ಬೆಂಗಳೂರು: ಅಲ್ಲಾ ಎಲ್ಲವನ್ನೂ ಕೊಡ್ತಾನೆ ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮೌಲ್ವಿಗಳು ಧೈರ್ಯ ತುಂಬಿದ್ದಾರೆ.
ಗಲಭೆಯಿಂದ ಹೊತ್ತಿ ಉರಿದ ಶಾಸಕರ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ನಿವಾಸಕ್ಕೆ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ನೇತೃತ್ವದಲ್ಲಿ ಮೌಲ್ವಿಗಳು ಭೇಟಿ ನೀಡಿ ವೀಕ್ಷಿಸಿದರು.
ಹೊತ್ತಿ ಉರಿದ ಮನೆಯನ್ನು ಅಖಂಡ ತೋರಿಸುವ ಸಂದರ್ಭದಲ್ಲಿ ಮೌಲ್ವಿ ಇರ್ಷಾದ್ ಅಹಮ್ಮದ್, ಅಖಂಡ ಶ್ರೀನಿವಾಸ್ ನಮಗೆ ಮನೆ ಮಗ ಇದ್ದಂತೆ. ಎಲ್ಲಾ ಮಸೀದಿಗಳು ನಿಮ್ಮ ಜೊತೆ ಇರುತ್ತದೆ. ಅಲ್ಲಾ ಎಲ್ಲವನ್ನೂ ಕೊಡುತ್ತಾನೆ. ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?
ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ಮನೆ ಕಟ್ಟಿಸಿಕೊಡುವುದಾಗಿ ಧರ್ಮಗುರುಗಳು ಹೇಳಿದ್ದಾರೆ. ಶಾಸಕರು ಒಪ್ಪಿದರೆ ನಾವು ಸ್ವಂತ ಹಣ ದಿಂದ ಮನೆ ಕಟ್ಟಿಸಿಕೊಡೊದಾಗಿ ಹೇಳಿದ್ದಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಅಖಂಡ, ಮನೆಯನ್ನು ನಾನೇ ನಿರ್ಮಿಸುತ್ತೇನೆ. ಗುರುಗಳ ಆಶೀರ್ವಾದ ಸದಾ ಇರಲಿ. ನಾವೇ ಹೋಗಿ ಮಾತನಾಡಿಕೊಂಡು ಬರಬೇಕಾಗಿತ್ತು. ಗುರುಗಳೇ ಬಂದು ಆಶೀರ್ವಾದ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ದೂರಿನಲ್ಲಿ ಯಾರ ಹೆಸರನ್ನು ಹೇಳಿಲ್ಲ. ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದು ತಿಳಿಸಿದ್ದರು.
ಶಿವಮೊಗ್ಗ: ಬೆಂಗಳೂರಿನ ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ಗಲಭೆ ನಡೆದು ಆಸ್ತಿಪಾಸ್ತಿ ಹಾನಿಯಾಗಿದೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಮತಾಂಧ ಮುಸಲ್ಮಾನರ ವಿರುದ್ಧ ಒಂದೇ ಒಂದು ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತಾಂಧ ಮುಸಲ್ಮಾನರ ವಿರುದ್ಧ ಹೇಳಿಕೆ ನೀಡಲು ಧಮ್ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಡಿಕೆಶಿ ಮತ್ತು ಸಿದ್ದರಾಮಯ್ಯ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಇಂತಹ ಕೆಟ್ಟ ರಾಜಕಾರಣದಿಂದಲೇ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೇ ಅಂತ ಭೂತಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಮೌಲ್ಯಯುತ ರಾಜಕಾರಣ ಮಾಡಿ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗಲಭೆ ನಡೆದು ಶಾಸಕರ ಮನೆ ಧ್ವಂಸ ಆಗಿದೆ. ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ. ಪೊಲೀಸರನ್ನು ಕೊಲೆ ಮಾಡಿ ಅಂತ ಹೇಳಿರುವ ಹೇಳಿಕೆ ರೆಕಾರ್ಡ್ ಇದೆ. ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್‍ಡಿಪಿಐ ನವರು ಬಾವುಟ ಹಾರಿಸಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಒಂದೇ ಒಂದು ಖಂಡನೆ ವ್ಯಕ್ತಪಡಿಸಿಲ್ಲ. ಇದೇನಾ ನಿಮ್ಮ ಮೌಲ್ಯಯುತ ರಾಜಕಾರಣ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಡಿಕೆಶಿಗೆ ಮತಾಂಧ ಮುಸಲ್ಮಾನರ ಬಗ್ಗೆ ಆಸಕ್ತಿ ಜಾಸ್ತಿ. ಮತಾಂಧ ಮುಸಲ್ಮಾನರ ರಕ್ಷಣೆಯೇ ಕಾಂಗ್ರೆಸ್ ಆಸ್ತಿ. ಸಿದ್ದರಾಮಯ್ಯ ಹೇಳ್ತಾರೆ ಇದೊಂದು ಕೋಮುಗಲಭೆ ಅಂತ. ಸಿದ್ದರಾಮಯ್ಯ ಅವರೇ ನೀವು ಮುಖ್ಯಮಂತ್ರಿ ಆಗಿದ್ದವರು, ನಿಮಗೆ ಕೋಮುಗಲಭೆ ಅಂದ್ರೆ ಏನು ಅಂತ ಗೊತ್ತಿಲ್ಲವಾ. ನಿಮಗೆ ಕೋಮುಗಲಭೆ ಬಗ್ಗೆ 1 ನೇ ತರಗತಿಯ ಪಾಠ ಮಾಡಬೇಕಿದೆ ಎಂದರು.
ಇದೇ ಘಟನೆಯಲ್ಲಿ ಏನಾದರೂ ಒಂದೇ ಒಂದು ಹಿಂದು ಸಂಘಟನೆ ಈ ರೀತಿ ಬೆಂಕಿ ಹಾಕಿದ್ದರೆ ಅಥವಾ ವಾಹನ ಸುಟ್ಟು ಹಾಕಿದ್ದರೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ಕೊಡುತ್ತಿದ್ರಾ ಎಂದು ಪ್ರಶ್ನಿಸಿದರು. ಈ ಹಿಂದಿನ ಕಾಂಗ್ರೆಸ್ ರಾಷ್ಟ್ರಕ್ಕಾಗಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಆಗಾಗಿ ಈ ಹಿಂದಿನ ಕಾಂಗ್ರೆಸ್ಸೇ ಬೇರೆ. ಇಂದಿನ ಕಾಂಗ್ರೆಸ್ಸೇ ಬೇರೆ. ಇವರು ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ. ಖುರ್ಚಿಗಾಗಿ ಮತಾಂಧ ಮುಸಲ್ಮಾನರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ರಾಜ್ಯದಲ್ಲಿ ತುಂಬ ದಿನ ನಡೆಯುವುದಿಲ್ಲ ಎಂದು ಸಚಿವ ಈಶ್ವರಪ್ಪ ಎಚ್ಚರಿಸಿದರು.
ಜಮೀರ್ ಅಹಮದ್ ಅವನೊಬ್ಬ ರಾಷ್ಟ್ರದ್ರೋಹಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಗಲಭೆಗಳು ನಡೆದಾಗ ಕೆಲವರು ಮುಸಲ್ಮಾನರ ಲೀಡರ್ ಆಗಲು ಓಡಾಡುತ್ತಾರೆ. ಇದರಲ್ಲಿ ಆತನು ಒಬ್ಬ. ಮುಸಲ್ಮಾನರ ಲೀಡರ್ ಆಗಲು ಜಮೀರ್ ಈ ರೀತಿ ಮಾಡುತ್ತಿದ್ದಾನೆ. ಕೋಮುಗಲಭೆ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವರು ಅಮಾಯಕರು ಎಂದು ಹೇಳಿಕೆ ನೀಡುತ್ತಿದ್ದಾನೆ. ಇದು ಕೋಮು ಗಲಭೆ ಅಲ್ಲ. ಬದಲಿಗೆ ಇದು ಮತಾಂಧ ಮುಸ್ಲಿಂ ದಂಗೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
– ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜೆ.ಪಿ. ನಡ್ಡಾರಿಂದ ಶಿಲಾನ್ಯಾಸ
ರಾಯಚೂರು: ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯ ಘಟನೆ ಪೂರ್ವ ನಿಯೋಜಿತ, ಇದು ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಬೆಂಗಳೂರು ಗಲಭೆಗೆ ಕಾರಣವಾದ ನವೀನ್ ಅನ್ನೋ ವ್ಯಕ್ತಿ ಕಟ್ಟಾ ಕಾಂಗ್ರೆಸ್ ಬೆಂಬಲಿಗ. ನವೀನ್‍ಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಅವರ ಮಾವನವರ ಕುರಿತಾದ ಪೋಸ್ಟ್ ಗಳನ್ನು ನವೀನ್ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯಾರೇ ಏನೇ ಹೇಳಿದರೂ ನವೀನ್ ಕಾಂಗ್ರೆಸ್ ಕಾರ್ಯಕರ್ತ ಎನ್ನುವುದು ಜಗಜ್ಜಾಹೀರಾಗಿದೆ. ಅದಕ್ಕೆ ಎಲ್ಲ ಸಾಕ್ಷಿ ಪುರಾವೆಗಳಿವೆ. ಘಟನೆಯಲ್ಲಿ ಭಾಗಿಯಾದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ. ರಾಜಕೀಯ ಲಾಭಕ್ಕೆ ಮಾಡಿಕೊಂಡಿರುವ ಸಂಘಟನೆಯನ್ನು ಮಟ್ಟಹಾಕಬೇಕಾಗಿದೆ ಎಂದು ಸವದಿಯವರು ತಿಳಿಸಿದರು.
ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನ ಸರ್ಕಾರ ತೆಗೆದುಕೊಂಡಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಆಸ್ತಿ ಮುಟ್ಟುಗೋಲಿಗೆ ಮುಲಾಜಿಲ್ಲದ ಕ್ರಮಕ್ಕೆ ಚಿಂತನೆ ನಡೆದಿದೆ. ಈ ಬಗ್ಗೆ ಗೃಹ ಸಚಿವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ನೂತನ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡ ನಿರ್ಮಾಣ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶಿಲಾನ್ಯಾಸಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಬಿಜೆಪಿ ಸ್ವಂತ ಕಚೇರಿಗಳನ್ನ ತೆರೆಯಬೇಕು ಅನ್ನೋ ಇಂಗಿತ ವ್ಯಕ್ತಪಡಿಸಿದರು.
ಬೆಂಗಳೂರು: ಕೀಚಕರ ಹೆಡೆಮುರಿ ಕಟ್ಟುವಲ್ಲಿ ಬಿಜೆಪಿ ಸರ್ಕಾರ ಸಮರ್ಥವಿದೆ. ಕಾಂಗ್ರೆಸ್ಸಿನವರಿಗೆ ಈಗಾದರೂ ಸತ್ಯದ ಅರಿವಾಯಿತೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ. ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂಪಾಷರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೀಚಕರ ಹಡೆಮುರಿಕಟ್ಟುವಲ್ಲಿ ನಮ್ಮಸರ್ಕಾರ ಸಮರ್ಥವಿದೆ. ಕಾಂಗ್ರೆಸ್ಸಿನವರಿಗೆ ಈಗಲಾದ್ರೂ ನಿಜಸತ್ಯದ ಅರಿವಾಯಿತೇ ಎಂದು ಪ್ರಶ್ನಿಸಿ ಬರೆದುಕೊಂಡಿದ್ದಾರೆ.
ಬೆಂಗಳೂರು ಗಲಭೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಖಲೀಂ ಪಾಷಾನನ್ನು ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಖಲೀಂ ಪಾಷಾ ಗಲಭೆಯ ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದನು. ಗಲಭೆಕೋರರಿಗೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದನು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ಮಧ್ಯರಾತ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ, ಡಿಜೆ ಹಳ್ಳಿ ಪೊಲೀಸರು ಸುಮಾರು 15 ಗಂಟೆಗೆ ಆಪರೇಷನ್ ಕಾರ್ಯಾಚರಣೆ ಮಾಡಲು ಶುರು ಮಾಡಿದ್ದರು. ಅದೇ ರೀತಿ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲ್ಲಿಗಲ್ಲಿಯಲ್ಲೂ ಮಧ್ಯರಾತ್ರಿ ಪೊಲೀಸರು ಸುತ್ತಾಡಿದ್ದಾರೆ. ರಾತ್ರಿ 12ರಿಂದ ಬೆಳಗ್ಗಿನ ಜಾವ 4 ಗಂಟೆವರೆಗೆ ಮಿಡ್‍ನೈಟ್ ಆಪರೇಷನ್ ಮಾಡಿದ್ದಾರೆ.
ಚಾಮರಾಜನಗರ: ಬೆಂಗಳೂರಿನ ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‍ಡಿಪಿಐ ಪಾತ್ರ ಬಹಳಷ್ಟಿದೆ. ಈ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿ ಕಚೇರಿ ನೂತನ ಕಟ್ಟಡ ಶಿಲಾನ್ಯಾಸದ ವೇಳೆ ಮಾತನಾಡಿದ ಅವರು, ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ಸಂಘಟನೆಯನ್ನು ನಿಷೇಧಿಸಬೇಕೆಂಬುದು ಎಲ್ಲರೂ ಒಪ್ಪುವ ಬೇಡಿಕೆಯಾಗಿದೆ. ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆ ನಿಷೇಧಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಈಗ ಎಸ್‍ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ದೃಢ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಗೃಹ ಸಚಿವರು ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಗಟ್ಟಿಯಾದ ನಿಲುವು ಪ್ರಕಟಿಸಲಿದ್ದಾರೆ ಎಂದು ಸಚಿವರು ಹೇಳಿದರು.
ಯುಪಿ ಮಾದರಿಯ ಕಾನೂನನ್ನು ರಾಜ್ಯದಲ್ಲೂ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈಗಾಗಲೇ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗಳ ಆದೇಶ ಸಹ ಇದೆ. ಯಾರು ಬಂದ್ ಕರೆ ಕೊಡುತ್ತಾರೊ ಆ ಸಮಯದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಆದ್ರೆ ಅವರ ಕೈಯಲ್ಲಿ ಕಟ್ಟಿಸಬೇಕೆಂಬ ಆದೇಶವಿದೆ. ಇದೇ ಮಾದರಿಯಲ್ಲಿ ಡಿ.ಜೆ ಹಳ್ಳಿ ಗಲಭೆಯಲ್ಲಿ ಆಗಿರುವ ನಷ್ಟವನ್ನು ಸಂಬಂಧಿಸಿದವರಿಂದಲೇ ಭರಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ಆಗಸ್ಟ್ 31 ರವರಗೆ ಶಾಲಾ ಕಾಲೇಜುಗಳನ್ನು ತೆರೆಯಲು ಅವಕಾಶವಿಲ್ಲ. ಶಾಲೆಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ. ಈ ಆದೇಶ ಬಂದ ಕೂಡಲೇ ಮುಂದಿನ ನಮ್ಮ ನಿರ್ಧಾರವನ್ನ ಪ್ರಕಟಿಸುತ್ತೇವೆ. ಸೆಪ್ಟೆಂಬರ್‍ವರೆಗೆ ಶಾಲಾ-ಕಾಲೇಜು ಆರಂಭವಾಗುವುದಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಇದೇ ವೇಳೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಲಕ್ನೋ: ಬೆಂಗಳೂರಿನ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಉತ್ತರಪ್ರದೇಶದ ಮೀರತ್ ನ ಮುಸ್ಲಿಂ ನಾಯಕನೊಬ್ಬ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದಾನೆ.
ಹೌದು. ಮುಸ್ಲಿಂ ಮುಖಂಡ ಶಜೇಬ್ ರಿಜ್ವಿ ಈ ಸಂಬಂಧ ವಿಡಿಯೋ ಮಾಡಿ, ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಹೋದರಿ ಮಗ ನವೀನ್ ತಲೆ ತಂದವರಿಗೆ 51 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದಾನೆ. ಇದನ್ನೂ ಓದಿ: ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್
₹51 lakhs declared for beheading Naveen, nephew of Congress MLA from Bengaluru. The announcement was made by "social activist" Shahzeb Rizvi from Uttar Pradesh. He is said to be associated with Samajwadi Party. Interestingly, the Congress continues to maintain absolute silence. pic.twitter.com/YZzAHZxz7A
ಸಾಮಾಜಿಕ ಜಾಲತಾಣದಲ್ಲಿ ನವೀನ್ ಪೋಸ್ಟ್ ಹಾಕಿರುವ ನೆಪ ಇಟ್ಟುಕೊಂಡು ಬೆಂಗಳೂರಿನ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ಪುಂಡರು ದಾಂಧಲೆ ನಡೆಸಿದ್ದರು. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದರು. ಅಲ್ಲದೆ ಶಾಸಕರ ಮನೆಗೆ ಕಲ್ಲು ತೂರಿ, ಬೆಂಕಿ ಹಚ್ಚಿ ಧ್ವಂಸ ಮಾಡಿದ್ದರು. ಘಟೆನೆಗೆ ಸಂಬಂಧಿಸಿದಂತೆ ಸುಮಾರು 110 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬೆಂಗಳೂರಿನಾದ್ಯಂತ ಆಗಸ್ಟ್ 15ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇದನ್ನೂ ಓದಿ: ಮಾಜಿ ಗೃಹ ಸಚಿವ ಜಾರ್ಜ್ ಜೊತೆ ಸುತ್ತಾಡಿದ ಬೆಂಗಳೂರು ಗಲಭೆಯ ಆರೋಪಿ
ಇತ್ತ ಗಲಭೆಯಲ್ಲಿ ಎಸ್‍ಡಿಪಿಐ ಜೊತೆಗೆ ಮತ್ತೊಂದು ಸಂಘಟನೆ ಕೂಡ ಸಾಥ್ ನೀಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಫೈರೋಜ್ ಖಾನ್‍ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಗಲಭೆ ನಡೆದ ದಿನ ಅಂದರೆ ಮಂಗಳವಾರ ಸಂಜೆ 6 ಗಂಟೆಯಿಂದಲೇ ಫೈರೋಜ್ ಎಲ್ಲರಿಗೂ ಮೆಸೇಜ್ ಶೇರ್ ಮಾಡಿದ್ದ. ಯಾರು ಯಾರು ಎಲ್ಲಿಗೆ ಹೋಗಿ ಏನೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೇ ವಾಟ್ಸಪ್ ಸಂದೇಶಗಳ ಮೂಲಕ ಗಲಾಟೆ ಮಾಡಬೇಕೆಂದು ಕೆಲವೊಂದು ಮೌಲ್ವಿಗಳಿಗೆ ಹೇಳಿಕೊಟ್ಟಿದ್ದ. ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಫೈರೋಜ್‍ನನ್ನು ಬಂಧಿಸಿರುವ ಪೊಲೀಸರು ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ
ಕಾರವಾರ: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಪುಂಡರು ದಾಳಿ ಮಾಡಿದ ಪ್ರಕರಣವನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಯತ್ನದ ಮಾಡಿದ್ದ 20 ಜನರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶಿರಸಿ ನಗರದ ಕೆಲವು ಸಂಘಟನೆಯ ಪುಂಡರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಧಾರ್ಮಿಕ ಮತ್ತು ಕೊಮು ಭಾವನೆಗಳಿಗೆ ಧಕ್ಕೆ ತರುವ ಮತ್ತು ಸಮಾಜದ ಶಾಂತಿ ಕದಡುವಂತಹ ಸಂದೇಶಗಳನ್ನು ಹರಿ ಬಿಟ್ಟಿದ್ದರು. ಮಾಹಿತಿ ಆಧಾರದ ಮೇಲೆ ಮುಂಜಾಗ್ರತಾ ಕ್ರಮವಾಗಿ 20 ಜನರನ್ನು ವಶಕ್ಕೆ ಪಡೆದು ಸಿ.ಪಿ.ಐ ಪ್ರದೀಪ್ ಬಿ.ಯು ಹಾಗೂ ಹೊಸ ಮಾರುಕಟ್ಟೆ ಠಾಣೆ ಪಿಎಸ್‍ಐ ನಾಗಪ್ಪ ಮತ್ತು ನಗರ ಠಾಣೆ ಪಿಎಸ್‍ಐ ಶಿವಾನಂದ ನಾವದಗಿ ಅವರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು, ಪ್ರಚೋದನಾಕಾರಿ ಹೇಳಿಕೆ, ಸಂದೇಶ, ವಿಡಿಯೋ ಹರಿಬಿಟ್ಟಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿರಸಿ ಉಪವಿಭಾಗದ ಡಿವೈಎಸ್‍ಪಿ ಗೋಪಾಲ ಕೃಷ್ಣ ನಾಯಕ ಎಚ್ಚರಿಸಿದ್ದಾರೆ.
– ಲಾಂಗ್, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆಗಳಿಂದ ದಾಳಿ
– ದೂರು ನೀಡಿದ ಇನ್ಸ್ ಪೆಕ್ಟರ್ ಕೇಶವಮೂರ್ತಿ
ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರೂ ದೂರುಗಳ ಮೇಲೆ ದೂರು ದಾಖಲಾಗುತ್ತಿದ್ದು, ಡಿಜೆ ಹಳ್ಳಿ ಇನ್ಸ್ ಪೆಕ್ಟರ್ ಕೇಶವಮೂರ್ತಿ ಸೇರಿ ಒಟ್ಟು 12 ಎಫ್‍ಐಆರ್ ದಾಖಲಾಗಿದೆ.
ಇನ್ಸ್ ಪೆಕ್ಟರ್ ಕೇಶವಮೂರ್ತಿಯವರು ತಮ್ಮ ದೂರಿನಲ್ಲಿ ಘಟನೆ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಎಫ್‍ಐಆರ್ ನಲ್ಲಿ ಗಲಭೆ ಕುರಿತು ವಿವರಿಸಲಾಗಿದೆ. ಐಪಿಸಿ ಸೆಕ್ಷನ್ 143, 147, 307, 436, 353, 332, 333, 427, 504, 506, 149, 34 ಅಡಿ ಅಲ್ಲದೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಕರ್ನಾಟಕ ಆಸ್ತಿ, ಪಾಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎನ್.ಎನ್.ಕೇಶವಮೂರ್ತಿ ಈ ಕುರಿತು ವಿವರಿಸಿದ್ದು, ಪೊಲೀಸರನ್ನು ಕೊಲ್ಲಿ, ಬಿಡಬೇಡಿ ಅವರನ್ನು, ಮುಗಿಸಿಬಿಡಿ, ಒಬ್ಬರನ್ನೂ ಬಿಡಬೇಡಿ ಎಂದು ಕಿರುಚುತ್ತಿದ್ದರು. ಐವರು ಆರೋಪಿಗಳು ದೊಂಬಿಗೆ ಪ್ರಚೋದನೆ ನೀಡಿದ್ದು, ತಮ್ಮ ಆಕ್ರೋಶಭರಿತ ಹೇಳಿಕೆಗಳಿಂದ 300ಕ್ಕೂ ಹೆಚ್ಚು ಉದ್ರಿಕ್ತರನ್ನು ಪ್ರಚೋದಿಸುತ್ತಿದ್ದರು ಎಂದು ಅವರು ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಎ1 ಆರೋಪಿ ಅಫ್ನಾನ್, ಎ2 ಆರೋಪಿ ಮುಜಾಮಿಲ್ ಪಾಷಾ, ಎ3 ಸೈಯದ್ ಮಸೂದ್, ಎ4 ಮತ್ತು ಎ5 ಆರೋಪಿ ಅಲ್ಲಾ ಬಕಾಶ್ ಪ್ರಚೋದನೆ ನೀಡಿದ್ದು, ಇವರ ಹಿಂಬಾಲಕರಾದ 200-300 ಜನ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಿನ್ನು ಸಾಯಿಸಬೇಕು, ಠಾಣೆಗೆ ಹಾನಿಯನ್ನುಂಟು ಮಾಡಬೇಕು ಎಂಬ ಉದ್ದೇಶದಿಂದ 300ಕ್ಕೂ ಹೆಚ್ಚು ಜನರ ಅಕ್ರಮ ಕೂಟ ರಚಿಸಿಕೊಂಡು ಮಚ್ಚು, ಲಾಂಗ್, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆ ಗಳನ್ನು ಹಿಡಿದು ಪೊಲೀಸರ ಮೇಲೆ ಪ್ರಹಾರ ಮಾಡಿದ್ದಾರೆ. ಅಲ್ಲದೆ ಅನುಮಾನ ಬಾರದಂತೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸುತ್ತುವರಿದಿದ್ದ ಗ್ಯಾಂಗ್, ಠಾಣೆಯ ಕಿಟಕಿ, ಬಾಗಿಲು ಜಖಂ ಗೊಳಿಸಿ, ಬೇಸ್ ಮೆಂಟ್ ನಲ್ಲಿದ್ದ ವಾಹನಗಳಿಗೆ ಬೆಂಕಿ ಹಾದ್ದಾರೆ.
ಪೊಲೀಸ್ ಠಾಣೆ ಸುತ್ತ 144 ಸೆಕ್ಷನ್ ಹಾಕಲಾಗಿದೆ. ಈ ಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಸೂಚನೆ ನೀಡದರೂ, ಡೋಂಟ್ ಕೇರ್ ಎಂದು ಪೊಲೀಸರು ಮತ್ತು ಠಾಣೆಯನ್ನು ಮುಗಿಸಿ ಬಿಡುತ್ತೇವೆ ಎಂದು ಕೂಗೂತ್ತ ಠಾಣೆ ಹಾಗೂ ನಮ್ಮ ಮೇಲೆ ದಾಳಿ ಮಾಡಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಶ್ರೀಧರ್ ಎಚ್.ಸಿ.ಅವರ ತಲೆಗೆ ಕಲ್ಲು ತಗುಲ್ಲಿದ್ದು, ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಅಧಿಕಾರಿ ಕೂಡಲೇ ಮೇಲಾಧಿಕಾರಿಗೆ ತಿಳಿಸಿ, ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ನಂತರ ಸೇರಿದ್ದ ಗುಂಪನ್ನು ಚದುರಿ ಹೋಗುವಂತೆ ಹಾಗೂ ಶಾಂತಿ ಕಾಪಾಡುವಂತೆ ಹೇಳಿದ್ದಾರೆ. ಆರೋಪಿಗಳು ಅವರ ಮಾತನ್ನು ಕೇಳದೆ ಪೊಲೀಸ್ ಠಾಣೆಯ ಒಳಗೆ ಹಾಗೂ ಹೊರಗೆ ನಿಂತಿದ್ದ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಲಪ್ರಯೋಗ ಮಾಡಬೇಕಾಗುತ್ತದೆ ಎಂದರೂ ಕೇಳದ ಗುಂಪು, ಸಿಎಆರ್ ಪಡೆಯ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ದಾಳಿಗೆ ಮುಂದಾಯಿತು. ಇನ್ಸ್‍ಪೆಕ್ಟರ್ ಆಗಲಿ, ಸಿಬ್ಬಂದಿಯಾಗಲಿ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಾವು ಉದ್ದೇಶಿಸಿದ ಕೆಲಸ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದರು. ತಕ್ಷಣವೇ ಸಿಬ್ಬಂದಿ ಲಾಠಿ ಪ್ರಹಾರ ಮಾಡಿದ್ದು, ಈ ವೇಳೇ ಸಿಬ್ಬಂದಿ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳನ್ನು ತೂರಿದ್ದಾರೆ. ಈ ವೇಳೆ ಅಶ್ರುವಾಯುವನ್ನು ಸಿಡಿಸಲಾಗಿದ್ದು, ಇಷ್ಟಾದರೂ ಆರೋಪಿಗಳು ಪೊಲೀಸರನ್ನು ಮುಗಿಸಿಯೇ ತೀರುತ್ತೇವೆ ಎಂದು ಜೋರಾಗಿ ಅರಚಾಡುತ್ತ, ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಬಳಿ ಇದ್ದ ಶಸ್ತ್ರಾಸ್ತ್ರಗೋಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದರೆ, ಜೀವಕ್ಕೆ ಅಪಾಯವನ್ನುಂಟುಮಾಡಿದರೆ ತೀವ್ರ ಬಲಪ್ರಯೋಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಷ್ಟಾದರೂ ನಿಮ್ಮಿಂದ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಾವು ಉದ್ದೇಶಿಸಿದ ಕೆಲಸವನ್ನು ಮಾಡಿಯೇ ತೀರುತ್ತೇವೆ ಎಂದು ಠಾಣೆಗೆ ನುಗ್ಗಿದ್ದಾರೆ.
ಠಾಣೆಯ ಸಿಬ್ಬಂದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉದ್ರಿಕ್ತರು ಠಾಣೆಯ ಒಳಗೆ ನುಗ್ಗಿದ್ದು, ಸಿಬ್ಬಂದಿಯನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಅಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿ, ಠಾಣೆಯನ್ನು ಸಂಪೂರ್ಣ ಧ್ವಂಸ ಮಾಡಲು ಮುಂದಾಗಿದ್ದಾರೆ. ಆಗ ಅನಿವಾರ್ಯವಾಗಿ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದನ್ನು ಲೆಕ್ಕಿಸದ ಅಫ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್ ಮತ್ತು ಅಲ್ಲಾ ಬಕಾಶ್ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು, ನನ್ನನ್ನು ಹಾಗೂ ಠಾನೆಯ ಸಿಬ್ಬಂದಿಯನ್ನು ಕೊಲ್ಲಲು ಯತ್ನಿಸಿದ್ದಾರೆ.
ಕೊನೆಗೆ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸುತ್ತೇವೆ ಇಲ್ಲಿಂದ ಚದುರಿ ಪ್ರಾಣಾಪಾಯವಾಗಬಹುದೆಂದು ಹೇಳಿದರೂ ಸೇರಿದ್ದ ಜನ ಮಾತು ಕೇಳಲಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದರು. ಆಗ ಮತ್ತೆ ಹಲವು ಸುತ್ತು ಗುಂಡು ಹಾರಿಸಲು ಪ್ರಾರಂಭಿಸಿದೆವು. ಆಗ ಕೆಲವು ಜನರಿಗೆ ತಾಗಿದ್ದರಿಂದ ಸ್ಥಳದಲ್ಲಿದ್ದ ಜನ ದಿಕ್ಕಾಪಾಲಾಗಿದ್ದಾರೆ. ಆಗ ಕೆಳಗೆ ಬಿದ್ದ ಕೆಲ ಜನರಿಗೆ ಗಾಯವಾಗಿದೆ. ಆಗ ನಾನು ಹಾಗೂ ಸಿಬ್ಬಂದಿ ಐವರು ಪ್ರಮುಖ ಆರೋಪಿಗಳನ್ನು ಹಾಗೂ ಅವರೊಂದಿಗಿದ್ದ 10 ಜನರನ್ನು ಘೇರಾವ್ ಮಾಡಿ ವಶಕ್ಕೆ ಪಡೆದೆವು. ಈ ವೇಳೆಯೂ ಐವರು ಪ್ರಮುಖ ಆರೋಪಿಗಳು ತಪ್ಪಿಸಿಕೊಂಡು ಹೋಗಲು ನನ್ನ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು.
ಅಷ್ಟರಲ್ಲಾಗಲೇ ಪೊಲೀಸರ ಸಂಖ್ಯೆ ಹೆಚ್ಚಾಗಿದ್ದರಿಂದ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಆಗ ಈ ಐವರನ್ನು ವಶಕ್ಕೆ ಪಡೆದು ಠಾಣೆಯಲ್ಲಿರಿಸಿದೆವು. ಆಗ ಪರಿಸ್ಥಿತಿ ಹತೋಟಿಗೆ ಬಂದಿತು. ಇದೀಗ ಇವರ ವಿರುದ್ಧ ಸರ್ಕಾರದ ಪರವಾಗಿ ದೂರು ಸಲ್ಲಿಸುತ್ತಿದ್ದೇನೆ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ತನ್ನ ಕ್ಷೇತ್ರದ ಜನರ ಬಳಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ಇಂದು ಪುಂಡರ ಕೃತ್ಯಕ್ಕೆ ಬಲಿಯಾಗಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯನ್ನು ಮಹಜರ್ ಮಾಡಲು ಪೊಲೀಸರು ಆಗಮಿಸಿದ್ದರು. ಜೊತೆಗೆ ಸುಟ್ಟ ವಾಹನಗಳು ಹಾನಿಯಾಗಿರುವ ಸಾರ್ವಜನಿಕ ಆಸ್ತಿಪಾಸ್ತಿಗಳ ವೀಕ್ಷಣೆ ಮಾಡಿದರು. ಈ ವೇಳೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಖಂಡ ಶ್ರೀನಿವಾಸ್ ಅವರು ಮನೆ ನೋಡಲು ಬಂದಿದ್ದರು. ಈ ವೇಳೆ ಹಲವಾರು ಬೆಂಬಲಿಗರು, ಸ್ಥಳೀಯ ನಿವಾಸಿಗಳು ಅವರ ಮನೆಯ ಹತ್ತಿರ ಸೇರಿದ್ದರು.
ಮನೆ ಹತ್ತಿರ ಬಂದ ಶಾಸಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಗಲಭೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ನಷ್ಟವಾಗಿದೆ? ಈ ನಷ್ಟವನ್ನು ತುಂಬುವುದು ಹೇಗೆ ಎಂದು ಶಾಸಕರಿಗೆ ಪ್ರಶ್ನೆ ಕೇಳಿದರು. ಸ್ಥಳೀಯರ ಪ್ರಶ್ನೆಗಳಿಗೆ ಉತ್ತರಿಸಲು ಆಗದ ಶಾಸಕರು ಮೌನಕ್ಕೆ ಶರಣಾದರು. ಜೊತೆಗೆ ಹೆಣಗಳ ಮೇಲೆ ರಾಜಕೀಯ ಮಾಡುವುದನ್ನು ಬಿಡಿ. ಗಾಂಜಾ ಹೊಡೆದು ದುಷ್ಕೃತ್ಯ ಎಸಗಿದ್ದಾರೆ. ಬೈಕ್ ನಲ್ಲಿ ಕೂತು ಹಣ ಹಂಚಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಸ್ತಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರ ಮಾತುಗಳನ್ನು ಕೇಳಿಸಿಕೊಂಡು ಮೌನವಾಗಿದ್ದ ಶ್ರೀನಿವಾಸ್ ಅವರು, ನಂತರ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹಿರಂಗವಾಗಿ ಜನರಲ್ಲಿ ಕ್ಷಮೆಯಾಚಿಸಿದರು. ಆಗ ಸ್ಥಳೀಯರು ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೀವೇ ನಿಂತು ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದರು. ಇದೇ ವೇಳೆ ಶಾಸಕರ ಮನೆ ಸುತ್ತಮುತ್ತ ಜನರು ಜಾಮಾಹಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಜಾರ್ಚ್ ಮಾಡಿದರು.
ತುಮಕೂರು: ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ ಮಾಡಬೇಕು ಎಂಬ ಕಾನೂನನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ಕರ್ನಾಟಕದಲ್ಲಿ ಅದು ಜಾರಿ ಆಗಿರಲಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಸ್ತಿ ಮುಟ್ಟುಗೋಲು ಆಗುವಂತಹ ಪ್ರಕರಣಗಳು ಇನ್ನೂ ಆಗಿರಲಿಲ್ಲ. ಹೀಗಾಗಿ ಆ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿ ಆಗಿರಲಿಲ್ಲ. ಡಿಜೆ ಹಳ್ಳಿ ಪ್ರಕರಣದಲ್ಲಿ ಗಲಭೆಕೋರರಿಂದ ಆಸ್ತಿ ನಷ್ಟ ವಸೂಲಿ ಮಾಡುವ ಬಗ್ಗೆ ಸಿಎಂ ಬಳಿ ಚರ್ಚಿಸಬೇಕಾಗಿದೆ. ಸಿಎಂ ಕ್ವಾರಂಟೆನ್ ನಲ್ಲಿದ್ದಾರೆ. ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ನಿಷೇಧದ ಕುರಿತು ಮಾತನಾಡಿದ ಅವರು, ಕಾನೂನಿನ ಕ್ರಮ ಏನಿದೆಯೋ ಅದನ್ನು ಖಂಡಿತ ಜಾರಿ ಮಾಡುತ್ತೇವೆ. ಆದರೆ ತನಿಖಾ ವರದಿ ಬರದೇ ಪ್ರತಿಕ್ರಿಯಸಲು ಸಾಧ್ಯವಿಲ್ಲ. ಮೂರು ಸಾವಿರ ಜನ ಸೇರ್ತಾರೆ ಅಂದ್ರೆ ಪ್ರಚೋದನೆ ಇಲ್ಲದೆ, ಪ್ಲಾನ್ ಇಲ್ಲದೆ, ಸಂಘಟನೆ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.