Tag: ಬೇಕರಿ ಉದ್ಯೋಗಿ

  • ಪ್ಲಾಸ್ಟಿಕ್ ಬ್ಯಾಗ್ ಕೊಡಲ್ಲ ಎಂದ ಬೇಕರಿ ಉದ್ಯೋಗಿಯನ್ನ ಕೊಂದೇ ಬಿಟ್ಟ

    ಪ್ಲಾಸ್ಟಿಕ್ ಬ್ಯಾಗ್ ಕೊಡಲ್ಲ ಎಂದ ಬೇಕರಿ ಉದ್ಯೋಗಿಯನ್ನ ಕೊಂದೇ ಬಿಟ್ಟ

    ನವದೆಹಲಿ: ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದಿದ್ದಕ್ಕೆ ಗ್ರಾಹಕನೊಬ್ಬ ಬೇಕರಿ ಉದ್ಯೋಗಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿ ನಿವಾಸಿ ಖಲೀಲ್ ಅಹ್ಮದ್ (45) ಕೊಲೆಯಾದ ಬೇಕರಿ ಉದ್ಯೋಗಿ. ಈಶಾನ್ಯ ದೆಹಲಿಯ ದಯಾಲ್ಪುರ್ ಪ್ರದೇಶದ ಬೇಕರಿಯಲ್ಲಿ ಅಕ್ಟೋಬರ್ 15ರಂದು ಘಟನೆ ನಡೆದಿದೆ. ಫೈಝನ್ ಖಾನ್ (24) ಕೊಲೆಗೈದ ಗ್ರಾಹಕ. ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕ್!

    ದಯಾಲ್ಪುರ್ ಪ್ರದೇಶದ ಬೇಕರಿಗೆ ಫೈಝನ್ ಖಾನ್ ಬಂದಿದ್ದ. ಸ್ವೀಟ್ ಖರೀದಿಸಿದ್ದ ಫೈಝನ್ ಖಾನ್ ಪ್ಲಾಸ್ಟಿಕ್ ಬ್ಯಾಗ್ ಕೊಡುವಂತೆ ಕೇಳಿದ್ದಾನೆ. ಆದರೆ ಖಲೀಲ್ ಅಹ್ಮದ್ ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಫೈಝನ್ ಖಾನ್ ಬೇಕರಿ ಮುಂದೆ ಇದ್ದ ಇಟ್ಟಿಗೆಯಿಂದ ಖಲೀಲ್ ಅಹ್ಮದ್ ತಲೆಗೆ ಬಲವಾಗಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಲೀಲ್ ಅಹ್ಮದ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಖಲೀಲ್ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಖಲೀಲ್ ಅಹ್ಮದ್ ಪುತ್ರ, ಘಟನೆ ನಡೆದು ಸುಮಾರು ದಿನಗಳು ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಅಷ್ಟೇ ಅಲ್ಲದೆ ಆರೋಪಿಯು ತಾನು ಅಪ್ರಾಪ್ತ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.