Tag: ಬೆಳೆ ಹಾನಿ

  • ಪ್ರವಾಹ ಎಫೆಕ್ಟ್ – ಬಾಗಲಕೋಟೆಯಲ್ಲಿ ಶೇ. 60 ರಿಂದ 70 ಬೆಳೆ ಹಾನಿ

    ಪ್ರವಾಹ ಎಫೆಕ್ಟ್ – ಬಾಗಲಕೋಟೆಯಲ್ಲಿ ಶೇ. 60 ರಿಂದ 70 ಬೆಳೆ ಹಾನಿ

    -3 ಲಕ್ಷ ಕ್ವಿಂಟಲ್ ಈರುಳ್ಳಿ ಲಾಸ್

    ಬಾಗಲಕೋಟೆ: ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಪ್ರವಾಹದ ಎಫೆಕ್ಟ್ ನಿಂದ ಬಾಗಲಕೋಟೆ ಜಿಲ್ಲೆಯ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

    ಜಿಲ್ಲೆಯಲ್ಲಿ ಈ ವರ್ಷ ಅಂದಾಜು 3 ಲಕ್ಷ ಕ್ವಿಂಟಾಲ್ ಈರುಳ್ಳಿ ಬೆಳೆ ಹಾನಿಯಾಗಿದೆ. ಇದಕ್ಕೆ ಮಾರುಕಟ್ಟೆ ಅಂಕಿ ಅಂಶಗಳೇ ಜೀವಂತ ಸಾಕ್ಷಿಯಾಗಿದ್ದು, ಪ್ರತಿ ವರ್ಷ ಏಪ್ರಿಲ್‍ನಿಂದ ಡಿಸೆಂಬರ್ ವರೆಗೂ ಬರುತ್ತಿದ್ದ ಈರುಳ್ಳಿ ಈ ಬಾರಿ ಭಾರೀ ಕುಸಿತ ಕಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ.

    ಪ್ರತಿ ವರ್ಷ ಏಪ್ರಿಲ್‍ನಿಂದ ಡಿಸೆಂಬರ್ ವರೆಗೂ 4 ರಿಂದ 4.5 ಲಕ್ಷ ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ವರ್ಷ ಕೇವಲ 1.50 ಲಕ್ಷ ಕ್ವಿಂಟಾಲ್ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಬಂದಿದೆ. ಸದ್ಯ ರೈತರ ಬಳಿಯಿದ್ದ ಈರುಳ್ಳಿ ಖಾಲಿ ಆಗಿದೆ. ಆದರೆ ಬೆಲೆ ಗಗನಕ್ಕೇರಿದೆ.

    ಪ್ರತಿ ಶನಿವಾರ ಹಾಗೂ ಗುರುವಾರ ಬಾಗಲಕೋಟೆ ಮಾರುಕಟ್ಟೆಗೆ ಕೇವಲ 458 ಕ್ವಿಂಟಾಲ್ ಈರುಳ್ಳಿ ಮಾತ್ರ ಮಾರಾಟಕ್ಕೆ ಬರುತ್ತಿದೆ. ಹೀಗಾಗಿ ಈರುಳ್ಳಿ ಕ್ವಿಂಟಾಲ್‍ಗೆ ಕನಿಷ್ಟ ಒಂದು ಸಾವಿರದಿಂದ ಗರಿಷ್ಠ 8 ಸಾವಿರ ರೂ.ವರೆಗೂ ಹರಾಜಾಗುತ್ತಿದೆ.

    ಈ ವರ್ಷ ಬಾಗಲಕೋಟೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಈರುಳ್ಳಿ ಗರಿಷ್ಠ 12 ಸಾವಿರದ ವರೆಗೂ ಮಾರಾಟ ಆಗಿದೆ. ಆದರೆ ಕಳೆದ ವರ್ಷ ಈರುಳ್ಳಿಗೆ ಭಾರೀ ಪ್ರಮಾಣದಲ್ಲಿ ಇದ್ದ ಕಾರಣ ಕ್ವಿಂಟಲ್‍ಗೆ ಕನಿಷ್ಠ 300 ರಿಂದ ಗರಿಷ್ಠ 1350 ರೂ. ಬೆಲೆ ಸಿಕ್ಕಿತ್ತು. ಈಗ ಬೆಲೆ ಇದೆ, ಆದರೆ ಬೆಳೆ ಇಲ್ಲ ಎಂದು ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಪೇಚಾಡುವಂತಾಗಿದೆ. ಪ್ರವಾಹದಿಂದ ಈರುಳ್ಳಿ ಬೆಳೆ ಲಾಸ್ ಆಗಿದ್ದು ವರ್ತಕರಿಗೂ ವ್ಯಾಪಾರ, ವಹಿವಾಟಿನ ಮೇಲೂ ಪರಿಣಾಮ ಬೀರಿದೆ.

  • ಹೆಸ್ಕಾಂ ಕಚೇರಿಗೆ ಬೀಗ  ಜಡಿದು ಪ್ರತಿಭಟಿಸಿದ ಮುಂಡರಗಿ ರೈತರು

    ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಮುಂಡರಗಿ ರೈತರು

    ಗದಗ: ಲೋಡ್ ಶೆಡ್ಡಿಂಗ್‍ನಿಂದಾಗಿ ಬೇಸತ್ತ ರೈತರು ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಲೋಡ್ ಶೆಡ್ಡಿಂಗ್ ನೆಪವೊಡ್ಡಿ ಹಗಲು ವೇಳೆ ಮೂರು ಗಂಟೆ ಹಾಗೂ ರಾತ್ರಿ ವೇಳೆ ಮೂರು ಗಂಟೆ ತ್ರಿಫೇಸ್ ಕರೆಂಟ್ ನೀಡುತ್ತಾರೆ. ಲೋಡ್ ಶೆಡ್ಡಿಂಗ್ ನಿಂದಾಗಿ ಬೆಳೆದ ಬೆಳೆಗಳು ಕೈಗೆ ಬರುತ್ತಿಲ್ಲ. ಇದರಿಂದ ಮತ್ತಷ್ಟು ಸಾಲದ ಸುಳಿಗೆ ಸೀಲುಕುವಂತಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟಿಸಿದರು.

    ಹಗಲು ವೇಳೆ ಕನಿಷ್ಟ 10 ಗಂಟೆ ನಿರಂತರ ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದ್ದು, ಕೂಡಲೇ ಸ್ಥಳಕ್ಕೆ ಜಿಲ್ಲೆಯ ಹೆಸ್ಕಾಂ ಅಧಿಕಾರಿಗಳು ಆಗಮಿಸಿ, ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪಟ್ಟು ಹಿಡಿದರು. ರೈತರು ಮುಂಡರಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಪೊಲೀಸರು ತಡೆಯುವ ಪ್ರಯತ್ನ ಕೂಡ ಮಾಡಿದ್ದರು. ಈ ವೇಳೆ ರೈತರು ಹಾಗೂ ಹೆಸ್ಕಾಂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಕೂಡಲೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

    ಹಗಲು ವೇಳೆ ಕನಿಷ್ಟ 10 ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದ ರೈತರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಇದು ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

  • ಆಲಮಟ್ಟಿ ಎಡದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು: ಕಂಗಾಲಾದ ರೈತರು

    ಆಲಮಟ್ಟಿ ಎಡದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು: ಕಂಗಾಲಾದ ರೈತರು

    ವಿಜಯಪುರ: ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ ಘಟನೆ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಲೂಟಗೆರಿ ಗ್ರಾಮದ ಬಳಿ ನಡೆದಿದೆ.

    ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ. ಹೀಗಾಗಿ ಕಾಲುವೆ ಮೈದುಂಬಿ ಹರಿಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಲೂಟಗೆರಿ ಸಮೀಪದಲ್ಲಿ ಕಾಲುವೆಯ ಒಂದು ಬದಿಯ ದಂಡೆ ಒಡೆದಿದೆ. ಹೀಗಾಗಿ ನೂರಾರು ರೈತರಿಗೆ ಸೇರಿದ್ದ ಸುಮಾರು 300 ಎಕರೆ ಜಮೀನಿಗೆ ನೀರು ನುಗ್ಗಿದ್ದು ತೊಗರಿ, ಹೆಸರು ಕಾಳು, ಈರುಳ್ಳಿ ಬೆಳೆಗಳು ಸಂಪೂರ್ಣ ನಾಶವಾಗಿವೆ.

    ನೀರು ಬಿಡುವ ಮೊದಲೇ ಕಾಲುವೆ ಬಿರುಕು ಬಿಟ್ಟಿತ್ತು. ನೀರಿನ ರಭಸಕ್ಕೆ ಕೊರೆತ ಉಂಟಾಗಿ, ಕಾಲುವೆ ಒಡೆದಿದೆ. ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿ ಬೆಳೆ ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ನೀರಾವರಿ ಅಧಿಕಾರಿಗಳಿಗೆ ಕಾಲುವೆ ಒಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಿದ್ದಾರೆ.

    ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಗೆ ಸೂಕ್ತ ಕಾರಣ ನೀಡುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.

  • ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

    ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

    ರಾಯಚೂರು: ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸೋದು ಅಷ್ಟರಲ್ಲೇ ಇದೆ. ಆದರೆ ಹಾಗೂ ಹೀಗೂ ಕೊಡುವ ಪರಿಹಾರವೂ ಕೂಡ ರೈತರಿಗೆ ತಲುಪುತ್ತಿಲ್ಲ. ಒಂದೆಡೆ ಅಧಿಕಾರಿಗಳು ವಿಲನ್ ಆದರೆ ಮತ್ತೊಂದೆಡೆ ಪರಿಹಾರದ ಮೊತ್ತದಲ್ಲೂ ರಾಜಕೀಯ ಆರೋಪ ಕೇಳಿ ಬಂದಿದೆ.

    ರಾಯಚೂರು ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ನಿಸಹಾಯಕತೆಯ ಮಾತುಗಳಿವು. ಇಲ್ಲಿ ಶಾಸಕರ ಹೆಸರನ್ನು ಶಿವರಾಜ್ ಎಂದು ಬದಲಾಯಿಸಿ 32 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ. ಶಾಸಕರನ್ನೇ ಶಿವರಾಜ್ ಮಾಡಿ ಜಮೀನಿನ ಮೇಲೆ ದುಡ್ಡು ಹೊಡೆದ ಅಧಿಕಾರಿಗಳ ಕಥೆ ಇಲ್ಲಿಗೆ ನಿಲ್ಲುವುದಿಲ್ಲ.

    110 ರೈತರಿಗೆ ಬೆಳೆ ಹಾನಿ ಪರಿಹಾರ ಬಂದರೆ 10 ಜನರಿಗೆ ಮಾತ್ರ ಪರಿಹಾರ ವಿತರಣೆ ಆಗುತ್ತಂತೆ. ಉಳಿದ ಹಣವನ್ನು ಅಧಿಕಾರಿಗಳೇ ಹಂಚಿಕೊಳ್ಳುತ್ತಾರೆ. ಇದು ಇಂದು ನಿನ್ನೆಯ ಮಾತಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವುದೇ ಹೀಗೆ ಎಂದು ಶಾಸಕರೇ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಆ ಮೂಲಕ ಲಂಚ ಕೊಟ್ಟರೆ ಮಾತ್ರ ಪರಿಹಾರ ಎಂಬ ಸ್ಥಿತಿ ರಾಯಚೂರಿನಲ್ಲಿದೆ ಎನ್ನುವುದು ನಿಜವಾಗಿದೆ.

    ರಾಯಚೂರಿನಲ್ಲಿ ಬೆಳೆ ಪರಿಹಾರದ ಹಣವನ್ನು ಅಧಿಕಾರಿಗಳು ನುಂಗಿದರೆ, ಇತ್ತ ದಾವಣಗೆರೆಯಲ್ಲಿ ಪರಿಹಾರದ ಮೊತ್ತ ವಿತರಣೆಯಲ್ಲಿ ರಾಜಕೀಯ ಮೇಲಾಟ ನಡೆದಿದೆಯಂತೆ. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೇಲೆ ಪ್ರ್ರಭಾವ ಬೀರಿ ತಮಗೆ ಬೇಕಾದವರಿಗೆ ಹೆಚ್ಚು ಪರಿಹಾರ, ಉಳಿದವರಿಗೆ ಕನಿಷ್ಟ ಪರಿಹಾರ ಮೊತ್ತ ವಿತರಿಸುತ್ತಿದ್ದಾರೆ ಎಂದು ಕೆಲ ಸಂತ್ರಸ್ಥರು ಆರೋಪಿಸುತ್ತಿದ್ದಾರೆ.

    ಮಳೆ ಬಂದರೂ ಕಷ್ಟ, ಬಾರದಿದ್ದರೂ ನಷ್ಟ. ಪರಿಹಾರ ಕೊಟ್ಟರು ಅದು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎನ್ನುವುದೇ ಡೌಟ್. ಏನೇ ಆದರೂ ಯಾವ ಸರ್ಕಾರ ಇದ್ದರೂ ನಮ್ಮ ಅನ್ನದಾತರ ಸ್ಥಿತಿ ಮಾತ್ರ ಸುಧಾರಿಸುವ ಲಕ್ಷಣವೇ ಕಾಣಿಸುತ್ತಿಲ್ಲ.

  • ರಾಯಚೂರಿನಲ್ಲಿ ರಾತ್ರಿ ಹೊತ್ತು ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆ!

    ರಾಯಚೂರಿನಲ್ಲಿ ರಾತ್ರಿ ಹೊತ್ತು ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆ!

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಸುರಿದ ಭಾರೀ ಮಳೆ ರೈತರ ಕೋಟ್ಯಾಂತರ ರೂಪಾಯಿ ಬೆಳೆ ಹಾಳು ಮಾಡಿದೆ. ಆದ್ರೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಕೃಷಿ ಅಧಿಕಾರಿಗಳೊಂದಿಗೆ ರಾತ್ರೋರಾತ್ರಿ ರೈತರ ಹೊಲಗಳಿಗೆ ತೆರಳಿ ಸರ್ವೇ ಮಾಡಿ ವರದಿ ತಯಾರಿಸುತ್ತಿದ್ದಾರೆ.

    ಹಗಲು ವೇಳೆಯಲ್ಲಿ ವೀಕ್ಷಣೆ ಮಾಡುವ ಬದಲು ಸಂಜೆ, ರಾತ್ರಿ ವೇಳೆ ಕಾಟಾಚಾರಕ್ಕೆ ಸಮೀಕ್ಷೆ ಮಾಡಿದರೆ ಸೂಕ್ತ ಪರಿಹಾರ ಸಿಗುವುದಿಲ್ಲ ಅನ್ನೋದು ರೈತರ ಅಳಲು. ರಾಯಚೂರು ತಾಲೂಕಿನ ಉಡಮಗಲ್, ಆಶಾಪುರ, ಜಾಲಿಬೆಂಚಿ ಗ್ರಾಮಗಳಲ್ಲಿ ಸಂಜೆಯಿಂದ ರಾತ್ರಿವೇಳೆ ಸಮೀಕ್ಷೆ ಮಾಡಿ ಮುಗಿಸಿದ್ದಾರೆ.

    ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ ಅನ್ನೋ ಆರೋಪದ ಮಧ್ಯೆ ಜಿಲ್ಲಾಧಿಕಾರಿಗಳ ನಡೆ ರೈತರಲ್ಲಿ ಆಕ್ರೋಶ ಮೂಡಿಸಿದೆ. ಈರುಳ್ಳಿ, ಭತ್ತ, ಹತ್ತಿ, ಮೆಣಸಿನಕಾಯಿ, ತೊಗರಿ ಸೇರಿ ಎಲ್ಲಾ ಬೆಳೆಗಳು ಹಾಳಾಗಿದ್ದು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಗುಡುಗು ಸಿಡಿಲಿನ ಮಳೆಗೆ ಎರಡು ಬಲಿ: ಹೊತ್ತಿ ಉರಿಯಿತು ತೆಂಗಿನ ಮರ

    ಚಿಕ್ಕಬಳ್ಳಾಪುರದಲ್ಲಿ ಗುಡುಗು ಸಿಡಿಲಿನ ಮಳೆಗೆ ಎರಡು ಬಲಿ: ಹೊತ್ತಿ ಉರಿಯಿತು ತೆಂಗಿನ ಮರ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಅಕಾಲಿಕ ಮಳೆಗೆ ರೈತರ ತೋಟಗಾರಿಕೆ ಬೆಳೆ ಹನಿಯಾಗಿದೆ.

    ಗುಡಿಬಂಡೆ ತಾಲೂಕಿನ ಕಂಬಾಲಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕ ನಾಗರಾಜು ಮತ್ತು ಗೌರಿಬಿದನೂರು ತಾಲೂಕಿನ ಭಾದಮಳ್ಳೂರು ಗ್ರಾಮದಲ್ಲಿ ಕುರಿಗಾಹಿ ಭೀಮಪ್ಪ (55) ಎಂಬವರು ಸಿಡಿಲ ಬಡಿತಕ್ಕೆ ಸಾವನ್ನಪ್ಪಿದ್ದಾರೆ.

    ನಾಗರಾಜು ತೋಟದಿಂದ ಮನೆಗೆ ಬರುವ ವೇಳೆ ರಸ್ತೆಯಲ್ಲಿ ಸಿಡಿಲು ಬಡಿತಕ್ಕೆ ತಗುಲಿ ಸಾವನ್ನಪ್ಪಿದ್ದಾನೆ. ನಿನ್ನೆ ಕುರಿ ಕಾಯಲು ಹೋಗಿದ್ದ ಭೀಮಪ್ಪ ಅವರು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಜಾಲಮರದ ಕೆಳಗೆ ಭೀಮಪ್ಪರ ಮೃತ ದೇಹ ಪತ್ತೆಯಾಗಿದೆ.

    ಅಕಾಲಿಕ ಮಳೆಯಿಂದಾಗಿ ಗೌರಿಬಿದನೂರು ತಾಲೂಕಿನ ವಿಳಪಿ ಗ್ರಾಮದ ನಾಗರಾಜು ಎಂಬುವವರ ಬಾಳೆತೋಟ ಸಂಪೂರ್ಣ ನೆಲಕಚ್ಚಿದೆ. ಹಲವೆಡೆ ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ ಬೆಳೆಗಳು ಸಹ ಹಾನಿಯಾಗಿ ಒಳಪಟ್ಟಿವೆ. ಇನ್ನು ಶಿಡ್ಲಘಟ್ಟ ತಾಲೂಕಿನ ಅಂಗತಟ್ಟಿ ಗ್ರಾಮದ ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದ್ದು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಜಿಲ್ಲೆಯ ಜನತೆಗೆ ಮಳೆರಾಯ ತಂಪು ಎರೆದಿದ್ದು, ಕೆಲವು ಕಡೆ ಬೆಳೆ ಹಾನಿ ಕೂಡ ಸಂಭವಿಸಿದೆ.

    .

     

    https://youtu.be/Edfpkczu9zs

  • ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    -ಬಳ್ಳಾರಿಯಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ರಾಯಚೂರು/ಬಳ್ಳಾರಿ: ಬಿರುಬಿಸಿಲ ಮಧ್ಯದಲ್ಲೇ ಬಿಸಿಲನಾಡು ರಾಯಚೂರಿನಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ರಾತ್ರಿಯಿಡಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮೂಲಕ ಜಿಲ್ಲೆ ತಂಪಾಗಿದೆ. ಲಿಂಗಸುಗೂರು, ಸಿಂಧನೂರು, ಮಾನ್ವಿ ಸೇರಿ ಎಲ್ಲೆಡೆ ಮಳೆಯಾಗಿದ್ದು ಅಲ್ಲಲ್ಲಿ ಮಳೆಹಾನಿಯೂ ಆಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಕೆಲವೆಡೆ ಹಾನಿ ಸಂಭವಿಸಿದೆ.

    ಲಿಂಗಸುಗೂರಿನಲ್ಲಿ ಸುರಿದ ಮಳೆಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ. ಲಿಂಗಸುಗೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ದಾಳಿಂಬೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸುಮಾರು 100 ಎಕರೆಯಷ್ಟು ಬೆಳೆ ಹಾನಿ ಸಂಭವಿಸಿದೆ. ಈ ಬೇಸಿಗೆ ಮಳೆ ನೇರವಾಗಿ ತೋಟಗರಿಕಾ ಬೆಳೆಯ ಮೇಲೆ ಪರಿಣಾಮ ಬೀರಿದೆ.

    ಇನ್ನೂ ಬಿರುಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗುರಳಿದ್ದು, 15 ವಿದ್ಯುತ್ ಕಂಬಗಳು ಬಿದ್ದಿವೆ. ಗುಡಿಸಲು ಹಾಗೂ ಗೂಡಂಗಡಿಗಳು ಹಾರಿಹೋಗಿವೆ. ಮಾನ್ವಿ, ಸಿಂಧನೂರು, ರಾಯಚೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ರಾಯಚೂರು ನಗರದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾದ್ರು ಬೇಸಿಗೆಯ ಮಳೆಗೆ ಜನ ಖುಷಿಯಾಗಿದ್ದಾರೆ.

    ಬಳ್ಳಾರಿಯಲ್ಲೂ ಮಳೆ: ಗಣಿನಾಡು ಬಳ್ಳಾರಿಯಲ್ಲೂ ರಾತ್ರಿ ಮಳೆಯಾಗಿದೆ. ಮಳೆಯಾದ ಪರಿಣಾಮ ಬಳ್ಳಾರಿಯ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿಯ ಹೊಸ ಬಸ ನಿಲ್ದಾಣದ ಬಳಿಯ ಅಂಡರ್ ಬ್ರೀಡ್ಜ್ ಬಳಿ ನೀರು ಶೇಖರಣೆಯಾದ ಪರಿಣಾಮ ಇಂದು ಮುಂಜಾನೆ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕ್ಯಾದಿಗೇನಹಳ್ಳಿ ಎಂಬಲ್ಲಿ ಗೋಣೆಪ್ಪ ಎಂಬವರಿಗೆ ಸೇರಿದ 14 ಕುರಿ ಹಾಗೂ ಒಂದು ನಾಯಿ ಸಿಡಿಲು ಬಡಿದು ಸಾವನ್ನಪ್ಪಿವೆ.