Tag: ಬೆಂಗಳೂರು ಸೆಂಟ್ರಲ್

  • ಬೆಂಗಳೂರು ರೌಂಡಪ್ – ದಕ್ಷಿಣ, ಉತ್ತರ, ಕೇಂದ್ರದಲ್ಲಿ ಯಾರಿಗೆ ಜಯಮಾಲೆ?

    ಬೆಂಗಳೂರು ರೌಂಡಪ್ – ದಕ್ಷಿಣ, ಉತ್ತರ, ಕೇಂದ್ರದಲ್ಲಿ ಯಾರಿಗೆ ಜಯಮಾಲೆ?

    ಬೆಂಗಳೂರು ಮಹಾನಗರವನ್ನು ದಕ್ಷಿಣ, ಉತ್ತರ ಮತ್ತು ಕೇಂದ್ರ ಎಂದು ಮೂರು ಲೋಕಸಭಾ ಕ್ಷೇತ್ರಗಳನ್ನು ವಿಭಾಗಿಸಲಾಗಿದೆ. ಈ ಮೂರು ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳೆಂದು ಬಿಂಬಿತವಾಗಿದ್ದು, ಅನಂತ್‍ಕುಮಾರ್ ನಿಧನದ ಬಳಿಕ ಬೆಂಗಳೂರು ದಕ್ಷಿಣದಿಂದ ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದಾರೆ. ಇತ್ತ ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕೇಂದ್ರದಿಂದ ಪಿ.ಸಿ.ಮೋಹನ್ ಕಣದಲ್ಲಿದ್ದಾರೆ.

    ಇತ್ತ ಕಾಂಗ್ರೆಸ್‍ನಿಂದ ಬೆಂಗಳೂರು ಕೇಂದ್ರ ರಿಜ್ವಾನ್ ಅರ್ಷದ್, ಉತ್ತರದಲ್ಲಿ ಕೃಷ್ಣ ಬೈರೇಗೌಡ ಮತ್ತು ದಕ್ಷಿಣದಲ್ಲಿ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ. ಮೊದಲ ಬಾರಿಗೆ ನಟ ಪ್ರಕಾಶ್ ರೈ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ.

    1. ಬೆಂಗಳೂರು ಉತ್ತರ ಕದನ:

    ಕಾಂಗ್ರೆಸ್‍ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದು ಬಿಜೆಪಿ. 2004ರಿಂದಲೇ ಬೆಂಗಳೂರು ಉತ್ತರ ಕ್ಷೇತ್ರವನ್ನು ಕೈ ತೆಕ್ಕೆಯಿಂದ ಬಿಜೆಪಿ ಕಿತ್ತುಕೊಂಡಿತ್ತು. 2004ರಲ್ಲಿ ಸಾಂಗ್ಲಿಯಾನ ಬಿಜೆಪಿಯಿಂದ ಗೆಲ್ಲುವ ಮೂಲಕ 2009ರಕಲ್ಲಿ ಡಿ.ಬಿ.ಚಂದ್ರೇಗೌಡ, 2014ರಲ್ಲಿ ಡಿ.ವಿ.ಸದಾನಂದಗೌಡ ಬಿಜೆಪಿಯಿಂದ ಗೆದ್ದಿದ್ರು. ಬೆಂಗಳೂರು ಉತ್ತರದಿಂದ 7 ಬಾರಿ ಗೆದ್ದಿದ್ದ ಕಾಂಗ್ರೆಸ್‍ನ ನಾಯಕ ದಿವಂಗತ ಜಾಫರ್ ಷರೀಫ್ ಅವರು ಸಾಂಗ್ಲಿಯಾನ, ಚಂದ್ರೇಗೌಡ ಅವರ ಎದುರು ಸೋತಿದ್ದರು.

    ಅಂದಿನಿಂದ ಬೆಂಗಳೂರು ಉತ್ತರ ಬಿಜೆಪಿ ಭದ್ರಕೋಟೆಯಾಗಿ ಬದಲಾಯ್ತು. ಮಿನಿ ಭಾರತದಂತಿರುವ ಈ ಕ್ಷೇತ್ರದಲ್ಲಿ ಎಲ್ಲ ಧರ್ಮ, ಜಾತಿ, ಒಳಗಿನವರು, ಹೊರಗಿನವರು ಎಲ್ಲರನ್ನೂ ಒಳಗೊಂಡಿರುವ ಕ್ಷೇತ್ರ. ಈಗ ಇದೇ ಕ್ಷೇತ್ರದಲ್ಲಿ ಒಂದೇ ಸಮುದಾಯದ ಇಬ್ಬರು ಅಖಾಡದಲ್ಲಿ ಇದ್ದಾರೆ. ಕೇಂದ್ರ ಸಚಿವ, ಹಾಲಿ ಸಂಸದ ಡಿ.ವಿ.ಸದಾನಂದಗೌಡ, ಸಚಿವ ಕೃಷ್ಣಬೈರೇಗೌಡ ಕಣದಲ್ಲಿದ್ದು, ಕದನ ಕಣ ರಂಗೇರಿದೆ.

    ಒಟ್ಟು ಮತದಾರರು: ಬೆಂಗಳೂರು ಉತ್ತರ ಕ್ಷೇತ್ರ 28,48,705 ಮತದಾರರನ್ನು ಒಳಗೊಂಡಿದೆ. 14,81,456 ಪುರುಷ ಮತದಾರರು ಮತ್ತು 13,66,753 ಮಹಿಳಾ ಮತದಾರರನ್ನು ಹೊಂದಿದೆ. ಒಕ್ಕಲಿಗ 8 ಲಕ್ಷ, ಎಸ್‍ಸಿ-ಎಸ್‍ಟಿ 5 ಲಕ್ಷ, ಮುಸ್ಲಿಂ 3 ಲಕ್ಷ, ಕುರುಬ 3 ಲಕ್ಷ, ಲಿಂಗಾಯತರು 2 ಲಕ್ಷ, ಇತರೆ ಹಿಂದುಳಿದ ವರ್ಗ 3 ಲಕ್ಷ ಮತದಾರರಿದ್ದಾರೆ. ಒಕ್ಕಲಿಗರ ಮತಗಳ ನಿರ್ಣಾಯಕ ಸ್ಥಾನದಲ್ಲಿವೆ.

    2014ರ ಫಲಿತಾಂಶ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡರು 2,29,764 (16.91%) ಮತಗಳ ಅಂತರದಿಂದ ಕಾಂಗ್ರೆಸ್‍ನ ಸಿ.ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಡಿ.ವಿ.ಸದಾನಂದಗೌಡ (ಬಿಜೆಪಿ) 7,18,326 (52.91%), ಸಿ.ನಾರಾಯಣಸ್ವಾಮಿ(ಕಾಂಗ್ರೆಸ್) 4,88,562 (35.99%) ಅಬ್ದುಲ್ ಅಜೀಂ (ಜೆಡಿಎಸ್)-92,681 (6.83%) ಮತಗಳನ್ನು ಪಡೆದಿದ್ದರು.

    ವಿಧಾನಸಭಾ ಚುನಾವಣೆಯ ಫಲಿತಾಂಶ: ಬೆಂಗಳೂರು ಉತ್ತರ ಲೋಕ ಅಖಾಡ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1 ಸ್ಥಾನದಲ್ಲಿ ಗೆಲುವು ಕಂಡಿವೆ. ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ(ಕಾಂಗ್ರೆಸ್), ಯಶವಂತಪುರ – ಎಸ್.ಟಿ.ಸೋಮಶೇಖರ್(ಕಾಂಗ್ರೆಸ್), ಹೆಬ್ಬಾಳ – ಭೈರತಿ ಸುರೇಶ್ (ಕಾಂಗ್ರೆಸ್), ಕೆ.ಆರ್.ಪುರಂ- ಭೈರತಿ ಬಸವರಾಜು (ಕಾಂಗ್ರೆಸ್), ಪುಲಿಕೇಶಿನನಗರ – ಅಖಂಡ ಶ್ರೀನಿವಾಸಮೂರ್ತಿ (ಕಾಂಗ್ರೆಸ್), ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ (ಜೆಡಿಎಸ್), ದಾಸರಹಳ್ಳಿ – ಮಂಜುನಾಥ್ (ಜೆಡಿಎಸ್) ಮತ್ತು ಮಲ್ಲೇಶ್ವರಂ- ಅಶ್ವಥ್‍ನಾರಾಯಣ್ (ಬಿಜೆಪಿ) ಶಾಸಕರಾಗಿದ್ದಾರೆ.

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    1. ಡಿ.ವಿ.ಸದಾನಂದಗೌಡ- ಬಿಜೆಪಿ
    2. ಕೃಷ್ಣಬೈರೇಗೌಡ- ಕಾಂಗ್ರೆಸ್

    2. ಬೆಂಗಳೂರು ದಕ್ಷಿಣ

    ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಭದ್ರಕೋಟೆಯಾಗಿತ್ತು. ಜನತಾ ಪಾರ್ಟಿಯ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣವನ್ನು ಛಿದ್ರ ಮಾಡಿದ್ದು ದಿವಂಗತ ಮಾಜಿ ಸಿಎಂ ಆರ್.ಗುಂಡೂರಾವ್. 1989ರಲ್ಲಿ ಜನತಾ ಪಾರ್ಟಿಯ ಛಿದ್ರಗೊಳಿಸಿದ ನಂತರ ಬಿಜೆಪಿಗೆ ವರವಾಯ್ತು. 1991ರಲ್ಲಿ ಕೆ.ವಿ.ಗೌಡ ಬಿಜೆಪಿಯಿಂದ ಗೆದ್ದರೆ ಆ ನಂತರ ಸತತ 6 ಬಾರಿ ಅನಂತಕುಮಾರ್ ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಒಕ್ಕಲಿಗ, ಬ್ರಾಹ್ಮಣ, ಮುಸ್ಲಿಂ ಸಮುದಾಯ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಉತ್ತರ ಭಾರತೀಯರು ನಿರ್ಣಾಯಕರಾಗಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ಕೊನೆಗೆ ಹೈಕಮಾಂಡ್ ಯೂತ್ ಫೇಸ್ ನೆಪದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಟ್ಟಿದ್ದು, ಕಾಂಗ್ರೆಸ್‍ನಿಂದ ದೆಹಲಿ ಮಟ್ಟದ ಪ್ರಭಾವಿ ನಾಯಕ ಬಿ.ಕೆ.ಹರಿಪ್ರಸಾದ್ ಸ್ಪರ್ಧೆಗಿಳಿದಿದ್ದು, ಕದನ ಕಣ ರೋಚಕವಾಗಿದೆ.

    ಒಟ್ಟು ಮತದಾರರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 22,15,758 ಮತದಾರನ್ನು ಒಳಗೊಂಡಿದೆ. 11,53,622 ಪುರುಷ ಮತದಾರರು ಮತ್ತು 10,61,796 ಮಹಿಳಾ ಮತದಾರರನ್ನು ಹೊಂದಿದೆ. ಜಾತಿವಾರು ಪ್ರಾಬಲ್ಯ ನೋಡೋದಾದ್ರೆ ಒಕ್ಕಲಿಗ ಸಮುದಾಯ 5 ಲಕ್ಷ, ಮುಸ್ಲಿಂ ಸಮುದಾಯ 4 ಲಕ್ಷ, ಬ್ರಾಹ್ಮಣ ಸಮುದಾಯ 4 ಲಕ್ಷ, ಉತ್ತರ ಭಾರತೀಯರು 2 ಲಕ್ಷ, ಕುರುಬ ಸಮುದಾಯ 2 ಲಕ್ಷ, ಎಸ್‍ಸಿ ಸಮುದಾಯ 2 ಲಕ್ಷ ಮತ್ತು ಲಿಂಗಾಯತ ಸಮುದಾಯ 1.80 ಲಕ್ಷ ಮತದಾರರು ಕ್ಷೇತ್ರದಲ್ಲಿದ್ದಾರೆ.

    2014ರ ಫಲಿತಾಂಶ: 2014ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಅವರು 2,28,575 (19.51) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಗೆದ್ದಿದ್ದರು. ಅನಂತಕುಮಾರ್ (ಬಿಜೆಪಿ) 6,33,816 (56.88%), ನಂದನ್ ನಿಲೇಕಣಿ (ಕಾಂಗ್ರೆಸ್)- 4,05,241 (36.37%), ರುತ್ ಮನೋರಮಾ (ಜೆಡಿಎಸ್) 25,677 (2.30%) ಮತಗಳನ್ನು ಪಡೆದಿದ್ದರು.

    ವಿಧಾನಸಭಾ ಫಲಿತಾಂಶ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಹ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 3 ಶಾಸಕರಿದ್ದಾರೆ. ಬಸವನಗುಡಿ – ರವಿ ಸುಬ್ರಮಣ್ಯ (ಬಿಜೆಪಿ), ಪದ್ಮನಾಭನಗರ – ಆರ್.ಅಶೋಕ್(ಬಿಜೆಪಿ), ಬೊಮ್ಮನಹಳ್ಳಿ ಸತೀಶ್ ರೆಡ್ಡಿ (ಬಿಜೆಪಿ), ಚಿಕ್ಕಪೇಟೆ – ಉದಯ್ ಗರುಡಾಚಾರ್(ಬಿಜೆಪಿ), ಗೋವಿಂದರಾಜನಗರ – ವಿ.ಸೋಮಣ್ಣ(ಬಿಜೆಪಿ), ವಿಜಯನಗರ – ಕೃಷ್ಣಪ್ಪ (ಕಾಂಗ್ರೆಸ್), ಜಯನಗರ – ಸೌಮ್ಯರೆಡ್ಡಿ (ಕಾಂಗ್ರೆಸ್) ಮತ್ತು ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ (ಕಾಂಗ್ರೆಸ್) ಶಾಸಕರಿದ್ದಾರೆ.

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    1. ತೇಜಸ್ವಿಸೂರ್ಯ – ಬಿಜೆಪಿ
    2. ಬಿ.ಕೆ.ಹರಿಪ್ರಸಾದ್ – ಕಾಂಗ್ರೆಸ್

    3. ಬೆಂಗಳೂರು ಸೆಂಟ್ರಲ್

    ಕಾಂಗ್ರೆಸ್ ಭದ್ರಕೋಟೆ ಬೆಂಗಳೂರು ಸೆಂಟ್ರಲ್‍ನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯ ಪಿ.ಸಿ. ಮೋಹನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ಸಿನ ಐವರು ಶಾಸಕರಿದ್ದರೂ, ಈ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯೇ ಆಗಿದೆ. ಕಳೆದ ಬಾರಿ ಕೇವಲ 1.30 ಲಕ್ಷ ಮತಗಳ ಅಂತರದಿಂದ ಸೋತಿದ್ದ ರಿಜ್ವನ್ ಅರ್ಷದ್ ಈ ಬಾರಿಯೂ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದಾರೆ. ಉತ್ತರ ಭಾರತೀಯರು, ಮುಸ್ಲಿಮರು, ಕ್ರೈಸ್ತರು ಹಾಗೂ ತಮಿಳು ಮತದಾರರೇ ನಿರ್ಣಾಯಕವಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರೈ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ಮೋದಿ ವಿರೋಧಿಸುತ್ತಲೇ ರಾಜಕೀಯ ಭವಿಷ್ಯಕ್ಕಾಗಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.

    ಒಟ್ಟು ಮತದಾರರು: ಬೆಂಗಳೂರು ಸೆಂಟ್ರಲ್ ಒಟ್ಟು 22,04,740 ಮತದಾರರನ್ನು ಹೊಂದಿದೆ. 11,45,974 ಪುರುಷ ಮತದಾರರು ಮತ್ತು 10,58,369 ಮಹಿಳಾ ಮತದಾರರಿದ್ದಾರೆ. ಜಾತಿವಾರು ನೋಡೋದಾದ್ರೆ, ತಮಿಳರು 5 ಲಕ್ಷ, ಮುಸ್ಲಿಂ 3 ಲಕ್ಷ, ಉತ್ತರ ಭಾರತೀಯರು 2.5ಲಕ್ಷ, ಕ್ರಿಶ್ಚಿಯನ್ 2 ಲಕ್ಷ, ಮೇವಾರ 1.50 ಲಕ್ಷ, ಎಸ್‍ಸಿ 3 ಲಕ್ಷ, ಲಿಂಗಾಯತ 1 ಲಕ್ಷ, ಒಕ್ಕಲಿಗ 1.5 ಲಕ್ಷ ಮತ್ತು ಇತರೆ 3 ಲಕ್ಷ ಮತದಾರರಿದ್ದಾರೆ.

    2014ರ ಫಲಿತಾಂಶ: 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ 1,37,500 ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಜಯಮಾಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಪಿ.ಸಿ.ಮೋಹನ್ (ಬಿಜೆಪಿ) 5,57,130 (51.85%), ರಿಜ್ವಾನ್ ಅರ್ಷದ್ (ಕಾಂಗ್ರೆಸ್) 4,19,630 (39.05%) ಮತ್ತು ನಂದಿನಿ ಆಳಾ ್ವ(ಜೆಡಿಎಸ್) 20,387 (1.90%) ಮತಗಳನ್ನು ಪಡೆದುಕೊಂಡಿದ್ದರು.

    ವಿಧಾನಸಭಾ ಫಲಿತಾಂಶ: ಬೆಂಗಳೂರು ಸೆಂಟ್ರಲ್ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕಾಂಗ್ರೆಸ್ 5, ಬಿಜೆಪಿ 3 ಶಾಸಕರನ್ನು ಹೊಂದಿದೆ. ಶಿವಾಜಿನಗರ- ರೋಷನ್‍ಬೇಗ್ (ಕಾಂಗ್ರೆಸ್), ಗಾಂಧಿನಗರ – ದಿನೇಶ್ ಗುಂಡೂರಾವ್ (ಕಾಂಗ್ರೆಸ್), ಶಾಂತಿನಗರ- ಹ್ಯಾರಿಸ್ (ಕಾಂಗ್ರೆಸ್), ಚಾಮರಾಜಪೇಟೆ – ಜಮೀರ್ ಅಹಮದ್ (ಕಾಂಗ್ರೆಸ್), ಸರ್ವಜ್ಞ ನಗರ – ಕೆ.ಜೆ.ಜಾರ್ಜ್ (ಕಾಂಗ್ರೆಸ್), ರಾಜಾಜಿನಗರ- ಸುರೇಶ್‍ಕುಮಾರ್ (ಬಿಜೆಪಿ), ಮಹದೇವಪುರ – ಅರವಿಂದ ಲಿಂಬಾವಳಿ (ಬಿಜೆಪಿ) ಮತ್ತು ಸಿ.ವಿ.ರಾಮನ್‍ನಗರ- ರಘು (ಬಿಜೆಪಿ)

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
    1. ಪಿ.ಸಿ.ಮೋಹನ್ – ಬಿಜೆಪಿ
    2. ರಿಜ್ವಾನ್ ಅರ್ಷದ್ – ಕಾಂಗ್ರೆಸ್
    3. ಪ್ರಕಾಶ್ ರೈ – ಪಕ್ಷೇತರ

  • ಬೆಂಗ್ಳೂರು ಲೋಕಸಭಾ ಅಖಾಡದಲ್ಲಿ ರಿಯಲ್ ಚಾಯ್‍ವಾಲಾ!

    ಬೆಂಗ್ಳೂರು ಲೋಕಸಭಾ ಅಖಾಡದಲ್ಲಿ ರಿಯಲ್ ಚಾಯ್‍ವಾಲಾ!

    ಬೆಂಗಳೂರು: ಚಾಯ್‍ವಾಲಾನಾಗಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿದ ಕಥೆ ಕೇಳಿದ್ದೀರಿ, ಇದೀಗ ಬೆಂಗಳೂರಿನ ಚುನಾವಣಾ ಅಖಾಡದಲ್ಲೂ ಒಬ್ಬ ಚಾಯ್‍ವಾಲಾ ಭರ್ಜರಿ ಮತ ಬೇಟೆ ನಡೆಸಿದ್ದಾರೆ.

    ಹೌದು. ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಯ್ ವಾಲಾ ಎಂದೇ ಸಾಕಷ್ಟು ಫೇಮಸ್. ಗುಜರಾತಿನ ವಡ್ನಾಗರ್ ರೈಲ್ವೆ ಸ್ಟೇಷನ್‍ನಲ್ಲಿ ಚಹಾ ಮಾರುತ್ತಿದ್ದ ಮೋದಿ ಅವರು ಬಳಿಕ ದೇಶದ ಆಡಳಿತ ಚುಕ್ಕಾಣಿ ಹಿಡಿದದ್ದು ಈಗ ಇತಿಹಾಸವಾಗಿದೆ. ಹಾಗೆಯೇ ಇದೀಗ ಬೆಂಗಳೂರಲ್ಲೂ ಸೈಯದ್ ಆಸಿಫ್ ಬುಖಾರಿ ಎಂಬ ಚಹಾ ವ್ಯಾಪಾರಿ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ.

    ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸೈಯದ್ ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ. ಕ್ಯಾಲ್ಕುಲೇಟರ್ ಚಿಹ್ನೆ ಹೊತ್ತು ನಾನು ಚಾಯ್ ವಾಲಾ ನನಗೆ ಮತ ಹಾಕಿ ಎಂದು ಸೈಯದ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಬಿಬಿಎಂಪಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೈಯದ್ ಆಸೀಫ್, ಈಗ ಲೋಕಸಭಾ ಅಖಾಡದಲ್ಲಿದ್ದಾರೆ. ಎಲೆಕ್ಷನ್‍ಗಾಗಿ 25 ಸಾವಿರ ಠೇವಣಿ ಹಣ ಜೊತೆಗೆ ಪ್ರಚಾರಕ್ಕಾಗಿ 5 ಲಕ್ಷ ರೂ. ಖರ್ಚು ಮಾಡ್ತಾ ಇರೋದಾಗಿ ಸೈಯದ್ ತಿಳಿಸಿದ್ದು, ಭ್ರಷ್ಟಮುಕ್ತ ಆಡಳಿತಕ್ಕಾಗಿ ಚುನಾವಣೆಗೆ ಧುಮುಕಿರೋದಾಗಿ ಹೇಳಿದ್ದಾರೆ.

    ಬೆಂಗಳೂರಿನ ಜಾನ್ಸನ್ ಮಾರುಕಟ್ಟೆಯಲ್ಲಿ ಚಾಯ್ ಫಸ್ಟ್ ಎಂಬ ಮಳಿಗೆ ಹೊಂದಿರೋ ಸೈಯದ್ ಗುಣಾತ್ಮಕ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಅದೇನೆ ಆಗಲಿ ಉದ್ಯಾನನಗರಿ ಕಣದಲ್ಲಿ ಕಾಣಿಸಿಕೊಂಡಿರೋ ಈ ಚಾಯ್‍ವಾಲಾ ಜನರ ಗಮನ ಸೆಳೆದಿದ್ದಾರೆ.

  • ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ- ಪ್ರಕಾಶ್ ರೈ

    ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ- ಪ್ರಕಾಶ್ ರೈ

    – ಮಹಾಘಟಬಂಧನ್ ಭಾಗವಾಗಿರುತ್ತೇನೆ

    ಬೆಂಗಳೂರು: ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ. ಹೀಗಾಗಿ ನಾನು ಅಲ್ಲಿಂದಲೇ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಬಹುಭಾಷಾ ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಎರಡು ಮೂರು ತಿಂಗಳಿನಿಂದ ಚಿಂತಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಹುಟ್ಟಿದ್ದು ಮಾರ್ಥಾಸ್ ಆಸ್ಪತ್ರೆಯಲ್ಲಿ, ನಾನು ಚಾಮರಾಜ ಪೇಟೆ, ಶಾಂತಿನಗರದಲ್ಲಿದ್ದೆ. ಇಲ್ಲಿ ನನ್ನ ಸಾಕಷ್ಟು ಬಂಧುಗಳಿದ್ದಾರೆ ಎಂದು ಹೇಳಿದರು.

    ಜನರಿಗಾಗಿ ಕಾನೂನುಗಳನ್ನು ರೂಪಿಸುವಾಗ ಅವರ ಧ್ವನಿಯಾಗಲು ನಿರ್ಧರಿಸಿದ್ದೇನೆ. ಕಳೆದ ಆರು ತಿಂಗಳಲ್ಲಿ ನಮ್ಮ ಜಸ್ಟ್ ಆಸ್ಕಿಂಗ್‍ನಿಂದ ಅನೇಕ ಪ್ರಶ್ನೆಗಳನ್ನು ಮಾಡಿದ್ದೇವೆ. ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಲೋಕಸಭೆಯಲ್ಲಿ ನಮ್ಮ ಸಂಸದರು ಜನರ ಧ್ವನಿಯಾಗುತ್ತಿಲ್ಲ. ಗೆದ್ದ ನಂತರ ಯಾರದ್ದೋ ಗುಲಾಮರಾಗುತ್ತಾರೆ. ಆದ್ದರಿಂದ ನಾನು ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

    ಮಹಾಘಟಬಂಧನ್ ವಿಚಾರವಾಗಿ ಮಾತನಾಡಿದ ಪ್ರಕಾಶ್ ರಾಜ್ ಅವರು, ಕೋಮುವಾದವನ್ನು ಎದುರಿಸಲು ಶಕ್ತಿಗಳಿಗೆ ನಾನು ಕೈ ಜೋಡಿಸುತ್ತೇನೆ ಎಂದು ಹೇಳುವ ಮೂಲಕ ಮಹಾಘಟಬಂಧನ್‍ಗೆ ಭಾಗವಾಗಿರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆಗೆ ಕ್ಷೇತ್ರ ಆಯ್ದುಕೊಂಡ ಪ್ರಕಾಶ್ ರೈ

    ಲೋಕಸಭಾ ಚುನಾವಣೆಗೆ ಕ್ಷೇತ್ರ ಆಯ್ದುಕೊಂಡ ಪ್ರಕಾಶ್ ರೈ

    ಬೆಂಗಳೂರು: ನಟ ಪ್ರಕಾಶ್ ರೈ ಹೊಸ ವರ್ಷದಂದು ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಆದ್ರೆ ಯಾವ ಕ್ಷೇತ್ರ, ಯಾವ ಪಕ್ಷ ಎಂಬುದರ ಮಾಹಿತಿಯನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    2019ರ ಲೋಕಸಭಾ ಚುನಾವಣೆಗಾಗಿ ನನ್ನ ರಾಜಕೀಯ ಜೀವನವನ್ನು ಕರ್ನಾಟಕದ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಆರಂಭಿಸಲು ನಿಶ್ಚಯಿಸಿದ್ದೇನೆ. ನನ್ನ ಹೊಸ ಜರ್ನಿಗೆ ಶುಭಕೋರಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶೀಘ್ರದಲ್ಲಿಯೇ ಚುನಾವಣೆ ತಯಾರಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ಪ್ರಕಾಶ್ ರೈ ಎಡಪಂಥೀಯರಲ್ಲಿ ಗುರುತಿಸಿಕೊಂಡಿದ್ದಾರೆ. ಜಸ್ಟ್ ಆಸ್ಕಿಂಗ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ತಮ್ಮ ಆಪ್ತರ ಬಳಿಯೇ ಚರ್ಚಿಸಿಯೇ ಹೊಸ ವರ್ಷದಂದು ತಮ್ಮ ಅಭಿಮಾನಿಗಳಿಗೆ ರಾಜಕೀಯ ಪ್ರವೇಶದ ಸಿಹಿ ಸುದ್ದಿಯನ್ನು ನೀಡಿದ್ದರು.

    ಬೆಂಗಳೂರು ಸೆಂಟ್ರಲ್ ಪ್ರಾಬಲ್ಯತೆ ಹೇಗಿದೆ?
    2008ರಲ್ಲಿ ಈ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು, ಇದೂವರೆಗೂ ಎರಡು ಚುನಾವಣೆಗಳನ್ನು ಎದುರಿಸಿದೆ. ಎರಡು ಬಾರಿಯೂ (2009 ಮತ್ತು 2014) ಬಿಜೆಪಿ ಪಿ.ಸಿ.ಮೋಹನ್ ಸಂಸದರಾಗಿ ಸಂಸತ್ತು ಪ್ರವೇಶ ಮಾಡಿದ್ದಾರೆ. ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಬಿಜೆಪಿಗೆ ಸ್ಪರ್ಧೆ ನೀಡಿದ್ದರು. 2009ರಲ್ಲಿ ಕಾಂಗ್ರೆಸ್ ನಿಂದ ಹೆಚ್.ಟಿ.ಸಾಂಗ್ಲಿಯಾನ ಮತ್ತು 2014ರಲ್ಲಿ ರಿಜ್ವಾನ್ ಅರ್ಷದ್ ಸ್ಪರ್ಧೆ ಮಾಡಿ ಪಿ.ಸಿ.ಮೋಹನ್ ವಿರುದ್ಧ ಸೋಲು ಕಂಡಿದ್ದರು.

    ಪಿ.ಸಿ.ಮೋಹನ್ ಮತ್ತು ರಿಜ್ವಾನ್ ಅರ್ಷದ್

    2019ರಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಯುವ ಮುಖಂಡ ರಿಜ್ವಾನ್ ಅರ್ಷದ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಚುನಾವಣೆಗೂ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ರಚಿಸಿಕೊಂಡಿದ್ದು, ಎರಡೂ ಪಕ್ಷಗಳ ಪರವಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv