Tag: ಬೆಡ್ ಬ್ಲಾಕಿಂಗ್

  • ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಮಹಾದುರಂತದ ಸಮಯದಲ್ಲಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಬೆಡ್ ಬ್ಲಾಕಿಂಗ್ ದಂಧೆಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾಕಷ್ಟು ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುವ ವಿಷಯ. ಈ ಕೂಡಲೇ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಂಜಪ್ಪ ಕಾಳೇಗೌಡ, ಹಲವು ವರ್ಷಗಳಿಂದ ಇವರ ಬಳಿ ಆಪ್ತ ಸಹಾಯಕನಾಗಿರುವ ಬಾಬು ಎಂಬಾತನನ್ನು ಹಾಗೂ ಇನ್ನಿತರರನ್ನು ಈಗಾಗಲೇ ಕೇಂದ್ರ ಅಪರಾಧ ದಳ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಬಗ್ಗೆ 200ಕ್ಕೂ ಹೆಚ್ಚು ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಹ ಈಗಾಗಲೇ ಸಲ್ಲಿಸಿದೆ. ಈ ಹಿಂದೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಾರ್ ರೂಂಗೆ ನುಗ್ಗಿ ಶಾಸಕರ ಬೆಂಬಲಿಗರು ಬೆಡ್ ಬ್ಲಾಕಿಂಗ್ ದಂಧೆಗೆ ಬೆಂಬಲ ನೀಡುತ್ತಿಲ್ಲವೆಂಬ ಕಾರಣಕ್ಕಾಗಿ ಕಿರಿಯ ಐಎಎಸ್ ಅಧಿಕಾರಿಯೊಬ್ಬರಿಗೆ ಹಲ್ಲೆಯನ್ನು ಸಹ ನಡೆಸಲು ಪ್ರಯತ್ನಿಸಿ ಧಾಂದಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ ಪ್ರಕರಣ – ಸತೀಶ್ ರೆಡ್ಡಿ ಆಪ್ತನ ಬಂಧನಕ್ಕೆ ಸಿಸಿಬಿ ಸಿದ್ಧತೆ

     

    ಶಾಸಕರ ಆಪ್ತ ಸಹಾಯಕ ಶಾಸಕರ ಬೆಂಬಲವಿಲ್ಲದೆ ಇಂತಹ ದುಷ್ಕೃತ್ಯಗಳಲ್ಲಿ ತೊಡಗುವುದು ಖಂಡಿತ ಸಾಧ್ಯವಿಲ್ಲ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಈ ಪ್ರಕರಣದಲ್ಲಿ ಶಾಸಕರ ಪಾತ್ರ ಏನು ಎಂಬುದನ್ನು ಸರ್ಕಾರ ಹಾಗೂ ತನಿಖಾ ಸಂಸ್ಥೆಯು ರಾಜ್ಯದ ಜನತೆಗೆ ಬಹಿರಂಗಗೊಳಿಸಬೇಕಿದೆ. ಕೇವಲ ಸಣ್ಣಪುಟ್ಟ ವ್ಯಕ್ತಿಗಳನ್ನು ಮಾತ್ರ ಬಂಧಿಸಿ ಪ್ರಭಾವಿ ಶಾಸಕರನ್ನು ಕರೆದು ವಿಚಾರಣೆಯನ್ನೂ ಸಹ ಮಾಡಿಲ್ಲ. ಬಿಜೆಪಿ ಸರ್ಕಾರವು ಅವರದೇ ಪಕ್ಷದ ಶಾಸಕನ ಪರ ನಿಂತಿರುವುದು ದೇಶದ ನ್ಯಾಯದಾನ ವ್ಯವಸ್ಥೆಗೆ ಅಪಮಾನ ತರುವ ವಿಷಯವಾಗಿದೆ. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಕೇಸ್ – ಸತೀಶ್ ರೆಡ್ಡಿ ಆಪ್ತ ಅರೆಸ್ಟ್

    ಬೆಡ್ ಬ್ಲಾಕಿಂಗ್ ನಂತಹ ಘೋರಾತಿಘೋರ ಅಪರಾಧ ಕೃತ್ಯದಿಂದ ಈಗಾಗಲೇ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಇವರುಗಳ ಸಾವಿಗೆ ಸೂಕ್ತ ನ್ಯಾಯವನ್ನು ಒದಗಿಸುವ ಇರಾದೆ ಹಾಗೂ ಕಿಂಚಿತ್ತು ಕಾಳಜಿ ಏನಾದರೂ ಸರ್ಕಾರಕ್ಕೆ ಇದ್ದಲ್ಲಿ ಈ ಕೂಡಲೇ ಸತೀಶ್ ರೆಡ್ಡಿ ಅವರನ್ನು ಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪ್ರಕರಣವು ಪ್ರಭಾವಿಗಳ ಒತ್ತಡದಿಂದ ಸಂಪೂರ್ಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

  • ಬೆಡ್ ಬ್ಲಾಕಿಂಗ್- ಬಿಜೆಪಿ ಸಂಸದ, ಶಾಸಕನ ವಿರುದ್ಧ ತನಿಖೆ ನಡೆಸುವಂತೆ ದೂರು

    ಬೆಡ್ ಬ್ಲಾಕಿಂಗ್- ಬಿಜೆಪಿ ಸಂಸದ, ಶಾಸಕನ ವಿರುದ್ಧ ತನಿಖೆ ನಡೆಸುವಂತೆ ದೂರು

    ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯ ಹಿಂದೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಕೈವಾಡವಿದ್ದು, ಸೂಕ್ತ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ.

    ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅಪ್ತ ಬಾಬುವನ್ನು ಬಂಧಿಸಿದ್ದಾರೆ. ಬಾಬು ಮೂಲಕ ಸತೀಶ್ ರೆಡ್ಡಿ ಸೇರಿದಂತೆ ಕೆಲ ಬಿಜೆಪಿ ಗರು ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದರು. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಕೂಡ ಬೆಂಬಲ ನೀಡಿದ್ದಾರೆ. ಹಾಗಾಗಿ ಈ ಇಬ್ಬರು ನಾಯಕರನ್ನು ಬಂಧಿಸಿ ಸೂಕ್ತ ತನಿಖೆ ಮಾಡಬೇಕು ಅಂತಾ ದೂರಿನಲ್ಲಿ ತಿಳಿಸಲಾಗಿದೆ.

    ಕೊರೋನಾ ಲಸಿಕೆ ಯನ್ನು ಉಚಿತವಾಗಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕೊಟ್ಟಿದ್ರು. ಆದ್ರೆ ಸಂಸದ ತೇಜಸ್ವಿ ಸೂರ್ಯ ಕ್ಷೇತ್ರದಲ್ಲೇ ಖಾಸಗಿ ಆಸ್ಪತ್ರೆಗಳು ಲಸಿಕೆ ಯನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಖಾಸಗಿ ಆಸ್ಪತ್ರೆ ಮುಂದೆ ಯಾವ್ಯಾವ ಲಸಿಕೆಗೆ ಎಷ್ಟು ಹಣ ಅಂತಾ ಬ್ಯಾನರ್ ಹಾಕಲಾಗಿದೆ, ವಿಪರ್ಯಾಸವೆಂದರೆ ಸಂಸದ ತೇಜಸ್ವಿ ಸೂರ್ಯರವರ ಫೋಟೋ ಕೂಡ ಅದೇ ಬ್ಯಾನರ್‍ಗಳಲ್ಲಿ ಹಾಕಲಾಗಿದೆ. ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಯಲ್ಲೂ ಸಂಸದರ ಕೈವಾಡ ವ್ಯಕ್ತವಾಗಿದೆ. ಹಾಗಾಗಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿಯ ಈ ಇಬ್ಬರು ಪ್ರಭಾವಿ ನಾಯಕರು ಮತ್ತು ಕೆಲ ಕಾರ್ಯಕರ್ತರು ಕೂಡ ಭಾಗಿಯಾಗಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಅಂತಾ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ.

  • ಈಶ್ವರಪ್ಪನವರೇ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ: ಜಮೀರ್ ಅಹ್ಮದ್ ಕಿಡಿ

    ಈಶ್ವರಪ್ಪನವರೇ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ: ಜಮೀರ್ ಅಹ್ಮದ್ ಕಿಡಿ

    – ತೇಜಸ್ವಿ ಸೂರ್ಯ ಬರೀ ಮುಸಲ್ಮಾನರು ಕಾಣೋದಾ ನಿಮ್ಮ ಕಣ್ಣಿಗೆ?

    ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರೇ ಮುಸಲ್ಮಾನ್, ಮುಸಲ್ಮಾನ್ ಅಂತ ಸಾಯಬೇಡಿ. ಸಂಸದ ತೇಜಸ್ವಿ ಸೂರ್ಯ ಅವರೇ ನಿಮ್ಮ ಕಣ್ಣಿಗೆ ಕೇವಲ ಮುಸಲ್ಮಾನರು ಕಾಣಿಸ್ತಾರಾ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ?:
    ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದ 17 ಮುಸ್ಲಿಂ ಯುವಕರನ್ನ ಜೊತೆಗೆ ಕರೆದುಕೊಂಡು ಶಾಸಕ ಜಮೀರ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿದರು. ಮಾನ್ಯ ಗ್ರೇಟ್ ಎಂಪಿಯವರು ಒಳ್ಳೆ ಕೆಲಸ ಮಾಡಿದ್ದೀರಿ. ಕಾಂಗ್ರೆಸ್ ಸರ್ಕಾರ ಇದೆ ಅದರ ವಿರುದ್ಧ ಆರೋಪ ಮಾಡಿದ್ದೀನಿ ಅನ್ನೋ ರೀತಿ ನಿಮ್ಮದೇ ಸರ್ಕಾರದ ವಿರುದ್ಧ ಕೆಲಸ ಮಾಡಿದ್ದೀರಿ. ನಿಮ್ಮ ಸಿಎಂ, ಬಿಜೆಪಿ ಸರ್ಕಾರ ಇರೋದು ಯಾಕೆ ರಾಜೀನಾಮೆ ಕೇಳಿಲ್ಲ. ಕೇವಲ ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ? ಕ್ರಿಸ್ಟಲ್ ಅನ್ನೋ ಕಂಪನಿ 205 ಜನರನ್ನ ನೇಮಕ ಮಾಡಿದೆ. ಅದರಲ್ಲಿ ಮಹಮ್ಮದ್ ಜಯಿದ್ ಅನ್ನೋ ಒಬ್ಬ ಮಾತ್ರ ಬೆಡ್ ಹಂಚಿಕೆಯಲ್ಲಿರೋದು. ಉಳಿದವರು ಹೆಲ್ಪ್ ಲೈನ್ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಶವ ಸಂಸ್ಕಾರ ಮಾಡಿದ್ದು ನಾವು:
    2020ರಲ್ಲೂ 500ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದು ನಾವು. ಈಗಲು ಮಾಡುತ್ತಿದ್ದೇವೆ. ನೀವು ಈ ರೀತಿ ಚೀಫ್ ರಾಜಕೀಯ ಮಾಡೋದು ಬೇಡ. ಸತೀಶ್ ರೆಡ್ಡಿ ಅವರೇ ಮದರಸ ಮಾಡೋಕೆ ಹೊರಟಿದ್ದಾರೆ ಅಂತಾರೆ. ತಿಳಿದು ಮಾತಾಡಿ 205ರಲ್ಲಿ 16 ಜನ ಮಾತ್ರ ಮುಸಲ್ಮಾನರು. ಪಂಚರ್ ಹಾಕೋರು ನಾವು. ಅನ್ ಎಜ್ಯುಕೆಟೆಡ್ ಹೌದು ಸ್ವಾಮಿ ಆದರೆ ನಿಮ್ಮ ಕಾರು ಪಂಚರ್ ಆದರು ನಮ್ಮ ಹತ್ರನೆ ಬರಬೇಕು ಎಂದು ವ್ಯಂಗ್ಯ ಮಾಡಿದರು.

    ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು:
    ಮುಸಲ್ಮಾನರು ಈ ದೇಶದ ಸ್ವಾತಂತ್ರಕ್ಕೆ ಹೋರಾಡಿದ್ದಾರೆ. ಇಂಡಿಯ ಗೇಟಲ್ಲಿ ಹೆಸರಿದೆ ಹೋಗಿ ನೋಡಿ. ಇಸ್ಲಾಂ ಧರ್ಮದಲ್ಲಿ ಜಾತಿ ಅಂತ ಇಲ್ಲಾ. 400 ಜನ ಹಿಂದೂಗಳು ಇದ್ದರೆ ನಾವು ಹೋಗಿ ವಾಸ ಮಾಡೋ ಹಾಗಿಲ್ಲ. ನಾವು ನಾನ್ ವೆಜ್ ತಿಂತಿವಿ ಅಂತ ಪರ್ಮಿಷನ್ ತಗೊಂಡು ವಾಸ ಮಾಡಬೇಕು. ಇನ್ನೊಮ್ಮೆ ಜಾತಿ ಮಾಡಿದರೆ ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? – ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಕಿಡಿ

    ಮುಸ್ಲಿಂ ದೇಶದ ಆಕ್ಸಿಜನ್ ಬೇಡ ಅನ್ನಬೇಕಿತ್ತು:
    ಕತಾರ್, ಸೌದಿ ಅರೆಬಿಯಾದಿಂದ ಆಕ್ಸಿಜನ್ ಬಂದಿದೆ. ಬರಿ ಮುಸ್ಲಿಮರಿಗೆ ಹಾಕಿ ಅಂತ ಹೇಳಿ ಕಳುಹಿಸಿದ್ದಾರಾ? ಮುಸ್ಲಿಂ ದೇಶದ ಆಕ್ಸಿಜನ್ ಬೇಡ ಅನ್ನಬೇಕಿತ್ತು. ನಾಚಿಕೆ ಆಗಬೇಕು ನಿಮಗೆ. ನಾನು ಮುಸ್ಲಿಂ ಇರಬಹುದು, ನಾನು ಹಿಂದುಸ್ಥಾನಿ. ಮೊದಲು ಆಮೇಲೆ ಕನ್ನಡಿಗ ಆಮೇಲೆ ನಾನೊಬ್ಬ ಮುಸ್ಲಿಂ ಎಂದು ಎದೆ ತಟ್ಟಿಕೊಂಡರು. ಯಾವನೇ ಆಗಲಿ ತಪ್ಪು ಮಾಡಿದ್ದರೆ ಗಲ್ಲು ಶಿಕ್ಷೆ ಆಗಬೇಕು. ನಿಮ್ಮ ವೈಫಲ್ಯತೆ ಮುಚ್ಚೋಕೆ ಹೀಗೆ ಆರೋಪ ಮಾಡಿದ್ದಾರೆ. ಚಾಮರಾಜನಗರದ ದುರಂತವನ್ನ ಮರೆಮಾಚಲು ಈ ವಿಷಯ ತಂದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

    ಇವರಲ್ಲಿ ಎಷ್ಟು ವಿಷ ಇರಬೇಕು:
    16 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ನಿಮಗೆ ಕೆಲಸದಿಂದ ತಗೆದರೆ ನಾನು 15 ಸಾವಿರ ಸಂಬಳ ಕೊಡ್ತಿನಿ. 5 ತಿಂಗಳು ಕೆಲಸ ಕೊಡುವೆ. ನನ್ನ ಜೊತೆ 5 ತಿಂಗಳು ಹಿಂದು ಮುಸ್ಲಿಂ ನೋಡದೆ ಎಲ್ಲರ ಸೇವೆ ಮಾಡಿ ಎಂದು ಧೈರ್ಯ ತುಂಬಿದರು. 205 ಜನರಲ್ಲಿ 16 ಜನರ ಪಟ್ಟಿ ಮಾಡಬೇಕಾದರೆ ಇವರಲ್ಲಿ ಎಷ್ಟು ವಿಷ ಇರಬೇಕು. ಸೋಶಿಯಲ್ ಮೀಡಿಯದಲ್ಲಿ ಹೆಣ್ಣು ಮಕ್ಕಳು ಬೈಯುತ್ತಿದ್ದಾರೆ. ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ದಿರಾ? ಸಂಸತ್ ನಲ್ಲಿ ಆಕ್ಸಿಜನ್ ಬಗ್ಗೆ ಒಂದು ದಿನವಾದರು ಬಾಯಿ ಬಿಟ್ಟರಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

    ಇದೆನಾ ಅಚ್ಛೇ ದಿನ್:
    ಈಶ್ವರಪ್ಪ ಸೀನಿಯರ್ ಲೀಡರ್ ನೋಡಿ ಮಾತಾಡಿ. ಸುಮ್ಮನೆ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ. ಮುಸಲ್ಮಾನರ ಹೆಸರು ಹೇಳಿದರೆ ಹಿಂದೂಗಳು ಒಟ್ಟಾಗಿ ವೋಟು ಕೊಡ್ತಾರೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಇದೆನಾ ಸಬ್ ಕಾ ಸಾಥ್ 16 ಜನರ ಹೆಸರು ಹೇಳೋದು. ಪ್ರಧಾನಿಗಳು ಅಚ್ಛೇ ದಿನ್ ಆಯೇಗಾ ಅಂದ್ರು. ಇದೆನಾ ಅಚ್ಛೇ ದಿನ್, ನಮಗೆ ಅಚ್ಛೆ ದಿನ್ ಬೇಡ. ನಮಗೆ ನಮ್ಮ ಹಳೆ ದಿನವೇ ಸಾಕು ಎಂದು ಹಲ್ಲು ಕಡಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯನ್ನು ಮುಸ್ಲಿಂ ಸಂಘಟನೆಯೇ ಮಾಡಿರುವ ಅನುಮಾನವಿದೆ: ಈಶ್ವರಪ್ಪ

  • ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

    ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

    – ನಾಲ್ಕು ವಾರ್ ರೂಂಗಳ ಮೇಲೆ ಸಿಸಿಬಿ ರೇಡ್

    ಬೆಂಗಳೂರು: ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ನಡೆದಿದ್ದ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ ಕುರಿತು ಪಬ್ಲಿಕ್ ಟಿವಿ ಬಿತ್ತರಿಸಿದ ಸುದ್ದಿ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು.

    ಸಂಸದ ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಸೂಕ್ತ ತನಿಖೆಯ ಭರವಸೆ ನೀಡಿದ್ರು. ಅಲ್ಲದೇ ಪ್ರಕರಣವನ್ನು ಕಳೆದ ರಾತ್ರಿಯೇ ಸಿಸಿಬಿಗೆ ಕೂಡ ವರ್ಗಾಯಿಸಿದ್ರು. ಈ ಬೆನ್ನಲ್ಲೇ ತನಿಖೆ ಶುರು ಮಾಡಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಯನಗರ ಠಾಣೆಗೆ ಭೇಟಿ ಕೊಟ್ಟು, ಆರೋಪಿಗಳಾದ ರೋಹಿತ್, ನೇತ್ರಾ ವಿಚಾರಣೆ ನಡೆಸಿದ್ರು. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

    ಇವರು ನೀಡಿದ ಮಾಹಿತಿ ಮೇರೆಗೆ ರಾತ್ರೋರಾತ್ರಿ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೋವಿಡ್ ವಾರ್ ರೂಂ ಉಸ್ತುವಾರಿ ವಹಿಸಿದ್ದ ಡಾ. ರೆಹಾನ್, ಬಿಬಿಎಂಪಿಯ ಇಬ್ಬರು ವೈದ್ಯರು, ಡಾಟಾ ಎಂಟ್ರಿ ಆಪರೇಟರ್‍ಗಳು, ನೋಡಲ್ ಆಫೀಸರ್‍ಗಳು, ಕೆಲವು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಪುಟ್ಟ ಆಸ್ಪತ್ರೆಗಳ ವೈದ್ಯರು ಕೂಡ ಸೇರಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ – ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಆಸ್ಪತ್ರೆಗಳ ವೈದ್ಯರು ನೇರ ಭಾಗಿ

    ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಂಭವ ಇದೆ. ಸಂಜೆ ದಕ್ಷಿಣ ವಲಯ ಕೋವಿಡ್ ವಾರ್ ರೂಂ ಸೇರಿದಂತೆ ನಾಲ್ಕು ವಾರ್ ರೂಂಗಳ ಮೇಲೆ ಸಿಸಿಬಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಹಲವು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಯಾವುದೇ ಕಾರಣಕ್ಕೂ ಈ ಅಕ್ರಮ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಿಸಿಬಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ – ಕೈ ನಾಯಕರ ಜೊತೆ ಆರೋಪಿ ಇರುವ ಫೋಟೋ ವೈರಲ್

  • ಬೆಂಗಳೂರು ಬೆಡ್ ದಂಧೆ, ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ: ಸಿಟಿ ರವಿ

    ಬೆಂಗಳೂರು ಬೆಡ್ ದಂಧೆ, ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ: ಸಿಟಿ ರವಿ

    – ಇಂತಹವರು ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗಲ್ಲ

    ಚಿಕ್ಕಮಗಳೂರು: ಸಂದರ್ಭದ ದುರ್ಲಾಭ ಪಡೆಯೋ ಪಾಪಿಗಳು, ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗುವುದಿಲ್ಲ. ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಡ್ ಬ್ಲಾಕ್ ದಂಧೆ ಹೇಯ ಕೃತ್ಯ, ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಆಗಬೇಕು. ಮೊದಲು ಮೆಡಿಕಲ್ ಸೀಟ್ ಬ್ಲಾಕ್ ಕೇಳಿದ್ದೆ. ಆದರೆ ಇಂತಹ ವಿಷಮ ಸಂದರ್ಭದಲ್ಲಿ ಕೋವಿಡ್ ಬೆಡ್ ಬ್ಲಾಕ್ ಮಾಡಿ ಬ್ಲಾಕ್ ಮಾರ್ಕೆಟ್ ಮಾಡುವ ಪಾಪಿಗಳನ್ನು ಈಗಲೇ ಕೇಳಿದ್ದು. ಅವರು ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗಲ್ಲ, ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

    ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ, ಅವರ ಬಗ್ಗೆ ಯಾರೂ ಸಮರ್ಥನೆ ಮಾಡಲು ಆಗುವುದಿಲ್ಲ, ಕಠಿಣ ಶಿಕ್ಷೆ ಆಗಬೇಕು. ಸಂಸದ ತೇಜಸ್ವಿ ಸೂರ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕಿಲ್ಲ ಎಂದರೆ ಅದಕ್ಕೆ ಇಂತಹ ಪಾಪಿಗಳೇ ಕಾರಣ ಎಂದರು.

    ಯಾವ ಆಸ್ಪತ್ರೆ, ಯಾರು ಶಾಮೀಲಾಗಿದ್ದಾರೆ ಎಲ್ಲ ಹೊರಬರಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕು. ಈಗಾಗಲೇ ಎಫ್‍ಐಆರ್ ದಾಖಲಾಗಿದೆ, ಯಾರ್ಯಾರು ಕಾಲ್ ಸೆಂಟರ್ ನಡೆಸುತ್ತಿದ್ದರು. ಅದರ ನೇತೃತ್ವ ವಹಿಸಿದ್ದವರು ಯಾರು? ಎಲ್ಲವೂ ತನಿಖೆ ಆಗಬೇಕು. ಅವರು ಅರೆಸ್ಟ್ ಕೂಡ ಆಗಿದ್ದಾರೆ. ಎಷ್ಟು ಬೆಡ್ ಈ ರೀತಿ ಆಗಿದೆ, ಯಾವ್ಯಾವ ಆಸ್ಪತ್ರೆಗಳಲ್ಲಿ ಮಾಡಿದ್ದಾರೆ. ಇನ್ನೂ ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಸಂಗತಿ ಹೊರಬರಬೇಕು. ಜೀವ ಉಳಿಸಲು ಒದ್ದಾಡುವಾಗ ಪ್ರಾಣದ ಜೊತೆ ಚೆಲ್ಲಾಟ ಆಡುವ ನೀಚ ಕೃತ್ಯ ಮಾಡಿದ್ದಾರೆ ಇದಕ್ಕೆ ಕ್ಷಮೆ ಇಲ್ಲ. ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

  • ಬೆಡ್ ಬ್ಲಾಕಿಂಗ್ ದಂಧೆಯನ್ನು ಮುಸ್ಲಿಂ ಸಂಘಟನೆಯೇ ಮಾಡಿರುವ ಅನುಮಾನವಿದೆ: ಈಶ್ವರಪ್ಪ

    ಬೆಡ್ ಬ್ಲಾಕಿಂಗ್ ದಂಧೆಯನ್ನು ಮುಸ್ಲಿಂ ಸಂಘಟನೆಯೇ ಮಾಡಿರುವ ಅನುಮಾನವಿದೆ: ಈಶ್ವರಪ್ಪ

    ಶಿವಮೊಗ್ಗ: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಮುಸ್ಲಿಂ ಸಂಘಟನೆ ಇರುವ ಅನುಮಾನ ಕಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಯಾವುದೋ ಮುಸ್ಲಿಂ ಸಂಘಟನೆಯೇ ಭಾಗಿಯಾಗಿದೆ ಎಂಬ ಅನುಮಾನ ಕಾಡುತ್ತಿದೆ. ಬೆಡ್ ಬ್ಲಾಕ್ ಮಾಡಿಕೊಂಡಿರುವುದರಲ್ಲಿ ಅತಿ ಹೆಚ್ಚು ಮುಸ್ಲಿಮರು ಇರುವುದು ಕಾಣುತ್ತಿದೆ. ರಾಜ್ಯದಲ್ಲಿ ಹಾಗೋ ಹೀಗೋ ಕೊರೊನಾ ಮ್ಯಾನೇಜ್ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಪ್ರಯತ್ನವನ್ನು ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ. ಆ ದಿಕ್ಕಿನಲ್ಲಿ ನಮ್ಮ ಸಂಸದರು, ಶಾಸಕರು ಪ್ರಯತ್ನ ಮಾಡಿ ಇದನ್ನು ಹೊರ ತಂದಿದ್ದಾರೆ ಎಂದರು. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ – ಬೇಸರ ತೋಡಿಕೊಂಡ ಸರ್ಫರಾಜ್ ಖಾನ್

    ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ನಂತರ ಗೊತ್ತಾಗುತ್ತೆ. ಅದು ಸಂಘಟನೆಯೋ, ವ್ಯಕ್ತಿಗಳೋ ಸ್ಪಷ್ಟ ಆಗಬೇಕಾಗುತ್ತದೆ. ಇದು ತನಿಖೆಯಿಂದ ಹೊರ ಬರಲಿದೆ, ತಪ್ಪಿತಸ್ಥರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಸಿಕ್ಕಿದ್ದಾರೆ. ಅದೇ ರೀತಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇದರ ಬಗ್ಗೆ ಅಲರ್ಟ್ ಆಗಿರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

  • ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಿಸಿಬಿಗೆ ವರ್ಗಾವಣೆ- ಇಬ್ಬರ ಬಂಧನ

    ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಿಸಿಬಿಗೆ ವರ್ಗಾವಣೆ- ಇಬ್ಬರ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಕಿಗೆ ಬಂದ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿದ ಅವರು, ಬಿಬಿಎಂಪಿ ಪೋರ್ಟಲ್ ಮೂಲಕ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸುವ ವಿಧಾನದಲ್ಲಿ ಅಕ್ರಮ ಎಸಗಿದವರ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಅಕ್ರಮದಲ್ಲಿ ಭಾಗಿಯಾದವರ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ..?
    ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದನ್ನೂ ಓದಿ: ಬೆಡ್ ದಂಧೆ ನಡೆಯೋದು ಹೇಗೆ ಅನ್ನೋದನ್ನ ವಿವರಿಸಿದ ತೇಜಸ್ವಿ ಸೂರ್ಯ

    ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೋಂ ಐಸೋಲೇಟ್ ನಲ್ಲಿರುವ ಸೋಂಕಿತನ ಹೆಸರಲ್ಲಿ ಬೆಡ್ ಬುಕ್ ಆದ್ರೆ, ಅದು ಯಾರಿಗೆ ನೀಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಮಹಾನಗರ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಈ ಹೆಲ್ತ್ ಎಮೆರ್ಜೆನ್ಸಿ ಉಂಟಾಗಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿದೆ. ಇದನ್ನೂ ಓದಿ: ನೀವೂ ಮನೆಯಲ್ಲಿದ್ರೂ ನಿಮ್ಮ ಹೆಸರಲ್ಲಿ ಬುಕ್ ಆಗುತ್ತೆ ಬೆಡ್ – ಬೇಕಾದವರಿಗೆ ಬೆಡ್ ನೀಡುವ ಧನದಾಹಿಗಳು