Tag: ಬುಲೆಟ್ ರೈಲು

  • ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡಲು ಚಿಂತನೆ: ರಾಹುಲ್ ಗಾಂಧಿ

    ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡಲು ಚಿಂತನೆ: ರಾಹುಲ್ ಗಾಂಧಿ

    ಬೆಂಗಳೂರು: ಸಿಲಿಕಾನ್ ಸಿಟಿಯನ್ನು ದೇಶದ ಎರಡನೇ ರಾಜಧಾನಿಯಾಗಿ ಮಾಡುವ ಕುರಿತು ಚರ್ಚೆ ನಡೆಸಿ, ಬಳಿಕ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಚಿಂತನೆ ನಡೆಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಜ್ಯದ ಉದ್ಯಮಿಯೊಬ್ಬರು ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಕರ್ನಾಟಕ ರಾಜ್ಯದ ಬಜೆಟ್‍ನಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲು ಅವಕಾಶ ಇದೆ. ಆದರೆ ಈ ಕುರಿತು ಚರ್ಚೆ ನಡೆಸಿ ಸಾಧ್ಯವಾದರೆ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ತಿಳಿಸಿದರು.

    ಈ ವೇಳೆ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರದ ಬುಲೆಟ್ ರೈಲು ಯೋಜನೆ ವಿಫಲವಾಗಿದೆ. ಈ ಯೋಜನೆಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಆದರೆ ಹಣವನ್ನು ರೈಲ್ವೇ ಇಲಾಖೆ ಸುಧಾರಣೆಗೆ ಬಳಸಬಹುದಿತ್ತು. ಯಾವುದೇ ಯೋಜನೆಗಳನ್ನು ರೂಪಿಸುವಾಗ ಇಂಥ ಲೋಪಗಳಾಗಬಾರದು. ಆದರೆ ನಾನು ಕೇಂದ್ರದ ಬುಲೆಟ್ ರೈಲು ಯೋಜನೆ ವಿರುದ್ಧ ಇಲ್ಲ. ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಬುಲೆಟ್ ರೈಲು ಯೋಜನೆ ಜಾರಿಗೊಳಿಸಬೇಕಿತ್ತು. ಆದರೆ ಈ ಯೋಜನೆ ಕ್ರಮಬದ್ಧವಾಗಿಲ್ಲ. ಸದ್ಯ ಬುಲೆಟ್ ರೈಲು ಒಂದು ಶೋ ಪೀಸ್ ಥರ ಆಗಿದೆ ಎಂದರು.

    ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರಗಳ ಆದ್ಯತೆ ಆಗಬೇಕಿದೆ. ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಮುಖ್ಯವಾಗುತ್ತದೆ. ಚೀನಾ ಜಗತ್ತಿನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮುಂದೆ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟಿದೆ ಎಂದರು.

    ಇದೇ ವೇಳೆ ಪೆಟ್ರೋಲ್, ಡೀಸೆಲ್ ಮೇಲೆ ಜಿಎಸ್‍ಟಿ ತೆರಿಗೆ ಕುರಿತ ಪ್ರಶ್ನೆಗೆ ಉತ್ತರಿಸಿ ಜಿಎಸ್‍ಟಿ `ಒಂದು ಗಬ್ಬರ್ ಸಿಂಗ್ ತೆರಿಗೆ’ ಎಂದು ಮತ್ತೊಮ್ಮೆ ಹೇಳಿದರು. ತಾವು ಅಧಿಕಾರಕ್ಕೆ ಬಂದರೆ ಜಿಎಸ್‍ಟಿ ತೆರಿಗೆ ವಿಧಾನವನ್ನು ಸರಳೀಕರಣಗೊಳಿಸುತ್ತೇವೆ. ಸದ್ಯ ಜಗತ್ತಿನ ಸಂಕೀರ್ಣ ತೆರಿಗೆಗಳಲ್ಲಿ ಜಿಎಸ್‍ಟಿ ಒಂದಾಗಿದೆ. ಜಿಎಎಸ್‍ಟಿಯಲ್ಲಿ ಐದು ಹಂತಗಳ ತೆರಿಗೆ ಇದೆ. ಇಂಥ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿದೆ. ನಾವು ಒಂದೇ ಹಂತದ ತೆರಿಗೆ ಒಳಗೊಂಡ ಜಿಎಎಸ್‍ಟಿ ಸೇವೆ ಜಾರಿಗೆ ಮಾಡುತ್ತೇವೆ. ಇದರಲ್ಲಿ ಪೆಟ್ರೋಲ್, ಡೀಸೆಲ್ ಸಹ ಸೇರಿರುತ್ತದೆ ಎಂದು ವಿವರಿಸಿದರು.

    ಇದೇ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ ಎಂದು ಮನವಿ ಮಾಡಿ ರಾಹುಲ್ ಎಂದಷ್ಟೇ ಕರೆಯಿರಿ ಎಂದು ಉದ್ಯಮಿಗಳಿಗೆ ಮನವಿ ಮಾಡಿದರು. ಅಲ್ಲದೇ ಸಂವಾದ ಆರಂಭವಾಗುವ ಮುನ್ನವೇ ತಾನು ರಾಷ್ಟ್ರದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ:  ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ಉದ್ಯಮಿಗಳ ಸಂವಾದದಲ್ಲಿ ರೈತರ ಬಗ್ಗೆ ಪ್ರಶ್ನಿಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಪರ ವ್ಯವಸ್ಥೆ ಜಾರಿಗೆ ಆಗ್ರಹ ಮಾಡಿದರು. ಈ ಕುರಿತು ಉತ್ತರಿಸಿದ ರಾಹುಲ್ ಕೃಷಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ತರಬೇಕಿದೆ. ಈ ಕುರಿತು ಇನ್ನಷ್ಟು ಸುಧಾರಣೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ತರುತ್ತಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗಳ ವ್ಯವಸ್ಥೆ ಮೂಲಸೌಕರ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ : ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

    ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್, ಸಂಸದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಹಾಜರಿದ್ದರು.

     

  • ದೇಶದ ಮೊದಲ ಬುಲೆಟ್ ರೈಲು ಸಂಚರಿಸೋ ಮಾರ್ಗದಲ್ಲಿ ರೈಲ್ವೇಗೆ ಬರುತ್ತಿಲ್ಲ ನಿರೀಕ್ಷಿತ ಅದಾಯ!

    ದೇಶದ ಮೊದಲ ಬುಲೆಟ್ ರೈಲು ಸಂಚರಿಸೋ ಮಾರ್ಗದಲ್ಲಿ ರೈಲ್ವೇಗೆ ಬರುತ್ತಿಲ್ಲ ನಿರೀಕ್ಷಿತ ಅದಾಯ!

    ನವದೆಹಲಿ: ಅಹಮದಾಬಾದ್- ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಪ್ರಸ್ತುತ ಈ ಎರಡು ನಗರಗಳ ಮಧ್ಯೆ ಕ್ರಮಿಸುವ ರೈಲಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದು, ರೈಲ್ವೇಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ ಎಂಬವರು ಜುಲೈ 1 ರಿಂದ – ಸೆಪ್ಟೆಂಬರ್ 30 ರವರೆಗೆ ಮುಂಬೈ- ಅಹಮದಾಬಾದ್ ನಗರಗಳ ಮಧ್ಯೆ ಸಂಚರಿಸುತ್ತಿರುವ ರೈಲುಗಳಿಂದ ಬಂದಿರುವ ಆದಾಯ ಎಷ್ಟು ಎಂದು ಆರ್‍ಟಿಐ ಅಡಿ ಪ್ರಶ್ನೆ ಕೇಳಿದ್ದರು.

    ಈ ಪ್ರಶ್ನೆಗೆ ಪಶ್ಚಿಮ ರೈಲ್ವೇ, ಈ ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಶೇ.40 ರಷ್ಟು ಸೀಟ್ ಗಳು ಖಾಲಿ ಇರುತ್ತದೆ. ಇದರಿಂದಾಗಿ 30 ಕೋಟಿ ರೂ.(ತಿಂಗಳಿಗೆ 10 ಕೋಟಿ ರೂ.) ನಷ್ಟವಾಗುತ್ತಿದೆ ಎಂದು ಉತ್ತರಿಸಿದೆ.

    ಇದೇ ವೇಳೆ ಈ ಎರಡು ನಗರಗಳ ಮಧ್ಯೆ ಹೊಸದಾಗಿ ಯಾವುದೇ ರೈಲು ಓಡಿಸುವ ಪ್ರಸ್ತಾಪ ಇಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮುಂಬೈ- ಅಹಮದಾಬಾದ್ ನಡುವೆ ಸಂಚರಿಸುವ ರೈಲಿನಲ್ಲಿ ಶೇ.40 ಸೀಟ್ ಗಳು ಖಾಲಿ ಇದ್ದರೆ, ಅಹಮದಾಬಾದ್- ಮುಂಬೈ ನಡುವೆ ಸಂಚರಿಸುವ ರೈಲಿನಲ್ಲಿ ಶೇ.44 ಸೀಟ್ ಗಳು ಖಾಲಿ ಇದೆ ಎಂದು ಉತ್ತರಿಸಿದೆ.

    ಈ ಅವಧಿಯಲ್ಲಿ ಮುಂಬೈ- ಅಹಮದಾಬಾದ್ ನಡುವೆ ಒಟ್ಟು 7,35,630 ಸೀಟ್‍ಗಳ ಪೈಕಿ 4,44,795 ಸೀಟ್ ಗಳು ಬುಕ್ ಆಗಿದ್ದು, ಒಟ್ಟು 30,16,24,623 ರೂ. ಆದಾಯ ಸಂಗ್ರಹವಾಗಿದೆ. 44,29,08,220 ರೂ. ಆದಾಯವನ್ನು ನಿರೀಕ್ಷಿಸಿದ್ದ ರೈಲ್ವೇಗೆ 14,12,83,597 ರೂ. ನಷ್ಟವಾಗಿದೆ ಎಂದು ಹೇಳಿದೆ.

    ಅಹಮದಾಬಾದ್- ಮುಂಬೈ ನಡುವೆ ಒಟ್ಟು 7,06,446 ಸೀಟ್ ಗಳ ಪೈಕಿ ಕೇವಲ 3,98,002 ಸೀಟ್ ಗಳು ಬುಕ್ ಆಗಿವೆ. ಒಟ್ಟು ಸೀಟ್ ಗಳಿಂದ 26,74,56,982 ರೂ. ಆದಾಯವನ್ನು ನಿರೀಕ್ಷಿಸಿದ್ದ ರೈಲ್ವೇಗೆ ಒಟ್ಟು 42,53,11,471 ರೂ. ಆದಾಯ ಬಂದಿದ್ದು, 15,78,54,489 ರೂ. ನಷ್ಟವಾಗಿದೆ ಎಂದು ಉತ್ತರಿಸಿದೆ.

    ಅತಿ ಹೆಚ್ಚು ಪ್ರಯಾಣಿಕರು ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸಿದರೆ, ಹೆಚ್ಚಿನ ಸಂಖ್ಯೆಯ ಎಸಿ ಸೀಟ್ ಗಳು ಖಾಲಿ ಇರುತ್ತದೆ ಎಂದು ಮಾಹಿತಿ ನೀಡಿದೆ.

    ಈ ಎರಡು ನಗರಗಳ ಮಧ್ಯೆ ಸಂಚರಿಸುತ್ತಿರುವ ದುರಂತೋ, ಶತಾಬ್ಧಿ ಎಕ್ಸ್ ಪ್ರೆಸ್, ಲೋಕಶಕ್ತಿ ಎಕ್ಸ್ ಪ್ರೆಸ್, ಗುಜರಾತ್ ಮೇಲ್, ಭಾವಾ ನಗರ್ ಎಕ್ಸ್ ಪ್ರೆಸ್, ಸೌರಾಷ್ಟ್ರ ಎಕ್ಸ್ ಪ್ರೆಸ್, ವಿವೇಕ್ – ಭುಜ್ ಎಕ್ಸ್ ಪ್ರೆಸ್ ರೈಲುಗಳು ಸಂಚರಿಸುತ್ತಿವೆ.

    ಭಾರತ ಸರ್ಕಾರ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ತರಾತುರಿಯಲ್ಲಿ ಬುಲೆಟ್ ಯೋಜನೆ ಆರಂಭಿಸಲು ಮುಂದಾಗಿದೆ. 1 ಲಕ್ಷ ಕೋಟಿ ರೂ. ಹಣದ ಯೋಜನೆ ನಿಜವಾಗಿಯೂ ಕಾರ್ಯಸಾಧುವೆ ಎಂದು ಅನಿಲ್ ಗಲಗಲಿ ಅವರು ಗಂಭೀರ ಪ್ರಶ್ನೆ ಎತ್ತಿದ್ದಾರೆ.

    ಮುಂಬೈ- ಅಹಮದಾಬಾದ್ ಮಾರ್ಗ ನಷ್ಟದಲ್ಲಿರುವುದಾಗಿ ಆರ್‍ಟಿಐ ಅಡಿ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಯೋಜನೆ ಆರಂಭಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸುವುದು ಒಳಿತು. ಆರಂಭಗೊಂಡ ಬಳಿಕ ಭಾರತೀಯ ಪ್ರಜೆಗಳಿಗೆ ಇದು ಬಿಳಿಯಾನೆ ಆಗಬಾರದು ಎನ್ನುವುದೇ ನನ್ನ ಕಳಕಳಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

    ಬುಲೆಟ್ ರೈಲು ಬೇಕು ಎನ್ನುವವರ ವಾದ ಏನು?
    ಈ ಹಿಂದೆ ಭಾರತ ಸರ್ಕಾರ ಉಪಗ್ರಹ ನಿರ್ಮಾಣಕ್ಕೆ ಕೈ ಹಾಕಿದಾಗಲೂ ವಿರೋಧ ಕೇಳಿ ಬಂದಿತ್ತು. ವಿಮಾನ ಯಾನ ಸೇವೆ ಆರಂಭಗೊಂಡ ಅವಧಿಯಲ್ಲಿ ಭಾರತಕ್ಕೆ ಈ ಸೇವೆ ಅಗತ್ಯವಿದೆಯೇ? ವಿಮಾನದಲ್ಲಿ ಎಷ್ಟು ಮಂದಿ ಹೋಗುತ್ತಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ಪ್ರಯಾಣ ದುಬಾರಿ ಆಗಿದ್ದರೂ ಹೆಚ್ಚಿನ ಸಂಖ್ಯೆಯ ಜನ ಈ ಸೇವೆ ಬಳಸುತ್ತಿದ್ದಾರೆ. ಮೆಟ್ರೋ ಸೇವೆ ಆರಂಭಗೊಂಡಾಗಲೂ ಜನರಿಂದ ಪ್ರಶ್ನೆ ಎದ್ದಿತ್ತು. ಆದರೆ ಈಗ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬುಲೆಟ್ ರೈಲು ಆರಂಭದಲ್ಲಿ ಎಷ್ಟೇ ಟೀಕೆ ಬಂದರೂ ಭವಿಷ್ಯದಲ್ಲಿ ಜನರಿಗೆ ನೆರವಾಗಲಿದೆ ಎನ್ನುವ ವಾದ ಬುಲೆಟ್ ರೈಲು ಪ್ರಿಯ ಜನರದ್ದು.

    ಇದನ್ನೂ ಓದಿ: 31ನೇ ಬಾರಿ ಹಿಡಿಯಿತು ಅದೃಷ್ಟ -ಬುಲೆಟ್ ರೈಲು ಯೋಜನೆಗೆ ಲೋಗೋ ರೂಪಿಸಿದ ವಿದ್ಯಾರ್ಥಿಯ ಸಾಧನೆಯ ಕತೆ

    ಪರ ವಿರೋಧ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತ ಬುಲೆಟ್ ರೈಲು ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಇದರಿಂದ ದೇಶದ ಆರ್ಥಿಕತೆ ಬದಲಾಗುತ್ತಾ? ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

  • ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಬುಲೆಟ್ ರೈಲು ಯೋಜನೆ ಸೇರಿದಂತೆ ಎರಡು ದೇಶಗಳ ನಡುವೆ ನಡೆದ ಮಹತ್ವದ ಒಪ್ಪಂದಗಳಿಗೆ ಎರಡು ಭಾಷೆಗಳ ಸೇತುವೆಯಾಗಿ ಕೆಲಸ ಮಾಡಿದವರು ಕರ್ನಾಟಕದ ಮಣ್ಣಿನ ಮಗ ರಾಜೇಶ ನಾಯ್ಕ.

    ರಾಜೇಶ ನಾಯ್ಕ ಭಾರತದ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಡೀ ವಿದೇಶಾಂಗ ಇಲಾಖೆಯಲ್ಲಿಯೇ ಜಪಾನಿ ಭಾಷೆಯನ್ನು ಕಲಿತು ಸುಲಲಿತವಾಗಿ ಮಾತನಾಡಬಲ್ಲ ವಿಶಿಷ್ಟತೆಯನ್ನು ಹೊಂದಿದ್ದಾರೆ. ಇವರಿಗೆ ಬುಲೆಟ್ ರೈಲು ಯೋಜನೆ, ಜಪಾನ್ ಪ್ರಧಾನಿ ಶಿಂಬೊ ಅಬೆ ಅವರ ಬಗ್ಗೆ ಹೇಳಿ ಅವರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ನೀಡಿತ್ತು. ಇದಕ್ಕಾಗಿ ತಿಂಗಳುಗಟ್ಟಲೇ ಶ್ರಮವಹಿಸಿ ದುಡಿದು, ಮಹತ್ವದ ಕಾರ್ಯವನ್ನು ರಾಜೇಶ ನಾಯ್ಕ ಯಶಸ್ವಿಗೊಳಿಸಿದ್ದಾರೆ.

    ರಾಜೇಶ್ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇವರು ವಕೀಲ ಎನ್.ಡಿ.ನಾಯ್ಕ ಐಸೂರು ಮತ್ತು ಲಕ್ಷ್ಮೀ ನಾಯ್ಕ ದಂಪತಿಯ ನಾಲ್ಕನೇ ಪುತ್ರ. 10 ನೇ ತರಗತಿ ಓದುತ್ತಿದ್ದಾಗಲೇ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು.

    ಮೊದಲು ಕೆಎಎಸ್ ಪರೀಕ್ಷೆಯನ್ನು ಬರೆದು ಅದರಲ್ಲಿ 7ನೇ ರ‍್ಯಾಂಕ್‌ ಪಡೆದು ಉತ್ತೀರ್ಣರಾಗಿದ್ದ ರಾಜೇಶ್ ಅವರು ಕೆಲವು ದಿನಗಳ ಕಾಲ ಉಡುಪಿ ಜಿಲ್ಲೆಯ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಕನಸಿನತ್ತಾ ಸಾಗಲು ಉತ್ಸುಕತೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2009 ರಲ್ಲಿ ಸಿಎಸ್‍ಇ ಬ್ಯಾಚ್‍ನಲ್ಲಿ 260 ನೇ ರ್ಯಾಂಕ್ ಪಡೆದು ವಿದೇಶಾಂಗ ಇಲಾಖೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

     

     

     

  • ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತೆ? ಇಲ್ಲಿದೆ ಮಾಹಿತಿ

    ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತೆ? ಇಲ್ಲಿದೆ ಮಾಹಿತಿ

    ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಬಟನ್ ಒತ್ತುವ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಬುಲೆಟ್ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತದೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.

    ವಿಶ್ವದ ಅತೀ ವೇಗದ ರೈಲುಗಳು:
    1. ಮ್ಯಾಗ್ಲೆವ್ ಬುಲೆಟ್ ರೈಲು – ಜಪಾನ್: ವಿಶ್ವದಲ್ಲೇ ಅತೀ ವೇಗವಾಗಿ ಹೋಗುವ ರೈಲಾಗಿದ್ದು, 2015 ರಲ್ಲಿ ಆರಂಭವಾಗಿದೆ. ಸುಮಾರು 900 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 603 ಕಿ.ಮೀ. ದೂರವನ್ನು ಒಂದು ಗಂಟೆಗಳಲ್ಲಿ ಕ್ರಮಿಸುತ್ತದೆ. ಅಂದರೆ ಈ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಹೊರಟರೆ ಕೇವಲ 40 ನಿಮಿಷಗಳಲ್ಲಿ ಕ್ರಮಿಸಬಹುದು.

    2. ಎಲ್‍ಜಿವಿ (ಲಿಗ್ನೇ ಗ್ರ್ಯಾಂಡೆ ವಿಟೇಸ್) ಈಸ್ಟ್ – ಫ್ರಾನ್ಸ್: ಫ್ರೆಂಚ್‍ನ ವೇಗದ ಬುಲೆಟ್ ರೈಲಾಗಿದ್ದು, 2007 ರಲ್ಲಿ ಪರಿಶೀಲಿಸಿ ನಂತರ ಪ್ರಾರಂಭ ಮಾಡಲಾಯಿತು. ಇದು ಗಂಟೆಗೆ 574 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ.

    3. ಎಲ್‍ಜಿವಿ ಅಟ್ಲಾಂಟಿಕ್ – ಫ್ರಾನ್ಸ್: ವಿಶ್ವದ ಮೂರನೇ ಅತೀ ವೇಗದ ರೈಲಾಗಿದೆ. 1989-1990 ರಲ್ಲಿ ಪ್ರಾರಂಭವಾಗಿದ್ದು, ಸುಮಾರು 515 ಕಿ.ಮೀ ದೂರವನ್ನು 1 ಗಂಟೆಯಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

    4. ಬೀಜಿಂಗ್-ಶಾಂಘೈ ಎಚ್‍ಎಸ್‍ಆರ್, ಸಿಆರ್‍ಎಚ್380ಎ – ಚೀನಾ: ಬೀಜಿಂಗ್ ಮತ್ತು ಶಾಂಘೈ ನಡುವೆ ಸುಮಾರು 487 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಆದರೆ ಸಾಮಾನ್ಯ ಕಾರ್ಯಾಚರಣೆಯಲ್ಲಿ 400 ಕಿ.ಮೀ ಹಚ್ಚಿನ ವೇಗವನ್ನು ದಾಟುವುದಿಲ್ಲ. ಈ ರೈಲು 494 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

    5. ಟಿಆರ್-09 – ಜರ್ಮನಿ:  ಇದು 450 ಕಿ.ಮೀ. ಅನ್ನು 1 ಗಂಟೆಯಲ್ಲಿ ವೇಗವಾಗಿ ಚಲಿಸುತ್ತದೆ ಹಾಗೂ 500 ಕಿ.ಮೀ ವರೆಗೆ ಗರಿಷ್ಟ ವೇಗದಲ್ಲು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

    6. ಶಿಂಕಾನ್ಸೆನ – ಜಪಾನ್: ಇದು 425-445 ಕಿ.ಮೀ. ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಜಪಾನ್ ನಲ್ಲಿ ಬಹು ನಗರಗಳನ್ನು ಈ ರೈಲು ಸಂಪರ್ಕಿಸುತ್ತದೆ.

    ಗತಿಮಾನ್ ಎಕ್ಸ್ ಪ್ರೆಸ್: ಭಾರತದಲ್ಲಿ ಸದ್ಯಕ್ಕೆ ಅತಿ ವೇಗದಲ್ಲಿ ಚಲಿಸುವ ರೈಲು ಎಂಬ ಹೆಗ್ಗಳಿಕಿ ಗತಿಮಾನ್ ಎಕ್ಸ್ ಪ್ರೆಸ್ ರೈಲಿಗಿದೆ. 2016ರ ಏಪ್ರಿಲ್ ನಲ್ಲಿ ಈ ರೈಲಿನ ಸಂಚಾರ ಆರಂಭಗೊಂಡಿದ್ದು ದೆಹಲಿ-ಆಗ್ರ ನಡುವೆ 160 ಕಿ.ಮೀ ದೂರವನ್ನು 1 ಗಂಟೆಯಲ್ಲಿ ಕ್ರಮಿಸುತ್ತದೆ.

    ಇದನ್ನೂ ಓದಿ: ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ

  • ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

    ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

    ಅಹಮದಾಬಾದ್: ಬುಲೆಟ್ ರೈಲಿನಿಂದ ಎರಡು ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಜಪಾನಿನ ಪ್ರಧಾನಿ ಶಿಂಜೋ ಅಬೆ ಜೊತೆಗೂಡಿ ಅಹಮದಾಬಾದ್‍ನಲ್ಲಿ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕಸ್ಥಾಪನೆಯನ್ನು ಮೋದಿ ನೆರವೇರಿಸಿದರು. ಬಳಿಕ ಬುಲೆಟ್ ರೈಲು ಯೋಜನೆಗೆ ಹಣಕಾಸಿನ ಸಹಕಾರ ನೀಡಿದ್ದಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಧನ್ಯವಾದ ಹೇಳಿದರು.

    ಇದು ಭಾರತದ ದಶಕಗಳ ಕನಸನಾಗಿದ್ದು, ಎರಡು ದೇಶಗಳ ಸ್ನೇಹ ಪೂರಕವಾಗಿ ಜಪಾನ್ ಭಾರತಕ್ಕೆ ಬುಲೆಟ್ ರೈಲನ್ನು ನೀಡುತ್ತಿರುವ ಉಡುಗೊರೆಯಿದು. ಬುಲೆಟ್ ರೈಲು ಯೋಜನೆಯು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿ ಉದ್ಯೋಗ ನೀಡಲಿದೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ಬಡತನ ನಿರ್ಮೂಲನೆಯಾಗುವ ಮೂಲಕ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

    ಯಾವುದೇ ದೇಶ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದರೆ ಅದು ಅಭಿವೃದ್ಧಿಯನ್ನು ಸೂಚಿಸುತ್ತದೆ. ಆದ್ದರಿಂದ ಸಾರಿಗೆ ವ್ಯವಸ್ಥೆ ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

    ಭಾರತವು ಯಾವಾಗ ಬುಲೆಟ್ ರೈಲನ್ನು ಪ್ರಾರಂಭಿಸುತ್ತದೆ ಎಂದು ಚಿಂತೆಯಾಗಿತ್ತು. ಆದರೆ ಇಂದು ಈ ಯೋಜನೆಗೆ ಚಾಲನೆ ನೀಡಿದ ಬಳಿಕ ನನಗೆ ಭರವಸೆ ಬಂದಿದೆ. ಆದ್ದರಿಂದ ಈ ಯೋಜನೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದರು.

    ಯಾವುದೇ ವ್ಯಕ್ತಿಯಾಗಲಿ ಅಥವಾ ದೇಶವಾಗಲಿ ಸಾಲ ಕೊಟ್ಟು 50 ವರ್ಷಗಳಲ್ಲಿ ಸಾಲ ಹಿಂದಿರುಗಿಸು ಎಂದು ಯಾರಾದರೂ ಹೇಳುತ್ತಾರಾ? ಆದರೆ ಭಾರತದ ಮಿತ್ರ ಜಪಾನ್ ನಮ್ಮ ಮೇಲೆ ನಂಬಿಕೆಯನ್ನು ಇಟ್ಟು ತಾಂತ್ರಿಕ ನೆರವು ಅಲ್ಲದೇ ಶೇ.01 ಬಡ್ಡಿ ದರದಲ್ಲಿ 88 ಸಾವಿರ ಕೋಟಿ ರೂ. ಹಣವನ್ನು ಸಾಲವಾಗಿ ನೀಡಿದೆ. ಈ ಕಾರಣಕ್ಕೆ ಬುಲೆಟ್ ರೈಲು ಜಪಾನ್ ನೀಡುತ್ತಿರುವ ಉಡುಗೊರೆ ಎಂದು ಹೇಳಿದೆ ಎಂದು ಮೋದಿ ಬಣ್ಣಿಸಿದರು.

    ಬುಲೆಟ್ ರೈಲು ನವ ಭಾರತದ ಸಂಕೇತವಾಗಿದ್ದು ಇದಕ್ಕೆ ಕಾರಣರಾದ ನನ್ನ ಮಿತ್ರ ಅಬೆ ಅವರಿಗೆ ಧನ್ಯವಾದಗಳು. ಜೊತೆಗೆ ಈ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ಭಾರತದ ಸಮಸ್ತ ಜನರಿಗೆ ಧನ್ಯವಾದಗಳನ್ನು ತಿಳಿಸಿ ಮೋದಿ ಭಾಷಣ ಮುಕ್ತಾಯಗೊಳಿಸಿದರು.

  • ಮತ್ತೆ ಮಲತಾಯಿ ಧೋರಣೆ, ಕರ್ನಾಟಕಕ್ಕಿಲ್ಲ ಬುಲೆಟ್ ರೈಲು ಭಾಗ್ಯ!

    ಮತ್ತೆ ಮಲತಾಯಿ ಧೋರಣೆ, ಕರ್ನಾಟಕಕ್ಕಿಲ್ಲ ಬುಲೆಟ್ ರೈಲು ಭಾಗ್ಯ!

    ನವದೆಹಲಿ: ಇಂದು ಇಡೀ ದೇಶಕ್ಕೆ ಮಹತ್ವದ ದಿನ. ಪ್ರಗತಿಯತ್ತ ಭಾರತ ಮತ್ತೊಂದು ಮೈಲಿಗಲ್ಲಿನ ಕಡೆಗೆ ದಾಪುಗಾಲು ಇಡುತ್ತಿದೆ. ಜಪಾನ್‍ನ ಸಹಕಾರದಲ್ಲಿ ಬುಲೆಟ್ ರೈಲು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಇಂದು ಶಂಕುಸ್ಥಾಪನೆ ನಡೆಯಲಿದೆ. ಆದರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ.

    2022 ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣವಾಗಲಿದ್ದು ಅದೇ ದಿನ ಅಹಮದಾಬಾದ್ – ಮುಂಬೈ ಬುಲೆಟ್ ರೈಲಿನ ಸಂಚಾರ ಆರಂಭಿಸಲು ರೈಲ್ವೇ ಇಲಾಖೆ ಗುರಿಯನ್ನು ಹಾಕಿಕೊಂಡಿದೆ. ಈ ರೈಲು ಮಾರ್ಗ ಅಲ್ಲದೇ ಇನ್ನು 6 ಮಾರ್ಗಗಳಲ್ಲಿ ಬುಲೆಟ್ ರೈಲು ಓಡಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಮಾರ್ಗಗಳ ಪಟ್ಟಿಯಲ್ಲಿ ಕರ್ನಾಟಕವನ್ನು ಕೈಬಿಡಲಾಗಿದೆ.

    ಸಪ್ತ ಮಾರ್ಗಗಳು:
    ಅಹಮದಾಬಾದ್- ಮುಂಬೈ, ದೆಹಲಿ – ಕೋಲ್ಕತ್ತಾ, ದೆಹಲಿ – ಮುಂಬೈ, ಮುಂಬೈ – ಚೆನ್ನೈ, ದೆಹಲಿ – ಚಂಡೀಘಡ, ಮುಂಬೈ – ನಾಗಪುರ, ದೆಹಲಿ – ನಾಗಪುರ. ಈ ಏಳು ಮಾರ್ಗಗಳ ಪೈಕಿ ಕರ್ನಾಟಕಕ್ಕೆ ಒಂದೇ ಒಂದು ಮಾರ್ಗವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಚೆನ್ನೈ ಮತ್ತು ನಾಗಪುರಕ್ಕೆ ಎರಡು ಮಾರ್ಗಗಳನ್ನು ನೀಡಿದ್ದು ಐಟಿ ಬಿಟಿ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರನ್ನು ಯಾಕೆ ಕೈ ಬಿಟ್ಟಿದ್ದಾರೆ ಎನ್ನುವುದು ಈಗಿರುವ ಪ್ರಶ್ನೆ.

    ಕಾವೇರಿ, ಮಹದಾಯಿಯಲ್ಲಿ ಅನ್ಯಾಯ ಆಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ಬುಲೆಟ್ ರೈಲು ಕರ್ನಾಟಕಕ್ಕೆ ಕೈತಪ್ಪಿದೆ. ಈ ಬೃಹತ್ ಯೋಜನೆ ರಾಜ್ಯಕ್ಕೆ ಕೈತಪ್ಪಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದು ಕಾರಣವೇ? ಅಥವಾ ಅಥವಾ ರಾಜ್ಯ ಬಿಜೆಪಿ ಸಂಸದರಿಗೆ ಇಚ್ಛಾ ಶಕ್ತಿ ಕೊರತೆಯೇ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

    ಇದನ್ನೂ ಓದಿ: ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ