Tag: ಬೆಲೆ

  • 1 ಲಕ್ಷಕ್ಕೆ ಹೋರಿ ಖರೀದಿ, 8 ತಿಂಗಳ ಬಳಿಕ ಬೆಲೆ ಎಷ್ಟು ಗೊತ್ತಾ?

    1 ಲಕ್ಷಕ್ಕೆ ಹೋರಿ ಖರೀದಿ, 8 ತಿಂಗಳ ಬಳಿಕ ಬೆಲೆ ಎಷ್ಟು ಗೊತ್ತಾ?

    – ದೇಶಿ ಸಂತತಿ ಉಳಿಸಲು ಹೋರಿ ಖರೀದಿಸಿದ ರೈತ

    ಚಿಕ್ಕೋಡಿ: ಒಂದೆಡೆ ಉಳುಮೆ ಮಾಡಲು ಜಾನುವಾರು ಸಿಗುತ್ತಿಲ್ಲ ಎಂಬ ಅಳಲು ಕೆಲವು ರೈತರದ್ದು, ಆದರೆ ಲಕ್ಷಗಟ್ಟಲೆ ಬೆಲೆ ಬಾಳುವ ಹೋರಿಗಳು ಮಾರುಕಟ್ಟೆಯಲ್ಲಿ ಕಾಣಸಿಗುವುದು ಇತ್ತೀಚೆಗೆ ಮಾಮೂಲಾಗಿದೆ. ಅದೇ ರೀತಿ ರೈತರೊಬ್ಬರು 1 ಲಕ್ಷ ಕೊಟ್ಟು 6 ತಿಂಗಳ ಹೋರಿಕರು ಖರೀದಿಸಿ 8 ತಿಂಗಳು ಸಾಕಿ ದಾಖಲೆಯ ಬೆಲೆ ಮಾರಾಟ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಕುರುಬಗೋಡಿಯ ರೈತ ಅಡಿವೆಪ್ಪ ಪದ್ಮಣ್ಣ ಕುರಿಯವರ ಈ ಹೋರಿ ಅಂತಿಂತ ಹೋರಿಯಲ್ಲ. ಈ ಹೋರಿಯನ್ನು ರೈತ ಅಡಿವೆಪ್ಪ ಅವರು 6 ತಿಂಗಳ ಕರು ಇದ್ದಾಗ ಕೇವಲ 1 ಲಕ್ಷದ 100 ರೂಪಾಯಿಗೆ ಖರೀದಿ ಮಾಡಿದ್ದರು. ಸತತ 8 ತಿಂಗಳ ಕಾಲ ಮೇಯಿಸಿ, ಜೋಪಾನ ಮಾಡಿದ ಬಳಿಕ ರೈತ ಈ ಹೋರಿಯನ್ನು ಮಾರಾಟ ಮಾಡೋಕೆ ರೆಡಿಯಾಗಿದ್ದಾರೆ. ಇವರು ಹೋರಿ ಮಾರಾಟ ಮಾಡುತ್ತಿರುವ ಸುದ್ದಿ ತಿಳಿದಿದ್ದೇ ತಡ ಮಾಹಾರಾಷ್ಟ್ರದ ಇನ್ನೊಬ್ಬ ರೈತ ಬರೊಬ್ಬರಿ 5 ಲಕ್ಷ 15 ಸಾವಿರ ರೂಪಾಯಿಯ ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

    ರಾಜ್ಯದಲ್ಲಿ ದೇಸಿ ತಳಿಯ ಉಳಿವಿಗಾಗಿ ಈಗಾಗಲೇ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಹಾಗೂ ಪ್ರಾಣಿವಧೆ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದೆ. ಸದ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಇದೊಂದೆ ದೇಶಿ ಥಳಿಯ ಖಿಲಾರಿ ಹೋರಿ. ಹೀಗಾಗಿ ಭಾರೀ ಮೊತ್ತಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಂಗಲವೇಡಾ ತಾಲೂಕಿನ ನಂದೇಶ್ವರ ಗ್ರಾಮದ ಸೈನಿಕ ದತ್ತಾ ಕರಡೆ ಅವರು ಖರೀದಿ ಮಾಡಿದ್ದು, ಸದ್ಯ ಈ ಹೋರಿಯ ಮೊತ್ತ ಈಗ ಎಲ್ಲರ ತಲೆ ಕೆಡಿಸಿದೆ. ಅಷ್ಟಕ್ಕೂ ಅವರು ಇಷ್ಟು ದೊಡ್ಡ ಮೊತ್ತ ಕೊಟ್ಟು ಹೋರಿ ಖರೀದಿ ಮಾಡಲು ಕಾರಣವೇನು ಗೊತ್ತಾ.

    ದೇಶಿ ತಳಿಯನ್ನು ವೃದ್ಧಿಸಲು ಈ ಹೋರಿಯನ್ನು ಭಾರಿ ಮೊತ್ತಕ್ಕೆ ಖರೀದಿ ಮಾಡಿರುವ ದತ್ತಾ ಕರಡೆ, ಈ ಹೋರಿಯನ್ನು ಇಟ್ಟುಕೊಂಡು ಗೋವುಗಳ ಸಂತತಿ ಹೆಚ್ಚಿಸುವ ಯೋಜನೆ ಹೊಂದಿದ್ದಾರೆ ಎನ್ನುವುದು ವಿಶೇಷ. ಈ ಹೋರಿಯಿಂದ ಮತ್ತೊಂದು ಹೋರಿಯೇ ಜನಿಸಿದರೆ ಅಥವಾ ಹೆಣ್ಣು ಕರುವಿಗೆ ಜನ್ಮ ನೀಡಿದರೂ ಶ್ರೇಷ್ಠ ಎನ್ನುವುದು ಗೋವು ಪ್ರೀಯರ ಮಾತು. ಅದೇನೆ ಇರಲಿ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವ ಹೋರಿ ಈಗ ಎಲ್ಲರ ಹಾಟ್ ಫೇವರಿಟ್ ಆಗಿರುವುದಂತೂ ನಿಜ.

  • ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

    ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

    – ಬಿತ್ತನೆ ಬೀಜಕ್ಕೂ ಭಾರೀ ಬೇಡಿಕೆ
    – 15 ವರ್ಷಗಳಲ್ಲಿ ಬೆಲೆ ದುಬಾರಿ

    ಕೋಲಾರ : ಜಿಲ್ಲೆಯ ಪಾಲಿಗೆ ಆಲೂಗೆಡ್ಡೆ ವಿಶಿಷ್ಟ ಬೆಳೆಯಾಗಿದೆ. ಈ ಅಪರೂಪದ ಬೆಳೆಗೆ ಬಂಗಾರದ ಬೆಲೆ ಬಂದಿದೆ. ಬೆಲೆ ಗಗನಕ್ಕೇರಿದ್ದು ಪೊಟಾಟೋ ಬೆಳೆ ಬೆಳೆದ ರೈತರು ಪುಲ್ ಖುಷಿಯಾಗಿದ್ದಾರೆ. ಮತ್ತೊಂದೆಡೆ ಬಿತ್ತನೆ ಬೀಜಕ್ಕೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈಗ ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರಿಗೆ ಬಿಸಿ ತುಪ್ಪ ಬಾಯಿಗೆ ಬಿದ್ದಂತಾಗಿದೆ.

    ಕೋಲಾರ ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಅಪರೂಪ ಎನ್ನುವಂತೆ ಅಲೂಗಡ್ಡೆ ಬೆಲೆ ಗಗನಕ್ಕೇರಿದೆ. ಐವತ್ತು ಕೆಜಿ ಬಿತ್ತನೆ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ 5000 ದಿಂದ 6000 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಹದಿನೈದು ವರ್ಷಗಳಲ್ಲೇ ಅತಿ ಹೆಚ್ಚಿನ ಐತಿಹಾಸಿಕ ಬೆಲೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಲೂಗಡ್ಡೆಗೆ ಇಂಥಾದೊಂದು ಬೇಡಿಕೆ ಸೃಷ್ಟಿಯಾಗೋದಕ್ಕೆ ಕಾರಣ ಕೊರೊನಾ.

    ರೈತರು ಕೊರೊನಾ ಕಾಲದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆದಿಲ್ಲ, ಕಾರಣ ಪಂಜಾಬ್‍ನ ಜಲಂಧರ್‍ನಿಂದ ಬಿತ್ತನೆ ಆಲೂಗಡ್ಡೆ ತರಿಸೋದಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲದೆ ವ್ಯಾಪಾರಸ್ಥರು ಕೂಡಾ ಸುಮ್ಮನಾಗಿದ್ದರು. ಐದಾರು ತಿಂಗಳ ಕಾಲ ಎಲ್ಲೂ ಕೂಡಾ ಆಲೂಗಡ್ಡೆ ಬಿತ್ತನೆಯಾಗಿಲ್ಲ. ಆದ್ದರಿಂದ ಈಗ ದೇಶದ ವಿವಿಧೆಡೆ ಆಲೂಗಡ್ಡೆ ಬಿತ್ತನೆ ಮಾಡಲು ಶುರುಮಾಡಿದ್ದರಿಂದ ಬಿತ್ತನೆ ಆಲೂಗಡ್ಡೆಗೆ ಸಹಜವಾಗಿಯೇ ಬೇಡಿಕೆ ಶುರುವಾಗಿದೆ. ಅದರ ಜೊತೆಗೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು 50 ಕೆಜಿ ಮೂಟೆ ಆಲೂಗಡ್ಡೆ 3000 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇದೆ ಮೊದಲು ಆಲೂಗಡ್ಡೆಗೆ ದಾಖಲೆ ಬೆಲೆ ಬಂದಿರುವುದು ಎನ್ನುತ್ತಾರೆ ರೈತ ಮುಖಂಡರು.

    ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಯಾರೊಬ್ಬರೂ ಅನುಮತಿ ಪಡೆದಿಲ್ಲ, ಎಲ್ಲರೂ ಜಲಂಧರ್ ಆಲೂಗಡ್ಡೆ ಎಂಬ ಹೆಸರಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಾರೆ. ಮೊದಲು ಎರಡೂವರೆ ಸಾವಿರದಿಂದ ಮೂರು ಸಾವಿರಕ್ಕೆ ಒಂದು ಮೂಟೆ ಬಿತ್ತನೆ ಆಲೂಗಡ್ಡೆ ಸಿಗುತ್ತಿತ್ತು, ಆದರೆ ಕೊರೊನಾ ಎಫೆಕ್ಟ್‍ನಿಂದ ಈಗ ಏಕಾಏಕಿ ಜಲಂಧರ್ ಆಲೂಗಡ್ಡೆಗೆ ಐದಾರು ಸಾವಿರ ರೂಪಾಯಿ ಬೆಲೆ ಏರಿಕೆಯಾಗಿ, ಕೆಲವು ರೈತರು ಹಾಗೂ ಕೆಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ವ್ಯಾಪಾರಸ್ಥರೇ ಉದ್ದೇಶಪೂರ್ವಕವಾಗಿ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    1 ಮೂಟೆ ಬಿತ್ತನೆ ಆಲೂಗಡ್ಡೆಗೆ 3925 ರೂ ಬೆಲೆ ನಿಗದಿ ಮಾಡಿ, ಯಾರೂ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೆ ಆದಲ್ಲಿ ರಶೀದಿ ಸಮೇತ ದೂರು ನೀಡುವಂತೆ ಮಾರುಕಟ್ಟೆಯಲ್ಲಿ ಬ್ಯಾನರ್ ಹಾಕಿದ್ದಾರೆ. ಆದರೆ ಈವರೆಗೂ ಯಾರೂ ದೂರು ನೀಡಲು ಮುಂದೆ ಬಂದಿಲ್ಲ. ಕಾರಣ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆಗೆ ಇರುವ ಡಿಮ್ಯಾಂಡ್ ರೀತಿಯಲ್ಲೇ ರೈತರು ಬೆಳೆದ ಆಲೂಗಡ್ಡೆ ಬೆಲೆ ಕೂಡಾ ಸರ್ವಕಾಲಿಕ ಏರಿಕೆ ಕಂಡಿದೆ. ಹಾಗಾಗಿ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಲೂಗಡ್ಡೆ ಹಾಗೂ ಬಿತ್ತನೆ ಆಲೂಗಡ್ಡೆ ಎರಡಕ್ಕೂ ಮಾರುಟಕ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸದ್ಯ ಬಿತ್ತನೆ ಆಲೂಗಡ್ಡೆ ಮಾರುವ ವ್ಯಾಪಾರಸ್ಥರು, ಬೆಳೆದ ರೈತರಿಗೂ ಬಂಪರ್ ಆಗಿದ್ದು ಇದು ಹೀಗೆ ಮುಂದುವರೆದರೆ ಜಿಲ್ಲೆಯ ರೈತರಷ್ಟೆ ಅಲ್ಲ ವ್ಯಾಪಾರಸ್ಥರಿಗೂ ಲಾಟರಿ ಹೊಡೆದಂತಾಗಿದೆ.

  • ಸಂಕಷ್ಟಕ್ಕೀಡಾಗಿದ್ದ ಈರುಳ್ಳಿ ಬೆಳೆಗಾರರು- ಬೆಲೆ ಏರಿಕೆಯಿಂದ ಕೊಂಚ ಸಂತಸ

    ಸಂಕಷ್ಟಕ್ಕೀಡಾಗಿದ್ದ ಈರುಳ್ಳಿ ಬೆಳೆಗಾರರು- ಬೆಲೆ ಏರಿಕೆಯಿಂದ ಕೊಂಚ ಸಂತಸ

    ರಾಯಚೂರು: ಜಿಲ್ಲೆಯ ಈರುಳ್ಳಿ ಬೆಳೆಗಾರರು ಅಪಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಸಂದರ್ಭದಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಸ್ವಲ್ಪ ಮಟ್ಟಿನ ಸಮಾಧಾನವನ್ನುಂಟು ಮಾಡಿದೆ.

    ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, 6 ಸಾವಿರ ರೂಪಾಯಿಗೆ ಒಂದು ಕ್ವಿಂಟಾಲ್ ಈರುಳ್ಳಿ ಖರೀದಿಯಾಗುತ್ತಿದೆ. ಭಾರೀ ಮಳೆಗೆ ರೈತರು ಅರ್ಧ ಬೆಳೆ ಕಳೆದುಕೊಂಡಿದ್ದಾರೆ. ಇದೀಗ ಉಳಿದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಮಾಧಾನಪಟ್ಟುಕೊಂಡಿದ್ದಾರೆ.

    ಈ ಬಾರಿಯ ಮುಂಗಾರು ಮಳೆ ರಾಜ್ಯದ ರೈತರಲ್ಲಿ ಭಾರೀ ನಿರೀಕ್ಷೆಗಳನ್ನ ಹುಟ್ಟು ಹಾಕಿತ್ತು. ಆದರೆ ಅತೀವೃಷ್ಟಿಯಿಂದಾಗಿ ಅನ್ನದಾತರ ಆಸೆಗಳೆಲ್ಲ ಕಣ್ಣೀರಾಗಿ ಕರಗಿ ಹೋಗಿವೆ. ಇಂತಹ ಕಷ್ಟದ ಸಮಯದಲ್ಲಿ ಈರುಳ್ಳಿ ಬೆಲೆ ಹೆಚ್ಚಿರುವುದು ರೈತರಲ್ಲಿ ಸ್ವಲ್ಪ ಸಮಾಧಾನ ತಂದಿದೆ. ಬೆಳೆದ ಬೆಳೆಯಲ್ಲಿ ಅರ್ಧದಷ್ಟು ಮಳೆಗೆ ಹಾಳಾಗಿದ್ದರೂ ಇನ್ನರ್ಧ ಬೆಳೆಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ ರಾಯಚೂರಿನಲ್ಲಿ ಈರುಳ್ಳಿ ಬೆಳೆದ ರೈತರು ತಕ್ಕಮಟ್ಟಿಗೆ ಸಮಾಧಾನದಲ್ಲಿದ್ದಾರೆ.

    ಕ್ವಿಂಟಾಲ್ ಈರುಳ್ಳಿ ಬೆಲೆ 5 ರಿಂದ 6 ಸಾವಿರ ರೂಪಾಯಿ ತಲುಪಿದ್ದು. ಜಮೀನಿಗೆ ಖರ್ಚು ಮಾಡಿದ ಹಣವಾದರೂ ಮರಳಿ ಬಂತಲ್ಲ ಎಂದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಚಿಕ್ಕಗಡ್ಡೆಗೆ 3 ರಿಂದ 4 ಸಾವಿರ ರೂಪಾಯಿ ಸಿಗುತ್ತಿದೆ. ಜಿಲ್ಲೆಯಲ್ಲಿ ಈಗ ಹೊರಗಡೆಯಿಂದ ಬರುವ ಈರುಳ್ಳಿ ಪ್ರಮಾಣ ಕಡಿಮೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮೊದಲೇ ಈರುಳ್ಳಿ ಸಂಗ್ರಹಿಸಿಟ್ಟುಕೊಂಡಿದ್ದವರಿಗೆ ಉತ್ತಮ ಲಾಭ ಸಿಗುತ್ತಿದೆ. ಬೆಳೆ ಇನ್ನೂ ಜಮೀನಿನಲ್ಲಿದ್ದವರು ಬೆಳೆನಷ್ಟ ಅನುಭವಿಸಿದ್ದಾರೆ. ಅತೀಯಾದ ಮಳೆಗೆ ಜಿಲ್ಲೆಯ ಲಿಂಗಸಗೂರು , ರಾಯಚೂರು ತಾಲೂಕಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಈರುಳ್ಳಿ ಹಾಳಾಗಿದೆ.

    ಬೆಲೆ ಹೆಚ್ಚಳದ ಜೊತೆಗೆ ತರಕಾರಿ ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ. ಹೀಗಾಗಿ ಪ್ರತಿದಿನ ಐದಾರು ಕ್ವಿಂಟಾಲ್ ಈರುಳ್ಳಿ ಮಾರುತ್ತಿದ್ದ ತರಕಾರಿ ವ್ಯಾಪಾರಿಗಳು ಈಗ ಒಂದೆರಡು ಕ್ವಿಂಟಾಲ್ ಮಾರಿದರೆ ಹೆಚ್ಚು ಎನ್ನುವಂತಾಗಿದೆ. ಮಹಾರಾಷ್ಟ್ರದ ನಾಂದೆಡ್, ಔರಂಗಬಾದ್, ನಾಸಿಕ್, ಪುಣೆಯಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣ ಮಳೆಯಿಂದ ತಗ್ಗಿದೆ. ಹೀಗಾಗಿ ಈರುಳ್ಳಿ ಬೆಲೆ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 60 ರಿಂದ 120 ರೂ.ವರೆಗೆ ನಡೆಯುತ್ತಿದೆ. ಸಣ್ಣ ಗಡ್ಡೆ ಸಹ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.

    ರೈತರಿಗೆ ಸಂತೋಷವಾದರೆ ಹಬ್ಬದ ಸಮಯದಲ್ಲಿ ಈರುಳ್ಳಿ ದುಬಾರಿಯಾಗಿರುವುದು ಗ್ರಾಹಕರಿಗೆ ಬೇಸರ ಮೂಡಿಸಿದೆ. ಈರುಳ್ಳಿ ಜೊತೆಗೆ ಬಹುತೇಕ ಎಲ್ಲ ತರಕಾರಿ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.

  • ಅಕಾಲಿಕ ಮಳೆ – ಮತ್ತೆ ದುಬಾರಿಯಾದ ಈರುಳ್ಳಿ

    ಅಕಾಲಿಕ ಮಳೆ – ಮತ್ತೆ ದುಬಾರಿಯಾದ ಈರುಳ್ಳಿ

    ಬೆಂಗಳೂರು: ಸದ್ಯ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣ ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ.

    ಕೆಜಿಗೆ 20 ರಿಂದ 25 ರೂಪಾಯಿ ಇದ್ದ ಈರುಳ್ಳಿ ಈಗ 80, 90, 100 ರೂಪಾಯಿಗೆ ಏರಿಕೆಯಾಗಿದೆ. ಯಶವಂತಪುರ ಮಂಡಿಯಲ್ಲಿಯೇ ಫೈನ್ ಈರುಳ್ಳಿ ಕೆಜಿಗೆ 80 ರೂಪಾಯಿಯಾಗಿದೆ. ಪೂರೈಕೆ ಇಲ್ಲದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

    ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿದೆ. ಜೊತೆಗೆ ಬೆಳೆದ ಈರುಳ್ಳಿ ಭೂಮಿಯಲ್ಲೇ ಕೊಳೆತು ಹೋಗಿದೆ. ರಾಜ್ಯಕ್ಕೆ ಮಹಾರಾಷ್ಟ್ರದಿಂದ ಆಮದು ಆಗುತ್ತಿದ್ದ ಈರುಳ್ಳಿ ಸಹ ಬರುತ್ತಿಲ್ಲ. ಈ ಪರಿಣಾಮ ಈರುಳ್ಳಿ ಪೂರೈಕೆ ಕಡಿಮೆಯಾದೆ. ಪ್ರತಿದಿನ ಒಂದು ಸಾವಿರ ಲಾರಿ ಲೋಡ್ ಬರುತ್ತಿದ್ದ ಜಾಗದಲ್ಲಿ ದಿನಕ್ಕೆ 150 ಲಾರಿ ಮಾತ್ರ ಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

  • ಕೋಲಾರ ಟೊಮೆಟೊಗೆ ಅಂತರ್ ರಾಜ್ಯ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ

    ಕೋಲಾರ ಟೊಮೆಟೊಗೆ ಅಂತರ್ ರಾಜ್ಯ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ

    – ಸೇಬು ಬೆಲೆಗೆ ಮಾರಾಟವಾಗುತ್ತಿದೆ ಟೊಮೆಟೊ

    ಕೋಲಾರ: ಅಡುಗೆಗೆ, ಊಟಕ್ಕೆ ಟೊಮೆಟೊ ಅತ್ಯವಶ್ಯಕವಾಗಿದ್ದು, ಈ ಕಿಚನ್ ಕ್ವೀನ್ ಇಲ್ಲದೆ ಅಡುಗೆ ಸಪ್ಪೆ. ಆದರೆ ಇದೀಗ ಟೊಮಾಟೊ ಬೆಲೆ ಗಗನಕ್ಕೇರಿದೆ. ದೇಶದ ಅತ್ಯಂತ ದೊಡ್ಡ ಟೊಮೆಟೊ ಮಾರುಕಟ್ಟೆಯಲ್ಲಿ ಸೇಬು ಬೆಲೆಗೆ ಮಾರಾಟವಾಗುತ್ತಿದೆ.

    ಕೋಲಾರ ಸೇರಿದಂತೆ ಸುತ್ತಲಿನ ರೈತರಿಗೆ ಇದರಿಂದಾಗಿ ಅಪಾರ ಲಾಭವಾಗುತ್ತಿದ್ದು, 15 ಕೆ.ಜಿ. ತೂಕದ ಒಂದು ಟೊಮೆಟೊ ಕ್ರೇಟ್‍ನ ಬೆಲೆ ಈಗ 800 ರೂಪಾಯಿಯ ಗಡಿ ದಾಟಿದೆ. ಒಂದು ಕೆ.ಜಿ. ಟೊಮೆಟೊ ಬೆಲೆ ಈಗ ಹೋಲ್‍ಸೇಲ್ ದರದಲ್ಲಿ 65 ರೂಪಾಯಿ ಧಾರಣೆಯಾಗಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ 15 ಕೆ.ಜಿ. ತೂಕದ ಒಂದು ಬಾಕ್ಸ್ ಟೊಮೆಟೊ 800 ರೂ.ಗಳಿಗೆ ಏರಿಕೆ ಆಗಿದೆ. ಕೊರೊನಾ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಟೊಮ್ಯಾಟೊ ಬೆಳೆದಿದ್ದ ರೈತರು ಕಂಗಾಲಾಗಿದ್ದರು.

    ನೀರಿನ ಅಭಾವ, ಅಂತರ್ಜಲ ಮಟ್ಟ ಕುಸಿದಿದ್ದರೂ, 1,500 ಅಡಿ ಆಳದಿಂದ ನೀರು ತೆಗೆದು ಕಷ್ಟಪಟ್ಟು ಬೆಳೆಯುತ್ತಿದ್ದಾರೆ. ಹೀಗಾಗಿ ಇಲ್ಲಿನ ಟೊಮೆಟೊಗೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಮುಂತಾದ ರಾಜ್ಯಗಳು. ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಹೆಚ್ಚಾಗಿ ಬೇಡಿಕೆ ಇದೆ. ಇದರಿಂದಾಗಿ ಈ ಸೀಸನ್‍ನಲ್ಲಿ ಸ್ಥಳೀಯ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತಿದ್ದು, ಟನ್‍ಗಟ್ಟಲೆ ಟೊಮೆಟೊ ರಫ್ತು ಮಾಡಲಾಗುತ್ತದೆ. ಹೊರ ರಾಜ್ಯಗಳಲ್ಲಿ ಮಳೆಯಿಂದ ಟೊಮೆಟೊ ಬೆಳೆ ಇಲ್ಲ. ಹೀಗಾಗಿ ಈ ಸೀಸನ್‍ನಲ್ಲಿ ಕೋಲಾರದ ಟೊಮೆಟೊ ಬೆಲೆ ಗಗನಕ್ಕೇರಿದೆ.

    ಜಿಲ್ಲೆಯಲ್ಲಿ ಸೀಡ್ಸ್ ಮತ್ತು ನಾಟಿ ಟೊಮೆಟೊ ಬೆಳೆಯಲಾಗುತ್ತದೆ. ಈ ಎರಡು ಉತ್ತಮ ತಳಿಗಳು ಒಂದು ವಾರ ಕಾಲ ಕೆಡದಂತೆ ಇರುತ್ತದೆ. ಪ್ರತಿನಿತ್ಯ 14 ರಿಂದ 15 ಸಾವಿರ ಕ್ವಿಂಟಾಲ್ ನಷ್ಟು ಟೊಮೆಟೊ ಮಾರುಕಟ್ಟಗೆ ಬರುತ್ತಿದ್ದು, ನಿತ್ಯ ಸರಾಸರಿ 3 ಕೋಟಿಯಷ್ಟು ವಹಿವಾಟು ನಡೆಯುತ್ತದೆ. ಮಾರ್ಚ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಟೊಮೆಟೊ ಬೆಳೆಯಲು ಕಷ್ಟವಾಗುತ್ತದೆ. ಈ ರಾಜ್ಯಗಳಲ್ಲಿ ಹೆಚ್ಚು ಬಿಸಿಲು, ಒಂದು ಕಡೆ ಮಳೆ ಇರುವುದರಿಂದ ಟೊಮೆಟೊ ಬೆಳೆಯಲು ಪೂರಕ ವಾತಾವರಣ ಇಲ್ಲ. ಹೀಗಾಗಿ ರಾಜ್ಯದಲ್ಲಿ ಬೆಳೆದ ಬೆಳೆಗೆ ಹೆಚ್ಚು ಬೇಡಿಕೆ.

    ಕೋಲಾರ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಈ ಬಾರಿ ಬಿಸಿಲು ಹೆಚ್ಚಾಗಿದ್ದರಿಂದ ಬೆಳೆ ಕೂಡ ಉತ್ತಮವಾಗಿದೆ, ಇದರಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಲ್ಲಿ ಕೊರೊನಾ ಭೀತಿ ಇರುವುದರಿಂದ ಬೆಲೆ ಏರಿಕೆ ನಿಧಾನಗತಿಯಲ್ಲಿ ಏರುತ್ತಿದೆ. ಇನ್ನು 15 ದಿನಗಳ ನಂತರ ಟೊಮೆಟೊ ಬೆಲೆ ಒಂದು ಬಾಕ್ಸ್‍ಗೆ 1000 ರೂ.ಗಳಿಗೆ ಏರಿಕೆ ಆದಲಿದೆ ಎಂದು ಅಂದಾಜಿಸಲಾಗಿದೆ.

    ಕೋಲಾರದ ರೈತರಿಗೆ ಟೊಮೆಟೊ ಬೆಳೆ ಲಾಟರಿಯಂತಾಗಿದ್ದು, ಒಮ್ಮೆ ಬೆಲೆ ಸಿಕ್ಕರೆ, ಮತ್ತೊಮ್ಮೆ ಬೆಲೆ ಕುಸಿಯುತ್ತದೆ. ಈ ವೇಳೆ ಬೀದಿಗೆ ಸುರಿಯುತ್ತಾರೆ. ಆದರೆ ಈ ಬಾರಿ ಬೆಳೆದ ರೈತರಿಗೆ ಭರ್ಜರಿ ಬೆಲೆಯೇ ಸಿಕ್ಕಿದೆ.

  • ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ – ಬೆಳ್ಳಿ ದರವೂ ಭಾರೀ ಏರಿಕೆ

    ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ – ಬೆಳ್ಳಿ ದರವೂ ಭಾರೀ ಏರಿಕೆ

    ನವದೆಹಲಿ: ಭಾರತದಲ್ಲಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೆ ಮೊದಲ ಬಾರಿಗೆ ಚಿನ್ನದ ಬೆಲೆ 50 ಸಾವಿರ ರೂ. ಗಡಿ ದಾಟಿದೆ.

    10 ಗ್ರಾಂ 24 ಕ್ಯಾರೆಟ್‌ ಶುದ್ಧ ಚಿನ್ನದ ಬೆಲೆ ಬೆಂಗಳೂರಿನಲ್ಲಿ 50,720 ರೂ. ಆಗಿದ್ದರೆ ಚೆನ್ನೈನಲ್ಲಿ 51,380 ರೂ. ತಲುಪಿದೆ. 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ ಬೆಂಗಳೂರಿನಲ್ಲಿ 46,520 ರೂ.ಗೆ ಏರಿಕೆ ಆಗಿದ್ದರೆ ಚೆನ್ನೈನಲ್ಲಿ 47,100 ರೂ. ತಲುಪಿದೆ.

     

    ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು 1 ಕೆಜಿ ಬೆಳ್ಳಿ ದರ 61,280 ರೂ. ಗೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಬೆಳ್ಳಿ ದರ 8,500 ರೂ. ಏರಿಕೆ ಕಂಡಿದೆ. 7 ವರ್ಷದ ಬಳಿಕ ಭಾರತದಲ್ಲಿ ಬೆಳ್ಳಿ ದರ ಭಾರೀ ಏರಿಕೆ ಕಂಡಿದೆ.

    ಬುಧವಾರ ಜಾಗತಿಕ ಮಾರುಕಟ್ಟೆಯಲ್ಲಿ 1 ಔನ್ಸ್‌( 28.3 ಗ್ರಾಂ) ಚಿನ್ನದ ಬೆಲೆ ಶೇ.1.3 ರಷ್ಟು ಏರಿಕೆಯಾಗಿ 1,865.81 ಡಾಲರ್‌(1.39 ಲಕ್ಷ ರೂ.) ತಲುಪಿದೆ. 1 ಔನ್ಸ್‌ ಬೆಳ್ಳಿಯ ಬೆಲೆ ಶೇ.7.2 ರಷ್ಟು 22.8366 ಡಾಲರ್‌(1,700 ರೂ. )ಏರಿಕೆಯಾಗಿದೆ. 9 ವರ್ಷಗಳ ಬಳಿಕ ದರ ಭಾರೀ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಭಾರತದಲ್ಲೂ ಚಿನ್ನದ ದರ ಏರಿಕೆಯಾಗಿದೆ. ಇದನ್ನೂ ಓದಿ: ಚಿನ್ನ ಸ್ಮಗ್ಲಿಂಗ್‌ ಕೇಸ್‌ – ಮಗಳಿಂದಾಗಿ ಬೆಂಗಳೂರಿನಲ್ಲಿ ಅಡಗಿದ್ದ ಸ್ವಪ್ನ ಸುರೇಶ್‌ ಅರೆಸ್ಟ್

     

    ಭಾರತದಲ್ಲಿ ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್‌ ಶುಲ್ಕ ಇರುವ ಕಾರಣ ಆಭರಣದ ಬೆಲೆ ಮತ್ತಷ್ಟು ಜಾಸ್ತಿಯಾಗುತ್ತದೆ.

    ಬೆಲೆ ಜಾಸ್ತಿಯಾಗಲು ಕಾರಣವೇನು?
    ಕೋವಿಡ್‌ 19 ನಿಂದಾಗಿ ವಿಶ್ವಕ್ಕೆ ಆರ್ಥಿಕ ಸಂಕಷ್ಟ ಬಂದಿದೆ. ಹಣಕ್ಕೆ ಸಮಸ್ಯೆಯಾಗಿರುವಾಗ ಯಾರು ಆಭರಣ ಖರೀದಿಸುತ್ತಾರೆ ಎನ್ನುವ ಪ್ರಶ್ನೆ ಏಳುವುದು ಸಹಜ. ಆದರೆ ಇಲ್ಲಿ ಆಭರಣಕ್ಕೆ ಚಿನ್ನ ಖರೀದಿಸುತ್ತಿಲ್ಲ. ಬದಲಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತಿದೆ.

    ಕೋವಿಡ್‌ 19ನಿಂದಾಗಿ ಹೂಡಿಕೆದಾರರು ಸುರಕ್ಷಿತ ವಸ್ತು, ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಅದರಲ್ಲೂ ಅಮೆರಿಕ ಮತ್ತು ಯುರೋಪ್‌ ಹೂಡಿಕೆದಾರರು ಚಿನ್ನದ ಬಾಂಡ್‌ಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ.  ಮೊದಲಿನಿಂದಲೂ ಚಿನ್ನಕ್ಕೆ ಬೇಡಿಕೆ ಜಾಸ್ತಿಯಿದೆ. ಈಗ  ಹೂಡಿಕೆಯಿಂದಾಗಿ ಬೇಡಿಕೆ ಮತ್ತಷ್ಟು ಜಾಸ್ತಿಯಾಗಿದೆ. ಆದರೆ ಪೂರೈಕೆ ಕಡಿಮೆಯಿದೆ.  ಹೀಗಾಗಿ ಕೋವಿಡ್‌ 19 ಅವಧಿಯಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ.

    24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ
    24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.

  • 3 ತಿಂಗಳ ನಂತ್ರ ಕೋಲಾರದಲ್ಲಿ ಟೊಮಾಟೊ ಬೆಳೆಗಾರರಿಗೆ ಅದೃಷ್ಟ

    3 ತಿಂಗಳ ನಂತ್ರ ಕೋಲಾರದಲ್ಲಿ ಟೊಮಾಟೊ ಬೆಳೆಗಾರರಿಗೆ ಅದೃಷ್ಟ

    – 15 ಕೆ.ಜಿ. ಬಾಕ್ಸ್ 700 ರಿಂದ 800 ರೂ.ಗೆ ಮಾರಾಟ

    ಕೋಲಾರ: ಟೊಮಾಟೊ ಬೆಲೆ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ 15 ಕೆ.ಜಿ ತೂಕದ ಒಂದು ಬಾಕ್ಸ್ ಟೊಮಾಟೊ 800 ರೂ.ಗಳಿಗೆ ಏರಿಕೆ ಆಗಿದೆ. ಅಂಗಡಿಗಳಲ್ಲಿ ಒಂದು ಕೆ.ಜಿ ಟೊಮಾಟೊ ಬೆಲೆ 20 ರಿಂದ 30 ರೂಪಾಯಿ ಏರಿಕೆಯಾಗಿದೆ.

    ಸಾಮಾನ್ಯವಾಗಿ ಕಳೆದ 3 ತಿಂಗಳಿನಿಂದ ಬೆಲೆಯಿಲ್ಲದೆ ಕಂಗಾಲಾಗಿದ್ದ ಟೊಮಾಟೊ ಬೆಳೆಗಾರರು ಈಗ ಖುಷಿಯಾಗಿದ್ದಾರೆ. ಯಾಕಂದರೆ ತೋಟದಲ್ಲೆ ಕೊಳೆಯುವಷ್ಟು ಟೊಮಾಟೊ ಬೆಳೆದಿದ್ದ ರೈತರಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದರು. ಕೋಲಾರ ಜಿಲ್ಲೆಯಲ್ಲಿ ಉತ್ತಮ ತಳಿಯ ಟೊಮಾಟೊವನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ನೀರಿನ ಅಭಾವ ಇದೆ, ಅಂತರ್ಜಲ ಮಟ್ಟ ಕುಸಿದಿದೆ, 1500 ಆಳದಿಂದ ನೀರು ತೆಗೆದು ಕಷ್ಟಪಟ್ಟು ಬೆಳೆ ಮಾಡುತ್ತಾರೆ.

    ಹಾಗಾಗಿ ಇಲ್ಲಿನ ಟೊಮಾಟೊಗೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಮುಂತಾದ ರಾಜ್ಯಗಳು ಸೇರಿದಂತೆ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಹೆಚ್ಚಾಗಿ ಬೇಡಿಕೆ ಇದೆ. ಇದರಿಂದಾಗಿ ಈ ಸೀಸನ್‍ನಲ್ಲಿ ಸ್ಥಳೀಯ ಟೊಮಾಟೊಗೆ ಉತ್ತಮ ಬೆಲೆ ಸಿಗುತ್ತಿದ್ದು, ಟನ್‍ಗಟ್ಟಲೇ ಟೊಮಾಟೊ ರಫ್ತು ಮಾಡಲಾಗುತ್ತದೆ. ಜುಲೈ ಮೊದಲ ವಾರದಿಂದ ಟೊಮಾಟೊ ಬೆಲೆಯಲ್ಲಿ ಏರಿಕೆಯಾಗಿದ್ದು, ಆಗಸ್ಟ್ ತಿಂಗಳವರೆಗೆ ಉತ್ತಮ ಬೆಲೆ ಇರುತ್ತದೆ. ಈ ಸೀಸನ್‍ನಲ್ಲಿ ಕೋಲಾರದ ಟೊಮಾಟೊ ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಸಾಗಣೆ ಆಗುತ್ತಿದ್ದು, ಟೊಮೆಟೊ ಬೆಲೆ ಗಗನಕ್ಕೇರಿ ಟೊಮಾಟೊಗೆ ಚಿನ್ನದ ಬೆಲೆ ಬಂದಿದೆ.

    ಜಿಲ್ಲೆಯಲ್ಲಿ ಸೀಡ್ಸ್ ಮತ್ತು ನಾಟಿ ಟೊಮಾಟೊವನ್ನು ಬೆಳೆಯಲಾಗುತ್ತದೆ. ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಟೊಮಾಟೊ ಬೆಳೆಯಲು ಕಷ್ಟವಾಗುತ್ತದೆ. ಈ ರಾಜ್ಯಗಳಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಟೊಮಾಟೊ ಬೆಳೆಯಲು ಪೂರಕ ವಾತಾವರಣ ಇರುವುದಿಲ್ಲ. ಹೀಗಾಗಿ ಕೋಲಾರ ಜಿಲ್ಲೆಯ ಈ ಅವಧಿಯಲ್ಲಿ ಹೆಚ್ಚಿಗೆ ಟೊಮಾಟೊ ಬೆಳೆಯಲಾಗುತ್ತದೆ. ಇದರ ಜತೆಗೆ ಬೇರೆ ರಾಜ್ಯಗಳಲ್ಲಿ ಮುಂಗಾರು ಮಳೆ ಬೀಳುವುದರಿಂದ ಮಳೆಯಿಂದ ಬೆಳೆಗಳಿಗೆ ಹಾನಿ ಆಗುತ್ತದೆ.

    ಇದರಿಂದಲೂ ಕೋಲಾರದ ಟೊಮಾಟೊಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಟೊಮಾಟೊ ವ್ಯಾಪಾರಿಗಳು ಹೇಳುತ್ತಾರೆ. ಈ ಬಾರಿ ಬಿಸಿಲು ಹೆಚ್ಚಾಗಿದ್ದರಿಂದ ಬೆಳೆ ಕೂಡ ಉತ್ತಮವಾಗಿದೆ. ಇದರಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಲ್ಲಿ ಕೊರೊನಾ ಭೀತಿ ಇರುವುದರಿಂದ ಬೆಲೆ ಏರಿಕೆ ನಿಧಾನಗತಿಯಲ್ಲಿ ಏರುತ್ತಿದೆ. 15 ದಿನಗಳ ನಂತರ ಟೊಮಾಟೊ ಬೆಲೆ ಒಂದು ಬಾಕ್ಸ್ ಗೆ 800 ರೂ.ಗಳಿಗೆ ಏರಿಕೆ ಆಗಿದೆ.

  • ಕೊರೊನಾ ಎಫೆಕ್ಟ್- ತಿರುಪತಿ ಲಡ್ಡಿನ ಬೆಲೆ ಇಳಿಕೆ

    ಕೊರೊನಾ ಎಫೆಕ್ಟ್- ತಿರುಪತಿ ಲಡ್ಡಿನ ಬೆಲೆ ಇಳಿಕೆ

    ಬೆಂಗಳೂರು: ಕೊರೊನಾ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಲಾಕ್‍ಡೌನ್‍ನಿಂದ ತಿಮ್ಮಪ್ಪನ ಲಡ್ಡು ಪ್ರಸಾದದ ಬೆಲೆ ಕಡಿಮೆಯಾಗಿದೆ.

    ಲಾಕ್‍ಡೌನ್ ಇದ್ದರೂ ಗ್ರೀನ್ ಝೋನ್ ವಾರ್ಡ್ ಗಳಲ್ಲಿ ರಿಯಾಯಿತಿ ಸಿಕ್ಕಿದೆ. ಆದರೂ ದೇವಾಲಯಗಳಲ್ಲಿ ಜನ ಸಮೂಹ ಸೇರಲು ಅವಕಾಶ ಇಲ್ಲ. ಹೀಗಾಗಿ ದೇವಾಲಯಗಳಲ್ಲಿ ಈಗ ಪ್ರಸಾದ ದರ ಕಡಿಮೆ ದರಕ್ಕೆ ಸಿಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ಯಾರಿಗೆ ಇಷ್ಟ ಇಲ್ಲ ಹೇಳಿ ಈ ಲಡ್ಡು ಎಲ್ಲರ ಅಚ್ಚುಮೆಚ್ಚು. ಈಗ ಈ ಲಡ್ಡುವಿನ ಬೆಲೆ ಕಡಿಮೆಯಾಗಿದೆ.

    ಈ ಬಗ್ಗೆ ಅಧಿಕೃತವಾಗಿ ಟಿಟಿಡಿ ಮೂಲಗಳೇ ಮಾಹಿತಿಯನ್ನು ಹೊರಹಾಕಿವೆ. ಈ ಪ್ರಕಾರ ಬೆಂಗಳೂರಿನಲ್ಲೇ 50 ರೂ. ಇದ್ದ ಒಂದು ಲಡ್ಡು, ಈಗ 25 ರೂ. ಗೆ ಸಿಗುತ್ತದೆ. ಇದು ಲಾಕ್‍ಡೌನ್ ಸಡಿಲಿಕೆಯ ಎಫೆಕ್ಟ್ ಆಗಿದ್ದು, ಲಾಕ್‍ಡೌನ್ ಮುನ್ನ ಲಡ್ಡು ಪ್ರಸಾದಕ್ಕಾಗಿ ಬೇಕಾದ ಎಲ್ಲ ಸಾಮಗ್ರಿಗಳ ಸಂಗ್ರಹವಾಗಿದೆ. ಈಗ ಕಾಲಕ್ರಮೇಣ ವಸ್ತುಗಳು ಕೆಡುತ್ತಿದೆ. ಜನರು ದೇವಾಲಯಕ್ಕೆ ಕಡಿಮೆಯಾಗಿದ್ದಾರೆ. ಹೀಗಾಗಿ ನಷ್ಟ ತಪ್ಪಿಸಲು ಈ ಪ್ಲಾನ್ ನಡೆದಿದೆ. ಈ ಪ್ರಕಾರ ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಲಡ್ಡು ಕಡಿಮೆ ದರಕ್ಕೆ ಸಿಗಲಿದೆ.

    ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ, ಈ ಕೊರೊನಾ ಲಾಕ್‍ಡೌನ್‍ನಿಂದ ನಾವು ಯಾವಾಗ ಭಕ್ತರಿಗೆ ದೇವಸ್ಥಾನದಲ್ಲಿ ದರ್ಶನ ಕಲ್ಪಿಸಿಕೊಡುತ್ತೇವೆ ಎಂದು ನಮಗೇ ತಿಳಿದಿಲ್ಲ. ಹೀಗಾಗಿ ಮನವಿ ಮಾಡಿಕೊಂಡ ಭಕ್ತರಿಗಾಗಿ ದೇವರ ಪ್ರಸಾದವನ್ನು ತಲುಪಿಸುವ ಕೆಲಸ ಮಾಡಬೇಕಿದೆ. ಆದ್ದರಿಂದ ಈ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.

    ಇಂಡಿಯಾ ಪೋಸ್ಟ್ ಮತ್ತು ಕೊರಿಯರ್ ಸೇವೆಗಳು ಇನ್ನೂ ಆರಂಭವಾಗಿಲ್ಲ. ಈ ಕಾರಣದಿಂದ ನಾವು ಕೊರಿಯರ್ ಮಾಡಲು ಆಗುವುದಿಲ್ಲ. ಹೀಗಾಗಿ ನಮ್ಮ ತಿರುಮಲ ಅಡುಗೆ ಮನೆಯಲ್ಲಿ ತಯಾರದ ಲಡ್ಡುವನ್ನು ವಿವಿಧ ನಗರಗಳಲ್ಲಿ ಇರುವ ನಮ್ಮ ಟ್ರಸ್ಟಿನ ಕೇಂದ್ರಗಳಿಗೆ ಕಳುಹಿಸಿರುತ್ತೇವೆ. ಪ್ರಸಾದ ಬೇಕಾದ ಭಕ್ತರು ಅಲ್ಲಿಗೆ ಬಂದು ತೆಗೆದುಕೊಂಡು ಹೋಗಬೇಕು ಎಂದು ಸುಬ್ಬಾ ರೆಡ್ಡಿ ಮಾಹಿತಿ ನೀಡಿದ್ದಾರೆ.

    ಲಡ್ಡುವನ್ನು ಆರ್ಡರ್ ಮಾಡಲು ಭಕ್ತರು ತಿರುಮಲ ದೇವಸ್ಥಾನದ ಉಪ ಕಾರ್ಯನಿರ್ವಾಹಕ ಅಧಿಕಾರಿ ಹರಿಂದ್ರ ನಾಥ್ ಅವರಿಗೆ (9849575952) ಮತ್ತು ಪೊಟು ಪೀಷ್ಕರ್ ಶ್ರೀನಿವಾಸನ್ ಅವರಿಗೆ (9701092777) ಕರೆ ಮಾಡಬಹುದು ಎಂದು ತಿರುಮಲದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ತಿಳಿಸಿದ್ದಾರೆ. ಜೊತೆಗೆ ನಾವು ಪ್ರತಿದಿನ 3-4 ಲಕ್ಷ ಲಾಡುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದೇವೆ. ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಹೊರತುಪಡಿಸಿ ಆಂಧ್ರಪ್ರದೇಶದ 13 ಜಿಲ್ಲೆಯಲ್ಲಿರುವ ಕೇಂದ್ರಗಳಿಗೆ ಲಡ್ಡುವನ್ನು ಕಳುಹಿಸಲಾಗುವುದು ಎಂದರು.

  • ಲಾಕ್‍ಡೌನ್‍ನಿಂದ ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ – ಕಂಗಾಲಾಗಿರುವ ಬೆಳೆಗಾರರು

    ಲಾಕ್‍ಡೌನ್‍ನಿಂದ ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ – ಕಂಗಾಲಾಗಿರುವ ಬೆಳೆಗಾರರು

    ರಾಯಚೂರು: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಲಾಕ್‍ಡೌನ್‍ನಿಂದ ಈರುಳ್ಳಿ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

    ಜಿಲ್ಲೆಯ ಮಸ್ಕಿ ತಾಲೂಕಿನ ಕೋಟೆಕಲ್ಲು ಗ್ರಾಮದಲ್ಲಿ ಈರುಳ್ಳಿ ಬೆಳೆದ ಸುಮಾರು 15 ರೈತರು ತಮ್ಮ ಬೆಳೆಯನ್ನ ಜಮೀನಿಗೆ ಅರ್ಪಿಸುತ್ತಿದ್ದಾರೆ. ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಅದನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಇನ್ನೂ ನಷ್ಟ ಹೆಚ್ವಾಗುತ್ತೆ ಅಂತ ಜಮೀನಿನಲ್ಲೆ ಬಿಟ್ಟಿದ್ದಾರೆ.

    ಸುಮಾರು 400 ಕ್ವಿಂಟಾಲ್ ಈರುಳ್ಳಿ ಬೆಲೆಯಿಲ್ಲದೆ ಹಾಳಾಗಿ ಹೋಗುತ್ತಿದೆ. ರೈತರಲ್ಲಿ ಬರುವ ಖರೀದಿದಾರರು ಕ್ವಿಂಟಾಲ್‍ಗೆ 60 ರೂಪಾಯಿ ಕೊಡುವುದಾಗಿ ಹೇಳುತ್ತಿದ್ದಾರೆ. ಇನ್ನೂ ಸಗಟು ಮಾರುಕಟ್ಟೆಯಲ್ಲಿ 100 ರಿಂದ 150 ರೂ. ಕ್ವಿಂಟಾಲ್ ಇದೆ. ಹೀಗಾಗಿ ರೈತರು ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದಿದ್ದರಿಂದ ಕಂಗಾಲಾಗಿದ್ದಾರೆ.

    ಬೆಳೆಗೆ ಉತ್ತಮ ಬೆಲೆ ಬಂದರೆ ಮಾರಾಟ ಮಾಡುವುದು ಇಲ್ಲದಿದ್ದರೆ ಜಮೀನಿನಲ್ಲೇ ಕೊಳೆತುಹೋಗಲಿ ಅಂತ ಬಿಟ್ಟಿದ್ದಾರೆ. ಲಾಕ್‍ಡೌನ್ ನಿಂದ ಮಾರ್ಚ್ ತಿಂಗಳಲ್ಲೆ ಗ್ರಾಮಗಳಿಗೆ ಬಂದಿರುವ ಕೂಲಿ ಕಾರ್ಮಿಕರು ತಮ್ಮ ಜಮೀನುಗಳಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದಾರೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಕೆಲಸವೂ ಇಲ್ಲ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೂ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರ ನಮ್ಮ ಕಡೆ ಗಮನಹರಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

  • ಕಾಫಿ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ

    ಕಾಫಿ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ

    – ಕಾಫಿಗೆ ಬೆಲೆನೂ ಇಲ್ಲ, ಕೊಳ್ಳೋರೂ ಇಲ್ಲ

    ಹಾಸನ: ಕೊರೊನಾ ಮಹಾಮಾರಿ ಹೊಡೆತಕ್ಕೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿಗೆ ಒಳ್ಳೆ ಬೆಲೆನೂ ಸಿಗುತ್ತಿಲ್ಲ. ಇತ್ತ ಕಾಫಿಯನ್ನು ಕೊಳ್ಳುವವರು ಇಲ್ಲದಂತಾಗಿದೆ. ಇದನ್ನೂ ಓದಿ: ಖಡಕ್ ರೊಟ್ಟಿ ಮೇಲೂ ಕೊರೊನಾ ಕರಿನೆರಳು

    ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದ ಕಾಫಿತೋಟದ ಮಾಲೀಕರು ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಇದ್ದಕ್ಕಿದ್ದಂತೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದಾಗಿ ಕಾಫಿ ಬೆಳೆಗೆ ಬೇಡಿಕೆ ಕುಸಿದಿದೆ. ಕಾಫಿ ಕೊಳ್ಳುವವರು ಕೂಡ ಮುಂದೆ ಬರುತ್ತಿಲ್ಲ. ಇದರಿಂದ ಸರಿಯಾದ ಬೆಲೆ ಕೂಡ ಸಿಗದಂತಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ವರ್ಷ ಕಾಫಿ ತೋಟ ಮಾಡುವುದೇ ಕಷ್ಟ ಆಗುತ್ತೆ ಎಂದು ಕಾಫಿ ತೋಟದ ಮಾಲೀಕರಾದ ಜಗನ್ನಾಥ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಒಂದು ಕಡೆ ಕೊರೊನಾ ಮಹಾಮಾರಿಗೆ ಹೆದರಿದ ಹೊರರಾಜ್ಯ, ಜಿಲ್ಲೆಯಿಂದ ಬಂದಿದ್ದ ಕೂಲಿ ಕಾರ್ಮಿಕರು ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ತಮ್ಮ ಊರಿನತ್ತ ವಾಪಸ್ಸಾಗುತ್ತಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಅಂತರ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಮಾಲೀಕರು ಕೂಡ ಕೆಲಸಕ್ಕೆ ಕರೆಯುತ್ತಿಲ್ಲ. ಆದ್ದರಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

    ಲಾಕ್‍ಡೌನ್ ವೇಳೆ ರೈತರಂತೆ ಕಾಫಿಬೆಳೆಗಾರರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಉತ್ತಮ ಬೆಲೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಅನ್ನೋದು ಕಾಫಿಬೆಳೆಗಾರರ ಒತ್ತಾಯವಾಗಿದೆ.