Tag: ಬೆಂಗಳೂರು ಗಲಭೆ

  • ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ಬೆಂಗಳೂರು: ಆರೋಪಿ ನವೀನ್‌ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

    ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ನವೀನ್‌ ವಿರುದ್ಧ ಫಿರ್ದೋಸ್‌ ಪಾಶಾ ನೀಡಿದ್ದರು. ಆದರೆ ಈಗ ತನ್ನ ಸ್ಕೂಟರ್‌ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ 1981 ಮತ್ತು ಐಪಿಸಿ ಸೆಕ್ಷನ್‌ 143, 145, 144, 147, 148, 149, 435 ಅಡಿ ಪ್ರಕರಣ ದಾಖಲಾಗಿದೆ. 75 ಸಾವಿರ ರೂ. ಮೌಲ್ಯ ನಷ್ಟವಾಗಿದೆ ಎಂದು ಫಿರ್ದೋಶ್‌ ಪಾಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    ದೂರಿನಲ್ಲಿ ಏನಿದೆ?
    ಆಗಸ್ಟ್‌ 11 ರ ಸಂಜೆ 7:30ಕ್ಕೆ ನಾನು ನನ್ನ ಹೊಂಡಾ ಆಕ್ವೀವಾವನ್ನು ಡಿಜೆ ಹಳ್ಳಿ ಠಾಣೆಯಲ್ಲಿ ನಿಲ್ಲಿಸಿ ದೂರು ನೀಡಲು ಬಂದಿದ್ದೆ. ಈ ವೇಳೆ ಸುಮಾರು ಜನ ಠಾಣೆಯ ಒಳಗಡೆ ಬಂದು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನಗೆ ನನ್ನ ಆಕ್ಟೀವಾವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ರಾತ್ರಿ 9 ಗಂಟೆಗೆ ಜಮಾಯಿಸಿದ ಜನ ನನ್ನ ಸ್ಕೂಟರ್‌ ಅನ್ನು ಸುಟ್ಟು ಹಾಕಿದ್ದಾರೆ. ಗಲಭೆಯಾದ ದಿನದಂದು 144 ಸೆಕ್ಷನ್‌ ಜಾರಿಯಾದ ಕಾರಣ ನನಗೆ ಆ ದಿನವೇ ದೂರು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈ ದಿನ ದೂರು ನೀಡುತ್ತಿದ್ದೇನೆ. ನನ್ನ ಸ್ಕೂಟರನ್ನು ಸುಟ್ಟು ಹಾಕಿ ನಾಶ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

    ಎಫ್‌ಬಿ ಪೋಸ್ಟ್‌ ನೆಪ?
    ನವೀನ್‌ ವಿರುದ್ಧವೇ ದೂರು ನೀಡಿದ ಫಿರ್ದೋಸ್ ಪಾಶಾ ಅವರೇ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು ಈ ಪ್ರಕರಣ ಮತ್ತಷ್ಟು ಟ್ವಿಸ್ಟ್‌ ಸಿಕ್ಕಿ ಹಲವು ಪ್ರಶ್ನೆಗಳು ಎದ್ದಿದೆ. ದೂರು ಕೊಟ್ಟವರು ಹಾಗೂ ಗಲಾಟೆ ಮಾಡಿದವರಿಗೂ ಸಂಬಂಧ ಇಲ್ಲವೇ? ನವೀನ್ ಪೋಸ್ಟ್‌ಗೂ ಗಲಾಟೆಗೂ ಸಂಬಂಧವೆ ಇಲ್ಲವೇ? ಫೇಸ್‌ಬುಕ್‌ ಪೋಸ್ಟ್‌ ಎಂಬುದು ನೆಪ ಮಾತ್ರವೇ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

  • ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ಕೆ ಕಮೆಂಟ್ ಮಾಡಿದ್ದೆ: ನವೀನ್

    ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ಕೆ ಕಮೆಂಟ್ ಮಾಡಿದ್ದೆ: ನವೀನ್

    – ಬೇಕೂ ಅಂತ ಯಾವುದೇ ಪೋಸ್ಟ್ ಮಾಡಿಲ್ಲ, ಕೇವಲ ಕಮೆಂಟ್ ಮಾಡಿದ್ದೇನೆ

    ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಳಿಯ ನವೀನ್ ಫೆಸ್ಬುಕ್ ಪೋಸ್ಟ್‍ನಿಂದಲೇ ಗಲಾಟೆಯಾಯಿತು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ನಾನು ಬೇಕೂ ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ. ಅವರು ಮಾಡಿದ್ದ ಪೋಸ್ಟ್‍ಗೆ ಕಮೆಂಟ್ ಮಾಡಿದ್ದೆ ಅಷ್ಟೆ ಎಂದು ವಿಚಾರಣೆ ವೇಳೆ ಆರೋಪಿ ನವೀನ್ ತಿಳಿಸಿದ್ದಾನೆ.

    ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕುರಿತು ನವೀನ್ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ನಾನು ಬೇಕು ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ, ಅವರು ಮಾಡಿದ್ದ ಪೋಸ್ಟ್ ಗೆ ಕಮೆಂಟ್ ಮಾಡಿದ್ದೇನೆ ಅಷ್ಟೆ. ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕಮೆಂಟ್ ಅಷ್ಟೇ ಮಾಡಿದ್ದೆ ಎಂದು ತನ್ನ ಪೋಸ್ಟ್ ಬಗ್ಗೆ ಆರೋಪಿ ಸ್ಪಷ್ಟನೆ ನೀಡಿದ್ದಾನೆ.

    ಪೋಸ್ಟ್ ಮಾಡಿದ ಬಳಿಕ ಅಖಂಡ ಶ್ರೀನಿವಾಸ್ ಡಿಲೀಟ್ ಮಾಡುವಂತೆ ತಿಳಿಸಿದರು. ಬಳಿಕ ನಾನು ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದೆ. ಗಲಭೆಯ ಮಾಸ್ಟರ್ ಮೈಂಡ್ ಪೈರೋಜ್ ಖಾನ್ ಒಂದು ಪೋಸ್ಟ್ ಮಾಡಿದ್ದ, ಇದಕ್ಕೆ ಉತ್ತರವಾಗಿ ಕಮೆಂಟ್ ಮಾಡಿದ್ದೆ. ಕಮೆಂಟ್ ಮಾಡೋ ಸಲುವಾಗಿ ಗೂಗಲ್ ನಲ್ಲಿ ಇಮೇಜ್ ಹುಡುಕಿದ್ದೆ. ಬಳಿಕ ಒಂದು ಇಮೇಜ್ ತೆಗೆದು ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ನವೀನ್ ತಿಳಿಸಿದ್ದಾನೆ.

    ಪಾದರಾಯನಪುರ ಪುಂಡರ ಗಲಭೆ, ಸಿಎಎ ಮತ್ತು ಎನ್‍ಆರ್‍ಸಿ ಪ್ರತಿಭಟನೆ ವೇಳೆಯು ಕಮೆಂಟ್ ಮಾಡಿದ್ದೆ. ಬೇರೆಯವರ ಪೋಸ್ಟ್ ಸಲುವಾಗಿಯಷ್ಟೇ ನಾನು ಕಮೆಂಟ್ ಮಾಡಿದ್ದೇನೆ. ನಾನಾಗಿ ಯಾವುದೇ ಪೋಸ್ಟ್ ಮಾಡಿಲ್ಲ. ರಾಮ ಜನ್ಮಭೂಮಿ ಶಿಲಾನ್ಯಾಸದ ವೇಳೆ ಏರಿಯಾದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದ್ದೆ. ಈ ವೇಳೆ ಅಪರಿಚಿತ ನಂಬರ್ ಗಳಿಂದ ನನಗೆ ಬೆದರಿಕೆ ಕರೆಗಳು ಬಂದಿದ್ದವು. ದುಷ್ಕರ್ಮಿಗಳು ಫೋನ್ ಮಾಡಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

    ಬೆದರಿಕೆ ಕರೆಗಳಿಗೆ ಜಗ್ಗದೆ ನನ್ನ ಕೆಲಸ ಮುಂದುವರೆಸಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಹಿಂದಿನ ಘಟನೆಗಳ ಬಗ್ಗೆ ಆರೋಪಿ ನವೀನ್ ಬಾಯ್ಬಿಟ್ಟಿದ್ದಾನೆ. ನವೀನ್ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  • ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    – ಕೆಜಿ ಹಳ್ಳಿ ಪುಂಡರಿಗೆ ಕೇರಳವೇ ಅಡುಗುದಾಣ

    ಬೆಂಗಳೂರು: ಇದು ಕೆಜಿ ಹಳ್ಳಿ ಟು ಕೇರಳ ಸ್ಟೋರಿ. ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್ ಪತ್ತೆಯಾಗಿದ್ದು, ಸಿಸಿಪಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ಮಾಡಿದ ಪುಂಡರು ಅಂತಾರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು, ಡಿಜೆ ಹಳ್ಳಿಯ ಪುಂಡರಿಗೆ ಕೇರಳ ರಾಜ್ಯವೇ ಅಡಗುತಾಣವಾಗಿದೆಯಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

    ಮಂಗಳವಾರ ಗಲಾಟೆ ಮಾಡಿ ಊರು ಬಿಟ್ಟಿರುವ 30 ಕ್ಕೂ ಹೆಚ್ಚು ಲೋಕಲ್ ಪುಂಡರು ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂಧನವಾಗಿರುವ ಆರೋಪಿಗಳ ಮಾಹಿತಿ ಮತ್ತು ಕಾಲ್ ಡಂಪ್ ಲೊಕೇಶನ್ ನಲ್ಲಿ ಈ ಮಾಹಿತಿ ಬಟಾಬಲಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸಿಸಿಬಿ ತಂಡ ಕೇರಳದಲ್ಲಿ ಹಂಟಿಂಗ್ ಶುರು ಮಾಡಿದೆ. ಹೆಚ್ಚಿನ ಮಾಹಿತಿ ಕಲೆಹಾಕಿ ಪುಂಡರಿಗಾಗಿ ಬಲೆ ಬೀಸಿದೆ.

    ಕೃತ್ಯದ ರುವಾರಿಗಳಾದ ಉಬೇರ್, ಮುದಾಸಿರ್ ಸೇರಿದಂತೆ 30ಕ್ಕೂ ಹೆಚ್ಚು ಜನರಗೆ ಕೇರಳ ಅಡಗುತಾಣವಾಗಿದೆ. ಕೇರಳವೇ ಸುರಕ್ಷಿತ ಸ್ಥಳ ಎಂದು ಭಾವಿಸಿದ ಪುಂಡರು, ಪ್ಲಾನ್ ಮಾಡಿ ಅಲ್ಲಿಗೆ ಪರಾರಿಯಾಗಿದ್ದಾರೆ.

  • ಬೆಂಗಳೂರು ಗಲಭೆ ಕೇಸ್- ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಅರೆಸ್ಟ್

    ಬೆಂಗಳೂರು ಗಲಭೆ ಕೇಸ್- ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಅರೆಸ್ಟ್

    -ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ವಾಜಿದ್ ಪಾಷಾ

    ಬೆಂಗಳೂರು: ಕೆ.ಜಿ ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ.ವಾಜಿದ್ ಪಾಷಾ ಬಂಧನವಾಗಿದೆ. ಬಂಧಿತ ವಾಜಿದ್ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಬಂಧಿತ ವಾಜಿದ್ ಕೆಲ ದಿನಗಳ ಹಿಂದೆ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದನು. ಪೋಸ್ಟ್ ಸಂಬಂಧ ಶಾಸಕರ ಬೆಂಬಲಿಗರು ದೂರು ನೀಡಿದ್ದರು. ನಂತರ ಪೊಲೀಸರು ಇಬ್ಬರ ನಡುವೆ ರಾಜಿ ಮಾಡಿಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಇನ್ನು ಗಲಭೆ ನಡೆದ ದಿನ ನವೀನ್ ವಿರುದ್ಧ ದೂರು ನೀಡಿದ ಗುಂಪಿನಲ್ಲಿಯೂ ವಾಜಿದ್ ಹಾಜರಾಗಿದ್ದನು.

    ನವೀನ್ ಅರೆಸ್ಟ್ ಮಾಡಲು ಪೊಲೀಸರು ಎರಡು ಗಂಟೆ ಕಾಲ ಸಮಯ ಕೇಳುತ್ತಿದ್ದಾರೆ. ಅದ್ರೆ ಎರಡು ಗಂಟೆಗಳ ಕಾಲ ಯಾಕೆ ಬೇಕು ಎಂದು ಪೊಲೀಸರ ವಿರುದ್ಧ ವಾಜಿದ್ ಕೂಗಾಡಿದ್ದನು. ಅಸಲಿಗೆ ದೂರು ನೀಡಿದ ನಂತ್ರ ಪರಿಶೀಲನೆ ಮಾಡಿ ಎಫ್‍ಐಆರ್ ದಾಖಲು ಮಾಡಲಿಕ್ಕೆ ಎರಡು ಗಂಟೆಗಳ ಕಾಲ ಬೇಕು. ಎಫ್‍ಐಆರ್ ಇಲ್ಲದೆ ಅರೋಪಿ ಅರೆಸ್ಟ್ ಮಾಡುವುದು ಕಾನೂನು ಬಾಹಿರ. ಈ ಎಲ್ಲಾ ಅಂಶ ಗಮನದಲ್ಲಿಟ್ಟು ಪೊಲೀಸರು ಎರಡು ಗಂಟೆಗಳ ಕಾಲ ಸಮಯ ಕೇಳಿದ್ದರು. ನಮ್ಮನಾಗಿದ್ರೆ ಐದು ಸೆಕೆಂಡ್ ನಲ್ಲಿ ಅರೆಸ್ಟ್ ಮಾಡ್ತಾರೆ ಎಂದು ವಾಜಿದ್ ಕೂಗಾಡಿದ್ದನು.

    ವಾಜಿದ್ ಅಣತಿಯಂತೆ ಠಾಣೆಗೆ ಆಗಮಿಸಿದ್ದ ಆತನ ಹಿಂಬಾಲಕರು ಪೊಲೀಸ್ ಸ್ಟೇಶನ್ ಧ್ವಂಸ ಮಾಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ವಾಜಿದ್ ಬಂಧನದಿಂದ ಆತನ ಹಿಂಬಾಲಕರಲ್ಲಿಯೂ ನಡುಕ ಶುರುವಾಗಿದೆ.

  • ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಚಿಕ್ಕಮಗಳೂರು: ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಅವರೇ ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ರೆ ನಟರು ಯಾರೆಂದು ಗೊತ್ತೇ ಗೊತ್ತಿರುತ್ತೆ ಅದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಮೀರ್ ಅಹಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಮೀರ್ ಅಹಮದ್ ಗೋಲಿಬಾರ್ ನಲ್ಲಿ ಮೃತರಾದವರ ಮನೆಗೆ ಹೋಗಿ ಚೆಕ್ ನೀಡಿ ಬಂದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು ಎಂದು ಕಿಡಿಕಾರಿದ್ದಾರೆ. ಈಗ ಜಮೀರ್ ಅಹಮದ್ ಎಲ್ಲ ಜಿಪಿಎ ತೆಗೆದುಕೊಂಡಿರುವುದರಿಂದ ಏನ್ ನಷ್ಟ ಆಗಿದೆ ಅದನ್ನು ಜಮೀರ್ ಅಹಮದ್‍ರಿಂದ ವಸೂಲಿ ಕ್ರಮ ತೆಗೆದುಕೊಳ್ಳೋಣ ಎಂದರು.

    ನೀವು ಸಹಾಯ ಮಾಡುವುದು ಮಾನವೀಯ ಧರ್ಮ ಇರಬಹುದು. ಯಾವ ಸಂದರ್ಭದಲ್ಲಿ ಸಹಾಯ ಮಾಡ್ತಿದ್ದೀರಾ, ಯಾರಿಗೆ ಸಹಾಯ ಮಾಡ್ತಿದ್ದೀರಾ ಎಂಬುದು ಮುಖ್ಯವಾಗುತ್ತೆ. ಅದು ಕೊಡುವ ಮೆಸೇಜ್ ಮಾನವೀಯ ಮೆಸೇಜ್ ಕೊಡುವುದಿಲ್ಲ. ಯಾರು ಏನೇ ಮಾಡಿದರು, ನಾನು ನಿಮ್ಮ ಜೊತೆ ಇದ್ದೀನಿ ಎಂಬ ಮೇಸೆಜ್ ಕೊಡುತ್ತೆ. ಇದರ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದರು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರು ಜೈಲಿನಿಂದ ಬಂದರೆ ಅವರಿಗೆ ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಅವರಿಗೆ ಪ್ರಚೋದಿಸುವ ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ ಎಂದರು.

    ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರೋರು. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಆ ವಾಹನ ಸುಟ್ಟವರು ಯಾರು ಹೇಳಲಿ ಹಾಗಾದರೆ. ಇವರು ಅಮಾಯಕರಾದರೆ ಆ ಕಿರಾತಕರು ಯಾರು. ಜಮೀರ್ ಅಹಮದ್ ಖಾನ್‍ಗೆ ಚೆನ್ನಾಗಿ ಗೊತ್ತಿರುತ್ತೆ ಎಂದಿದ್ದಾರೆ. ನಷ್ಟ ವಸೂಲಿ ಕೆಲಸ ಆಗಲೇಬೇಕು. ಈಗಿನ ಕಾಂಗ್ರೆಸ್ ಒಳ ರಾಜಕಾರಣ ನೋಡಿದರೆ ಅವರು ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದರು.

    ಬೆಂಗಳೂರು ಗಲಭೆಯನ್ನು ಲೀಡ್ ಮಾಡಿರೋದು ಎಸ್.ಡಿ.ಪಿ.ಐ. ಅದರಲ್ಲಿ ನಟನೆ ಮಾಡಿ 300ಕ್ಕೂ ಹೆಚ್ಚು ವಾಹನ ಸುಟ್ಟಿರೋರು ಈ ಜನ. ಅವರಿಗೆ ಗೊತ್ತಿರುತ್ತೆ ಸ್ಪಷ್ಟಪಡಿಸಲಿ ಎಂದಿದ್ದಾರೆ. ನಾನು ಆರಂಭದಿಂದ ಹೇಳಿದ್ದೇನೆ. ಕಾಂಗ್ರೆಸ್ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟೋ ಕೆಲಸ ಮಾಡುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವುದು ಅದನ್ನೇ ಎಂದು ಕಾಂಗ್ರೆಸ್ ಹಾಗೂ ಜಮೀರ್ ಅಹಮದ್ ವಿರುದ್ಧ ಕಿಡಿಕಾರಿದ್ದಾರೆ.

  • ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವಾಡ್ತಿದೆ: ಸಿ.ಸಿ ಪಾಟೀಲ್

    ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವಾಡ್ತಿದೆ: ಸಿ.ಸಿ ಪಾಟೀಲ್

    – ಜಮೀರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ

    ಗದಗ: ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವಾಡುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸುವ ಹಾಗೂ ಬೆಂಗಳೂರು ಗಲಬೇ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ರೈತರಿಗೆ ಸ್ವಯಂ ಅಧಿಕಾರ ಸರ್ಕಾರ ಕೊಟ್ಟಿದೆ. ಯಾರು ಬೇಕಾದರೂ, ಎಲ್ಲಿಬೇಕಾದ್ರೂ ಭೂಮಿ ಕೊಂಡುಕೊಳ್ಳಬಹುದು. ಇದು ರೈತರಿಗೆ ಮರಣ ಶಾಸನ ಅಲ್ಲಾ ರೈತನಿಗೆ ಕೊಟ್ಟ ಸರ್ಕಾರ ವಿಶೇಷ ಅಧಿಕಾರ ಎಂದರು.

    ಕಾಂಗ್ರೆಸ್ಸಿನವರಿಗೆ ಹೇಳೊಕೆ ಬೇರೆನು ಕೆಲಸ, ಮಾತಿಲ್ಲ. ಭೂಸುಧಾರಣಾ ಬಗ್ಗೆ ಮಾತನಾಡುವವರು ಕೆಜಿ ಹಳ್ಳಿ, ಜೆಡಿ ಹಳ್ಳಿ ಪ್ರಕರಣ ಹೇಳಲಿ? ಅದನ್ನು ಬಿಡ್ತಾರೆ ಗಲಭೆ ಮುಚ್ಚಿಕೊಳ್ಳಲು ಯಾವುದಕ್ಕಾದ್ರೂ ಹೋಗ್ತಾರೆ. ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡಲು ಅವರಿಂದಲೇ ಆಗ್ತಿಲ್ಲ. ಕಾಂಗ್ರೆಸ್ ಶಾಸಕನಿಗೆ ಸಾಂತ್ವನ ಹೇಳಲು ಎಷ್ಟು ಅವರ ನಾಯಕರು, ಎಷ್ಟು ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಹೇಳಲಿ ಅಂತ ಕಾಂಗ್ರೆಸ್ ನಾಯಕರಿಗೆ ಸಚಿವ ಸಿ.ಸಿ ಪಾಟೀಲ್ ಸವಾಲು ಹಾಕಿದರು.

    ಶಾಸಕ ಜಮೀರ್ ಅಹ್ಮದ್ ಗಲಭೆಕೊರರನ್ನು ಪ್ರೋತ್ಸಾಹಿಸಿದ್ದಕ್ಕೆ ಏಕವಚನದಲ್ಲಿ ನಿಂದಿಸಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಜೈಲಿನಿಂದ ಬಂದವರಿಗೆ ಜಮೀರ್ ಅಹ್ಮದ್ ಸನ್ಮಾನ ಮಾಡಿದ. ಈಗ ಗಲಭೆಯಲ್ಲಿ ಮೃತರಿಗೆ ಪರಿಹಾರ ನೀಡಲು ಮುಂದಾದ. ಅವರೇನು ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಡಿದ್ರಾ? ಯಡಿಯೂರಪ್ಪ ಮುಖ್ಯಮಂತ್ರಿಯಾದ್ರೆ ಮನೆಮುಂದೆ ವಾಚ್‍ಮೆನ್ ಆಗ್ತೀನಿ ಅಂದಿದ್ದ ಜಮೀರ್ ನಾಲಿಗೆಗೆ ಇತಿ-ಮಿತಿ ಇರಬೇಕು. ಪರಿಹಾರ ಅವರ ಹಣ ಅವರು ಕೊಡಲಿ, ಆದ್ರೆ ಯಾವ ಹೋರಾಟದ ಕೆಲಸಕ್ಕೆ ಕೊಟ್ಟ ಅಂತ ಹೇಳಲಿ ಎಂದು ಜಮೀರ್ ಅಹ್ಮದ್ ಗೆ ಪ್ರಶ್ನೆ ಮಾಡಿದರು.

    ಹಿಂದೂ ದೇವಾಲಯ ರಕ್ಷಣೆ ಮಾಡಿದ್ರು ಅಂತಾರೆ. ಯಾರಿಂದ ರಕ್ಷಣೆ ಆಯಿತು? ನಾಟಕವಾಡಲು ಒಂದು ಇತಿ-ಮಿತಿ ಇರಬೇಕು. ಜಮೀರ್ ನಾಟಕ ಎಂಬುದು ಮಾಧ್ಯಮಗಳಿಗೂ ಗೊತ್ತು, ನಂಗೂ ಗೊತ್ತು, ಎಲ್ಲಾ ಜನ್ರಿಗೂ ಗೊತ್ತಿದೆ ಎಂದು ಕಿಡಿಕಾರಿದರು.

  • ಬೆಂಗ್ಳೂರು ಗಲಭೆಕೋರರು ಪಾತಾಳದಲ್ಲಿ ಅಡಗಿದ್ರೂ ಬಿಡೋದಿಲ್ಲ: ಸುಧಾಕರ್

    ಬೆಂಗ್ಳೂರು ಗಲಭೆಕೋರರು ಪಾತಾಳದಲ್ಲಿ ಅಡಗಿದ್ರೂ ಬಿಡೋದಿಲ್ಲ: ಸುಧಾಕರ್

    – ಎಸ್‍ಡಿಪಿಐ ಸಂಘಟನೆ ಬ್ಯಾನ್ ಆಗಬೇಕು

    ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಕಾರಣಕರ್ತರಾದ ಗಲಭೆಕೋರರು ಪಾತಾಳದಲ್ಲಿ ಅಡಗಿದ್ದರೂ ಅವರನ್ನ ಬಿಡೋದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಗಲಭೆಕೋರರನ್ನು ಹಿಡಿಯುವ ಸಾಮರ್ಥ್ಯ ಸರ್ಕಾರಕ್ಕಿದ್ದು, ಸಮಾಜಘಾತುಕರನ್ನ ಸೆರೆಹಿಡಿಬೇಕೆಂಬ ಚೈತನ್ಯ ನಮ್ಮ ಪೊಲೀಸರಿಗಿದೆ ಎಂದರು. ಇದೇ ವೇಳೆ ಎಸ್‍ಡಿಪಿಐ ಸಂಘಟನೆ ಕ್ರೌರ್ಯ ಹಾಗೂ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು. ಇಂತಹ ಸಮಾಜಘಾತುಕ ಎಸ್‍ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು ಎಂದು ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. ಇದನ್ನೂ ಓದಿ: ಗಲಭೆ ನಿಯಂತ್ರಿಸಲು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ: ಡಿಕೆಶಿ

    ಕೊರೊನಾ ಸಂಬಂಧ ಪ್ರತಿಕ್ರಿಯಿಸಿ, ವೈಜ್ಞಾನಿಕವಾಗಿ ರಾಜ್ಯದಲ್ಲಿ ಇನ್ನೂ ಕೆಲ ವಾರಗಳು ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದ್ದು, ತದನಂತರ ಕಡಿಮೆಯಾಗಲಿದೆ. ಬೇರೆ ದೇಶಗಳಂತೆ ನಮ್ಮ ದೇಶದಲ್ಲಿ ಕಡಿಮೆ ಆಗಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಿದ್ದು, ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೇ1.7 ರಷ್ಟಿದೆ ಎಂದರು.

    ಡಿಸೆಂಬರ್ ಹಾಗೂ ಜನವರಿಯೊಳಗೆ ಕೊರೊನಾ ವೈರಸ್ ಕಡಿವಾಣಕ್ಕೆ ಲಸಿಕೆ ಸಿಗುವ ವಿಶ್ವಾಸದ ನೀರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದರು. ಇದನ್ನೂ ಓದಿ:ಯಾರನ್ನೂ ಬ್ಲಾಕ್‍ಮೇಲ್ ಮಾಡೋ ಪ್ರಶ್ನೆ ಇಲ್ಲ- ಡಿಕೆಶಿಗೆ ಬೊಮ್ಮಾಯಿ ತಿರುಗೇಟು

  • ನವೀನ್ ತಲೆಗೆ 51 ಲಕ್ಷ ಘೋಷಿಸಿದ್ದ ಮುಸ್ಲಿಂ ನಾಯಕ ಅರೆಸ್ಟ್

    ನವೀನ್ ತಲೆಗೆ 51 ಲಕ್ಷ ಘೋಷಿಸಿದ್ದ ಮುಸ್ಲಿಂ ನಾಯಕ ಅರೆಸ್ಟ್

    ಲಕ್ನೋ: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದ ಮುಸ್ಲಿಂ ನಾಯಕನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಶಹಜೀಬ್ ರಿಜ್ವಿ ಸಮಾಜವಾದಿ ಪಕ್ಷದ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿದ್ದು, ಈತನನ್ನು ಮೀರತ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಮೀರತ್ ನ ಫಲ್ವಾಡಾ ಪಟ್ಟಣದ ರಸೂಲ್‍ಪುರ ಗ್ರಾಮದ ನಿವಾಸಿಯಾಗಿರುವ ರಿಜ್ವಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದನು. ವಿಡಿಯೋದಲ್ಲಿ ಆತ, ಫೇಸ್‍ಬುಕ್ ನಲ್ಲಿ ಸಮುದಾಯದ ಬಗ್ಗೆ ಬರೆದುಕೊಂಡಿರುವ ನವೀನ್ ತಲೆಯನ್ನು ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದನು. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ರಿಜ್ವಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ.

    ಕಾಂಗ್ರೆಸ್ ಶಾಸಕರ ಸಂಬಂಧಿಯ ಪೋಸ್ಟ್ ನಿಂದಾಗಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಅದಕ್ಕೆ ಪ್ರತಿಯಾಗಿ ಆತನ ತಲೆ ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಿಸಿದ್ದನು. ಈ ಸಂಬಂಧ ನನ್ನನ್ನು ಬೆಂಬಲಿಸುವವರು ಹಣ ಸಂಗ್ರಹಿಸಿ ಕೊಡಿ ಎಂದು ಕೂಡ ರಿಜ್ವಿ ವಿಡಿಯೋದಲ್ಲಿ ಹೇಳಿದ್ದಾನೆ. ಸದ್ಯ ರಿಜ್ವಿಯನ್ನು ಬಂಧಿಸಿರುವ ಮಾಹಿತಿ ನಿಡಿದ ಮೀರತ್ ನ ಪೊಲೀಸ್ ವರಿಷ್ಠಾಧಿಕಾರಿ, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153(ಎ)(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ) ಹಾಗೂ 505(2) (ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಈ ಹಿಂದೆ ಸಮಾಜವಾದಿ ಪಕ್ಷದ ನಾಯಕನಾಗಿದ್ದ ರಿಜ್ವಿ, ಈಗ ರಾಜಕಾರಣದಿಂದ ದೂರ ಉಳಿದಿದ್ದಾನೆ. ಸಮಾಜವಾದಿ ಪಕ್ಷದ ಅಲ್ಪಸಂಖ್ಯಾತ ಘಟಕದ ಉತ್ತರಪ್ರದೇಶ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದನು. ಪಕ್ಷ ತೊರೆದ ಬಳಿಕ ಆತ ತಾನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ವಿಡಿಯೋ: ನವೀನ್ ತಲೆ ತಂದವ್ರಿಗೆ 51 ಲಕ್ಷ ಕೊಡ್ತೀನಿ- ಮುಸ್ಲಿಂ ನಾಯಕ ಘೋಷಣೆ

  • ಗಲಭೆ ನಿಯಂತ್ರಿಸಲು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ: ಡಿಕೆಶಿ

    ಗಲಭೆ ನಿಯಂತ್ರಿಸಲು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ: ಡಿಕೆಶಿ

    – ನಮ್ಮ ಪಾಲಿಕೆ ಸದಸ್ಯರನ್ನು ಹೆದರಿಸೋ ಕೆಲಸ ನಡೀತಿದೆ
    – ಅಖಂಡ ಮೇಲೆ ಬಿಜೆಪಿ ಒತ್ತಡ ಹಾಕ್ತಿದೆ

    ಬೆಂಗಳೂರು: ಸಿಲಿಕಾನ್ ಸಿಟಿಯ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆ ನಿಯಂತ್ರಣ ಮಾಡುವಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ನಗರದ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಕೆಂಡಾಮಂಡಲರಾದರು. ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ಶೃಂಗೇರಿ ಘಟನೆ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಕಾವಲ್ ಬೈರಸಂದ್ರದಲ್ಲೂ ಏನ್ಮಾಡ್ತಿದ್ದಾರೆ. ಗೃಹ ಸಚಿವರ ಪ್ರತಿಯೊಂದು ಹೇಳಿಕೆಯನ್ನೂ ಗಮನಿಸುತ್ತಿದ್ದೇವೆ ಎಂದರು.

    ನಮ್ಮ ಪಾಲಿಕೆ ಸದಸ್ಯರಿಗೆ ನೋಟಿಸ್ ಕೊಟ್ಟು ಹೆದರಿಸುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲ ನಾವು ಹೆದರೋದಿಲ್ಲ. ನಮ್ಮ ಶಾಸಕರ ಬೆಂಬಲಕ್ಕೆ ನಾವಿದ್ದೇವೆ. ನಮ್ಮವರನ್ನು ಹೆದರಿಸಿ ಕೇಸ್ ಮುಚ್ಚೋಕೆ ನಾವು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.

    ಗಲಭೆಗೆ ಕಾಂಗ್ರೆಸ್ಸಿನಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಗಲಭೆಗೆ ಕಾರಣ ಎಂಬ ಬೊಮ್ಮಾಯಿ ಹೇಳಿಕೆಗೆ ಕಿಡಿಕಾರಿದ ಡಿಕೆಶಿ, ಆ ಮಾತು ಹೇಳಲು ಬೊಮ್ಮಾಯಿ ಯಾರು?, ಅಥಾರಿಟೀನಾ?, ಸಬ್ ಇನ್ಸ್‍ಪೆಕ್ಟರಾ? ಅಥವಾ ಆಯೋಗನಾ?. ನಮ್ಮ ಕಾರ್ಪೊರೇಟರ್ ಗಳಿಗೆ ನೋಟಿಸ್ ಕೊಟ್ಟು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಏನ್ ನಡೀತಿದೆ ಇಲ್ಲಿ?, ನಾವೇನು ಸುಮ್ನೆ ಕೂತಿದ್ದೀವಾ?, ಅವರ ಕಾರ್ಯಕರ್ತ ಟ್ವೀಟ್ ಮಾಡಿದ್ದೇ ಗಲಭೆಗೆ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ: ಡಿಕೆಶಿ 

    ಗಲಭೆ ನಿಯಂತ್ರಣ ಮಾಡಲು ಹೋಮ್ ಮಿನಿಸ್ಟರ್ ಕಂಪ್ಲೀಟ್ ವಿಫಲರಾಗಿದ್ದಾರೆ. ಮೂರು ಗಂಟೆ ಅವಧಿಯಲ್ಲಿ ಗಲಭೆ ನಿಯಂತ್ರಿಸಲಿಲ್ಲ. ಗಲಾಟೆ ಮಾಡಲು ಬಿಟ್ಬಿಟ್ಟು ಈಗ ಜಾತಿ ಬಣ್ಣ ಬಳಿಯುತ್ತಿದ್ದಾರೆ. ಅಖಂಡ ನಮ್ಮ ಶಾಸಕ. ನಮ್ಮ ಶಾಸಕ ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ. ನಮ್ಮ ಶಾಸಕನ ಮನೆ ಮೇಲಿನ ದಾಳಿಯನ್ನ ನಾವು ಕಟುವಾಗಿ ಖಂಡಿಸಿದ್ದೇವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ತಗೊಳ್ಳಿ. ಇದಕ್ಕೆ ನಮ್ಮ ಬೆಂಬಲವೂ ಇದೆ. ಅದು ಬಿಟ್ಟು ಕಾಂಗ್ರೆಸ್ಸಿನಲ್ಲಿ ಒಳ ಜಗಳ ಇದೆ ಅಂತ ಹೇಳಲು ಬೊಮ್ಮಾಯಿ ಯಾರು ಎಂದು ಪ್ರಶ್ನೆ ಮಾಡಿದರು.

    ಕಾಂಗ್ರೆಸ್ಸಿನಲ್ಲಿ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿಯೊಳಗೆ ಸಾಕಷ್ಟು ಆಂತರಿಕ ಕಚ್ಚಾಟ ಇದೆ. ಬಿಜೆಪಿಯವರ ಒಳ ತಂತ್ರದಿಂದಲೇ ಗಲಭೆ ನಡೆದಿದೆ. ನಮ್ಮವರು ಘಟನೆ ಬಗ್ಗೆ ಆಂತರಿಕ ತನಿಖೆ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ನಮ್ಮ ಕಾರ್ಪೊರೇಟರ್ ಗಳು, ಪೊಲೀಸರಿಂದ ಹೆದರಿಸ್ತಿದ್ದಾರೆ ಎಂದು ಡಿಕೆಶಿ ಗಂಭೀರ ಆರೋಪ ಮಾಡಿದರು.

    ಇದೇ ಹೇಳಿಕೆ ಕೊಡಬೇಕು ಅಂತ ಬಿಜೆಪಿಯು ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಒತ್ತಡ ಹಾಕುತ್ತಿದೆ. ಅದೆಲ್ಲ ನಮಗೆ ಗೊತ್ತಿದೆ. ನಾವು ಇದನ್ನು ಸಹಿಸಲ್ಲ. ಏನೇನ್ ನಡೀತಿದೆ ಅಂತ ನಮಗೆ ಗೊತ್ತಿದೆ. ಇವರು ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಗಲಭೆ ನಡೆಯುತ್ತೆ. ಈ ಸರ್ಕಾರದಲ್ಲಿ ಒಬ್ಬ ಸಚಿವ, ಶಾಸಕನನ್ನು ನಿಯಂತ್ರಿಸಲು ಅವರಿಂದಲೇ ಸಾಧ್ಯವಾಗ್ತಿಲ್ಲ ಎಂದು ಡಿಕೆಶಿ ಸಿಡಿಮಿಡಿಗೊಂಡರು.

    ಇದೇ ವೇಳೆ ಶೃಂಗೇರಿ ಘಟನೆ ವಿಚಾರ ಸಂಬಂಧ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಶೃಂಗೇರಿಯಲ್ಲಿ ನಡೆದ ಘಟನೆಗೆ ಬಿಜೆಪಿ, ಭಜರಂಗ ದಳವೇ ಮೂಲ. ಇದನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಬಿಜೆಪಿಯವರು ಈ ಸತ್ಯವನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎಂದು ಗರಂ ಆದರು.

  • ಡಿಜೆ ಹಳ್ಳಿ ಗಲಭೆ ಪ್ರಕರಣ- ಮಗನ ಬಂಧನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವು

    ಡಿಜೆ ಹಳ್ಳಿ ಗಲಭೆ ಪ್ರಕರಣ- ಮಗನ ಬಂಧನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವು

    ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಸುದ್ದಿ ತಿಳಿದು ತಂದೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಡಿಜೆ ಹಳ್ಳಿಯ ಕುಬ್ಬ ಮಸೀದಿ ರಸ್ತೆಯ ನಿವಾಸಿ ಫರ್ಹಾನ್ ಬಂಧನದ ಸುದ್ದಿ ಕೇಳಿ ಆತನ ತಂದೆಗೆ ಹೃದಯಾಘಾತವಾಗಿದ್ದು, ಸಾವನ್ನಪ್ಪಿದ್ದಾರೆ. ಫರ್ಹಾನ್ ಗಲಭೆಯಲ್ಲಿ ಭಾಗಿಯಾಗಿ ಪೊಲೀಸರ ವಶದಲ್ಲಿದ್ದು, ಘಟನೆ ಸಂಬಂಧ ಗುರುವಾರ ಮಧ್ಯಾಹ್ನ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ಆತನ ತಂದೆ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿ ಮಾನವೀಯತೆ ಮರೆದಿದ್ದಾರೆ. ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಆರೋಪಿ ಫರ್ಹಾನ್‍ಗೆ ಅವಕಾಶ ಕಲ್ಪಿಸಿದ್ದಾರೆ.

    ಗಲಭೆ ಸಂಬಂಧ ಇದುವರೆಗೂ 151 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಮುಖ ಆರೋಪಿ ಮುಜಾಮಿಲ್‍ನನ್ನು ಐದು ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಪಟ್ಟ 40 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಮೂವರಿಗೆ ಕೊರೋನಾ ಬಂದಿದೆ. ಉಳಿದ ಆರೋಪಿಗಳ ಟೆಸ್ಟ್ ವರದಿ ಬಂದ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ. ತನಿಖೆ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.