Tag: ಬುಲೆಟ್ ಪ್ರಕಾಶ್

  • ಬದುಕಿನಲ್ಲಿ ಭರವಸೆ ಇದ್ರೆ ಭವಿಷ್ಯ ರೂಪಿಸುವ ದಾರಿ ಕಾಣಿಸ್ತದೆ: ಬುಲೆಟ್ ಪ್ರಕಾಶ್

    ಬದುಕಿನಲ್ಲಿ ಭರವಸೆ ಇದ್ರೆ ಭವಿಷ್ಯ ರೂಪಿಸುವ ದಾರಿ ಕಾಣಿಸ್ತದೆ: ಬುಲೆಟ್ ಪ್ರಕಾಶ್

    ಬೆಂಗಳೂರು: “ಬದುಕಿನಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತದೆ” ಇದು ಇಂದು ನಿಧನರಾದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಟ್ವಿಟ್ಟರ್ ಕವರ್ ಪೇಜ್‍ನಲ್ಲಿರುವ ಸಾಲುಗಳು.

    ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದ ಬುಲೆಟ್ ಪ್ರಕಾಶ್ ಕೊನೆಯದಾಗಿ ಮಾಚ್ 13 ರಂದು ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಯಡಿಯೂರಪ್ಪನವರ ಟ್ವೀಟ್ ಅನ್ನು ಲೈಕ್ ಮಾಡಿದ್ದರು. ಜ.29 ರಂದು ಟ್ವೀಟ್ ಮಾಡಿದ್ದ ಅವರು, ಸಿದ್ಲಿಂಗು, ನೀರು ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಸಹೃದಯಿ ನಿರ್ಮಾಪಕ ಪ್ರಸನ್ನ ನಿರ್ಮಾಣದ ಪರಿಮಳಾ ಲಾಡ್ಜ್ ಚಿತ್ರದ ಚಿತ್ರೀಕರಣದಲ್ಲಿ ತೆಗೆದ ಫೋಟೋ ಎಂದು ಬರೆದು ಟ್ವೀಟ್ ಮಾಡಿದ್ದರು.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಗಾಳಿಪಟ-2 ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಫೋಟೋ ಕ್ಲಿಕ್ ಎಂದು ಬರೆದುಕೊಂಡಿದ್ದರು.

    ಸಿನಿಮಾದಲ್ಲಿ ನಟನೆಯ ಜೊತೆಗೆ ಬಿಜೆಪಿ ನಾಯಕರಾಗಿಯೂ ಗುರುತಿಸಿಕೊಂಡಿದ್ದ ಪ್ರಕಾಶ್ ಅವರು, ಇತ್ತೀಚೆಗೆ ದೆಹಲಿ ನಿರ್ಭಯಾ ಪ್ರಕರಣದ ಬಗ್ಗೆಯೂ ಟ್ವೀಟ್ ಮಾಡಿದ್ದರು, ನಿರ್ಭಯಾ ಆರೋಪಿಗಳ ಫೋಟೋ ಹಾಕಿ, ನಿರ್ಭಯಾ ಪ್ರಕರಣದಲ್ಲಿ 85 ತಿಂಗಳುಗಳ ನಂತರ ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಿದೆ. ಈಗಲಾದರೂ ಆ ಹೆಣ್ಣು ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದರು.

    ಸಿನಿಮಾದಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದಿದ್ದ ಬುಲೆಟ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನಾರೋಗ್ಯಕ್ಕೆ ತುತ್ತಾದಾಗ ಅವರ ಫೋಟೋವನ್ನು ಟ್ವೀಟ್ ಮಾಡಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ, ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ ಎಂದು ಬರೆದುಕೊಂಡಿದ್ದರು.

    ಸ್ನೇಹಿಮುಖಿಯಾಗಿದ್ದ ಬುಲೆಟ್ ಪ್ರಕಾಶ್ ಅವರು ಅಷ್ಟೇ ನೇರನುಡಿ ಹೊಂದಿದ ವ್ಯಕ್ತಿಯಾಗಿದ್ದರು. ಸಮಾಜ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು, ಹೈದರಾಬಾದ್‍ನ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಪಾಪಿಗಳನ್ನು ಎನ್ ಕೌಂಟರ್ ಮಾಡಿದ ಸೈಬರಾಬಾದ್ ಪೋಲಿಸ್ ಕಮಿಷನರ್ ವಿಶ್ವನಾಥ್ ಸಜ್ಜನರ್ ತಂಡಕ್ಕೆ ಹ್ಯಾಟ್ಸ್ ಆಫ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಕಾಂಬಿನೇಷನ್ ಬಾರೀ ಕಚಗುಳಿ ಇಡ್ತಿತ್ತು. ನಾಳೆ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ರಾಜಕೀಯ ಕನಸು ಕಂಡಿದ್ದ ಬುಲೆಟ್ ಪ್ರಕಾಶ್: ರಂಗಾಯಣ ರಘು

    ರಾಜಕೀಯ ಕನಸು ಕಂಡಿದ್ದ ಬುಲೆಟ್ ಪ್ರಕಾಶ್: ರಂಗಾಯಣ ರಘು

    – ಪ್ರಕಾಶ್‍ಗೆ ಸ್ನೇಹ ಸಾಗರವೇ ಇದೆ

    ಬೆಂಗಳೂರು: ಗೆಳೆಯ ಬುಲೆಟ್ ಪ್ರಕಾಶ್ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನೋವು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಹಾಸ್ಯ ನಟ ರಂಗಾಯಣ ರಘು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾನು ಹಾಗೂ ಬುಲೆಟ್ ಪ್ರಕಾಶ್ ಹೋಗೋ ಬಾರೋ ಫ್ರೆಂಡ್ಸ್. ಅವರಿಗೆ ನಾನಷ್ಟೇ ಅಲ್ಲ ದೊಡ್ಡ ಸಂಖ್ಯೆಯ ಸ್ನೇಹ ಬಳಗವೇ ಇದೆ. ಪ್ರಕಾಶ್ ಅವರ ಏರಿಯಾದಲ್ಲಿ ಅನೇಕ ಸ್ನೇಹಿತರಿದ್ದಾರೆ. ಎಲ್ಲರೊಂದಿಗೂ ಹಾಸ್ಯವಾಗಿ, ನಗು ಮುಖದಿಂದ ಇರುತ್ತಿದ್ದರು. ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದ ಎಂದು ನೆನೆದರು.

    ನೇರ ನುಡಿಯ ಗೆಳೆಯ ಪ್ರಕಾಶ್ ರಾಜಕೀಯ ಕನಸು ಕಂಡಿದ್ದ. ಅದರಂತೆ ಸಿದ್ಧತೆ ಕೂಡ ನಡೆಸಿದ್ದ. ಆದರೆ ಪ್ರಕಾಶ್ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನ ಅಗಲಿದ್ದು ಭಾರೀ ನೋವು ತಂದಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಎಂದು ರಂಗಾಯಣ ರಘು ಹೇಳಿದರು.

  • ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

    ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

    ಬೆಂಗಳೂರು: ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್(44) ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರಿನಲ್ಲಿ  ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. 6 ದಿನಗಳ ಹಿಂದೆ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

    ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಬುಲೆಟ್ ಪ್ರಕಾಶ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತೇ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

    ಬುಲೆಟ್ ಪ್ರಕಾಶ್ ಒಟ್ಟು 300ಕ್ಕೂ ಹೆಚ್ಚು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ರಾಯಲ್ ಎನ್‍ಫೀಲ್ಡ್ ಬೈಕಿನಿಂದಾಗಿ ‘ಬುಲೆಟ್’ ಹೆಸರು ಬಂದಿತ್ತು. 2015ರಲ್ಲಿ ಬಿಜೆಪಿ ಪಕ್ಷವನ್ನು ಬುಲೆಟ್ ಪ್ರಕಾಶ್ ಸೇರಿದ್ದರು.

  • ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬೆಂಗಳೂರು: ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೀಗ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಬುಲೆಟ್ ಪ್ರಕಾಶ್ ಶನಿವಾರ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಇದುವರೆಗೆ ಮೂರು ಆಸ್ಪತ್ರೆಯನ್ನು ಬದಲಿಸಿರುವ ಬುಲೆಟ್ ಪ್ರಕಾಶ್ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿದೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಕೃತಕ ಉಸಿರಾಟ ಸಾಧನದಿಂದ ಉಸಿರಾಡುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತಾ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

  • ಮತ್ತೆ ರಮ್ಯಾ ಕಾಲೆಳೆದ ಬುಲೆಟ್ ಪ್ರಕಾಶ್

    ಮತ್ತೆ ರಮ್ಯಾ ಕಾಲೆಳೆದ ಬುಲೆಟ್ ಪ್ರಕಾಶ್

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂ ಖಾತೆಯ ಸಂದೇಶಗಳನ್ನು ಡಿಲೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಾಸ್ಯನಟ ಬುಲೆಟ್ ಪ್ರಕಾಶ್ ರಮ್ಯಾ ಅವರನ್ನು ವ್ಯಂಗ್ಯ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಬುಲೆಟ್ ಪ್ರಕಾಶ್ “ಎಲೆಕ್ಷನ್‍ನಲ್ಲಿ ವೋಟ್ ಹಾಕದೆ ಜೂಟು, ಊರೆಲ್ಲ ಜನರ ಜೊತೆ ಫೈಟು, ಮಂಡ್ಯ ಟು ಬೆಂಗಳೂರು ಶಿಫ್ಟು, ಮೋದಿ ಹವಾಗೆ ಟ್ವಿಟ್ಟರ್ ಅಕೌಂಟ್ ಡಿಲಿಟ್ಟು, ಬೇಕಿತ್ತ ಮೇಡಮ್ ಇಷ್ಟೆಲ್ಲಾ ಗಿಲಿಟ್ಟು” ಎಂದು ಬರೆಯುವ ಮೂಲಕ ರಮ್ಯಾರನ್ನು ವ್ಯಂಗ್ಯವಾಡಿದ್ದಾರೆ.

    ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ರಮ್ಯಾ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂ ಖಾತೆಯ ಸಂದೇಶಗಳು ಮಾಯವಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ನಿರಾಶೆಯಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದ್ರಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

    ಈ ಹಿಂದೆ ರಮ್ಯಾ ಫೋಟೋ ಶಾಪ್ ಮಾಡಿದ್ದ ಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದರು. ಆಗ ಬುಲೆಟ್ ಪ್ರಕಾಶ್ ಅವರು ರಮ್ಯಾ ಅವರಿಗೆ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.

    ಬುಲೆಟ್ ಪ್ರಕಾಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ” ಎಂದು ಬರೆದು ಟ್ವೀಟ್ ಮಾಡಿದ್ದರು.

  • ಮಗನಿಗಾಗಿ 13 ಲಕ್ಷದ ಸಂಬಳ ತ್ಯಜಿಸಿ ಬಂದ್ಳು – ರಮ್ಯಾ ಬೆಂಬಲಿಗರ ಟ್ರೋಲ್‍ಗೆ ಜಗ್ಗೇಶ್ ಖಡಕ್ ಮಾತು

    ಮಗನಿಗಾಗಿ 13 ಲಕ್ಷದ ಸಂಬಳ ತ್ಯಜಿಸಿ ಬಂದ್ಳು – ರಮ್ಯಾ ಬೆಂಬಲಿಗರ ಟ್ರೋಲ್‍ಗೆ ಜಗ್ಗೇಶ್ ಖಡಕ್ ಮಾತು

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದ ರಮ್ಯಾರನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಪ್ರಕಾಶ್ ಅವರಿಗೆ ನವರಸನಾಯಕ ಜಗ್ಗೇಶ್ ಸಾಥ್ ಕೊಟ್ಟು ಟ್ವೀಟ್ ಮಾಡಿದ್ದರು. ಈಗ ಜಗ್ಗೇಶ್ ಟ್ವೀಟ್ ಮಾಡಿದ್ದಕ್ಕೆ ಅವರ ಕುಟುಂಬದ ವಿಚಾರವನ್ನು ಎಳೆದು ರಮ್ಯಾ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ.

    ಬೆಂಬಲಿಗರ ಟ್ರೋಲ್ ಏನು?:
    ರಮ್ಯಾ ಬಗ್ಗೆ ಈ ರೀತಿಯ ಟೀಕೆಗೆ ಮಾಡಿದಕ್ಕೆ ಅವರ ಬೆಂಬಲಿಗರು ಜಗ್ಗೇಶ್ ಅವರ ವಿದೇಶಿ ಸೊಸೆಯ ಬಗ್ಗೆ ಪ್ರಶ್ನಿಸಿದ್ದಾರೆ. ವಿದೇಶಿ ಯುವತಿಯನ್ನು ಮದುವೆಯಾಗಿರುವ ಜಗ್ಗೇಶ್ ಮಗನ ಫೋಟೋ ಹಾಕಿ, “ದಾರಿ ತಪ್ಪಿದ ಮಕ್ಕಳ ತಿದ್ದಬಹುದು. ದಾರಿ ತಪ್ಪಲೇ ಹುಟ್ಟಿದ ಮಕ್ಕಳ ತಿದ್ದಬಾರದು” ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, “ಈ ಅದ್ಭುತ ಜೀವನ ದೇವರು ನಿಮಗೂ ದಯಪಾಲಿಸಲಿ. 3 ಮಾಸ್ಟರ್ ಡಿಗ್ರಿ, ಸೈಂಟಿಸ್ಟ್ ಅಪ್ಪ-ಅಮ್ಮ, ದೇಶ ಬಿಟ್ಟು ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ. 13 ಲಕ್ಷ ಸಂಬಳ ತ್ಯಜಿಸಿ ಮಗನ ಪ್ರೀತಿಗಾಗಿ 2 ಲಕ್ಷ ಸಂಬಳಕ್ಕೆ ಬಂದು ಅದ್ಭುತ ಮೊಮ್ಮಗನ ನೀಡಿ ಮಾವನ ಜೊತೆ ಭಾರತ್ ಮಾತಾ ಕೀ ಜೈ ಅನ್ನುತ್ತಾಳೆ. ದೇವರು ಅವಳ ಯೋಗ, ಯೋಗ್ಯತೆ ನಿಮಗೂ ದಯಪಾಲಿಸಲಿ. ನಿಮ್ದೂ ಒಂದು ಜನ್ಮ ಎಂದು ರಮ್ಯಾ ಬೆಂಬಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.

    ಬುಲೆಟ್ ಪ್ರಕಾಶ್, ಜಗ್ಗೇಶ್ ಹೇಳಿದ್ದೇನು?:
    ಬುಲೆಟ್ ಪ್ರಕಾಶ್ ತಮ್ಮ ಟ್ವಿಟ್ಟರಿನಲ್ಲಿ, “ರಮ್ಯ ಮೇಡಂ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ” ಎಂದು ಬರೆದುಕೊಂಡಿದ್ದರು.

    ಈ ಟ್ವೀಟ್‍ಗೆ ಜಗ್ಗೇಶ್, “ದಾರಿ ತಪ್ಪುವ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷ ಪ್ರಶ್ನೆ. ಜನನವು ಹೇಗೋ ಜೀವನವೂ ಹಾಗೆ. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷಪಡುವ ಜನರು ಇರುವುದು ದೌರ್ಭಾಗ್ಯ” ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದರು.

  • ರಮ್ಯಾ ವಿರುದ್ಧ ನಟ ಬುಲೆಟ್ ಪ್ರಕಾಶ್ ಮತ್ತೆ ಆಕ್ರೋಶ- ವಿಡಿಯೋ

    ರಮ್ಯಾ ವಿರುದ್ಧ ನಟ ಬುಲೆಟ್ ಪ್ರಕಾಶ್ ಮತ್ತೆ ಆಕ್ರೋಶ- ವಿಡಿಯೋ

    ಬೆಂಗಳೂರು: ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ನಿನ್ನೆ ತಾನೇ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರ ಕಾಲೆಳೆದಿದ್ದು, ಇದೀಗ ವಿಡಿಯೋ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಇಡೀ ವಿಶ್ವವೇ ಮೋದಿಗೆ ಸೆಲ್ಯೂಟ್ ಹೊಡೆಯುವಾಗ ರಮ್ಯಾ ಅವರು ಹೀಯಾಳಿಸೋದು ಸರಿಯಲ್ಲ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದು ತಿರುಗೇಟು ನೀಡಿದ್ದಾರೆ.

    ವಿಡಿಯೋದಲ್ಲೇನಿದೆ?
    ರಮ್ಯಾ ಅವರು ರಾಷ್ಟ್ರೀಯ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತಾಡೋದು ಸರಿ ಅಲ್ಲ. ಒಬ್ಬ ನಾಯಕನ ಬಗ್ಗೆ ಹೀಯಾಳಿಸಿ ಮಾತಾಡೋದು ತಪ್ಪು ಅನಿಸಿತ್ತು. ಹೀಗಾಗಿ ನಿನ್ನೆ ನಾನು ಟ್ವೀಟ್ ಮಾಡಿದ್ದೆ ಎಂದಿದ್ದಾರೆ.

    ರಮ್ಯಾ ಅವರ ಮನಸ್ಥಿತಿ ಹೇಗಿದೆ ಅಂದರೆ, ಪಾಕಿಸ್ತಾನ ಸ್ವರ್ಗ. ಇಂತಹವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಏನೂ ಮಾಡೋದಕ್ಕೆ ಆಗಲ್ಲ. ಹೀಗಾಗಿ ಇನ್ನು ಮುಂದೆಯಾದರೂ ಮೇಡಂ ಅವರು ರಾಜಕಾರಣದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳಲಿ. ರಾಜಕೀಯ ತಜ್ಞರ ಬಳಿ ಹೋಗಿ ಟ್ಯೂಷನ್ ತೆಗೆದುಕೊಳ್ಳಲಿ. ಹೀಗೆ ಕಲಿತರೆ ತುಂಬಾ ಸಹಾಯವಾಗುತ್ತದೆ. ಸಮಾಜಕ್ಕೂ ಹೆಲ್ಪ್ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಜನರಿಗೆ ಈ ರೀತಿಯ ತಪ್ಪು ಸಂದೇಶಗಳನ್ನು ರವಾನಿಸುವುದು ಸರಿಯಲ್ಲ. ಒಬ್ಬ ವಿಶ್ವನಾಯಕರ ವಿರುದ್ಧ ಮಾತಾಡೋದು ಸರಿಯಲ್ಲ. ಇಡೀ ಜಗತ್ತು ಅವರನ್ನು ಗೌರವದಿಂದ ಕಾಣುತ್ತದೆ. ಸೆಲ್ಯೂಟ್ ಹೊಡೆಯುತ್ತದೆ. ನಮ್ಮ ಭಾರತ ದೇಶ ಎಲ್ಲೋ ಇತ್ತು. ಆದ್ರೆ ಇಂದು ಈ ದೇಶವನ್ನು ಪ್ರಪಂಚದಾದ್ಯಂತ `ಹಿಂದೂಸ್ತಾನ’ ಎಂದು ಹೇಳುವ ಮಟ್ಟಿಗೆ ಇಂದು ಭಾರತವನ್ನು ಅವರು ಬೆಳೆಸಿದ್ದಾರೆ ಅಂದರು.

    ಇಂತಹ ಒಬ್ಬ ವಿಶ್ವನಾಯಕನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ, ಅರ್ಹತೆ ಹಾಗೂ ಜವಾಬ್ದಾರಿಯನ್ನು ಬಿಟ್ಟು ಹೊರಬಂದಿದ್ದೀರಿ. ಇದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.

  • ಮಗುವಾಗಿದ್ದಾಗ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗ್ತಿರಲಿಲ್ಲ: ರಮ್ಯಾಗೆ ಬುಲೆಟ್ ಪ್ರಕಾಶ್ ತಿರುಗೇಟು

    ಮಗುವಾಗಿದ್ದಾಗ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗ್ತಿರಲಿಲ್ಲ: ರಮ್ಯಾಗೆ ಬುಲೆಟ್ ಪ್ರಕಾಶ್ ತಿರುಗೇಟು

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ, ಫೋಟೋ ಶಾಪ್ ಮಾಡಿದ್ದ ಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದರು. ಈಗ ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ರಮ್ಯಾ ಅವರಿಗೆ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

    ಬುಲೆಟ್ ಪ್ರಕಾಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ. ನಾಳೆ ವಿಡಿಯೋ ಮೂಲಕ ಉತ್ತರ ಕೊಡುತ್ತೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ರಮ್ಯಾ ಟ್ವೀಟ್ ಮಾಡಿದ್ದೇನು?
    ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇರುವ ಫೋಟೋವನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಹಿಟ್ಲರ್ ಅವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಮಗುವಿನೊಂದಿಗೆ ಇರುವ ಹಿಟ್ಲರ್ ಫೋಟೋವನ್ನು ಮಗುವಿನ ಕಿವಿ ಹಿಂಡುವಂತೆ ಫೋಟೋಶಾಪ್ ಮಾಡಲಾಗಿದೆ. ಮೋದಿ ಅವರ ಪುಟ್ಟ ಬಾಲಕನೊಂದಿಗೆ ಇರುವ ಫೋಟೋಗೆ ಹಿಟ್ಲರ್ ಫೋಟೋವನ್ನು ಹೋಲಿಕೆ ಮಾಡಿ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿ ರಮ್ಯಾ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

    ರಮ್ಯಾ ಅವರ ಟ್ವೀಟ್‍ಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಲವು ಮಂದಿ ಹಿಟ್ಲರ್ ಮಗುವಿನೊಂದಿಗೆ ಇರುವ ಆಸಲಿ ಫೋಟೋ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೋಟೋಶಾಪ್ ಮಾಡಿದ ಫೋಟೋವನ್ನು ನೀವು ಟ್ವೀಟ್ ಮಾಡಿದ್ದು, ಆಸಲಿ ಫೋಟೋ ಇಲ್ಲಿದೆ ನೋಡಿ ಎಂದಿದ್ದಾರೆ. ಅಲ್ಲದೇ ಅಪ್ಪು ಎಂಬವರು ರಾಜೀವ್ ಗಾಂಧಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಿಟ್ಲರ್‍ಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಹಲವರು ರಮ್ಯಾ ಅವರು ವೋಟ್ ಮಾಡದ ಬಗ್ಗೆ ಪ್ರಸ್ತಾಪ ಮಾಡಿ ಕಾಲೆಳೆದಿದ್ದು, ಮೊದಲು ನೀವು ವೋಟ್ ಮಾಡಿ ಮೇಡಂ. ಆ ಬಳಿಕ ಇತರರಿಗೆ ಬುದ್ಧಿ ಹೇಳಿ ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಸುಲ್ತಾನನ ಆರೋಗ್ಯ ವಿಚಾರಿಸಿದ್ರು ಬುಲೆಟ್ ಪ್ರಕಾಶ್!

    ಸುಲ್ತಾನನ ಆರೋಗ್ಯ ವಿಚಾರಿಸಿದ್ರು ಬುಲೆಟ್ ಪ್ರಕಾಶ್!

    ಮೈಸೂರು: ಹಾಸ್ಯನಟ ಹಾಗೂ ಚಲನಚಿತ್ರ ನಿರ್ಮಾಪಕ ಬುಲೆಟ್ ಪ್ರಕಾಶ್‍ರವರು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಚಾಲೇಂಜಿಂಗ್ ಸ್ಟಾರ್ ದರ್ಶನ್‍ರವರ ಆರೋಗ್ಯ ವಿಚಾರಿಸಿದ್ದಾರೆ.

    ಸೋಮವಾರ ನಸುಕಿನ ಜಾವ ನಡೆದ ಕಾರ್ ಅಪಘಾತದಲ್ಲಿ ದರ್ಶನ್ ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಇಡೀ ಚಿತ್ರರಂಗವೇ ದರ್ಶನ್‍ರ ಆರೋಗ್ಯ ವಿಚಾರಿಸಲು ಬರುತ್ತಿದೆ. ಮಂಗಳವಾರ ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

    ಇಂದು ದರ್ಶನ್‍ರವರ ಪರಮಾಪ್ತರಾಗಿರುವ ಬುಲೆಟ್ ಪ್ರಕಾಶ್‍ರವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸುದೀರ್ಘ 20 ನಿಮಿಷ ಮಾತುಕತೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್‍ರವರು ಚೆನ್ನಾಗಿದ್ದಾರೆ. ಅವರಿಗೇನೂ ಆಗಿಲ್ಲ. ಕರ್ನಾಟಕದ ಎಲ್ಲಾ ತಾಯಂದಿರ ಆಶೀರ್ವಾದ ಅವರ ಮೇಲಿದೆ. ಮಂಗಳವಾರ ನಟ ಶಿವಣ್ಣನವರು ಕೂಡ ಬಂದು, ಸುಲ್ತಾನನ ಆರೋಗ್ಯ ವಿಚಾರಿಸಿ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ನಡೆಯುತ್ತಿದೆ. ಎಲ್ಲರು ಒಟ್ಟಾಗಿ ಇದ್ದೀವಿ, ಮುಂದೆಯೂ ಇರುತ್ತೀವಿ ಎಂದು ಹೇಳಿದರು.

    ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ನಸುಕಿನ ಜಾವ ಅಲ್ಲಿಂದ ಬೆಂಗಳೂರಿಗೆ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ರಿಂಗ್ ರೋಡ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ಆಂಟೋನಿ ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲರಿಗೂ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ದೇವರಾಜ್ ಹಾಗೂ ಪ್ರಜ್ವಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಆದ್ರೆ ಕೈ ಮೂಳೆ ಮುರಿದುಕೊಂಡಿರುವ ದರ್ಶನ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರೋ ದರ್ಶನ್, ಮೂರನೇ ದಿನವಾದ ಇಂದೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಯಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಅಪಘಾತವಾಗಿ 3ನೇ ದಿನವೂ ದರ್ಶನ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ- ವೈದ್ಯರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv