Tag: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ

  • ಬೆಂ-ಮೈ ಹೆದ್ದಾರಿ ಪರಿಶೀಲನೆ – ಇನ್ನು ಮುಂದೆ ಟೋಲ್ ಬಳಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ: ಅಲೋಕ್ ಕುಮಾರ್

    ಬೆಂ-ಮೈ ಹೆದ್ದಾರಿ ಪರಿಶೀಲನೆ – ಇನ್ನು ಮುಂದೆ ಟೋಲ್ ಬಳಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ: ಅಲೋಕ್ ಕುಮಾರ್

    ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ (Bengaluru Mysuru Exprpessway) ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮಂಡ್ಯ (Mandya) ಜಿಲ್ಲೆಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಮಂಡ್ಯ ಎಸ್‌ಪಿ ಯತೀಶ್ ಜೊತೆಗೆ ಪರಿಶೀಲನೆ ನಡೆಸಿದರು. ಇನ್ನು ಮುಂದೆ ಟೋಲ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಅಪಘಾತಗಳಿಗೆ ಕಾರಣ ಏನು? ಯಾವ ಕಾರಣದಿಂದ ಪ್ರತಿನಿತ್ಯ ಅಪಘಾತಗಳು ಜರುಗುತ್ತಿವೆ? ಎಂದು ಅಪಘಾತ ನಡೆದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಅಲೋಕ್ ಕುಮಾರ್ ಅವರಿಗೆ ಸ್ಥಳೀಯರು ಇಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿದರು.

    ಭಾನುವಾರ ಬಂದರೆ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿಯನ್ನು ಜನರು ಮಿನಿ ಬಾರ್ ಮಾಡಿಕೊಂಡಿದ್ದಾರೆ. ಸರ್ವಿಸ್ ರಸ್ತೆಯನ್ನು ಸರಿಯಾಗಿ ಮಾಡಿಲ್ಲ, ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಕಾರಣ ನನ್ನ ಗುಡಿಸಲಿಗೆ ನೀರು ಬರ್ತಾ ಇದೆ ಸ್ವಾಮಿ. ದಯಮಾಡಿ ಸರಿಮಾಡಿಸಿ ಕೊಡಿ ಎಂದು ವೃದ್ಧೆಯೊಬ್ಬರು ಎಡಿಜಿಪಿಗೆ ಕೈಮುಗಿದು ಕೇಳಿಕೊಂಡರು.

    ಈ ತಪಾಸಣೆ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೊತೆಗೆ ಇದ್ದು ಆಗಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಅಲೋಕ್ ಕುಮಾರ್ ಸೂಚನೆ ನೀಡಿದರು. ಇದನ್ನೂ ಓದಿ: ಲಾರಿ ಆಟೋಗಳ ಮಧ್ಯೆ ಭೀಕರ ಅಪಘಾತ 6 ಸಾವು

     

    ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಅತಿಯಾದ ವೇಗ ಅಪಘಾತಗಳಿಗೆ ಕಾರಣವಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದಲೂ ಹಲವು ಸಮಸ್ಯೆಗಳು ಆಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ಸರಿಪಡಿಸಲು ಹೇಳಿದ್ದೇವೆ. ಇನ್ನೂ ಮುಂದೆ ಟೋಲ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ. ಸದ್ಯ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 64 ಮಂದಿ ಹಾಗೂ ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 58 ಜನರು ಸಾವನ್ನಪ್ಪಿದ್ದಾರೆ. ಚಾಲಕರು ಸಹ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸುಧಾಕರ್ ಮಾನನಷ್ಟ ಮೊಕದ್ದಮೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂ-ಮೈ ಹೆದ್ದಾರಿಯಲ್ಲಿ ಭೀಕರ ಅಪಘಾತ – ಮೂವರ ಸಾವು, ಓರ್ವನ ಸ್ಥಿತಿ ಗಂಭೀರ

    ಬೆಂ-ಮೈ ಹೆದ್ದಾರಿಯಲ್ಲಿ ಭೀಕರ ಅಪಘಾತ – ಮೂವರ ಸಾವು, ಓರ್ವನ ಸ್ಥಿತಿ ಗಂಭೀರ

    ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru Mysuru Expressway) ಮಂಗಳವಾರ ಮತ್ತೆ ಭೀಕರ ಅಪಘಾತವೊಂದು (Accident) ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

    ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಗಜ್ಜಲೆಗೆರೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರು ಟಾಟಾ ಹೆಕ್ಸಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಡಿಸೈರ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟ ಒಬ್ಬರು ನೀರಜ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಉತ್ತರ ಪ್ರದೇಶದ ತರಬೇತಿ ಹಾಗೂ ನೇಮಕಾತಿ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂಬುದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ನೀರಜ್ ಕುಮಾರ್ ತಮ್ಮ ಪತ್ನಿ ಸೆಲ್ವಿ ಹಾಗೂ ಪುತ್ರ ಶ್ರೀವತ್ಸ ಅವರೊಂದಿಗೆ ಬೆಂಗಳೂರಿನಿಂದ ಮಡಿಕೇರಿಗೆ ಪ್ರವಾಸ ಹೊರಟಿದ್ದರು. ಇದನ್ನೂ ಓದಿ: Odisha Train Tragedy – ವಿಚಾರಣೆ ಎದುರಿಸಿದ್ದ ಎಂಜಿನಿಯರ್ ನಾಪತ್ತೆ ಅನ್ನೋ ವರದಿ ನಿರಾಕರಿಸಿದ ರೈಲ್ವೆ

    ಮದ್ದೂರು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ನಿಂತಿದ್ದ ನೀರಿನ ಮೇಲೆ ಚಕ್ರ ಹರಿದು ಅಪಘಾತ ಸಂಭವಿಸಿದೆ. ದುರ್ಘಟನೆ ಸಂಭವಿಸುತ್ತಲೇ ನೀರಜ್ ಕುಮಾರ್, ಪತ್ನಿ ಸೆಲ್ವಿ ಹಾಗೂ ಚಾಲಕ ನಿರಂಜನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುತ್ರ ಶ್ರೀವತ್ಸಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ರಸ್ತೆಯಲ್ಲಿ ವಾಹನ ಸವಾರರ ಪರದಾಟ

  • ಬೆಂ-ಮೈ ದಶಪಥ ಹೆದ್ದಾರಿಯಲ್ಲಿ ಕಾರು ಅಪಘಾತ – RBI ನೌಕರ ಸಾವು

    ಬೆಂ-ಮೈ ದಶಪಥ ಹೆದ್ದಾರಿಯಲ್ಲಿ ಕಾರು ಅಪಘಾತ – RBI ನೌಕರ ಸಾವು

    ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru Mysuru Expressway) ಅಪಘಾತ (Accident) ಸಂಭವಿಸಿ ಆರ್‌ಬಿಐ ನೌಕರ (RBI employee) ಸಾವನ್ನಪ್ಪಿರುವ ಘಟನೆ ರಾಮನಗರ (Ramanagara) ಬಳಿಯ ಜೈಪುರ ಗೇಟ್ ಬಳಿ ನಡೆದಿದೆ.

    ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್‌ಬಿಐ ನೌಕರ ಜಗದೀಶ್ (48) ಮೃತಪಟ್ಟಿದ್ದಾರೆ. ಪತ್ನಿ ನಂದಿತಾ ಹಾಗೂ ಇಬ್ಬರು ಮಕ್ಕಳೊಂದಿಗೆ ಕ್ರೆಟಾ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಹರಿದು ಪೊಲೀಸ್ ಪೇದೆ ಸಾವು

    ಡಿಕ್ಕಿ ರಭಸಕ್ಕೆ ಕಾರು ಸರ್ವಿಸ್ ರಸ್ತೆಗೆ ಉರುಳಿದ್ದು, ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಜಗದೀಶ್ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯೋಗದಿಂದ ಪರಿವರ್ತನೆ – ಅಂದು ಖೈದಿಯಾಗಿದ್ದಾತ ಈಗ ಯೋಗ ಗುರು

  • ಎಕ್ಸ್‌ಪ್ರೆಸ್‌ವೇ ಬದಿಗಳಲ್ಲಿ ಇರೋ ಬ್ರೇಸಿಂಗ್ ಕದ್ದು ಗುಜರಿಗೆ ಹಾಕಬೇಡಿ: ಪ್ರತಾಪ್ ಸಿಂಹ ಮನವಿ

    ಎಕ್ಸ್‌ಪ್ರೆಸ್‌ವೇ ಬದಿಗಳಲ್ಲಿ ಇರೋ ಬ್ರೇಸಿಂಗ್ ಕದ್ದು ಗುಜರಿಗೆ ಹಾಕಬೇಡಿ: ಪ್ರತಾಪ್ ಸಿಂಹ ಮನವಿ

    ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ (Bengaluru Mysuru Exprpessway) ಬದಿಗಳಲ್ಲಿ ಅಳವಡಿಸಲಾಗಿರುವ ಕಬ್ಬಿಣದ ಬೇಲಿ (Fence) ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ (Pratap Simha) ಬೇಲಿಗಳನ್ನು ಕದಿಯಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಸಂಸದ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದು ಗುಜರಿಗೆ ಹಾಕುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ನೋಡಿ ಹಾಗೂ ವ್ಯತ್ಯಾಸವನ್ನು ಗಮನಿಸಿ ಎಂದು ಬರೆದುಕೊಂಡಿದ್ದಾರೆ.

    ಕಳ್ಳತನಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪ್ರತಾಪ್ ಸಿಂಹ, ದಶಪಥ ಹೆದ್ದಾರಿಯ ಬದಿಗಳಲ್ಲಿ ಅಳವಡಿಸಿರುವ ಬೇಲಿಯನ್ನು ಕಳವು ಮಾಡಬೇಡಿ. ಇದು ನಿಮ್ಮದೇ ಹಣದಲ್ಲಿ ನಿರ್ಮಿಸಿರುವ ಯೋಜನೆ. ಇದರ ರಕ್ಷಣೆಯೂ ನಿಮ್ಮದೇ ಎಂದು ಜನರಲ್ಲಿ ವಿನಂತಿಸಿಕೊಂಡಿದ್ದರು. ಇದನ್ನೂ ಓದಿ: ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್‌ – ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ?

    ದಕ್ಷಿಣ ಭಾರತದ ಮೊದಲನೇ ಪ್ರವೇಶ ಹಾಗೂ ನಿರ್ಗಮನ ನಿರ್ಬಂಧಿತ ಹೆದ್ದಾರಿಯಲ್ಲಿ ಯಾರೂ ಒಳ ಪ್ರವೇಶಿಸಬಾರದೆಂಬ ಉದ್ದೇಶದಿಂದ ಎರಡೂ ಕಡೆಗಳಲ್ಲಿ ಬೇಲಿ ಅಳವಡಿಸಿದ್ದೇವೆ. ಅವನ್ನು ತುಂಡರಿಸಿ ಕೊಂಡೊಯ್ಯುತ್ತಿರುವುದು ನಾಚಿಕೆಗೇಡಿನ ವಿಚಾರ. ಮನೆಯಲ್ಲಿರುವ ಅನಗತ್ಯ ವಸ್ತುಗಳನ್ನು ಗುಜರಿಗೆ ಹಾಕಿ. ಅದು ಬಿಟ್ಟು ಸಾರ್ವಜನಿಕರ ಆಸ್ತಿಗೆ ತೊಂದರೆ ನೀಡಬೇಡಿ ಎಂದಿದ್ದಾರೆ.

    ಮೈಸೂರು, ಮಂಡ್ಯ, ರಾಮನಗರ ಭಾಗದಲ್ಲಿ ಯಾರಾದರೂ ತಂತಿ ಬೇಲಿ ಕಳ್ಳತನ ಮಾಡುವುದು ಕಂಡುಬಂದರೆ ತಕ್ಷಣ ಮಾಹಿತಿ ನೀಡಿ. ರಾಜ್ಯ ಸರ್ಕಾರ ರಸ್ತೆ ಸುರಕ್ಷತೆ ಕಾಯ್ದೆಯಲ್ಲಿ ಬಿಡುಗಡೆ ಮಾಡುವ ಹಣದಲ್ಲಿ ಈ ಹೆದ್ದಾರಿಗೆ ಕೃತಕ ಬುದ್ದಿಮತ್ತೆ ಸಾಮರ್ಥ್ಯದ ಕ್ಯಾಮೆರಾಗಳನ್ನು ಅಳವಡಿಸಲು 80 ಕೋಟಿ ರೂ.ಯ ಅನುದಾನ ಕೋರಿದ್ದೇವೆ. ಅದನ್ನು ಅಳವಡಿಸುವವರೆಗೆ ಈ ಆಸ್ತಿಗಳನ್ನು ರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರತಾಪ್ ಸಿಂಹ ಕೋರಿದ್ದಾರೆ. ಇದನ್ನೂ ಓದಿ: ಹೆಸ್ಕಾಂಗೆ 13 ಸಾವಿರ ಕೋಟಿ ಅನುದಾನ ನೀಡಿ ಪುನಶ್ಚೇತನ ನೀಡಿದ್ದೆ: ಬೊಮ್ಮಾಯಿ

  • ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ

    ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ

    ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ (Bengaluru-Mysuru expressway) ಉದ್ಘಾಟನೆ ಆದಾಗಿನಿಂದ ಒಂದಲ್ಲ ಒಂದು ಸಮಸ್ಯೆಯಿಂದ ಸುದ್ದಿಯಾಗುತ್ತಿದೆ. ಈಗ ತಾಂತ್ರಿಕ ಸಮಸ್ಯೆಯಿಂದ ಟೋಲ್ ಪ್ಲಾಜಾದಲ್ಲಿ ವಾಹನ ಸವಾರರ ಫಾಸ್ಟ್ ಟ್ಯಾಗ್‍ನಿಂದ ಪದೇ ಪದೇ ಹಣ (Money) ಕಡಿತಗೊಂಡು ಮತ್ತೆ ಸುದ್ದಿಯಾಗಿದೆ.

    ಮಂಡ್ಯ ಮೂಲದ ತ್ಯಾಗರಾಜ್ ಎಂಬವರು ಕಾರಿನಲ್ಲಿ ಒಮ್ಮೆ ಕಣಮಿಣಕಿ ಟೋಲ್ ಪ್ಲಾಜಾ (Kaniminike toll plaza) ಪ್ರವೇಶ ಮಾಡಿದಾಗ ಫಾಸ್ಟ್ ಟ್ಯಾಗ್ ಮೂಲಕ 135 ರೂ. ಕಡಿತವಾಗಿದೆ. ಸಂಜೆ ವೇಳೆಗೆ ಕಾರು ಟೋಲ್ ಬಳಿ ಸಂಚಾರ ಮಾಡದಿದ್ದರೂ ಮತ್ತೆ ಹಣ ಕಡಿತವಾಗಿದೆ. ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ 135 ರೂ.ನಂತೆ ಹಣ ಕಡಿತವಾಗಿದೆ. ನಿತ್ಯವೂ ಇದೇ ರೀತಿಯ ತಾಂತ್ರಿಕ ಸಮಸ್ಯೆಯಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರು ಗಲಾಟೆ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?

    ಟೋಲ್‍ನಲ್ಲಿ ಕೆಲವು ವಾಹನಗಳ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗುವುದರಲ್ಲಿ ತೊಂದರೆ ಆಗುತ್ತಿದೆ. ಮತ್ತೊಂದೆಡೆ ಪದೇ ಪದೇ ಹಣ ಕಡಿತವಾಗುತ್ತಿದೆ. ದಶಪಥ ಹೆದ್ದಾರಿಯಲ್ಲಿನ ಕಣಮಿಣಕಿ ಹಾಗೂ ಶೇಷಗಿರಿಹಳ್ಳಿ (Sheshagiri Halli) ಬಳಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಸಂವಿಧಾನಬಾಹಿರ: ಶರದ್ ಪವಾರ್

  • ಸಹಜ ಸ್ಥಿತಿಗೆ ಮರಳಿದ ದಶಪಥ ಹೈವೇ ಟೋಲ್

    ಸಹಜ ಸ್ಥಿತಿಗೆ ಮರಳಿದ ದಶಪಥ ಹೈವೇ ಟೋಲ್

    ಬೆಂಗಳೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹಕ್ಕೆ ಮಂಗಳವಾರ ವಿವಿಧ ಸಂಘಟನೆಗಳಿಂದ ರಸ್ತೆ ತಡೆದು ಭಾರೀ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ಇದೀಗ ಸಹಜ ಸ್ಥಿತಿಗೆ ತಲುಪಿದೆ.

    ಭಾರೀ ವಿರೋಧದ ನಡುವೆಯೂ ಪಟ್ಟು ಬಿಡದ ಹೆದ್ದಾರಿ ಪ್ರಾಧಿಕಾರ ಮಂಗಳವಾರದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Bengaluru Mysuru Expressway) ಟೋಲ್ (Toll) ಸಂಗ್ರಹ ಆರಂಭಿಸಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೊದಲ ಹಂತದ 55.63 ಕಿ.ಮೀ ರಸ್ತೆಯ ಟೋಲ್ ವಸೂಲಾತಿ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಿದೆ.

    ಬಿಡದಿ ಬಳಿಯ ಕಣಮಿಣಕಿ ಗ್ರಾಮ ಹಾಗೂ ಶೇಷಗಿರಿಹಳ್ಳಿ ಬಳಿಯ ಟೋಲ್ ಕಾರ್ಯಾಚರಣೆ ಆರಂಭಿಸಿ, ವಿವಿಧ ಬಗೆಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ.  ಆದರೆ  ಟೋಲ್ ಆರಂಭಕ್ಕೆ ವಿವಿಧ ಕನ್ನಡಪರ ಸಂಘಟನೆಗಳೂ ಸೇರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರಹಾಕಿತ್ತು.  ಸರಿಯಾದ ಮೂಲಭೂತ ಸೌಕರ್ಯಗಳನ್ನು ನೀಡದೇ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬಿಡದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶೇಷಗಿರಿಹಳ್ಳಿ ಟೋಲ್ ಬಳಿ ರಸ್ತೆ ತಡೆಗೆ ಮುಂದಾಗಿದ್ದರು. ಈ ವೇಳೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಆದರೆ ಇಂದು ಸದ್ಯ ಟೋಲ್ ಬಳಿ ಶಾಂತ ವಾತಾವರಣದ ಪರಿಸ್ಥಿತಿಯಿದೆ. ಮುನ್ನೆಚ್ಚರಿಕೆಯಾಗಿ ಕೆಲ ಪೊಲೀಸ್ ಸಿಬ್ಬಂದಿಯನ್ನು ಟೋಲ್‌ ಬಳಿ ನಿಯೋಜನೆ ಮಾಡಲಾಗಿದೆ. ಮಂಗಳವಾರ ಉಂಟಾಗಿದ್ದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಟೋಲ್ ಸಿಬ್ಬಂದಿ ಸರಿಪಡಿಸಿಕೊಂಡಿದ್ದಾರೆ. ಇತ್ತ ದ್ವಿಚಕ್ರ ವಾಹನ ಸವಾರರಿಗೂ ಎಲಿವೇಟೆಡ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಟೋಲ್ ಪಾವತಿ ಮಾಡದೇ ಸಂಚಾರಕ್ಕೆ ಅನುವು ನೀಡಿದ್ದಾರೆ. ಟೋಲ್‌ನ ಒಂದು ಲೇನ್‌ನಲ್ಲಿ ಬೈಕ್ ಸವಾರರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

    ಈ ಹಿಂದೆ ಎನ್‌ಹೆಚ್ಐ ಎಲಿವೇಟೆಡ್ ರಸ್ತೆಯಲ್ಲಿ ಬೈಕ್ ಸವಾರರ ಎಂಟ್ರಿಗೆ ನಿರ್ಬಂಧ ವಿಧಿಸಿತ್ತು. ಸದ್ಯಕ್ಕೆ ಸರ್ವಿಸ್ ರೋಡ್ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದ ಹಿನ್ನೆಲೆಯಲ್ಲಿ ಎಲಿವೇಟೆಡ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?

  • Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

    Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru Mysuru Expressway) ಸಂಚಾರಕ್ಕೆ ಮುಕ್ತಗೊಂಡಿದ್ದು ಮಂಗಳವಾರದಿಂದ ಟೋಲ್ (Toll) ಸಂಗ್ರಹವೂ ಪ್ರಾರಂಭವಾಗಿದೆ. ಆದರೆ ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ ಕಂಡುಬಂದಿದೆ. ಇದರಿಂದ ವಾಹನ ಸವಾರರು ಬೆಳಗ್ಗೆಯಿಂದಲೇ ಪರದಾಡುವಂತಾಗಿದೆ.

    ಮಂಗಳವಾರ ಕಣಮಿಣಕಿ ಟೋಲ್‌ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಫಾಸ್ಟ್ ಟ್ಯಾಗ್ (Fast Tag) ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ದರವನ್ನು ಕಟ್ಟಬೇಕಾಗುತ್ತದೆ.

    ಟೋಲ್ ಶುಲ್ಕ ಎಷ್ಟು?
    ಬೆಂಗಳೂರಿನಿಂದ ನಿಡಘಟ್ಟದವರೆಗೆ ಸುಮಾರು 56 ಕಿ.ಮೀ ರಸ್ತೆಗೆ ಟೋಲ್ ಸಂಗ್ರಹ ಆರಂಭವಾಗಿದೆ. ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಯಾದರೆ, ದ್ವಿಮುಖ ಸಂಚಾರಕ್ಕೆ 205 ರೂ. ಯಾಗುತ್ತದೆ. ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ. ಇದೆ. ಲಘು ವಾಹನ, ಮಿನಿಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 330 ರೂ. ಇದೆ. ಸ್ಥಳೀಯ ವಾಹನಗಳಿಗೆ 110 ರೂ. ಇದ್ದು, ತಿಂಗಳ ಪಾಸ್ 7,315 ರೂ. ಇದೆ. ಬಸ್ ಹಾಗೂ ಟ್ರಕ್‌ಗಳ ಏಕಮುಖ ಸಂಚಾರಕ್ಕೆ 460 ರೂ, ದ್ವಿಮುಖ ಸಂಚಾರಕ್ಕೆ 690 ರೂ. ಇದೆ. ಸ್ಥಳೀಯ ವಾಹನಗಳಿಗೆ 230 ರೂ. ಇದ್ದು, ಮಾಸಿಕ ಪಾಸ್ 15,325 ರೂ. ಇದೆ.

    ಮೂರು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 500ರೂ., ದ್ವಿಮುಖ ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250 ರೂ. ಹಾಗೂ ತಿಂಗಳ ಪಾಸ್‌ಗೆ 16,715 ರೂ. ನಿಗದಿಯಾಗಿದೆ. ಭಾರೀ ನಿರ್ಮಾಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ 720 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 1,080 ಇದೆ. ಸ್ಥಳೀಯ ವಾಹನಗಳಿಗೆ 360 ರೂ. ಹಾಗೂ ತಿಂಗಳ ಪಾಸ್‌ಗೆ 24,030 ರೂ. ಇದೆ. ಅತಿ ಗಾತ್ರದ ವಾಹನಗಳ ಏಕಮುಖ ಸಂಚಾರಕ್ಕೆ 880 ರೂ., ದ್ವಿಮುಖ ಸಂಚಾರಕ್ಕೆ 1,315 ರೂ, ಸ್ಥಳೀಯ ವಾಹನಗಳಿಗೆ 440 ರೂ. ಹಾಗೂ ತಿಂಗಳ ಪಾಸ್‌ಗೆ 29,255 ರೂ. ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆ

     

    ಯಾವ್ಯಾವ ವಾಹನಗಳಿಗೆ ಪ್ರವೇಶ?
    ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಈ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಿರ್ದಿಷ್ಟ ವೇಗ, ಸುರಕ್ಷತೆ ಹಾಗೂ ಯಾವುದೇ ಅಡೆ-ತಡೆ ಇಲ್ಲದೇ ಪ್ರಯಾಣಿಸಲು ಈ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಸರ್ವಿಸ್ ರಸ್ತೆ ನಿರ್ಮಾಣ ಆಗುವವರೆಗೂ ಆಟೋ ಹಾಗೂ ಬೈಕ್‌ಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವಿದೆ. ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಬೈಕ್ ಆಟೋ ಟ್ರ್ಯಾಕ್ಟರ್‌ಗಳು ಈ ರಸ್ತೆಯಲ್ಲಿ ಪ್ರವೇಶಿಸುವಂತಿಲ್ಲ. ಸರ್ವಿಸ್ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿರದ ಕಾರಣ ಹೆದ್ದಾರಿಯಲ್ಲಿ ಬೈಕ್, ಆಟೋ ಸಂಚಾರಕ್ಕೆ ಅವಕಾಶ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಗೊಂದಲವಿದೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ಇಂದು 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ಅರ್ಜಿ ವಿಚಾರಣೆ

  • ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ

    ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ

    ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore Mysore Expressway) ಉದ್ಘಾಟನೆಯಾದ ದಿನವೇ ನೂತನ ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ.

    ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಮಂಡ್ಯ (Mandya) ಜಿಲ್ಲೆಯ ಮದ್ದೂರಿನ (Maddur) ಎಕ್ಸ್‍ಪ್ರೆಸ್ ವೇ ಫ್ಲೈಓವರ್ (Flyover) ಬಳಿ ಕಾರು ಪಲ್ಟಿಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ.

    ಪಲ್ಟಿಯಾದ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಗುಡಿಸಲಿಗೆ ಬೆಂಕಿ ಐವರು ಸಜೀವ ದಹನ

  • ಬೆಂಗಳೂರು – ಮೈಸೂರು ಹೆದ್ದಾರಿ ಯಾರಿಗೆ ಉಪಯೋಗ : ಹೆಚ್‍ಡಿಕೆ ಕಿಡಿ

    ಬೆಂಗಳೂರು – ಮೈಸೂರು ಹೆದ್ದಾರಿ ಯಾರಿಗೆ ಉಪಯೋಗ : ಹೆಚ್‍ಡಿಕೆ ಕಿಡಿ

    ಬೆಂಗಳೂರು: ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ (Mysuru Bengaluru Expressway) ಯಾರಿಗೆ ಉಪಯೋಗ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದರು.

    ಭಾನುವಾರ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಮಂಡ್ಯದಲ್ಲಿ (Mandya) ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

    ಟ್ವೀಟ್‍ನಲ್ಲಿ ಏನಿದೆ?: ಇದು ಅತ್ಯಂತ ಮುಖ್ಯ ವಿಷಯ. ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎನ್ನುವುದು ನನ್ನ ಪ್ರಶ್ನೆ. ರಾಮನಗರ (Ramanagara), ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ.

    ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೆ, ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭ. ಹಾಗಾದರೆ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಇದೆಯಾ? ಎಳ್ಳಷ್ಟೂ ಇಲ್ಲ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ.

    ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತಾ. ಹಾಗಾದರೆ ಕೆಳಗಿನ ಅಂಶಗಳನ್ನು ಗಮನಿಸೋಣ.

    ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆಯ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ? ಎನ್ನುವುದು ನನ್ನ ಅನುಮಾನ.

    ಮಧ್ಯಮ, ಸಣ್ಣ ಗಾತ್ರದ ಹೊಟೆಲ್, ಸಣ್ಣ-ಅತಿಸಣ್ಣ ಉದ್ದಿಮೆ, ಕಬ್ಬುಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2,600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ. 6,000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದು, ಅವರ ಬದುಕಿನ ಮೇಲೆ ಹೆದ್ದಾರಿ ಹೆಮ್ಮಾರಿ ಬಂದು ಕೂತಿದೆ.

    ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ. ಜನರ ಜೀವನೋಪಾಯದ ಸರಪಳಿಯನ್ನು ಎಕ್ಸ್‌ಪ್ರೆಸ್ ಹೆದ್ದಾರಿ ಬಲಿ ತೆಗೆದುಕೊಂಡಿದೆ. ಅವರ ವೈಯಕ್ತಿಕ ಬದುಕಿಗೆ, ಆರ್ಥಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದು ಸತ್ಯ.

    ಹಳೆಯ ಹೆದ್ದಾರಿ ಜೊತೆ ಹಾಸು ಹೊಕ್ಕಾಗಿದ್ದ ಜನರು, ಈಗ ತಮ್ಮ ಊರುಗಳಿಗೆ ತೆರಳಲು ಕನಿಷ್ಠ 10ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಸ್ಥಳೀಯರಿಗೆ ಸುತ್ತುವ ಶಿಕ್ಷೆ ಯಾಕೆ? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಬಳಸಿ ಬಳಿಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ? ಇದು ಯಾವ ಸೀಮೆಯ ನ್ಯಾಯ? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು.

    ಬದುಕು ಕಸಿದುಕೊಂಡ ದಶಪಥ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಡ್ಯ ಸೇರಿ ಹೆದ್ದಾರಿ ಉದ್ದಕ್ಕೂ ಜನರ ಆಕ್ರೋಶ ಅಸ್ಫೋಟಗೊಂಡಿದೆ. ಕಪ್ಪುಪಟ್ಟಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಅದು ಬೇಡ ಎಂದು ವಿನಂತಿಸುತ್ತೇನೆ. ನ್ಯಾಯ ಕೇಳೋಣ, ಹಕ್ಕು ಪ್ರತಿಪಾದಿಸೋಣ. ಅವರಿಗೆ ಅಗೌರವ ತೋರಿಸುವುದು ಬೇಡ.

    ಜನರಿಗೂ ಸಿಟ್ಟಿದೆ, ಅದು ಸಹಜ. ದ್ವಿಚಕ್ರ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಿದ್ದು ಏಕೆ? ಇದು ಅವೈಜ್ಞಾನಿಕ ಮತ್ತು ಅಕ್ಷಮ್ಯ. ಷಟ್ಪಥದ (ಆರು ಪಥ) ಮುಖ್ಯ ಕಾರಿಡಾರಿನಲ್ಲಿ ಕೊನೆಯ ಪಕ್ಷ ಎರಡನ್ನಾದರೂ ದ್ವಿಚಕ್ರ ವಾಹನಗಳಿಗೆ ಮೀಸಲಿಡಬಾರದೇಕೆ? ಇದೇನು ಬಿಟ್ಟಿ ಉಪಕಾರವೇ? ಅಲ್ಲ, ಆ ಜನರ ಹಕ್ಕು.

    30 ವರ್ಷ ಕಾಲ ಈ ಹೆದ್ದಾರಿಯಲ್ಲಿ ಸಂಚರಿಸುವ ಜನರು ಟೋಲ್ ಕಟ್ಟುತ್ತಾರೆ. ಸಂಗ್ರಹವಾಗುವ ಶುಲ್ಕದ ಮೂಲಕವೇ ರಸ್ತೆ ನಿರ್ಮಾಣದ ಖರ್ಚನ್ನು ಜನರೇ ಭರಿಸುತ್ತಾರೆ. ಗುತ್ತಿಗೆದಾರರ ಜೇಬಿಗೆ ಬಹುದೊಡ್ಡ ಗಂಟು ಸೇರಲಿದೆ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದಿಂದ ಈ ಯೋಜನೆಗೆ ಬಿಡಿಗಾಸು ಬಂದಿಲ್ಲ. ದಶಪಥದ ಒಳಲೆಕ್ಕಗಳ ಸತ್ಯ ಜನರಿಗೆ ಗೊತ್ತಾಗಬೇಕಿದೆ.

    ಕನ್ನಡಿಗರಿಗೆ ಕಣ್ಣಿಗೆ ಮಂಕುಬೂದಿ ಎರಚಿ, ಈ ಸತ್ಯವನ್ನು ಮರೆಮಾಚಿ, ತಾವೇ ಈ ರಸ್ತೆ ನಿರ್ಮಾಣಕ್ಕೆ ಕಾರಣ ಎಂದು ಬಿಜೆಪಿಗರು ರಣರಣ ಬೊಬ್ಬೆ ಹೊಡೆಯುತ್ತಿರುವುದು ದಶಪಥ ಹೆದ್ದಾರಿ ಹೆಸರಿನಲ್ಲಿ ಮಾಡುತ್ತಿರುವ ಮಹಾದ್ರೋಹವಾಗಿದೆ. ಈ ಎಕ್ಸ್‌ಪ್ರೆಸ್ ಹೆದ್ದಾರಿಯ ನಿಜವಾದ ಹಕ್ಕುದಾರರಾದ ರಾಮನಗರ, ಮಂಡ್ಯ ಜನರನ್ನು ಪರಾವಲಂಬಿಗಳನ್ನಾಗಿ ಮಾಡಿದ್ದಲ್ಲದೆ, ಭೂಮಿ ಕಳೆದುಕೊಂಡ ಬಡರೈತರು ಹೆದ್ದಾರಿ ಬದಿ ನಿಂತು ಭಿಕ್ಷೆ ಬೇಡುವಂಥ ದುಃಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ.

    ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದನ್ನು. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎನ್ನುವುದು ನನ್ನ ಕಳಕಳಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ

    ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ! ಕರ್ನಾಟಕ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ!! ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ. ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು. ಇದನ್ನೂ ಓದಿ: ಕಾಂಗ್ರೆಸ್ ನನ್ನ ಸಮಾಧಿ ಮಾಡುವ ಕನಸು ಕಾಣುತ್ತಿದೆ: ಮೋದಿ ವಾಗ್ದಾಳಿ

  • ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

    ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯ ಕ್ರೆಡಿಟ್ ರೇವಣ್ಣ (H.D.Revanna) ಅವರಿಗೆ ಸಲ್ಲಬೇಕು. ಅವರ ಚಿಂತನೆಯಿಂದಲೇ ಈ ಹೆದ್ದಾರಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಹೇಳಿದ್ದಾರೆ.

    ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಕ್ರೆಡಿಟ್ ವಾರ್ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು. ಇದರ ಉದ್ಘಾಟನೆಯನ್ನು ಮೋದಿಯವರು (Narendra Modi) ಮಾಡುತ್ತಿದ್ದಾರೆ. ಇದು ಸಂತೋಷದ ವಿಷಯ. ಆದರೆ ಇದನ್ನು ಚುನಾವಣೆಗೆ ಬಳಸುತ್ತೇವೆ ಎಂದರೆ ಆ ರೋಡಿನಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ಸೀಟೂ ಬರುವುದಿಲ್ಲ. ಎಷ್ಟೇ ಶೋಗಳನ್ನು ಮಾಡಿದರೂ ಆಗುವುದಿಲ್ಲ. ಸುಮಲತಾ (Sumalatha Ambareesh) ಬಿಜೆಪಿಗೆ (BJP) ಸೇರಬೇಕು ಎನ್ನುತ್ತಿದ್ದಾರೆ. ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾರಾಯಣ ಗೌಡ (Narayana Gowda) ಕಾಂಗ್ರೆಸ್‌ಗೆ (Congress) ಹೋಗುತ್ತಾರೆ ಎನ್ನುತ್ತಾರೆ. ಹೀಗಾದರೆ ರಾಜಕೀಯದಲ್ಲಿ ನೈತಿಕತೆ ಎಲ್ಲಿ ಉಳಿಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್‌ ಸೇರ್ಪಡೆ

    ಜನತಾ ದಳದ (JDS) ವಿಷನ್ ಕ್ಲಿಯರ್ ಆಗಿದೆ. ಜೈಲು, ಬೇಲ್ ಇಲ್ಲದವರಿಗೆ ಮಾತ್ರ ಜೆಡಿಎಸ್ ಟಿಕೆಟ್ ನೀಡುತ್ತಿದೆ. 17ರಲ್ಲಿ ಎಷ್ಟು ಜನ ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ. ಇವರಲ್ಲಿ ನಾವು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಅವರೇ ಬಂದರೂ ನಾವು ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟ ತೀರ್ಮಾನ ಮಾಡಿದ್ದೇವೆ. ಇವತ್ತು ನಾವು ಒಬ್ಬೊಬ್ಬರನ್ನು ತೂಕ ಮಾಡಿ, ಅಳತೆ ಮಾಡಿ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಈ ಪಕ್ಷವನ್ನು ಒಂದು ಬುನಾದಿ ಮೇಲೆ ತೆಗೆದುಕೊಂಡು ಹೋಗಬೇಕು. ನಾವು ಕಾರ್ಯಕ್ರಮದ ಮೇಲೆ ಚುನಾವಣೆಗೆ ಹೋಗುತ್ತಿದ್ದೇವೆ ಹೊರತು ರೋಡ್ ಶೋ (Road Show) ಮೇಲಲ್ಲ ಎಂದರು.

    ಬಿಜೆಪಿ ಮೋದಿ ಹೆಸರಿನ ಮೇಲೆ, ಕಾಂಗ್ರೆಸ್ ಸೋನಿಯಾ ಹೆಸರಿನ ಮೇಲೆ ಚುನಾವಣೆಗೆ ಹೋಗುತ್ತಿದೆ. ಆದರೆ ನಾವು ಪಂಚರತ್ನ ಕಾರ್ಯಕ್ರಮದ ಮೇಲೆ ಹೋಗುತ್ತಿದ್ದೇವೆ. ಅವರೆಲ್ಲಾ ಉಚಿತ ಖಚಿತ ಎನ್ನುತ್ತಾರೆ. ಯಾರಿಗೆ ಕೊಡುತ್ತಾರೆ? ಸೊಸೆಗಾ ಅಥವಾ ಅತ್ತೆಗಾ? ಹೀಗಾಗಿ ನಾವು 65 ವರ್ಷ ವಯಸ್ಸಾದವರಿಗೆ ಪೆನ್ಷನ್ ಹಾಗೂ ವಿಧವೆಯರಿಗೆ 500 ರೂ. ನೀಡುತ್ತೇವೆ ಎಂದು ಖಚಿತವಾಗಿ ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವುದಕ್ಕೂ ಸಿಜೆಐಗೆ ಪತ್ರ ಬರೆದಿದ್ದಕ್ಕೂ ಸಂಬಂಧ ಇಲ್ಲ: ವಿವೇಕ್ ರೆಡ್ಡಿ

    ಸೋಮಣ್ಣ (V.Somanna) ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾನು ಅವರ ಬಳಿ ಮಾತನಾಡಿದ್ದೇನೆ. ಅವರಿಗೂ, ಬಿ.ಎಸ್.ಯಡಿಯೂರಪ್ಪನವರಿಗೂ (B.S.Yediyurappa) ಭಿನ್ನಾಭಿಪ್ರಾಯವಿದೆ ಅಷ್ಟೇ. ಇದು ಆಂತರಿಕ ಸಮಸ್ಯೆಯಾಗಿದ್ದು ಅವರಿಗೂ, ಇವರಿಗೂ, ವಿಜಯೇಂದ್ರಗೂ ಸರಿ ಹೊಂದುತ್ತಿಲ್ಲ ಅಷ್ಟೇ. ಸೋಮಣ್ಣನವರಿಗೆ ಇದ್ದ ವರ್ಚಸ್ಸು ಅವರಿಗೆ ಇದ್ದೇ ಇದೆ. ಸೋಮಣ್ಣನಿಗೆ ಶಕ್ತಿ ದೊರತಿದ್ದೇ ಜನತಾ ದಳದಿಂದ ಎಂದರು.

    ಈಶ್ವರ್ ಖಂಡ್ರೆ ಅವರು ಲೋಕಸಭೆ ಚುನಾವಣೆಯಲ್ಲಿ ನಿಂತಿದ್ದರಲ್ಲಾ, ಒಂದು ಲಿಂಗಾಯತರ ಮತ ಬಂತಾ ಅವರಿಗೆ? ಈಶ್ವರ್ ಖಂಡ್ರೆಗೂ ಶಾಮನೂರು ಅವರಿಗೂ ಲಿಂಗಾಯತರಿಂದ ಒಂದು ಮತ ಬರಲಿಲ್ಲ. ಅವರ ಹೆಂಡತಿಯೇ ಒಂದು ಮತ ಹಾಕಲಿಲ್ವೇನೋ ಗೊತ್ತಿಲ್ಲ. ಮತ ಹಾಕುವುದು ಸಾಬರು. ಆದರೆ ವೀರಶೈವ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

    ಯಡಿಯೂರಪ್ಪ ರಾಜಕಾರಣದಲ್ಲಿ ಬೆಳೆಯಲು ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನಿಂದ ಹೊರ ಹೋಗಿದ್ದೇ ಕಾರಣ. ಇದು ಅವರಿಗೆ ವರದಾನವಾಯಿತು. ಇಲ್ಲವೆಂದರೆ ಯಡಿಯೂರಪ್ಪ ರಾಜಕಾರಣದಲ್ಲಿ ಬೆಳೆಯುತ್ತಿರಲಿಲ್ಲ. ಇವರ ಶಕ್ತಿಯೇನು ಎಂದು ನಮಗೆ ಗೊತ್ತಿದೆ ಎಂದು ಹೇಳಿದರು.

    ನಮ್ಮ ಪ್ರತಿನಿಧಿಗಳು ಚುನಾವಣಾ ಆಯೋಗದ ಸಭೆಗೆ ಹೋಗಿದ್ದಾರೆ. ಕುಕ್ಕರ್ ಹಂಚುವಿಕೆ ಹಾಗೂ ಸೀರೆ ಹಂಚುವುದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಬಹಿರಂಗವಾಗಿ ಮಾಡುತ್ತಿದೆ. ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರು ಗಂಭೀರಗೊಂಡಿದ್ದಾರೆ. ಇದರ ಬಗ್ಗೆ ಪೊಲೀಸರು ಅಥವಾ ಚುನಾವಣಾ ಆಯೋಗ ಇದನ್ನು ಗಮನಕ್ಕೆ ತೆಗೆದುಕೊಂಡಿದೆಯಾ? ಈ ಕುರಿತು ಬೀದರ್ ಡಿಸಿ ಹಾಗೂ ಎಸ್ಪಿ ಕ್ರಮ ಕೈಗೊಳ್ಳದೇ ಇದ್ದರೆ ನಾನು 15ನೇ ತಾರೀಕಿನಂದು ಡಿಸಿ ಕಚೇರಿ (DC Office) ಮುಂದೆ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷ ರಿಲೀಸ್ ಆಗಲಿ ಎಂದು ಹೇಳಿದ್ದೇವೆ. ಚರ್ಚೆ ಇನ್ನೂ ಮುಗಿದಿಲ್ಲ. ಹಾಗಾಗಿ ಪಟ್ಟಿ ರಿಲೀಸ್ ಫೈನಲ್ ಆಗಲಿಲ್ಲ ಎಂದರು. ಅಪ್ಲಿಕೇಷನ್ ಶುಲ್ಕ ಒಂದು ಲಕ್ಷ ರೂ. ಮಾಡಿದ್ದೇವೆ. ದಲಿತ ಅಭ್ಯರ್ಥಿಗಳಿಗೆ 50 ಸಾವಿರ ರೂ. ಮಾಡಿದ್ದೇವೆ. ಕುರುಬ ನಾಯಕರು ಇದ್ದೇ ಇದ್ದಾರೆ. ಜಿಲ್ಲೆಗೊಂದು, ತಾಲೂಕಿಗೊಂದು ಎಂದು ಏನಿಲ್ಲ. ಸಾಮಾಜಿಕ ನ್ಯಾಯ ಮನಸಿನಲ್ಲಿ ಇಟ್ಟುಕೊಂಡು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಲ್ಲ: ಕಟೀಲ್