Tag: ಬುಲ್ಡೋಜರ್ ನ್ಯಾಯ

  • ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ : ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

    ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ : ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

    ನವದೆಹಲಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಆರೋಪಿಗಳ ಮನೆ ಸೇರಿದಂತೆ ಇತರೆ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗೆ ಬ್ರೇಕ್‌ ಬಿದ್ದಿದೆ. ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.

    ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಕೆಲವು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಕಟ್ಟಡಗಳ ತೆರವಿಗೆ ಮಾರ್ಗಸೂಚಿ ಪ್ರಕಟಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ, ಬುಲ್ಡೋಜರ್ ಕಾರ್ಯಚರಣೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತು. ಕಾರ್ಯಾಂಗವು ನ್ಯಾಯಾಂಗವನ್ನು ಅತಿಕ್ರಮಿಸಲು ಸಾಧ್ಯವಿಲ್ಲ, ಆರೋಪಿಯನ್ನು ಅಪರಾಧಿಯನ್ನು ಎಂದು ನಿರ್ಧರಿಸಲು ಅಧಿಕಾರಿಗಳು ನ್ಯಾಯಾಧೀಶರಲ್ಲ. ಆರೋಪಿಯ ತಪ್ಪನ್ನು ಪೂರ್ವಾಗ್ರಹಕ್ಕೆ ಒಳಪಡಿಸಬಾರದು. ಕೇವಲ ಆರೋಪದ ಮೇಲೆ ನಾಗರಿಕರ ಮನೆಯನ್ನು ಅನಿಯಂತ್ರಿತವಾಗಿ ಕೆಡವುವುದು ಅಸಾಂವಿಧಾನಿಕ ಎಂದು ನ್ಯಾ. ಬಿ.ಆರ್ ಗವಾಯಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿ ಹಲವು ಮಾರ್ಗಸೂಚಿ ಪ್ರಕಟಿಸಿದರು.  ಇದನ್ನೂ ಓದಿ: ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಮನೆ ಎನ್ನುವುದು ಅದೊಂದು ಕಟ್ಟಡವಲ್ಲ, ಅದೊಂದು ಸರಕ್ಷತೆ, ಭವಿಷ್ಯದ ನಿರೀಕ್ಷೆ. ಒಬ್ಬ ವ್ಯಕ್ತಿ ಮಾತ್ರ ಅಪರಾಧದ ಆರೋಪಿಯಾಗಿದ್ದರೆ ಇಡೀ ಕುಟುಂಬ ಸದಸ್ಯರ ಆಶ್ರಯವನ್ನು ಕಿತ್ತುಕೊಳ್ಳುವುದು ಅಸಾಂವಿಧಾನಿಕ. ಇಂತಹ ಅಧಿಕಾರವನ್ನು ಅಧಿಕಾರಿಗಳಿಗೆ ಹೇಗೆ ನೀಡಲು ಸಾಧ್ಯ. ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಧಿಕಾರಿಗಳನ್ನು ಉಳಿಸಲಾಗುವುದಿಲ್ಲ, ಅದರ ಹೊಣೆಗಾರಿಕೆ ಕ್ರಮಗಳನ್ನು ಎದರುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆಯನ್ನು ನೀಡಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    * ನ್ಯಾಯಯುತವಾದ ವಿಚಾರಣೆಯಿಲ್ಲದೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ.
    * ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅನಿಯಂತ್ರಿತ ರೀತಿಯಲ್ಲಿ ವರ್ತಿಸಬಾರದು.
    * ಕಟ್ಟಡ ತೆರವಿಗೆ ಮುನ್ನ ಅಂಚೆ ಮೂಲಕ ನೋಟಿಸ್ ನೀಡಬೇಕು. ನೋಟಿಸ್‌ನಲ್ಲಿ ಕಟ್ಟಡ ಹೇಗೆ ಅಕ್ರಮವಾಗಿದೆ? ಯಾವ ನಿಯಮಗಳ ಉಲ್ಲಂಘನೆಯಾಗಿದೆ ಸ್ಪಷ್ಟಪಡಿಸಬೇಕು.
    * ಮಾಲೀಕರ ಸ್ಪಷ್ಟನೆ ನೀಡಲು ಅವಕಾಶವನ್ನು ಕಲ್ಪಿಸಬೇಕು.
    * ನೋಟಿಸ್‌ಗಳನ್ನು ಟ್ರ್ಯಾಕ್ ಮಾಡಲು ಮೂರು ತಿಂಗಳೊಳಗೆ ಡಿಜಿಟಲ್ ಪೋರ್ಟಲ್ ಸ್ಥಾಪಿಸಬೇಕು.
    * ನೋಟಿಸ್ ಬಳಿಕ ಕಟ್ಟಡವನ್ನು ಪೂರ್ಣ ಅಥವಾ ಭಾಗಶಃ ತೆರವು ಮಾಡಬೇಕಾದರೆ ಕಾರಣ ಏನು ಎನ್ನುವ ಬಗ್ಗೆ ಆದೇಶಿಸಬೇಕು.
    * ವಿವರವಾದ ಸ್ಪಾಟ್ ವರದಿಯನ್ನು ಸಿದ್ಧಪಡಿಸಬೇಕು, ಕಟ್ಟಡ ತೆರವು ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಹಾಜರಿದ್ದ ಅಧಿಕಾರಿಗಳ ಮತ್ತು ತೆರವಿನ ವಿವರವಾದ ವಿಡಿಯೋವನ್ನು ಚಿತ್ರೀಕರಿಸಬೇಕು. ಸ್ಪಾಟ್ ವರದಿಯನ್ನು ಡಿಜಿಟಲ್ ಪೋರ್ಟಲ್‌ನಲ್ಲಿ ಪ್ರದರ್ಶಿಸಬೇಕು.
    * ಈ ನಿರ್ದೇಶನಗಳ ಉಲ್ಲಂಘನೆಯು ನ್ಯಾಯಾಂಗ ನಿಂದನೆ ಅಥವಾ ಇತರ ಕಾನೂನು ಕ್ರಮಕ್ಕೆ ಕಾರಣವಾಗಬಹುದು.
    * ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ನಷ್ಟವಾದ ಆಸ್ತಿ ಮರುಪಾವತಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ.
    * ಸರ್ಕಾರದ ಆಸ್ತಿ, ರಸ್ತೆ, ಕೆರೆ, ರೈಲು ಮಾರ್ಗಗಳ ಒತ್ತುವರಿಯಾಗಿದ್ದರೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ.

     

  • ಅಪರಾಧಿ ಎಂದು ಸಾಬೀತಾದರೂ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ – ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ಅಸಮಾಧಾನ

    ನವದೆಹಲಿ: ಅಪರಾಧಿ (Convict) ಎಂದು ಸಾಬೀತಾದರೂ ಅವರ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಆರೋಪಿಗಳ ಮನೆ ಸೇರಿದಂತೆ ಸ್ಥಿರಾಸ್ತಿಗಳನ್ನು ಅಧಿಕಾರಿಗಳು ಹೇಗೆ ಧ್ವಂಸ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ಖಾರವಾಗಿ ಪ್ರಶ್ನಿಸಿದೆ.

    ವಿವಿಧ ಪ್ರಕರಣಗಳಲ್ಲಿನ ಆರೋಪಿಗಳ ಮನೆ ಧ್ವಂಸ ಮಾಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ವಾಂಸರ ಸಂಸ್ಥೆ, ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ ತಂದೆಗೆ ದಂಗೆಕೋರ ಮಗನಿರಬಹುದು. ಹಾಗಂತ ಇರುವ ಮನೆ ಕೆಡವಿದರೆ ಅವರು ಹೋಗುವುದು ಎಲ್ಲಿಗೆ? ಇದು ಸೂಕ್ತವಾದ ಮಾರ್ಗವಲ್ಲ ಎಂದರು. ಇದನ್ನೂ ಓದಿ: ಹುದ್ದೆ ಸದ್ಯ ಖಾಲಿ ಇಲ್ಲ, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಡಿಕೆಶಿ

    ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾನೂನು ಉಲ್ಲಂಘನೆಯಾದಾಗ ಮನೆಗಳನ್ನು ಕೆಡವಲಾಗುತ್ತಿದೆ. ಮುಖ್ಯವಾಗಿ ನಗರಸಭೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಕ್ರಮಕೈಗೊಳ್ಳುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಯಮ ಉಲ್ಲಂಘಿಸಿದರೆ ಧ್ವಂಸ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆರೋಪಿಗಳ ಮನೆ ಧ್ವಂಸ ಒಪ್ಪುವುದಿಲ್ಲ ಎಂದಿತು. ಇದನ್ನೂ ಓದಿ: ನನಗೂ ಸಿಎಂ ಆಗೋ ಆಸೆ ಇದೆ : ಜಮೀರ್ ಅಹ್ಮದ್

    ಈ ವೇಳೆ ಅನಧಿಕೃತ ಕಟ್ಟಡಗಳನ್ನು ಕೆಡವಲು ಮಾರ್ಗಸೂಚಿಯ ಅಗತ್ಯವನ್ನು ನ್ಯಾಯಮೂರ್ತಿ ವಿಶ್ವನಾಥನ್ ಗಮನಿಸಿದರು. ನ್ಯಾಯಮೂರ್ತಿ ಗವಾಯಿ, ಸಲಹೆಗಳು ಬರಲಿ. ನಾವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಮಾರ್ಗಸೂಚಿಗಳನ್ನು ನೀಡುತ್ತೇವೆ ಎಂದರು. ಸೆಪ್ಟೆಂಬರ್ 17ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಪರೀಕ್ಷೆಗೆ 82% ಹಾಜರಾತಿ: ಕೆಇಎ

    ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುವ ಅಭ್ಯಾಸಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿದೆ. ಇದನ್ನು ಸಾಮಾನ್ಯವಾಗಿ ‘ಬುಲ್ಡೋಜರ್ ನ್ಯಾಯ’ (Buldozer Justice) ಎಂದು ಕರೆಯಲಾಗುತ್ತದೆ. ಇದು ಉತ್ತರ ಪ್ರದೇಶ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಮುಖ ವಿವಾದದ ವಿಷಯವಾಗಿದೆ. ಇದನ್ನೂ ಓದಿ: ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ