾರಿ

    – ಸಮಯ ಪಾಲನೆ ಬಗ್ಗೆ ಅಧಿಕಾರಿಗಳಿಗೆ ಡಿಸಿ ಕ್ಲಾಸ್

    ಬೆಂಗಳೂರು: ಬೆಳ್ಳಂಬೆಳಗ್ಗೆಯೇ ನೆಲಮಂಗಲದ ಬೇಗೂರು ಕೆರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿದ್ದಾರೆ.

    ಜಿಲ್ಲೆಯ ಪ್ರತಿ ತಾಲೂಕಿನ ಪ್ರಮುಖ ಕೆರೆಗಳಿಗೆ ಭೇಟಿ ನೀಡಿ ಕೆರೆಗಳ ಪುನಶ್ಚೇತನಕ್ಕೆ ಜಿಲ್ಲಾಧಿಕಾರಿ ಕರೀಗೌಡ ಮುಂದಾಗಿದ್ದಾರೆ. ಅಂತೆಯೇ ಇಂದು ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ನೆಲಮಂಗಲ ಪ್ರಮುಖ ಕೆರೆಯಾದ ಬೇಗೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಸಾರ್ವಜನಿಕರು ಹಾಗೂ ಕೆಲ ಅಧಿಕಾರಿಗಳು ಬಾರದ ಕಾರಣ ಸಮಯ ಪಾಲನೆ ಬಗ್ಗೆ ಎಲ್ಲರಿಗೂ ಡಿಸಿ ಕ್ಲಾಸ್ ತೆಗೆದುಕೊಂಡಿದ್ದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಜಿಲ್ಲಾಧಿಕಾರಿ, ಒಟ್ಟು 116 ಎಕರೆಯಷ್ಟು ವಿಶಾಲವಾಗಿರುವ ಕೆರೆಯನ್ನ ಅಭಿವೃದ್ಧಿ ಮಾಡುವ ನೆಪದಲ್ಲಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಸಿಎಸ್‍ಆರ್ (ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿರ್ವಹಣೆ) ಅಡಿ ಎಚ್‍ಎಎಲ್ ನಿಂದ 16 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿ ವಂಚನೆ ಮಾಡಿದ್ದಾರೆಂದು ಡಿಸಿ ಕರಿಗೌಡ ಗಂಭೀರವಾದ ಆರೋಪ ಮಾಡಿದರು.

    ಕೆರೆಯಲ್ಲಿ 2 ಗಿಡ 1 ಕೃಷಿ ಹೊಂಡದ ಮಾದರಿ ಗುಂಡಿಗಳನ್ನ ತೆಗೆದು 16 ಕೋಟಿಗಳಷ್ಟು ಲೆಕ್ಕ ತೋರಿಸಿದ್ದಾರೆ. ಇದರಲ್ಲಿ ಮೇಲ್ನೋಟಕ್ಕೆ ವಂಚನೆ ಎಸಗಿರುವುದು ಕಾಣುತ್ತದೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv