Tag: ಬೆಂಗಳೂರು ಮಳೆ

  • ಮಳೆಯ ಅವಾಂತರ: ಮೆಟ್ರೋ ಹಳಿಯ ಮೇಲೆ ಬಿದ್ದ ಮರದ ರೆಂಬೆ, ಕೊಂಬೆ – ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ!

    ಮಳೆಯ ಅವಾಂತರ: ಮೆಟ್ರೋ ಹಳಿಯ ಮೇಲೆ ಬಿದ್ದ ಮರದ ರೆಂಬೆ, ಕೊಂಬೆ – ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ!

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಸಂಭವಿಸಿದ ಭಾರೀ ಮಳೆಯಿಂದಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದ (Metro Purple Line) ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಟ್ರಿನಿಟಿ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ (MG Road) ಕಡೆಗೆ ಹೊರಡುವ ಮಾರ್ಗದಲ್ಲಿ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿರುವ ಕಾರಣ, ಮೆಟ್ರೋ ರೈಲು (Metro Train) ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಮ್ಮ ಮೆಟ್ರೋ (Namma Metro), ರಾತ್ರಿ 7.26 ಗಂಟೆಯಿಂದ ಇಂದ್ರಾನಗರದಿಂದ ವೈಟ್‌ಫೀಲ್ಡ್ ಮತ್ತು ಎಂ.ಜಿ ರಸ್ತೆಯಿಂದ ಚಲ್ಲಘಟ್ಟದ ​​ನಡುವೆ ಮಾತ್ರ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿಂದು ಸುರಿದ ಭಾರೀ ಮಳೆಯಿಂದಾಗಿ (Bengaluru Rains) ಅವಾಂತರ ಸಂಭವಿಸಿದ್ದು, ಹಳಿಗಳ ಮೇಲೆ ಬಿದ್ದಿರುವ ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಚಾರ ಪುನರಾರಂಭಿಸಲಾಗುತ್ತದೆ ಎಂದು ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

  • ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ – ಮುಂಗಾರು ಆರಂಭದಲ್ಲೇ ಹಲವೆಡೆ ಅಬ್ಬರಿಸಿದ ವರುಣ

    ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ – ಮುಂಗಾರು ಆರಂಭದಲ್ಲೇ ಹಲವೆಡೆ ಅಬ್ಬರಿಸಿದ ವರುಣ

    ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ರಾತ್ರಿಯಿಡೀ ಭಾರೀ (Bengaluru Rains) ಮಳೆಯಾಗಿದೆ. ಮುಂಗಾರು ಆರಂಭದಲ್ಲೇ ರಾಜ್ಯದ ಹಲವೆಡೆ ಪ್ರವಾಹದ ಸ್ಥಿತಿ ಕಂಡುಬಂದಿದೆ.

    ನಗರದ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಅಬ್ಬರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಭವ್ಯ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ಆಫೀಸರ್

    ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ನಗರದಲ್ಲಿ ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: Exit Poll | ಎಕ್ಸಿಟ್‌ ಪೋಲ್‌ ಮೇಲೆ ನಂಬಿಕೆಯಿಲ್ಲ, ಬಿಜೆಪಿ 275 ಸ್ಥಾನಗಳನ್ನೂ ದಾಟಲ್ಲ: ಎಂ.ಬಿ ಪಾಟೀಲ್‌

    ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 7.8 ಸೆಂ.ಮೀ
    ಹೊರಮಾವು – 7 ಸೆಂ.ಮೀ
    ವಿದ್ಯಾಪೀಠ – 6.3 ಸೆಂ.ಮೀ
    ಹಂಪಿನಗರ – 6.2 ಸೆಂ.ಮೀ
    ಕೊಡಿಗೆಹಳ್ಳಿ – 6 ಸೆಂ.ಮೀ
    ಹೇರೋಹಳ್ಳಿ – 5.9 ಸೆಂಮೀ
    ದೊಡ್ಡನೆಕುಂದಿ – 5.8 ಸೆಂಮೀ
    ಜಕ್ಕೂರು – 5.6 ಸೆಂ.ಮೀ
    ನಾಗೇನಹಳ್ಳಿ – 5.3 ಸೆಂ.ಮೀ
    ಯಲಹಂಕಾ – 5.3 ಸೆಂ.ಮೀ
    RR ನಗರ – 5.2 ಸೆಂ.ಮೀ ಮಳೆಯಾಗಿದೆ.

  • ಮುಂದಿನ ಮೂರು ದಿನ ಬೆಂಗಳೂರಿಗಿಲ್ಲ ಮಳೆ

    ಮುಂದಿನ ಮೂರು ದಿನ ಬೆಂಗಳೂರಿಗಿಲ್ಲ ಮಳೆ

    ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವುದಿಲ್ಲ (Bengaluru Rains) ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಇಳಿಕೆಯಾಗಲಿದೆ. ಹೀಗಾಗಿ ಮೇ 30 ರ ವರೆಗೆ ನಗರಕ್ಕೆ ಮಳೆಯಾಗುವುದಿಲ್ಲ. ಮೇ 31, ಜೂನ್ 1 ರ ಅವಧಿಯಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಇದನ್ನೂ ಓದಿ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ – ಸಿಐಡಿಗೆ ವರ್ಗಾವಣೆ

    ಜೂ‌ 1 ರ ಬಳಿಕ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ಇದೆ. ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಅಬ್ಬರಿಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮಾತ್ರ ರೆಮಲ್ ಆರ್ಭಟ ಜೋರಾಗಿರಲಿದೆ. ಆದರೆ ರಾಜ್ಯಕ್ಕೆ ರೆಮಲ್‌ ಚಂಡಮಾರುತದ ಭೀತಿ ಇಲ್ಲ. ತಮಿಳುನಾಡು ಮತ್ತು ಆಂಧ್ರ ಕರಾವಳಿ ಭಾಗದಿಂದ ಈ ಚಂಡಮಾರುತ ಭಾರೀ ದೂರ ಚಲಿಸಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯ, ಹಾಗೂ ದಕ್ಷಿಣ ಭಾರತಕ್ಕೆ ಚಂಡಮಾರುತದಿಂದ ಯಾವುದೇ ಪರಿಣಾಮ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದಸರಾ ಆನೆ ಅರ್ಜುನ ಸಮಾಧಿ ವಿಚಾರಕ್ಕೆ ದರ್ಶನ್ ಫ್ಯಾನ್ಸ್, ಅರಣ್ಯಾಧಿಕಾರಿಗಳ ಗಲಾಟೆ

    ಮುಂದಿನ ಮೂರ್ನಾಲ್ಕು ದಿ‌ನ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಅತ್ತ ಕೋಲ್ಕತಾ, ಹಿಮಾಚಲ ಪ್ರದೇಶಗಳಿಗೆ ಚಂಡಮಾರುತದ ಎಫೆಕ್ಟ್‌ ಸಾಧ್ಯತೆ ಹಿ‌ನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

  • ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು

    ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು

    ಬೆಂಗಳೂರು: ರಾಜಧಾನಿಯಲ್ಲಿ (Bengaluru Rains) ಇಂದು ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗ್ಗೆಯಿಂದಲೂ ಬಿಟ್ಟು ಬಿಡದೇ ಮಳೆಯಾಗುತ್ತಿದೆ.

    ವಿಧಾನಸೌಧ, ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರ, ಯಶವಂತಪುರ, ಮತ್ತಿಕೆರೆ, ಗೊರುಗುಂಟೆಪಾಳ್ಯ ಸುತ್ತಮುತ್ತ ಮಳೆಯಾಗುತ್ತಿದೆ. ಇದನ್ನೂ ಓದಿ: ಪೆನ್‍ಡ್ರೈವ್ ಕೇಸ್‍ನಲ್ಲಿ ಹೊಸ ಆಡಿಯೋ ಔಟ್- ಕೇಸ್‍ಗೆ ಸಿಗುತ್ತಾ ಟ್ವಿಸ್ಟ್?

    ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಗಾಂಧಿನಗರ, ಟೌನ್‌ಹಾಲ್, ಕೆ.ಜಿ. ರೋಡ್ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು ಕೂಲ್ ಕೂಲ್ ಎನಿಸಿದೆ.

    ನಗರದ ಹಲವು ಭಾಗಗಳಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಕೆಲವು ಕಡೆ ಹನಿ ಮಳೆಯಾಗುತ್ತಿತ್ತು. ಆದರೆ ಸಾಯಂಕಾಲ ಆಗುತ್ತಿದ್ದಂತೆ ಮಳೆ ಅಬ್ಬರ ಜೋರಾಯಿತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಇದನ್ನೂ ಓದಿ: ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆ.ಆರ್.ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆ.ಆರ್. ಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ಸಹಕರಿಸಲು ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

    ನೆಲಮಂಗಲ ಸುತ್ತಮುತ್ತ ಜೋರು ಮಳೆಯಾಗಿದೆ. ಗುಡುಗು-ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ. ನೆಲಮಂಗಲ ತಾಲೂಕಿನ ಮೆಳೇಕತ್ತಿಗನೂರು ಗ್ರಾಮದಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾನೆ. ಇದನ್ನೂ ಓದಿ: ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಯಲಹಂಕ, ನ್ಯೂ ಟೌನ್, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಪುಟ್ಟೇನಹಳ್ಳಿ, ಏರ್ಪೋಟ್ ರೋಡ್, ಅನಂತಪುರ ಭಾಗದಲ್ಲಿ ಜೋರು ಮಳೆಯಾಗಿದೆ. ಸದ್ಯ ನಗರದಲ್ಲಿ ಮುಂದಿನ ನಾಲ್ಕು ದಿನ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ.

  • ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಗಾಳಿ ಮಳೆ – ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಗಾಳಿ ಮಳೆ – ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ (Rain) ಮಳೆಯಾಗುತ್ತಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಳೆ ಹೆಚ್ಚಾಗಲಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಪ್ರಜ್ವಲ್‌ ಗೈರು – ಭಾರತಕ್ಕೆ ಕರೆ ತರೋದು ಹೇಗೆ? ಎಸ್‌ಐಟಿ ಮುಂದಿರುವ ಆಯ್ಕೆ ಏನು?

    ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಇಂದು ಮುಂಜಾನೆಯಿಂದ ಮೋಡ ಕವಿದಿದ್ದು ವಾತಾವರಣ (Weather) ತಂಪಾಗಿದೆ. ನಗರದಲ್ಲಿಯೂ ಸಹ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ. ಮಳೆ ಜೊತೆಗೆ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ, ಗುಡುಗು ಮಿಂಚು ಇರಲಿದೆ. ಸಾರ್ವಜನಿಕರು ಗಾಳಿ ಮಳೆಯ ವೇಳೆ ಮರದ ಕೆಳಗೆ, ಇನ್ನಿತರೆ ಅಸುರಕ್ಷಿತ ಜಾಗಗಳಲ್ಲಿ ಇರದಂತೆ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಭವಾನಿ ರೇವಣ್ಣ ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಡಿ – ಎಸ್‍ಐಟಿಗೆ ಸರ್ಕಾರ ಸೂಚನೆ

  • ಬೆಂಗಳೂರಲ್ಲಿ ಮಳೆ ಅಬ್ಬರ; ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರಲ್ಲಿ ಮಳೆ ಅಬ್ಬರ; ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ನಗರದ (Bengaluru Rains) ಹಲವೆಡೆ ಮಳೆ ಅಬ್ಬರ ಜೋರಾಗಿದೆ. ಆರ್‌.ಆರ್. ನಗರ ಜ್ಞಾನಭಾರತಿ, ಏಪೋರ್ಟ್‌ ರಸ್ತೆ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದೆ.

    ಮಳೆಯ ಅಬ್ಬರಕ್ಕೆ ತಡರಾತ್ರಿ ನಗರ ವಾಸಿಗಳು ಹೈರಾಣಾಗಿದ್ದಾರೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ವಕೀಲ ದೇವರಾಜೇಗೌಡ ಪೊಲೀಸ್ ವಶಕ್ಕೆ

    ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದರು. ಮನೆಯ ವಸ್ತುಗಳೆಲ್ಲ ಮಳೆಗೆ ತೊಯ್ದಿವೆ.

    ನಗರದ ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
    ಕೆಂಗೇರಿ – 89 ಮಿಮೀ.
    ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62 ಮಿಮೀ
    ನಾಯಂಡನಹಳ್ಳಿ – 61.5 ಮಿಮೀ
    ಹೆಮ್ಮಿಗೆಪುರ – 61 ಮಿಮೀ
    ಆರ್‌.ಆರ್. ನಗರ – 60 ಮಿಮೀ
    ಮಾರುತಿ ಮಂದಿರ – 51.50 ಮಿಮೀ
    ವಿದ್ಯಾಪೀಠ – 50 ಮಿಮೀ
    ಉತ್ತರಹಳ್ಳಿ – 42 ಮಿಮೀ
    ಹಂಪಿನಗರ – 39 ಮಿಮೀ
    ಯಲಹಂಕ – 38.50 ಮಿಮೀ
    ಜಕ್ಕೂರು – 38 ಮಿಮೀ
    ಕೊಟ್ಟಿಗೆಪಾಳ್ಯ – 33 ಮಿಮೀ
    ಕೊಡಿಗೆಹಳ್ಳಿ – 28.50 ಮಿಮೀ
    ನಂದಿನಿ ಲೇಔಟ್ – 28 ಮಿಮೀ

  • ಬೆಂಗಳೂರಿಗೆ ತಂಪೆರೆದ ಮಳೆರಾಯ

    ಬೆಂಗಳೂರಿಗೆ ತಂಪೆರೆದ ಮಳೆರಾಯ

    ಬೆಂಗಳೂರು: ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರಿಗೆ (Bengaluru Rains) ಶನಿವಾರ ಮಳೆರಾಯ ತಂಪೆರೆದಿದ್ದಾನೆ. ರಾಜಧಾನಿಯ ಹಲವೆಡೆ ಮಳೆಯಾಗಿದೆ. ಮಳೆಯಾದ ಖುಷಿಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದ ದೃಶ್ಯ ಕಂಡುಬಂತು.

    ನಗರದ ಸರ್ಕಲ್ ಮಾರಮ್ಮ , ಸ್ಯಾಂಕಿ, ಜಯನಗರ, ಜೆ.ಪಿ.ನಗರ, ಆರ್‌.ಆರ್‌. ನಗರ, ಮೇಖ್ರಿ ಸರ್ಕಲ್‌ ಸೇರಿದಂತೆ ಹಲವೆಡೆ ಮಳೆಯಾಗಿದೆ. ಕೆಲವೆಡೆ ಮೋಡ ಕವಿದ ವಾತಾವರಣ ಇದೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮಳೆ ಅಬ್ಬರ; ಶಿವಮೊಗ್ಗ, ಬೀದರ್‌ನಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ – ಇನ್ನೂ 3 ದಿನ ಮಳೆ ಮುನ್ಸೂಚನೆ

    ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತ ಮಳೆಯಾಗುತ್ತಿದೆ. ಮೇಖ್ರಿ ಸರ್ಕಲ್‌ ಬಳಿ ಮಳೆ ಜೋರಾಗಿ ಸುರಿಯುತ್ತಿದೆ. ನಿನ್ನೆ ಕೂಡ ನಗರದ ಹಲವೆಡೆ ಮಳೆಯಾಗಿತ್ತು. ಕೆಂಗೇರಿ ಸೇರಿದಂತೆ ದೊಡ್ಡಬಳ್ಳಾಪುರ, ನೆಲಮಂಗದಲ್ಲಿ ನಿನ್ನೆ ಸಂಜೆ ವೇಳೆ ಮಳೆ ಸುರಿದಿತ್ತು.

  • ಬೆಂಗಳೂರಲ್ಲಿ ಮಳೆ ಅವಾಂತರ; ರಸ್ತೆಗಳು ಜಲಾವೃತ – ಧರೆಗುರುಳಿದ ಮರಗಳು

    ಬೆಂಗಳೂರಲ್ಲಿ ಮಳೆ ಅವಾಂತರ; ರಸ್ತೆಗಳು ಜಲಾವೃತ – ಧರೆಗುರುಳಿದ ಮರಗಳು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಸಾಯಂಕಾಲದಿಂದ ಭಾರೀ ಮಳೆಯಾಗಿದೆ. ರಾತ್ರಿಯಿಡಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಇದರಿಂದ ರಸ್ತೆಗಳು ಜಲಾವೃತಗೊಂಡಿದ್ದು, ಅನೇಕ ಕಡೆ ಮಳೆಗೆ ಮರಗಳು ಧರೆಗುರುಳಿವೆ.

    ಬೆಂಗಳೂರಲ್ಲಿ ಮಳೆ ಅವಾಂತರಕ್ಕೆ ರಸ್ತೆಯಲ್ಲಿ ಡ್ರೈನೇಜ್ ನೀರು ತುಂಬಿಕೊಂಡಿತ್ತು. ಇದರಿಂದ ವಾಹನ ಸವಾರರು ಪರದಾಡಿದರು. ನಗರದ 7 ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಹರಿದಿದೆ. ಬೆಂಗಳೂರು ಪೂರ್ವ ವಲಯ, ಮಹದೇವಪುರ ವಲಯ, ಬೆಂಗಳೂರು ದಕ್ಷಿಣದಲ್ಲಿ ಮರಗಳು ಬಿದ್ದಿವೆ.

    ಜಕ್ಕೂರ್, ಹಂಪಿನಗರ, ನಾಗಪುರ, ನಂದಿನಿ ಲೇಔಟ್, ವಿಶ್ವನಾಥ್ ನಾಗೇನಹಳ್ಳಿ, ರಾಜಮಹಲ್ ಗುಟ್ಟಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ ಬಳಿ, ಕೊಟ್ಟಿಗೆಪಾಳ್ಯ, ಅಗ್ರಹಾರ ದಾಸರಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ.

    ಯಲಹಂಕ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ಗೆ ಮಳೆ ನೀರು ನುಗ್ಗಿದೆ. ಕಾರು, ಬೈಕ್‌ಗಳು ಮುಳುಗುವ ಆತಂಕದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ತೆರವು ಮಾಡಿದರು.

    ಮಳೆಯಿಂದ ಕುರುಬರಹಳ್ಳಿಯಲ್ಲೂ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಿಲಿಂಡರ್, ಚೇರ್, ಪಾತ್ರೆಗಳು, ಹಾಸಿಗೆ ನೀರಿನಲ್ಲಿ ತೇಲಾಡುತ್ತಿದ್ದವು. ಜಿ.ಟಿ. ಮಾಲ್ ಹಿಂಭಾಗದ ರಸ್ತೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನೊಂದಿಗೆ ರಾಜಕಾಲುವೆಯ ನೀರು ಸಹ ಮನೆಗೆ ನುಗ್ಗಿದೆ. ಜನ ನೀರನ್ನು ತೆರವು ತೆರವುಗೊಳಿಸಿ ಮನೆ ಶುಚಿಗೊಳಿಸುತ್ತಿದ್ದಾರೆ.

  • ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ

    ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ

    ಬೆಂಗಳೂರು: ಇನ್ನೂ ಮೂರು ದಿನ ಬೆಂಗಳೂರಿನಲ್ಲಿ (Bengaluru) ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ (Rain) ಸಾಧ್ಯತೆಯಿದೆ.

    ಬೆಳಗ್ಗೆಯಿಂದ ಮೋಡ ಕವಿದ ವಾತವರಣ ಇರಲಿದ್ದು, ಸಂಜೆ ಬಳಿಕ ಜೋರು ಮಳೆಯಾಗಲಿದೆ. ಬೆಳಗ್ಗೆ ವೇಳೆ ಕೆಲವೊಮ್ಮೆ ಬಿಸಿಲು ಕೂಡ ಹೆಚ್ಚಾಗುವ ಸಾಧ್ಯತೆಯಿದೆ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

     

    ಕಳೆದ 4 ದಿನದಲ್ಲಿ 800ಕ್ಕೂ ಹೆಚ್ಚು ಮರಗಳು (Trees) ಧರೆಗೆ ಬಿದ್ದಿವೆ. ಮಲ್ಲೇಶ್ವರಂ, ಸದಾಶಿವನಗರ, ಕೆ ಆರ್ ರಸ್ತೆ, ಕೆ ಆರ್ ಸರ್ಕಲ್, ಕಬ್ಬನ್ ಪಾರ್ಕ್, ಲಾಲ್ ಬಾಗ್, ರಾಜಕುಮಾರ ರಸ್ತೆ ಸೇರಿದಂತೆ ಅನೇಕ ಬೃಹತ್‌ ಮರಗಳು ಬಿದ್ದಿವೆ. ಇದನ್ನೂ ಓದಿ: ಕಳೆದ 5 ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ಕೆಆರ್‌ಎಸ್‌ ಡ್ಯಾಂ ನೀರು ಸಂಗ್ರಹ

    ಮಳೆಯ ಜೊತೆ ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ನೆಲಗಾಳಿ ಬೀಸಿದ್ದರ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ 500ಕ್ಕೂ ಹೆಚ್ಚು ಗಿಡಮರಗಳು ನೆಲಕ್ಕುರುಳಿವೆ.

     

    ಮೂರು ದಿನಗಳಲ್ಲಿ ಆಗಿದ್ದು ಬಿರುಗಾಳಿ ಸಹಿತ ಮಳೆ ಅಲ್ಲ, ಅದು ನೆಲಗಾಳಿ ಸಹಿತ ಮಳೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಹಿಂದಿನ ಮಳೆ ವೇಳೆ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಬಿರುಗಾಳಿ ಇರುತ್ತಿತ್ತು. ಇದರ ಪರಿಣಾಮ ಮಳೆ ಹೆಚ್ಚಾದರೂ ಗಾಳಿ ಕಡಿಮೆ ಇರುತ್ತಿತ್ತು. ಗಿಡಮರಗಳಿಗೆ ಹೆಚ್ಚಿನ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಈ ಬಾರಿ ಮಳೆ ಕಡಿಮೆ, ನೆಲಗಾಳಿ ಹೆಚ್ಚಾದ ಪರಿಣಾಮ ಈ ಪ್ರಮಾಣದ ಅವಾಂತರಗಳು ಸೃಷ್ಟಿಯಾಗಿದೆ ಎಂದು ಹೇಳಿದೆ.

  • `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ

    `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ

    – ಮಳೆ ಅನಾಹುತ – ಬಿಬಿಎಂಪಿ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಎಂದ ಮಾಜಿ ಸಿಎಂ

    ಬೆಂಗಳೂರು: ಗ್ಯಾರಂಟಿಗಳ (Congress Guarantee) ಬಗ್ಗೆ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು (Congress Worker) ಜನರ ಬಳಿ ಹೋಗಿ ಸ್ಪಷ್ಟವಾಗಿ ಹೇಳಿಲ್ಲ. ಯಾವುದೋ ಕಂಪನಿಯಿಂದ ಬಂದವರಂತೆ ಹೋಗಿ ಗ್ಯಾರಂಟಿ ಸ್ಕೀಂಗಳ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ ನಿಂದ ಅಂತಾ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದ್ರೆ `ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್’ ಅಂತಾ ಹೇಳಿದ್ದಾರೆ. ಈ ರೀತಿ ಜನರಿಗೆ ಮೋಸ ಮಾಡಿದ್ದು, ಮುಂದೆ ಎಲ್ಲವೂ ಬೆಳಕಿಗೆ ಬರಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದ್ದಾರೆ.

    ಬೆಂಗಳೂರು (Bengaluru) ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿದ್ದು, ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಸೋತ ಕ್ಷೇತ್ರಗಳಲ್ಲಿ ಮರು ಸಂಘಟನೆ ಮಾಡಲು ಹಾಗೂ ಲೋಕಸಭೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ

    ಬೆಂಗಳೂರಿನಲ್ಲಿ ಮಳೆ (Bengaluru Rain) ಅನಾಹುತ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೇ ಗಂಟೆಗಳ ಮಳೆಗೆ ಸಾವಾಗಿರೋದು ಬಹಳ ನೋವಿನ ಸಂಗತಿ. ಚಿಕ್ಕಮಗಳೂರಿನಲ್ಲಿ ಮೂರು ಸಾವಾಗಿದೆ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಿದ್ದಾರೆ. ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿಯವರು ಮಾಡಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸನ್ಮಾನದ ರೂಪದಲ್ಲಿ ಹಾಕುವ ಹಾರ-ತುರಾಯಿ, ಶಾಲು-ಶಲ್ಯಗಳು ನನಗೆ ಬೇಡ – ಸಿದ್ದರಾಮಯ್ಯ

    ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಗರದಲ್ಲಿ ಸಿಕ್ಕಾಪಟ್ಟೆ ಮರಗಳು ಬಿದ್ದಿವೆ. ಬಿದ್ದ ಮರಗಳನ್ನು ತೆಗೆಯುವ ಕೆಲಸ ಆಗಿಲ್ಲ. ಮುಂದಿನ 5 ದಿನ ಹೀಗೇ ಬಿಟ್ರೆ ಬೆಂಗಳೂರು ಬಹಳ ಅಸ್ತವ್ಯಸ್ತ ಆಗಲಿದೆ. ಆದ್ದರಿಂದ ಆದ್ಯತೆ ಮೇರೆಗೆ ಸಿಎಂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    40% ಕಮಿಷನ್ ಬಗ್ಗೆ ತನಿಖೆಯಾಗಲಿ:
    ಬಿಜೆಪಿ ಅವಧಿಯ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನು ಸ್ಪಷ್ಟವಾಗಿ ಹೇಳ್ತೀನಿ, ದಯವಿಟ್ಟು ಅವರು ಎಲ್ಲ ತನಿಖೆ ಮಾಡಿಸಲಿ. 40% ಕಮೀಷನ್ ಆರೋಪವನ್ನು ನಮ್ಮ ಮೇಲೆ ಹೊರೆಸಿದ್ದಾರೆ. 40% ಆಗಿದೆ ಅಂತಾ ಅವರು ಪುರಾವೆ ಸಮೇತ ತೋರಿಸಬೇಕು. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆಗಳನ್ನು ಕೊಡಲಿ, ನಾವು 40% ಕಮೀಷನ್ ತಗೋತಿದ್ವಿ ಅಂತಾ ದಾಖಲೆಸಹಿತ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.