Tag: ಬೆಣ್ಣೆ ಹಳ್ಳ

  • ಬೆಣ್ಣೆ ಹಳ್ಳ ನೀರಿಗೆ ಸಿಲುಕಿದ ಮೂವರು, 150 ಕುರಿಗಳು- ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ

    ಬೆಣ್ಣೆ ಹಳ್ಳ ನೀರಿಗೆ ಸಿಲುಕಿದ ಮೂವರು, 150 ಕುರಿಗಳು- ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ

    – ಧಾರಾಕಾರ ಮಳೆಗೆ ಬೆಣ್ಣೆ ಹಳ್ಳ ಪ್ರವಾಹ ಪರಿಸ್ಥಿತಿ ನಿರ್ಮಾಣ

    ಹುಬ್ಬಳ್ಳಿ: ಧಾರಾಕಾರ ಮಳೆಗೆ ದೇವನೂರು ಬಳಿಯ ಬೆಣ್ಣೆ ಹಳ್ಳದಲ್ಲಿ (Bennehalla) ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಣ್ಣೆ ಹಳ್ಳದ ನೀರಿಗೆ ಸಿಲುಕಿ ಹಾಕಿಕೊಂಡಿದ್ದ ಮೂವರನ್ನು ಹಾಗೂ 150 ಕುರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಬಳಿ ನಡೆದಿದೆ.

    ಕುರಿಗಳನ್ನು ಮೇಯಿಸಲು ಹೋದ ಹನುಮಂತ ಬೆನಕನಹಳ್ಳಿ, ಮಂಜಪ್ಪ ಬೆನಕನಹಳ್ಳಿ ಮತ್ತು ಇನ್ನೋರ್ವ ವ್ಯಕ್ತಿ ಸೇರಿ 150 ಕುರಿಗಳು ನೀರಿನ ಪ್ರವಾಹಕ್ಕೆ ಸಿಲುಕಿದ್ದನ್ನು ಕಂಡು ಸ್ಥಳೀಯರು ತಾಲೂಕು ಆಡಳಿತಕ್ಕೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯ ಪ್ರವೃತ್ತವಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆ ಹಗ್ಗ ಕಟ್ಟಿ ಮೂವರು ವ್ಯಕ್ತಿಗಳು ಮತ್ತು ಕುರಿಗಳ ರಕ್ಷಣೆ ಮಾಡಿದ್ದಾರೆ. ಮತ್ತೊಂದು ಕಡೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಇದನ್ನೂ ಓದಿ: ಅಮಿತ್ ಶಾ ಮಾತು ಕೇಳಿದ್ದೇ ತಪ್ಪಾಯ್ತಾ? – ಈಶ್ವರಪ್ಪ ಬೇಸರ

    ಕುಂದಗೋಳ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡುವೆ ಸಂಚಾರ ಸ್ಥಗಿತಗೊಂಡಿದೆ. ಸೊಟ್ಟ ಹಳ್ಳದ ನೀರಿನಿಂದಾಗಿ ಗ್ರಾಮಸ್ಥರು ಹಾಗೂ ರೈತರು ಪರದಾಟ ನಡೆಸಿದ್ದಾರೆ. ಶಿಗಿ ಹುಣ್ಣಿಮೆ ಹಿನ್ನೆಲೆ ಜಮೀನಿಗೆ ತೆರಳಬೇಕಿದ್ದ ರೈತರು ಹಳ್ಳದ ದಡದಲ್ಲಿಯೇ ಪೂಜೆ ಸಲ್ಲಿಸಿ ಮರಳಿದ್ದಾರೆ. ಕುಂದಗೋಳ ತಾಲೂಕಿನ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡುವೆ ಬರುವ ಸೊಟ್ಟ ಹಳ್ಳದಲ್ಲಿ ಮಳೆ ನೀರು ತುಂಬಿ ಬಂದು ಎರಡು ಗ್ರಾಮದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದನ್ನೂ ಓದಿ: Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ

  • ಪ್ರವಾಹ ನಿಯಂತ್ರಣ ಕಾರ್ಯಗಳಿಗೆ 5 ಕೋಟಿ ರೂ. ಬಿಡುಗಡೆ – ಧಾರವಾಡ ಡಿಸಿ

    ಪ್ರವಾಹ ನಿಯಂತ್ರಣ ಕಾರ್ಯಗಳಿಗೆ 5 ಕೋಟಿ ರೂ. ಬಿಡುಗಡೆ – ಧಾರವಾಡ ಡಿಸಿ

    ಧಾರವಾಡ: ಅತಿವೃಷ್ಟಿಯಿಂದ ಧಾರವಾಡ ಜಿಲ್ಲೆಯ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಹರಿದು ನೆರೆಹಾವಳಿ ಎದುರಿಸುವ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ನಾಲೆಗಳ ಪ್ರದೇಶಗಳಿಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್ ಭೇಟಿ ಪರಿಶೀಲಿಸಿದರು.

    ಯಮನೂರು ಗ್ರಾಮದ ಬಳಿ ಬೆಣ್ಣೆಹಳ್ಳದಿಂದ ಉಂಟಾಗುವ ಪರಿಸ್ಥಿತಿ, ಅಮರಗೋಳ ಗ್ರಾಮದ ಬಳಿಯ ನರಗುಂದ ಸೇತುವೆ, ಗೊಬ್ಬರಗುಂಪಿ, ಅಳಗವಾಡಿ, ಹೆಬ್ಬಾಳ, ಜಾವೂರ, ಹನಸಿ, ಶಿರಕೋಳ ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿ ಮತ್ತು ಹಳ್ಳ, ಕೊಳ್ಳಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಹನಸಿ – ಶಿರಕೋಳ ಮಧ್ಯೆ ತುಪ್ಪರಿಹಳ್ಳದ ಹರಿವಿನಿಂದ ಹಾನಿಗೀಡಾಗಿರುವ ರಸ್ತೆಯನ್ನು ನೋಡಿ ದುರಸ್ತಿಗೆ ಅನುದಾನ ಲಭ್ಯವಿದ್ದು ಕೂಡಲೇ ಒದಗಿಸುವದಾಗಿ ಹೇಳಿದರು.

    ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳಿಗೆ 5 ಕೋಟಿ ರೂ.ಬಿಡುಗಡೆಯಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ. ಅತಿವೃಷ್ಟಿ ಬಾಧಿತವಾಗುವ ಜಿಲ್ಲೆಯ 83 ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರವಾಹ ಎದುರಾದರೆ ಜನರ ಸ್ಥಳಾಂತರಕ್ಕೆ ಪರಿಹಾರ ಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.