Tag: ಬೆಲ್ ಬಾಟಂ

  • ‘ಬೆಲ್ ಬಾಟಮ್ 2’ ಮೊದಲೇ ಧನ್ವೀರ್​ಗೆ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

    ‘ಬೆಲ್ ಬಾಟಮ್ 2’ ಮೊದಲೇ ಧನ್ವೀರ್​ಗೆ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

    `ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಶೋಕ್ದಾರ್ನಾಗಿ ಎಂಟ್ರಿಕೊಟ್ಟ ನಟ ಧನ್ವೀರ್, ಆನಂತರ `ಬೈ ಟೂ ಲವ್’ ಚಿತ್ರದ ಸಕ್ಸಸ್ ಮೂಲಕ ಭರವಸೆಯ ನಾಯಕನಾಗಿ ಗಾಂಧಿನಗರದಲ್ಲಿ ನೆಲೆಕಂಡವರು. ಇದೀಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ಇತ್ತೀಚೆಗಷ್ಟೇ `ವಾಮನ’ ಚಿತ್ರದ ಮೂಲಕ ಸದ್ದು ಮಾಡಿದ್ದ ಧನ್ವೀರ್, ಆ ಚಿತ್ರದ ಬೆನ್ನಲ್ಲೇ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು `ಬೆಲ್ ಬಾಟಂ’ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಯುಗಾದಿ ಹಬ್ಬದಂದು ಮುಹೂರ್ತ ಆಚರಿಸಿಕೊಂಡು ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಸರಳವಾಗಿ ಮುಹೂರ್ತ ಆಚರಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಇದೇ ಮೊದಲ ಬಾರಿಗೆ ನಿರ್ದೇಶಕ ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಪಕ್ಕಾ ಮಾಸ್ ಆಕ್ಷನ್ ಕಥೆಯ ಜೊತೆಗೆ ಮುದ್ದಾದ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿ ಇರಲಿದೆಯಂತೆ. ಈ ಚಿತ್ರದಲ್ಲಿ ಈವರೆಗೂ ಮಾಡಿರದೇ ಇರುವಂತಹ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಳ್ಳುತ್ತಿದ್ದು, ಭಿನ್ನ ಪಾತ್ರದ ಜೊತೆಗೆ ಡಿಫರೆಂಟ್ ಗೆಟಪ್ನಲ್ಲೂ ಅವರು ಮಿಂಚಲಿದ್ದಾರೆ. ಒಂದೊಳ್ಳೆ ಪಾತ್ರ, ವಿಭಿನ್ನ ಕಥೆಯ ಕಾರಣದಿಂದಾಗಿ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ಲ ಕೊಟ್ಟಿದ್ದಾರೆ ಧನ್ವೀರ್. ಬಜಾರ್ ಹುಡುಗನ ಹೊಸ ಗೆಟಪ್ ನೋಡಲು ಫ್ಯಾನ್ಸ್ ಈಗಿನಿಂದಲೇ ಕಾಯ್ತಿದ್ದಾರೆ. ಇದನ್ನೂ ಓದಿ: ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

  • ಜನರ ಮೇಲೆ ಹೊಗೆ ಪ್ರಯೋಗಿಸಿ ಕಳ್ಳತನ- ಕಳ್ಳರಿಗೆ ತಾನಾಗಿಯೇ ಚಿನ್ನ, ಹಣ ತಂದುಕೊಟ್ಟ ಮಹಿಳೆ!

    ಜನರ ಮೇಲೆ ಹೊಗೆ ಪ್ರಯೋಗಿಸಿ ಕಳ್ಳತನ- ಕಳ್ಳರಿಗೆ ತಾನಾಗಿಯೇ ಚಿನ್ನ, ಹಣ ತಂದುಕೊಟ್ಟ ಮಹಿಳೆ!

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನಲ್ಲಿ ಮೂವರು ನಕಲಿ ಫಕೀರರು ಬಂದು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ ಅವರಿಂದ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಬೆಲ್ ಬಾಟಂ ಚಿತ್ರದ ರೀತಿಯಲ್ಲೇ ಕಳ್ಳತನ ಮಾಡಲಾಗಿದೆ.

    ನಟ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಚಿತ್ರದಂತೆ ಫಕೀರರ ವೇಷ ಧರಿಸಿ ಬಂದ ಮೂವರು ಕಳ್ಳರು, ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಆಗಮಿಸಿದ ಮೂವರು, ಸುತ್ತಮುತ್ತಲ ಮನೆಗಳಿಗೆ ಭೇಟಿ ನೀಡಿದರು. ಮನೆಯೊಂದಕ್ಕೆ ತೆರಳಿದ ಮೂರು ಮಂದಿ ನಕಲಿ ಫಕೀರ ವೇಷಧಾರಿಗಳು ಮನೆಯ ಸುತ್ತಲೂ ಓಡಾಡಿ ತಮ್ಮ ಹಾಡಿನ ಮೂಲಕ ಮನೆ ಮಂದಿ ಹೊರಬರುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಮನೆಗೆ ಕಳುಹಿಸದ ಅತ್ತೆಗೆ ಬ್ಲೇಡ್‌ನಿಂದ ಹಲ್ಲೆ ಮಾಡಿದ ಅಳಿಯ

    ಹೊರ ಬಂದ ಮನೆಯ ಮಹಿಳೆಯ ಮೇಲೆ ಬೂದಿ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿದ್ದಾರೆ. ಈ ಸಂದರ್ಭ ಮಹಿಳೆ ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಮನೆಯೊಳಗಿನಿಂದ ನಗದನ್ನು ತಂದು ಕೊಟ್ಟು ಫಕೀರರ ಜೋಳಿಗೆಯನ್ನು ತುಂಬಿಸಿದ್ದಾರೆ. ಮಹಿಳೆಯಿಂದ ಚಿನ್ನಾಭರಣ ಮತ್ತು ನಗದು ಪಡೆದ ಬಳಿಕ ಫಕೀರರು ಸ್ಥಳದಿಂದ ಕಾಲ್ಕಿತ್ತಿದ್ದು, ಮಹಿಳೆ ಎಚ್ಚರಗೊಂಡಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

    ವೇಷಧಾರಿ ನಕಲಿ ಫಕೀರರ ಜೋಳಿಗೆಯನ್ನು ತಾನಾಗಿಯೇ ತುಂಬಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾಳೆ. ಮನೆಗೆ ಬಂದ ಫಕೀರರು ಮನೆಯಂಗಳದಲ್ಲಿ ಓಡಾಡಿದ ಮತ್ತು ಪೇಟೆಯಲ್ಲಿ ನಡೆದಾಡಿದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಟಪಾಡಿ ಭಾಗದಿಂದ ಉಡುಪಿ ಕಡೆಗೆ ಮೂವರು ತೆರಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಆ ವೀಡಿಯೋಗಳನ್ನು ವೈರಲ್ ಮಾಡಲಾಗಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಆರೋಪಿಗಳನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪೊಲೀಸರು ವಿನಂತಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು, ಅಪರಿಚಿತರ ಬಗ್ಗೆ ಜಾಗರೂಕತೆ ವಹಿಸುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.

  • ಬೆಲ್‍ಬಾಟಂ ನಂತರ ಬೇಡಿಕೆಯ ಹೀರೋ ಆದರೇ ರಿಷಬ್?

    ಬೆಲ್‍ಬಾಟಂ ನಂತರ ಬೇಡಿಕೆಯ ಹೀರೋ ಆದರೇ ರಿಷಬ್?

    ಬೆಂಗಳೂರು: ಒಂದು ಕಾಲದಲ್ಲಿ ನಾಯಕ ನಟನಾಗಬೇಕೆಂಬ ಕನಸು ಹೊತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ರಿಷಬ್ ಶೆಟ್ಟಿ. ಆದರೆ ತನ್ನೊಳಗೆ ಗಂಭೀರವಾಗಿರೋದು ನಿರ್ದೇಶಕನಾಗೋ ಕನಸು ಎಂಬುದನ್ನು ಖಚಿತಪಡಿಸಿಕೊಂಡಿದ್ದ ರಿಷಬ್ ಆ ನಂತರದಲ್ಲಿ ಆ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡು ಯಶ ಕಂಡಿದ್ದರು. ಆದರೆ ಹೀಗೆ ನಿರ್ದೇಶನದಲ್ಲಿ ಕಳೆದು ಹೋಗಿದ್ದ ಅವರ ಪಾಲಿಗೆ ಸರ್ ಪ್ರೈಸ್ ಎಂಬಂತೆ ಕೂಡಿ ಬಂದಿದ್ದ ಅವಕಾಶ ಬೆಲ್ ಬಾಟಂನದ್ದು!

    ಆ ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗುತ್ತಲೇ ರಿಷಬ್ ಶೆಟ್ಟರನ್ನು ನಾಯಕನನ್ನಾಗಿ ಮಾಡೋ ಉತ್ಸಾಹವೂ ಗಾಂಧಿನಗರದಲ್ಲಿ ಹೆಚ್ಚಿಕೊಂಡಿದೆ. ಅಷ್ಟಕ್ಕೂ ಬೆಲ್ ಬಾಟಂ ಚಿತ್ರ ಯಶ ಕಂಡ ನಂತರ ಅವರು ಹೀರೋ ಆಗಿಯೇ ಮುಂದುವರೆಯುತ್ತಾರೆಂದೇ ಬಹುತೇಕರು ಅಂದುಕೊಂಡಿದ್ದರು. ಆದರೆ ಒಂದಷ್ಟು ಕಾಲ ಸುಮ್ಮನಿದ್ದ ರಿಷಬ್ ಆ ನಂತರದಲ್ಲಿ ನಿರ್ದೇಶಕನಾಗಿಯೇ ಮುಂದುವರೆಯುವ ನಿರ್ಧಾರ ಪ್ರಕಟಿಸಿದ್ದರು. ಅದರನ್ವಯ ರುದ್ರಪ್ರಯಾಗ ಎಂಬ ಚಿತ್ರವನ್ನೂ ಘೋಷಣೆ ಮಾಡಿದ್ದರು. ಇದೀಗ ಅದರ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದು ರಿಷಬ್ ನಿರ್ದೇಶನದಲ್ಲಿಯೇ ಮುಂದುವರೆಯುತ್ತಾರೆ ಅಂತ ನೀವಂದುಕೊಂಡಿದ್ದರೆ ಇಲ್ಲಿ ಬೇರೆಯದ್ದೇ ಸುದ್ದಿಯೊಂದಿದೆ!

    ಇದರನ್ವಯ ಹೇಳೋದಾದರೆ ರಿಷಬ್ ಹೀರೋ ಆಗಿ ಏಕ ಕಾಲದಲ್ಲಿಯೇ ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಬೆಲ್ ಬಾಟಂ ಚಿತ್ರ ಮುಗಿದ ಕೂಡಲೆ ಅವರಿಗಾಗಿ ಕಥೆ ರೆಡಿ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿತ್ತಂತೆ. ಆದರೆ ಈ ಬಗ್ಗೆ ಯಾವ ನಿರ್ಧಾರ ತಳೆಯೋದೆಂಬ ಗೊಂದಲಕ್ಕೆ ಬಿದ್ದಿದ್ದ ರಿಷಬ್ ಅದರಲ್ಲಿ ಆರು ಕಥೆಯನ್ನು ಆರಿಸಿಕೊಂಡಿದ್ದರಂತೆ. ಆದರೆ ಕಡೆಗೆ ಅದರಲ್ಲಿ 4 ಚಿತ್ರಗಳನ್ನು ಫೈನಲ್ ಮಾಡಿಕೊಂಡಿದ್ದಾರಂತೆ. ಅವರು ರುದ್ರಪ್ರಯಾಗದ ಜೊತೆಯಲ್ಲಿಯೇ ಈ ಚಿತ್ರಗಳಲ್ಲಿ ಅಭಿನಯಿಸುತ್ತಾರಾ ಅಥವಾ ಆ ನಂತರ ಅಖಾಡಕ್ಕಿಳಿಯುತ್ತಾರಾ ಅನ್ನೋದಷ್ಟೇ ಈಗಿರೋ ಪ್ರಶ್ನೆ.

  • ಕುಸುಮಾಳೊಂದಿಗೆ ಜಪಾನಿನತ್ತ ಡಿಟೆಕ್ಟಿವ್ ದಿವಾಕರ!

    ಕುಸುಮಾಳೊಂದಿಗೆ ಜಪಾನಿನತ್ತ ಡಿಟೆಕ್ಟಿವ್ ದಿವಾಕರ!

    ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ನೂರಾ ಇಪ್ಪತೈದು ದಿನದಾಚೆಗೆ ಪ್ರೇಕ್ಷಕರನ್ನು ಸೆಳೆಯುತ್ತಿರೋ ಅಪರೂಪದ ದಾಖಲೆಯೊಂದಕ್ಕೂ ಈ ಸಿನಿಮಾ ರೂವಾರಿಯಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲಿಯೂ ಡಿಟೆಕ್ಟಿವ್ ದಿವಾಕರನ ಹವಾ ಜೋರಾಗಿಯೇ ಇದೆ. ಇದೀಗ ಜಪಾನ್ ದೇಶದಲ್ಲಿಯೂ ದಿವಾಕರ ಕಮಾಲ್ ಸೃಷ್ಟಿಸಲಿರೋ ಸುದ್ದಿಯೊಂದು ಹೊರ ಬಿದ್ದಿದೆ.

    ಈ ಸುದ್ದಿಯನ್ನು ಬೆಲ್ ಬಾಟಂ ಚಿತ್ರತಂಡವೇ ಜಾಹೀರು ಮಾಡಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಜಪಾನಿನಲ್ಲಿ ದಿವಾಕರನ ಮೋಡಿಗೆ ಸಕಲ ತಯಾರಿಯೂ ನಡೆದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಜಪಾನಿನಲ್ಲಿ ಬೆಲ್ ಬಾಟಂ ಚಿತ್ರ ಬಿಡುಗಡೆಯಾಗಲಿದೆ. ಜಪಾನಿನಲ್ಲಿರೋ ಕನ್ನಡಿಗರು ಈ ಚಿತ್ರಕ್ಕಾಗಿ ಬಹು ದಿನಗಳಿಂದಲೂ ಕಾತರಿಸುತ್ತಿದ್ದರು. ಇನ್ನೆರಡು ತಿಂಗಳಲ್ಲಿ ಜಪಾನ್ ಕನ್ನಡಿಗರ ಮನದಿಂಗಿತ ಸಾಕಾರಗೊಳ್ಳಲಿದೆ.

    ಈಗಾಗಲೇ ಯುಎಸ್, ಸಿಂಗಾಪೂರ್, ಯುಕೆ ಮುಂತಾದೆಡೆಗಳಲ್ಲಿ ಬೆಲ್ ಬಾಟಮ್ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರವನ್ನು ಆ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ನೋಡಿ ಸಂಭ್ರಮಿಸಿದ್ದಾರೆ. ಈಗ ಕರ್ನಾಟಕದಲ್ಲಿ ನೂರಾ ಇಪ್ಪತೈದು ದಿನಗಳ ಯಶಸ್ವೀ ಯಾತ್ರೆ ಮುಗಿಸಿಕೊಂಡಿರುವ ಈ ಚಿತ್ರ ಈ ಘಳಿಗೆಯಲ್ಲಿಯೇ ಜಪಾನಿನತ್ತಲೂ ಪ್ರಯಾಣ ಬೆಳೆಸಿದೆ.

    ಇದು ನಿರ್ದೇಶಕ ಜಯತೀರ್ಥ ಮತ್ತವರ ತಂಡದ ಪರಿಶ್ರಮದ ಫಲ. ಎಂಭತ್ತರ ದಶಕದ ಕಥೆಯೊಂದನ್ನು ಈ ಕಾಲಮಾನಕ್ಕೆ ತಕ್ಕಂತೆ ಕಟ್ಟಿಕೊಡುವ ಮೂಲಕ ಈ ತಂಡ ಸಾರ್ವಕಾಲಿಕ ದಾಖಲೆಯನ್ನೇ ಬರೆದಿದೆ. ಸಂಪೂರ್ಣ ಮನೋರಂಜನೆಯನ್ನೇ ಜೀವಾಳವಾಗಿಟ್ಟುಕೊಂಡು ಕಡೇ ತನಕ ಸಸ್ಪೆನ್ಸ್ ಆಗಿರುವಂಥಾ ಕಥೆಯೊಂದನ್ನು ಬೆಲ್ ಬಾಟಂ ಮೂಲಕ ಅನಾವರಣಗೊಳಿಸಲಾಗಿದೆ. ಈ ಮೂಲಕವೇ ಚಿತ್ರತಂಡ ಭರಪೂರ ಗೆಲುವನ್ನೂ ತನ್ನದಾಗಿಸಿಕೊಂಡಿದೆ.

  • ಗಡಿದಾಟಿದ ಡಿಟೆಕ್ಟಿವ್ ದಿವಾಕರ

    ಗಡಿದಾಟಿದ ಡಿಟೆಕ್ಟಿವ್ ದಿವಾಕರ

    ಬೆಂಗಳೂರು: ಕಿರಿಕ್ ಪಾರ್ಟಿ ಡೈರೆಕ್ಟರ್ ರಿಷಬ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರ ಡಿಟೆಕ್ಟಿವ್ ದಿವಾಕರ, ಕನ್ನಡಿಗರ ಮನೆ ಮನ ಗೆದ್ದು, ಈಗಾಗಲೇ 50 ದಿನದತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾವನ್ನು ಒಲವೇ ಮಂದಾರ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಸದ್ಯ ಬೆಲ್ ಬಾಟಂ ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದು, ಆಯಾ ಭಾಷೆಗಳಲ್ಲಿ ಬೆಲ್ ಬಾಟಂನ್ನು ಯಾರು ಧರಿಸುತ್ತಾರೋ ಅನ್ನೋ ಕುತೂಹಲ ಎಲ್ಲರಲ್ಲಿದೆ.

    ಕನ್ನಡದಲ್ಲಿ ರಿಷಬ್ ಶೆಟ್ಟಿ ಮಾಡಿದ್ದ ಡಿಟೆಕ್ಟಿವ್ ಪಾತ್ರವನ್ನು ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಅಭಿನಯಿಸುವ ಸಾಧ್ಯತೆ ಇದೆಯಂತೆ. ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಿರುವ ಸಾಹಸ ನಿರ್ದೇಶಕ ರವಿ ವರ್ಮ ಆಯುಷ್ಮಾನ್ ಖುರಾನ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರಂತೆ. ಇನ್ನು ಆಯುಷ್ಮಾನ್ ನಿರ್ಧಾರವನ್ನಷ್ಟೇ ಹೇಳಬೇಕಿದೆ. ತೆಲುಗಿನಲ್ಲಿ ನಾನಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಾಲಿವುಡ್ ನಲ್ಲಿ ನಟ ಆರ್ಯ ಪತ್ತೇದಾರಿ ದಿವಾಕರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಷ್ಟೇ ಹೊರ ಬೀಳಬೇಕಿದೆ.

    ಈಗಾಗಲೇ ಮೂರು ಭಾಷೆಗಳಲ್ಲಿ ರಿಮೇಕ್ ಹಕ್ಕು ಸೋಲ್ಡ್ ಔಟ್ ಆಗಿದೆ. ಎಪ್ಪತ್ತು ಎಂಬತ್ತರ ದಶಕದ ಕಾಲಘಟ್ಟದಲ್ಲಿ ನಡೆಯುವ ಚಿತ್ರದ ಪತ್ತೇದಾರಿ ಕಥೆ ಈಗ ಕರ್ನಾಟಕದಿಂದ ಗಡಿದಾಟಲು ರೆಡಿಯಾಗಿದೆ. ಕನ್ನಡದಲ್ಲಿ ಅಬ್ಬರಿಸಿದ ದಿವಾಕರ ಮಿಕ್ಕ ಭಾಷೆಗಳಲ್ಲಿ ಹೇಗೆಲ್ಲಾ ಕಮಾಲು ಮಾಡಬಹುದೆಂಬುದನ್ನು ಕಾದುನೋಡಬೇಕಿದೆ.

  • ಬುದ್ಧಿಜೀವಿಗಳ ವಿರುದ್ಧ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗರಂ

    ಬುದ್ಧಿಜೀವಿಗಳ ವಿರುದ್ಧ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗರಂ

    – ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವಾನ, ಪರಿಹಾರ

    ಮಂಡ್ಯ: ಬುದ್ಧಿ ಜೀವಿಗಳನ್ನು ದೇಶದಿಂದ ಓಡಿಸಿದ್ರೆ ಎಲ್ಲವೂ ಚೆನ್ನಾಗಿರುತ್ತದೆ. ಅವರು ನಾನ್ ಸೆನ್ಸ್ ಮಾಡುತ್ತಿದ್ದಾರೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬುದ್ಧಿ ಜೀವಿಗಳು ಮಾತುಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಓಡಿಸಿದ್ರೆ ದೇಶ ಚೆನ್ನಾಗಿರುತ್ತದೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು. ದೊಡ್ಡ ಮಟ್ಟದ ವಾರ್ ಡಿಕ್ಲೇರ್ ಮಾಡಬೇಕು. ಐಡೆಂಟಿಟಿ ಕ್ರೈಸಿಸ್‍ನಿಂದ ಕೆಲವರು ಮಾತಾಡ್ತಾರೆ. ವಂದೇ ಮಾತರಂ ಅಂದ್ರೆ ಗುಂಡಾಕ್ತಾರೆ. ಪಾಕಿಸ್ತಾನಕ್ಕೆ ಜೈಕಾರ ಕೂಗುವವರಿಗೆ ಹುಚ್ಚು ಹಿಡಿದಿದೆ. ಇದಕ್ಕೆ ಕೆಲವೊಂದು ರಾಜಕಾರಣ ಕಾರಣವಾಗಿದೆ. ಈ ರೀತಿ ಕೂಗಿದ್ರೆ ಗುರುತಿಸಿಕೊಳ್ಳಬಹುದು ಅಂದುಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಾಗ್ದಾಳಿ ನಡೆಸಿದ್ರು.

    ಗುರು ಕುಟುಂಬದವರಿಗೆ ಸಮಾಧಾನ ಹೇಳೋದು ಬಿಟ್ಟರೆ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳೋದಕ್ಕೆ ಹೆಮ್ಮೆಯಾಗುತ್ತಿದೆ. ನಾವಂತೂ ಬಾರ್ಡರ್ ನಲ್ಲಿ ಹೋಗಿ ದೇಶ ಕಾಯೋ ಕೆಲಸ ಮಾಡಿಲ್ಲ. ಇಲ್ಲಿ ಆರಾಮಾಗಿದ್ದೇವೆ. ಅವರು ನಮ್ಮನ್ನು ಕಾಯುತ್ತಿರುವುದರಿಂದ ನಾವು ಆರಾಮವಾಗಿರಲು ಕಾರಣ ಎಂದು ಅವರು ಹೇಳಿದ್ರು. ಇದನ್ನೂ ಓದಿ; ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ನಾವೆಲ್ಲ ಹೋಗಿ ನಿಮ್ಮ ಜೊತೆ ಇದ್ದೇವೆ ಅಂದ್ರೆ ಅವರಿಗೂ ಸ್ವಲ್ಪ ಧೈರ್ಯ ಬರುತ್ತದೆ. ಯಾಕಂದ್ರೆ ಅವರಿಗೆ ನನ್ನ ಮಗನನ್ನು ಯಾಕಾದ್ರೂ ಸೇನೆಗೆ ಕಳುಹಿಸಿದೆ ಎಂಬಂತಾಗಬಾರದು. ಹೀಗಾಗಿ ಇಡೀ ದೇಶ, ರಾಜ್ಯ ನಮ್ಮ ಜೊತೆಗಿದೆ ಅನ್ನೋ ಭಾವನೆ ತರಿಸಬೇಕು. ಅವರು ಯಾವತ್ತೂ ಮುಂದೆ ನೊಂದುಕೊಳ್ಳಬಾರದು ಎಂದು ಅವರು ತಿಳಿಸಿದ್ರು. ಇದನ್ನೂ ಓದಿ; ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ನಾನು ಕೂಡ ರಿಕ್ಕಿ ಸಿನಿಮಾದ ಶೂಟಿಂಗ್ ಗೆ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿ ಹೋಗಿದ್ದ ನಾನು ಅವರನ್ನು ಗಮನಿಸಿದಂತೆ ಅವರೂ ದಿನದ 24 ಗಂಟೆಯೂ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿಯೊಂದನ್ನು ಚೆಕ್ ಮಾಡುತ್ತಿದ್ದರು. ಅಲ್ಲಿ ಏನೇ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಅವರ ಗಮನ ಇರುತ್ತಿತ್ತು. ಇದನ್ನೂ ಮೀರಿ ಕೆಲವರು ನಮ್ಮ ದೇಶದ ಒಳಗೆ ನುಗಿ ಇಂತಹ ಹೇಯ ಕೃತ್ಯಗಳನ್ನು ನಡೆಸುತ್ತಾರೆ ಅಂದ್ರೆ ಒಳಗೆನೂ ಅವರಿಗೆ ಬೆಂಬಲ ಇರಬಹುದು ಎಂದು ದೇಶದ್ರೋಹಿಗಳ ವಿರುದ್ಧ ಗರಂ ಆದ್ರು.

    ಗುರು ಇಡೀ ದೇಶದ ಹೆಮ್ಮೆ. ಏನೇ ಸಹಾಯ ಮಾಡಿದ್ರು ನೋವನ್ನು ಬರಿಸಲು ಆಗಲ್ಲ. ಇಡೀ ದೇಶ ಜೊತೆ ಇದೆ ಎಂಬುದನ್ನು ತೋರಿಸಿದ್ರೆ ತಾಯಿಗೆ ಧೈರ್ಯ ಇರುತ್ತೆ. ಪರಿಹಾರ ಕೊಟ್ಟರೆ ನೋವನ್ನು ಬರಿಸಲು ಆಗಲ್ಲ. ನಾನು ನೀಡಿದ ಹಣ ನನ್ನದಲ್ಲ. ಸರ್ಕಾರಿ ಶಾಲೆ ಸಿನಿಮಾ ನೋಡಿ ಜನ ಕೊಟ್ಟ ಹಣ. ಅದನ್ನು ಈ ರೀತಿಯ ಸೇವೆಗೆ ಬಳಸುತ್ತಿದ್ದೇನೆ. ಉಗ್ರರ ಕೃತ್ಯಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ರು.

    ಬಳಿಕ ಬೆಲ್‍ಬಾಟಂ ಚಿತ್ರ ತಂಡ ಗುರು ಅವರನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ವಂದನೆ ಸಲ್ಲಿಸಿತ್ತು. ಇದೇ ವೇಳೆ ನಟಿ ಹರಿಪ್ರಿಯ ಅವರು ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆದು ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv