Tag: ಬೆಳೆ ಹಾನಿ

  • ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ: ಆರ್. ಅಶೋಕ್

    ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ: ಆರ್. ಅಶೋಕ್

    ಚಿಕ್ಕಮಗಳೂರು: ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ. ಅಧಿಕಾರಿಗಳಷ್ಟೆ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ.

    ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ಗದಗದಲ್ಲಿ ಭಾರೀ ಮಳೆಗೆ ಹೆಚ್ಚಿನ ಹಾನಿ ಸಂಭವಿಸಿದೆ. ಬೆಳಗಾವಿ 76 ಸಾವಿರ ರೈತರ ಬೆಳೆ ಹಾನಿ, ಬಾಗಲಕೋಟೆ 20 ಸಾವಿರ ರೈತರ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಣ ಬಿಡುಗಡೆ ಮಾಡಬೇಕಿತ್ತು, ಆ ಫೈಲ್ ನನ್ನ ಬಳಿ ಬಂದಿದೆ ಎಂದರು.

    ನೀತಿ ಸಂಹಿತೆ ಇರೋದ್ರಿಂದ ಅನುಮತಿ ಕೇಳಿದ್ದೇನೆ, ಇಂದು-ನಾಳೆಯಲ್ಲಿ ಹಣ ಬಿಡುಗಡೆ ಮಾಡುತ್ತೇವೆ. ಕೋಟ್ಯಂತರ ಹಣ ಬಿಡುಗಡೆ ಮಾಡಬೇಕು, ಅನುಮತಿ ಸಿಕ್ಕರೆ ಮಾಡುತ್ತೇನೆ. ಎಲ್ಲೆಲ್ಲಿ ಫ್ಲಡ್, ಬೆಳೆಹಾನಿಯಾಗಿದೆ ಅವರಿಗೆಲ್ಲಾ 100 ಪರ್ಸೆಂಟ್ ಪರಿಹಾರ ಕೊಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸಚಿವರ ಹೇಳಿಕೆಗೆ ಇದೀಗ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಹಾಗಾದ್ರೆ ಕ್ಷೇತ್ರದ ಶಾಸಕರು, ಮಂತ್ರಿಗಳು ಇರುವುದು ಯಾಕೆ..?. ಜನರ ಕಷ್ಟ ಕೇಳುವುದು ಬಿಟ್ಟು ಶಾಸಕರು, ಮಂತ್ರಿಗಳಿಗೆ ಬೇರೆನು ಕೆಲಸ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್

  • ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

    ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

    ರಾಯಚೂರು: ಜಿಲ್ಲೆಯ ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಪ್ರತೀ ವರ್ಷ ತತ್ತರಿಸಿ ಹೋಗುತ್ತಿದ್ದಾರೆ. ಈ ವರ್ಷವೂ ಸಾಕಷ್ಟು ಮಳೆ ಹಾನಿ ಸಂಭವಿಸಿದೆ. ಆದರೆ 2019ರ ಭೀಕರ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಬೆಳೆ ಕಳೆದುಕೊಂಡಿದ್ದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವರ್ಷದ ಬೆಳೆಹಾನಿಗೆ ಯಾವಾಗ ಪರಿಹಾರ ಸಿಗುತ್ತೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.

    2019 ಕೃಷ್ಣಾ ಹಾಗೂ ಭೀಮಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿ ರಾಯಚೂರು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಭತ್ತ, ತೊಗರಿ ಸೇರಿದಂತೆ ನದಿ ಪಾತ್ರದ ಬಹುತೇಕ ಬೆಳೆಗಳು ಜಲಾವೃತವಾಗಿ ಬೆಳೆ ಹಾಳಾಗಿತ್ತು. ಆದರೆ ರೈತರು ಬೆಳೆ ಕಳೆದುಕೊಂಡು ಎರಡು ವರ್ಷಗಳು ಕಳೆದರೂ ಇದುವರೆಗೂ ರೈತರಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಬೆಳೆ ಚೆನ್ನಾಗಿ ಬಂದಾಗಲೇ ಪ್ರವಾಹ ಬಂದು ಬೆಳೆಗಳು ಸಂಪೂರ್ಣ ಹಾಳಾಗುತ್ತಿದೆ ಎಂದು ರೈತರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ರಾಯಚೂರು ತಾಲೂಕಿನ ಡೊಂಗರಾಂಪುರ ಗ್ರಾಮ ಒಂದರಲ್ಲೇ ನದಿ ಪಾತ್ರದ 500ಕ್ಕೂ ಅಧಿಕ ಹೆಕ್ಟೇರ್ ನಲ್ಲಿ ಬೆಳೆದ ಭತ್ತ ನೀರು ಪಾಲಾಗಿತ್ತು. ಪ್ರವಾಹಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿದ್ದ ಅರ್ಧಕರ್ದ ರೈತರಿಗೆ ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಪ್ರವಾಹ ಬಂದು ಎರಡು ವರ್ಷಗಳು ಕಳೆದ್ರೂ ಪರಿಹಾರ ಸಿಗದ ಕಾರಣ, ಇತ್ತ ಬೆಳೆಯೂ ಕಳೆದುಕೊಂಡು, ಪರಿಹಾರವೂ ಕೈ ಸೇರದ್ದಕ್ಕೆ ರೈತರು ಕಂಗಾಲಾಗಿದ್ದಾರೆ.

    ಪ್ರತೀ ಬಾರಿಯೂ ಕೃಷ್ಣಾ ನದಿ ಪ್ರವಾಹ ಬಂದಾಗಲೆಲ್ಲಾ ನದಿ ಪಾತ್ರದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತಡವಾಗಿ ಬರುವ ಅಧಿಕಾರಿಗಳು ಜಮೀನುಗಳನ್ನು ಸರ್ವೆ ಮಾಡಿ, ಜಿಪಿಎಸ್ ಮಾಡಿಕೊಂಡು ಹೋಗಿದ್ದರು. ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದ್ರೂ ನಿಜವಾದ ಎಷ್ಟೋ ಫಲಾನುಭವಿಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ರೈತರ ಸಂಕಷ್ಟ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಪುನಃ ಸರ್ವೆ ಮಾಡುವುದಾಗಿ ಹೇಳುತ್ತಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತ್ರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪದೇ ಪದೇ ಬದಲಾಗುತ್ತಿದ್ದರೆ ಸಮಸ್ಯೆ ಕೇಳುವವರು ಯಾರು ಎಂದು ಜಿಲ್ಲೆಯ ಜನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ನದಿ ಪಾತ್ರದ ರೈತರು ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಸಮರ್ಪಕವಾಗಿ ಸರ್ವೆ ಮಾಡಿ, ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಮಾತ್ರ ತಾರತಮ್ಯ ಮಾಡುತ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾರಂಜಾ ಜಲಾಶಯದಿಂದ 5050 ಕ್ಯೂಸೆಕ್ ನೀರು ಬಿಡುಗಡೆ- ನಾಲೆಗಳಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ

    ಕಾರಂಜಾ ಜಲಾಶಯದಿಂದ 5050 ಕ್ಯೂಸೆಕ್ ನೀರು ಬಿಡುಗಡೆ- ನಾಲೆಗಳಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ

    ಬೀದರ್: ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೀದರ್‍ನ ಜೀವನಾಡಿ ಕಾರಂಜಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು 5050 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

    7.69 ಟಿಎಂಸಿ ಸಾಮರ್ಥ್ಯವಿರುವ ಕಾರಂಜಾ ಜಲಾಶಯದಲ್ಲಿ ಸದ್ಯ 7.24 ಟಿಎಂಸಿ ನೀರು ಸಂಗ್ರಹವಾಗಿದೆ. ಕಾರಂಜಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದಂತೆ ಜಲಾಶಯಕ್ಕೆ ಯಾವುದೇ ಅಪಾಯವಾಗಬಾರದು ಎಂದು ಅಧಿಕಾರಿಗಳು ಇಂದು 5050 ಕ್ಯೂಸೆಕ್ ನೀರು ಹೊರ ಬಿಟ್ಟಿದ್ದಾರೆ. ಇದನ್ನೂ ಓದಿ:ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ: ಕಾಶಪ್ಪನವರ್

    ಜಲಾಶಯದ 4 ಗೇಟ್‍ಗಳ ಮೂಲಕ 5050 ಕ್ಯೂಸೆಕ್ ನೀರು ಕಾರಂಜಾ ಜಲಾಶಯದಿಂದ ಬಿಡುಗಡೆ ಮಾಡಲಾಗಿದ್ದು, ಭಾಲ್ಕಿ ತಾಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ನಾಲೆಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಕಾರಂಜಾ ಹಿನ್ನೀರಿನ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಧಾರಾಕಾರವಾಗಿ ಭಾರಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕಾರಂಜಾ ಹಿನ್ನೀರು ಪ್ರದೇಶದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

     

  • ಬಸವಸಾಗರ ಜಲಾಶಯದಿಂದ ಮತ್ತೆ ನೀರು ಬಿಡುಗಡೆ- ಜಲದಿಗ್ಬಂಧನದಲ್ಲಿ ಮುಷ್ಠಳ್ಳಿಯ ರಾಮಮಂದಿರ

    ಬಸವಸಾಗರ ಜಲಾಶಯದಿಂದ ಮತ್ತೆ ನೀರು ಬಿಡುಗಡೆ- ಜಲದಿಗ್ಬಂಧನದಲ್ಲಿ ಮುಷ್ಠಳ್ಳಿಯ ರಾಮಮಂದಿರ

    – ಶೆಳ್ಳಗಿ, ಮುಷ್ಠಳ್ಳಿಯ 13 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ

    ಯಾದಗಿರಿ: ಬಸವಸಾಗರ ಜಲಾಶಯದಿಂದ ಮತ್ತೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಕೃಷ್ಣಾ ನದಿ ತೀರದ ದೇಗುಲಗಳು ಜಲಾವೃತಗೊಂಡಿವೆ.

    ಜಲಾಶಯದಿಂದ ಕೃಷ್ಣಾ ನದಿಗೆ 4,17,740 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದ್ದು, ಸುರಪುರ ತಾಲೂಕಿನ ಮುಷ್ಠಳ್ಳಿ ಸಮೀಪದ ರಾಮಮಂದಿರ ಜಲದಿಗ್ಬಂಧನವಾಗಿದೆ. ದೇವಸ್ಥಾನ ಸುತ್ತಲೂ ನದಿಯ ನೀರು ಆವರಿಸಿದೆ. ನದಿ ತೀರದ ಗ್ರಾಮಗಳ ಸಮೀಪದಲ್ಲಿ ನದಿ ನೀರು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶೆಳ್ಳಗಿ, ಮುಷ್ಠಳ್ಳಿಯ 13 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಬಿಡು ಬಿಟ್ಟಿದ್ದಾರೆ.

    ಅಪಾರ ಪ್ರಮಾಣದ ಬೆಳೆ ಹಾನಿ:
    ಕೃಷ್ಣಾ ನದಿಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಅನ್ನದಾತರು ಕಣ್ಣೀರು ಹಾಕುವಂತಾಗಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4,17,740 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆ ನದಿಯ ಹಿನ್ನೀರು ರೈತರ ಜಮೀನಿಗೆ ನುಗ್ಗಿ ಭತ್ತ, ಹತ್ತಿ ಬೆಳೆ ನೀರು ಪಾಲಾಗಿ, ಅನ್ನದಾತರ ಬದುಕು ಕೊಚ್ಚಿ ಹೋಗಿದೆ. ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ ಗ್ರಾಮದ ಸಾವಿರಾರು ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ.

    ಮತ್ತೊಂದು ಕಡೆ ಯಾದಗಿರಿ ಮತಕ್ಷೇತ್ರದ ವಡಗೇರಾ ತಾಲೂಕಿನ ಯಕ್ಷಂತಿ, ಗೌಡೂರು, ಎಂ ಕೊಳ್ಳೂರು ಗ್ರಾಮದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಇಷ್ಟಾದರೂ ಜನರ ನೋವು ಆಲಿಸಲು ಯಾವುದೇ ಜನ ಪ್ರತಿನಿಧಿಗಳು ಬಂದಿಲ್ಲ, ಇದರಿಂದಾಗಿ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.

  • ಉತ್ತರ ಕನ್ನಡದಲ್ಲಿ ಭೂಕುಸಿತ- ಅಡಿಕೆ ತೋಟ ಸಂಪೂರ್ಣ ನಾಶ

    ಉತ್ತರ ಕನ್ನಡದಲ್ಲಿ ಭೂಕುಸಿತ- ಅಡಿಕೆ ತೋಟ ಸಂಪೂರ್ಣ ನಾಶ

    ಕಾರವಾರ: ಬೇಸಿಗೆಯಲ್ಲೂ ಶಿರಸಿಯಲ್ಲಿ ಭೂಕುಸಿತವಾಗಿದ್ದು, ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟದ ಕೆಳಗಿನಕೇರಿ ಗ್ರಾಮದಲ್ಲಿ ಇಂದು ಭೂ ಕುಸಿತವಾಗಿ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷದ ಭಾರೀ ಮಳೆಯಿಂದಾಗಿ ಇಲ್ಲಿನ ಗುಡ್ಡಭಾಗದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಇಂದು ದಿಢೀರ್ ಕುಸಿತಕಂಡಿದೆ.

    ಭೂ ಕುಸಿತದಿಂದಾಗಿ ಮಧುಸೂದನ್ ಹೆಗಡೆ ಅವರಿಗೆ ಸೇರಿದ ಒಂದು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 15 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

  • ರೈತರಿಗೆ ಗಾಯದ ಮೇಲೆ ಬರೆ ಎಳೆದ ನಿವಾರ್- ಹತ್ತಿ, ಭತ್ತದ ಬೆಳೆ ನಾಶ

    ರೈತರಿಗೆ ಗಾಯದ ಮೇಲೆ ಬರೆ ಎಳೆದ ನಿವಾರ್- ಹತ್ತಿ, ಭತ್ತದ ಬೆಳೆ ನಾಶ

    ರಾಯಚೂರು: ನೆರೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಮತ್ತೆ ನಿವಾರ್ ನಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಜಿಲ್ಲೆಯ ರೈತರು ನಿವಾರ್ ಚಂಡಮಾರುತದಿಂದ ಮತ್ತೆ ಹಾನಿಗೊಳಗಾಗಿದ್ದಾರೆ.

    ಸತತವಾಗಿ ಸುರಿದ ಮಳೆಗೆ ಹತ್ತಿ, ಭತ್ತ ಬೆಳೆ ನಾಶವಾಗಿದ್ದು, ರೈತರು ಮತ್ತೆ ನಷ್ಟಕ್ಕೆ ಸಿಲುಕಿದ್ದಾರೆ. ಬಿಡಿಸಿ ತಂದಿದ್ದ ಹತ್ತಿ, ಭತ್ತದ ಬೆಳೆ ಮಳೆಗೆ ಒದ್ದೆಯಾದರೆ, ಜಮೀನಿನಲ್ಲಿದ್ದ ಹತ್ತಿ, ಭತ್ತ ಬೆಳೆ ಸಹ ಸಂಪೂರ್ಣ ನೆಲಕ್ಕಚ್ಚಿದೆ. ಸ್ವಲ್ಪ ನಿರೀಕ್ಷೆಯಲ್ಲಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸತತವಾಗಿ ಸುರಿದ ಮಳೆಗೆ ರೈತರ ಕನಸೆಲ್ಲಾ ನುಚ್ಚು ನೂರಾಗಿದ್ದು, ಅತೀವೃಷ್ಟಿಯಿಂದ ಪಾರಾಗಿ ಜಮೀನಿಗೆ ಖರ್ಚುಮಾಡಿದ ಹಣವಾದರೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರಾಯಚೂರಿನ ಭತ್ತ ಹಾಗೂ ಹತ್ತಿ ಬೆಳೆಗಾರರಿಗೆ ನಿವಾರ್ ನಿರಾಸೆ ಉಂಟುಮಾಡಿದೆ. ಚಂಡಮಾರುತದ ಪರಿಣಾಮ ಎರಡು ದಿನ ಸುರಿದ ಮಳೆ, ಗಾಳಿಗೆ ಜಿಲ್ಲೆಯ ಸಿರವಾರ, ಮಾನ್ವಿ, ದೇವದುರ್ಗ ಸೇರಿ ಹಲವೆಡೆ ಭತ್ತದ ಬೆಳೆ ಹಾನಿಗೀಡಾಗಿದೆ.

    ಎಕರೆಗೆ 45 ಚೀಲ ಭತ್ತ ಸಿಗುವಲ್ಲಿ ಈ ವರ್ಷ 25 ಚೀಲದ ನಿರೀಕ್ಷೆಯಿತ್ತು. ಆದರೆ ಚಂಡಮಾರುತ ಅದನ್ನೂ ಹುಸಿಗೊಳಿಸಿ ರೈತರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಭತ್ತ ಒದ್ದೆಯಾಗಿರುವುದರಿಂದ ದಲ್ಲಾಳಿಗಳು 75 ಕೆ.ಜಿ ಚೀಲದ ಭತ್ತಕ್ಕೆ 850 ರೂ. ಹೇಳುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದರೆ ಮಾತ್ರ ರೈತರು ಸಂಕಷ್ಟದಿಂದ ಪಾರಾಗಬಹುದು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಒಂದು ಎಕರೆ ಭತ್ತ ಕಟಾವು ಮಾಡಲು 7,500 ರೂ. ಖರ್ಚಾಗುತ್ತದೆ. ಗೊಬ್ಬರ, ಕೀಟನಾಶಕ, ಕೂಲಿ ಎಲ್ಲ ಸೇರಿ ಎಕರೆಗೆ 35 ಸಾವಿರ ರೂಪಾಯಿ ಖರ್ಚು ತಗಲುತ್ತೆ. ಆದರೆ ಬೆಳೆಹಾನಿ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಿರುವುದು ರೈತರನ್ನು ಕಂಗೆಡಿಸಿದೆ. ಹತ್ತಿ ಬೆಳೆದ ರೈತರ ಪರಸ್ಥಿತಿಯೂ ಬೇರೆಯಾಗಿಲ್ಲ. ಇನ್ನೇನು ಹತ್ತಿ ಬಿಡಿಸಬೇಕು ಅನ್ನೋ ಸಮಯದಲ್ಲಿ ಸುರಿದ ಮಳೆ ಬೆಳೆಯನ್ನ ಹಾಳು ಮಾಡಿದೆ. ಹತ್ತಿ ಬೆಳೆ ಒದ್ದೆಯಾಗಿರುವುದರಿಂದ ಇಳುವರಿ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಹತ್ತಿ ಹಾಗೂ ಭತ್ತ ಬೆಳೆಗಾರರು ಸರ್ಕಾರ ನಮ್ಮ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಸರ್ಕಾರದ ಬೆಳೆಹಾನಿ ಪರಿಹಾರ ಅವೈಜ್ಞಾನಿಕ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ

    ಸರ್ಕಾರದ ಬೆಳೆಹಾನಿ ಪರಿಹಾರ ಅವೈಜ್ಞಾನಿಕ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ

    ಹಾಸನ: ಸರ್ಕಾರ ರೈತರ ಬೆಳೆ ಹಾನಿಗೆ ನಿಗದಿ ಮಾಡಿರುವ ಬೆಲೆ ತೀರ ಅವೈಜ್ಞಾನಿಕವಾಗಿದ್ದು, ಅದರ ಪುನರ್ ವಿಮರ್ಶೆ ಆಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿ ಹಲವೆಡೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ರೈತರ ಕಷ್ಟ ಆಲಿಸಿದ ನಂತರ ಮಾತನಾಡಿದ ಅವರು, ಭಾರೀ ಗಾಳಿ ಮಳೆಯಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ನಮ್ಮ ರೈತ ತೀರ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸರ್ಕಾರ ಬೆಳೆ ಹಾನಿಗೆ ಬೆಲೆ ನಿಗದಿ ಮಾಡಿರುವ ಕಾನೂನು ತೀರ ಅವೈಜ್ಞಾನಿಕವಾಗಿದ್ದು, ರೈತ ಉಳಿಯಬೇಕಾದರೆ ಅವನಿಗೆ ಏನು ಖರ್ಚಾಗಿರುತ್ತೆ ಅಷ್ಟು ಹಣ ಕೊಡಬೇಕು. ಬೆಲೆ ನಿಗದಿ ಪುನರ್ ವಿಮರ್ಶೆ ಆಗಬೇಕು ಎಂದಿದ್ದಾರೆ.

    ಈಗಿರುವ ಸರ್ಕಾರ ಯಾವ್ಯಾವುದೋ ರೂಪದಲ್ಲಿ ಅಧಿಕಾರ ಪಡೆದಿದ್ದು, ಅವರು ಜನರ ಬಳಿ ಬಂದು ಅವರಿಗಾಗಿರುವ ನಷ್ಟ ತುಂಬಬೇಕು. ಒಂದು ವೇಳೆ ಸರ್ಕಾರ ಪರಿಹಾರ ನೀಡಲು ತಡ ಮಾಡಿದ್ರೆ ರಾಜ್ಯ ಮಟ್ಟದಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ರೈತರು, ನಾವು ಬೆಳೆ ಹಾನಿಯಿಂದ ತೀರ ಸಂಕಷ್ಟಕ್ಕೆ ಗುರಿಯಾಗಿದ್ದು ಕಡೇ ಪಕ್ಷ ಸರ್ಕಾರ ನಾವು ಬೆಳೆ ಬೆಳೆಯಲು ಖರ್ಚು ಮಾಡಿದಷ್ಟು ಹಣವನ್ನಾದರೂ ಪರಿಹಾರದ ರೂಪದಲ್ಲಿ ನೀಡಬೇಕೆಂದು ಮನವಿ ಮಾಡಿದ್ದಾರೆ.

  • ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಂಪುರ ಗ್ರಾಮದಲ್ಲಿ ಸುರಿದ ಆಲೆಕಲ್ಲು ಸಹಿತ ಮಳೆ, ಬಿರುಗಾಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ.

    ಪರಂಪುರ ಗ್ರಾಮದ ರೈತರಾದ ನಿಂಗಪ್ಪ, ಗುರುನಾಥ್ ಗೌಡ ಅವರ ಜಮೀನಿನಲ್ಲಿದ್ದ ಬೆಳೆ ಹಾನಿಯಾಗಿದೆ. ಸುಮಾರು 10 ಎಕ್ರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಕೈಗೆ ಬರುವ ಹೊತ್ತಲ್ಲೇ ಕೆಡಕಿನ ಮಳೆ ಬೆಳೆ ಹಾನಿ ಮಾಡಿದೆ.

    ಒಂದೆಡೆ ಸುಡು ಬಿಸಿಲು, ನೀರಿನ ಸಮಸ್ಯೆ ಇದ್ರೆ ಜಿಲ್ಲೆಯಲ್ಲಿ ಕೆಡಕಿನ ಮಳೆಯ ಅಬ್ಬರ ಜೋರಾಗಿದೆ. ನಿತ್ಯ ಸಂಜೆಯಾಗುತ್ತಿದ್ದಂತೆ ವಾತಾವರಣವೇ ಬದಲಾಗುತ್ತಿದ್ದು, ಗಾಳಿ-ಮಳೆ ಜೋರಾಗುತ್ತಿದೆ. ಹೀಗಾಗಿ ಜಿಲ್ಲೆಯ ಸಾವಿರಾರು ಎಕ್ರೆ ಬೆಳೆಗಳು ಹಾನಿಯಾಗಿದೆ. ಭತ್ತ ಹಾಗೂ ಪಪ್ಪಾಯಿ ಬೆಳೆ ಅತೀ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಹಾನಿ ಸಮೀಕ್ಷೆಯೂ ನಿರಂತರವಾಗಿ ನಡೆದಿದ್ದು, ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

  • ರಾತ್ರಿ ಸುರಿದ ಮಳೆಗೆ ಬತ್ತದ ಬೆಳೆ ನಾಶ – ಲಕ್ಷಾಂತರ ಮೌಲ್ಯದ ಮಾವು ಧರೆಗೆ

    ರಾತ್ರಿ ಸುರಿದ ಮಳೆಗೆ ಬತ್ತದ ಬೆಳೆ ನಾಶ – ಲಕ್ಷಾಂತರ ಮೌಲ್ಯದ ಮಾವು ಧರೆಗೆ

    ಯಾದಗಿರಿ/ಹಾವೇರಿ: ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಯಾದಗಿರಿ ಹಾಗೂ ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

    ಯಾದಗಿರಿಯಲ್ಲಿ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆ ಮಣ್ಣುಪಾಲಾಗಿದೆ. ಜಿಲ್ಲೆಯ ಅಬ್ಬೆತುಮಕೂರ, ಹೆಡಗಿಮುದ್ರಾ, ಠಾಣಾಗುಂದಿ, ನಾಯ್ಕಲ್, ಮನಗನಾಳ, ಅನಕಸೂಗುರ, ಐಕೂರ ಮೊದಲಾದ ಕಡೆ ಭತ್ತದ ಬೆಳೆ ಹಾಗೂ ಸಜ್ಜೆ ಬೆಳೆ ನೆಲ ಕಚ್ಚಿದೆ.

    ಏಪ್ರಿಲ್ 7ರಂದು ಸುರಿದ ಬಿರುಗಾಳಿ ಸಹಿತ ಮಳೆಗೆ ಕೂಡ ಬೆಳೆ ಹಾನಿಯಾಗಿತ್ತು. ಈಗ ಮತ್ತೆ ಶನಿವಾರ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ಹಾನಿಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸದ್ಯಕ್ಕೆ 3 ಸಾವಿರಕ್ಕೂ ಹೆಚ್ಚು ಎಕ್ರೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

    ಇತ್ತ ಹಾವೇರಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಗಾಳಿ ಸಮೇತ ಮಳೆಗೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರೋ ರೈತರೊಬ್ಬರ ಮಾವಿನ ತೋಟದಲ್ಲಿ ಎರಡು ಮಾವಿನ ಗಿಡಗಳು ಧರೆಗೆ ಉರುಳಿದ್ದು, ಅಪಾರ ಪ್ರಮಾಣದ ಮಾವಿನ ಕಾಯಿಗಳು ಮಣ್ಣುಪಾಲಾಗಿದೆ.

    ರೈತ ಕನ್ನಪ್ಪ ಕಟಗಿ ಅವರು ಮೂರು ಎಕ್ರೆ ಜಮೀನಿನಲ್ಲಿ ಮಾವು ಬೆಳೆಸಿದ್ದರು. ಮಾವಿನ ಗಿಡಗಳಲ್ಲಿ ಉತ್ತಮ ಫಸಲು ಬಂದಿತ್ತು. ಆದರೆ ಶನಿವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ಗಿಡಗಳು ಹಾಗೂ ಮಾವಿನ ಕಾಯಿ ಉದುರಿಬಿದ್ದು, ಐದು ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಇದು ಅತಿವೃಷ್ಟಿ ಮತ್ತು ನೆರೆಯಿಂದ ತತ್ತರಿಸಿದ್ದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

  • ಬಿಸಿಲನಾಡಲ್ಲಿ ಅಕಾಲಿಕ ಮಳೆ – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ಬಿಸಿಲನಾಡಲ್ಲಿ ಅಕಾಲಿಕ ಮಳೆ – ಲಕ್ಷಾಂತರ ರೂಪಾಯಿ ಬೆಳೆ ಹಾನಿ

    ರಾಯಚೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕಟಾವಿಗೆ ಬಂದಿದ್ದ ನೂರಾರು ಎಕ್ರೆ ಭತ್ತವನ್ನ ನೆಲಕಚ್ಚುವಂತೆ ಮಾಡಿದೆ.

    ಲಿಂಗಸುಗೂರು ಹಾಗೂ ಮಸ್ಕಿಯಲ್ಲಿ ಆಲೆಕಲ್ಲು ಸಹಿತ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ. ಮಸ್ಕಿ ತಾಲೂಕಿನ ಮಾರಲದಿನ್ನಿ, ಕಾಟಗಲ್, ಉಸ್ಕಿಹಾಳ, ಬೆಲ್ಲದಮರಡಿ ಸೇರಿ ಸುತ್ತಮುತ್ತ ಆಲೆಕಲ್ಲು ಸಹಿತ ಮಳೆಯಾಗಿದೆ. ರಾತ್ರಿ ಸುರಿದ ಅಕಾಲಿಕ ಆಲೆಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ಮಸ್ಕಿ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರಿಗೆ ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭತ್ತ ನೆಲಕಚ್ಚಿದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಬೆಳೆ ಹಾನಿಯಾಗಿದ್ದರೆ, ಲಿಂಗಸುಗೂರಿನ ಹಟ್ಟಿ ಸುತ್ತಮುತ್ತ ಮಧ್ಯಾಹ್ನವೇ ಜೋರು ಮಳೆ ಸುರಿದಿದೆ. ಸದ್ಯ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರೆದಿದೆ.