Tag: ಬೆಲ್ಲ

  • ಬಾಲಕಿಯ ಅಚ್ಚರಿ ಬದುಕು- 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸ್ತಿದ್ದಾಳೆ ಈಕೆ!

    ಬಾಲಕಿಯ ಅಚ್ಚರಿ ಬದುಕು- 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸ್ತಿದ್ದಾಳೆ ಈಕೆ!

    ಯಾದಗಿರಿ: ಮನುಷ್ಯ ಸದೃಢವಾಗಿ ಬದುಕಲು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು. ಒಂದು ವೇಳೆ ಒಂದೊತ್ತು ಊಟ ಕಡಿಮೆಯಾದರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದರೆ ಇಲ್ಲೊಬ್ಬಳು ಆಹಾರವಿಲ್ಲದೇ ಕೇವಲ ಬೆಲ್ಲ (Jaggery), ಹಾಲು (Milk) ಹಾಗೂ ನೀರು ಸೇವಿಸಿಯೇ 14 ವರ್ಷದಿಂದ ಬದುಕಿದ್ದಾಳೆ. ಇದೀಗ ಬಾಲಕಿಯ ಆಹಾರ ಪದ್ಧತಿ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.

    ಹೌದು. ಯಾದಗಿರಿ (Yadagiri) ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟ ನಿವಾಸಿ ನಾಗಪ್ಪ-ಅಡಿವೆಮ್ಮ ಎಂಬ ದಂಪತಿಯ 2ನೇ ಮಗಳಾದ ರೇಣುಕಮ್ಮ ಕೇವಲ ಬೆಲ್ಲ ಹಾಗೂ ಹಾಲು ಸೇವಿಸಿ ಬರೊಬ್ಬರಿ 14 ವರ್ಷದಿಂದ ಬದುಕಿದ್ದಾಳೆ. ಈ ರೇಣುಕಮ್ಮ (Renukamma) 14 ವರ್ಷದ ಬಾಲಕಿ. ರಂಗಂಪೇಟೆಯ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ.

    ರೇಣುಕಮ್ಮ ತಮ್ಮ ಮನೆಯಲ್ಲಿ ತಾನೇ ಅಡುಗೆ ತಯಾರು ಮಾಡ್ತಾಳೆ. ಆದರೆ ತಯಾರಿಸಿದ ಯಾವುದೇ ಅಡುಗೆಯನ್ನು ಊಟ ಮಾತ್ರ ಮಾಡುವುದಿಲ್ಲ. ಮನೆಯಲ್ಲಿ ಅವರ ತಂದೆ-ತಾಯಿ, ಸಹೋದರರು ಹಾಗೂ ತಮ್ಮ ಕ್ಲಾಸಿನ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದ್ರು ಊಟ ಮಾತ್ರ ಮಾಡೋದಿಲ್ಲ. ಯಾಕಂದ್ರೆ ಈ ಬಾಲಕಿ ರೇಣುಕಮ್ಮನಿಗೆ ಊಟ ಮಾಡಿದ್ರೆ ವಾಂತಿ ಆಗುತ್ತಂತೆ. ಇನ್ನು ಬಾಲಕಿ ಸೇವಿಸುವ ಆಹಾರ ಪದ್ಧತಿ ಬಗ್ಗೆಯೂ ವೈದ್ಯರು ತಪಾಸಣೆ ಮಾಡಿದ್ರು ಸಹ ಅದು ಸಾಧ್ಯವಾಗಿಲ್ಲ. ಈ ಬಾಲಕಿಯ ಆಹಾರ ಪದ್ಧತಿ ಇಡೀ ವೈದ್ಯಲೋಕಕ್ಕೆ ಸವಾಲೆಸೆದಂತಿದೆ.

    ಈ 14 ವರ್ಷದ ಬಾಲಕಿ ರೇಣುಕಮ್ಮ ಆಟ-ಪಾಠ ಎಲ್ಲವೂ ಚೆನ್ನಾಗಿಯೇ ಮಾಡ್ತಾಳೆ. ಆದರೆ ಊಟ ಮಾತ್ರ ಮಾಡಲ್ಲ, ಹುಟ್ಟಿದಾಗಿನಿಂದಲೂ ಕೇವಲ ಬೆಲ್ಲ, ಹಾಲು ಮಾತ್ರ ಸೇವಿಸುತ್ತಾ ಬದುಕಿದ್ದಾಳೆ. ಇತ್ತೀಚಿಗೆ ಅವರ ಕ್ಲಾಸ್‍ಮೆಟ್ ಬೆಲ್ಲ ತಿಂತಾಳೆ ಅಂತ ಅಪಹಾಸ್ಯ ಮಾಡ್ತಿದ್ದರಂತೆ. ಅದಕ್ಕಾಗಿ ಮಧ್ಯಾಹ್ನ ಹೊತ್ತು ಬೆಲ್ಲ ತಿನ್ನೋದನ್ನು ರೇಣುಕಾ ಬಿಟ್ಟಿದ್ದಾಳೆ. ಇದರಿಂದಾಗಿ ಈಗ ಒಂದು ದಿನಕ್ಕೆ ಕೇವಲ ಎರಡು ಹೊತ್ತು ಮಾತ್ರ ಬೆಲ್ಲ, ಹಾಲು ಸೇವನೆ ಮಾಡ್ತಿದ್ದಾಳೆ. ಬಾಲಕಿ ರೇಣುಕಮ್ಮನಿಗೆ ಯಾವುದಾದ್ರು ಖಾಯಿಲೆ ಇದೇನಾ ಅಂತ ವೈದ್ಯಕೀಯ ತಪಾಸಣೆ ಮಾಡಿದ್ರೆ ಯಾವುದೇ ಖಾಯಿಲೆ ಪತ್ತೆ ಆಗಿಲ್ವಂತೆ. ಬಾಲಕಿಯ ಆಹಾರ ಪದ್ಧತಿಯಾದ ಬೆಲ್ಲ ಹಾಗೂ ಹಾಲು ಮಾತ್ರ ಸೇವಿಸುವುದರಿಂದ ಎಲ್ಲರನ್ನು ಅಚ್ಚರಿಗೊಳಿಸಿದೆ. ರೇಣುಕಮ್ಮ ಐದು ವರ್ಷದ ಮಗುವಿದ್ದಾಗ ಬೆಲ್ಲ-ಹಾಲು ಈ ಆಹಾರ ಪದ್ಧತಿಯನ್ನು ತಪ್ಪಿಸಲು ಅವರ ಪೋಷಕರು ಕೊಟ್ಟಿರಲಿಲ್ವಂತೆ, ಆಗ ಕೇವಲ ನೀರನ್ನು ಕುಡಿದಿದ್ದಳಂತೆ. ಬಳಿಕ ಹೆತ್ತ ಕರುಳು ಚುರುಕ್ ಅಂದು ಬೆಲ್ಲ-ಹಾಲು ನೀಡಿದ್ರಂತೆ. ನಮ್ಮ ಮಗಳು ಕೇವಲ ಬೆಲ್ಲ-ಹಾಲು ಸೇವನೆ ಮಾಡ್ತಾಳೆ. ಆಕೆ ಹುಟ್ಟಿದಾಗಿನಿಂದಲೂ ಈ ಸಮಸ್ಯೆ ಎದುರಾಗಿದೆ. ಇದು ನಮ್ಮನ್ನು ವಿಚಲಿತಗೊಳಿಸಿದೆ. ಯಾವ ಆಸ್ಪತ್ರೆಯಲ್ಲಿ ತೋರಿಸಬೇಕು ಎಂಬ ಆತಂಕವಾಗಿದೆ. ಜೊತೆಗೆ ನಮ್ಮಲ್ಲಿ ಹಣಕಾಸಿನ ಕೊರತೆಯಾಗಿದೆ ಅಂತ ಅಳಲು ತೋಡಿಕೊಂಡಿದ್ದಾರೆ.

    ಒಟ್ನಲ್ಲಿ ಬಾಲಕಿ ರೇಣುಕಮ್ಮ ಹುಟ್ಟಿ 14 ವರ್ಷವಾಯಿತು. ಅಂದಿನಿಂದ ಇಂದಿನವರೆಗೆ ಕೇವಲ ಬೆಲ್ಲ-ಹಾಲಿನಿಂದ ಬದುಕಿದ್ದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಇನ್ನೊಂದು ಕಡೆ ದಿನದಿಂದ ದಿನಕ್ಕೆ ಬಾಲಕಿಯ ಶಕ್ತಿ ಕುಂದುತ್ತಿದೆ ಎಂದು ಪೋಷಕರು ಕಂಗಾಲಾಗಿದ್ದಾರೆ. ಹೀಗಾಗಿ ಬಡತನದ ಬೇಗುದಿಯಲ್ಲಿ ಬಳಲುತ್ತಿರುವ ಬಾಲಕಿ ರೇಣುಕಮ್ಮನಿಗೆ ಸರ್ಕಾರದ ನೆರವಿಗೆ ಕಾಯುತ್ತಿದ್ದಾರೆ.

  • ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

    ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

    ನ್ನಡದ ಹಿರಿಯ ನಟಿ, ಮಂಡ್ಯ (Mandya) ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ (Sumalata Ambarish), ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆಯಾಗಿ ಬೆಲ್ಲ (Organic Jaggery) ನೀಡಿದರು. ಇಂದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಗೆ ಉಡುಗೊರೆಯಾಗಿ ಬೆಲ್ಲ ನೀಡಿದಾಗ, ಪ್ರಧಾನಿ ಮುಖದಲ್ಲಿ ಮಂದಹಾಸವಿತ್ತು. ಅಲ್ಲದೇ, ಪಕ್ಕದಲ್ಲೇ ಇದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಕ್ಷಣ ಹೊತ್ತು ಉಡುಗೊರೆ ಬಗ್ಗೆ ವಿವರಿಸಿದ್ದು ವಿಶೇಷವಾಗಿತ್ತು.

    ಈ ಕುರಿತಾಗಿ ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ, ‘ನನ್ನ ಸ್ವಾಭಿಮಾನಿ ಮಂಡ್ಯ ಕ್ಷೇತ್ರದಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ, ಮಂಡ್ಯದ ಗುರುತಾಗಿರುವ ‘ಬೆಲ್ಲ’ವನ್ನು ಉಡುಗೊರೆಯಾಗಿ ನೀಡಿದೆ. ಮಾನ್ಯ ಪ್ರಧಾನ ಮಂತ್ರಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಈ ನೆಲದ ಅಸ್ಮಿತೆಯಾಗಿರುವ ಬೆಲ್ಲದ ಉಡುಗೊರೆಯನ್ನು ಸ್ವೀಕರಿಸಿದ್ದು ಸಂಭ್ರಮ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲಿಂಗಭೈರವಿ ದೇವಿಯ ಮೋರೆ ಹೋದ ಸಮಂತಾ

    ಮಂಡ್ಯ ಸಕ್ಕರೆ ಮತ್ತು ಬೆಲ್ಲದ ನಾಡು. ಕಬ್ಬು ಈ ಭಾಗದ ಪ್ರಮುಖ ಬೆಳೆಯೂ ಹೌದು. ಸುಮಲತಾ ಸಂಸದೆಯಾದ ನಂತರ ಮಂಡ್ಯದಲ್ಲಿ ತಯಾರಾಗುವ ಬೆಲ್ಲದ ಬಗ್ಗೆ ಸಂಸತ್ತಿನಲ್ಲೂ ಮಾತನಾಡಿದ್ದರು. ಬೆಲ್ಲದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ಅಲ್ಲದೇ, ಸಾವಯವ ಬೆಲ್ಲಕ್ಕೆ ಬೆಂಬಲ ಬೆಲೆ ಘೋಷಿಸಿಬೇಕೆಂದು ಸಂಸತ್ತಿನಲ್ಲಿ ಮನವಿ ಕೂಡ ಮಾಡಿದ್ದರು. ಕಬ್ಬು ಬೆಳೆಗಾರರ ಅನೇಕ ಹೋರಾಟಗಳಲ್ಲಿ ಭಾಗಿಯಾದವರು. ಹಾಗಾಗಿ ರೈತರ ಪರವಾಗಿ ಬೆಲ್ಲವನ್ನು ಪ್ರಧಾನಿಗೆ ನೀಡಿದ್ದಾರೆ.

    ಪ್ರಧಾನಿಗೆ ಇಂದು ನೀಡಿದ ಉಡುಗೊರೆಯಲ್ಲಿ ಬೆಲ್ಲದುಡುಗೊರೆ ವಿಶೇಷವಾಗಿತ್ತು. ಅಲಂಕೃತ ಬುಟ್ಟಿಯಲ್ಲಿ ಬೆಲ್ಲದ ಚೌಕಾಕೃತಿಯ ತುಂಡುಗಳನ್ನು ಹಾಕಿ, ಸಾವಯವಬೆಲ್ಲವನ್ನೂ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಬೆಲ್ಲದ ಕುರಿತು ಕೆಲ ಹೊತ್ತು ಮಾತೂ ಆಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಕೂಡ ಕೇಳಿ ಬಂತು.

     

  • ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ

    ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ

    ನೀವು ಹೆಚ್ಚು ಮಸಾಲೆ ದೋಸೆ, ಸೆಟ್​ ದೋಸೆ ಈರುಳ್ಳಿ ದೋಸೆ ಮಾಡುತ್ತೇವೆ. ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು. ಫಟ್​ ಅಂತ ತಯಾರಾಗುವ ಈ ಸರಳ ದೋಸೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ ಹಿಟ್ಟು- 1 ಕಪ್
    * ಗೋಧಿ ಹಿಟ್ಟು- 2 ಕಪ್
    * ಬೆಲ್ಲದ ಪುಡಿ- ಕಪ್
    * ತೆಂಗಿನ ತುರಿ – ಅರ್ಧ ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಸೋಡ- ಸ್ವಲ್ಪ
    * ತುಪ್ಪ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಪಾತ್ರೆಯೊಂದಕ್ಕೆ ಬೆಲ್ಲವನ್ನು ಹಾಕಿ, ಕಾಯಿಸಿ ಶೋಧಿಸಿಟ್ಟುಕೊಂಡಿರಬೇಕು.
    * ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು, ಅಡುಗೆ ಸೋಡ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.

    * ನಂತರ ದೋಸೆ ಮಿಶ್ರಣಕ್ಕೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

    * ತವಾವನ್ನು ಬಿಸಿ ಮಾಡಿ ದೋಸೆ ಆಕಾರದಲ್ಲಿ ಮಿಶ್ರಣವನ್ನು ಹಾಕಿ ಬೇಯಿಸಿದರೆ ರುಚಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಹಿಂದೂಗಳಲ್ಲಿ ಹಲವು ಹಬ್ಬಗಳಿವೆ, ಆದರೆ ಯುಗಾದಿ ಹಬ್ಬ ಬಹಳ ಮುಖ್ಯವಾದ ಹಬ್ಬ. ಏಕೆಂದರೆ ಇದು ಹಿಂದೂಗಳಿಗೆ ಹೊಸವರ್ಷದ ಮೊದಲ ದಿನವಾಗಿರುತ್ತೆ. ಹಿಂದೂಗಳು ಹೊಸಸಂಕಲ್ಪಗಳನ್ನು ಹಾಕಿಕೊಂಡು ಮುಂದೆ ನಡೆಯುವ ದಿನ ಇದು. ಯುಗಾದಿ ಎಂಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಈ ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ.

    Telugu New Year Ugadhi || How to make Ugadhi Pachadi - Subbu Cooks

    ಶತಾಯುರ್ವಜ್ರ ದೇಹಾಯ, ಸರ್ವ ಸಂಪತ್ಕರಾಯ ಚ
    ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ

    ಇದರರ್ಥ, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಈ ಶ್ಲೋಕ ಹೇಳಿ ಬೇವು-ಬೆಲ್ಲ ಸೇವಿಸಬೇಕು. ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುತ್ತೆ ಎಂದು ನಂಬಲಾಗುತ್ತೆ. ಬೆಲ್ಲ ಸಂತೋಷದ ಸಂಕೇತವಾಗಿರುತ್ತೆ. ಇವೆರೆಡು ಮನುಷ್ಯ ಜೀವನದ ಕಷ್ಟ-ಸುಖದ ಪ್ರತೀಕವಾಗಿದೆ.

    ಪುರಾಣದ ಪ್ರಕಾರ ಯುಗದಿ ದಿನದಂದು ಬ್ರಹ್ಮ ದೇವನು ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ಪ್ರತೀತಿಯಿದೆ. ಅಂದಿನಿಂದಲೇ ವರ್ಷ, ಖುತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆಯಿದೆ. ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಈ ವರ್ಷ ನಾವು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದು ಯೋಜನೆ ಹಾಕಿಕೊಳ್ಳುವ ದಿನ ಇಂದು.

    ಯುಗಾದಿ ಹಿನ್ನೆಲೆ: ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀ ರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ. ಅಯೋಧ್ಯೆ ಪ್ರಜೆಗಳು ಸಂತೋಷಪಟ್ಟು, ಮನೆಯ ಮುಂದೆ ವಿಜಯ ಪತಾಕೆ ಹಾರಿಸುವ ದಿನ. ಇಂದಿಗೂ ಸಹ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ದತಿ ಇದೆ.

  • ಸಂಕ್ರಾಂತಿ ವಿಶೇಷ – ಸಿಹಿಯಾದ ಕ್ರಿಸ್ಪಿ ಎಳ್ಳು ಚಿಕ್ಕಿ ಮಾಡುವ ವಿಧಾನ

    ಸಂಕ್ರಾಂತಿ ವಿಶೇಷ – ಸಿಹಿಯಾದ ಕ್ರಿಸ್ಪಿ ಎಳ್ಳು ಚಿಕ್ಕಿ ಮಾಡುವ ವಿಧಾನ

    ಸೌರಮಂಡಲದ ಅಧಿಪತಿ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಕಾಲ ಮಕರ ಸಂಕ್ರಾಂತಿ. ಸಂಕ್ರಾಂತಿ ಎಂದೊಡನೆ ದಕ್ಷಿಣ ಭಾರತದ ಮನೆಮನೆಯಲ್ಲಿ ಎಳ್ಳು ಬೆಲ್ಲದ್ದೆ ದರ್ಬಾರು. ವರ್ಷದ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿಯಾಗಿದ್ದು, ಈ ವಿಶೇಷ ದಿನದಂದು ಜನ ಎಳ್ಳು ಬೆಲ್ಲ ತಿಂದು ಬಾಹಿ ಸಿಹಿ ಮಾಡಿಕೊಳ್ಳುತ್ತಾರೆ. ಅಲ್ಲದೆ ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಕೂಡ ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ.

    ಈ ಬಾರಿ ಸಂಕ್ರಾಂತಿ ದಿನದಂದು ಮನೆಯಲ್ಲೇ ತಕ್ಷಣಕ್ಕೆ ಸುಲಭ ಮತ್ತು ಸರಳವಾಗಿ ಮನೆಯಲ್ಲಿಯೇ ಎಳ್ಳು ಚಿಕ್ಕಿ ಮಾಡಿ ಸವಿಯಿರಿ. ಇದು ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಮತ್ತು ದೊಡ್ಡವರಿಗೆ ಬಹಳ ಇಷ್ಟವಾದ ತಿನಿಸಾಗಿದೆ.

    ಎಳ್ಳು ಚಕ್ಕಿ ಮಾಡಲು ಬೇಕಾಗುವ ಸಾಮಾಗ್ರಿಗಳು :

    * ಬಿಳಿ ಎಳ್ಳು – ಒಂದು ಕಪ್
    * ಬೆಲ್ಲ – ಒಂದು ಕಪ್
    * ಏಲಕ್ಕಿ – ಎರಡು
    * ತುಪ್ಪ – ಒಂದು ಟೀ ಸ್ಪೂನ್

    ಎಳ್ಳು ಚಕ್ಕಿ ಮಾಡುವ ವಿಧಾನ:

    * ಮೊದಲಿಗೆ ಒಂದು ಪ್ಯಾನ್‍ಗೆ 1 ಕಪ್ ಬಿಳಿ ಎಳ್ಳನ್ನು ಹಾಕಿ 2 ರಿಂದ 3 ನಿಮಿಷ ಹುರಿಯಬೇಕು. ಬಳಿಕ ಫ್ರೈ ಮಾಡಿದ ಎಳ್ಳನ್ನು ಒಂದು ತಟ್ಟೆಗೆ ಹಾಕಬೇಕು.
    * ನಂತರ ಅದೇ ಪ್ಯಾನ್‍ಗೆ ಒಂದು ಕಪ್ ಪುಡಿ ಮಾಡಿದ ಬೆಲ್ಲವನ್ನು ಸುರಿದು ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕುದಿಸಬೇಕು. ಎಷ್ಟು ಪ್ರಮಾಣದ ಎಳ್ಳನ್ನು ತೆಗೆದುಕೊಳ್ಳುತ್ತೀರೋ ಅಷ್ಟೇ ಪ್ರಮಾಣದ ಬೆಲ್ಲವನ್ನು ಎಳ್ಳು ಚಿಕ್ಕಿಗೆ ಬಳಸಬೇಕು.

    * ಬೆಲ್ಲ ಕರಗಿ ಪಾಕ ತಯಾರಾದ ನಂತರ ಕುಟ್ಟಿಕೊಂಡಿರುವ 2 ಏಲಕ್ಕಿ ಬೆರಸಬೇಕು.
    * ನಂತರ ಒಂದು ಟೀ ಸ್ಪೂನ್ ತುಪ್ಪವನ್ನು ಹಾಕಬೇಕು. ಬಳಿಕ ಸ್ಟವ್ ಆಫ್ ಮಾಡಿ ಹುರಿದಿಟ್ಟುಕೊಂಡಿದ್ದ ಎಳ್ಳನ್ನು ಬೆಲ್ಲದ ಪಾಕದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.

    *ಬಟರ್ ಪ್ಲೇಟ್ ಅಥವಾ ಪ್ಲಾಸ್ಟಿಕ್ ಪೇಪರ್ ಮೇಲೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸವರಿ ಅದರ ಮೇಲೆ ಬಿಸಿಬಿಸಿಯಾದ ಎಳ್ಳು ಚಿಕ್ಕಿಯ ಮಿಶ್ರಣ ಹಾಕಬೇಕು.
    * ಬಳಿಕ ಒಂದು ಲಟ್ಟಣೆ ತೆಗೆದುಕೊಂಡು ಅದಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿ ಎಳ್ಳು ಚಕ್ಕಿಯನ್ನು ತೆಳ್ಳಗೆ ಲಟ್ಟಿಸಿ ಹದಮಾಡಿಕೊಳ್ಳಬೇಕು. ಚಾಕು ತೆಗೆದುಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಎಳ್ಳು ಚಿಕ್ಕಿಯನ್ನು ಕಟ್ ಮಾಡಿ 10 ನಿಮಿಷಗಳ ನಂತರ ಅದನ್ನು ಹೊರತೆಗೆದುಕೊಂಡರೆ ಎಳ್ಳಿನ ಚಿಕ್ಕಿ ಸವಿಯಲು ಸಿದ್ದ.

  • ಮಂಡ್ಯದಲ್ಲಿ ನಕಲಿ ಬೆಲ್ಲದ ಹಾವಳಿ – ಕ್ರಮಕ್ಕೆ ಆಗ್ರಹ

    ಮಂಡ್ಯದಲ್ಲಿ ನಕಲಿ ಬೆಲ್ಲದ ಹಾವಳಿ – ಕ್ರಮಕ್ಕೆ ಆಗ್ರಹ

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಅಂದರೆ ಇಡೀ ರಾಜ್ಯದಲ್ಲಿ ಬೆಲ್ಲಕ್ಕೆ ಫುಲ್ ಫೇಮಸ್ ಆಗಿರುವ ಜಿಲ್ಲೆ. ಇಲ್ಲಿನ ಆಲೆಮನೆಗಳಲ್ಲಿ ಮಾಡುವ ರಾಸಾಯನಿಕ ರಹಿತ ಬೆಲ್ಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಬೇಡಿಕೆ ಇದೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಬೆಲ್ಲದ ಗುಣಮಟ್ಟ ಕೆಡುವುದರ ಜೊತೆಗೆ ಈ ಜಿಲ್ಲೆಯ ಬೆಲ್ಲದ ವರ್ಚಸ್ಸು ಕೂಡ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಉತ್ತರ ಭಾರತದಿಂದ ಬಂದಿರುವ ಆಲೆಮನೆಯ ಕೆಲಸಗಾರರು ಹಾಗೂ ಮಾಲೀಕರು. ಇವರು ತಯಾರು ಮಾಡುತ್ತಿರುವ ಬೆಲ್ಲದ ವಿಧಾನದಿಂದ ಮಂಡ್ಯ ಬೆಲ್ಲ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತಿದೆ.

    ಹೌದು. ಉತ್ತರ ಭಾರತದಿಂದ ಬಂದಿರುವ ಆಲೆಮನೆಯ ಮಾಲೀಕರು ಹಾಗೂ ಕೆಲಸಗಾರರು ಪಾಂಡವಪುರದಲ್ಲಿ ಅತೀ ಹೆಚ್ಚು ಆಲೆಮನೆಗಳಲ್ಲಿ ರಾಸಾಯನಿಕ ಬಳಸಿ ಬೆಲ್ಲವನ್ನು ತಯಾರು ಮಾಡುತ್ತಿದ್ದಾರೆ. ಬಣ್ಣ ಬರುವ ಉದ್ದೇಶದಿಂದ ಜೀವಕ್ಕೆ ಹಾನಿಕಾರವಾಗಿರುವ ರಾಸಾಯನಿಕವನ್ನು ಬೆಲ್ಲ ತಯಾರಿಕೆ ವೇಳೆ ಬಳಸಲಾಗುತ್ತಿದೆ. ಇದಲ್ಲದೆ ಇಳುವರಿ ಬರಲು ಹಾಗೂ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಕೆಳಮಟ್ಟದ ಸಕ್ಕರೆಯನ್ನು ಬೆಲ್ಲಕ್ಕೆ ಸುರಿಯಲಾಗುತ್ತಿದೆ. ಈ ಸಕ್ಕರೆ ತಿನ್ನಲು ಯೋಗ್ಯವಿರುವುದಿಲ್ಲ. ಇದರಿಂದ ಅಧಿಕ ಲಾಭಗಳಿಸಬಹುದು ಎಂದು ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾರೆ.

    ಈ ರೀತಿ ಕೆಮಿಕಲ್ ಬೆಲ್ಲವನ್ನು ಸೇವನೆ ಮಾಡಿದರೆ ಬೋನ್ ಕ್ಯಾನ್ಸರ್ ಅಂತಹ ರೋಗಗಳು ಬರುವ ಸಾಧ್ಯತೆಗಳಿವೆ. ಹೀಗಾಗಿ ಮಂಡ್ಯ ಬೆಲ್ಲವನ್ನು ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ಮೂಲ ಆಲೆಮನೆ ಮಾಲೀಕರಿಗೆ ತೊಂದರೆಯುಂಟಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಾತ್ರ ಈ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಆಹಾರ ಇಲಾಖೆಯ ನಿರ್ದೇಶಕರಿಗೆ ವರದಿ ನೀಡಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

  • ಬದಲಾಗ್ತಿದೆ ಹವಾಮಾನ- ನಿಮ್ಮ ಆಹಾರದಲ್ಲಿರಲಿ ಬೆಲ್ಲ

    ಬದಲಾಗ್ತಿದೆ ಹವಾಮಾನ- ನಿಮ್ಮ ಆಹಾರದಲ್ಲಿರಲಿ ಬೆಲ್ಲ

    -ಬೆಲ್ಲದಿಂದಾಗುವ 5 ಆರೋಗ್ಯಕರ ಲಾಭಗಳು

    ಳೆದ ಕೆಲ ದಿನಗಳಿಂದ ಹವಾಮಾನದಲ್ಲಿ ವಿಪರೀತ ಬದಲಾವಣೆ ಆಗುತ್ತಿದೆ. ದಿಢೀರ್ ಅಂತ ಬರೋ ಮಳೆ, ಕೆಲವೊಮ್ಮೆ ದಿನವಿಡೀ ಮೋಡ ಮುಸುಕಿದ ವಾತಾವರಣ ಹಿರಿಯ ಜೀವಿಗಳನ್ನು ಮುದ್ದೆ ಮಾಡುತ್ತವೆ. ಇತ್ತ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಮಕ್ಕಳು ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಆಹಾರದಲ್ಲಿ ಮಿತವಾಗಿ ಬೆಲ್ಲ ಬಳಕೆ ಮಾಡೋದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

    ನೀವು ಪ್ರತಿದಿನ ಮಾಡುವ ಅಡುಗೆಗಳಲ್ಲಿ ಬೆಲ್ಲ ಬಳಸುವುದರಿಂದ ನಿಮಗೆ ಅದು ಐರನ್ ಶಕ್ತಿಯನ್ನು ನೀಡುತ್ತದೆ. ಬೆಲ್ಲದಿಂದ ಮಾಡುವ ಸಿಹಿ ತಿಂಡಿ, ಬೆಲ್ಲದ ಟೀ, ಸಾಂಬಾರ್ ನಲ್ಲಿ ಸ್ವಲ್ಪ ಬೆಲ್ಲ ಹಾಕುವದರಿಂದ ಹೊಸ ರುಚಿಯ ಜೊತೆಗೆ ಗುಣಮಟ್ಟದ ಆಹಾರ ಸಿದ್ಧವಾಗುತ್ತದೆ.

    ಆಹಾರದಲ್ಲಿ ಬೆಲ್ಲದ ಬಳಕೆಯಿಂದಾಗುವ 5 ಪ್ರಯೋಜನಗಳು
    1. ಹೀಮೋಗ್ಲೊಬಿನ್ ಹೆಚ್ಚಳ: ಬೆಲ್ಲದಲ್ಲಿ ಐರನ್ ಪ್ರಮಾಣ ಯಥೇಚ್ಛವಾಗಿರುತ್ತದೆ. ಆಹಾರದಲ್ಲಿ ಬೆಲ್ಲ ಬಳಸುವದರಿಂದ ಸಹಜವಾಗಿ ಹಿಮೋಗ್ಲೊಬಿನ್ ಪ್ರಮಾಣ ಸಹಜವಾಗಿ ಹೆಚ್ಚಳವಾಗುತ್ತದೆ. ಅನಿಮಿಯಾ ರೋಗಿಗಳಿಗೆ ಬೆಲ್ಲದ ಅಮೃತ ಎಂದು ಹೇಳಲಾಗುತ್ತದೆ.
    2. ರಕ್ತದೊತ್ತಡದ ನಿಯಂತ್ರಣ: ಪ್ರತಿದಿನ ಆಹಾರದಲ್ಲಿ ಬೆಲ್ಲ ಬಳಸುವದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ತರಬಹುದು. ರಕ್ತದೊತ್ತಡದ ಸಮಸ್ಯೆ ಇರೋ ರೋಗಿಗಳಿಗೆ ವೈದ್ಯರು ಬೆಲ್ಲ ಸೇವನೆಯ ಸಲಹೆ ನೀಡುತ್ತಾರೆ.

    3. ಚಳಿಯಿಂದ ರಕ್ಷಣೆ: ವಾತಾವರಣದಲ್ಲಿ ವ್ಯತ್ಯಾಸ ಆಗುತ್ತಿರುವ ಹಿನ್ನೆಲೆಯಲ್ಲಿ ಶೀತ ಸಂಬಂಧಿತ ರೋಗಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆಲ್ಲದ ಹೆಚ್ಚು ಉಷ್ಣಾಂಶ ಹೊಂದಿರುವ ವಸ್ತು ಆಗಿರೋದರಿಂದು ಅದು ಮಕ್ಕಳನ್ನು ಬೆಚ್ಚಗಿರುಸುತ್ತದೆ. ಮಳೆಗಾಲದಲ್ಲಿ ಜನರು ಕಡ್ಲೆ ಹಿಟ್ಟು ಮತ್ತು ಬೆಲ್ಲ ಸೇರಿಸಿ ಪಾನಕ ತಯಾರಿಸಿ ಸೇವಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಸಣ್ಣ ಜ್ವರ ಕಾಣಿಸಿಕೊಂಡ್ರೆ ಕಾಳು ಮೆಣಸು, ಶುಂಠಿ ಮತ್ತು ಬೆಲ್ಲ ಹಾಕಿ ತಯಾರಿಸಿದ ಕಷಾಯ ಸೇವಿಸುತ್ತಾರೆ.
    4. ಮೂಳೆಗಳಿಗೆ ಸಹಕಾರಿ: ಬೆಲ್ಲ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಅಂಶವನ್ನು ಸಹ ಒಳಗೊಂಡಿರುತ್ತದೆ. ನಿಯಮಿತವಾಗಿ ಬೆಲ್ಲ ಸೇವಿಸುವದರಿಂದ ಮೂಳೆಗಳು ಬಲಗೊಳ್ಳುತ್ತವೆ. ಬೆಲ್ಲ ಮತ್ತು ಶುಂಠಿ ಎರಡೂ ಸೇರಿಸಿ ತಿನ್ನುವದರಿಂದ ಮೊಳಕಾಲಿನ ನೋವು ಕಡಿಮೆ ಆಗುತ್ತದೆ ಎಂದು ಮನೆಯಲ್ಲಿ ಹೇಳಿರೋದನ್ನು ನೀವು ಕೇಳಿರಬಹುದು.

    5. ತ್ವಚೆಯ ರಕ್ಷಣೆ: ನಿಮ್ಮ ಆಹಾರದ ಜೊತೆ ಬೆಲ್ಲ ಸೇವಿಸುವರಿಂದ ತ್ವಚೆಯ ರಕ್ಷಣೆ ಸಹ ಆಗುತ್ತದೆ. ಬೆಲ್ಲದಲ್ಲಿನ ಅಂಶಗಳು ಬ್ಲಡ್ ಪ್ಯೂರಿಫೈ ಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಬೆಲ್ಲ ಸೇವನೆಯುಂದ ನಿಮ್ಮ ತ್ವಚೆ ಗ್ಲೋ ಆಗುತ್ತದೆ.

  • ಶಿರಸಿಯಲ್ಲಿ ಆಲೆಮನೆ ಹಬ್ಬ- ಬೆಲ್ಲಕ್ಕೆ ಬಂತು ಬರಪೂರ ಡಿಮ್ಯಾಂಡ್

    ಶಿರಸಿಯಲ್ಲಿ ಆಲೆಮನೆ ಹಬ್ಬ- ಬೆಲ್ಲಕ್ಕೆ ಬಂತು ಬರಪೂರ ಡಿಮ್ಯಾಂಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ, ಸಿದ್ದಾಪುರ ಭಾಗದಲ್ಲಿಗ ಆಲೆಮನೆ ಹಬ್ಬದ ಸುಗ್ಗಿ. ಪ್ರತಿ ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಶಿರಸಿ ಭಾಗದಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡಿ ಹಾಲು ಹಿಂಡಿ ಬೆಲ್ಲ ಮಾಡುವ ಸಂದರ್ಭವಿದು.

    ಈ ಸಂದರ್ಭದಲ್ಲಿ ಶಿರಸಿ, ಸಿದ್ದಾಪುರ ಭಾಗದ ಹಲವು ರೈತರು ಆಲೆಮನೆ ಹಬ್ಬ ಎಂದೇ ಸಂಭ್ರಮದಿಂದ ಆಚರಿಸುತ್ತಾರೆ. ಕಬ್ಬನ್ನು ಕಟಾವು ಮಾಡಿ ಆಲೆಮನೆಯಲ್ಲಿ ಕಬ್ಬಿನ ರಸ ಹಿಂಡುವ ಸಂದರ್ಭದಲ್ಲಿ ಊರಿನ ಜನರಿಗೆ ಹಾಗೂ ನೆಂಟರಿಷ್ಟರಿಗೆ ಕಬ್ಬಿನ ಹಾಲಿನ ಜೊತೆ ಬಿಸಿ ಬಿಸಿ ಬೆಲ್ಲ ಸವಿಯಲು ಆಮಂತ್ರಿಸುತ್ತಾರೆ.

    ಸಂಜೆಯಾಗುತ್ತಿದಂತೆ ಆಲೆಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಎಷ್ಟೇ ಜನರು ಬಂದರೂ ಹಾಲು ಹಾಗೂ ಬೆಲ್ಲ ಸವಿಯಲು ಕೊಡುವುದು ಇಲ್ಲಿನ ರೈತರ ಸಾಂಪ್ರದಾಯವಾಗಿದೆ.

    ತರಹೇವಾರಿ ಕಬ್ಬಿನ ಹಾಲು, ಜೋನಿ ಬೆಲ್ಲ: ಕಬ್ಬನ್ನು ಅರೆದು ಕೇವಲ ಕಬ್ಬಿನ ಹಾಲು ಹಾಗೂ ಬಿಸಿ ಜೋನಿ ಬೆಲ್ಲ ಮಾತ್ರ ಸವಿಯುಲು ಮಾತ್ರ ಈ ಹಬ್ಬ ಸೀಮಿತವಾಗಿಲ್ಲ. ಇಲ್ಲಿ ತರ ತರದ ಕಬ್ಬಿನ ಹಾಲು ಸಹ ತುಂಬಾ ಸವಿಯಲು ಲಭ್ಯವಿರುತ್ತದೆ. ಸಾಂಪ್ರದಾಯಿಕ ಹಾಗೂ ಜೈವಿಕ ಗೊಬ್ಬರದಿಂದ ಕೃಷಿ ಮಾಡಿದ ಕಬ್ಬುಗಳು ಬಲು ರುಚಿಯಾಗಿರುತ್ತದೆ. ಹೀಗಾಗಿ ಕಬ್ಬಿನ ಹಾಲಿನ ಜೊತೆ ಸುಂಟಿ, ನಿಂಬೆ ಹಣ್ಣು ಬೆರತರೆ ಅದರ ಜೊತೆ ನೆಲ್ಲಿಕಾಯಿ ಮಿಶ್ರಿತ ಕಬ್ಬಿನ ಹಾಲು, ಪುದೀನ, ಸೊಗದೆ ಬೇರು, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಔಷಧೀಯ ಗುಣವಿರುವ ಕಬ್ಬಿನ ಹಾಲು ಸವಿಯಲು ಸಿಗುತ್ತದೆ. ಇದರ ಜೊತೆ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ, ಜೀರಿಗೆ ಮಿಡಿ ಮಾವಿನ ಉಪ್ಪಿನ ಕಾಯಿ ಸವಿಯುವ ಜೊತೆ ಮಂಡಕ್ಕಿ ರುಚಿ ಹೆಚ್ಚಿಸುತ್ತದೆ.

    ಶಿರಸಿಯಿಂದ ವಾನಳ್ಳಿ ಬಳಿ ಇರುವ ಭೂಸನಕೇರಿಯ ತವರುಮನೆ ಹೋಮ್ ಸ್ಟೇನಲ್ಲಿ ಆಲೆಮನೆ ಹಬ್ಬ ಆಚರಿಸಲಾಯಿತು. ನೂರಾರು ಜನರು ಈ ಹಬ್ಬದಲ್ಲಿ ಭಾಗಿಯಾಗಿ ವಿವಿಧ ರೀತಿಯ ಕಬ್ಬಿನ ಹಾಲನ್ನು ಸವಿದು ಬೆಲ್ಲದ ರುಚಿ ನೋಡಿದರು. ಇನ್ನೆರಡು ತಿಂಗಳು ಶಿರಸಿ, ಸಿದ್ದಾಪುರ ಭಾಗದಲ್ಲಿ ಆಲೆಮನೆ ಸುಗ್ಗಿ ಯ ಹಬ್ಬ ಇರಲಿದ್ದು ಇದಕ್ಕಾಗಿ ದೂರದೂರಿಂದಲೂ ಜನ ಬಂದು ಸವಿದು ಹೋಗುವ ಜೊತೆಗೆ ಬೆಲ್ಲವನ್ನೂ ಕೊಂಡು ಹೋಗುತ್ತಿರುವುದು ಈ ಆಲೆಮನೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.

    ಹೆಚ್ಚಿದ ಬೇಡಿಕೆ: ಶಿರಸಿಯಲ್ಲಿ ಸಾಂಪ್ರದಾಯಿಕವಾಗಿ ಬೆಳೆದ ಕಬ್ಬಿನ ಬೆಲ್ಲಕ್ಕೆ ಕಳೆದ ಎರಡು ವರ್ಷಗಳಿಂದ ಅತೀ ಹೆಚ್ಚು ಬೇಡಿಕೆ ಹಾಗೂ ಮಾರುಕಟ್ಟೆ ದೊರೆಯುತ್ತಿದೆ. ಸಾದ ಬೆಲ್ಲಕ್ಕೆ ಒಂದು ಕೆಜಿಗೆ 50 ರೂ. 25 ಕೆಜಿಗೆ 1,250 ಮಾತ್ರ ಇದೆ. ಆದರೆ ಈ ಬೆಲ್ಲಕ್ಕೆ 25 ಕೆಜಿಗೆ 2,500 ರೂ. ರಿಂದ 4 ಸಾವಿರದ ವರೆಗೂ ಈ ಬಾರಿ ಬೇಡಿಕೆ ಬಂದಿದ್ದು ಉತ್ತಮ ಮಾರುಕಟ್ಟೆ ದರ ದೊರೆಯುತ್ತಿದೆ.

    ಜೋನಿ ಬೆಲ್ಲ, ಗಟ್ಟಿ ಬೆಲ್ಲಗಳಿಗೆ ಬೆಂಗಳೂರು, ಮುಂಬೈ, ಗೋವಾದಂತ ಪ್ರದೇಶದಲ್ಲಿ ಬೇಡಿಕೆ ಬಂದರೆ ಈಗ ದೇಶವನ್ನೂ ದಾಟಿ ಬೇಡಿಕೆ ಬರುತಿದ್ದು ದುಬೈ, ಅಮೆರಿಕ ದೇಶಕ್ಕೂ ರಫ್ತಾಗುತ್ತಿದೆ. ಮಂಡ್ಯ, ಮೈಸೂರು ನಗರದಲ್ಲಿ ಕಬ್ಬು ಬೆಳೆದ ರೈತರು ಸಾಲದ ಶೂಲಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಆದರೆ ಮಲೆನಾಡು ಭಾಗದ ರೈತರು ಆರ್ಗಾನಿಕ್ ಹಾಗೂ ಸಾಂಪ್ರದಾಯಿಕ ಬೆಲ್ಲಗಳನ್ನು ತಯಾರಿಸಿ ಉತ್ತಮ ಲಾಭದ ಕಡೆ ಮುಖಮಾಡಿದ್ದು ಕಬ್ಬು ಬೆಳಗಾರರಿಗೆ ಮಾದರಿಯಾಗಿದೆ.

  • ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

    ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ ಹೊಡೆದಿದೆ. ಸದಾ ದರ ಇಳಿತದಿಂದ ಕಂಗಾಲಾಗಿದ್ದ ಬೆಲ್ಲ ಉತ್ಪಾದಕರಿಗೆ ಈ ಬಾರಿ ಬಹು ಬೇಡಿಕೆ ಬಂದಿದ್ದು, ಉತ್ಪಾದಕರ ಮೊಗದಲ್ಲಿ ಸಿಹಿ ನಗುವನ್ನು ಮೂಡಿಸಿದೆ.

    ಹೌದು. ಕಳೆದ ಬಾರಿ 25 ಕೆಜಿ ಡಬ್ಬದ ಬೆಲ್ಲಕ್ಕೆ 500 ರಿಂದ 800 ರೂಪಾಯಿ ಕನಿಷ್ಠ ದರ ನಿಗದಿಯಾಗಿತ್ತು. ಹೀಗಾಗಿ ಕಷ್ಟಪಟ್ಟು ಬೆಳದ ರೈತರು ಲಾಭ ಸಿಗದೆ ಅಲ್ಪ ಮಟ್ಟಕ್ಕೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ರು. ಆದರೆ ಈಗ 25 ಕೆಜಿ ಬೆಲ್ಲಕ್ಕೆ 2 ಸಾವಿರ ರೂ. ಏರಿಕೆಯಾಗಿದ್ದು, 2600 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

    ಸದರಿ ಮಾರುಕಟ್ಟೆಯಲ್ಲಿ ಸಿಗುವ 25 ಕೆಜಿ ಅಚ್ಚಿನ ಬೆಲ್ಲ 1200 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ಡಬ್ಬದ ಬೆಲ್ಲಕ್ಕೆ ಮಾತ್ರ ಶುಕ್ರದೆಸೆ ತಿರುಗಿದೆ.

    ಬೆಲೆ ಏರಿಕೆಯಾಗಿದ್ದು ಯಾಕೆ?
    ಕಬ್ಬು ಕಟಾವು ಮಾಡಲು ಒಬ್ಬ ಕೆಲಸಗಾರನಿಗೆ 500 ರೂ. ಕೂಲಿ ನೀಡಬೇಕು. ಇಷ್ಟು ಕೂಲಿ ನೀಡಿದರೂ ಕೆಲಸ ಮಾಡಲು ಕೆಲಸಗಾರರು ಸಿಗುತ್ತಿಲ್ಲ. ಜೊತೆಗೆ ಕಬ್ಬನ್ನು ಅರೆಯಲು ಗಾಣ ಮುಂತಾದ ಕೆಲಸಗಳಿಗೆ ಪ್ರತಿ 25 ಕೆ.ಜಿ. ಡಬ್ಬಕ್ಕೆ 1300 ರೂಪಾಯಿ ತಗಲುತ್ತದೆ. ಅಷ್ಟೇ ಅಲ್ಲದೇ ಬೆಲ್ಲ ತಯಾರಿಸಲು ಲೋಡ್ ಗಟ್ಟಲೆ ಕಟ್ಟಿಗೆ ಬೇಕಾಗುತ್ತದೆ. ಈ ಕಟ್ಟಿಗೆ ಹೊಂದಿಸುವುದೇ ರೈತನಿಗೊಂದು ದೊಡ್ಡ ತಲೆನೋವು. ಹೀಗಾಗಿ ಮೈತುಂಬ ಕೆಲಸವಿರುವ ಈ ಬೆಲ್ಲ ಉತ್ಪಾದನೆಗೆ ಮಲೆನಾಡಿನ ರೈತರು ಮನಸ್ಸು ಮಾಡುತ್ತಿಲ್ಲ. ಇನ್ನು ಈ ಬಾರಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಮಳೆ ಸುರಿದಿದ್ದು ಕಬ್ಬು ಬೆಳೆ ನಷ್ಟವಾಗಿ ಹೋಗಿದೆ. ಈ ಎಲ್ಲ ಕಾರಣದಿಂದಾಗಿ ಬೆಲ್ಲದ ಬೆಲೆಯಲ್ಲಿ ಏರಿಕೆಯಾಗಿದೆ.

    ಮಲೆನಾಡಿನ ಬೆಲ್ಲ ಹೇಗಿರುತ್ತದೆ?: ಕರ್ನಾಟಕದಲ್ಲಿ ಸಂಪ್ರದಾಯಿಕ ಬೆಲ್ಲ ಉತ್ಪಾದನೆಯಲ್ಲಿ ತನ್ನದೇ ಆದ ಸ್ಥಾನವನ್ನ ಗಳಿಸಿಕೊಂಡಿರುವುದು ಮಲೆನಾಡಿನ ಡಬ್ಬಿ ಬೆಲ್ಲ. ಹೆಚ್ಚಾಗಿ ಡಬ್ಬಿಯಲ್ಲಿ ಶೇಖರಿಸಿ ಇಡುವುದರಿಂದ ಇದಕ್ಕೆ ಡಬ್ಬಿ ಬೆಲ್ಲ ಎಂಬ ಹೆಸರು ಬಂದಿದೆ. ಈ ಬೆಲ್ಲ ಹೆಚ್ಚಾಗಿ ಸಾವಯವ ಪದ್ದತಿಯಲ್ಲಿ ತಯಾರಾಗುತ್ತದೆ. ನೋಡಲು ಕಪ್ಪು ಮಿಶ್ರಿತ ಬಣ್ಣದಲ್ಲಿದ್ದು ಹರಳು ಹಾಗೂ ಜೇನಿನಂತೆ ತೆಳುವಾಗಿರುತ್ತದೆ. ಅಚ್ಚಿನ ಬೆಲ್ಲಕ್ಕಿಂತ ಹೆಚ್ಚು ಸಿಹಿಯಾಗಿದ್ದು ಸುಣ್ಣದ ಮಿಶ್ರಣ ಅತ್ಯಲ್ಪ. ಜೊತೆಗೆ ಡಬ್ಬಿ ಬೆಲ್ಲ ನಾಲ್ಕೈದು ವರ್ಷ ಹಾಳಾಗುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಸೇರಿದಂತೆ ವಿದೇಶಗಳಲ್ಲಿಯೂ ಡಬ್ಬಿ ಬೆಲ್ಲಕ್ಕೆ ವಿಶೇಷ ಬೇಡಿಕೆಯಿದೆ.

    ಕಳೆದ ಬಾರಿ ಬೆಲ್ಲ ತಯಾರಿಸಿ ಕೈ ಸುಟ್ಟುಕೊಂಡಿದ್ದ ಉತ್ಪಾದಕರು ತಮ್ಮ ಮನೆಗಳಿಗೆ ಬೇಕಾಗುವಷ್ಟು ಮಾತ್ರ ತಯಾರಿಸಿಕೊಂಡಿದ್ದಾರೆ. ಹೀಗಾಗಿ ಮಲೆನಾಡಿನ ಬೆಲ್ಲ ಅಥವಾ ಡಬ್ಬಿ ಬೆಲ್ಲ ಗ್ರಾಹಕರ ಕೈಗೆ ಸುಲಭವಾಗಿ ಸಿಗುತ್ತಿಲ್ಲ. ಆದರೆ ಯಾರೆಲ್ಲ ತಯಾರಿಸಿ ಮಾರಾಟ ಮಾಡುತ್ತಿದ್ದಾರೋ ಅವರೆಲ್ಲರಿಗೆ ಈಗ ಬಂಪರ್ ಲಾಟರಿ ಹೊಡೆದಿದೆ.