Tag: ಬೀದಿ ನಾಯಿಗಳು

  • ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    – ಭಾರತದಲ್ಲಿನ ಕಾನೂನು ಏನು ಹೇಳುತ್ತೆ?

    ದೇಶಾದ್ಯಂತ ಬೀದಿ ನಾಯಿಗಳ (Stray Dogs) ಹುಚ್ಚಾಟ, ಕಡಿತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ರಸ್ತೆ ಬದಿಯಲ್ಲಿ ಓಡಾಡುವವರ ಮೇಲೆ ನಾಯಿಗಳ ದಾಳಿ ದಿನೇ ದಿನೆ ಏರಿಕೆ ಕಾಣುತ್ತಿದೆ. ಎಲ್ಲಾ ವಯೋಮಾನದವರು ಈ ಪ್ರಕರಣದಲ್ಲಿ ಸಂತ್ರಸ್ತರು. ಮಕ್ಕಳು ಮತ್ತು ವಯೋವೃದ್ಧರು ಹೆಚ್ಚು ಸಂತ್ರಸ್ತರು. ನಿರ್ಭೀತಿಯಿಂದ ಓಡಾಡುವುದಿರಲಿ, ರಸ್ತೆಗೆ ಕಾಲಿಡಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ. ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲೇ ಬೀದಿ ನಾಯಿ ದಾಳಿಯಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಯೇ ಇಲ್ಲ ಎಂಬಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಬೀದಿ ನಾಯಿಗಳು ಜನವಸತಿ ಇಲ್ಲದ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿತು. ಆದರೆ, ಕೋರ್ಟ್ ತೀರ್ಪು ಈಗ ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ. ಪ್ರಗತಿಪರ ಚಿಂತಕರು, ಪ್ರಾಣಿ ಪ್ರಿಯರು, ನಟ-ನಟಿಯರು, ರಾಜಕಾರಣಿಗಳು ಕೋರ್ಟ್ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದೇಶದ ಪರವಾಗಿಯೂ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗ ಆದೇಶವನ್ನು ಮರುಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸಿಜೆಐ ತಿಳಿಸಿದ್ದಾರೆ.

    ಅದೇನೇ ಇರಲಿ ಭಾರತದಲ್ಲಿ ಬೀದಿ ನಾಯಿಗಳ ಬಗೆಗೆ ಇರುವ ಕಾನೂನುಗಳೇನು? ವಿದೇಶಗಳಲ್ಲಿ ಯಾವ ರೀತಿಯ ಕಾನೂನುಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವು ದೇಶಗಳಲ್ಲಿ ನಾಯಿಗಳಿಗೂ ಹಿಟ್ಲರ್ ಮಾದರಿಯ ಗ್ಯಾಸ್ ಚೇಂಬರ್, ಮರಣದಂಡನೆಯಂಥ ಶಿಕ್ಷೆಗಳಿರುವುದು ಕುತೂಹಲಕಾರಿ. ಎಲ್ಲೆಲ್ಲಿ ಯಾವ್ಯಾವ ಕಾನೂನುಗಳಿವೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್‌ – ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ

    ಭಾರತದಲ್ಲಿ ಬೀದಿ ನಾಯಿಗಳ ದಾಳಿಯಲ್ಲಿ ಹೆಚ್ಚಳ?
    ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳ ದಾಳಿ ಸಂಖ್ಯೆ ಹೆಚ್ಚಾಗುತ್ತಿವೆ. 2023ರಲ್ಲಿ 30.5 ಲಕ್ಷದಷ್ಟಿದ್ದ ಪ್ರಕರಣಗಳು 2024ಕ್ಕೆ 37 ಲಕ್ಷಕ್ಕೆ ಏರಿಕೆ ಕಂಡಿದೆ. ಅಷ್ಟೆ ಅಲ್ಲದೇ, ನಾಯಿ ಕಡಿತದಿಂದ ಉಂಟಾಗುವ ರೇಬಿಸ್‌ನಿಂದ ಸಾವಿಗೀಡಾಗುವವ ಸಂಖ್ಯೆ ಹೆಚ್ಚಾಗಿದೆ. 2022ರಲ್ಲಿ ರೇಬಿಸ್‌ನಿಂದ ಸಾಯುವವರ ಸಂಖ್ಯೆ 21 ಇತ್ತು. 2023ಕೆ ಅದು 50ಕ್ಕೆ ಏರಿತು. 2024ಕ್ಕೂ ಇದೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

    ಅತಿ ಹೆಚ್ಚು ಕೇಸ್ ಹೊಂದಿರುವ ರಾಜ್ಯಗಳ್ಯಾವುವು?
    ದೇಶದ ಹಲವು ರಾಜ್ಯಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 2024ರಲ್ಲಿ ಮಹಾರಾಷ್ಟ್ರದಲ್ಲಿ 4.85 ಲಕ್ಷ, ತಮಿಳುನಾಡಿನಲ್ಲಿ 4.80 ಲಕ್ಷ, ಗುಜರಾತ್‌ನಲ್ಲಿ 3.92 ಲಕ್ಷ, ಕರ್ನಾಟಕದಲ್ಲಿ 3.61 ಲಕ್ಷ, ಬಿಹಾರದಲ್ಲಿ 2.63 ಲಕ್ಷ, ಆಂಧ್ರಪ್ರದೇಶದಲ್ಲಿ 2.45 ಲಕ್ಷ, ಅಸ್ಸಾಂನಲ್ಲಿ 1.66 ಲಕ್ಷ, ಉತ್ತರ ಪ್ರದೇಶದಲ್ಲಿ 1.64 ಲಕ್ಷ, ರಾಜಸ್ಥಾನದಲ್ಲಿ 1.40 ಲಕ್ಷ, ಬಿಹಾರದಲ್ಲಿ ಪ್ರಕರಣಗಳು ವರದಿಯಾಗಿವೆ.

    2025ರ ಅಂಕಿಅಂಶ ಗಮನಿಸುವುದಾದರೆ, ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸೋ ತೀರ್ಪನ್ನು ಪರಿಶೀಲಿಸುತ್ತೇನೆ: ಸಿಜೆಐ

    ಭಾರತದಲ್ಲಿ ಬೀದಿ ನಾಯಿಗಳಿಗೆ ಇರುವ ಕಾನೂನೇನು?
    ದೇಶದಲ್ಲಿ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಕೆಲವು ಕಾನೂನುಗಳಿವೆ. ಬೀದಿ ನಾಯಿಗಳನ್ನು ಹಿಂಸಿಸುವುದು, ಕೊಲ್ಲುವುದು ಅಥವಾ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಕಾನೂನು ಬಾಹಿರ. ಬದಲಿಗೆ, ಅವುಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನೀಡುವುದು, ತಪಾಸಣೆಗೆ ಒಳಪಡಿಸುವುದು ಮತ್ತು ಲಸಿಕೆ ಹಾಕಿ ಅವುಗಳ ಮೂಲಸ್ಥಾನಗಳಿಗೆ ಬಿಡುವುದು ಕ್ರಮವಾಗಿದೆ. ಬೀದಿ ನಾಯಿಗಳಿಗೆ ಆಹಾರ ನೀಡುವ ಬಗ್ಗೆಯೂ ಕೆಲವು ಮಾರ್ಗಸೂಚಿಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ತಪ್ಪಿಸಬೇಕು ಎಂದಿದೆ.

    * ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟಲು ಮತ್ತು ರಕ್ಷಿಸಲು ಕಾನೂನನ್ನು ಈ ಕಾಯ್ದೆ ಒಳಗೊಂಡಿದೆ. ಬೀದಿ ನಾಯಿಗಳನ್ನು ಹಿಂಸಿಸುವುದು, ಕೊಲ್ಲುವುದು ಅಥವಾ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಈ ಕಾಯ್ದೆಯಡಿ ಅಪರಾಧ.
    * ಅನಿಮಲ್ ಬರ್ತ್ ಕಂಟ್ರೋಲ್ (ನಾಯಿಗಳು) ನಿಯಮಗಳು, 2001: ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಸಂತಾನಹರಣ ಮತ್ತು ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ನಿಯಮ ರೂಪಿಸಲಾಗಿದೆ.
    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993: ಬೀದಿ ನಾಯಿಗಳ ಸಂತಾನ ನಿಯಂತ್ರಣ ಮತ್ತು ರೋಗಗಳ ಚಿಕಿತ್ಸೆಗೆ ಗ್ರಾಮ ಪಂಚಾಯಿತಿಗಳು ಜವಾಬ್ದಾರವಾಗಿರುತ್ತವೆ.
    ಬಿಬಿಎಂಪಿ ಮಾರ್ಗಸೂಚಿಗಳು: BBMP ಬೀದಿ ನಾಯಿಗಳಿಗೆ ಆಹಾರ ನೀಡುವ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದನ್ನು ತಪ್ಪಿಸಲು ಮತ್ತು ಆಹಾರ ನೀಡಿದ ನಂತರ ಸ್ವಚ್ಛಗೊಳಿಸಲು ಸೂಚಿಸಲಾಗಿದೆ.

    ಬೀದಿ ನಾಯಿಗಳಿಗೆ ಇತರೆ ದೇಶಗಳಲ್ಲಿರೋ ಕಾನೂನುಗಳೇನು?

    ಟರ್ಕಿ: ‘ಹತ್ಯಾಕಾಂಡ ಕಾನೂನು’
    2024 ರ ಜುಲೈನಲ್ಲಿ ಟರ್ಕಿ ದೇಶ ಪುರಸಭೆಗಳು ನಗರ ಬೀದಿಗಳಿಂದ ಸುಮಾರು 40 ಲಕ್ಷ ಬೀದಿ ನಾಯಿಗಳನ್ನು ತೆರವುಗೊಳಿಸಬೇಕು ಎಂದು ಕಾನೂನನ್ನು ಜಾರಿಗೆ ತಂದಿತು. ಈ ಶಾಸನದ ಅಡಿಯಲ್ಲಿ, ಸ್ಥಳೀಯ ಅಧಿಕಾರಿಗಳು ನಾಯಿಗಳನ್ನು ಸೆರೆಹಿಡಿಯಬೇಕು, ರೋಗಗಳ ವಿರುದ್ಧ ಲಸಿಕೆ ಹಾಕಬೇಕು, ಅವುಗಳನ್ನು ಸಂತಾನಹರಣ ಮಾಡಬೇಕು ಮತ್ತು ದತ್ತು ಸ್ವೀಕಾರಕ್ಕಾಗಿ ಇಡಬೇಕು. ಅನಾರೋಗ್ಯ, ಆಕ್ರಮಣಕಾರಿ, ನೋವಿನಿಂದ ಬಳಲುತ್ತಿರುವ, ಮಾರಕ ಕಾಯಿಲೆ ಅಥವಾ ಮಾನವರಿಗೆ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ನಾಯಿಗಳಿಗೆ ದಯಾಮರಣ ಕಾನೂನನ್ನು ಅನುಮತಿಸುತ್ತದೆ. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

    ಮೊರಾಕೊ: ‘TNVR ಕಾರ್ಯಕ್ರಮ’
    ಮೊರಾಕೊ ತನ್ನ ವಿಸ್ತೃತ ಟ್ರ್ಯಾಪ್-ನ್ಯೂಟರ್-ಲಸಿಕೆ-ರಿಟರ್ನ್ (TNVR) ಕಾರ್ಯಕ್ರಮದ ಮೂಲಕ ಬೀದಿ ನಾಯಿಗಳನ್ನು ನಿರ್ವಹಿಸಲು ಮಾನವೀಯ ವಿಧಾನವನ್ನು ಅಳವಡಿಸಿಕೊಂಡಿದೆ. ಬೀದಿ ನಾಯಿಗಳನ್ನು ಬಲೆಗೆ ಬೀಳಿಸುವುದು, ಸಂತಾನಹರಣ ಮಾಡುವುದು, ರೇಬಿಸ್ ವಿರುದ್ಧ ಲಸಿಕೆ ಹಾಕಿ ನಂತರ ಅವುಗಳನ್ನು ಮೂಲ ಸ್ಥಳಗಳಿಗೆ ಬಿಡುವುದನ್ನು ಈ ಕಾನೂನು ಪ್ರತಿಪಾದಿಸುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಜನರಿಗೆ ಅಪಾಯವನ್ನುಂಟುಮಾಡುವ ನಾಯಿಗಳನ್ನು ಮಾನವೀಯವಾಗಿ ದಯಾಮರಣಕ್ಕೆ ಗುರಿ ಪಡಿಸಲಾಗುತ್ತದೆ. ಐದು ವರ್ಷಗಳಲ್ಲಿ ಸರ್ಕಾರವು ಈ ಕಾರ್ಯಕ್ರಮಕ್ಕಾಗಿ ಸುಮಾರು 201 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿದೆ.

    ಯುಕೆ: ದಯಾಮರಣ & ಕಠಿಣ ಕ್ರಮ
    ಯುಕೆಯಲ್ಲಿ ಬೀದಿಗೆ ಬಿಟ್ಟ ಪ್ರಾಣಿಗಳನ್ನು ಹಿಡಿಯಲಾಗುತ್ತದೆ. ಮಾಲೀಕರ ಪತ್ತೆಗೆ ಕ್ರಮವಹಿಸಲಾಗುತ್ತದೆ. ಎಂಟು ದಿನಗಳಲ್ಲಿ ಮಾಲೀಕರು ಪತ್ತೆಯಾಗದಿದ್ದರೆ ಆಶ್ರಯಗಳಿಗೆ ವರ್ಗಾಯಿಸಲಾಗುತ್ತದೆ. ಈ ದೇಶದಲ್ಲಿ ಸಾಕುಪ್ರಾಣಿಗಳನ್ನು ತ್ಯಜಿಸುವುದು ಕಾನೂನುಬಾಹಿರವಾಗಿದೆ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 45,000 ಪೌಂಡ್‌ಗಳು (53 ಲಕ್ಷ ರೂ.ಗಿಂತ ಹೆಚ್ಚು) ದಂಡ ವಿಧಿಸಬಹುದು. ದತ್ತು ಪಡೆಯದ ನಾಯಿಗಳನ್ನು ಒಂದು ವಾರದೊಳಗೆ ಆಶ್ರಯಗಳಲ್ಲಿ ದಯಾಮರಣ ಮಾಡಲಾಗುತ್ತದೆ. ಕೆಲವು ಪುರಸಭೆಯ ಆಶ್ರಯಗಳು ಬೀದಿ ನಾಯಿಗಳನ್ನು ಏಳು ದಿನಗಳವರೆಗೆ ಇಟ್ಟುಕೊಳ್ಳುತ್ತವೆ. ಇದರಿಂದ ಮಾಲೀಕರು ಅವುಗಳನ್ನು ವಾಪಸ್‌ ಪಡೆಯಲು ಅವಕಾಶ ಇರುತ್ತದೆ. ಆದರೆ, ಅನೇಕ ಪ್ರಾಣಿ ಕಲ್ಯಾಣ ಸಂಸ್ಥೆಗಳು ಕೊಲ್ಲಬಾರದೆಂಬ ನೀತಿಗಳನ್ನು ಅನುಸರಿಸುತ್ತವೆ. ಈ ಸಂಸ್ಥೆಗಳು ನಾಯಿಗಳ ತೀವ್ರ ಅನಾರೋಗ್ಯ ಮತ್ತು ವರ್ತನೆಯಲ್ಲಿನ ಸಮಸ್ಯೆಗಳನ್ನು ಪರಿಗಣಿಸಿ ಮಾತ್ರ ದಯಾಮರಣ ನೀಡುತ್ತವೆ. ಸಾಧ್ಯವಾದಲ್ಲೆಲ್ಲಾ ಪುನರ್ವಸತಿಗೆ ಆದ್ಯತೆ ನೀಡುತ್ತವೆ.

    ಜಪಾನ್: ದಯಾಮರಣ ಗ್ಯಾಸ್ ಚೇಂಬರ್‌
    ಜಪಾನ್ ಕಟ್ಟುನಿಟ್ಟಾದ ಪ್ರಾಣಿ ಕಲ್ಯಾಣ ಕ್ರಮಗಳನ್ನು ಅನುಸರಿಸುತ್ತದೆ. ಅಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿದು, ಕ್ವಾರಂಟೈನ್‌ನಲ್ಲಿ ಇರಿಸಿ ಮತ್ತು ದತ್ತು ಪಡೆಯಲು ಇಡಲಾಗುತ್ತದೆ. ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪಶುವೈದ್ಯರು ಸಂತಾನಹರಣ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆದರೆ, ಟೋಕಿಯೊ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗ್ಯಾಸ್ ಚೇಂಬರ್‌ಗಳನ್ನು ಬಳಸಿ ದಯಾಮರಣ ನಡೆಸಲಾಗುತ್ತದೆ. ಈ ವಿಧಾನವು ಅಮಾನವೀಯ ಮತ್ತು ದೀರ್ಘಕಾಲದ ನೋವನ್ನು ಉಂಟುಮಾಡುತ್ತದೆ ಎಂಬ ಟೀಕೆಗಳು ಇವೆ. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ – ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ

    ಸ್ವಿಟ್ಜರ್ಲೆಂಡ್: ಪ್ರಾಣಿ ಸಂರಕ್ಷಣಾ ಕಾನೂನುಗಳು
    ಸ್ವಿಟ್ಜರ್ಲೆಂಡ್ ಕಠಿಣ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಹೊಂದಿದೆ. ಸಾಕುಪ್ರಾಣಿಗಳನ್ನು ತ್ಯಜಿಸುವುದು ಕಾನೂನುಬಾಹಿರ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು. ನಾಯಿ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಕ್ಯಾಂಟೋನಲ್ ಅಧಿಕಾರಿಗಳ ಮೂಲಕ ನೋಂದಾಯಿಸಿಕೊಳ್ಳಬೇಕು. ಕೆಲವು ಕ್ಯಾಂಟನ್‌ಗಳಲ್ಲಿ, ನಾಯಿಯನ್ನು ಖರೀದಿಸುವ ಮೊದಲು ಪ್ರಮಾಣೀಕೃತ ಕೋರ್ಸ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯ.

    ಯುರೋಪಿಯನ್‌ ಒಕ್ಕೂಟ
    ಯುರೋಪಿಯನ್ ಒಕ್ಕೂಟವು ಬೀದಿ ಪ್ರಾಣಿಗಳ ನಿರ್ವಹಣೆಗೆ ಏಕೀಕೃತ ಶಾಸನವನ್ನು ಹೊಂದಿಲ್ಲ. ಬದಲಾಗಿ, ಪ್ರತ್ಯೇಕ ಸದಸ್ಯ ರಾಷ್ಟ್ರಗಳು ತಮ್ಮ ಬೀದಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ. ಅನೇಕ ದೇಶಗಳಲ್ಲಿ ಪುರಸಭೆಗಳು ಬೀದಿ ಪ್ರಾಣಿಗಳ ನಿಯಂತ್ರಣವನ್ನು ನಿರ್ವಹಿಸುತ್ತವೆ.

  • ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

    ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

    ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು (Street dogs) ಹಿಡಿದು ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ ಸುಪ್ರೀಂಕೋರ್ಟ್ (Supreme Court) ನಿರ್ದೇಶನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರೋಧಿಸಿದ್ದಾರೆ.

    ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರವು ಹಲವು ವರ್ಷಗಳಿಂದ ಅನುಸರಿಸುತ್ತಿರುವ ಮಾನವೀಯ ಹಾಗೂ ವಿಜ್ಞಾನಾಧಾರಿತ ನೀತಿಯಿಂದ ಹಿಂದಕ್ಕೆ ಸರಿದಂತಾಗಿದೆ. ಮೂಖ ಜೀವಿಗಳು ಅಳಿಸಬೇಕಾದ ಸಮಸ್ಯೆಗಳಲ್ಲ. ಶಸ್ತ್ರಚಿಕಿತ್ಸೆ, ಲಸಿಕೆ ಹಾಗೂ ಸಮುದಾಯದ ಕಾಳಜಿ ಮೂಲಕ ಬೀದಿಗಳನ್ನು ಕ್ರೂರತೆ ಇಲ್ಲದೆ ಸುರಕ್ಷಿತವಾಗಿರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ನಗರಗಳಲ್ಲಿನ ಬೀದಿನಾಯಿ, ಅನಾಥ ಪ್ರಾಣಿಗಳ ತೆರವಿಗೆ ವಿಶೇಷ ಅಭಿಯಾನ – ರಾಜಸ್ಥಾನ ಹೈಕೋರ್ಟ್

    ಸಾಮೂಹಿಕವಾಗಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದು ಕ್ರೂರ, ದೂರದೃಷ್ಟಿಯಿಲ್ಲದ ಕ್ರಮವಾಗಿದೆ. ಸುಪ್ರೀಂಕೋರ್ಟ್ ಮಾನವೀಯತೆ ಹಾಗೂ ಸಹಾನುಭೂತಿಯಿಲ್ಲದ ಕಾನೂನನ್ನು ಪಕ್ಕಕ್ಕೆ ಸರಿಸಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿಗಳ ಕಾಳಜಿ ಎರಡನ್ನೂ ಒಟ್ಟಿಗೆ ಮಾಡಬಹುದು ಎಂದು ಹೇಳಿದ್ದಾರೆ.

    ಬೀದಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠವು, ನಗರದ ಹೊರವಲಯವನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವುದು ಮೊಟ್ಟ ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿತ್ತು.

  • ಬೆಂಗಳೂರಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧ ಬಲಿ?

    ಬೆಂಗಳೂರಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧ ಬಲಿ?

    ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಸೀತಪ್ಪ (68) ಮೃತ ವ್ಯಕ್ತಿ. ನಸುಕಿನಜಾವ 3 ಗಂಟೆಗೆ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ.

    ಚಹಾ ಸೇವಿಸಲು ಸ್ಥಳೀಯ ಚಹಾ ಅಂಗಡಿಗೆ ತೆರೆಳಿದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ವಿಚಾರಣೆ ವೇಳೆಯಲ್ಲಿ ಮಾಹಿತಿ ನೀಡಿದ್ದಾರೆ.

    ಸದರಿ ಘಟನೆಯ ಬಗ್ಗೆ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಮುಂಜಾನೆ ಜನ ಸಂಚಾರ ವಿರಳವಾಗಿದ್ದು, ಸಮಯಕ್ಕೆ ಸರಿಯಾಗಿ ಸಹಾಯ ದೊರೆಯದೆ ಇಲ್ಲದಿರುವುದು ಅವಘಡಕ್ಕೆ ಕಾರಣವಾಗಿರಬಹುದು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಸ್ವಲ್ಪ ಸಮಯದ ನಂತರ ಸಾರ್ವಜನಿಕರು ಸಹಾಯವಾಣಿ 112ಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗಾಯಗೊಂಡಿದ್ದ ಸೀತಪ್ಪ ಅವರನ್ನು ಯಲಹಂಕ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಷ್ಟರಲ್ಲಾಗಲೇ ವೃದ್ಧ ಮೃತಪಟ್ಟಿದ್ದರು ಎನ್ನಲಾಗಿದೆ.

    ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಬಿಬಿಎಂಪಿ ಪಶುಪಾಲನಾ ವಿಭಾಗದಿಂದ ಘಟನೆ ನಡೆದ ಸ್ಥಳದಲ್ಲಿರುವ 16 ಬೀದಿನಾಯಿಗಳನ್ನು ಹಿಡಿದು, ಯಲಹಂಕ ವಲಯದ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೇಂದ್ರ (ಎಬಿಸಿ ಸೆಂಟರ್)ದಲ್ಲಿ ಇರಿಸಲಾಗಿದೆ. ಇನ್ನುಳಿದ ನಾಯಿಗಳನ್ನು ಹಿಡಿಯಲಾಗುತ್ತಿದೆ.

    ನಾಯಿಗಳ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢವಾದರೆ, ಪಾಲಿಕೆ ವತಿಯಿಂದ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

  • ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

    ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

    ಮುಂಬೈ: ಬೀದಿ ನಾಯಿಗಳ ದಾಳಿಯಿಂದಾಗಿ ಓರ್ವ ಪುಟ್ಟ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಟೋಲ್ ಪಟ್ಟಣದ ಧಂತೋಳಿ ಪ್ರದೇಶದಲ್ಲಿ ನಡೆದಿದೆ.

    ವಿರಾಜ್ ರಾಜು ಜಯವರ್ (05) ನಾಯಿ ದಾಳಿಗೊಳಗಾಗಿ ಮೃತಪಟ್ಟಿರುವ ಬಾಲಕ. ತನ್ನ ಸಹೋದರಿಯೊಂದಿಗೆ ವಾಕಿಂಗ್‍ಗೆ ತೆರಳಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ವೇಳೆ ಸಹೋದರಿ ನಾಯಿಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ನಾಯಿಗಳು ವಿರಾಜ್ ರಾಜು ಜಯವರ್ ಮೇಲೆ ದಾಳಿ ಮಾಡಿವೆ ಎಂದು ತಿಳಿಸಿದ್ದಾರೆ.

    ಘಟನೆ ಬಳಿಕ ಪೋಷಕರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಿಂದ ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ವಿರಾಜ್ ರಾಜ್ ಜಯವರ್ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಕಟೋಲ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಳ್ಳಾರಿಯಲ್ಲಿ ಕೊನೆಗೂ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ

    ಬಳ್ಳಾರಿಯಲ್ಲಿ ಕೊನೆಗೂ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ

    – ನಗರದಲ್ಲಿವೆ 30 ಸಾವಿರ ಬೀದಿ ನಾಯಿಗಳು

    ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಸುಮಾರು 30 ಸಾವಿರ ಬೀದಿ ನಾಯಿಗಳಿವೆ. ಈ ಬೀದಿ ನಾಯಿಗಳ ಹಾವಳಿಗೆ ನಗರದ ಜನತೆ ಹೈರಾಣಾಗಿದ್ದಾರೆ. ಬಳ್ಳಾರಿಯಲ್ಲಿ ಅಂದಾಜು 25- 30 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಬೀದಿನಾಯಿಗಳ ಉಪಟಳ ತಡೆಯಲು ಮಹಾನಗರ ಪಾಲಿಕೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದೆ.

    ಸಂತಾನಹರಣ ಚಿಕಿತ್ಸೆಗೆ ಭಾರೀ ಪ್ರಮಾಣದ ಹಣ ಬೇಕಾಗಿತ್ತು. ಒಂದು ನಾಯಿಯ ಸಂತಾನ ಹರಣ ಚಿಕಿತ್ಸೆಗೆ ಸುಮಾರು 2 ರಿಂದ 3 ಸಾವಿರ ರೂ. ಬೇಕಿತ್ತು. ಹೀಗಾಗಿ ಈ ಚಿಕಿತ್ಸೆ ಮಾಡಲಾಗದ ಕಾರಣ ಮಹಾನಗರ ಪಾಲಿಕೆ ಕೈಚೆಲ್ಲಿ ಕುಳಿತಿತ್ತು. ಈ ಹಿನ್ನೆಲೆಯಲ್ಲಿ ನಾಯಿಗಳ ಸಂತತಿ ವಿಪರೀತ ಹೆಚ್ಚಾಗಿತ್ತು.

    ಈ ಸಮಸ್ಯೆಗೆ ಕಾರಣ ಕಂಡು ಹಿಡಿದ ಮಹಾನಗರ ಪಾಲಿಕೆ, ಹಾಲಿ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರ ಮುತುವರ್ಜಿಯಿಂದ ಸ್ಥಳೀಯ ಎನ್‍ಜಿಓ ಸಂಸ್ಥೆಯನ್ನ ಈ ಟೆಂಡರ್ ಪ್ರಕ್ರಿಯೆಗೆ ಆಹ್ವಾನಿಸಿ ಸಂತಾನಹರಣ ಶಸ್ತ್ರಚಿಕಿತ್ಸೆಯ ಜೊತೆಜೊತೆಗೆ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರಾರಂಭಿಕ ಹಂತದಲ್ಲಿ ಕೇವಲ 2,400 ನಾಯಿಗಳಿಗೆ ಚಿಕಿತ್ಸೆ ನೀಡಲು ನಿರ್ಧಾರ ಮಾಡಿದ್ದು, ಇದು ಸಾಲದು ಹೆಚ್ಚಿನ ಸಂಖ್ಯೆಯಲ್ಲಿ ಸಂತಾನ ಹರಣ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಲಾಕ್‍ಡೌನ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ಹೃದಯವಂತಿಕೆ- ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ

    ಲಾಕ್‍ಡೌನ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ಹೃದಯವಂತಿಕೆ- ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ

    ಬಳ್ಳಾರಿ: ಲಾಕ್‍ಡೌನ್‍ನಿಂದಾಗಿ ಪ್ರಾಣಿಗಳಿಗೆ ಸಹ ಸಂಕಷ್ಟ ಎದುರಾಗಿದ್ದು, ಮೂಕ ಪ್ರಾಣಿಗಳ ಪರಿಸ್ಥಿತಿ ಯಾರಿಗೂ ಹೇಳತೀರದಾಗಿದೆ. ಇದನ್ನು ಅರಿತ ಕಾಲೇಜು ವಿದ್ಯಾರ್ಥಿಗಳು ತಮ್ಮದೇ ತಂಡ ಮಾಡಿಕೊಂಡು ಪೋಷಕರು ನೀಡಿದ ಪಾಕೆಟ್ ಮನಿಯಿಂದ ಬೀದಿ ನಾಯಿ, ದನಗಳಿಗೆ ಆಹಾರ ನೀಡುತ್ತಿದ್ದಾರೆ.

    ನಗರದಲ್ಲಿ ಬಹುತೇಕ ಬೀದಿ ಬದಿಯ ದನಕರುಗಳು ಲಾಕ್‍ಡೌನ್‍ನಿಂದ ಜನರ ಓಡಾಟವಿಲ್ಲದೆ, ಆಹಾರವೂ ಇಲ್ಲದೆ ಬೀದಿಯಲ್ಲಿನ ಪೆಪರ್, ಕೆಲ ವೇಸ್ಟ್ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಇದನ್ನರಿತ ಕೆಲ ವಿಧ್ಯಾರ್ಥಿಗಳು ಟೀಮ್ ಮಾಡಿಕೊಂಡು, ಕೆಲ ದಿನಗಳಿಂದ ಬೀದಿ ಬದಿಯ ದನಕರುಗಳಿಗೆ, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ದನಕರುಗಳ ಹಸಿವನ್ನು ನೀಗಿಸುತ್ತಿದ್ದಾರೆ.

    ಪ್ರತಿ ದಿನ ಬೀದಿ ನಾಯಿಗಳಿಗೆ 30 ಕೆ.ಜಿ.ಯಿಂದ 40 ಕೆ.ಜಿ. ಆಹಾರವನ್ನು ತಯಾರು ಮಾಡಿಕೊಂಡು, ವಿದ್ಯಾರ್ಥಿಗಳು 8 ತಂಡಗಳಾಗಿ ತಮ್ಮ ವಾಹನಗಳ ಮೇಲೆ ನಗರದಲ್ಲಿ ಬಹುತೇಕ ನಾಯಿಗಳಿಗೆ ಆಹಾರ ನೀಡುತಿದ್ದಾರೆ.

    ಬಹುತೇಕರು ಪದವಿ ವಿದ್ಯಾರ್ಥಿಗಳಾಗಿದ್ದು, ಕೊರೊನಾ ಪರಿಸ್ಥಿತಿ ನೋಡಿ ಸಹಾಯ ಮಾಡಬೇಕೆಂದು ಅನಿಸಿತು. ನಮ್ಮ ಪಾಕೆಟ್ ಮನಿಯಿಂದ ಏನಾದರೂ ಮಾಡಬೇಕೆಂದು ಸ್ನೇಹಿತರೆಲ್ಲ ಯೋಚಿಸಿದೆವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳ ತಂದೆ, ತಾಯಂದಿರು ಡ್ರೈವರ್, ಮನೆಗೆಲಸ ಮಾಡುತಿದ್ದಾರೆ. ಬಡತನದಲ್ಲೂ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುತ್ತಿದ್ದಾರೆ.

  • ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ- ಒಂದೇ ದಿನದಲ್ಲಿ 5 ಆಸ್ಪತ್ರೆಗೆ ಅಲೆದ್ರೂ ಬದುಕಿಲ್ಲ

    ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ- ಒಂದೇ ದಿನದಲ್ಲಿ 5 ಆಸ್ಪತ್ರೆಗೆ ಅಲೆದ್ರೂ ಬದುಕಿಲ್ಲ

    – ಆಟವಾಡುತ್ತಿದ್ದ 6ರ ಬಾಲಕಿಯ ಮೇಲೆ ನಾಲ್ಕೈದು ನಾಯಿ ದಾಳಿ
    – ಮಗಳನ್ನ ಉಳಿಸಿಕೊಳ್ಳಲು ಪೋಷಕರು ಅಲೆದಾಟ

    ಹೈದರಾಬಾದ್: ಆಟವಾಡುತ್ತಿದ್ದಾಗ ಆರು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಾಲಕಿ ಸಾಯುವ ಮುನ್ನ ಒಂದು ದಿನದಲ್ಲಿ ಸುಮಾರು ಐದು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿದೆ. ಆದರೂ ಬಾಲಕಿಯನ್ನು ಉಳಿಸಲು ಸಾದ್ಯವಾಗಿಲ್ಲ.

    ಮೆಡ್ಚಲ್ ಜಿಲ್ಲೆಯ ಬಾಲಕಿ ಶನಿವಾರ ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿದ್ದಳು. ಆಗ ಸುಮಾರು ನಾಲ್ಕೈದು ಬೀದಿ ನಾಯಿಗಳು ಒಮ್ಮೆಲೆ ಬಾಲಕಿಯ ಮೇಲೆ ದಾಳಿ ಮಾಡಿದೆ. ತಕ್ಷಣ ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಮೊದಲಿಗೆ ಆದಿತ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. 2 ಗಂಟೆಗಳ ನಂತರ ಆಸ್ಪತ್ರೆಯವರು ಅಂಕುರಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ.

    ಅದರಂತೆಯೇ ಕುಟುಂಬದವರು ತಕ್ಷಣ ಆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮೂರು ಗಂಟೆಗಳ ಚಿಕಿತ್ಸೆಯ ನಂತರ ಬಾಲಕಿಯನ್ನು ಯಶೋದಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ಬಾಲಕಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಕುಟುಂಬವರು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೊನೆಗೆ ಬಾಲಕಿಯನ್ನು ನಿಲೌಫರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಶನಿವಾರ ಸಂಜೆ ಬಾಲಕಿ ಮೃತಪಟ್ಟಿದ್ದಾಳೆ.

    ಈ ಮೂಲಕ ಒಂದು ದಿನದಲ್ಲಿ ಐದು ಆಸ್ಪತ್ರೆಗೆ ಪೋಷಕರು ಅಲೆದಾಡಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಅಚ್ಯುತ ರಾವ್ ಅವರು, ಬೋಡುಪ್ಪಲ್ ಮಹಾನಗರ ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಬಾಲಕಿಯ ಅಂತ್ಯಕ್ರಿಯೆಗೆ ನಿಗಮವು ಹಣಕಾಸಿನ ನೆರವು ನೀಡಿಲ್ಲ. ಬದಲಿಗೆ ಕುಟುಂಬದವರನ್ನು ಸೋಮವಾರ ಬರುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಾಹಿತಿ ತಿಳಿದು ನಗರಸಭೆ ಆಯುಕ್ತ ಶಂಕರ್ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ನಾಲ್ಕೈದು ವರ್ಷದಿಂದ ಬೀದಿನಾಯಿಗಳಿಗೆ ಎರಡೊತ್ತು ಊಟ ಹಾಕ್ತಿರೋ ಉಮಾಶಂಕರ್

    ನಾಲ್ಕೈದು ವರ್ಷದಿಂದ ಬೀದಿನಾಯಿಗಳಿಗೆ ಎರಡೊತ್ತು ಊಟ ಹಾಕ್ತಿರೋ ಉಮಾಶಂಕರ್

    – ಲಾಕ್‍ಡೌನ್ ಹಿನ್ನೆಲೆ ಮೂರೊತ್ತು ಊಟ
    – ಪ್ರತಿ ದಿನ 500-700 ರೂ. ಖರ್ಚು ಮಾಡುವ ಉಮಾಶಂಕರ್

    ಚಿಕ್ಕಮಗಳೂರು: ಕೇವಲ ಲಾಕ್‍ಡೌನ್ ಸಮಯದಲ್ಲಿ ಮಾತ್ರವಲ್ಲ, ಕಳೆದ ನಾಲ್ಕೈದು ವರ್ಷಗಳಿಂದ ಬೀದಿ ನಾಯಿಗಳಿಗೆ ಎರಡು ಹೊತ್ತು ಊಟ ಹಾಕುವ ಮೂಲಕ ಚಿಕ್ಕಮಗಳೂರು ನಿವಾಸಿ ಉಮಾಶಂಕರ್ ಮಾನವೀಯತೆ ಮೆರೆಯುತ್ತಿದ್ದಾರೆ.

    ಬೀದಿ ನಾಯಿಗಳು ಆಹಾರವಿಲ್ಲದೆ ಪರದಾಡುವುದನ್ನು ಮನಗಂಡ ಇವರು ಪ್ರತಿ ದಿನ ಎರಡು ಹೊತ್ತು ಊಟ ಹಾಕುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ-ಸಂಜೆ ಎರಡು ಗಂಟೆ ನಾಯಿಗಳಿಗಾಗೇ ಮೀಸಲಟ್ಟಿದ್ದಾರೆ. ಬೀದಿ-ಬೀದಿ ಸುತ್ತಿ ನಾಯಿಗಳಿಗೆ ಅನ್ನ ಹಾಕುತ್ತಾರೆ. ಕೇವಲ ಒಂದೆರಡು ಏರಿಯಾ ಅಲ್ಲ, ಇಡೀ ನಗರದ ಬೀದಿನಾಯಿಗಳ ಹಸಿವನ್ನು ಉಮಾಶಂಕರ್ ನೀಗಿಸುತ್ತಾರೆ.

    ನಗರದಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಇವರಿಗೆ ಬೀದಿನಾಯಿಗಳೆಂದರೆ ಮಮಕಾರ. ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಸ್ಕೂಟರ್ ನಲ್ಲಿ ಊಟ, ಬ್ರೆಡ್, ಬಿಸ್ಕೆಟ್ ಇಟ್ಟುಕೊಂಡು ಮನೆಯಿಂದ ಹೊರಟರೆ ಆಹಾರ ಖಾಲಿಯಾದ ಮೇಲೆ ಮನೆಗೆ ವಾಪಸ್ಸಾಗುತ್ತಾರೆ. ನಾಯಿಗಳಿಗೆಲ್ಲ ಬಿಸ್ಕೆಟ್ ತಿನಿಸುವ ಮೂಲಕ ಅವುಗಳ ಜೀವಗಳನ್ನು ಉಳಿಸುದ್ದಾರೆ. ಲಾಕ್‍ಡೌನ್ ಸಮಯದಲ್ಲೂ ಈ ಕಾಯಕವನ್ನು ಮುಂದುವರಿಸಿದ್ದು, ಪ್ರತಿ ದಿನ ನಾಯಿಗಳಿಗೆ ಆಹಾರ ನೀಡುತ್ತಾರೆ.

    ಪ್ರತಿದಿನ ಸಂಜೆ 5 ರಿಂದ 7ರವರೆಗೆ 2 ಗಂಟೆಗಳ ಕಾಲ ಸುಮಾರು 100 ರಿಂದ 150 ಬೀದಿನಾಯಿಗಳಿಗೆ ಊಟ ಹಾಕುತ್ತಾರೆ. ಲಾಕ್‍ಡೌನ್ ವೇಳೆಯಲ್ಲಿ ನಗರದ ಹೋಟೆಲ್‍ಗಳೆಲ್ಲ ಬಾಗಿಲು ಹಾಕಿದ್ದವು. ನಗರದ ಬೀದಿ ನಾಯಿಗಳೆಲ್ಲ ಊಟವಿಲ್ಲದೆ ಪರದಾಡುತ್ತಿದ್ದವು. ಇದನ್ನರಿತ ಉಮಾಶಂಕರ್ ಬೀದಿನಾಯಿಗಳನ್ನ ಹುಡುಕಿಕೊಂಡು ಹೋಗಿ ಮೂರು ಹೊತ್ತು ಊಟ ಹಾಕಿ ಹಸಿವು ನೀಗಿಸುತ್ತಿದ್ದಾರೆ.

    ಮನೆಯಲ್ಲಿ 3 ಡ್ಯಾಶ್‍ಎಂಡ್ ನಾಯಿಗಳನ್ನು ಸಾಕಿರುವ ಇವರಿಗೆ ಮನೆ ನಾಯಿಗಳಿಗಿಂತ ಬೀದಿನಾಯಿಗಳೆಂದರೆ ಪ್ರೀತಿ. ಹೀಗಾಗಿ ಪ್ರತಿದಿನ ನಾಯಿಗಳಿಗೋಸ್ಕರ ಕನಿಷ್ಠ 500 ರಿಂದ 700ರೂ. ಖರ್ಚು ಮಾಡುತ್ತಾರೆ. ಬ್ರೆಡ್, ಬಿಸ್ಕೆಟ್ ಜೊತೆಗೆ ಹಾಲು, ಮೊಸರು ಹಾಕುತ್ತಾರೆ. ಹಲವು ಬಾರಿ ಬಿರಿಯಾನಿ ಊಟವನ್ನೂ ಹಾಕಿ ನಾಯಿಗಳಿಗೂ ಖುಷಿ ಪಡಿಸುತ್ತಾರೆ. ಆದರೆ ತಾವು ಮಾಡುವ ಕೆಲಸವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ, ತಾನು ಮಾಡೋ ಕೆಲಸ ಖುಷಿ ಕೊಡುತ್ತೆ ಅದಕ್ಕೆ ಮಾಡುತ್ತಿದ್ದೇನೆ ಅಂತಾರೆ. ನಾಯಿಗಳು ಇವರನ್ನು ಕಂಡರೆ ಸಾಕು ಓಡಿ ಬಂದು ಮುತ್ತಿಹಾಕಿಕೊಳ್ಳುತ್ತವೆ.

  • ಪೊಲೀಸ್ ಪಡೆ ಸೇರುತ್ತಿವೆ ಬೀದಿ ನಾಯಿಗಳು!

    ಪೊಲೀಸ್ ಪಡೆ ಸೇರುತ್ತಿವೆ ಬೀದಿ ನಾಯಿಗಳು!

    ಬೆಂಗಳೂರು: ಕರ್ನಾಟಕದಲ್ಲಿ ಕ್ರಿಮಿನಲ್ ಆಕ್ಟಿವಿಟಿ ಪತ್ತೆ ಹಚ್ಚುವುದಕ್ಕೆ ರಾಜ್ಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಲೇ ಇವೆ. ಈ ಕ್ರೈಂಗಳನ್ನು ನಿಯಂತ್ರಿಸುವುಕ್ಕೆ ಪಕ್ಕಾ ಲೋಕಲ್ ನಾಯಿಗಳು ಅಂದ್ರೆ ಬೀದಿ ನಾಯಿಗಳು ಫೀಲ್ಡ್‌ಗೆ ಎಂಟ್ರಿ ಕೊಡುತ್ತಿವೆ.

    ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ನಗರದ 50 ಬೀದಿ ನಾಯಿಗಳನ್ನ ತೆಗೆದುಕೊಂಡು ಅವುಗಳಿಗೆ ಪೊಲೀಸ್ ಟ್ರೈನಿಂಗ್ ನೀಡುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ಸೌಥ್ ಡಿಸಿಪಿ ರೋಹಿಣಿ ಕಟೋಚ್ ಸಫೇಟ್ ಮಾತನಾಡಿ, ಬೀದಿ ನಾಯಿಗಳಿಗೆ ಕಮಾಂಡೋ ಟ್ರೈನಿಂಗ್ ಪತ್ತೆದಾರಿ ಚಟುವಟಿಕೆ ನೀಡಲಾಗುತ್ತದೆ. ಮುಂದೆ ಅವುಗಳನ್ನು ಖಡಕ್ ಆಫೀಸರ್ ರೀತಿ ರೆಡಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಈ ನಾಯಿಗಳನ್ನು ಮುಂದೆ ಚೆನ್ನಾಗಿ ಟ್ರೈನಿಂಗ್ ಕೊಟ್ಟು, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳಕ್ಕೂ ಬಳಸಬಹುದು. ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ಜಯನಗರ, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಸೇರಿದಂತೆ 17 ಪೊಲೀಸ್ ಠಾಣೆಗಳಲ್ಲಿ ಸುಮಾರು 50ರಿಂದ 60 ನಾಯಿಗಳನ್ನು ಸಾಕಲಾಗುತ್ತಿದೆ. ಇವು ಆಯಾಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಕ್ಕಿವೆ ಎಂದು ರೋಹಿಣಿ ಕಟೋಚ್ ಸಫೇಟ್ ಮಾಹಿತಿ ನೀಡಿದರು.

    ಈ ಮುದ್ದು ಮರಿಗಳಿಗೆ ದಿನವೂ ವ್ಯಾಕ್ಸಿಂಗ್, ಕ್ಲಿನಿಂಗ್, ವಾಕಿಂಗ್, ಜಾಗಿಂಗ್ ಸೇರಿದಂತೆ ಹಲವು ರೀತಿಯಲ್ಲಿ ಟ್ರೈನಿಂಗ್ ನೀಡಲಾಗುತ್ತಿದೆ. ವಿವಿಧ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ನಾಯಿ ಮರಿಗಳಿಗೆ ತರಬೇತಿ ನೀಡಲು ಆರಂಭಿಸಿದ್ದಾರೆ. ಈಗಾಗಲೇ ಸಿಟ್, ಸ್ಟ್ಯಾಂಡ್, ಜಂಪ್, ಸ್ಟೇ ಎನ್ನುವ ಆದೇಶವನ್ನು ಪಾಲಿಸುವಂತೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಟ್ರೈನಿಂಗ್ ನೀಡಲಾಗುವುದು ಎಂದು ಹೇಳಿದರು.

  • ಬೆಂಗ್ಳೂರಿನಲ್ಲಿವೆ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳು – ಯಾವ ವಲಯದಲ್ಲಿ ಎಷ್ಟು ನಾಯಿಗಳಿವೆ?

    ಬೆಂಗ್ಳೂರಿನಲ್ಲಿವೆ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳು – ಯಾವ ವಲಯದಲ್ಲಿ ಎಷ್ಟು ನಾಯಿಗಳಿವೆ?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ದಾಳಿಗೆ ತುತ್ತಾದವರ ಸಂಖ್ಯೆಗೇನು ಕಡಿಮೆಯಿಲ್ಲ. ಈ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಹಲವು ಯೋಜನೆಗಳನ್ನ ಹಾಕಿಕೊಂಡು, ಬೀದಿ ನಾಯಿಗಳ ಹಾವಳಿ ಹಾಗೂ ಅವುಗಳ ನಿಯಂತ್ರಣಕ್ಕೆ ಸಮೀಕ್ಷೆಯನ್ನು ಆರಂಭಿಸಿತ್ತು. ಇದೀಗಾ ಸಮೀಕ್ಷೆಯಲ್ಲಿ ನಗರದಲ್ಲಿ ಬರೋಬ್ಬರಿ 3.09 ಲಕ್ಷ ಬೀದಿ ನಾಯಿಗಳಿವೆ ಎಂಬುದು ವರದಿಯಾಗಿದೆ.

    ಬೆಂಗಳೂರಿನ 8 ವಲಯಗಳಲ್ಲಿ 3,09,972 ಬೀದಿ ನಾಯಿಗಳಿವೆ. ‘ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಸೆಂಟರ್’ ಸಹಯೋಗದಲ್ಲಿ ಬಿಬಿಎಂಪಿ ಆ್ಯಪ್ ಆಧರಿಸಿ 198 ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಬೀದಿಗಳ ಸಂಖ್ಯೆ ಬಹಿರಂಗವಾಗಿದೆ. ಇದರಲ್ಲಿ ಶೇ.54ರಷ್ಟು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ.

    7 ವರ್ಷಗಳ ಬಳಿಕ ಪಾಲಿಕೆಯಿಂದ ಬೀದಿ ನಾಯಿಗಳ ಗಣತಿಯಾಗಿದೆ. ಆರ್.ಆರ್ ನಗರ, ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹಾದೇವಪುರ ವಲಯಗಳಲ್ಲಿ ಹೆಚ್ಚಿನ ಬೀದಿ ನಾಯಿಗಳಿವೆ. ನಗರದ ಕೇಂದ್ರ ವಲಯದಲ್ಲಿ ಒಟ್ಟು 1,12,350 ಬೀದಿ ನಾಯಿಗಳಿದ್ದರೆ, ಹೊರ ವಲಯದಲ್ಲಿ 1,97,622 ಬೀದಿ ನಾಯಿಗಳಿವೆ.

    ನಗರದಲ್ಲಿ ಇರುವ ಬೀದಿ ನಾಯಿಗಳ ಸಂಖ್ಯೆ ನಿಖರವಾಗಿ ಸಿಕ್ಕಿರುವ ಹಿನ್ನಲೆಯಲ್ಲಿ ಬಿಬಿಎಂಪಿಯ ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ಹಾಗೂ ನಿಯಂತ್ರಣ ಯೋಜನೆಗೆ ಪ್ಲಾನ್ ನಡೆಸಿದ್ದಾರೆ.

    ಬೀದಿ ನಾಯಿಗಳ ವಿವರ:
    ದಕ್ಷಿಣ ವಲಯದಲ್ಲಿ ಒಟ್ಟು 39,566 ನಾಯಿಗಳಿವೆ. ಅದರಲ್ಲಿ ಗಂಡು ನಾಯಿ 25,857 ಹಾಗೂ ಹೆಣ್ಣು ನಾಯಿ 13,709 ಇವೆ. ಪೂರ್ವ ವಲಯದಲ್ಲಿ ಗಂಡು ನಾಯಿ 26,214, ಹೆಣ್ಣು ನಾಯಿ 18,089 ಸೇರಿ ಒಟ್ಟು 44,303 ನಾಯಿಗಳಿವೆ. ಪಶ್ಚಿಮ ವಲಯದಲ್ಲಿ 14,614 ಗಂಡು ನಾಯಿ, 11,867 ಹೆಣ್ಣು ನಾಯಿ ಒಟ್ಟು 28,481 ನಾಯಿಗಳಿವೆ. ಯಲಹಂಕದಲ್ಲಿ 28,267 ಗಂಡು ನಾಯಿ, 7950 ಹೆಣ್ಣು ನಾಯಿ, ಒಟ್ಟು 36,217 ನಾಯಿಗಳಿವೆ.

    30,060 ಗಂಡು ನಾಯಿ, 16,274 ಹೆಣ್ಣು ನಾಯಿ, ಒಟ್ಟು 46,334 ನಾಯಿಗಳು ಮಹದೇವಪುರದಲ್ಲಿವೆ. 26,273 ಗಂಡು ನಾಯಿ, 12,667 ಹೆಣ್ಣು ನಾಯಿ ಸೇರಿ ಒಟ್ಟು 38,940 ನಾಯಿಗಳು ಬೊಮ್ಮನಹಳ್ಳಿಯಲ್ಲಿ ಇವೆ. ದಾಸರಹಳ್ಳಿ 17,403 ಗಂಡು ನಾಯಿ, 5767 ಹೆಣ್ಣು ನಾಯಿ, ಒಟ್ಟು 23,170 ನಾಯಿಗಳು ಇವೆ. ಇತ್ತ ಆರ್.ಆರ್ ನಗರದಲ್ಲಿ 35,525 ಗಂಡು ನಾಯಿ, 17,436 ಹೆಣ್ಣು ನಾಯಿ, ಒಟ್ಟು 52,961 ನಾಯಿಗಳಿವೆ.

    ಈ 8 ವಲಯಗಳು ಸೇರಿ ಗಂಡು ನಾಯಿಗಳು 2,06,213, ಹೆಣ್ಣು ನಾಯಿಗಳು 1,03,759, ಒಟ್ಟು 3,09,972 ಬೀದಿ ನಾಯಿಗಳು ಇವೆ ಎಂದು ಬಿಬಿಎಂಪಿ ಸಮೀಕ್ಷೆಯಿಂದ ತಿಳಿದು ಬಂದಿದೆ.