Tag: ಬೆಂಗಳೂರು ಗಲಭೆ

  • ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು: ಸೊಗಡು ಶಿವಣ್ಣ

    ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು: ಸೊಗಡು ಶಿವಣ್ಣ

    ತುಮಕೂರು: ಡಿಜೆ ಹಳ್ಳಿ ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು ಎಂದು ಮಾಜಿ ಸಚಿವ ಸೊಗಡು ಆಗ್ರಹಿಸಿದ್ದಾರೆ.

    ತುಮಕೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆಕೋರರನ್ನು ಗಲ್ಲಿಗೇರಿಸಿದಾಗ ಮಾತ್ರ ಬುದ್ಧಿ ಬರುತ್ತದೆ. ನಾವು ಆ ಸಮುದಾಯವನ್ನು ಕಳೆದ 70 ವರ್ಷದಿಂದ ಪ್ರೀತಿಯಿಂದ ನೋಡಿಕೊಂಡು ಬರುತ್ತಿದ್ದೇವೆ. ಆದರೂ ಅವರು ತಮ್ಮ ಚಾಳಿ ಬಿಡುತ್ತಿಲ್ಲ. ಹಾಗಾದರೆ ನಮ್ಮ ಪ್ರೀತಿಗೆ ಬೆಲೆನೆ ಇಲ್ಲವೇ ಎಂದು ಸೊಗಡು ಶಿವಣ್ಣ ಪ್ರಶ್ನಿಸಿದ್ದಾರೆ.

    ಗಲಭೆಗೆ ಬಿಜೆಪಿ ಕುಮ್ಮಕ್ಕು ಕೊಟ್ಟಿದೆ ಎಂದು ಹೇಳಿದ್ದ ರಾಮಲಿಂಗಾ ರೆಡ್ಡಿ ಮೀರ್ ಸಾದೀಕ್ ರೆಡ್ಡಿಯಾಗಿದ್ದಾರೆ. ಕಾಂಗ್ರೆಸ್ಸಿನವರು ತಮ್ಮ ವೋಟ್ ಬ್ಯಾಂಕ್ ಗಾಗಿ ಗಲಭೆಕೋರರ ಬೆಂಬಲಕ್ಕೆ ನಿಂತು ಓಲೈಕೆ ರಾಜಕಾರಣ ಮಾಡುತಿದ್ದಾರೆ ಎಂದು ದೂರಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಮಾನ ಮರ್ಯಾದೆ ಮೀರಿ ಮಾತನಾಡುತ್ತಿದ್ದಾರೆ. ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಅನ್ನುವ ರೀತಿಯಲ್ಲಿ ಹೇಳಿಕೆ ನೀಡುತಿದ್ದಾರೆ. ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳು ಇವರೇ ಬೆಳೆಸಿದ ಪಾಪದ ಕೂಸುಗಳು. ಅವರ ಮೇಲಿದ್ದ ಕೇಸ್‍ಗಳನ್ನು ಸಿದ್ದರಾಮಯ್ಯನವರೇ ಹಿಂದೆ ಪಡಿದಿದ್ರು. ಸಿದ್ದರಾನಯ್ಯರು ಈ ಮನಸ್ಥಿತಿಯಿಂದ ಹೊರಕ್ಕೆ ಬರಬೇಕು ಎಂದು ಟೀಕಿಸಿದ್ದಾರೆ.

    ಅಲ್ಲದೆ ಮುಸ್ಲಿಂ ಸಮುದಾಯದ ಯುವಕರು ಆಂಜನೇಯ ಸ್ವಾಮಿ ದೇವಸ್ಥಾನ ರಕ್ಷಣೆ ಮಾಡುವ ನಾಟಕ ಆಡಿದ್ದಾರೆ. ಬೆಕ್ಕು ಇಲ್ಲಿ ಆಟ ಆಡಿ ನಾಟಕ ಮಾಡಿದ್ದಾರೆ. ಅಷ್ಟೇ ಅದರಲ್ಲಿ ಏನೂ ಔದಾರ್ಯತೆ ಇಲ್ಲ ಎಂದು ಸೊಗಡು ಪ್ರತಿಕ್ರಿಯಿಸಿದ್ದಾರೆ.

    ಆಂಜನೇಯಸ್ವಾಮಿ ಸ್ವಾಮಿ ದೇವಸ್ಥಾನ ಅವರು ಮುಟ್ಟಿ ನೋಡಬೇಕಿತ್ತು. ನಾವೇನು ಸುಮ್ಮನಿರುತ್ತಿರಲಿಲ್ಲ. ಮುಂದೆ ನಾವೂ ಕೂಡ ಹುಲಿ ಆಟ ಆಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

  • ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ

    ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ

    ಬೆಂಗಳೂರು: ಸ್ಥಳೀಯ ಮುಸ್ಲಿಂ ಯುವಕರು ನನ್ನ ರಕ್ಷಣೆ ಬರದಿದ್ದಿದ್ದರೆ ನಾನು ಇಂದು ಬದುಕುಳಿಯುತ್ತಿರಲಿಲ್ಲ ಎಂದು ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿ ಗಲಭೆಗೆ ಪ್ರಚೋದನೆ ನೀಡಿದ್ದ ಎನ್ನಲಾದ ನವೀನ್ ತಾಯಿ ಹೇಳಿದ್ದಾರೆ.

    ಕಾವಲ್ ಬೈರಸಂದ್ರ ನಿವಾಸಿಯಾಗಿರೋ ಜಯಂತಿ ಅವರು ಸಹೋದರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯಿಂದ 500 ಮೀಟರ್ ದೂರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮಂಗಳವಾರ ಸಂಜೆ ಮನೆಯವರೆಲ್ಲರೂ ಟಿವಿ ನೋಡುತ್ತಿದ್ದರು. ಇತ್ತ ನವೀನ್ ಹಾಗೂ ಪತ್ನಿ ದಿನಸಿ ಖರೀದಿಗಾಗಿ ಅಂಗಡಿಗೆ ತೆರಳಿದ್ದರು. ಇದನ್ನು ಓದಿ: 80 ಮಂದಿ ದುಷ್ಕರ್ಮಿಗಳು ಬಂದು ನನ್ನ ಆಟೋಗೆ ಬೆಂಕಿ ಹಚ್ಚಿದರು: ಚಾಲಕ ಕಣ್ಣೀರು

    ಇತ್ತ ವಿಜಯನಗರದಲ್ಲಿರುವ ಮಗಳ ಮನೆಯ ಪಕ್ಕದ ಮನೆ ನಿವಾಸಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯೂ ಮನೆಗೆ ಬಂದಿದ್ದಳು. ಹೀಗೆ ನಾವೆಲ್ಲರೂ ಕುಳಿತು ಧಾರಾವಾಹಿ ನೋಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮನೆಯ ಮುಂದೆ ಜನ ಜಮಾಯಿಸಿರುವುದು ಕಂಡು ಬಂತು. ಅಲ್ಲದೆ ರಾತ್ರಿ 8.30 ಸುಮಾರಿಗೆ ಮನೆ ಮುಂದೆ ನಿಂತಿದ್ದ ಬೈಕ್ ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲು ಆರಂಭಿಸಿದರು. ಕೂಡಲೇ ನಾನು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಪಕ್ಕದ ಮನೆಯ ಟೆರೇಸ್ ಗೆ ಹೋಗುವಂತೆ ಹೇಳಿದೆ. ಇದನ್ನು ಓದಿ: ಒಂದು ರಾತ್ರಿಯ ಬೆಂಗಳೂರು ದಂಗೆ – ಎಷ್ಟು ಕೋಟಿ ನಷ್ಟ?

    ಮನೆಯಲ್ಲಿ ಆಭರಣಗಳು ಹಾಗೂ ಹಣ ಇದ್ದುದ್ದರಿಂದ ನಾನು ಮನೆಯಲ್ಲೇ ಉಳಿದೆ. ಹೊರಗೆ ಸಾಕಷ್ಟು ಗದ್ದಲ ಇದ್ದರೂ ಅವರು ಮನೆಗೆ ಹಾನಿ ಮಾಡಲ್ಲ ಅಂತ ಭಾವಿಸಿದ್ದೆ. ಅಲ್ಲದೆ ಈ ಗಲಭೆ ನನ್ನ ಮನೆಗೆ ಸಂಬಂಧಿಸಿದ್ದು ಎಂದು ತಿಳಿದಿರಲಿಲ್ಲ. ಹೀಗಾಗಿ ನಾನು ಬೀದಿಯಲ್ಲಿರುವ ಕೆಲ ವ್ಯಕ್ತಿಗಳ ಜೊತೆ ವಿಚಾರಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನನ್ನು ನೋಡಲೇ ಇಲ್ಲ. ಅಲ್ಲಿದ್ದವರಲ್ಲಿ ಈ ಹಿಂದೆ ನಾನು ಯಾರನ್ನೂ ನೋಡಿರಲಿಲ್ಲ. ಆದರೆ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತಿದ್ದಂತೆ ನಾನು ಭಯಭೀತಳಾದೆ. ಬೀದಿಗಳಲ್ಲಿ ನೂರಾರು ಜನ ಕಾರು, ಬೈಕ್‍ಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡುತ್ತಿದ್ದು, ಅಲ್ಲಿಂದ ಎಸ್ಕೇಪ್ ಆಗಲು ಯಾವುದೇ ದಾರಿ ನನಗಿರಲಿಲ್ಲ ಎಂದು ಜಯಂತಿ ಘಟನೆಯ ಬಗ್ಗೆ ಮೆಲುಕು ಹಾಕಿಕೊಂಡರು.  ಇದನ್ನು ಓದಿ: ಗೋಲಿಬಾರ್‌ಗೆ ಮೂವರು ಬಲಿ – ಮೃತಪಟ್ಟವರು ಯಾರು? ಉದ್ಯೋಗ ಏನು?

    ರಾತ್ರಿ 10.30ರ ಸುಮಾರಿಗೆ ನಾಲ್ಕೈದು ಮಂದಿ ಸ್ಥಳೀಯ ಮುಸ್ಲಿಂ ಯುವಕರು ಮನೆಗೆ ಬಂದು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ನೀವು ಈ ಕೂಡಲೇ ನಮ್ಮೊಂದಿಗೆ ಬನ್ನಿ ಎಂದರು. ಅದಾಗಲೇ ಗುಂಪೊಂದು ಮನೆಯ ಕಾಂಪೌಂಡ್ ಪ್ರವೇಶಿಸಿತ್ತು. ಇದೇ ವೇಳೆ ವ್ಯಕ್ತಿಯೊಬ್ಬ, ನವೀನ್ ತಾಯಿಯನ್ನು ರಕ್ಷಣೆ ಮಾಡುವ ಮೂಲಕ ನಮ್ಮ ಧರ್ಮಕ್ಕೆ ಅನ್ಯಾಯ ಮಾಡುತ್ತಿದ್ದಾನೆ ಎಂದು ಕೂಗಾಡಿದನು. ಈ ವೇಳೆ ನನ್ನನ್ನು ಕರೆದೊಯ್ಯಲು ಬಂದವರು ಯಾವುದೇ ಮಹಿಳೆ ಹಾಗೂ ಮಕ್ಕಳನ್ನು ಮುಟ್ಟಬಾರದು ಎಂದು ಗುಂಪಿಗೆ ಎಚ್ಚರಿಕೆ ನೀಡಿದರು ಎಂದು ಜಯಂತಿ ತಿಳಿಸಿದರು.  ಇದನ್ನು ಓದಿ: ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ

    ಪಕ್ಕದ ಮನೆಗೆ ನಾನು ಹೋಗುತ್ತಿದ್ದಂತೆಯೇ ಗುಂಪು ನಮ್ಮ ಮನೆಗೆ ಬೆಂಕಿ ಹಚ್ಚಿಯೇ ಬಿಟ್ಟಿತ್ತು. ಒಟ್ಟಿನಲ್ಲಿ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಜಯಂತಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಓದಿ: ಮನೆಗೆ ಪೆಟ್ರೋಲ್ ಬಾಂಬ್ ಹಚ್ಚಿದ್ರು, ನಾನು ಬದುಕಿರೋದೆ ಹೆಚ್ಚು- ಶಾಸಕ ಶ್ರೀನಿವಾಸ ಕಣ್ಣೀರು

  • ಬೆಂಗಳೂರಿನಲ್ಲಿ ಗಲಭೆ ಮಾಡಿದವರನ್ನು ಗಡಿಪಾರು ಮಾಡಿ: ವಿಎಚ್‌ಪಿ, ಬಜರಂಗದಳ ಒತ್ತಾಯ

    ಬೆಂಗಳೂರಿನಲ್ಲಿ ಗಲಭೆ ಮಾಡಿದವರನ್ನು ಗಡಿಪಾರು ಮಾಡಿ: ವಿಎಚ್‌ಪಿ, ಬಜರಂಗದಳ ಒತ್ತಾಯ

    ಶಿವಮೊಗ್ಗ: ಬೆಂಗಳೂರಿನಲ್ಲಿ ಗಲಭೆ ಮಾಡಿದವರನ್ನು ಗಡಿಪಾರು ಮಾಡಿ ಎಂದು ಬಜರಂಗದಳ ಮತ್ತು ವಿಎಚ್‍ಪಿ ಸಂಘಟನೆ ಪ್ರತಿಭಟನೆ ಮಾಡಿ ಒತ್ತಾಯಿಸಿವೆ.

    ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ನಡೆಸಿ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಗೆ ಕಾರಣರಾಗಿರುವ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ವಿಎಚ್‍ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ದಾಳಿ ನಡೆಸಿದ ಗೂಂಡಾಗಳನ್ನು ಗಡಿಪಾರು ಮಾಡಬೇಕು ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿರುವ ಗೂಂಡಾಗಳಿಂದ ನಷ್ಟ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳಿಗೆ ಪಾಕಿಸ್ತಾನದ ಐಎಸ್‍ಐ ನಂಟು ಇದೆ. ಈಗಾಗಿ ಇವೆರಡು ಸಂಘಟನೆಯನ್ನು ಸರ್ಕಾರ ಶೀಘ್ರ ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಎಚ್‍ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಒತ್ತಾಯಿಸಿದರು.

  • ಸಿದ್ದರಾಮಯ್ಯ, ಡಿಕೆಶಿ ದಲಿತ ಪರವೋ ಇಲ್ಲ ಭಯೋತ್ಪಾದಕರ ಪರವೋ: ಕಟೀಲ್ ಪ್ರಶ್ನೆ

    ಸಿದ್ದರಾಮಯ್ಯ, ಡಿಕೆಶಿ ದಲಿತ ಪರವೋ ಇಲ್ಲ ಭಯೋತ್ಪಾದಕರ ಪರವೋ: ಕಟೀಲ್ ಪ್ರಶ್ನೆ

    ಕೊಪ್ಪಳ: ಬೆಂಗಳೂರು ಗಲಭೆ ಪೂರ್ವ ಯೋಜಿತ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿದ್ದಾರೆ.

    ಕೊಪ್ಪಳದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪೋಸ್ಟ್ ಮಾಡಿದ್ದಕ್ಕೆ ನನ್ನ ವಿರೋಧ ಇದೆ. ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಪೋಸ್ಟ್ ನೆಪದ ಹಿನ್ನೆಲೆಯಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಕಟೀಲ್, ಏಕಾಏಕಿ ಜನರು ಹೇಗೆ ಸೇರಿದರು, ಪೆಟ್ರೋಲ್ ಬಾಂಬ್‍ಗಳು, ಕಲ್ಲುಗಳು ಎಲ್ಲಿಂದ ಬಂದವು ಎಂದರು.

    ಈ ಗಲಭೆಯಲ್ಲಿ ಎಸ್‍ಡಿಪಿಐ, ಕೆಎಫ್‍ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳಿದ್ದು, ಇವುಗಳನ್ನು ನಿಷೇಧ ಮಾಡಬೇಕು. ಜೊತೆಗೆ ಇದರ ಹಿಂದೆ ಯಾರ್ಯಾರು ಇದ್ದಾರೆ ತನಿಖೆ ಆಗಬೇಕೆಂದರು. ಬೆಂಗಳೂರು ಗಲಭೆ ಪ್ರಕರಣದಲ್ಲಿ ಸರ್ಕಾರ ದೃಢವಾದ ನಿರ್ಧಾರ ತೆಗೆದುಕೊಂಡಿದ್ದು, ಸರಕಾರಕ್ಕೆ, ಸಿಎಂ, ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್‍ನಲ್ಲಿ ಹಿಂದೂಗಳ ಕುರಿತು ಪ್ರಸ್ತಾಪಿಸಿದ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಸಿದ್ದರಾಮಣ್ಣನಿಂದ ಹೆಚ್ಚು ನೀರಿಕ್ಷೆ ಮಾಡಲು ಆಗಲ್ಲ. ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮಾತ್ರ ಇದ್ದರು. ಆದರೆ ಮುಖ್ಯಮಂತ್ರಿವಾಗಿ ವರ್ತನೆ ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ಗಲಭೆಗಳು ಆದಾಗ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇವತ್ತು ಇದು ನಡೆಯುತ್ತಿರಲಿಲ್ಲ. 21 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಕ್ರಮ ತಗೆದುಕೊಳ್ಳಲಿಲ್ಲ. ಎಸ್‍ಡಿಪಿಐ, ಸಿಮಿ ಸಂಘಟನೆಯವರ ಮೇಲಿನ ಕೇಸ್ ಗಳಿಗೆ ಬಿ ರಿಪೋರ್ಟ್ ಹಾಕಿದರು. ಇದರಿಂದ ಅವರಿಗೆ ಧೈರ್ಯ ಬಂತು, ಆ ಧೈರ್ಯವೇ ಇವತ್ತು ಇದನ್ನು ಮಾಡಿಸುತ್ತಿದೆ ಎಂದು ಗುಡುಗಿದರು.

    ಈ ವಿಚಾರದಲ್ಲಿ ಸಿದ್ದರಾಮಯ್ಯ ಮೌನವಾಗಿರಬೇಕಾಗಿದೆ. ಇದರ ಹಿಂದೆ ಅವರದ್ದೆ ಶಕ್ತಿ ಇದೆ. ಈ ಘಟನೆಗೆ ಸಿದ್ದರಾಮಯ್ಯ ನೇರ ಕಾರಣ ಎಂದು ನಾನು ಹೇಳಲ್ಲ. ಆದರೆ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನೀಡದಿರುವುದು, ಅಂದು ಕಠಿಣ ಕ್ರಮ ತೆಗೆದು ಕೊಳ್ಳದಿರುವುದು, ಈ ಜನರಿಗೆ ಧೈರ್ಯ ಬಂದಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದ್ದು, ಪಾದರಾಯನಪುರ ಗಲಭೆ ಆದಾಗ ಜಮೀರ್ ಅಹಮ್ಮದ್ ಮೆರವಣಿಗೆ ಮಾಡಿದರು. ಡಿಜೆ ಹಳ್ಳಿ ಗಲಭೆಯಲ್ಲಿ ಸತ್ತವರನ್ನು ಅಮಾಯಕರು ಅಂತಾರೆ ಎಂದು ಆರೋಪಿಸಿದರು.

    ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು, ನವೀನ್ ಯಾವ ಪಾರ್ಟಿ ಎಂದು ಪ್ರಶ್ನಿಸಿದ ನಳಿನ್ ಕುಮಾರ್, ನವೀನ್ ಕಾಂಗ್ರೆಸ್ ಪಕ್ಷದವನು ಎನ್ನುವುದಕ್ಕೆ ನಮ್ಮ ಬಳಿ ಪೂರ್ತಿಯಾದ ದಾಖಲೆಗಳಿದ್ದು, ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಾಕಿದವರು ಯಾರು? ಸಾರ್ವಜನಿಕರಿಗೆ ಭಯ ಸೃಷ್ಟಿಸಿದವರು ಏನೆಂದರು. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು, ಭಯವನ್ನು ಸೃಷ್ಟಿ ಮಾಡುವವನು ಭಯೋತ್ಪಾದಕ, ಭಯೋತ್ಪಾದಕರಿಗೆ ಬೆಂಗಾವಲಾಗಿ ನಿಲ್ಲುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದ ಕಟೀಲ್, ಶಾಸಕರು ದಲಿತ ಸಮುದಾಯಕ್ಕೆ ಸೇರಿದವರು, ನೀವು ದಲಿತರ ಪರವಾ ಅಥವಾ ಭಯೋತ್ಪಾದಕರ ಪರವಾ ಎನ್ನುವುದಕ್ಕೆ ಸಿದ್ದರಾಮಯ್ಯ, ಡಿಕೆಶಿ ಉತ್ತರಿಸಬೇಕೆಂದರು.

    ಸತ್ತವರನ್ನು, ಗಲಭೆ ಮಾಡಿದವರನ್ನು ಅಮಾಯಕರು ಅಂತ ಯಾಕೆ ಹೇಳ್ತೀರಾ? ಯಾವುದೇ ಸಮಾಜಕ್ಕೆ, ದೇವರ ನಂಬಿಕೆಗಳಿಗೆ ನೋವು ಮಾಡುವುದು ಧರ್ಮವಲ್ಲ. ಆರೋಪಿ ಖಲೀಂ ರಕ್ಷಣೆಗೆ ಮಾಜಿ ಸಚಿವ ಕೆಜೆ ಜಾರ್ಜ ನಿಂತಿದ್ದಾರೆ ಎನ್ನುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಯಾರು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಅವರನ್ನು ಉಚ್ಚಾಟನೆ ಮಾಡಬೇಕು ಜೊತೆಗೆ ಎಷ್ಟೇ ದೊಡ್ಡ ಶಕ್ತಿಗಳು ಇದ್ದರೂ ಅವರನ್ನು ಬಂಧಿಸಬೇಕೆಂದು ಕಟೀಲ್ ಒತ್ತಾಯಿಸಿದರು.

  • 80 ಮಂದಿ ದುಷ್ಕರ್ಮಿಗಳು ಬಂದು ನನ್ನ ಆಟೋಗೆ ಬೆಂಕಿ ಹಚ್ಚಿದರು: ಚಾಲಕ ಕಣ್ಣೀರು

    80 ಮಂದಿ ದುಷ್ಕರ್ಮಿಗಳು ಬಂದು ನನ್ನ ಆಟೋಗೆ ಬೆಂಕಿ ಹಚ್ಚಿದರು: ಚಾಲಕ ಕಣ್ಣೀರು

    – ಪುಂಡರಿಂದ ಪರಾದ ಆಟೋ ಚಾಲಕನ ಮಗ

    ಬೆಂಗಳೂರು: ನಗರದ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಅಪಾರ ಆಸ್ತಿ-ಪಾಸ್ತಿಗಳು ಹಾನಿಯಾಗಿ ನಷ್ಟ ಸಂಭವಿಸಿದೆ. ಅಂತೆಯೇ ಇದೀಗ ಆಟೋ ರಿಕ್ಷಾ ಓಡಿಸಿ ಬದುಕಿನ ಬಂಡಿ ಸಾಗಿಸುತ್ತಿದ್ದ ಚಾಲಕರೊಬ್ಬರು ಕಣ್ಣೀರು ಹಾಕಿದ್ದಾರೆ.

    ಹೌದು. 26 ವರ್ಷದ ಗಜೇಂದ್ರ ಅವರು ಪ್ರತಿ ದಿನ ಮುಂಜಾನೆ ಎದ್ದು ಮಾಂಸ ಸಾಗಾಟ ಮಾಡುತ್ತಿದ್ದರು. ಆದರೆ ಬುಧವಾರ ಮಾತ್ರ ಅವರಿಗೆ ತಮ್ಮ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಪರಿಣಾಮ ಹಿಂದಿನ ರಾತ್ರಿ ಸುಮಾರು 80 ಮಂದಿ ಪುಂಡರ ಗುಂಪು ಗಜೇಂದ್ರ ಅವರ ವಾಹನವನ್ನು ಧ್ವಂಸಗೊಳಿಸಿತ್ತು.

    ಗಜೇಂದ್ರ ಅವರು ಕಾವಲ್ ಬೈರಸಂದ್ರದ ಮುನಿನಂಜಪ್ಪ ಗಾರ್ಡನ್ ನ 1ನೇ ಮುಖ್ಯರಸ್ತೆ, 1ನೇ ಕ್ರಾಸ್ ನಿವಾಸಿಯಾಗಿದ್ದಾರೆ. ಇಲ್ಲಿ ನಾವು ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದೇವೆ. ಇಷ್ಟು ವರ್ಷದಲ್ಲಿ ಮೊದಲ ಬಾರಿಗೆ ಇಂತದ್ದೊಂದು ಭಯಾನಕ ಘಟನೆ ಎದುರಿಸಿದೆವು. ದುಷ್ಕರ್ಮಿಗಳು ಬಂದು ಮನೆ ಮುಂದಿದ್ದ ಆಟೋ ರಿಕ್ಷಾ ಹಾಗೂ ನನ್ನ ಮಗನ ಬೈಕ್ ಧ್ವಂಸಗೊಳಿಸಿದರು. ಅಲ್ಲದೆ ಮನೆಯ ಕಿಟಕಿ ಹಾಗೂ ಬಾಗಿಲಿಗೆ ಹಾನಿ ಮಾಡದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

    ಗಜೇಂದ್ರ ಅವರ ಪುತ್ರ ಜಯರಾಜ್ ಖಾಸಗಿ ಕಾಲೇಜಿನ ಸಿಬ್ಬಂದಿಯಾಗಿದ್ದು, ಘಟನೆಯ ಬಗ್ಗೆ ವಿವರಿಸಿದ್ದಾರೆ. ಕೈಯಲ್ಲಿ ಕಲ್ಲು ಹಾಗೂ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಮನೆಗಳಿಗೆ ಹಾನಿಗೊಳಿಸುವುದನ್ನು ನಾನು ನೋಡಿದೆ. ಈ ವೇಳೆ ನಾನು ನಮ್ಮ ಆಟೋದ ಬಳಿ ಹೋಗಿ ನಿಲ್ಲುವ ಮೂಲಕ ಅದನ್ನು ಪುಂಡರಿಂದ ರಕ್ಷಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮೇಲೆ ಹಲ್ಲೆ ಮಾಡಿದರು. ಈ ವೇಳೆ ನಾನು ಅವರ ಕೈಯಿಂದ ತಪ್ಪಿಸಿಕೊಂಡು ಪಾರಾದೆ. ಬಳಿಕ ದುಷ್ಕರ್ಮಿಗಳು ನಮ್ಮ ಆಟೋಗೆ ಬೆಂಕಿ ಹಚ್ಚಿದರು. ನನ್ನ ತಂದೆ ಹಾಗೂ ನಾನು ಒದ್ದೆಯಾದ ಚೀಲಗಳನ್ನು ಅದರ ಮೇಲೆ ಹಾಕಿ ಬೆಂಕಿ ನಂದಿಸಿದೆವು ಎಂದು ತಿಳಿಸಿದರು.

  • ಬೆಂಗ್ಳೂರಲ್ಲಿ ನಡೆದ ಧಾರ್ಮಿಕ ಮತಾಂಧತೆಯನ್ನು ಖಂಡಿಸುತ್ತೇನೆ: ಪ್ರಕಾಶ್ ರಾಜ್

    ಬೆಂಗ್ಳೂರಲ್ಲಿ ನಡೆದ ಧಾರ್ಮಿಕ ಮತಾಂಧತೆಯನ್ನು ಖಂಡಿಸುತ್ತೇನೆ: ಪ್ರಕಾಶ್ ರಾಜ್

    ಬೆಂಗಳೂರು: ಸಿಲಿಕಾನ್ ಸಿಟಿಯ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸುವುದಾಗಿ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.

    ಬೆಂಗಳೂರು ಗಲಭೆಯ ಸಂಬಂಧ ಟ್ವೀಟ್ ಮಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಅನಾಗರಿಕವಾದದ್ದಾಗಿದೆ. ಈ ಧಾರ್ಮಿಕ ಮತಾಂಧತೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಾನೂನನ್ನು ಕೈಗೆ ತೆಗದುಕೊಂಡ ಪ್ರಚೋದರಕರು ಹಾಗೂ ಗೂಂಡಾಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಸಮಾಜ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗರಂ ಆಗಿದ್ದಾರೆ.

    ನಡೆದಿದ್ದೇನು?
    ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಎಂದು ಹೇಳಲಾಗುತ್ತಿರುವ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದನೆಂದು ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಶಾಸಕರ ಮನೆ ಹಾಗೂ ಎರಡು ಪೊಲೀಸ್ ಠಾಣೆಗಳನ್ನು ಧ್ವಂಸಗೊಳಿಸಿವೆ. ಪ್ರಕರಣ ಸಂಬಂಧ ಈ ಈಗಾಗಲೇ ಹಲವರನ್ನು ಬಂಧಿಸಲಾಗಿದೆ.

    ಘಟನೆಯಿಂದ ಪೊಲೀಸ್ ವಾಹನ, ಸಾರ್ವಜನಿಕರ ವಾಹನ ಸೇರಿ ಒಟ್ಟು 52 ವಾಹನಗಳಿಗೆ ಹಾನಿಯಾಗಿದೆ. 2 ಇನ್ನೋವಾ, 2 ಕೆಎಸ್‍ಆರ್‍ಪಿ ವ್ಯಾನ್, 1 ಸಿಎಆರ್ ವ್ಯಾನ್, 6 ಪೊಲೀಸ್ ಜೀಪ್, ಒಂದು ಚೀತಾ ಬೈಕ್, ಸ್ಟೇಷನ್ ಮುಂದೆ ಜಪ್ತಿ ಮಾಡಿ ನಿಲ್ಲಿಸಿದ್ದ 30 ಇತರೆ ಬೈಕ್, ಒಂದು ಆಟೋ, 2 ಕಾರು, 1 ಬೈಕ್ ಭಸ್ಮವಾಗಿದೆ. ಶಾಸಕರ ಮೂರಂತಸ್ತಿನ ಮನೆ, ಕಚೇರಿಗೆ ಬೆಂಕಿ, ಡಿಜೆ ಹಳ್ಳಿ ಠಾಣೆಗೆ ಬೆಂಕಿ, ಕೆಜಿ ಹಳ್ಳಿ ಠಾಣೆ ಧ್ವಂಸವಾಗಿದ್ದು, ಹತ್ತಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿವೆ.

  • ಬೆಂಗಳೂರಿನಲ್ಲಿ ಗಲಭೆ, ಕೋಲಾರದಲ್ಲೂ ಕಟ್ಟೆಚ್ಚರ: ಎಸ್‍ಪಿ ಕಾರ್ತಿಕ್ ರೆಡ್ಡಿ

    ಬೆಂಗಳೂರಿನಲ್ಲಿ ಗಲಭೆ, ಕೋಲಾರದಲ್ಲೂ ಕಟ್ಟೆಚ್ಚರ: ಎಸ್‍ಪಿ ಕಾರ್ತಿಕ್ ರೆಡ್ಡಿ

    ಕೋಲಾರ: ಬೆಂಗಳೂರು ಗಲಭೆ ಹಿನ್ನೆಯಲ್ಲಿ ಕೋಲಾರ ಜಿಲ್ಲೆಯಾದ್ಯಂತ ಮುನ್ನಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್‍ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.

    ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಕಳೆದ ರಾತ್ರಿಯಿಂದಲೇ ನಗರದಲ್ಲಿ ಪೊಲೀಸರಿಂದ ಬೀಟ್ ಮಾಡಿಸಲಾಗಿದೆ . ಸಾಮಾಜಿಕ ಜಾಲ ತಾಣಗಳ ಮೇಲೂ ಹದ್ದಿನ ಕಣ್ಣಿಡಲಾಗಿದ್ದು, ಕೋಲಾರ ಜಿಲ್ಲೆಯಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ಜಿಲ್ಲೆಯ ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು.

    ಯಾವುದೇ ಗೊಂದಲ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ. ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಗಲಭೆ ಬಳಿಕ ಸಾಕಷ್ಟು ಜನ ಕೋಲಾರದತ್ತ ಬಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದುವರೆಗೆ ಆ ರೀತಿಯ ಯಾವುದೇ ವ್ಯಕ್ತಿಗಳು ಕಂಡು ಬಂದಿಲ್ಲ. ಈ ವಿಚಾರವಾಗಿಯೂ ಇಲಾಖೆ ಎಚ್ಚರ ವಹಿಸಿದೆ. ಜನತೆ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

  • ಜಾಲತಾಣದಲ್ಲಿ ಪೋಸ್ಟ್ ಮಾಡಿದವರು, ಗಲಭೆಕೋರರು, ಇಬ್ಬರ ಮೇಲೂ ಕ್ರಮ ಕೈಗೊಳ್ಳಿ: ಕಾಂಗ್ರೆಸ್ ಶಾಸಕ ರಾಜೇಗೌಡ

    ಜಾಲತಾಣದಲ್ಲಿ ಪೋಸ್ಟ್ ಮಾಡಿದವರು, ಗಲಭೆಕೋರರು, ಇಬ್ಬರ ಮೇಲೂ ಕ್ರಮ ಕೈಗೊಳ್ಳಿ: ಕಾಂಗ್ರೆಸ್ ಶಾಸಕ ರಾಜೇಗೌಡ

    ಚಿಕ್ಕಮಗಳೂರು: ಗಲಭೆಯನ್ನು ಸಹಿಸುವುದಿಲ್ಲ ಬೆಂಗಳೂರು ಗಲಭೆಗೆ ಯಾರೇ ಕಾರಣಕರ್ತರಾದರೂ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದ್ದಾರೆ.

    ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಅತ್ಯಂತ ಕಠಿಣ ಹಾಗೂ ತೀವ್ರ ಪದಗಳಿಂದ ಖಂಡಿಸುತ್ತೇನೆ. ಯಾವುದೇ ಜಾತಿ-ಧರ್ಮ ಇರುಬಹುದು. ಯಾವುದೇ ಧಾರ್ಮಿಕ ನಂಬಿಕೆ ಹಾಗೂ ಗುರುಗಳ ಮೇಲೆ ಹಗುರುವಾದ ಹೇಳಿಕೆಗಳನ್ನ ಕೊಡುವುದನ್ನ ಮೊದಲು ಎಲ್ಲ ಸಮುದಾಯದವರು ನಿಲ್ಲಿಸಬೇಕು. ಆಗ ಮಾತ್ರ ಈ ರೀತಿಯ ಭಾವನಾತ್ಮಕ ಘಟನೆಗಳು ನಡೆಯುವುದಿಲ್ಲ ಎಂದರು.

    ಈ ಘಟನೆ ತಪ್ಪು. ನ್ಯಾಯ ಕೇಳಲು ಕೋರ್ಟ್, ಕಾನೂನು, ಪೊಲೀಸ್ ವ್ಯವಸ್ಥೆ ಇದೆ. ದೂರು ನೀಡಿ ನ್ಯಾಯ ಕೇಳಬೇಕು. ಈ ರೀತಿ ದೌರ್ಜನ್ಯ, ಗಲಭೆ ಒಳ್ಳೆಯದಲ್ಲ ಇದನ್ನ ಯಾರೂ ಸಹಿಸಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ. ಯಾರೋ ಶಾಸಕರ ಸಂಬಂಧಿ ಏನೋ ಹೇಳಿಕೆ ಕೊಟ್ಟನೆಂದು ದಾಂದಲೆ ತರವಲ್ಲ ಎಂದು ಗಲಭೆಕೋರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಘಟನೆ ಕುರಿತು ಸರ್ಕಾರ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಹೇಳಿಕೆ ಕೊಟ್ಟವನ ಮೇಲೂ ಕ್ರಮವಾಗಬೇಕು ಎಂದಿದ್ದಾರೆ. ಇಂತಹ ಘಟನೆಯಲ್ಲಿ ಅಮಾಯಕರಿಗೆ ಹೊಡೆತ ಬೀಳುತ್ತೆ. ಆದ್ದರಿಂದ ಗಲಭೆಗೆ ಕಾರಣಕರ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ನಿಮ್ಮ ಬಳಿ ಮದ್ದು, ಗುಂಡುಗಳು ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಸರಿಯಾಗಿ ಹಾಕಿಕೊಳ್ಳಿ : ಅಲೋಕ್ ಕುಮಾರ್

    ನಿಮ್ಮ ಬಳಿ ಮದ್ದು, ಗುಂಡುಗಳು ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಸರಿಯಾಗಿ ಹಾಕಿಕೊಳ್ಳಿ : ಅಲೋಕ್ ಕುಮಾರ್

    ಬೆಂಗಳೂರು: ನಿಮ್ಮ ಬಳಿ ಮದ್ದು ಗುಂಡುಗಳಿವೆಯಾ, ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸರಿಯಾಗಿ ಹಾಕಿಕೊಳ್ಳಿ. ಯಾವುದೇ ಕ್ಷಣದಲ್ಲಿ ಏನೇ ಘಟಿಸಿದರೂ ಎದುರಿಸಲು ಸಿದ್ಧರಾಗಿ ಎಂದು ಕೆಎಸ್‍ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    ಡಿಜೆ ಹಳ್ಳಿಯ ಗಲಭೆ ಪ್ರಕರಣದಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿದ್ದು, ಸಿಬ್ಬಂದಿ ಯೋಗಕ್ಷೇಮ ವಿಚಾರಿಸಲು ಅಲೋಕ್ ಕುಮಾರ್ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಕೆಜೆ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಾದ ಹಾನಿಯ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಘಟನೆ ವಿವರ ಪಡೆದಿದ್ದಾರೆ. ಈ ವೇಳೆ ಸಿಬ್ಬಂದಿಗೆ ಎಚ್ಚರದಿಂದಿರುವಂತೆ ಸೂಚನೆಯನ್ನೂ ನೀಡಿದ್ದಾರೆ.

    ನಿನ್ನೆ ರಾತ್ರಿ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ದುರ್ಘಟನೆಯಲ್ಲಿ ಹಲ್ಲೆಗೊಳಗಾದ ನಾಲ್ಕು ಜನ ಕೆಎಸ್‍ಆರ್‍ಪಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗಳಾಗಿವೆ. ಘಟನೆಯಲ್ಲಿ ನಾಲ್ಕು ಪೊಲೀಸ್ ವಾಹನಗಳು ಸುಟ್ಟು ಕರಕಲಾಗಿವೆ. ಇದರಲ್ಲಿ 20 ಜನರಿಗೆ ಗಾಯಗಳಾಗಿದ್ದು, 4 ಜನರಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ ಅಲೋಕ್ ಕುಮಾರ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.

    ಸಣ್ಣಪುಟ್ಟ ಗಾಯಗಳಾಗಿದ್ದವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಕೆಜೆ ಹಳ್ಳಿ, ಡಿಜೆ ಹಳ್ಳಿ ಸುತ್ತ 50 ಕೆಎಸ್‍ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸಂಪೂರ್ಣ ಭದ್ರತೆ ಕಲ್ಪಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

  • ಕಾಂಗ್ರೆಸ್ ಗೊಬ್ಬರ ಹಾಕಿ ಬೆಳೆಸಿದ ಸಂಘಟನೆಗಳು ಅವರ ಪಕ್ಷದ ಶಾಸಕರನ್ನೇ ಬಲಿ ಪಡೆಯುತ್ತಿವೆ- ವಿಜಯೇಂದ್ರ

    ಕಾಂಗ್ರೆಸ್ ಗೊಬ್ಬರ ಹಾಕಿ ಬೆಳೆಸಿದ ಸಂಘಟನೆಗಳು ಅವರ ಪಕ್ಷದ ಶಾಸಕರನ್ನೇ ಬಲಿ ಪಡೆಯುತ್ತಿವೆ- ವಿಜಯೇಂದ್ರ

    – ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸಮೂರ್ತಿ
    – ಎಸ್‌ಡಿಪಿಐ, ಪಿಎಫ್‍ಐ ಭಯೋತ್ಪಾದನೆ ಸೃಷ್ಟಿಸುತ್ತಿವೆ

    ಬೆಂಗಳೂರು: ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಬೆಳೆಸಿದ ಸಂಘಟನೆಗಳು ಇಂದು ಶಾಸಕರನ್ನು ಬಲಿ ಪಡೆಯುತ್ತಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಪೋಷಿಸಿ, ರಕ್ಷಿಸಿದ ಎಸ್‍ಡಿಪಿಐ, ಪಿಎಫ್‍ಐ ಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರುಗಳನ್ನೇ ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿಸುತ್ತಿವೆ. ಇಷ್ಟಾದರೂ ಕಾಂಗ್ರೆಸ್‍ಇನ್ನೂ ಈ ಸಂಘಟನೆಗಳ ವಿರುದ್ಧ ಸೊಲ್ಲೆತ್ತುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ನಡೆದ ಗಲಭೆ ಪ್ರಕರಣದ ಕುರಿತು ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕರತು ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ಶಾಸಕರ ಮನೆ, ಪೊಲೀಸ್ ಠಾಣೆ ಸುಟ್ಟು ದುಷ್ಕರ್ಮಿಗಳು ವಿಕೃತಿ ಎರೆದಿದ್ದಾರೆ. ಈ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ವಿಜಯೇಂದ್ರ ಸಹ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.