Tag: ಬೆಂಗಳೂರು ಗಲಭೆ

  • ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ

    ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ

    – ಬೆಳಗ್ಗೆ 2 ಪ್ಯಾಂಟ್ ಹಾಗೂ 2 ಶರ್ಟ್ ಖರೀದಿ
    – ತಾತ್ಕಾಲಿಕವಾಗಿ ಹೋಟೆಲ್‍ನಲ್ಲಿ ಉಳಿದುಕೊಂಡ ಕುಟುಂಬ

    ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದೂ ವಸ್ತು ಉಳಿದಿಲ್ಲ. ಬಟ್ಟೆ ಸೇರಿ ಎಲ್ಲವೂ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆ ಶಾಸಕರು ಇಂದು ಬೆಳಗ್ಗೆ ಬಟ್ಟೆ ಖರೀದಿಸಿದ್ದಾರೆ.

    ಇಂದು ಬೆಳಗ್ಗೆ ಅವರ ಸ್ನೇಹಿತರು ಪ್ಯಾಂಟ್, ಶರ್ಟ್ ತಂದು ಕೊಟ್ಟಿದ್ದಾರೆ. ನಿನ್ನೆ ಮನೆಯಿಂದ ಹೊರಹೋಗುವಾಗ ಹಾಕಿದ್ದ ಪ್ಯಾಂಟ್ ಶರ್ಟ್ ಬಿಟ್ಟರೆ ಮನೆಯಲ್ಲಿದ್ದ ಬೇರೆ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅವರ ಪತ್ನಿ, ಮಕ್ಕಳು ಸಹ ಇಂದು ಹೊಸದಾಗಿ ಬಟ್ಟೆ ಖರೀದಿಸಿ ಧರಿಸಿದ್ದಾರೆ. ಅಲ್ಲದೆ ತಾತ್ಕಾಲಿಕವಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಮೂರು ಅಂತಸ್ಥಿನ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಶಾಸಕರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಸೋಫಾ, ಟೇಬಲ್, ಖುರ್ಚಿ ಸೇರಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಪೆಟ್ರೋಲ್ ಬಾಂಬ್ ಮೂಲಕ ಇಡೀ ರಾತ್ರಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದು ಶಾಸಕರು ಇಷ್ಟು ದಿನ ವಾಸವಿದ್ದ ಮನೆಯೇ ಎಂಬ ಅನುಮಾನ ಮೂಡುತ್ತದೆ. ಅಷ್ಟರಮಟ್ಟಿಗೆ ಎಲ್ಲವೂ ಸುಟ್ಟು ಹೋಗಿದೆ.

    ಕೇವಲ ಶಾಸಕರ ಮನೆ, ವಾಹನಗಳು ಮಾತ್ರವಲ್ಲ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಹ ಸುಟ್ಟು ಕರಕಲಾಗಿದೆ. ಅಲ್ಲದೆ ಸ್ಥಳೀಯರ ವಾಹನಗಳಿಗೂ ಸಹ ಬೆಂಕಿ ಹಚ್ಚಿದ್ದು, ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆಯೊಳಗೆ ನುಗ್ಗಿ ವಸ್ತುಗಳನ್ನು ನಾಶ ಮಾಡಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಡಿಸಿಪಿ ವಾಹನವನ್ನು ಸಹ ಬಿಡದೆ ಬೆಂಕಿ ಹಚ್ಚಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

  • ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ನಷ್ಟ ವಸೂಲಿ : ಬೊಮ್ಮಾಯಿ

    ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ನಷ್ಟ ವಸೂಲಿ : ಬೊಮ್ಮಾಯಿ

    ಬೆಂಗಳೂರು: ಯಾರು ಹಾನಿ ಮಾಡಿದ್ದಾರೆ ಅವರಿಂದಲೇ  ನಷ್ಟ  ವಸೂಲಿ ಮಾಡುವ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದೇನೆ ಎಂದು ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವಿಚಾರವಾಗಿ ಇಂದು ಗೃಹ ಸಚಿವರ ನಿವಾಸದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಆಯುಕ್ತ ಕಮಲ್‍ಪಂತ್ ಮತ್ತು ಲಾ ಅಂಡ್ ಆರ್ಡರ್ ಎಡಿಜಿ ಅಮರ್ ಕುಮಾರ್ ಪಾಂಡೆ ಸೇರಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಬೊಮ್ಮಾಯಿ ಆಸ್ತಿಯನ್ನು ಯಾರು ನಾಶ ಮಾಡಿದ್ದಾರೆ ಅವರಿಂದಲೇ ಜಪ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಫೇಸ್‍ಬುಕ್‍ನಲ್ಲಿ ಪೋಸ್ಟ್ ನೋಡಿ, ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಎಂಎಲ್‍ಎ ಮನೆ ಮೇಲೆ ದಾಳಿ ಮಾಡಿದ್ದಾರೆ. ಹೀಗಾಗಿ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ 3 ಜನ ಡೆತ್ ಆಗಿದ್ದಾರೆ. ಜೊತೆಗೆ 145 ಅರೆಸ್ಟ್ ಮಾಡಿದ್ದೇವೆ. ಸಮಾಜದ ಶಾಂತಿ ಹಾಳು ಮಾಡುವ ಪೋಸ್ಟ್ ಹಾಕಿದ್ದ ನವೀನ್‍ನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

    ಹೆಚ್ಚಿನ ಸಿ.ಆರ್.ಪಿ.ಎಫ್ ತಂಡ ಬೇಕು ಎಂದು ದೆಹಲಿಗೆ ಕೇಳಿದ್ದೇವೆ. ಆರ್.ಪಿ.ಎಫ್ 6 ತುಕಡಿಗಳನ್ನು ಕಳಿಸಿಕೊಡುತ್ತಾರೆ. ದಂಗೆಗಳಾದ ಸಮಯದಲ್ಲಿ ಏನು ಆಸ್ತಿ-ಪಾಸ್ತಿ ನಷ್ಟ ಆಗಿರುತ್ತದೆ. ಅದನ್ನು ನಾಶ ಮಾಡಿದವರಿಂದಲೇ ವಸೂಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಸುಪ್ರೀಂಕೋರ್ಟ್ ಆದೇಶಕ್ಕೂ ಮುಂದೆ ಹೋಗಿ ನಮ್ಮವರು ಕಾರ್ಯಾಚರಣೆ ಮಾಡಬೇಕು. ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ವಸೂಲಿ ಮಾಡುವ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದೇನೆ. ಯಾವ ರೀತಿ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿ ಜೊತೆ ಮಾತಾಡಿ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವರು, ನಮ್ಮ ಕರ್ನಾಟಕ ಪೊಲೀಸರೆ ಸಶಕ್ತರು ಇದ್ದಾರೆ. ನಮಗೆ ಏನೂ ಮಾಡಬೇಕು ಗೊತ್ತಿದೆ. ನಮ್ಮ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ. ಹೀಗಿರುವಾಗ ಸಿಬಿಐ ಪ್ರಶ್ನೆ ಬರುವುದಿಲ್ಲ. ಎಲ್ಲವೂ ತನಿಖೆ ಹಂತದಲ್ಲಿ ಇದೆ ನಮ್ಮ ಪೊಲೀಸರೇ ನಿಭಾಯಿಸುತ್ತಾರೆ. ಹೀಗಾಗಿ ಸಿಬಿಐಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    – ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆ ಮೇಲೆ ದಾಳಿ
    – ಕಾರ್ ಕೀ ಕಿತ್ತುಕೊಂಡು ಡಿಕ್ಕಿ ಹೊಡೆಸಿದರು
    – ಪಬ್ಲಿಕ್‌ ಟಿವಿಗೆ ಘಟನೆ ವಿವರಿಸಿದ ಪ್ರತ್ಯಕ್ಷದರ್ಶಿಗಳು

    ಬೆಂಗಳೂರು: ಮನೆ ಪ್ರವೇಶಿಸಿ ನಿಲ್ಲಿಸಿದ್ದ ವಾಹನವನ್ನು ಧ್ವಂಸ. ಬಳಿಕ ಮನೆಯ ಒಳಗಡೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳು ಚೆಲ್ಲಾಪಿಲ್ಲಿ – ಇದು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಗಲಾಟೆಯ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದು ಹೀಗೆ.

    ಘಟನೆ ಕುರಿತು ಆಂಜನೇಯ ದೇವಸ್ಥಾನದ ಮ್ಯಾನೇಜರ್ ಪುತ್ರ ಪಬ್ಲಿಕ್ ಟಿವಿಗೆ ವಿವರಿಸಿದ್ದು, ಯಾವುದೇ ಕಾರಣ ಹೇಳದೇ ಏಕಾಏಕಿ 30-35ಜನ ಮನೆಗೆ ನುಗ್ಗಿದರು. ನಂತರ ಒಡೆಯಲು ಶುರು ಮಾಡಿದರು, ಒಡೆಯಲು ಶುರು ಮಾಡುತ್ತಿದ್ದಂತೆ ನಾವು ಪಕ್ಕದ ಮನೆಗೆ ಹೋದೆವು. ಲಾಂಗ್ ಮಚ್ಚುಗಳನ್ನು ಎತ್ತಿ ತೋರಿಸಿಕೊಂಡು, ಬಂದು ಗಲಾಟೆ ಎಬ್ಬಿಸಿದರು ಎಂದು ತಿಳಿಸಿದ್ದಾರೆ.

    ಮೊದಲು ನಾಲ್ಕು ಜನ ದ್ವಿಚಕ್ರ ವಾಹನಗಳಲ್ಲಿ ಬಂದು ಅವರೇ ಇತರರಿಗೆ ಹೇಳಿಕೊಟ್ಟರು. ಇದನ್ನು ಒಡೆಯಿರಿ, ಹೀಗೆ ಒಡೆಯಿರಿ ಎಂದು ಹೇಳಿದರು. ಕಾರ್‌ಗಳನ್ನು ಹೊರಗಡೆ ತೆಗೆದುಕೊಂಡು ಹೋಗಿ ಗುದ್ದಿಸಿ ಜಖಂ ಮಾಡಿದರು. ಮೊದಲು ನಾಲ್ಕು ಜನ ಬಂದಾಗ ಅಖಂಡ ಶ್ರೀನಿವಾಸಮೂರ್ತಿ ಮನೆಯಾವುದು ಎಂದು ಕೇಳಿದರು. ಆ ಕಡೆ ಇದೆ ಎಂದು ಹೇಳಿದೆವು. ಆದರೂ ಎಲ್ಲವನ್ನು ಒಡೆದುಕೊಂಡು ಹೋದರು. ಅದನ್ನು ಹೇಳಿಕೊಂಡೇ ಒಡೆದು ಎಲ್ಲ ಚಿಂದಿ ಮಾಡಿದರು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

    ಮೊದಲು 10-15 ಜನ ಲಾಂಗ್ ಜಳಪಿಸುತ್ತ ಬಂದರು. ಬರುತ್ತಿದ್ದಂತೆ ಧ್ವಂಸ ಮಾಡಲು ಮುಂದಾದರು. ನಾವು ಹೆದರಿಕೊಂಡು ಪಕ್ಕದ ಮನೆಗೆ ಹೋದೆವು. ನಂತರ 30-40 ಜನ ಬಂದು ಕೃತ್ಯ ಎಸಗಿದರು. ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಯಾವುದು ಎಂದು ಹೇಳಿಕೊಂಡೇ ಎಲ್ಲವನ್ನೂ ಒಡೆದು ಹಾಕಿದರು ಎಂದು ಅವರು ದುಃಖವನ್ನು ತೋಡಿಕೊಂಡರು.

    ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐ ಬೆಂಗಳೂರು ಕಾರ್ಯದರ್ಶಿ ಎ1 ಆರೋಪಿ ಮುಜಾಮಿಲ್ ಪಾಶಾ ಸೇರಿದಂತೆ ಈ ವೆರೆಗೆ 110 ಜನರನ್ನು ಬಂಧಿಸಲಾಗಿದೆ. ಅಲ್ಲದೆ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಈ ಕುರಿತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಹೈದರಾಬಾದ್ ಹಾಗೂ ಚೆನ್ನೈನಿಂದ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಕರೆಸಲಾಗುತ್ತಿದೆ.

    ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಶಾಸಕರ ಸಂಬಂಧಿ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದೆ.

    100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

    ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು.

  • ಭವಿಷ್ಯಕ್ಕೆ ಪಾಠವಾಗುವಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ: ಜೋಶಿ

    ಭವಿಷ್ಯಕ್ಕೆ ಪಾಠವಾಗುವಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ: ಜೋಶಿ

    ನವದೆಹಲಿ: ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಅತ್ಯಂತ ಖಂಡನೀಯ ಮತ್ತು ಇದೊಂದು ಪೂರ್ವ ನಿಯೋಜಿತ ದಾಳಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಮಂಗಳವಾರ ರಾತ್ರಿ ಕಾವಲಬೈರಸಂದ್ರದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡುತ್ತಾ ಘಟನೆಯನ್ನು ವಿರೋಧಿಸಿದರು. ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕಾನೂನು ಅಡಿ ದೂರು ದಾಖಲಿಸಬೇಕಿತ್ತು ಆದರೆ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದರು.

    ಪೊಲೀಸ್ ಠಾಣೆಯಿಂದ ಹಿಡಿದು ಸರ್ಕಾರಿ ವಾಹನ ಹಾಗೂ ಬಡ ಜನರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಎಲ್ಲದಕ್ಕೂ ಬೆಂಕಿ ಹಚ್ಚಿರುವುದು ಆಕ್ಷಮ್ಯ ಅಪರಾಧ. ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದೇನೆ. ಈಗ ತೆಗೆದುಕೊಳ್ಳುವ ಕ್ರಮ ಮುಂದಿನ ದಿನಗಳಲ್ಲಿ ಮಾದರಿಯಾಗಿರಬೇಕು ಹಾಗೇ ತಪ್ಪಿತಸ್ಥರಿಗೆ ಪಾಠಕಲಿಸುವಂತೆ ಮನವಿ ಮಾಡಿದ್ದೇನೆ ಎಂದರು.

    ಧಾರ್ಮಿಕ ಮುಖಂಡರು ಕೂಡ ಈ ರೀತಿ ಘಟನೆಗಳನ್ನು ವಿರೋಧಿಸಬೇಕು ಆಗ ಮಾತ್ರವೇ ಸಮಾನತೆ ಮತ್ತು ಏಕತೆ ಕಾಪಡಲು ಸಾಧ್ಯ.ಪೊಲೀಸರು ಉತ್ತಮ ಕೆಲಸ ಮಾಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಜೋಶಿ ಹೇಳಿದರು.

  • ಹಿಂದೂ ಹಿರಿಯರು ಬುದ್ಧಿ ಹೇಳಬೇಕಲ್ವಾ ಅನ್ನೋ ಸಿದ್ದು ಪ್ರಶ್ನೆಗೆ ಮಾಳವಿಕಾ ಕೌಂಟರ್

    ಹಿಂದೂ ಹಿರಿಯರು ಬುದ್ಧಿ ಹೇಳಬೇಕಲ್ವಾ ಅನ್ನೋ ಸಿದ್ದು ಪ್ರಶ್ನೆಗೆ ಮಾಳವಿಕಾ ಕೌಂಟರ್

    ಬೆಂಗಳೂರು: ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‍ಗೆ ಹಿಂದೂ ಹಿರಿಯರೇ ಬುದ್ದಿ ಹೇಳಬೇಕಲ್ಲಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ನಟಿ, ವಕೀಲೆ ಹಾಗೂ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಕೌಂಟರ್ ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‍ಗೆ ರಿಟ್ವೀಟ್ ಮಾಡಿರುವ ಮಾಳವಿಕಾ, ತಮ್ಮ ಪಕ್ಷದ ಶಾಸಕರ ಮನೆಯ ಹುಡುಗ, ತಮ್ಮ ಪಕ್ಷದ ಬಿಬಿಎಂಪಿ ಟಿಕೆಟ್ ಆಕಾಂಕ್ಷಿಗೆ ತಾವೇ ಬುದ್ಧಿ ಹೇಳಬಹುದಲ್ಲವೇ ಸರ್? ಎಂದಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್‍ನಲ್ಲೇನಿದೆ?
    ಹಿಂದು-ಮುಸ್ಲಿಮರು ಕೂಡಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂಬ ನನ್ನ ಹೇಳಿಕೆಯನ್ನು ಹಿಂದೂ ವಿರೋಧಿ ಎನ್ನುವಂತೆ ತಿರುಚಲಾಗುತ್ತಿದೆ. ಮುಸ್ಲಿಮ್ ಗಲಭೆಕೋರರಿಗೆ ಮುಸ್ಲಿಮ್ ಹಿರಿಯರು, ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್‍ಗೆ ಹಿಂದೂ ಹಿರಿಯರೇ ಬುದ್ದಿ ಹೇಳಬೇಕಲ್ಲಾ?, ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದರು.

    ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ. ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇನೆ ಎಂದಿದ್ದರು.

  • ಗಲಭೆ ನಿಯಂತ್ರಣಕ್ಕೆ ಹೈದರಾಬಾದ್, ಚೆನ್ನೈನಿಂದ 6 ಸಿಆರ್‌ಪಿಎಫ್ ತುಕಡಿ: ಬೊಮ್ಮಾಯಿ

    ಗಲಭೆ ನಿಯಂತ್ರಣಕ್ಕೆ ಹೈದರಾಬಾದ್, ಚೆನ್ನೈನಿಂದ 6 ಸಿಆರ್‌ಪಿಎಫ್ ತುಕಡಿ: ಬೊಮ್ಮಾಯಿ

    ಉಡುಪಿ: ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಚೆನ್ನೈನಿಂದ 6 ಸಿಆರ್‌ಪಿಎಫ್ ತುಕಡಿ ಬೆಂಗಳೂರಿಗೆ ಬರುತ್ತಿದೆ. ಸೂಕ್ಷ್ಮ ಪ್ರದೇಶದಲ್ಲಿ ಅವುಗಳ ನಿಯೋಜನೆಯಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಸಿಆರ್‌ಪಿಎಫ್ ನಿಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ರಾಪಿಡ್ ಆಕ್ಷನ್ ಫೋರ್ಸ್, ಗರುಡ ಫೋರ್ಸ್ ಕೂಡ ಸ್ಥಳದಲ್ಲಿ ಯೋಜನೆಯಾಗಿದೆ. ಕೆ.ಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಸಂಪೂರ್ಣ ಪೊಲೀಸರ ಹತೋಟಿಯಲ್ಲಿದೆ ಎಂದರು.

    ಹೆಚ್ಚಿನ ಗಲಭೆಕೋರರ ಬಂಧನ ಆಗಬೇಕಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದೆ. ಗಲಭೆಯನ್ನು ಹತೋಟಿಗೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದೆ ಎಂದರು. ಪೊಲೀಸರಿಗೆ ಉದ್ರಿಕ್ತ ಗುಂಪು ಕಲ್ಲು ತೂರಾಟ ಮಾಡಿದೆ. ಹಲವಾರು ಪೊಲೀಸರ ತಲೆಗೆ ಗಾಯ ಆಗಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ.

    ಈಗಾಗಲೇ 110 ಜನರನ್ನು ವಶಕ್ಕೆ ಪಡೆದಿದ್ದೇವೆ ಶಾಂತಿ-ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಇನ್ನಷ್ಟು ಬಂಧನ ಆಗಲಿದೆ ಎಂದು ಹೇಳಿದರು. ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ. ನಾನು ಮುಖ್ಯಮಂತ್ರಿಗಳ ಜೊತೆ ಫೋನ್ ನಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ. ಪೊಲೀಸ್ ಸ್ಟೇಷನ್ ನಲ್ಲಿ ಘಟನೆಯ ಎಲ್ಲಾ ರೆಕಾರ್ಡ್ ಗಳಿವೆ, ಸಿಸಿಟಿವಿ ಇದೆ ಕೃತ್ಯ ಎಸಗಿದ ಎಲ್ಲರ ಮಾಹಿತಿ ಕಲೆ ಹಾಕಲಾಗುತ್ತಿದೆ. ಫೇಸ್ ಬುಕ್ ನಲ್ಲಿ ಕರೆಕೊಟ್ಟು ಪ್ಲಾನ್ ಮಾಡಿ ದಾಳಿ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

    ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಷಡ್ಯಂತ್ರ ನಡೆದಿದೆ. ಹಬ್ಬ-ಹರಿದಿನಗಳು ಶಾಂತವಾಗಿ ನಡೆಯುತ್ತಿರುವಾಗ ಸಮಾಜಘಾತುಕ ಶಕ್ತಿಗಳ ಈ ಕೃತ್ಯ ಪ್ರಚೋದನೆ ಕೊಡುವಂತಿದೆ. ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆದಿದೆ. ಬೆಂಗಳೂರು ತಲುಪಿದ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇವೆ. ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.