Tag: ಬೆಂಗಳೂರು ಗಲಾಟೆ

  • ಜಮೀರ್ ಇನ್ ಟ್ರಬಲ್ – ಪಕ್ಷದ ನಾಯಕರಿಂದ ಎಚ್ಚರಿಕೆ

    ಜಮೀರ್ ಇನ್ ಟ್ರಬಲ್ – ಪಕ್ಷದ ನಾಯಕರಿಂದ ಎಚ್ಚರಿಕೆ

    -ಪರಿಹಾರ ಕೊಡ್ತಾರಾ ಜಮೀರ್ ಅಹ್ಮದ್?

    ಬೆಂಗಳೂರು: ಕೆಜಿ ಹಳ್ಳಿ ಗಲಾಟೆಯಲ್ಲಿ ಮೃತರಾದ ಮೂವರ ಕುಟುಂಬಕ್ಕೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ 5 ಲಕ್ಷ ರೂ. ಪರಿಹಾರ ನೀಡುವದಾಗಿ ಘೋಷಣೆ ಮಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕರು ನೀಡಿರುವ ಎಚ್ಚರದ ಸಂದೇಶಕ್ಕೆ ಜಮೀರ್ ಅಹ್ಮದ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದರು. ಆದರೆ ಅನಗತ್ಯ ಗಲಭೆ ಮಾಡಿದವರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಬೇರೆಯದೆ ಸಂದೇಶ ರವಾನೆ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಾದರೆ ಕೊಡಿ. ಆದರೆ ಈ ವಿಷಯ ಮಾತ್ರ ಬಹಿರಂಗ ಆಗಬಾರದು ಎಂದು ಕಾಂಗ್ರೆಸ್ ನಾಯಕರು ಎಂದಿದ್ದಾರೆ. ಎಲ್ಲಿಯೂ ಸಹ ಪರಿಹಾರ ಕೊಟ್ಟೆ ಅಂತ ಹೇಳಬಾರದು ಎಂದು ಬಹಿರಂಗವಾಗಿ ಹೇಳುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ.

    ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ ನಾನೇ ಎಂದುಕೊಂಡ ಜಮೀರ್ ಗಲಭೆಯಲ್ಲಿ ಮೃತರಾದವರ ಕುಟುಂಬಕ್ಕೆ ಪರಿಹಾರ ಘೋಷಿಸಿದರು. ಪರಿಹಾರ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಗುಟ್ಟು ಗುಟ್ಟಾಗಿ ಪರಿಹಾರ ಕೊಡಿ ಅನ್ನೋ ಪಕ್ಷದ ನಾಯಕರ ಮಾತಿಗೆ ಜಮೀರ್ ಅಹ್ಮದ್ ಗೊಂದಲದಲ್ಲಿ ಸಿಲುಕಿದ್ದಾರೆ. ಪರಿಹಾರ ಕೊಟ್ಟರು ಕೊಟ್ಟೆ ಅಂತ ಹೇಳಿಕೊಳ್ಳುವಂತಿಲ್ಲ ಎಂಬ ಪಕ್ಷದ ನಾಯಕರ ವರಸೆ ಕಂಡು ಜಮೀರ್ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದಂತಾಗಿದ್ದಾರೆ. ಆಡಿದ ಮಾತಿನಂತೆ ಜಮೀರ್ ಪರಿಹಾರ ಕೊಡ್ತಾರಾ? ಅಥವಾ ಸೈಲೆಂಟ್ ಪರಿಹಾರಕ್ಕೆ ಒಪ್ಪದೆ ಸುಮ್ಮನಾಗ್ತಾರಾ ಅನ್ನೋದೆ ಸದ್ಯದ ಕುತೂಹಲ.

  • ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ಬೆಂಗಳೂರು: ಆರೋಪಿ ನವೀನ್‌ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

    ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ನವೀನ್‌ ವಿರುದ್ಧ ಫಿರ್ದೋಸ್‌ ಪಾಶಾ ನೀಡಿದ್ದರು. ಆದರೆ ಈಗ ತನ್ನ ಸ್ಕೂಟರ್‌ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ 1981 ಮತ್ತು ಐಪಿಸಿ ಸೆಕ್ಷನ್‌ 143, 145, 144, 147, 148, 149, 435 ಅಡಿ ಪ್ರಕರಣ ದಾಖಲಾಗಿದೆ. 75 ಸಾವಿರ ರೂ. ಮೌಲ್ಯ ನಷ್ಟವಾಗಿದೆ ಎಂದು ಫಿರ್ದೋಶ್‌ ಪಾಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    ದೂರಿನಲ್ಲಿ ಏನಿದೆ?
    ಆಗಸ್ಟ್‌ 11 ರ ಸಂಜೆ 7:30ಕ್ಕೆ ನಾನು ನನ್ನ ಹೊಂಡಾ ಆಕ್ವೀವಾವನ್ನು ಡಿಜೆ ಹಳ್ಳಿ ಠಾಣೆಯಲ್ಲಿ ನಿಲ್ಲಿಸಿ ದೂರು ನೀಡಲು ಬಂದಿದ್ದೆ. ಈ ವೇಳೆ ಸುಮಾರು ಜನ ಠಾಣೆಯ ಒಳಗಡೆ ಬಂದು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನಗೆ ನನ್ನ ಆಕ್ಟೀವಾವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ರಾತ್ರಿ 9 ಗಂಟೆಗೆ ಜಮಾಯಿಸಿದ ಜನ ನನ್ನ ಸ್ಕೂಟರ್‌ ಅನ್ನು ಸುಟ್ಟು ಹಾಕಿದ್ದಾರೆ. ಗಲಭೆಯಾದ ದಿನದಂದು 144 ಸೆಕ್ಷನ್‌ ಜಾರಿಯಾದ ಕಾರಣ ನನಗೆ ಆ ದಿನವೇ ದೂರು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈ ದಿನ ದೂರು ನೀಡುತ್ತಿದ್ದೇನೆ. ನನ್ನ ಸ್ಕೂಟರನ್ನು ಸುಟ್ಟು ಹಾಕಿ ನಾಶ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

    ಎಫ್‌ಬಿ ಪೋಸ್ಟ್‌ ನೆಪ?
    ನವೀನ್‌ ವಿರುದ್ಧವೇ ದೂರು ನೀಡಿದ ಫಿರ್ದೋಸ್ ಪಾಶಾ ಅವರೇ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು ಈ ಪ್ರಕರಣ ಮತ್ತಷ್ಟು ಟ್ವಿಸ್ಟ್‌ ಸಿಕ್ಕಿ ಹಲವು ಪ್ರಶ್ನೆಗಳು ಎದ್ದಿದೆ. ದೂರು ಕೊಟ್ಟವರು ಹಾಗೂ ಗಲಾಟೆ ಮಾಡಿದವರಿಗೂ ಸಂಬಂಧ ಇಲ್ಲವೇ? ನವೀನ್ ಪೋಸ್ಟ್‌ಗೂ ಗಲಾಟೆಗೂ ಸಂಬಂಧವೆ ಇಲ್ಲವೇ? ಫೇಸ್‌ಬುಕ್‌ ಪೋಸ್ಟ್‌ ಎಂಬುದು ನೆಪ ಮಾತ್ರವೇ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

  • ಡಿಜೆ ಹಳ್ಳಿ ಗಲಭೆ ಹಿಂದೆ ಲೋಕಲ್ ಪಾಲಿಟಿಕ್ಸ್

    ಡಿಜೆ ಹಳ್ಳಿ ಗಲಭೆ ಹಿಂದೆ ಲೋಕಲ್ ಪಾಲಿಟಿಕ್ಸ್

    ಬೆಂಗಳೂರು: ಡಿಜೆ ಹಳ್ಳಿ ಗಲಭೆ ಹಿಂದೆ ಇರೋದು ಲೋಕಲ್ ಪಾಲಿಟಿಕ್ಸ್ ಅನ್ನೋದು ಮತ್ತೆ ಮತ್ತೆ ಸ್ಪಷ್ಟವಾಗ್ತಿದೆ. ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಅವರ ವಿರೋಧಿಗಳೆಲ್ಲಾ ಸೇರಿ ಪಿತೂರಿ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿಯವರ ಕೈಯಲ್ಲಿರುವ ಪುಲಕೇಶಿ ಪಟ್ಟಕ್ಕಾಗಿ ಕೇವಲ ಕಾಂಗ್ರೆಸ್‍ನ ಮಾಜಿ ಮೇಯರ್ ಮಾತ್ರ ಫೈಟ್ ನಡೆಸುತ್ತಿರಲಿಲ್ಲ. ಎಸ್‍ಡಿಪಿಐ, ಜೆಡಿಎಸ್‍ನ ಲೋಕಲ್ ನಾಯಕರು ಕೂಡ ಮಸಲತ್ತು ನಡೆಸ್ತಿದ್ದರು ಎಂಬ ಮಾತು ಕೇಳಿಬರುತ್ತಿದೆ.

    ಬಿಜೆಪಿಯೇತರರು ಸುಲಭವಾಗಿ ಗೆಲ್ಲುವ ಕ್ಷೇತ್ರಗಳ ಪೈಕಿ ಒಂದಾದ ಪುಲಕೇಶಿ ನಗರದ ಮೇಲೆ ಕಣ್ಣಾಕಿದ್ದ ಮಾಜಿ ಮೇಯರ್ ಸಂಪತ್‍ರಾಜ್, ತಮ್ಮ ವ್ಯಾಪ್ತಿಗೆ ಬಾರದ ವಾರ್ಡ್ ನಲ್ಲೂ ಹೋಗಿ ರೇಷನ್ ಹಂಚಿಕೆ ಮಾಡಿದ್ರು. ಈ ವಿಚಾರದಲ್ಲಿ ಅಖಂಡ ಮತ್ತು ಸಂಪತ್‍ರಾಜ್ ನಡುವೆ ಗಲಾಟೆ ಆಗಿ, ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತಿತ್ತು. ಆಗ ನೋಡು, ಮುಂದಿನ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಟಿಕೆಟ್ ತರ್ತೀನಿ ನೋಡ್ತಿರು ಎಂದು ಸವಾಲು ಹಾಕಿದ್ರಂತೆ. ಅಲ್ಲಿಂದ ಶುರುವಾದ ಇಬ್ಬರ ನಡುವಿನ ಕದನ ಇನ್ನೂ ನಿಂತಿಲ್ಲ ಎನ್ನಲಾಗಿದೆ.

    ಗಲಭೆಯಲ್ಲಿ ಮೂವರು ಕಾರ್ಪೋರೇಟತಗ ಗಳ ಪಾತ್ರ ಇರೋ ಬಗ್ಗೆ ಸನ್ಮಾನ್ಯ ಮಂತ್ರಿಗಳೊಬ್ಬರಿಗೆ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ್ದರು. ಸದ್ಯ ರಾಜಕೀಯ ಒಳಸಂಚಿನ ಬಗ್ಗೆ ಮಾಹಿತಿ ಕಲೆ ಹಾಕ್ತಿರೋ ಸಿಸಿಬಿ, ಮಾಜಿ ಮೇಯರ್ ಸಂಪತ್‍ರಾಜ್‍ಗೆ ನೊಟೀಸ್ ಕೊಡಲು ತಯಾರಿ ನಡೆಸಿದೆ. 2 ತಿಂಗಳ ಹಿಂದೆ ಅಖಂಡ ಮಿಸ್ಸಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್‍ನ ವಾಜೀದ್ ಪಾಷಾ ಪೋಸ್ಟ್ ಮಾಡಿದ್ದ. ಇದನ್ನು ಖಂಡಿಸಿ ಅಖಂಡ ಕಡೆಯವರು ದೂರು ನೀಡಿದ್ದರು. ಪೊಲೀಸ್ರು ವಿಚಾರಣೆಗೆ ಇಳಿದ ಕೂಡಲೇ ವಾಜೀದ್ ಕ್ಷಮೆಯಾಚಿಸಿದ್ದರು. ನಂತರ ಪೊಲೀಸರು ಅಖಂಡ ಮತ್ತು ವಾಜೀದ್‍ರನ್ನು ಕರೆಯಿಸಿ ಸಂಧಾನ ಮಾಡಿದ್ದರು.

    ಈ ಶೀತಲ ಸಮರ ಇದು ಇಲ್ಲಿಗೆ ನಿಲ್ಲಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಹೆಚ್ಚಾಗಿತ್ತು. ನವೀನ್ ಅರೆಸ್ಟ್ ವೇಳೆ ಠಾಣೆಗೆ ಬಂದಿದ್ದ ವಾಜೀದ್, ಇದೀಗ ಎಸ್ಕೇಪ್ ಆಗಿದ್ದಾನೆ. ಇನ್ನು ಗಲಭೆಯಲ್ಲಿ ಪುಲಕೇಶಿನಗರ ವಾರ್ಡ್ ಕಾರ್ಪೋರೇಟರ್ ಜಾಕೀರ್ ಪಾತ್ರ ಸಹ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

  • ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್‌

    ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್‌

    ಬೆಂಗಳೂರು: ಗಲಭೆಯಲ್ಲಿ ಎಸ್‍ಡಿಪಿಐ ಜೊತೆಗೆ ಮತ್ತೊಂದು ಸಂಘಟನೆ ಕೂಡ ಸಾಥ್ ನೀಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಫೈರೋಜ್ ಖಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ನೇರವಾಗಿ ಎಲ್ಲೂ ಗಲಭೆಯಲ್ಲಿ ಕಾಣಿಸಿಕೊಳ್ಳದ ಆರ್‌ಟಿ ನಗರದದ ನಿವಾಸಿ ಫೈರೋಜ್, ತೆರೆ ಹಿಂದಿದ್ದು ಮುಜಾಮಿಲ್ ಪಾಷಾ ಮೂಲಕವಾಗಿ ರಕ್ತದೋಕುಳಿಗೆ ಸ್ಕೆಚ್ ಹಾಕಿಕೊಟ್ಟಿದ್ದ ಎಂದು ತಿಳಿದುಬಂದಿದೆ.

    ಗಲಭೆ ನಡೆದ ದಿನ ಅಂದರೆ ಮಂಗಳವಾರ ಸಂಜೆ ಆರರಿಂದಲೇ ಫೈರೋಜ್ ಎಲ್ಲರಿಗೂ ಮೆಸೇಜ್ ಶೇರ್ ಮಾಡಿದ್ದ. ಯಾರ್ಯಾರು ಎಲ್ಲಿಗೆ ಹೋಗಿ ಏನೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೇ ವಾಟ್ಸಪ್ ಸಂದೇಶಗಳ ಮೂಲಕ ಗಲಾಟೆ ಮಾಡಬೇಕೆಂದು ಕೆಲವೊಂದು ಮೌಲ್ವಿಗಳಿಗೆ ಹೇಳಿಕೊಟ್ಟಿದ್ದ. ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಫೈರೋಜ್‍ನನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.

    ಮೊಬೈಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಗಲಭೆ ಸಂಬಂಧ ಇದುವರೆಗೂ 151 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಮುಖ ಆರೋಪಿ ಮುಜಾಮಿಲ್‍ನನ್ನು ಐದು ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಪಟ್ಟ 40 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಮೂವರಿಗೆ ಕೊರೋನಾ ಬಂದಿದೆ. ಉಳಿದ ಆರೋಪಿಗಳ ಟೆಸ್ಟ್ ವರದಿ ಬಂದ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ. ತನಿಖೆ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

  • ಬೆಂಕಿ ಹಚ್ಚಿದವರು ಕಿಡಿಗೇಡಿಗಳು, ಬಲಿಯಾದವರು ಇನ್ಯಾರೋ?- ಜಮೀರ್ ಅಹ್ಮದ್

    ಬೆಂಕಿ ಹಚ್ಚಿದವರು ಕಿಡಿಗೇಡಿಗಳು, ಬಲಿಯಾದವರು ಇನ್ಯಾರೋ?- ಜಮೀರ್ ಅಹ್ಮದ್

    ಬೆಂಗಳೂರು: ಕೆಜಿ ಹಳ್ಳಿಯಲ್ಲಿ ನಡೆದ ಗಲಾಟೆಯ ಬಗ್ಗೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಬೆಂಕಿ ಹಚ್ಚಿದವರು ಕಿಡಿಗೇಡಿಗಳು, ಬಲಿಯಾದವರು ಇನ್ಯಾರೋ? ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಟ್ವೀಟ್ 1: ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕದ ತೋರಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಬೇಕೇ ಹೊರತು ಅಶಾಂತಿಯ ಮೂಲಕವಲ್ಲ. ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ.

    ಟ್ವೀಟ್ 2: ಗೋಲಿಬಾರ್ ನಿಂದ ಮೃತಪಟ್ಟ ಯುವಕರ ಮನೆಗೆ ನಿನ್ನೆ ಭೇಟಿ ನೀಡಿದ್ದೆ, ನಿಜಕ್ಕೂ ಅವರ ಕುಟುಂಬಗಳ ಪರಿಸ್ಥಿತಿ ಕಂಡು ಕಣ್ಣೀರು ಬಂತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿ, ತಂಗಿಗೆ ಯಾರು ದಿಕ್ಕು? ಯಾರೋ ಕಿಡಿಗೇಡಿಗಳು ಕಲ್ಲು ತೂರಿ, ಬೆಂಕಿ ಹಚ್ಚಿದರು, ಬಲಿಯಾದವರು ಇನ್ಯಾರೋ. ಇದನ್ನೂ ಓದಿ: ಗೋಲಿಬಾರ್‌ಗೆ ಮೂವರು ಬಲಿ – ಮೃತಪಟ್ಟವರು ಯಾರು? ಉದ್ಯೋಗ ಏನು?

    ಟ್ವೀಟ್ 3: ಹಿರಿಯ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರಿಗೆ ಖಂಡಿತಾ ಕಠಿಣ ಶಿಕ್ಷೆ ಆಗಲಿದೆ. ಗಾಳಿ ಸುದ್ದಿಗಳಿಗೆ ಕಿವಿ ಕೊಡಬೇಡಿ, ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವ ನಮ್ಮ ನಿರ್ಧಾರ ಅಚಲವಾಗಿರಲಿ. ಶಾಂತಿ, ಸೌಹಾರ್ದತೆಗೆ ಎಲ್ಲರೂ ಸಹಕರಿಸಿ ಎಂದು ಕೈ ಮುಗಿದ್ದು ಮನವಿ ಮಾಡುತ್ತೇನೆ.

    ಮಂಗಳವಾರ ಮಧ್ಯರಾತ್ರಿ ಗಲಭೆ ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ನಡೆಸಿದ ಗೋಲಿಬಾರಿಗೆ ಮೂವರು ಬಲಿಯಾಗಿದ್ದರು. ಮೃತರನ್ನು ವಾಜಿದ್ ಖಾನ್, ಯಾಸೀನ್ ಖುರೇಷಿ ಮತ್ತು ಮೊಹ್ಮದ್ ಖಾನ್ ಎಂದು ಗುರುತಿಸಲಾಗಿದೆ.

  • ಒಂದು ರಾತ್ರಿಯ ಬೆಂಗಳೂರು ದಂಗೆ – ಎಷ್ಟು ಕೋಟಿ ನಷ್ಟ?

    ಒಂದು ರಾತ್ರಿಯ ಬೆಂಗಳೂರು ದಂಗೆ – ಎಷ್ಟು ಕೋಟಿ ನಷ್ಟ?

    ಬೆಂಗಳೂರು: ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಮಾಡಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ತೀರ್ಮಾನ ತೆಗೆದುಕೊಂಡಿದೆ.

    ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈ ರೀತಿಯ ದಂಗೆಗಳಾದಾಗ ಆಗಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ

    ಈ ಕೂಡಲೇ ಪ್ರಕ್ರಿಯೆ ಆರಂಭಿಸುವಂತೆ ಆದೇಶ ನೀಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿವಶಂಕರ ಮೂರ್ತಿ ಮೂಲಕ ತನಿಖೆ ಮಾಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಬೊಮ್ಮಾಯಿ ಹೇಳಿದರು. ಇಂದು ಸಂಜೆ ಡಿಜೆ ಹಳ್ಳಿ ಠಾಣೆಗೆ ಗೃಹಮಂತ್ರಿ ಭೇಟಿ ಕೊಟ್ಟು, ಪರಿಶೀಲಿಸಿದರು. ಗಲಭೆಯಿಂದ ಅಂದಾಜು 50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಇದನ್ನೂ ಓದಿ: ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    ಎಷ್ಟು ನಷ್ಟ?
    * ಪೊಲೀಸ್ ವಾಹನ, ಸಾರ್ವಜನಿಕರ ವಾಹನ ಸೇರಿ ಒಟ್ಟು 52 ವಾಹನಗಳಿಗೆ ಹಾನಿ
    * 2 ಇನ್ನೋವಾ, 2 ಕೆಎಸ್‍ಆರ್‌ಪಿ ವ್ಯಾನ್, 1 ಸಿಎಆರ್ ವ್ಯಾನ್
    * 6 ಪೊಲೀಸ್ ಜೀಪ್, ಒಂದು ಚೀತಾ ಬೈಕ್, ಸ್ಟೇಷನ್ ಮುಂದೆ ಜಪ್ತಿ ಮಾಡಿ ನಿಲ್ಲಿಸಿದ್ದ 30 ಇತರೆ ಬೈಕ್
    * ಒಂದು ಆಟೋ, 2 ಕಾರು, 1 ಬೈಕ್ ಭಸ್ಮ
    * ಶಾಸಕರ ಮೂರಂತಸ್ತಿನ ಮನೆ, ಕಚೇರಿಗೆ ಬೆಂಕಿ
    * ಡಿಜೆ ಹಳ್ಳಿ ಠಾಣೆಗೆ ಬೆಂಕಿ, ಕೆಜಿ ಹಳ್ಳಿ ಠಾಣೆ ಧ್ವಂಸ
    * ಹತ್ತಕ್ಕೂ ಹೆಚ್ಚು ಅಂಗಡಿಗಳು ಧಗಧಗ

  • ಬೆಂಗಳೂರು ಗಲಾಟೆ- ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

    ಬೆಂಗಳೂರು ಗಲಾಟೆ- ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

    -ಧಾರವಾಡ ಅತ್ಯಾಚಾರ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ನೀಡಿ

    ಶಿವಮೊಗ್ಗ: ಇತ್ತೀಚಿಗೆ ಧಾರವಾಡ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ, ಹತ್ಯೆ ಪ್ರಕರಣ ಹಾಗೂ ಮಂಗಳವಾರ ರಾತ್ರಿ ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿ, ಇಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಗ್ರಾಮದಲ್ಲಿ ಬಾಲಕಿಯೊಬ್ಬಳು ತನ್ನ ತಾಯಿಯ ಅನಾರೋಗ್ಯದ ಕಾರಣ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮರಳುತ್ತಿದ್ದಳು. ಈ ವೇಳೆ ಬಾಲಕಿ ಮೇಲೆ ವಿಕೃತ ಕಾಮಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆಯಿಂದ ಮನನೊಂದ ಬಾಲಕಿ ಜು. 31 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದುಷ್ಕೃತ್ಯ ಎಸಗಿರುವ ಆರೋಪಿಯನ್ನು ಕೂಡಲೇ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಈ ಮೂಲಕ ಮೃತ ಬಾಲಕಿ ಮತ್ತು ಅವಳ ಕುಟುಂಬಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

     

    ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ಸಾರ್ವಜನಿಕರ ಆಸ್ತಿ ಹಾಳು ಮಾಡಿರುವುದರ ವಿರುದ್ಧ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಹ ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಡ ರಾತ್ರಿಯಲ್ಲಿ ಕೆಲವು ಕಿಡಿಗೇಡಿಗಳು ಸಿಕ್ಕಸಿಕ್ಕ ಬೈಕ್ ಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಯನ್ನೇ ಧ್ವಂಸಗೊಳಿಸಿದ್ದಲ್ಲದೇ ಠಾಣೆ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಮಾಧ್ಯಮಗಳ ಮೇಲೂ ಹಲ್ಲೆ ನಡೆಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಈ ರೀತಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಮೂಲಕ ಇಂತಹವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

  • ಗಲಭೆಗೆ ಪ್ರಚೋದಿಸಿದ್ದ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ಲಾ?-ಸಿದ್ದರಾಮಯ್ಯ

    ಗಲಭೆಗೆ ಪ್ರಚೋದಿಸಿದ್ದ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ಲಾ?-ಸಿದ್ದರಾಮಯ್ಯ

    -ನನ್ನ ಹೇಳಿಕೆಯಲ್ಲಿ ತಪ್ಪೇನಿದೆ?
    -ದೇಗುಲ ರಕ್ಷಿಸಿದ ಮುಸ್ಲಿಂ ಯುವಕರಿಗೆ ಯತೀಂದ್ರ ಸಿದ್ದರಾಮಯ್ಯ ಧನ್ಯವಾದ

    ಬೆಂಗಳೂರು: ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‍ಗೆ ಹಿಂದೂ ಹಿರಿಯರೇ ಬುದ್ಧಿ ಹೇಳಬೇಕಲ್ವಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಹಿಂದು-ಮುಸ್ಲಿಮರು ಕೂಡಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂಬ ನನ್ನ ಹೇಳಿಕೆಯನ್ನು ಹಿಂದೂ ವಿರೋಧಿ ಎನ್ನುವಂತೆ ತಿರುಚಲಾಗುತ್ತಿದೆ. ಮುಸ್ಲಿಮ್ ಗಲಭೆಕೋರರಿಗೆ ಮುಸ್ಲಿಮ್ ಹಿರಿಯರು, ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‍ಗೆ ಹಿಂದೂ ಹಿರಿಯರೇ ಬುದ್ದಿ ಹೇಳಬೇಕಲ್ಲಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ? ಕಾವಲಭೈರಸಂದ್ರದಲ್ಲಿ ಗಲಭೆ ವರದಿ ಮಾಡಲು ಹೋಗಿರುವ ಮಾಧ್ಯಮ ಮಿತ್ರರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ, ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದೇನು?: ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ. ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇನೆ ಎಂದಿದ್ದಾರೆ.

    ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ. ಇಂತಹ ಕೋಮು ಗಲಭೆಗಳಲ್ಲಿ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ ಎಂದಿದ್ದರು. ಇದನ್ನೂ ಓದಿ: ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

    ಯಾರು ಈ ನವೀನ್?: ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತ ಈ ನವೀನ್. ಫೇಸ್‍ಬುಕ್ ಪೋಸ್ಟ್ ನಲ್ಲಿ ಒಂದು ಸಮುದಾಯದ ಬಗ್ಗೆ ನವೀನ್ ಅವಹೇಳನಕಾರಿಯಾಗಿ ಬರೆದುಕೊಂಡಿದ್ದರಿಂದ ಉದ್ರಿಕ್ತಗೊಂಡ ಗುಂಪು ಕಾವಲಬೈರಸಂದ್ರದಲ್ಲಿರುವ ಶಾಸಕರ ಮನೆಯ ಮೇಲೆ ದಾಳಿ ನಡೆಸಿತ್ತು. ಇದೀಗ ಸಿದ್ದರಾಮಯ್ಯ ಗಲಭೆಗೆ ಪ್ರಚೋದನೆ ನೀಡಿದ್ದು ನವೀನ್ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ. ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    ಯತೀಂದ್ರ ಸಿದ್ದರಾಮಯ್ಯ ಟ್ವೀಟ್: ಒಂದು ಗುಂಪು ಉದ್ರಿಕ್ತರಾಗಿ ಗಲಭೆ ಮಾಡಿದರೆ, ಮತ್ತೊಂದು ಮುಸ್ಲಿಂ ಯುವಕರ ಗುಂಪು ಮಾನವ ಸರಪಳಿ ನಿರ್ಮಿಸಿ ದೇಗುಲವನ್ನು ಗಲಭೆಕೋರರಿಂದ ರಕ್ಷಿಸಿದೆ. ಇಂತಹ ವಿವೇಚನೆಯನ್ನು ಮಾನವೀಯತೆಯನ್ನು ಮೆರೆದ ಯುವಕರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ.

  • ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

    ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

    -ಇಂತಹ ದುಷ್ಕೃತ್ಯವನ್ನು ಇತರೆ ಮುಸ್ಲಿಮರು ಖಂಡಿಸಬೇಕು

    ಶಿವಮೊಗ್ಗ: ಬೆಂಗಳೂರಿನಲ್ಲಿ ಮತಾಂಧ ಮುಸಲ್ಮಾನರ ದಾಳಿ ಖಂಡನೀಯ. ಆದರೆ ಈ ಘಟನೆ ನಡೆದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಖಂಡನೆ ವ್ಯಕ್ತಪಡಿಸಿಲ್ಲ. ಇದನ್ನು ನೋಡಿದರೆ ಇಂತಹ ಮತಾಂಧ ಮುಸಲ್ಮಾನರಿಗೆ ಡಿಕೆಶಿ ಬೆಂಬಲ ಇದೆ ಅನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ರವರ ಮನೆಯ ದಾಳಿ, ಬೆಂಗಳೂರಿನಲ್ಲಿ ನಡೆದ ದುಷ್ಕೃತ್ಯ ಖಂಡನೀಯವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ. ಇದನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಎಲ್ಲರೂ ಖಂಡಿಸಬೇಕಿದೆ ಎಂದರು. ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರಿಗೆ ಶಿಕ್ಷೆಯಾಗಬೇಕು: ಹೆಚ್‍ಡಿಕೆ

    ನಾನು ಎಲ್ಲಾ ಮುಸ್ಲಿಮರು ಕೆಟ್ಟವರು ಎಂದು ಹೇಳುತ್ತಿಲ್ಲ. ಆದರೆ ಮತಾಂಧ ಮುಸಲ್ಮಾರು ಮಾತ್ರ ಇಂತಹ ದುಷ್ಕೃತ್ಯದಲ್ಲಿ ತೂಡಗಿಕೊಳ್ಳುತ್ತಾರೆ. ಇಂತಹ ಮತಾಂಧ ಮುಸ್ಲಿಮರ ವಿರುದ್ಧ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಖಂಡಿಸಬೇಕಿದೆ ಎಂದರು. ದುಷ್ಕೃತ್ಯದಲ್ಲಿ ಪೊಲೀಸರು, ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ. ಉಗ್ರಗಾಮಿಗಳನ್ನು ಸದೆಬಡೆದ ದೇಶ ಭಾರತ. ಹೀಗಾಗಿ ಇಂತಹ ದುಷ್ಕೃತ್ಯಗಳಿಗೆ ಎದರುವ ಮಾತೇ ಇಲ್ಲ. ಆದರೆ ಈ ಘಟನೆ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನೆ ಮಾಡಿದರು. ಡಿ.ಕೆ.ಶಿವಕುಮಾರ್ ಇಂತಹವರ ವಿರುದ್ದ ಹೇಳಿಕೆ ನೀಡಬೇಕಿತ್ತು. ಇಂತಹ ಮತಾಂಧ ಮುಸ್ಲಿಂರಿಗೆ ಡಿ.ಕೆ.ಶಿವಕುಮಾರ್ ಬೆಂಬಲವಿದೆ ಎಂದೆನ್ನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದ್ರೆ, ಆ ಮಾರ್ಗವನ್ನೇ ಬದಲಿಸಲು ಸರ್ಕಾರ ಬದ್ಧ: ಆರ್.ಅಶೋಕ್

    ಘಟನೆಯಲ್ಲಿ ಯಾರೇ ಇರಲಿ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಪಕ್ಷಬೇಧ ಮರೆತು ಎಲ್ಲಾ ದೇಶಭಕ್ತರು ಒಂದಾಗಿ ಖಂಡಿಸಬೇಕಿದೆ. ಮತಾಂಧ ಮುಸ್ಲಿಂರಿಗೆ ಹಿಂದಿನ ಸರ್ಕಾರಗಳ ಬೆಂಬಲದಿಂದ ಈ ರೀತಿ ಬಲಿತಿದ್ದಾರೆ. ಮುಂದೆ ಈ ರೀತಿ ಆಗಲು ಬಿಡಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

    ಡಿಕೆಶಿ ಪ್ರತಿಕ್ರಿಯೆ: ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ನಿನ್ನೆ ನಡೆದ ಘಟನೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಶಾಸಕರಾಗಲಿ, ಯಾರೇ ಆಗಲಿ ಅವರ ಮೇಲೆ ದಾಳಿ ಮಾಡಬಾರದು. ಪೊಲೀಸ್ ಠಾಣೆಯ ಆಸ್ತಿ- ಪಾಸ್ತಿಗೆ ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ.

  • ಕೆಲ ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡ್ತಿವೆ: ಸಚಿವ ಗೋಪಾಲಯ್ಯ

    ಕೆಲ ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡ್ತಿವೆ: ಸಚಿವ ಗೋಪಾಲಯ್ಯ

    ಹಾಸನ: ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ಮಾಡುತ್ತಿದ್ದು, ಬೆಂಗಳೂರಿನ ಘಟನೆ ಪೂರ್ವ ನಿಯೋಜಿತ ಗಲಭೆಯಂತೆ ಕಾಣುತ್ತಿದೆ ಎಂದು ಸಚಿವ ಗೋಪಾಲಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯ, ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗಡದುಕೊಂಡು ಶಾಂತಿಯುತವಾಗಿ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿಲ್ಲ. ಗೃಹಸಚಿವರಿಗೆ ದಕ್ಷತೆಯಿದ್ದು ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಬೆಳಗ್ಗೆಯೇ ಬೆಂಗಳೂರಿನಿಂದ ಬಂದಿದ್ದೇನೆ. ಮಾಧ್ಯಮದಲ್ಲಿ ನೋಡಿ ನನಗೆ ವಿಷಯ ತಿಳಿಯಿತು. ಘಟನೆ ಹಿಂದೆ ಎಸ್‍ಡಿಪಿಐ ಸದಸ್ಯನ ಕೈವಾಡ ಇರುವ ಬಗ್ಗೆ ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಆದರೆ ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು. ಇದನ್ನೂ ಓದಿ: ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ಸಮುದಾಯದ ಮೇಲೆ ಗಲಾಟೆ ಆಗಿಲ್ಲ. ಕೆಲವು ದುಷ್ಟ ಶಕ್ತಿಗಳು ಸರ್ಕಾಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಪರಿಸ್ಥಿತಿಯನ್ನು ಸಮರ್ಥವಾಗಿ ಗೃಹ ಸಚಿವರು ನಿಭಾಯಿಸುತ್ತಾರೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಇದನ್ನೂ ಓದಿ:  ಬೆಂಕಿ ಹಚ್ಚೋದು ನಮ್ಮ ಸಂಸ್ಕೃತಿಯಲ್ಲ, ನೆಲದ ಕಾನೂನೇ ಅಂತಿಮ: ಖಾದರ್