Tag: ಬೆಲ್ಜಿಯಂ

  • ವಿಶ್ವದ ಅತ್ಯಂತ ಕಿರಿಯ ಪದವೀಧರ ಆಗಲಿದ್ದ ಬಾಲಕ ವಿಶ್ವವಿದ್ಯಾಲಯ ಬಿಟ್ಟ

    ವಿಶ್ವದ ಅತ್ಯಂತ ಕಿರಿಯ ಪದವೀಧರ ಆಗಲಿದ್ದ ಬಾಲಕ ವಿಶ್ವವಿದ್ಯಾಲಯ ಬಿಟ್ಟ

    ಬ್ರಸೆಲ್ಸ್: ಬೆಲ್ಜಿಯಂನ ಒಂಬತ್ತು ವರ್ಷದ ಬಾಲಕ ಈ ತಿಂಗಳ ಅಂತ್ಯದ ವೇಳೆಗೆ ವಿಶ್ವದ ಕಿರಿಯ ಪದವೀಧರ ಆಗಲಿದ್ದ. ಆದರೆ ಈಗ ವಿಶ್ವವಿದ್ಯಾಲಯವನ್ನು ತೊರೆದು ಹೊರ ಬಂದಿದ್ದಾನೆ.

    ಬೆಲ್ಜಿಯಂನ ಒಂಬತ್ತು ವರ್ಷದ ಲಾರೆಂಟ್ ಸೈಮನ್ಸ್ ಒಂದು ವರ್ಷದಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿದ್ದ. ಬಳಿಕ 2018ರಲ್ಲಿ ನೆದರ್ಲೆಂಡ್‍ನ ಐಂಡ್‍ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಲು ಸೇರಿ ವಿಶ್ವದ ಗಮನ ಸೆಳೆದಿದ್ದ.

    ಅಮೆರಿಕದ ಮೈಕೆಲ್ ಕೀರ್ನಿ ಪ್ರಸ್ತುತ ವಿಶ್ವದ ಅತ್ಯಂತ ಕಿರಿಯ ಪದವೀಧರರಾಗಿದ್ದು, ಅವರು 1994ರಲ್ಲಿ ತಮ್ಮ 10 ವರ್ಷ 4 ತಿಂಗಳ ವಯಸ್ಸಿನಲ್ಲಿ ಪದವಿಯನ್ನು ಪಡೆದಿದ್ದರು. ಈ ದಾಖಲೆಯನ್ನು ಲಾರೆಂಟ್ ಹಿಂದಿಕ್ಕಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವವಿದ್ಯಾಲಯ ಪದವಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಲಾರೆಂಟ್ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಲಾರೆಂಟ್ ಸೈಮನ್ಸ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಸೇರಿಕೊಂಡ 10 ತಿಂಗಳಲ್ಲೇ ಪರೀಕ್ಷೆ ಬರೆದು, ಡಿಸೆಂಬರ್ ಅಂತ್ಯದಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದ. ಆದರೆ ಲಾರೆಂಟ್ ಅವರ ಎಲ್ಲಾ ಪರೀಕ್ಷೆಗಳು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಅವರು ಮುಂದಿನ ವರ್ಷ ಜುಲೈನಲ್ಲಿ ಪದವಿ ಪಡೆಯಬಹುದು ಎಂದು ವಿಶ್ವವಿದ್ಯಾಲಯ ಹೇಳಿದೆ. ವಿಶ್ವವಿದ್ಯಾನಿಲಯವು ಪದವಿ ನೀಡುವ ದಿನಾಂಕವನ್ನು ಬದಲಾಯಿಸಿದ್ದು ಲಾರೆಂಟ್ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಅವರು ಮಗನನ್ನು ವಿಶ್ವವಿದ್ಯಾನಿಲಯ ಬಿಡಿಸಲು ನಿರ್ಧರಿಸಿದರು. ಜೊತೆಗೆ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆದಿದ್ದಾರೆ.

    ಈ ವಿಚಾರವಾಗಿ ಲಾರೆಂಟ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಇ-ಮೇಲ್‍ನ ಸ್ಕ್ರೀನ್ಶಾಟ್ ಹಂಚಿಕೊಂಡು, ನನ್ನ ಅಧ್ಯಯನ ಉತ್ತಮವಾಗಿ ನಡೆಯುತ್ತಿದ್ದು, ಡಿಸೆಂಬನರ್ ನಲ್ಲಿ ಪರೀಕ್ಷೆ ಕೊನೆಗೊಳ್ಳಬೇಕಿತ್ತು. ಆದರೆ ಪದವಿ ಪ್ರಮಾಣ ಪತ್ರ ನೀಡಲು ವಿಶ್ವವಿದ್ಯಾಲಯ ಸತಾಯಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಮಾತನಾಡಿರುವ ಲಾರೆಂಟ್ ಅವರ ತಂದೆ ಅಲೆಗ್ಸಾಂಡರ್, ಕಳೆದ ತಿಂಗಳವರೆಗೆ ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರ ನೀಡಲು ಆರು ತಿಂಗಳ ವಿಳಂಬ ನೀತಿ ಅನುಸರಿಸಿತ್ತಿದೆ. ವಿಶ್ವವಿದ್ಯಾಲಯದ ಈ ನಡೆ ಸರಿಯಲ್ಲ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ಬಳಿಕ ಮಗನಿಗೆ ಪಿಎಚ್‍ಡಿ ಮಾಡಿಸುವ ಯೋಜನೆ ಇತ್ತು. ಲಾರೆಂಟ್‍ಗೆ ವಿಶ್ವವಿದ್ಯಾಲಯಗಳಿಂದ ಆಫರ್ ಬಂದಿದೆ. ಈ ಬಗ್ಗೆ ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

    ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

    ಮಾಸ್ಕೊ: ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ಬ್ರೆಝಿಲ್ ತಂಡದ ಕನಸು ನೂಚ್ಚುನೂರಾಗಿದೆ. ಕಝಾನ್ ಅರೆನಾದಲ್ಲಿ ನಡೆದ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ 2-1 ಗೋಲುಗಳ ಅಂತರದಲ್ಲಿ ಬ್ರೆಝಿಲ್‍ಗೆ ಆಘಾತವಿಕ್ಕಿದ, ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ಸೆಮಿಫೈನಲ್ ಪ್ರವೇಶಿಸಿದೆ.

    ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ 13ನೇ ನಿಮಿಷದಲ್ಲಿ ಫೆರ್ನಾಂಡಿನೊ ನೀಡಿದ ಸೆಲ್ಫ್ ಗೋಲ್ ಬೆಲ್ಜಿಯಂಗೆ ವರವಾಯಿತು. ಬೆಲ್ಜಿಯಂನ ವಿನ್ಸೆಂಟ್ ಕೊಂಪನಿ ಕಾರ್ನರ್‍ನಿಂದ ಕಳುಹಿಸಿದ ಚೆಂಡನ್ನು ಹೆಡ್ ಮಾಡಲು ಜಂಪ್ ಮಾಡಿದ ಫೆರ್ನಾಂಡಿನೋ ತಮ್ಮ ತಂಡದ ಗೋಲು ಬಲೆಯೊಳಗೆ ಚೆಂಡನ್ನು ತಳ್ಳಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು. ನಂತರದಲ್ಲೂ ಅಕ್ರಮಣಕಾರಿ ಆಟದ ತಂತ್ರದ ಮೊರೆ ಹೋದ ಬೆಲ್ಜಿಯಂ 31ನೇ ನಿಮಿಷದಲ್ಲಿ ಸ್ಟಾರ್ ಮಿಡ್‍ಫೀಲ್ಡರ್ ಕೆವಿನ್ ಡಿ ಬ್ರೂಯ್ನ್ ಮೂಲಕ ಮತ್ತೊಂದು ಗೋಲು ದಾಖಲಿಸಿ ಬ್ರೆಝಿಲ್‍ಗೆ ಡಬಲ್ ಶಾಕ್ ನೀಡಿತು. ನಾಯಕ ಹಝಾರ್ಡ್ ನೀಡಿದ ಪಾಸ್‍ಅನ್ನು ಡಿ ಬಾಕ್ಸ್‍ನ ಹೊರಭಾಗದಿಂದಲೇ ರಾಕೆಟ್ ವೇಗದಲ್ಲಿ ಗುರು ಮುಟ್ಟಿಸಿದ ಮ್ಯಾಂಚೆಸ್ಟರ್ ಸಿಟಿ ಆಟಗಾರ, ಬೆಲ್ಜಿಯಂ ಅಭಿಮಾನಿಗಳು ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿದರು. ಆ ಮೂಲಕ ಮೊದಲಾರ್ಧದಲ್ಲಿ ಬೆಲ್ಜಿಯಂ 2-0 ಅಂತರದ ಮುನ್ನಡೆ ದಾಖಲಿಸಿತ್ತು.

    ಪಂದ್ಯದ ದ್ವಿತೀಯಾರ್ಧದಲ್ಲಿ ನೇಮರ್, ಗೆಬ್ರಿಯಲ್ ಜೀಸಸ್, ಹಾಗೂ ವಿಲ್ಲನ್ ಅವರನ್ನು ಒಳಗೊಂಡ ಬ್ರಝಿಲ್ ಮುನ್ಪಡೆ ಆಟಗಾರರು ಬೆಲ್ಜಿಯಂ ರಕ್ಷಣಾ ಕೋಟೆಯನ್ನು ದಾಟಲು ಸತತ ಪ್ರಯತ್ನ ನಡೆಸಿದರು. 76ನೇ ನಿಮಿಷದಲ್ಲಿ ಕೊಟಿನ್ಹೊ ಪಾಸ್‍ನ್ನು ಹೆಡರ್ ಮೂಲಕ ಗುರು ಮುಟ್ಟಿಸಿದ ರೆನಟೊ ಆಗಸ್ಟೊ, ಬ್ರಝಿಲ್ ಪರ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

    ಬ್ರೆಝಿಲ್‍ಗೆ ತಡೆಗೋಡೆಯಾದ ಕಾಟ್ರೋಯ್: ಬ್ರಝಿಲ್ ವಿರುದ್ಧದ ಮಹತ್ವದ ಪಂದ್ಯ ಗೆಲ್ಲಲು ಬೆಲ್ಜಿಯಂಗೆ ನೆರವಾಗಿದ್ದು ಗೋಲ್‍ಕೀಪರ್ ಕಾಟ್ರೋಯ್ಸ್. ದ್ವಿತೀಯಾರ್ಧದಲ್ಲಿ 17 ಬಾರಿ ಗೋಲು ಬಲೆಯನ್ನು ಗುರಿಯಾಗಿಸಿದ ಬಂದ ಚೆಂಡನ್ನು 16 ಬಾರಿಯೂ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಚೆಲ್ಸಿಯಾ ಗೋಲ್ ಕೀಪರ್ ಬ್ರೆಝಿಲ್‍ನ ಎಲ್ಲಾ ಪ್ರಯತ್ನಗಳಿಗೂ ತಡೆಗೋಡೆಯಾದರು. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ, ಫ್ರಾನ್ಸ್ ವಿರುದ್ಧ ಸೆಣೆಸಲಿದೆ.

     

  • ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

    ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

    ಮಾಸ್ಕೋ: ಇಂಜುರಿ ಟೈಂನ ಕೊನೆಯ ಕ್ಷಣದಲ್ಲಿ (90+4ನೇ ನಿಮಿಷ) ಮಿಡ್‍ಫೀಲ್ಡರ್ ನಾಸೆರ್ ಚಾಡ್ಲಿ ಗಳಿಸಿದ ಸುಂದರ ಗೋಲಿನ ನೆರವಿನಿಂದ ಜಪಾನ್ ತಂಡವನ್ನು ರೋಚಕವಾಗಿ ಮಣಿಸಿದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ, ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದೆ. ರೋಸ್ಟೋವ್ ಅರೆನಾದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು 2 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್, ನಂತರದಲ್ಲಿ 3 ಗೋಲು ಬಿಟ್ಟುಕೊಟ್ಟು ಕೂಟದಿಂದಲೇ ಹೊರನಡೆಯಿತು.

    ಗೋಲು ರಹಿತ ಮೊದಲಾರ್ಧದ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಪಾನ್, 48ನೇ ನಿಮಿಷದಲ್ಲಿ ಶಿಬಾಸ್ಕಿ ನೀಡಿದ ಪಾಸ್ ಮೂಲಕ ಮಿಡ್ ಫೀಲ್ಡರ್ ಜೆಂಕಿ ಹರಗುಚಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು. ಮೊದಲನೇ ಗೋಲು ದಾಖಲಿಸಿ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿಯೇ ಎರಡನೇ ಗೋಲು ದಾಖಲಿಸಿದ ಜಪಾನ್, ಬೆಲ್ಜಿಯಂಗೆ ಡಬಲ್ ಶಾಕ್ ನೀಡಿತು.

    52ನೇ ನಿಮಿಷದಲ್ಲಿ ಕಗಾವಾ ಅಸಿಸ್ಟ್ ನೆರವಿನಿಂದ ಚೆಂಡನ್ನು ಪಡೆದ ತಕಾಶಿ ಇನೂಯ್, ಡಿ ಬಾಕ್ಸ್‍ನ ಹೊರಗಡೆಯಿಂದಲೇ ಗೋಲ್ ಪೋಸ್ಟ್ ನ ಬಲತುದಿಯನ್ನು ಗುರಿಯಾಗಿಸಿ ಒದ್ದ ಚೆಂಡು ರಾಕೆಟ್ ವೇಗದಲ್ಲಿ ಗುರಿ ಸೇರಿತು. 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್ ಪಂದ್ಯ ಗೆದ್ದೇ ಬಿಟ್ಟಿತು ಎಂಬ ವಿಶ್ವಾಸದಲ್ಲಿರುವಾಗಲೇ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದ ಬೆಲ್ಜಿಯಂ, ಜಪಾನ್ ತಂಡ ಬೆಚ್ಚಿಬೀಳುವಂತೆ ಮಾಡಿತು.

    69ನೇ ನಿಮಿಷದಲ್ಲಿ ಡಿ ಬಾಕ್ಸ್‍ನಿಂದಲೇ ಆಕರ್ಷಕ ಹೆಡರ್ ಮೂಲಕ ಜಪಾನ್ ಗೋಲಿ ಕವಾಶಿಮಾರನ್ನು ವಂಚಿಸಿದ ಮಿಡ್ ಫೀಲ್ಡರ್ ವೇರೊಂಗನ್ ಮೊದಲ ಗೋಲು ದಾಖಲಿಸಿದರು. ಹಝಾರ್ಡ್ ಪಾಸ್ ಅನ್ನು ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿದ ಅನುಭವಿ ಅಟಗಾರ ಮರೌನೆ ಫೆಲೈನಿ 74ನೇ ನಿಮಿಷದಲ್ಲಿ ಬೆಲ್ಜಿಯಂ ಸಮಬಲ ಸಾಧಿಸುವಂತೆ ಮಾಡಿದರು. ಮತ್ತಷ್ಟು ರೋಚಕತೆಯತ್ತ ತಿರುಗಿದ ಪಂದ್ಯ ನಿಗದಿತ ಅವಧಿ ಮುಗಿದು, ಇನ್ನೇನು ಇಂಜುರಿ ಟೈಂ ಮುಗಿಯಿತು ಎನ್ನುವಷ್ಟರಲ್ಲಿ ಮಿಂಚಿನ ಕೌಂಟರ್ ಅಟ್ಯಾಕ್ ನಡೆಸಿದ ಬೆಲ್ಜಿಯಂ, ಸ್ಟಾರ್ ಅಟಗಾರ ಕೆವಿನ್ ಡಿ ಬ್ರೂನೆ, ಮಿನ್ಯೂಯೆರ್ ಶರವೇಗದಲ್ಲಿ ನೀಡಿದ ಪಾಸ್‍ಗೆ ಅಂತಿಮ ಟಚ್ ಕೊಟ್ಟ ನಾಸೆರ್ ಚಾಡ್ಲಿ, ಬೆಲ್ಜಿಯಂಗೆ ಅವಿಸ್ಮರಣೀಯ ಜಯ ತಂದಿತ್ತರು.

    ಮುನ್ನಡೆ ಸಾಧಿಸಿದ ಬಳಿಕ ರಕ್ಷಣಾ ವಿಭಾಗವನ್ನು ಹೆಚ್ಚು ಬಲಪಡಿಸಿ ಪಂದ್ಯ ಉಳಿಸಿಕೊಳ್ಳುವ ಫುಟ್ಬಾಲ್‍ನ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಕೈಬಿಟ್ಟಿದ್ದೇ ಜಪಾನ್ ಸೋಲಿಗೆ ಕಾರಣವಾಯಿತು. ಈ ಗೆಲುವಿನ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಎರಡು ಗೋಲಿನಿಂದ ಹಿಂದಿದ್ದು, ಬಳಿಕ ನಿಗದಿತ ಅವಧಿಯಲ್ಲಿ ಪಂದ್ಯ ಗೆದ್ದ ಮೊದಲ ತಂಡವೆಂಬ ದಾಖಲೆ ಬೆಲ್ಜಿಯಂ ಪಾಲಾಯಿತು.

    ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 2-0 ಗೋಲಿನ ಅಂತರದಲ್ಲಿ ಗೆದ್ದ ಬ್ರಜಿಲ್ ತಂಡವನ್ನು ಕ್ವಾರ್ಟರ್ ಫೈನಲ್‍ನಲ್ಲಿ ಬೆಲ್ಜಿಯಂ ಎದುರಿಸಲಿದೆ.