Tag: ಬೀಳ್ಕೊಡುಗೆ

  • ವೀಡಿಯೋ- 11 ವರ್ಷ ಕಾರ್ಯನಿರ್ವಹಿಸಿದ್ದ ಶ್ವಾನಕ್ಕೆ ಸಿಬ್ಬಂದಿಯಿಂದ ಬೀಳ್ಕೊಡುಗೆ

    ವೀಡಿಯೋ- 11 ವರ್ಷ ಕಾರ್ಯನಿರ್ವಹಿಸಿದ್ದ ಶ್ವಾನಕ್ಕೆ ಸಿಬ್ಬಂದಿಯಿಂದ ಬೀಳ್ಕೊಡುಗೆ

    ಮುಂಬೈ: ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ಶ್ವಾನವೊಂದಕ್ಕೆ ಬೀಳ್ಕೊಟ್ಟ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಕರ್ತವ್ಯದಿಂದ ನಿವೃತ್ತಿ ಹೊಂದಿ ಶ್ವಾನವನ್ನು ಪೊಲೀಸ್ ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕವಾಗಿ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

    ಸ್ಪೈಕ್ ಕೂಡ ಶಾಂತವಾಗಿ ಕುಳಿತು ಮೆರವಣಿಗೆಯಲ್ಲಿ ಸಾಗಿದೆ. ವೃತ್ತಿಜೀವನದ ಹಂತವನ್ನು ಮುಗಿಸಿ ನಿವೃತ್ತಿ ಜೀವನದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲಿದೆ. ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡಿರುವ ಶ್ವಾನದ ಕಾರ್ಯಕ್ಕೆ ಸಿಬ್ಬಂದಿ ಮೆಚ್ಚುಗೆಯ ಮಾತುಗಳನ್ನಾಡಿ ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ.

    ಗೋಲ್ಡನ್ ಲ್ಯಾಬ್ರಡಾರ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು.

  • ಸಜ್ಜನ ಕೋಟಾ ಶ್ರೀನಿವಾಸ ಪೂಜಾರಿ ಸಿಎಂ ಆಗಲಿ ಎಂಬುದೇ ನನ್ನ ಹಾರೈಕೆ: ಶರವಣ

    ಸಜ್ಜನ ಕೋಟಾ ಶ್ರೀನಿವಾಸ ಪೂಜಾರಿ ಸಿಎಂ ಆಗಲಿ ಎಂಬುದೇ ನನ್ನ ಹಾರೈಕೆ: ಶರವಣ

    –  ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಿಎಂ ಗೈರು

    ಬೆಂಗಳೂರು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬಹಳ ಸಜ್ಜನರು. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ ಎಂದು ಟಿ.ಎ ಶರವಣ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಅವಧಿ ಪೂರ್ಣಗೊಳಿಸಿದ 15 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ವಿಪಕ್ಷ ಸಚೇತಕ ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದಾರೆ. ಅಲ್ಲದೆ ಶರವಣ, ಜಯಮಾಲ, ಜಯಮ್ಮ, ರೇವಣ್ಣ, ಶರಣಪ್ಪ ಮಟ್ಟೂರು, ಬೋಸರಾಜು ಸೇರಿ ಹಲವು ನಿವೃತ್ತಿ ಹೊಂದಿದ ಪರಿಷತ್ ಸದಸ್ಯರು ಕೂಡ ಪಾಲ್ಗೊಂಡಿದ್ದಾರೆ.

    ಶರವಣ ಮಾತನಾಡಿ, ನಾನು ಮತ್ತೆ ಪುನರಾಯ್ಕೆ ಆಗುತ್ತೇನೆಂಬ ನಿರೀಕ್ಷೆ ಇತ್ತು. ಆದರೆ ನಿರಾಸೆ ಆಗಿದೆ. ಕೇವಲ ಮುನ್ನೂರು ಜನ ಮಾತ್ರ ಶಾಸಕರು ಎಂದು ಕರೆಸಿಕೊಳ್ಳುತ್ತಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದೆ ಅನ್ನೋದೇ ಸಂತೋಷದ ವಿಚಾರ. ಕೋಟಾ ಶ್ರೀನಿವಾಸ ಪೂಜಾರಿ ಅವರು ಬಹಳ ಸಜ್ಜನರು. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಪಕ್ಷಾತೀತವಾಗಿ ಧನ್ಯವಾದಗಳು ಎಂದು ತಿಳಿಸಿದರು.

    ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಟ್ಟಿದ್ರಿ. ನನಗೆ ತಂದೆ ಇಲ್ಲ. ಸಭಾಪತಿಗಳನ್ನು ತಂದೆ ಸ್ಥಾನದಲ್ಲಿ ನೋಡಿದ್ದೇನೆ. ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಸೋದರನ ಸ್ಥಾನದಲ್ಲಿ ನೋಡಿದ್ದೇನೆ ಎಂದು ಹೇಳುತ್ತಾ ತಿಪ್ಪಣ್ಣ ಕಮಕನೂರು ಭಾವುಕರಾದರು. ಜಯಮಾಲ, ತಿಪ್ಪಣ್ಣ ಕಮಕನೂರು, ಶರಣಪ್ಪ ಮಟ್ಟೂರು, ಜಯಮ್ಮ, ಬೋಸರಾಜ್, ಎಚ್.ಎಂ.ರೇವಣ್ಣ, ಟಿಎ ಶರವಣ, ಎಂಸಿ ವೇಣುಗೋಪಾಲ್‍ಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿದ ಬೀಳ್ಕೊಡಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ 8 ಮಂದಿ ನಿವೃತ್ತ ಪರಿಷತ್ ಸದಸ್ಯರು ಮಾತ್ರ ಇದ್ದರು. ಉಳಿದ 8 ಜನರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

    ಕಾರ್ಯಕ್ರಮಕ್ಕೆ ಸಿಎಂ ಗೈರು:
    ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗೈರಾಗಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

  • ಪ್ರೀತಿಯ ಶಿಕ್ಷಕನಿಗಾಗಿ ಹಾಡು ರಚಿಸಿ, ಉಡುಗೊರೆ ಕೊಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು

    ಪ್ರೀತಿಯ ಶಿಕ್ಷಕನಿಗಾಗಿ ಹಾಡು ರಚಿಸಿ, ಉಡುಗೊರೆ ಕೊಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು

    ಬೀದರ್: ಶಿಕ್ಷಕ ವೃತ್ತಿಯೇ ಹಾಗೇ. ಒಂದಿಷ್ಟು ಮುಗ್ಧ ಮನಸ್ಸುಗಳ ನಿಷ್ಕಲ್ಮಶ ಪ್ರೀತಿ ಸಂಪಾದಿಸುತ್ತದೆ. ಇಂತಹ ಪ್ರೀತಿಗೆ ಬಸವಣ್ಣ ಕರ್ಮಭೂಮಿ ಸಾಕ್ಷಿಯಾಗಿದೆ.

    ಶರಣು ಎಂಬವರು ಹತ್ತರ್ಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12 ವರ್ಷದಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚಿಗೆ ಅವರಿಗೆ ಕಲುಬುರಗಿಗೆ ವರ್ಗಾವಣೆಯಾಗಿತ್ತು. ಹೀಗಾಗಿ ಹತ್ತರ್ಗಾ ಶಾಲೆಯ ಮಕ್ಕಳು ತಮ್ಮ ಪ್ರೀತಿಯ ಶಿಕ್ಷಕರನ್ನು ಒಲ್ಲದ ಮನಸ್ಸಿನಲ್ಲಿ ಬೀಳ್ಕೊಟ್ಟಿದ್ದಾರೆ.

    ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತ್ತೆ’ ಹಾಡಿಗೆ ತಮ್ಮದೆ ಶೈಲಿಯಲ್ಲಿ ಪದ ರಚನೆ ಮಾಡಿ ಹಾಡೊಂದನ್ನು ರಚಿಸಿದ್ದಾರೆ. ಜೊತೆಗೆ ಸನ್ಮಾನ ಮಾಡಿ ಪೆನ್ನು, ಗಡಿಯಾರ, ಸೇರಿದಂತೆ ಗುರು ಕಾಣಿಕೆ ಎಂಬಂತೆ ತಮ್ಮ ಉಡುಗೊರೆ ನೀಡಿದ್ದಾರೆ.

    ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹತ್ತರ್ಗಾ ಶಾಲೆಯ ವಿದ್ಯಾರ್ಥಿಗಳ ಈ ರೀತಿ ಗುರು ಪ್ರೀತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳ ಪ್ರೀತಿ ಕಂಡು ಶಿಕ್ಷಕ ಶರಣು ಭಾವುಕರಾಗಿದ್ದು, ಗುರುವಿನ ಸ್ಥಾನಕ್ಕೆ ಗೌರವ ಸಿಕ್ಕಂತ್ತಾಗಿದೆ.

  • ಹೆಲಿಕಾಪ್ಟರ್ ಮೂಲಕ ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಟ್ಟ ತಂದೆ

    ಹೆಲಿಕಾಪ್ಟರ್ ಮೂಲಕ ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಟ್ಟ ತಂದೆ

    ಜೈಪುರ: ತಂದೆಯೊಬ್ಬರು ಹೆಲಿಕಾಪ್ಟರ್ ಮೂಲಕ ತನ್ನ ಮಗಳಿಗೆ ಆಕೆಯ ಪತಿಯ ಮನೆಗೆ ಕಳುಹಿಸಿಕೊಟ್ಟ ಘಟನೆ ರಾಜಸ್ಥಾನದ ಜುಂಜುನುಯಲ್ಲಿ ನಡೆದಿದೆ.

    ಜುಂಜುನು ಜಿಲ್ಲೆಯ ಅಜಿತ್‍ಪುರದ ನಿವಾಸಿಯಾಗಿರುವ ಮಹೇಂದ್ರ ಸಿಂಗ್ ಶ್ಲೋಕ್ ತಮ್ಮ ಮಗಳು ರೀನಾ ಮದುವೆ ಆದ ಬಳಿಕ ಹೆಲಿಕಾಪ್ಟರ್ ಮೂಲಕ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಬೇಕೆಂದು ಒಂದು ವರ್ಷದ ಹಿಂದೆಯೇ ನಿರ್ಧರಿಸಿದ್ದರು. ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಡುವಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಅದು ಅತ್ಯಂತ ಭಾವನಾತ್ಮಕ ಕ್ಷಣ. ಈ ಕ್ಷಣ ಮಗಳ ಜೀವನದಲ್ಲಿ ಸ್ಮರಣೀಯವಾಗಿರಲಿ ಎಂದು ತಂದೆ ಮಹೇಂದ್ರ ಸಿಂಗ್ ಬಯಸಿದ್ದರು.

    ಮದುವೆಯಾದ ತಕ್ಷಣ ವಧು ರೀನಾ ಹಾಗೂ ವರ ಸಂದೀಪ್ ಲಾಂಬಾ ಜುಂಜುನು ಜಿಲ್ಲೆಯ ಚಿದಾವಾ ಪಟ್ಟಣದ ಬಳಿಯಿರುವ ಅಜಿತ್‍ಪುರ ಗ್ರಾಮದಿಂದ ಸುಲ್ತಾನಗೆ ಹೆಲಿಕಾಪ್ಟರ್ ಮೂಲಕ ತೆರಳಿದರು. ಈ ವೇಳೆ ಹೆಲಿಕಾಪ್ಟರ್ ನೋಡಲು ಮುಂಜಾನೆ ಸಾಕಷ್ಟು ಜನ ಸೇರಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಮಹೇಂದ್ರ ಸಿಂಗ್, ನಾನು ಒಂದು ವರ್ಷದ ಹಿಂದೆಯೇ ನನ್ನ ಮಗಳಿಗೆ ಹೆಲಿಕಾಪ್ಟರ್ ಮೂಲಕ ಬೀಳ್ಕೊಡಬೇಕು ಎಂದು ನಿರ್ಧರಿಸಿದ್ದೆ. ಅಲ್ಲದೆ ಮದುವೆಗೆ ಎರಡು ತಿಂಗಳು ಇರುವಾಗ ನಾನು ಈ ವಿಷಯವನ್ನು ಮನೆಯವರ ಬಳಿ ಹಂಚಿಕೊಂಡೆ. ಇದು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುತ್ತದೆ. ನಾವು ಹೆಣ್ಣು ಮಕ್ಕಳ ಜೊತೆ ಸಾಕಷ್ಟು ಘಟನೆಗಳನ್ನು ಹೊಂದಿದ್ದೇವೆ. ಇದರಿಂದ ನಮಗೆ ಸ್ವಲ್ಪ ಹೆಮ್ಮೆ ಆಗುತ್ತದೆ ಎಂದು ಹೇಳಿದ್ದಾರೆ.

    https://www.youtube.com/watch?v=GAW9NQnE1U0&feature=emb_title

  • ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

    ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

    ಮೈಸೂರು: ದಸರಾ ಹಬ್ಬಕ್ಕಾಗಿ ಕಾಡಿನಿಂದ ಮೈಸೂರು ಅರಮನೆಗೆ ಬಂದಿದ್ದ, ಗಜಪಡೆಗೆ ಪೂಜೆ ಸಲ್ಲಿಸಿ ನಾಡಿನಿಂದ ಬೀಳ್ಕೊಡಲಾಯಿತು.

    407 ನೇ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಹಿಂದೆ ಕಾಡಿನಿಂದ ಮೈಸೂರು ಅರಮನೆಗೆ ಗಜಪಡೆಯನ್ನು ಕರೆಸಲಾಗಿತ್ತು. ನಂತರ ಯಶಸ್ವಿಯಾಗಿ ವಿಜಯದಶಮಿಯ ಮೆರವಣಿಗೆ ಮುಗಿಸಿದ ಬಳಿಕ ಗಜಪಡೆಯನ್ನು ಮಂಗಳವಾರ ಕಾಡಿಗೆ ಕಳುಹಿಸಲಾಯಿತು.

    ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಆನೆಗಳನ್ನು ಒಂದೊಂದಾಗಿ ಲಾರಿಗೆ ಹತ್ತಿಸಿ, ಆ ಆನೆಗಳ ಕ್ಯಾಂಪ್ ಗೆ ಕಳುಹಿಸಲಾಯಿತು.

    ನಂತರ 15 ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತದಿಂದ ಗೌರವಧನ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಶಾಸಕ ಎಂ.ಕೆ. ಸೋಮಶೇಖರ್, ಅರಣ್ಯ ಇಲಾಖೆ ಆಧಿಕಾರಿಗಳು ಉಪಸ್ಥಿತರಿದ್ದರು.