Tag: ಬೆಳಗಾವಿ ಚಲೋ

  • ಮೋದಿ ಕ್ಯಾಬಿನೆಟ್ ಪ್ರಬಲ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದೆ – ಯತ್ನಾಳ್

    ಮೋದಿ ಕ್ಯಾಬಿನೆಟ್ ಪ್ರಬಲ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದೆ – ಯತ್ನಾಳ್

    ಬೆಳಗಾವಿ: ಮೋದಿ ಅವರ ಕ್ಯಾಬಿನೆಟ್ ಕರ್ನಾಟಕದ ಪ್ರಬಲ ಲಿಂಗಾಯುತ ಸಮುದಾಯವನ್ನು ಕಡೆಗಣಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ದೇಶದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿಸಿದೆ. ಈ ಕಾರಣದಿಂದ ಮೋದಿ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕಾಗಿದೆ. ಆದರೆ ಕೇಂದ್ರದ ಸಂಪುಟದಲ್ಲಿ ಪ್ರಬಲ ಸಮುದಾಯವನ್ನು ಕಡೆಗಣಿಸಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ತಪ್ಪಿದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೆಲವರು ಎಕ್ಸ್ ಆಗುತ್ತಾರೆ ಕೆಲವರು ವೈ ಆಗುತ್ತಾರೆ. ಜಿಗಜಿಣಗಿ ಹಾಗೂ ಅಪ್ಪು ಪಟ್ಟಣಶೆಟ್ಟಿ ಒಂದಾಗಿದ್ದಾರೆ. ಜಿಗಜಿಣಗಿ ಅವರಿಗೆ ಭಗವಂತ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳಿದರು.

    ಇದೇ ವೇಳೆ ಶಿವು ಉಪ್ಪಾರ ಸಾವು ಪ್ರಕರಣದ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆಯ ಕೆಲವು ಜನ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂಬ ಭಾರಿ ಆರೋಪವಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಗೋರಕ್ಷರು ಬೆಳಗಾವಿಗೆ ಬಂದು ಬೆಳಗಾವಿ ಚಲೋ ಆಂದೋಲನ ಪ್ರಾರಂಭ ಮಾಡಲಿದ್ದಾರೆ. ರಸ್ತೆಗಿಳಿದು ಪ್ರತಿಭಟನೆ ಮಾಡಿ ಸಾಮ, ದಾನ, ಭೇದ, ದಂಡದ ಮೂಲಕ ತಕ್ಕ ಉತ್ತರ ನೀಡುತ್ತವೆ ಎಂದು ರಾಜ್ಯ ಸರ್ಕಾರಕ್ಕೆ ಯತ್ನಾಳ್ ಎಂಟು ದಿನಗಳ ಗಡವು ನೀಡಿದ್ದಾರೆ.

  • ಸರ್ಕಾರ, ಖಾಸಗಿ ವೈದ್ಯರ ಹಗ್ಗಜಗ್ಗಾಟ – ರಾಜ್ಯದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ

    ಸರ್ಕಾರ, ಖಾಸಗಿ ವೈದ್ಯರ ಹಗ್ಗಜಗ್ಗಾಟ – ರಾಜ್ಯದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ

    ಬೆಂಗಳೂರು: ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರ್ಕಾರ ಹಾಗೂ ವೈದ್ಯರ ಹಗ್ಗ ಜಗ್ಗಾಟದಲ್ಲಿ ವೈದ್ಯರ ಮುಷ್ಕರದಿಂದ ಇದೂವರೆಗೂ 7 ಜನ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರು ವಿಷಾದ ವ್ಯಕ್ತಪಡಿಸುತ್ತಾರೆ ಹೊರತು ಮುಷ್ಕರ ಮಾತ್ರ ಕೈ ಬಿಡುತ್ತಿಲ್ಲ.

    ತಮ್ಮ ಬೇಡಿಕೆ ಈಡೇರಿಸುವರೆಗೂ ಮುಷ್ಕರ ಕೈ ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಹಾಗೇ ಸರ್ಕಾರನೂ ಒಂದು ಗಟ್ಟಿ ನಿರ್ಧಾರಕ್ಕೆ ಬರುತ್ತಿಲ್ಲ. ಮಂಗಳವಾರ ಮಕ್ಕಳು ಸೇರಿ 7 ಜನ ಸಾವನ್ನಪ್ಪಿದ್ದಾರೆ. ಗದಗದಲ್ಲಿ ಚಿಕಿತ್ಸೆ ಸಿಗದೇ ಹೆರಿಗೆಯಾದ ಬಾಣಂತಿಯೊಬ್ಬರು ಮಗು ಎತ್ಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ದೃಶ್ಯ ಕಂಡು ಬಂತು. ಹೀಗೆ ಹೇಳುತ್ತಾ ಹೋದರೆ ಊರಿಗೆ ಒಂದು ಸಮಸ್ಯೆ ಸಿಗುತ್ತದೆ.

    ಖಾಸಗಿ ವೈದ್ಯರನ್ನ ಕೇಳಿದರೆ ಸರ್ಕಾರ ಫಿಕ್ಸ್ ಮಾಡಿದ ಯೋಜನೆಗಳಲ್ಲಿ ಬಡವರಿಗೆ ಚಿಕಿತ್ಸೆ ಕೊಡ್ತಾ ಇದ್ದೀವಿ. ಹಾಗಂತ ಸರ್ಕಾರ ನಮಗೇನಾದ್ರೂ ಫ್ರಿಯಾಗಿ ನೀರು ಕರಂಟ್ ಕೊಡುತ್ತಿದೆಯಾ, ನಾವು ತೆರಿಗೆ, ಕಮರ್ಶಿಯಲ್ ಚಾರ್ಜ್ ಕಟ್ಟುತ್ತಿದ್ದೇವೆ. ಈಗ ಹೊಸ ಕಾಯ್ದೆ ತಂದು ನಮ್ಮ ಮೇಲೆ ಹೊರೆ ಹಾಕುತ್ತಿದ್ದಾರೆ ಅಂತ ಸರ್ಕಾರವನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಯ ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ? 

    ಎಲ್ಲಿ ಯಾರು ಮೃತಪಟ್ಟಿದ್ದಾರೆ?
    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

    ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

  • ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್

    ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್

    ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಚಳಿಗಾಲ ಅಧಿವೇಶನದಲ್ಲಿ ಮುಂದಾಗಿದ್ದು, ಕಾಯ್ದೆಗೆ ತಿದ್ದುಪಡಿ ಒತ್ತಾಯಿಸಿ ಇಂದು ಖಾಸಗಿ ವೈದ್ಯರು ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡಿದ್ದಾರೆ.

    ಇದರ ಹಿನ್ನೆಲೆ ವಿಜಯಪುರದ 120 ಖಾಸಗಿ ಆಸ್ಪತ್ರೆಗಳ ವೈದ್ಯರು ತುರ್ತು ಚಿಕಿತ್ಸೆ, ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ಬೆಳಗಾವಿಯಲ್ಲಿ ನಡೆಯುವ ವೈದ್ಯರ ಮುಷ್ಕರಕ್ಕೆ ತೆರಳಿದ್ದಾರೆ. ಒಟ್ಟು ಜಿಲ್ಲೆಯಿಂದ 460 ಖಾಸಗಿ ವೈದ್ಯರು ಬೆಳಗಾವಿಗೆ ತೆರಳಿದ್ದು, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಂದೆ ವೈದ್ಯಕೀಯ ಸೇವೆ ಇಲ್ಲ ಎಂದು ಬೋರ್ಡ್, ಬ್ಯಾನರ್ ಹಾಕಲಾಗಿದೆ.

    ಮಂಗಳವಾರ ಬೆಳಗ್ಗಿನವರೆಗೆ ಹೊರ ರೋಗಿಗಳಿಗೆ ಚಿಕಿತ್ಸೆ ಬಂದ್ ಮಾಡಲಾಗಿದೆ. ಇನ್ನು ವೈದ್ಯರ ಮುಷ್ಕರ ಹಿನ್ನಲೆ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಗೆ ರಜೆ ರದ್ದು ಮಾಡಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೆ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಒದಗಿಸುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದಾರೆ.