Tag: ಬುದ್ಗಾಮ್

  • ಕಾಶ್ಮೀರದ ಬುದ್ಗಾಮ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 10 ಮಂದಿಗೆ ಗಾಯ

    ಕಾಶ್ಮೀರದ ಬುದ್ಗಾಮ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 10 ಮಂದಿಗೆ ಗಾಯ

    ಶ್ರೀನಗರ: ಮಧ್ಯ ಕಾಶ್ಮೀರದ ಬುದ್ಗಾಮ್ (Budgam) ಜಿಲ್ಲೆಯ ದೂತ್‌ಪತ್ರಿ (Doodhpathri )ಬಳಿ ಸೇನಾ ವಾಹನವು ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ್ದು, ಪರಿಣಾಮ 10 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಸೇನಾ ವಾಹನದಲ್ಲಿದ್ದ ಎಂಟು ಸಿಆರ್‌ಪಿಎಫ್ (Central Reserve Police Force) ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮೋಹನ್‌ ಭಾಗವತ್‌

    ದೂಧ್‌ಪತ್ರಿಯ ತಂಗ್ನಾರ್ ಬಳಿ 181 ಬೆಟಾಲಿಯನ್‌ನ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿಆರ್‌ಪಿಎಫ್ ವಾಹನವು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ 8 ಮಂದಿ ಸಿಪಿಆರ್‌ಎಫ್ ಸಿಬ್ಬಂದಿ ಮತ್ತು ಇಬ್ಬರು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ

    ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‍ನಲ್ಲಿ ಭಯೋತ್ಪಾದಕರಿಂದ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ನಡೆದಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

    Omar Abdullah

    ಟ್ವೀಟ್‍ನಲ್ಲಿ ಒಮರ್ ಅಬ್ದುಲ್ಲಾ ಅವರು, ರಾಹುಲ್ ಭಟ್ ಮೇಲಿನ ಹಂತಕ ಉಗ್ರಗಾಮಿ ದಾಳಿಯನ್ನು ನಾನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ತಹಸಿಲ್ ಕಚೇರಿಯಲ್ಲಿ ಸರ್ಕಾರಿ ನೌಕರನಾಗಿದ್ದ ರಾಹುಲ್ ಅವರ ಮೇಲೆ ದಾಳಿ ನಡೆಸಲಾಯಿತು. ಈ ಹತ್ಯೆಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಇದು ಮುಂದುವರಿಯುತ್ತೆ. ಇದರಿಂದ ಜಮ್ಮು-ಕಾಶ್ಮೀರದಲ್ಲಿ ಭಯದ ಭಾವನೆ ಬೆಳೆಯುತ್ತ ಹೋಗುತ್ತೆ. ರಾಹುಲ್ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ 

    ಭಟ್ ಅವರ ಜೀವನವು ಇಂದು ಕ್ರೂರವಾಗಿ ನಶಿಸಿರುವುದು ದುರಂತ. ರಾಹುಲ್ ಭಟ್ ವಿಶ್ರಾಂತಿ ಪಡೆಯಿರಿ ಎಂದು ಬರೆದುಕೊಂಡಿದ್ದಾರೆ.

    ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಸರ್ಕಾರಿ ನೌಕರಾಗಿದ್ದರು. ಚದೂರ ಪ್ರದೇಶದಲ್ಲಿನ ಅವರ ಕಚೇರಿಯಲ್ಲಿಯೇ ಭಯೋತ್ಪಾದಕರು ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಫಲಕಾರಿಯಾಗದೆ ಪ್ರಾಣ ಬಿಟ್ಟರು.

    ಪೊಲೀಸರು ಈ ಕುರಿತು ಮಾಹಿತಿ ಕೊಟ್ಟಿದ್ದು, ಭಟ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಶ್ರೀನಗರದ ಎಸ್‍ಎಂಎಚ್‍ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಪ್ರಾಥಮಿಕ ತನಿಖೆಯಿಂದ ಇಬ್ಬರು ಭಯೋತ್ಪಾದಕರು ಈ ಘೋರ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕೃತ್ಯಕ್ಕೆ ಪಿಸ್ತೂಲ್ ಬಳಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ:  ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ 

    ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ರಾಹುಲ್ ಭಟ್ ಅವರ ಬರ್ಬರ ಹತ್ಯೆಯನ್ನು ಖಂಡಿಸಿದ್ದಾರೆ. ಈ ಹೇಯ ಭಯೋತ್ಪಾದನಾ ದಾಳಿಯ ಹಿಂದಿರುವವರನ್ನು ಶಿಕ್ಷಿಸಲೇ ಬೇಕು. ದುಃಖತಪ್ತ ಕುಟುಂಬದೊಂದಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಒಗ್ಗಟ್ಟಿನಿಂದ ನಿಂತಿದೆ ಎಂದು ಭರವಸೆ ಕೊಟ್ಟರು.

  • ಸ್ಥಳದಿಂದ ತೆರಳಲು ಸೂಚಿಸಿದ್ರೂ ಕಲ್ಲು ತೂರಾಟ: ಶ್ರೀನಗರದಲ್ಲಿ ಯೋಧರ ಗುಂಡಿನ ದಾಳಿಗೆ ಮೂವರು ಬಲಿ

    ಸ್ಥಳದಿಂದ ತೆರಳಲು ಸೂಚಿಸಿದ್ರೂ ಕಲ್ಲು ತೂರಾಟ: ಶ್ರೀನಗರದಲ್ಲಿ ಯೋಧರ ಗುಂಡಿನ ದಾಳಿಗೆ ಮೂವರು ಬಲಿ

    ಶ್ರೀನಗರ: ದೇಶಾದ್ಯಂತ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ. ಕೆಲ ಸಣ್ಣ ಪುಟ್ಟ ಅಹಿತಕರ ಘಟನೆ ಹೊರತುಪಡಿಸಿ, ಬಹುತೇಕ ಎಲ್ಲಾ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

    ಶ್ರೀನಗರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ವೇಳೆ ಗಡಿಭದ್ರತಾ ಯೋಧರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯ ವೇಳೆ ಮೂವರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

    ಕೇಂದ್ರ ಕಾಶ್ಮೀರದ ಬುದ್ಗಾಮ್ ಮತ್ತು ಗಂದರ್ಬಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಮತಗಟ್ಟೆಗೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಗಡಿ ಭದ್ರತಾ ಯೋಧರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಬುದ್ಗಾಮ್ ನ ಚರಾರ್-ಇ- ಷರೀಫ್ ಬಳಿಯ ಪಕೇರ್ಪೋರಾ ಮತಗಟ್ಟೆ ಬಳಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಡಿ ಭದ್ರತಾ ಪಡೆ ಯೋಧರ ಮೇಲೆ ಕಲ್ಲುಗಳನ್ನು ತೂರಿದ್ದು ಈ ಹಿನ್ನೆಲೆಯಲ್ಲಿ ಯೋಧರು ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಿಸಿದ್ದು ಇದರಲ್ಲಿ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.

    ಮೊದಲ ಪ್ರತಿಭಟನಾಕಾರರಿಗೆ ಸ್ಥಳದಿಂದ ತೆರಳುವಂತೆ ಯೋಧರು ಸೂಚನೆ ನೀಡಿದರು. ಆದ್ರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಯೋಧರ ವಿರುದ್ಧ ಕಲ್ಲುಗಳನ್ನು ತೂರಿದ್ದರಿಂದ ಯೋಧರು ಪ್ರತಿದಾಳಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಿಂದ ಇಬ್ಬರು ಮೃತಪಟ್ಟಿದ್ದು, ಮೃತರನ್ನು 20 ವರ್ಷದ ಮೊಹಮ್ಮದ್ ಅಬ್ಬಾಸ್ ಮತ್ತು 15 ವರ್ಷದ ಫೈಜಾನ್ ಅಹಮದ್ ಎಂದು ಗುರುತಿಸಲಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ಬಿರ್ವಾ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ಯೋಧರು ಗುಂಡಿನ ದಾಳಿ ನಡೆಸಿದ್ದು, ಅಲ್ಲಿ ನಿಸ್ಸಾರ್ ಅಹಮ್ಮದ್ ಎಂಬಾತ ಮೃತಪಟ್ಟಿದ್ದಾನೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.

    ಮತದಾನದ ಹಿನ್ನೆಲೆಯಲ್ಲಿ ಶ್ರೀನಗರ, ಬುದ್ಗಾಮ್ ಮತ್ತು ಗುಂದರ್ಬಲ್ ಈ ಮೂರು ಜಿಲ್ಲೆಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಅಸ್ಸಾಂ, ಕರ್ನಾಟಕ, ರಾಜಸ್ಥಾನ ದೆಹಲಿ, ಪಶ್ಚಿಮ ಬಂಗಾಳ ಮೊದಲಾದ ಕಡೆಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ.