Tag: ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ

  • ಬೆಂಗಳೂರಿಗೆ ‘ಅತ್ಯುತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ’ ಪಟ್ಟ

    ಬೆಂಗಳೂರಿಗೆ ‘ಅತ್ಯುತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ’ ಪಟ್ಟ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ ಲಭಿಸಿದ್ದು, 40 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ವಿಭಾಗದಲ್ಲಿ ಬೆಂಗಳೂರು ‘ಅತ್ಯುತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ'(ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತ್ಯಾಜ್ಯ ನಿರ್ವಹಣೆ ಕುರಿತು ಕೇಂದ್ರೀಕರಿಸುವುದು ಹಾಗೂ ಮನೆ ಗೊಬ್ಬರದ ಕುರಿತು ಉತ್ತೇಜನ ನೀಡುತ್ತಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ.

    ಈ ಕುರಿತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಈ ಕುರಿತು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದು, ಬಯೋಮ್ಯಾನ್ ಮೂಲಕ ಮನೆಯಲ್ಲೇ ಗೊಬ್ಬರ ತಯಾರಿ ವ್ಯವಸ್ಥೆಯಿಂದಾಗಿ ಬೆಂಗಳೂರಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ ಬಿರುದು ಬೆಂಗಳೂರಿಗೆ ಲಭಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಾಗರಿಕರೇ ನಡೆಸುವ ಕಾಂಪೋಸ್ಟ್ ಮಾರುಕಟ್ಟೆ ಅಥವಾ ಕಾಂಪೋಸ್ಟ್ ಸಂದೇಶ್‍ಗಳಲ್ಲಿ ವಿವಿಧ ರೀತಿಯ ಮಿಶ್ರ ಗೊಬ್ಬರ ತಯಾರಿಕೆಯನ್ನು ಪ್ರದರ್ಶಿಸಲಾಗುತ್ತದೆ. ಇದು ದೇಶದ ಉಳಿದ ಭಾಗಗಳಿಗೆ ಸ್ಪೂರ್ತಿದಾಯಕ ಮಾದರಿಯಾಗಿದೆ. ನಗರದ ಸ್ಥಳೀಯ ಸಂಸ್ಥೆ(ಯುಎಲ್‍ಬಿ) ಒಡಿಎಫ್++ ಟ್ಯಾಗ್‍ನ್ನು ಮುಡಿಗೇರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

    ಬೆಂಗಳೂರು 40 ಲಕ್ಷ ಜನಸಂಖ್ಯೆ ವಿಭಾಗದಲ್ಲಿ ‘ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ’ ಎಂಬ ಬಿರುದು ಪಡೆದಿದೆ. 3,200ರ ಪೈಕಿ 1,491 ಅಂಕಗಳನ್ನು ಪಡೆದಿದೆ. 10 ಲಕ್ಷ ಜನಸಂಖ್ಯೆ ಹೊಂದಿದ ನಗರದ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು 37ನೇ ರ‌್ಯಾಂಕ್ ಪಡೆದಿದೆ.

    ಸ್ವಚ್ಛ ಸರ್ವೇಕ್ಷಣದಲ್ಲಿ 214ನೇ ರ‌್ಯಾಂಕ್
    ಆಗಸ್ಟ್ ನಲ್ಲಿ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಸ್ವಚ್ಛ ಸರ್ವೇಕ್ಷಣ-2020 ರಲ್ಲಿ ಬೆಂಗಳೂರು 214ನೇ ರ‌್ಯಾಂಕ್ ಪಡೆದಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಕುಸಿತ ಕಂಡಿದ್ದು, 194ರಿಂದ 214ಕ್ಕೆ ಜಾರಿದೆ. 6,000 ಅಂಕಗಳ ಪೈಕಿ ಕೇವಲ 2,656.82 ಅಂಕಗಳನ್ನು ಮಾತ್ರ ಪಡೆದಿದೆ.