Tag: ಬೀರ್

  • ಮೋಯಿನ್ ಅಲಿಯಿಂದ ಯಾವುದೇ ವಿಶೇಷ ಮನವಿ ಬಂದಿಲ್ಲ – ಸಿಎಸ್‍ಕೆ ಸ್ಪಷ್ಟನೆ

    ಮೋಯಿನ್ ಅಲಿಯಿಂದ ಯಾವುದೇ ವಿಶೇಷ ಮನವಿ ಬಂದಿಲ್ಲ – ಸಿಎಸ್‍ಕೆ ಸ್ಪಷ್ಟನೆ

    ಚೆನ್ನೈ: ಇಂಗ್ಲೆಂಡ್ ಆಟಗಾರ ಮೋಯಿನ್ ಅಲಿ ಅವರಿಂದ ಜೆರ್ಸಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮನವಿ ಬಂದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳಿದೆ.

    ಈ ಬಾರಿಯ ಸಿಎಸ್‍ಕೆ ತಂಡದ ಜೆರ್ಸಿಯಲ್ಲಿ ಬೀರ್ ಬ್ರ್ಯಾಂಡ್ ಎಸ್‍ಎನ್‍ಜೆ 10000ದ ಲೋಗೋ ಇರಲಿದೆ. ಧರ್ಮದ ಕಾರಣ ನೀಡಿ ಎಸ್‍ಎನ್‍ಜೆ ಡಿಸ್ಟಿಲರೀಸ್ ಕಂಪನಿಯ ಬೀರ್ ಬ್ರ್ಯಾಂಡ್ ಜೆರ್ಸಿಯನ್ನು ಧರಿಸುವುದಕ್ಕೆ ಮೋಯಿನ್ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.

    ಅಷ್ಟೇ ಅಲ್ಲದೇ ಅಲಿ ಅವರ ಈ ವಿಶೇಷ ಮನವಿಯನ್ನು ಸಿಎಸ್‍ಕೆ ತಂಡ ಪುರಸ್ಕರಿಸಿತ್ತು ಎಂದು ವರದಿಯಾಗಿತ್ತು. ಈ ವರದಿಗೆ ಸಂಬಂಧಿಸಿ ಸಿಎಸ್‍ಕೆ ಮ್ಯಾನೇಜ್‍ಮೆಂಟ್ ಪ್ರತಿಕ್ರಿಯಿಸಿ ಮೊಯಿನ್ ಅಲಿ ಅವರಿಂದ ಈ ರೀತಿಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.

    ಸಿಎಸ್‍ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಪ್ರತಿಕ್ರಿಯಿಸಿ, ಯಾವುದೇ ಲೋಗೋವನ್ನು ತೆಗೆಯುವಂತೆ ಮೊಯಿನ್ ಅಲಿ ಅವರಿಂದ ಯಾವುದೇ ಮನವಿ ಬಂದಿಲ್ಲ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಅಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದರೆ ಈ ಬಾರಿ ಆರ್‍ಸಿಬಿ ಅವರನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ ಚೆನ್ನೈ ತಂಡ 7 ಕೋಟಿ ರೂ. ಬಿಡ್ ಮಾಡಿ ಮಿನಿ ಹರಾಜಿನಲ್ಲಿ ಖರೀದಿಸಿತ್ತು.

    ಬರ್ಮಿಂಗ್‍ಹ್ಯಾಮ್‍ನಲ್ಲಿ ಜನಿಸಿದ ಅಲಿ ಒಟ್ಟು 19 ಐಪಿಎಲ್ ಪಂದ್ಯಗಳಿಂದ 20.6 ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಒಟ್ಟು 3 ಪಂದ್ಯಗಳನ್ನು ಆಡಿದ್ದರು.

    2010ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಯೂಸೂಫ್ ಪಠಾಣ್ ಅವರು ಕಿಂಗ್‍ಫಿಶರ್ ಲೋಗೋಗೆ ಟೇಪ್ ಸುತ್ತಿದ ಜೆರ್ಸಿ ಧರಿಸಿ ಆಡಿದ್ದರು.

  • ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

    ರಾಜ್ಯ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲರ ಬಗ್ಗೆ ಮಾತನಾಡ್ತಿಲ್ಲ. ನಾನು ಇಲ್ಲಿ ಕುಳಿತಿರುವ ಜನರ ಬಗ್ಗೆ ಮಾತನಾಡ್ತಿಲ್ಲ ಅಂದ್ರು.

    ಇದಕ್ಕೂ ಮುನ್ನ ಗೋವಾದಲ್ಲಿ ಮಾದಕದ್ರವ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕದ್ರವ್ಯ ಜಾಲದ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲಾಗ್ತಿದೆ. ಡ್ರಗ್ಸ್ ಕಣ್ಣಿಗೆ ಕಾಣದಂತೆ ಮರೆಯಾಗುವವರೆಗೆ ಇದು ಮುಂದುವರೆಯಲಿದೆ ಎಂದರು. ಇದು ಸಂಪೂರ್ಣವಾಗಿ ನಿಲ್ಲುತ್ತದೆ ಎಂಬ ನಂಬಿಕೆಯಿಲ್ಲ. ಆದ್ರೂ ಕಾಲೇಜುಗಳಲ್ಲಿ ತೀವ್ರವಾದ ಮಾದಕದ್ರವ್ಯ ಪ್ರಸರಣ ಇಲ್ಲ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಮಾದಕದ್ರವ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ 170 ಮಂದಿಯನ್ನ ಡ್ರಗ್ಸ್ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಿದ್ರು.

    ಕಾನೂನಿನ ಪ್ರಕಾರ ಸಣ್ಣ ಪ್ರಮಾಣದ ಡ್ರಗ್ಸ್ ಇದ್ದರೆ ವ್ಯಕ್ತಿಗೆ 8 ರಿಂದ 15 ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಜಾಮೀನು ಸಿಗುತ್ತದೆ. ಕೋರ್ಟ್ ಗಳೂ ಕೂಡ ಸಹಾನುಭೂತಿ ತೋರುತ್ತಿವೆ. ಆದ್ರೂ ತಪ್ಪಿತಸ್ಥರು ಸಿಕ್ಕಿಬೀಳುತ್ತಿದ್ದಾರೆ ಎಂದು ಹೇಳಿದ್ರು.

    ನಿರುದ್ಯೋಗದ ಬಗ್ಗೆ ಮಾತನಾಡಿದ ಪರಿಕ್ಕರ್, ಗೋವಾದ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಲು ಇಚ್ಛಿಸದ ಕಾರಣ ಸರ್ಕಾರಿ ಇಲಾಖೆಯೊಂದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸಕ್ಕೆ ಉದ್ದ ಕ್ಯೂ ಇದ್ದಿದ್ದು ಕಂಡಿತು. ಸರ್ಕಾರಿ ಕೆಲಸ ಅಂದ್ರೆ ಅಷ್ಟೇನು ಕಷ್ಟದ ಕೆಲಸವಲ್ಲ ಅಂತ ಜನ ಅಂದುಕೊಂಡಿದ್ದಾರೆ ಎಂದು ಹೇಳಿದ್ರು.