Tag: ಬುಲ್ಡೋಜರ್‌ ಕಾರ್ಯಾಚರಣೆ

  • ದೇಶದಲ್ಲಿ ಅ.1 ರವರೆಗೆ ‘ಬುಲ್ಡೋಜರ್‌ ಕಾರ್ಯಾಚರಣೆ’ಗೆ ಸುಪ್ರೀಂ ತಡೆ

    ದೇಶದಲ್ಲಿ ಅ.1 ರವರೆಗೆ ‘ಬುಲ್ಡೋಜರ್‌ ಕಾರ್ಯಾಚರಣೆ’ಗೆ ಸುಪ್ರೀಂ ತಡೆ

    ನವದೆಹಲಿ: ದೇಶದಲ್ಲಿ ಅಕ್ಟೋಬರ್‌ 1 ರ ವರೆಗೆ ಬುಲ್ಡೋಜರ್‌ ಕಾರ್ಯಾಚರಣೆಗೆ (ಬುಲ್ಡೋಜರ್‌ ನ್ಯಾಯ) ಸುಪ್ರೀಂ ಕೋರ್ಟ್‌ (Supreme Court) ತಡೆ ನೀಡಿದೆ. ಮುಂದಿನ ವಾದಗಳನ್ನು ಆಲಿಸುವ ವರೆಗೆ ದೇಶದ ಯಾವುದೇ ಸ್ಥಳದಲ್ಲಿ ಖಾಸಗಿ ಆಸ್ತಿಯ ವಿರುದ್ಧ ಅನಧಿಕೃತ ಬುಲ್ಡೋಜರ್‌ ಕ್ರಮ ಬೇಡ ಎಂದು ಕೋರ್ಟ್‌ ಸೂಚಿಸಿದೆ.

    ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ‘ಬುಲ್ಡೋಜರ್‌ ಕಾರ್ಯಾಚರಣೆ’ಯು (Bulldozer Justice) ಸರಿಯಾದ ಪ್ರಕ್ರಿಯೆಗಳ ನಂತರ ನೆಲಸಮಕ್ಕೆ ಮಂಜೂರು ಮಾಡುವಂತಹ ಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ವಿಚಾರಣೆಯ ತನಕ ನಿಮ್ಮ ಕೈಗಳನ್ನು ನಿಯಂತ್ರಿಸಿ. ಇದರಿಂದ ಸ್ವರ್ಗವೇ ಧರೆಗೆ ಬೀಳುವುದಿಲ್ಲ ಎಂದು ನ್ಯಾಯಾಲಯ ಚಾಟಿ ಬೀಸಿದೆ. ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು. ಇದನ್ನೂ ಓದಿ: ಮಹಿಳಾ ವೈದ್ಯರಿಗೆ ನೈಟ್ ಶಿಫ್ಟ್ ತೆಗೆದು ಅಧಿಸೂಚನೆ – ಮಮತಾ ಸರ್ಕಾರಕ್ಕೆ ಸುಪ್ರೀಂ ಚಾಟಿ

    ಬುಲ್ಡೋಜರ್‌ ಕಾರ್ಯಾಚರಣೆ ಕ್ರಮವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಕ್ರಮ ಅದ್ಭುತ ಎಂದು ವೈಭವೀಕರಿಸುವವರ ವಿರುದ್ಧ ಕೋರ್ಟ್‌ ಎಚ್ಚರಿಕೆ ಸಂದೇಶ ರವಾನಿಸಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ದಿನಾಂಕದ ವರೆಗೆ ಯಾವುದೇ ಕಾರ್ಯಾಚರಣೆ ನಡೆಸದಂತೆ ಸೂಚಿಸಿದೆ.

    ಇದೇ ವೇಳೆ, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಅಥವಾ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಸೇರಿದ ಮನೆಗಳು ಮತ್ತು ವಾಣಿಜ್ಯ ಆಸ್ತಿಗಳ ಬುಲ್ಡೋಜಿಂಗ್ ವಿರುದ್ಧದ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು. ರಸ್ತೆಗಳು, ರೈಲ್ವೆ ಹಳಿಗಳು ಮತ್ತು ಜಲಮೂಲಗಳಂತಹ ಸಾರ್ವಜನಿಕ ಸ್ಥಳಗಳಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಪ್ರಾಪ್ತೆಗೆ ಗನ್ ತೋರಿಸಿ 2 ಗಂಟೆಗಳ ಕಾಲ ಅತ್ಯಾಚಾರ – ಪ್ರಕರಣ ಮುಚ್ಚಿ ಹಾಕಲು ಪೋಷಕರಿಗೆ ಹಣದ ಆಮಿಷ

  • ಉತ್ತರಪ್ರದೇಶ ಮಾದರಿಯಲ್ಲೇ ಕಾಫಿನಾಡಿನಲ್ಲೂ ಬುಲ್ಡೋಜರ್ ಪ್ರಯೋಗ

    ಉತ್ತರಪ್ರದೇಶ ಮಾದರಿಯಲ್ಲೇ ಕಾಫಿನಾಡಿನಲ್ಲೂ ಬುಲ್ಡೋಜರ್ ಪ್ರಯೋಗ

    ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕ್ಷೇತ್ರ ಕಾಫಿನಾಡಿನಲ್ಲೂ ಬುಲ್ಡೋಜರ್ ಸದ್ದು ಕೇಳುತ್ತಿದ್ದು, ಉತ್ತರ ಪ್ರದೇಶ ಮಾದರಿಯಲ್ಲೇ ಅಕ್ರಮ ಗೋಮಾಂಸ ಅಡ್ಡೆಗಳ ಮೇಲೆ ಪ್ರಯೋಗ ನಡೆಯುತ್ತಿದೆ.

    ಈಗಾಗಲೇ ನಗರಸಭೆ ಅಕ್ರಮ ಗೋಮಾಂಸ ಮಾರಾಟ ಮಾಡುವ ಮನೆಗಳಿಗೆ ನೋಟಿಸ್ ನೀಡಿದ್ದು, ನಿರ್ದಾಕ್ಷಣ್ಯ ಕ್ರಮದ ಎಚ್ಚರಿಕೆ ನೀಡಿ ನೋಟಿಸ್ ಅಂಟಿಸಿದೆ. ಸ್ಫೋಟಕ, ಮಾದಕ ವಸ್ತು ಸೇರಿದಂತೆ ಗೋಹತ್ಯೆ ಮಾಡಿದರೂ ಕಟ್ಟಡ ನೆಲಸಮ ಮಾಡುವುದಾಗಿ ತಿಳಿಸಿದೆ. ಈಗಾಗಲೇ 10ಕ್ಕೂ ಹೆಚ್ಚು ಮನೆ, ಗೋಮಾಂಸ ಅಡ್ಡೆಗಳಿಗೆ ನಗರಸಭೆ ಸಿಬ್ಬಂದಿ ನೋಟಿಸ್ ಅಂಟಿಸಿದ್ದಾರೆ.

    ಕಳೆದ ವಾರ ನಗರಸಭೆ ಎಂದಿನಂತೆ ತಮಿಳು ಕಾಲೋನಿ ಹಾಗೂ ಷರೀಫ್ ಗಲ್ಲಿಯಲ್ಲಿ ಅಲ್ಲಲ್ಲಿ ಬೆಳೆದಿದ್ದ ಗಿಡ-ಘಂಟೆಗಳ ತೆರವಿಗೆ ಮುಂದಾಗಿತ್ತು. ಆಗ ತಮಿಳು ಕಾಲೋನಿಯ ಜನನಿಬಿಡ ಪ್ರದೇಶದಲ್ಲಿದ್ದ ಅಕ್ರಮ ಗೋಮಾಂಸ ಶೆಡ್ ಕಣ್ಣಿಗೆ ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಗೋಮಾಂಸವೂ ಅಲ್ಲಿ ಇತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಅಶ್ವಥ್ ನಾರಾಯಣ ಒಬ್ಬ ಕಚಡ, ಮಾರ್ಕ್ಸ್‌ಕಾರ್ಡ್‌ ಮಾರ್ಕೊಂಡು ಬದುಕಿದವನು: ಡಿ.ಕೆ.ಸುರೇಶ್ ವಾಗ್ದಾಳಿ

    ಕೂಡಲೇ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ನಗರಸಭೆ ಆಯುಕ್ತ ಬಸವರಾಜ್ ನಗರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗೋಮಾಂಸ ಮಳಿಗೆಯನ್ನು ಜೆಸಿಬಿಯಿಂದ ಧ್ವಂಸ ಮಾಡಿದ್ದರು. ಇದನ್ನೂ ಓದಿ: ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ

  • ದೆಹಲಿಯಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಬ್ರೇಕ್‌

    ದೆಹಲಿಯಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಬ್ರೇಕ್‌

    ನವದೆಹಲಿ: ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿದ್ದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.

    ಕಳೆದ ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾದ ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಗಲಭೆಕೋರರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಬಿಸಿ ಮುಟ್ಟಿಸಲು ಬಿಜೆಪಿ ನೇತೃತ್ವದ ಪಾಲಿಕೆ ಮುಂದಾಗಿತ್ತು. ಪೊಲೀಸ್‌ ಬಿಗಿ ಬಂದೋಬಸ್ತ್‌ನೊಂದಿಗೆ ಕಾರ್ಪೊರೇಷನ್‌ ನೆಲಸಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು. ಆದರೆ ಅದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಜೆಸಿಬಿ ಘರ್ಜನೆ- ಜಹಾಂಗೀರ್‌ಪುರಿಯಲ್ಲಿ ಅಕ್ರಮ ಆಸ್ತಿಗಳ ಧ್ವಂಸ

    SUPREME COURT

    ಹಿರಿಯ ವಕೀಲರಾದ ದುಷ್ಯಂತ್‌ ದಾವೆ, ಕಪಿಲ್‌ ಸಿಬಲ್‌, ಪಿ.ವಿ.ಸುರೇಂದ್ರನಾಥ್‌ ಹಾಗೂ ಪ್ರಶಾಂತ್‌ ಭೂಷಣ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಐ ಎನ್.ವಿ.ರಮಣ ಅವರ ಮುಂದೆ ವಿಷಯ ಪ್ರಸ್ತಾಪಿಸಿದರು. ಗಲಭೆಪೀಡತ ಜಹಾಂಗೀರ್‌ಪುರಿಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ. ಈ ಸಂಬಂಧ ಯಾರಿಗೂ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

    ನಂತರ ಸಿಜೆಐ ರಮಣ ಅವರು, ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಆದೇಶ ಹೊರಡಿಸಿದರು. ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಪಾಲಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು

    ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್‌ಗಳನ್ನು ಬಳಸುವುದರ ವಿರುದ್ಧ ಜಮೀಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯಲ್ಲಿ ಜಹಾಂಗೀರ್‌ಪುರಿ ಧ್ವಂಸ ಅಭಿಯಾನದ ವಿಷಯವನ್ನು ಉಲ್ಲೇಖಿಸಲಾಗಿತ್ತು.

    ಇತ್ತೀಚೆಗೆ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ ಬುಧವಾರ ಬೆಳಗ್ಗೆ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ನಿಯೋಜನೆಯಲ್ಲಿ ಪ್ರಾರಂಭವಾಗಿತ್ತು. ಬುಲ್ಡೋಜರ್ ಬಳಸಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ನಡೆದಿತ್ತು. ರಸ್ತೆ ಬದಿಯ ಆಹಾರ ಮಳಿಗೆಗಳು ಮತ್ತು ಅಂಗಡಿಗಳನ್ನು ಬುಲ್ಡೋಜರ್ ಮೂಲಕವಾಗಿ ಕೆಡವಲಾಗುತ್ತಿತ್ತು. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸುಮಾರು 400 ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು.