Tag: ಬೆಲೆ

  • ಕಂಠಪೂರ್ತಿ ಕುಡಿದವ್ರ ಕಿಕ್ಕಿಳಿಸಿದ ರಾಜ್ಯ ಸರ್ಕಾರ – ಇಂದಿನಿಂದ ‘ಎಣ್ಣೆ’ ಪಾರ್ಟಿಗಳ ಜೇಬು ಬಲುಭಾರ

    ಕಂಠಪೂರ್ತಿ ಕುಡಿದವ್ರ ಕಿಕ್ಕಿಳಿಸಿದ ರಾಜ್ಯ ಸರ್ಕಾರ – ಇಂದಿನಿಂದ ‘ಎಣ್ಣೆ’ ಪಾರ್ಟಿಗಳ ಜೇಬು ಬಲುಭಾರ

    – ಮೂರನೇ ದಿನ ಬರೋಬ್ಬರಿ 231 ಕೋಟಿ ವ್ಯಾಪಾರ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಒಂದೂವರೆ ತಿಂಗಳ ಬಳಿಕ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಕೊಟ್ಟಿತ್ತು. ಇದೀಗ ಎಣ್ಣೆ ಮತ್ತಿನಲ್ಲಿ ತೇಲಾಡುತ್ತಿದ್ದ ಮದ್ಯಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಮದ್ಯದ ಮೇಲೆ ಕೋವಿಡ್ -19 ಸೆಸ್ ವಿಧಿಸಲಾಗಿದೆ. ಇಂದಿನಿಂದ ಮದ್ಯದ ಹೊಸದರ ಜಾರಿಗೆ ಬರಲಿದೆ.

    ಸರ್ಕಾರ ಅವಕಾಶ ಕೊಟ್ಟಿದ್ದೆ ತಡ ವೈನ್ ಶಾಪ್, ಎಂಆರ್‌ಪಿ ಶಾಪ್ ಎದುರು ಅಪಾರ ಜನರು ಸೇರುತ್ತಿದ್ದಾರೆ. ಮಧ್ಯಾಹ್ನ ಎನ್ನದೇ ಮದ್ಯಪ್ರಿಯರು ಕಾದುನಿಂತು ಎಣ್ಣೆ ತೆಗೆದುಕೊಂಡು ಹೋಗಿದ್ದಾರೆ. ಸಂಜೆಯಾಗುತ್ತಲೇ ಕುಡಿದು ತೂರಾಡಿ, ಡ್ಯಾನ್ಸ್ ಮಾಡಿ, ಟ್ರಾಫಿಕ್ ಕಂಟ್ರೋಲ್ ಕೂಡ ಮಾಡಿದ್ದಾರೆ. ಇದೀಗ ಲಾಕ್‍ಡೌನ್ ರಿಲೀಫ್ ಆದ ಬಳಿಕ ಕಳೆದ 2 ದಿನಗಳಿಂದ ಕಂಠಪೂರ್ತಿ ಕುಡಿದು ತೇಲಾಡುತ್ತಿದ್ದ ಎಣ್ಣೆಪ್ರಿಯರಿಗೆ ಸರ್ಕಾರ ಬಿಗ್‍ಶಾಕ್ ಕೊಟ್ಟಿದೆ.

    ದೆಹಲಿ, ಆಂಧ್ರ ಬೆನ್ನಲ್ಲೇ ಕರ್ನಾಟಕದಲ್ಲೂ ಮದ್ಯ ದುಬಾರಿಯಾಗಿದೆ. ಸರ್ಕಾರ ಕೂಡ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ. 17ರಷ್ಟು ಹೆಚ್ಚಿಸಿದೆ. ಬಜೆಟ್‍ನಲ್ಲಿ ಶೇ. 6ರಷ್ಟು ಅಬಕಾರಿ ಸುಂಕ ವಿಧಿಸಲಷ್ಟೇ ತೀರ್ಮಾನಿಸಲಾಗಿತ್ತು. ಆದರೆ ಇದೀಗ ಮದ್ಯದ ಮೇಲೆ ಶೇ. 11ರಷ್ಟು ಕೊರೊನಾ ಸೆಸ್ ವಿಧಿಸಲಾಗಿದೆ.

    ಯಾವ ಬ್ರ್ಯಾಂಡ್‍ಗೆ ಎಷ್ಟು ಶುಲ್ಕ?
    ಶೇ. 17ರಿಂದ ಶೇ. 25ರವರೆಗೂ ಮದ್ಯದ ಬೆಲೆಯನ್ನು ಬ್ರ್ಯಾಂಡ್‍ಗಳ ಆಧಾರದ ಮೇಲೆ ಹೆಚ್ಚಿಸಲಾಗಿದೆ. ಹೈಬ್ರ್ಯಾಂಡ್‍ಗಳಿಗೆ ಶೇ.25ರವರೆಗೆ ಸುಂಕ ವಿಧಿಸಲಾಗಿದೆ. ಮಿಡಲ್ ಮದ್ಯಗಳಿಗೆ ಶೇ. 21ರಷ್ಟು ಸುಂಕ ವಿಧಿಸಲಾಗಿದ್ದು, ಚೀಪ್ ಲಿಕ್ಕರ್‌ಗಳಿಗೆ ಶೇ. 17ರಷ್ಟು ಅಬಕಾರಿ ಸುಂಕ ಏರಲಾಗಿದೆ. ಆದರೆ ಬೀರ್, ಫೆನಿ, ವೈನ್, ನೀರಾ ಮೇಲೆ ಶುಲ್ಕ ವಿಧಿಸಲಾಗಿಲ್ಲ. ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ. ಇಂದಿನಿಂದಲೇ ಮದ್ಯದ ಹೊಸ ದರ ಜಾರಿಗೆ ಬರಲಿದೆ.

    ‘ಮದ್ಯ’ ಭರ್ಜರಿ ಮಾರಾಟ:
    ಇನ್ನೂ ರಾಜ್ಯದಲ್ಲಿ ಮೂರನೇ ದಿನವು ಭರ್ಜರಿ ಮದ್ಯ ಮಾರಾಟವಾಗಿದೆ. ಬಾರ್ ಓಪನ್ ಆಗಿ ಮೂರನೇ ದಿನವಾದ ಬುಧವಾರ ಬರೋಬ್ಬರಿ 231 ಕೋಟಿಯ ವ್ಯಾಪಾರ ನಡೆಸಿದೆ ಕೆಎಸ್‍ಬಿಸಿಎಲ್. ಬಾರ್‌ಗಳು ಮೊನ್ನೆಯ ದಾಖಲೆ ಮುರಿದು ಮದ್ಯ ಖರೀದಿ ಮಾಡಿವೆ. ನಿನ್ನೆ ಒಂದೇ ದಿನ 195 ಕೋಟಿಯಷ್ಟು ಮದ್ಯ ಖರೀದಿ ಮಾಡಲಾಗಿತ್ತು. 7 ಲಕ್ಷ ಲೀಟರ್ ಬೀರ್ ಮಾರಾಟವಾಗಿ 15.6 ಕೋಟಿ ರೂಪಾಯಿ ಬಂದಿದರೆ, 39 ಲಕ್ಷ ಲೀಟರ್ ಐಎಮ್‍ಎಲ್ ಲಿಕ್ಕರ್ ಸೇಲ್ ಆಗಿ 216 ಕೋಟಿ ರೂಪಾಯಿ ಬಂದಿದೆ.

    ಮೂರು ದಿನಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಎಷ್ಟೆಷ್ಟು ಗಳಿಕೆ:
    ಎಣ್ಣೆ ಮಾರಾಟದಿಂದ ಸರ್ಕಾರದ ಬೊಕ್ಕಸ ತುಂಬುತ್ತಿದೆ. ವೈನ್‍ಶಾಪ್ ಓಪನ್ ಮಾಡಿದ ಮೊದಲನೇ ದಿನ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಎರಡನೇ ದಿನ 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಮೂರನೇ ದಿನ ಅಂದರೆ ನಿನ್ನೆ ಬರೋಬ್ಬರಿ 231 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

  • ಮೇ 11ರಿಂದ ಅಡಕೆ ವಹಿವಾಟು ಆರಂಭ: ಶಾಸಕ ಆರಗ ಜ್ಞಾನೇಂದ್ರ

    ಮೇ 11ರಿಂದ ಅಡಕೆ ವಹಿವಾಟು ಆರಂಭ: ಶಾಸಕ ಆರಗ ಜ್ಞಾನೇಂದ್ರ

    – ಅಡಕೆ ಧಾರಣೆ ಕುಸಿಯಲು ಬಿಡಲ್ಲ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಸ್ಥಗಿತಗೊಂಡಿದ್ದ ಅಡಕೆ ವಹಿವಾಟು ಮೇ 11ರಿಂದ ಆರಂಭವಾಗಲಿದೆ ಎಂದು ಅಡಕೆ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ನಗರದ ಮ್ಯಾಮ್ ಕೋಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗಾರರ ಹಿತ ಮನಗಂಡು ಅಡಕೆ ಖರೀದಿ ಆರಂಭಿಸಲಾಗುವುದು, ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೊರೊನಾ ವೈರಸ್ ನಿಂದಾಗಿ ಉತ್ತರ ಭಾರತದಲ್ಲಿನ ಪಾನ್ ಮಸಲಾ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಹೀಗಾಗಿ ಅಡಕೆ ರಫ್ತು ಸಾಧ್ಯವಾಗಿರಲಿಲ್ಲ ಜೊತೆಗೆ ಕಾರ್ಮಿಕರು ಲಭ್ಯವಿಲ್ಲದ ಕಾರಣ ವಹಿವಾಟು ಸ್ಥಗಿತಗೊಂಡಿತ್ತು ಎಂದು ಸ್ಪಷ್ಟಪಡಿಸಿದರು.

    ಅಡಕೆ ವಹಿವಾಟು ಸ್ಥಗಿತಗೊಂಡಿದ್ದರಿಂದ ಬೆಳೆಗಾರರು ಧಾರಣೆ ಕುಸಿಯಬಹುದು ಎಂಬ ಭೀತಿಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಅಡಕೆ ಧಾರಣೆ ಕುಸಿಯಲು ಬಿಡುವುದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ. ಧಾರಣೆ ಕುಸಿಯಲಿದೆ ಎಂಬ ಭೀತಿಗೆ ಒಳಗಾಗಿ ಬೆಳೆಗಾರರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

  • ಈರುಳ್ಳಿಗೆ ಬೆಲೆ ಸಿಗ್ತಿಲ್ಲವೆಂದು ವಿಡಿಯೋ ಮಾಡಿದ್ದ ರೈತ ಮಹಿಳೆ – ಫೋನ್ ಮಾಡಿ ಧೈರ್ಯ ಹೇಳಿದ ಸಿಎಂ

    ಈರುಳ್ಳಿಗೆ ಬೆಲೆ ಸಿಗ್ತಿಲ್ಲವೆಂದು ವಿಡಿಯೋ ಮಾಡಿದ್ದ ರೈತ ಮಹಿಳೆ – ಫೋನ್ ಮಾಡಿ ಧೈರ್ಯ ಹೇಳಿದ ಸಿಎಂ

    ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕರು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ರೈತ ಮಹಿಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಧೈರ್ಯ ಹೇಳಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯನಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ವಿಡಿಯೋ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಆದರೂ ರೈತ ಮಾತ್ರ ಕೆಲಸ ಮಾಡುತ್ತಿದ್ದಾನೆ. ದೇಶ ಆಳುವ ಪ್ರಧಾನಿಯಿಂದ, ದೇಶ ಕಾಯೋ ಸೈನಿಕ ಕೂಡ ತಿನ್ನೋದು ರೈತ ಬೆಳೆದ ಬೆಳೆಯನ್ನೇ. ಆದರೆ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲ ಎಂದು ರೈತರ ಕಷ್ಟದ ಬಗ್ಗೆ ತಿಳಿಸಿದ್ದಾರೆ.

    ಈರುಳ್ಳಿ ಬೆಳೆಗೆ ಬೆಲೆ ಇಲ್ಲ. ಚೀಲ ಈರುಳ್ಳಿಗೆ 250-300 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಆದರೆ ಈರುಳ್ಳಿ ಬಿತ್ತನೆ, ಕೊಯ್ಯೋದಕ್ಕೆ ಮತ್ತು ಕೂಲಿ ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಹೀಗಾಗಿ ಒಂದು ಚೀಲ ಈರುಳ್ಳಿ ಬೆಳೆಯೋದಕ್ಕೆ ಕನಿಷ್ಠ 500-600 ರೂಪಾಯಿ ಖರ್ಚಾಗತ್ತೆ. ಆದರೆ ಮಾರುಕಟ್ಟೆಯಲ್ಲಿ ನಮ್ಮ ಬೆಳೆಗೆ ಬೆಲೆಯೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋ ನೋಡಿದ ಸಿಎಂ ಯಡಿಯೂರಪ್ಪ ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆಗೆ ಅಭಯ ನೀಡಿದ್ದಾರೆ. ರೈತ ಮಹಿಳೆಗೆ ಫೋನ್ ಮಾಡಿ ಆಕೆಯ ಜಾಣತನಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆ ಸಿಎಂ ಧೈರ್ಯ ತುಂಬಿದ್ದಾರೆ.

    ಸಿಎಂ ಫೋನ್ ಮಾಡಿದ್ದಾಗ ರೈತ ಮಹಿಳೆ, ಸುಮಾರು ರೈತರು ಈರುಳ್ಳಿ ಬೆಳೆದಿದ್ದೇವೆ. ಗ್ರೀನ್ ಪಾಸ್ ಕೊಡಿಸಿದ್ದೀರಿ. ಆದರೆ ಹೆಚ್ಚು ಅಂದರೂ 1 ಚೀಲಕ್ಕೆ 400 ರೂ. ಕೊಡುತ್ತಾರೆ ಅಷ್ಟೆ. ಸರ್ಕಾರದ ಸೌಲಭ್ಯ ಯಾವುದು ರೈತರಿಗೆ ತಲುಪುತ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ, ಬೆಲೆ ಕಡಿಮೆ ಇದೆ ಅಲ್ವಾ? ಡಿಸಿ ಜೊತೆ ಮಾತನಾಡುತ್ತೀನಿ. ಏನು ವ್ಯವಸ್ಥೆ ಮಾಡಬೇಕು ಮಾಡಿಸುತ್ತೀನಿ. ಬಹಳ ಬುದ್ಧಿವಂತೆ ಇದ್ದೀಯಾ ಕಣ್ಣಮ್ಮ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಸಿಎಂ ಯಡಿಯೂರಪ್ಪ ಕೂಡಲೇ ಡಿಸಿಗೆ ಕರೆ ಮಾಡಿ, ಆ ಹಳ್ಳಿಗೆ ಭೇಟಿ ನೀಡಿ ಮಹಿಳೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಮಹಿಳೆ ಬೆಳೆದ ಈರುಳ್ಳಿ ಮತ್ತು ಇತರ ರೈತರು ಅಲ್ಲಿ ಈರುಳ್ಳಿ ಬೆಳೆದು ತೊಂದರೆಗೀಡಾಗಿದ್ದರೆ ಕೂಡಲೇ ಸರ್ಕಾರದ ವತಿಯಿಂದ ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ.

  • ಕೊಳ್ಳುವವರಿಲ್ಲದೆ ಟೊಮಾಟೊ, ಎಲೆಕೋಸು ಬೆಳೆ ನಾಶಪಡಿಸಿದ ರೈತರು

    ಕೊಳ್ಳುವವರಿಲ್ಲದೆ ಟೊಮಾಟೊ, ಎಲೆಕೋಸು ಬೆಳೆ ನಾಶಪಡಿಸಿದ ರೈತರು

    ದಾವಣಗೆರೆ: ಕೊರೊನಾ ಮಹಾಮಾರಿಗೆ ರೈತರು ತತ್ತರಿಸಿದ್ದು, ಬಹುತೇಕ ಜಿಲ್ಲೆಗಳಲ್ಲಿ ತಾವು ಬೆಳೆದ ಬೆಳೆ ಮಾರಾಟವಾಗುತ್ತಿಲ್ಲ ಎಂಬ ಕಾರಣಕ್ಕೆ ನಾಶಪಡಿಸುತ್ತಿದ್ದಾರೆ.

    ದಾವಣಗೆರೆ ತಾಲೂಕಿನ ಶಿವಪುರ, ಗಂಗನಕಟ್ಟೆ ಗ್ರಾಮದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ನಾಶಪಡಿಸಿದ್ದು, ತರಕಾರಿ ಖರೀದಿ ಇಲ್ಲದ್ದಕ್ಕೆ ಟೊಮಾಟೊ, ಎಲೆಕೋಸು ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿದ್ದಾರೆ. ಸುಮಾರು 5 ಎಕೆರೆಯಲ್ಲಿ ಟೊಮಾಟೊ, ಎಲೆಕೋಸು ಬೆಳೆದಿದ್ದ ರೈತ ಹೇಮಂತ್ ಹಾಗೂ ಹನುಮಂತಪ್ಪ ಅವರು ಬೆಲೆ ಇಲ್ಲದ ಕಾರಣ ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ನಾಶ ಪಡಿಸಿದ್ದಾರೆ. ಸರ್ಕಾರವೇ ನಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

    ಸುಮಾರು 1 ಲಕ್ಷ ರೂ. ಖರ್ಚು ಮಾಡಿ ತರಕಾರಿ ಬೆಳೆ ಬೆಳೆಯಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದೆಡೆ ತರಕಾರಿ ಬೆಲೆ ಕುಸಿತ ಇನ್ನೊಂದೆಡೆ ಖರೀದಿಸುವರೇ ಇಲ್ಲದಂತಾಗಿದೆ. ಹೀಗಾಗಿ ಅನ್ನದಾತರು ಬೆಳೆಯನ್ನೇ ನಾಶ ಮಾಡುತ್ತಿದ್ದಾರೆ.

  • ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

    ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

    – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಸಹಾಯ

    ಯಾದಗಿರಿ: ಕೊರೊನಾದಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಬೆಳೆದ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ರೈತರಿಗೂ ಸಂಕಷ್ಟ ಎದುರಗಿದ್ದು, ಪಬ್ಲಿಕ್ ಟಿವಿ ಮನವಿ ಮೇರೆಗೆ ಜಿಲ್ಲೆಯ ಖಾಸಗಿ ವೈದ್ಯ ಮತ್ತು ಗುತ್ತಿಗೆದಾರ ಸ್ಪಂದಿಸುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಸಂಕಷ್ಟದಲ್ಲಿರುವ ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ನೆರವಾಗಲು ರಾಜ್ಯದಲ್ಲಿಯೇ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಗೆ ಸಿಲುಕಿ, ಸಾರಿಗೆ ಮತ್ತು ಸರಿಯಾದ ಮಾರುಕಟ್ಟೆ ಇಲ್ಲದೆ ಬೆಳೆದ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ, ವೈದ್ಯ ವಿರೇಶ್ ಜಾಕಾ ಮತ್ತು ಗುತ್ತಿಗೆದಾರ ಬಸವರಾಜ್ ಸಹಾಯ ಹಸ್ತಚಾಚಿದ್ದಾರೆ. ರೈತರರಿಂದ ಹಣ್ಣುಗಳನ್ನು ಖರೀದಿಸಿ ಬಡ ಮತ್ತು ನಿರ್ಗತಿಕರಿಗೆ ಉಚಿತ ಊಟದ ಜೊತೆ ಹಣ್ಣು ವಿತರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ವ್ಯಾಪಾರ ಮತ್ತು ನಿರ್ಗತಿಕರಿಗೆ ಆರೋಗ್ಯ ಲಭ್ಯವಾಗುತ್ತಿದೆ.

    ಜಿಲ್ಲೆಯ ಖಾನಾಪುರ ಗ್ರಾಮದ ರೈತ ನಾಗಪ್ಪ 6 ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಲಾಕ್ ಡೌನ್ ಹಿನ್ನೆಲೆ ಬೆಳೆ ಸಾಗಿಸಲು ಸಕಾಲಕ್ಕೆ ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಇದರಿಂದ ನಾಗಪ್ಪ ಅವರ 4 ಎಕರೆ ಕಲ್ಲಂಗಡಿ ಮಣ್ಣು ಪಾಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಈಗ ಉಳಿದಿರುವ 2 ಎಕರೆ ಕಲ್ಲಂಗಡಿ ಖರೀದಿಗೆ ಮುಂದಾದ ವೈದ್ಯ ಮತ್ತು ಗುತ್ತಿಗೆದಾರ, ಸುಮಾರು 10 ಕ್ವಿಂಟಲ್ ಕಲ್ಲಂಗಡಿ ಖರೀದಿ ಮಾಡಿ ನಿರ್ಗತಿಕರಿಗೆ ಹಂಚಿಕೆ ಮಾಡುತ್ತಿದ್ದಾರೆ. ಈ ಇಬ್ಬರು ಕಳೆದ 15 ದಿನಗಳಿಂದ ಉಚಿತ ಊಟ ನೀಡುತ್ತಿದ್ದು, ಈಗ ಇಂತಹ ವಿನೂತನ ಪ್ರಯತ್ನದ ಮೂಲಕ ಜಿಲ್ಲೆಯ ರೈತರ ಸಂಕಷ್ಟಕ್ಕೆ ನೇರವಾಗುತ್ತಿದ್ದಾರೆ. ವೈದ್ಯ ಮತ್ತು ಗುತ್ತಿಗೆದಾರನ ಕಾರ್ಯಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

  • ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ – ಆತ್ಮಹತ್ಯೆ ಮಾಡಿಕೊಳ್ಳೋದೊಂದೆ ನಮಗೆ ದಾರಿ

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ – ಆತ್ಮಹತ್ಯೆ ಮಾಡಿಕೊಳ್ಳೋದೊಂದೆ ನಮಗೆ ದಾರಿ

    ಮಡಿಕೇರಿ: ಕೊರೊನಾ ಇಡೀ ವಿಶ್ವವನ್ನೇ ಬಾಧಿಸಿದೆ. ಅದರಲ್ಲೂ ರೈತರು, ಕೂಲಿ ಕಾರ್ಮಿಕರು, ನಿರ್ಗತಿಕರ ಜೀವನ ಅಯೋಮಯವಾಗಿದೆ. ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದರಿಂದ ಅನ್ನದಾತರು ತಾವು ಬೆಳೆದಿದ್ದ ಬೆಳೆಗಳನ್ನು ಕಟಾವು ಮಾಡಲಾಗದೇ, ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮದ ರೈತನೊಬ್ಬ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆ ಇದೀಗ ಮಣ್ಣು ಪಾಲಾಗಿದೆ. ಬ್ಯಾಡಗೊಟ್ಟ ಗ್ರಾಮದಲ್ಲಿ 5 ಎಕರೆ ಜಮೀನಿನಲ್ಲಿ ಸುಮಾರು 5 ಲಕ್ಷ ಬಂಡವಾಳ ಹಾಕಿ ಎಲೆ ಕೋಸು ಬೆಳೆ ಬೆಳೆದಿದ್ದರು. ದೇಶವನ್ನೇ ಲಾಕ್‍ಡೌನ್ ಮಾಡಿದ್ದರಿಂದ ಉತ್ತಮ ಬೆಲೆ ಹೊಂದಿದ್ದ ಎಲೆ ಕೋಸು ಬೆಲೆ ಕುಸಿಯುವುದರ ಜೊತೆಗೆ ಕೊಳ್ಳುವವರು ಇಲ್ಲದೆ, ಮಾರುಕಟ್ಟೆಯನ್ನು ತಲುಪಿಸಲು ಸಾಧ್ಯವಾಗದೆ ಎಲೆಕೋಸು ಹೊಲದಲ್ಲೇ ಕೊಳೆತು ಹೋಗುತ್ತಿದೆ.

    ಉತ್ತಮ ಫಸಲು ಬಂದರೂ ಅದರಿಂದ ಲಾಭ ಸಿಗಲಿಲ್ಲ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಉಚಿತವಾಗಿ ತೆಗೆದುಕೊಂಡು ಹೋಗಲು ಬಿಟ್ಟಿದ್ದೇವೆ. ಮಧ್ಯವರ್ತಿಗಳು ಕೆ.ಜಿಗೆ 50 ಪೈಸೆ ಅಥವಾ 1 ರೂಪಾಯಿಗೆ ಕೇಳುತ್ತಾರೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ದಾರಿ ಎಂದು ರೈತ ಚಂದ್ರಶೆಟ್ಟಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕೆಲ ತಿಂಗಳುಗಳವರೆಗೆ ದೇಶಾದ್ಯಂತ ನಿಷೇದಾಜ್ಞೆ ಜಾರಿ ಇರುವ ಕಾರಣದಿಂದ ರೈತರ ಸಂಕಷ್ಟಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವಾಗಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

  • 2 ಕ್ಟಿಂಟಾಲ್ ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ ಮಾಜಿ ಸೈನಿಕ

    2 ಕ್ಟಿಂಟಾಲ್ ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ ಮಾಜಿ ಸೈನಿಕ

    – 10 ಚೀಲದಷ್ಟು ಸುರಿದ ಎಲ್ಲವನ್ನೂ ಬಾಚಿಕೊಂಡ್ರು

    ಮಡಿಕೇರಿ: ಕೊರೊನಾ ವೈರಸ್ ಭೀತಿ ಒಂದು ಕಡೆಯಾದರೆ, ಮತ್ತೊಂದು ಕಡೆ ರೈತ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಇದರಿಂದ ಮಾಜಿ ಸೈನಿಕರೊಬ್ಬರು ತಮ್ಮ ಒಂದು ಎಕರೆ ಭೂಮಿಯಲ್ಲಿ ಬೆಳೆದ ಹಸಿಮೆಣಸಿನಕಾಯಿಯನ್ನು ರಸ್ತೆಗೆ ಚೆಲ್ಲಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.

    ಕೊಡ್ಲಿಪೇಟೆ ಹೊಸಮುನ್ಸಿಪಾಲ್ಟಿ ನಿವಾಸಿ ನಿವೃತ ಯೋಧ ದೇವರಾಜ್ ಅವರು ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ್ದಾರೆ. ಒಂದು ಎಕರೆಯಲ್ಲಿ ಬೆಳೆದಿದ್ದ ಹಸಿರುಮೆಣಸಿಕಾಯಿ ಕಟಾವಿಗೆ ಬಂದಿತ್ತು. ಆದರೆ ಕೊರೊನಾದಿಂದ ದೇಶವೇ ಲಾಕ್‍ಡೌನ್ ಆಗಿರುವ ಕಾರಣದಿಂದಾಗಿ ರೈತರಿಂದ ಉತ್ತಮ ಬೆಲೆಗೆ ಖರೀದಿಸುವವರಿಲ್ಲ. ಇತ್ತ ಮೆಣಸಿನಕಾಯಿ ಹಣ್ಣಾಗಿ ಕೊಳೆತು ಹೋಗುವ ಪರಿಸ್ಥಿತಿಯನ್ನು ಕಂಡ ದೇವರಾಜ್ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಮೆಣಸಿನಕಾಯಿಯನ್ನ ಸುರಿದು ಜನರಿಗೆ ಉಚಿತವಾಗಿ ತೆಗೆದುಕೊಂಡು ಹೋಗುವಂತೆ ಕೂಗಿ ಹೇಳಿದ್ದಾರೆ.

    ಇದನ್ನು ಕಂಡು ಜನರು ಮುಗಿಬಿದ್ದು ತಮಗೆ ಬೇಕಾದಷ್ಟು ಮೆಣಸಿನಕಾಯಿಯನ್ನು ಬಾಚಿಕೊಂಡು ಹೋಗಿದ್ದಾರೆ. ಸುಮಾರು 20 ಕೆ.ಜಿ ತೂಕದ ಹತ್ತು ಚೀಲದಷ್ಟು ಮೆಣಸಿನಕಾಯಿ ರಸ್ತೆಯಲ್ಲಿ ಸುರಿದ್ದನ್ನು ಒಂದು ಬೀಡದೆ ಜನರು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಜನರು ಸಾಮಾಜಿಕ ಅಂತರವನ್ನು ಕೂಡ ಕಾಯ್ದುಕೊಂಡಿಲ್ಲ.

    ಈ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಅವುಗಳೆಲ್ಲ ಇದೀಗ ಕೊಯ್ಲಿಗೆ ಬಂದಿದ್ದರೂ ಮಾರಾಟ ಮಾಡಲು ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು

    ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು

    – ಉಚಿತವಾಗಿ ಬಾಳೆಹಣ್ಣು ಕೊಟ್ಟ ರೈತ

    ಕೋಲಾರ: ಕೊರೊನಾ ವೈರಸ್ ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಟೊಮೆಟೊ ಹಾಗೂ ಹೂವಿನ ಬೆಲೆ ತೀವ್ರವಾಗಿ ಕುಸಿತವಾದ ಪರಿಣಾಮ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನೂ ರಸ್ತೆಗೆ ಸುರಿದ ಟೊಮೆಟೊಗಾಗಿ ಮಹಿಳೆಯರು ಮುಗಿಬಿದ್ದ ಸನ್ನಿವೇಶ ನಡೆದಿದೆ.

    ಬೆಳೆದ ಟೊಮೆಟೊಗೆ ಬೆಲೆ ಇಲ್ಲದ ಕಾರಣ ಕೋಲಾರ ನಗರದ ಬಸ್ ನಿಲ್ದಾಣ ಸಮೀಪ ರಸ್ತೆ ಮಧ್ಯೆದಲ್ಲಿ ಟೊಮೆಟೊವನ್ನು ರೈತ ಸುರಿದಿದ್ದಾನೆ. ಇನ್ನೂ ರಸ್ತೆಯಲ್ಲಿದ್ದ ಟೊಮೆಟೊವನ್ನು ಅನೇಕ ಮಹಿಳೆಯರು ಎತ್ತಿಕೊಂಡಿದ್ದಾರೆ. ಕೊರೊನಾದಿಂದ ಒಂದು ಕಡೆ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ, ಮತ್ತೊಂದು ಕಡೆ ಜನರಿಗೆ ತರಕಾರಿ ಸಿಗುತ್ತಿಲ್ಲ. ಹಾಗಾಗಿ ರೈತರಿಗೆ ಕೊರೊನಾ ಎಫೆಕ್ಟ್ ತಟ್ಟಿದೆ.

    ಕೋಲಾರ ಜಿಲ್ಲೆ ಪೆಚ್ಚಾರ್ಲಹಳ್ಳಿ ಗ್ರಾಮದ ನಾಗೇಶ್ ಸುಮಾರು 5 ಎಕರೆಯಲ್ಲಿ ಚೆಂಡುಮಲ್ಲಿಗೆ ಹೂ ಬೆಳೆದಿದ್ದರು. ಬೆಳೆದ ಹೂವಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಡೆ ಸಿಗದೆ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಬೆಲೆ ಇಲ್ಲದೆ ಕಂಗಾಲಾಗಿ ಗಿಡದಲ್ಲಿದ್ದ ಹೂ ಕಿತ್ತು ತಿಪ್ಪೆಗೆ ಸುರಿಯತ್ತಿದ್ದಾನೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ನಾಗರಾಜ್ ತನ್ನ ಆರು ಎಕರೆ ಭೂಮಿಯಲ್ಲಿ ಬಾಳೆಹಣ್ಣು ಬೆಳೆದಿದ್ದನು. ಆದರೆ ಲಕ್ಷಾಂತರ ರೂಪಾಯಿ ಬೆಲೆಯ ಬಾಳೆಹಣ್ಣು ತೋಟದಲ್ಲೇ ಕೊಳೆಯುತ್ತಿದೆ. ಬಾಳೆ ಹಣ್ಣನ್ನು ಮಾರುಕಟ್ಟೆಗೂ ಹಾಕಲಾಗದೆ, ತೋಟದಲ್ಲೂ ಉಳಿಸಿಕೊಳ್ಳಲಾಗದೆ ರೈತ ಪರದಾಡುತ್ತಿದ್ದನು. ಕೊನೆಗೆ ರೈತ ನಾಗರಾಜ್ ಹಾಗೂ ಕುಟುಂಬಸ್ಥರು ಹಣ್ಣಾಗಿರುವ ಬಾಳೆಹಣ್ಣನ್ನು ಹಳ್ಳಿ ಜನರಿಗೆ ಉಚಿತವಾಗಿ ಹಂಚುವ ಕೆಲಸ ಮಾಡಿದ್ದಾರೆ.

  • ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ- ಔಷಧಿ ಮಳಿಗೆ ವಿರುದ್ಧ ಪ್ರಕರಣ ದಾಖಲು

    ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ- ಔಷಧಿ ಮಳಿಗೆ ವಿರುದ್ಧ ಪ್ರಕರಣ ದಾಖಲು

    – ಆಹಾರ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಬಹಿರಂಗ

    ತುಮಕೂರು: ಕೊರೊನಾ ಸೋಂಕಿನ ಆತಂಕ ಹುಚ್ಚುತ್ತಿರುವ ಬೆನ್ನಲ್ಲೇ, ಜನ ಮಾಸ್ಕ್ ಗಳ ಮೊರೆ ಹೋಗುತ್ತಿದ್ದು, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಔಷಧಿ ಅಂಗಡಿಯವರು ದುಪ್ಪಟ್ಟು ಬೆಲೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಮನಗಂಡ ಅಧಿಕಾರಿಗಳು ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

    ತುಮಕೂರಿನ ಸಗಟು ಮತ್ತು ಚಿಲ್ಲರೆ ಸೇರಿ ಒಟ್ಟು 15 ಔಷಧಿ ಮಳಿಗೆಗಳ ಮೇಲೆ ದಾಳಿ ನಡೆಸಿದ್ದು, ಸ್ಯಾನಿಟೈಜರ್ ಮತ್ತು ಮಾಸ್ಕ್ ಗಳ ದಾಸ್ತಾನು ಹಾಗೂ ಮಾರಾಟದ ಬಗ್ಗೆ ಪರಿಶೀಲಿಸಿದ್ದಾರೆ. ಈ ವೇಳೆ ಎಂ.ಆರ್.ಪಿ ದರ 16.8 ರೂ. ಇರುವುದನ್ನು 130 ರೂ.ಗಳಂತೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ 1 ಔಷಧಿ ಮಳಿಗೆಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

    ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರಯ್ಯ, ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ದೇವರಾಜ್, ಔಷಧ ನಿಯಂತ್ರಣ ಇಲಾಖೆಯ ಸಹಾಯಕ ನಿಯಂತ್ರಕ ಗೋಪಾಲ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಮನೋಜ್ ಹಾಗೂ ಜಿಲ್ಲಾ ಅಂಕಿತ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ.

    ತುಮಕೂರಿನಲ್ಲಿ 5 ರೂ. ಬೆಲೆಯ ಮಾಸ್ಕನ್ನು 50 ರೂ.ಗೆ ಮಾರಾಟ ಮಾಡುತಿದ್ದಾರೆ. ಇದನ್ನು ಅರಿತ ಅಧಿಕಾರಿಗಳು 15ಕ್ಕೂ ಹೆಚ್ಚು ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಔಷಧಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

  • ನಂಗೂ ಭಯ ಆಗಿ 900 ರೂ. ಕೊಟ್ಟು ಮಾಸ್ಕ್ ಖರೀದಿಸಿದೆ: ಪ್ರಜ್ವಲ್

    ನಂಗೂ ಭಯ ಆಗಿ 900 ರೂ. ಕೊಟ್ಟು ಮಾಸ್ಕ್ ಖರೀದಿಸಿದೆ: ಪ್ರಜ್ವಲ್

    – ಮಾಸ್ಕ್ ಬೆಲೆ ಬಗ್ಗೆ ಸಂಸದ ಆತಂಕ

    ಹಾಸನ: ನನಗೂ ಭಯ ಆಗಿ 900 ರೂಪಾಯಿ ಕೊಟ್ಟು ದೆಹಲಿಯಿಂದ ಬರುವಾಗ ಮಾಸ್ಕ್ ಖರೀದಿಸಿ ತಂದಿದ್ದೇನೆ. ನಾನೇ 900 ರೂಪಾಯಿ ಕೊಟ್ಟು ಮಾಸ್ಕ್ ಖರೀದಿಸಲು ಹಿಂದೆ ಮುಂದೆ ನೋಡುವಾಗ ಜನ ಎಲ್ಲಿಂದ ತರುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಸ್ಕ್ ಬೆಲೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    ಇಂದು ಸಂಸದ ಪ್ರಜ್ವಲ್ ರೇವಣ್ಣ ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ಕೊರೊನಾ ಸೋಂಕಿತರಿಗಾಗಿ ತೆರೆದಿರುವ ಸ್ಪೆಷಲ್ ವಾರ್ಡ್ ವೀಕ್ಷಣೆ ಮಾಡಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡಿದ ಪ್ರಜ್ವಲ್, ನನಗೂ ಭಯ ಆಗಿ 900 ರೂಪಾಯಿ ಕೊಟ್ಟು ದೆಹಲಿಯಿಂದ ಬರುವಾಗ ಮಾಸ್ಕ್ ಖರೀದಿಸಿ ತಂದಿದ್ದೇನೆ. ನಾನೇ 900 ರೂಪಾಯಿ ಕೊಟ್ಟು ಮಾಸ್ಕ್ ಖರೀದಿಸಲು ಹಿಂದೆ ಮುಂದೆ ನೋಡುವಾಗ ಜನ ಎಲ್ಲಿಂದ ತರುತ್ತಾರೆ. ಹೊರಗಡೆ ಮಾಸ್ಕ್ ದುಬಾರಿಯಾಗಿದ್ದು, ಆಸ್ಪತ್ರೆ ವತಿಯಿಂದಲೇ ಸೂಕ್ತ ಬೆಲೆಗೆ ಮಾರಲು ವ್ಯವಸ್ಥೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

    ಹಾಸನದಲ್ಲಿ ಈಗಾಗಲೇ 75 ಬೆಡ್‍ಗಳ ವಾರ್ಡ್ ರೆಡಿಯಿದೆ. ಇದನ್ನು 100 ಹಾಸಿಗೆಗಳಿಗೆ ಏರಿಸಲಾಗುವುದು. ಸಸ್ಪೆಕ್ಟೆಡ್ ಮತ್ತು ಪಾಸಿಟಿವ್ ಇರುವವರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗುವುದು. ಹಾಸನದಲ್ಲಿ ಇದುವರೆಗೂ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಧೈರ್ಯವಾಗಿರಿ. ಈಗಾಗಲೇ ಕೊರೊನಾ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದವರ ಮೇಲೂ ನಿಗಾ ಇರಿಸಲಾಗಿದೆ. ಒಂದು ವಾರದ ನಂತರ ಪುನಃ ಅವರನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.