Tag: ಬೆಲೆ ಕುಸಿತ

  • ವಿಜಯಪುರ| ದರ ಕುಸಿತ – ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿದ ರೈತ

    ವಿಜಯಪುರ| ದರ ಕುಸಿತ – ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿದ ರೈತ

    ವಿಜಯಪುರ: ಈರುಳ್ಳಿ (Onion) ದರ ದಿಢೀರ್ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ರೈತ (Farmer) ಹೊರಳಾಡಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ರೈತ ನಂದಪ್ಪ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿ ಗೋಳಾಡಿದ್ದಾರೆ. ರೈತರಾದ ನಂದಪ್ಪ ಗುಡ್ಡದ, ಮಲ್ಲಿಕಾರ್ಜುನ ಗೋಲಗೊಂಡ ಎಂಬವರಿಗೆ ಈರುಳ್ಳಿ ಸೇರಿದ್ದು, ಕ್ವಿಂಟಾಲ್‌ಗೆ 250 ರೂ. ದರ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಮಾಡಿದ್ದಾರೆ. ಇದನ್ನೂ ಓದಿ: Nelamangala | ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು

    ಈ ವೇಳೆ ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ

  • ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು

    ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಟೊಮೆಟೊದಿಂದ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೆಟೊ ಬೆಲೆ ಕುಸಿತದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಲೆ ಕುಸಿತದಿಂದ ಕಂಗಾಲಾದ ರೈತರು ಟೊಮೆಟೊ (Tomato) ಬೆಳೆಯನ್ನು ಕಟಾವು ಮಾಡದೇ ಹೊಲದಲ್ಲೇ ಬಿಟ್ಟಿದ್ದಾರೆ.

    ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಗ್ರಾಮದ ರೈತರು ಯಾವುದೇ ಬೆಳೆ ಬೆಳೆದರೂ ಒಂದಲ್ಲ, ಒಂದು ರೀತಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಈ ಬಾರಿ ಟೊಮೆಟೊ ಬೆಳೆದು ಅಪಾರ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದರೂ ಕೂಡ ಟೊಮೆಟೊ ಬೆಲೆ ಕುಸಿತದಿಂದಾಗಿ ಮತ್ತೆ ಅನ್ನದಾತರು ಸಾಲ ಶೂಲಕ್ಕೆ ಸಿಲುಕುವಂತಾಗಿದೆ. 25 ಕೆ.ಜಿಯ ಟೊಮೆಟೊ ಬಾಕ್ಸ್‌ಗೆ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಸಾಗಾಣೆ ವೆಚ್ಚ ಹಾಗೂ ಕೂಲಿಯ ಹಣವೂ ರೈತರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಕಟಾವು ಮಾಡದೇ ಗಿಡದಲ್ಲೇ ಬಿಟ್ಟು ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    ಅಪಾರ ಬೆಳೆ ಬೆಳೆದು, ಉತ್ತಮ ಇಳುವರಿ ಬಂದರೂ ಕೂಡ ತಕ್ಕ ಬೆಲೆ ಸಿಗಲಾರದೇ ಕೋಟೆನಾಡಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಇವರತ್ತ ಸುಳಿದಿಲ್ಲ. ರೈತರ ಸಂಕಷ್ಟ ಆಲಿಸಿಲ್ಲವೆಂದು ರೈತರು ಅಸಮಾಧಾನ ಹೊರಹಾಕಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

  • ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ- ರೈತರ ಮೊಗದಲ್ಲಿ ಕಣ್ಣೀರು

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ- ರೈತರ ಮೊಗದಲ್ಲಿ ಕಣ್ಣೀರು

    – ಬೆಲೆ ಸಿಗದೆ ಎರಡು ಮಾರುಕಟ್ಟೆಯಿಂದ ರೈತರು ಕಂಗಾಲು

    ಬೆಂಗಳೂರು: ಸಾಲ ಮಾಡಿ ಬೆಳೆದ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಮಾರುಕಟ್ಟೆಗೆ ಬಂದ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 1 ರೂಪಾಯಿಯಿಂದ 50 ರೂಪಾಯಿ ವರೆಗೆ ಮಾತ್ರ ಮಾರಾಟವಾಗುತ್ತಿದೆ. ಈರುಳ್ಳಿ ಬೆಳೆದು ದೂರದ ಜಿಲ್ಲೆಗಳಿಂದ ತಂದ ರೈತನಿಗೆ ಬೆಂಗಳೂರಿನ ಮಾರುಕಟ್ಟೆಯಲ್ಲಿ ಲಾರಿ ಬಾಡಿಗೆ ಕೂಡ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್

    ಸಾಲ ಮಾಡಿ ಬೆಳೆದು ಬೆಲೆ ಸಿಗದೆ ಇದ್ದರೆ ಹೇಗೆ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎರಡು ಮಾರುಕಟ್ಟೆಯಿಂದ ರೈತರಿಗೆ ಬೆಲೆ ಸಿಗುತ್ತಿಲ್ಲ. ಯಶವಂತಪುರ ಹಾಗೂ ದಾಸನಪುರ ಎರಡು ಮಾರುಕಟ್ಟೆಗಳಲ್ಲಿ ಇದೇ ಸಮಸ್ಯೆ ಇದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

    ಸಾಲ ಮಾಡಿ ಉಳುಮೆ ಮಾಡಿ, ಬೀಜ ಖರೀದಿಸಿ, ಗೊಬ್ಬರ ಹಾಕಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ.

  • ಕೊರೊನಾ ವೈರಸ್ ಎಫೆಕ್ಟ್, ರೇಷ್ಮೆ ಗೂಡಿನ ಬೆಲೆ ಇಳಿತ, ಕಂಗಾಲಾದ ರೈತರು

    ಕೊರೊನಾ ವೈರಸ್ ಎಫೆಕ್ಟ್, ರೇಷ್ಮೆ ಗೂಡಿನ ಬೆಲೆ ಇಳಿತ, ಕಂಗಾಲಾದ ರೈತರು

    ರಾಮನಗರ: ಮಹಾಮಾರಿ ಕೊರೊನಾ ವೈರೆಸ್ ಎಫೆಕ್ಟ್ ಇದೀಗ ಸದ್ದಿಲ್ಲದೇ ರೇಷ್ಮೆ ಬೆಳೆ ಮೇಲೆ ಪರಿಣಾಮ ಬೀರಿದೆ. ಒಂದೆಡೆ ರೈತರು ರೇಷ್ಮೆಗೂಡಿನ ಬೆಲೆ ಕುಸಿತಕ್ಕೆ ಕಂಗಾಲಾಗಿದರೆ ರೀಲರ್ಸ್ ಗಳು ತಮ್ಮ ಕಚ್ಚಾ ರೇಷ್ಮೆ ಸೇಲ್ ಆಗುತ್ತಿಲ್ಲ ಅಂತ ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ರೇಷ್ಮೆಗೂಡು ಟನ್‍ಗಟ್ಟಲೇ ದಿನನಿತ್ಯ ಬರುತ್ತಿದ್ದು ಅಲ್ಪ ಹಣದಲ್ಲೇ ಪೆಚ್ಚು ಮೋರೆ ಹಾಕಿಕೊಂಡು ರೈತರು ಮನೆಗೆ ತೆರಳುವಂತಾಗಿದೆ.

    ಕೊರೊನಾ ರಾಜ್ಯಕ್ಕೆ ಕಾಲಿಡುವ ಮುನ್ನ ಸಾಕಷ್ಟು ಖುಷಿಯಲ್ಲಿ ಮಾರುಕಟ್ಟೆಗೆ ಬಂದು ರೇಷ್ಮೆಗೂಡು ಮಾರಾಟ ಮಾಡಿ ಹೋಗುತ್ತಿದ್ದ ರೈತರಿಗೆ ಇದೀಗ ಏಕಾಏಕಿ ಸಿಡಿಲು ಬಡಿದದಂತಾಗಿದೆ. ಕೊರೊನಾ ಎಫೆಕ್ಟ್‍ನಿಂದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದ್ದು ರೈತರು ಪರದಾಡುವಂತಾಗಿದೆ.

    ಕೊರೊನಾ ಮಹಾಮಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೇಷ್ಮೆ ಮಾರುಕಟ್ಟೆಗಳು ಸಹ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ರೈತರು ರಾಮನಗರದ ರೇಷ್ಮೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಹ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿಯುವಂತಾಗಿದೆ.

    ಅದರಲ್ಲೂ ರೀಲರ್ಸ್ ಗಳು ತಮ್ಮಲ್ಲಿನ ಕಚ್ಚಾ ರೇಷ್ಮೆಯೇ ಮಾರಾಟವಾಗುತ್ತಿಲ್ಲ. ಈ ರೇಷ್ಮೆ ತೆಗೆದುಕೊಂಡು ಏನ್ ಮಾಡೋದು ಎಂದು ವಾರದಲ್ಲಿ 2 ದಿನಗಳು ಮಾತ್ರವೇ ರೇಷ್ಮೆಗೂಡು ಖರೀದಿಗೆ ಮುಂದಾಗಿದ್ದಾರೆ. ಇನ್ನುಳಿದ ದಿನಗಳಲ್ಲಿ ಸುಮ್ಮನೆ ಕುಳಿತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.

    ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಡುವ ಮುನ್ನ ರೇಷ್ಮೆ ಬೆಳೆಗೆ ಉತ್ತಮವಾದ ಬೆಲೆಯಿತ್ತು. ಪ್ರತಿನಿತ್ಯ ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ಗಳು ಸಹ ಪೈಪೋಟಿ ನಡೆಸಿ ರೇಷ್ಮೆಗೂಡು ಖರೀದಿಯ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ರೇಷ್ಮೆಗೂಡಿನ ಬೆಲೆ ಸಹ ಕುಸಿತ ಕಂಡಿದೆ.

    ಕಳೆದ 15 ದಿನಗಳ ಹಿಂದೆ ಪ್ರತಿನಿತ್ಯ 32ರಿಂದ 35 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೀಗ ಪ್ರತಿನಿತ್ಯ ಮಾರುಕಟ್ಟೆಗೆ 45ರಿಂದ 50 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೇ ರೇಷ್ಮೆ ಮಾರುಕಟ್ಟೆಯಲ್ಲಿ 400 ಲಾಟ್‍ಗಳಷ್ಟಿದ್ದ ಗೂಡು 670 ಲಾಟ್‍ಗೆ ಏರಿಕೆಯಾಗಿದೆ. ಇದರಿಂದಾಗಿ ಹಳದಿ ಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 280 ರೂಪಾಯಿಗೆ ಇಳಿದರೆ, ಬಿಳಿ ರೇಷ್ಮೆಗೂಡು 270 ರೂಪಾಯಿಗಳಷ್ಟಿದೆ. ಆದರೆ ಹಿಂದಿನ ದರದಲ್ಲಿ ಬರೋಬ್ಬರಿ 100 ರೂಪಾಯಿಗಳಷ್ಟು ಇಳಿಕೆಯಾಗಿರುವುದು ರೈತರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ.

    ಈ ಎಲ್ಲ ಬೆಳವಣಿಗೆಯಿಂದ ರೀಲರ್ಸ್ ಗಳು ಹಾಗೂ ರೈತರು ಸಹ ಪರದಾಡುವಂತಾಗಿದೆ. ಪ್ರತಿ ವರ್ಷವೂ ಈ ಸಮಯಕ್ಕೆ ರೇಷ್ಮೆಗೂಡಿನ ಬೆಲೆ ಏರಿಕೆಯಾಗುತ್ತಿತ್ತು. ಇದೀಗ ಕೊರೊನಾ ಎಫೆಕ್ಟ್ ರೇಷ್ಮೆ ಬೆಳೆಗಾರರಿಗೆ ಕೈ ಕೊಡುವಂತೆ ಮಾಡಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

  • ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಎಪಿಎಂಸಿಯಲ್ಲಿ 1 ಕೆ.ಜಿಗೆ 2 ರೂ.

    ಪಾತಾಳಕ್ಕೆ ಕುಸಿದ ಟೊಮೆಟೋ ಬೆಲೆ – ಎಪಿಎಂಸಿಯಲ್ಲಿ 1 ಕೆ.ಜಿಗೆ 2 ರೂ.

    ಕೋಲಾರ: ಹೊರ ರಾಜ್ಯಗಳಿಂದ ಬೇಡಿಕೆ ಕೊರತೆ ಹಾಗೂ ಆವಕ ಹೆಚ್ಚಾದ ಹಿನ್ನೆಲೆ ಟೊಮೆಟೋ ಬೆಲೆ ತೀವ್ರ ಕುಸಿತ ಕಂಡಿದ್ದು, ಒಂದು ಕೆ.ಜಿ. ಟೊಮೆಟೋಗೆ 2 ರೂಪಾಯಿ ಸಿಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

    ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೆ ಆದ ಮಾರುಕಟ್ಟೆ ಹೊಂದಿರುವ ಕೋಲಾರದ ಎಪಿಎಂಸಿಯಲ್ಲಿ ಟೊಮೆಟೋ ಬೆಲೆ ತೀವ್ರ ಕುಸಿತ ಕಂಡಿದೆ. ಕೆಲವೊಮ್ಮೆ ಬಂಗಾರದ ಬೆಲೆ ಸಿಕ್ಕರೆ, ಇನ್ನೂ ಕೆಲವೊಮ್ಮೆ ಟೊಮೆಟೋ ಬೆಲೆ ತೀವ್ರ ಕುಸಿಯುತ್ತಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಟೊಮೆಟೋ ಉತ್ಪಾದನೆ ಹೆಚ್ಚಾಗಿದ್ದು, ಊಜಿ ಹಾಗೂ ನುಸಿ ಹುಳ ಕಾಟ ಕೂಡ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ಟೊಮೆಟೋ ಬರುವುದು ಹೆಚ್ಚಾಗಿದೆ. ಜೊತೆಗೆ ಹೊರ ರಾಜ್ಯಗಳಲ್ಲಿ ಟೊಮೆಟೋಗೆ ಬೇಡಿಕೆ ಇಲ್ಲದಿರುವುದು ಟೊಮೆಟೋ ಬೆಲೆ ನೆಲ ಕಚ್ಚಲು ಕಾರಣ ಎನ್ನಲಾಗುತ್ತಿದೆ.

    ಸದ್ಯ ಒಂದು ಕೆ.ಜಿ ಟೊಮೆಟೋ 2 ರಿಂದ 3 ರೂಪಾಯಿಗೆ ಮಾರಾಟವಾಗುತ್ತಿದೆ. ಅಂದರೆ 15 ಕೆಜಿಯ ಒಂದು ಬಾಕ್ಸ್ ಟೊಮೆಟೋ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದೆ. ದೇಶದ ವಿವಿಧ ಭಾಗಗಳಿಗೆ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಟೊಮೆಟೋ ರಫ್ತಾಗುತ್ತದೆ. ಆದರೆ ಇತರೆ ರಾಜ್ಯಗಳಲ್ಲಿಯೂ ಟೊಮೆಟೋ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ಕೇಳುವವರೆ ಇಲ್ಲದಾಗಿದೆ. ಸಿಕ್ಕ ಸ್ವಲ್ಪ ನೀರನ್ನ ಬಳಕೆ ಮಾಡಿಕೊಂಡು ರೈತರು ಬೆಳೆದ ಟೊಮೆಟೋ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೂಡ ಸಿಗದಂತಾಗಿದ್ದು, ಅನ್ನ ದಾತ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ – ಸಾ.ರಾ.ಮಹೇಶ್

    ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ – ಸಾ.ರಾ.ಮಹೇಶ್

    ರಾಮನಗರ: ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಆರೋಪ ಮಾಡಿದ್ದಾರೆ.

    ಇಂದು ಚನ್ನಪಟ್ಟಣ ತಾಲೂಕಿನ ಕಣ್ವಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶಗಳಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕಾರಣದಿಂದ ರಾಜ್ಯದಲ್ಲಿ ರೇಷ್ಮೆ ಬೆಲೆ ಕಡಿಮೆಯಾಗಿದೆ ಎಂದು ಆರೋಪ ಮಾಡಿದ್ದಾರೆ.

    ರೇಷ್ಮೆ ಬೆಲೆ ಹೆಚ್ಚಿಸಲು ರೇಷ್ಮೆಯ ಹದಿನೈದು ಉಪ ಉತ್ಪನ್ನಗಳ ತಯಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ರೇಷ್ಮೆ ಆಯೋಗದ ಕಾರ್ಯದರ್ಶಿಯೊಂದಿಗೆ ಸಂಜೆ ಸಭೆ ನಡೆಸಲಾಗುತ್ತಿದ್ದು, ರೇಷ್ಮೆ ದರ ಸಂಬಂಧ ಚರ್ಚೆ ಮಾಡಲಾಗುವುದು. ಅನ್‍ಲೈನ್ ಮೂಲಕ ರೈತರಿಗೆ ಪೇಮೆಂಟ್ ವ್ಯವಸ್ಥೆ ಮಾಡಲಾಗಿದೆ. ರೇಷ್ಮೆ ಹರಾಜು ಮುನ್ನ ಅಕೌಂಟ್‍ಗಳಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗುವುದು. ರೇಷ್ಮೆ ಮಾರುಕಟ್ಟೆಯನ್ನು ಅಧುನೀಕರಣ ಮಾಡಲಾಗುವುದು ಎಂದು ರೇಷ್ಮೆ ಬೆಳೆಗಾರರಿಗೆ ತಿಳಿಸಿದ್ದಾರೆ.

    ಇದೇ ವೇಳೆ ಕಣ್ವದ ಬಳಿ 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಈ ಯೋಜನೆಗೆ 10 ಕೋಟಿ ಪ್ರಸ್ತಾವನೆಯಲ್ಲಿ 8 ಕೋಟಿ ಬಿಡುಗಡೆ ಮಾಡಲಾಗುವುದು. ಕಣ್ವ ಬಳಿ ಮಕ್ಕಳ ಪಾರ್ಕ್‍ಗೆ 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಆದರೆ ಈ ಹಣ ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಚನ್ನಪಟ್ಟಣದ ಕೆಎಸ್‍ಐಸಿ ಹಳೆ ಕಟ್ಟಡಗಳ ನವೀಕರಣ ಜೊತೆಗೆ ಒಂದು ಲಕ್ಷ ಸೀರೆ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಮೈಸೂರಿನಲ್ಲಿಯು ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗುವುದು. ಈ ಯೋಜನೆಗಾಗಿ 100 ಕೋಟಿ ಮೀಸಲಿಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.