Tag: ಬೀದಿ ನಾಯಿ

  • ಚಿಕ್ಕಬಳ್ಳಾಪುರ | ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ; ಡಿಸಿ ಕಚೇರಿ ಸಿಬ್ಬಂದಿ ಸುಸ್ತು!

    ಚಿಕ್ಕಬಳ್ಳಾಪುರ | ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ; ಡಿಸಿ ಕಚೇರಿ ಸಿಬ್ಬಂದಿ ಸುಸ್ತು!

    ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿದಿನ ಕೆಲಸ ಕಾರ್ಯಗಳಿಗೆ ಆ ಜಿಲ್ಲೆಯ ಜನ ಅಲ್ಲಿಗೆ ಭೇಟಿ ನೀಡ್ತಾರೆ. ಮತ್ತೊಂದೆಡೆ ಅಲ್ಲಿಯ ಅಧಿಕಾರಿ ಸಿಬ್ಬಂದಿ, ಅಲ್ಲೆ ಕರ್ತವ್ಯ ಮಾಡ್ತಾರೆ. ಇಂಥದರಲ್ಲಿ ಆ ಭವನಕ್ಕೂ ನಾಯಿಗಳಿಗೂ ಅದೇನ್ ನಂಟೊ ಗೊತ್ತಿಲ್ಲ, ಹಿಂಡು ಹಿಂಡು ನಾಯಿಗಳು ಆ ಜಿಲ್ಲಾಡಳಿತ ಭವನವನ್ನೇ ತಮ್ಮ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿವೆ.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಒಂದಲ್ಲ ಎರಡಲ್ಲ 18ಕ್ಕೂ ಹೆಚ್ಚು ನಾಯಿಗಳು ಇವೆ. ಒಂದೊಂದು ನಾಯಿಗಳು ಒಂದೊಂದು ಕಚೇರಿಯನ್ನು ಹಂಚಿಕೊಂಡಂತೆ ಕಂಡು ಬಂದಿದೆ. ಆ ಕಚೇರಿ ಹತ್ತಿರ ಹೊದ್ರೆ, ಅಲ್ಲೊಂದು ಬೌ ಎನ್ನುತ್ತೆ, ಈ ಕಡೆ ಕಚೇರಿಗೆ ಬಂದ್ರೆ ಇಲ್ಲೊಂದು ಬೌ ಬೌ ಎನ್ನುತ್ತೆ, ಇಲ್ಲಿರುವ ನಾಯಿಗಳು ಕೆಲವು ಸಿಬ್ಬಂದಿಗಳಿಗೆ ಅಭ್ಯಾಸವಾಗಿದ್ರೆ. ಕಚೇರಿಗೆ ಬರೊ ಸಾರ್ವಜನಿಕರನ್ನ ಕಂಡ್ರೆ ಬೌ ಬೌ ಮಾಡ್ತಿವೆ.

    ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಯಿಗಳಿಂದ ಎಚ್ಚರಿಕೆಯಿಂದ ಇರುವಂತೆ ಡಿಸಿ ಪಿ.ಎನ್ ರವೀಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದಿನದಿಂದ ದಿನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಾಯಿಗಳ ಸಂತತಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಅಪಾಯ ಆಗುವ ಮುನ್ನ ಎಚ್ಚರ ವಹಿಸಬೇಕಿದೆ.

  • ಬಾಗಲಕೋಟೆ ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

    ಬಾಗಲಕೋಟೆ ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

    ಬಾಗಲಕೋಟೆ: ಕೈ,ಕಾಲುಗಳ ಮೇಲೆ ಜಿನುಗುತ್ತಿರುವ ರಕ್ತ, ಗಂಭೀರ ಗಾಯಗೊಂಡವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ಏನೋ ದುರಂತ ನಡೆದಿದೆ ಎಂದು ಗಾಬರಿಯಿಂದ ಮುಗಿಬಿದ್ದಿರುವ ಜನತೆ.

    ಅಂದ ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ. ಕಳೆದ ನಾಲ್ಕೈದು ದಿನಗಳ ಹಿಂದೆ ನವನಗರದ ಎಪಿಎಂಸಿ ಬಳಿ ಹುಚ್ಚು ನಾಯಿಯೊಂದು (Stray Dog) ಕೆಲಸಕ್ಕೆಂದು ಹೊರಟವರ, ಬಸ್‌ಗಾಗಿ ಕಾಯುತ್ತಿದ್ದವರ ಸುಮಾರು ಹತ್ತು ಜನರ ಮೇಲೆ ತೀವ್ರ ದಾಳಿ ನಡೆಸಿ ಗಾಯಗೊಳಿಸಿತ್ತು. ಸಾಲದು ಎಂಬಂತೆ ಪಕ್ಕದಲ್ಲೇ ಎಪಿಎಂಸಿ ಯಾರ್ಡ್‌ನಲ್ಲಿರುವ ಅಂಧ ಶಾಲಾ ಮಕ್ಕಳ ಮೇಲೂ ದಾಳಿ ನಡೆಸಿ ಕೈ, ಕಾಲು ಸೇರಿ ದೇಹದ ಬೇರೆ ಬೇರೆ ಭಾಗದಲ್ಲಿ ತೀವ್ರವಾಗಿ ಕಚ್ಚಿತ್ತು.

    ಒಟ್ಟು 15 ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಅವರೆಲ್ಲಾ ಜಿಲ್ಲಾಸ್ಪತ್ರೆಗೆ (Bagalkote District Hospital) ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಘಟನೆಯಿಂದ ನಗರದ ಜನತೆ ಆತಂಕಕ್ಕೊಳಗಾಗಿತ್ತು. ಸಾಮಾನ್ಯ ನಾಯಿಗಳು ಬಳಿ ಬಂದರು ಸಹ ಭಯದಿಂದ ದೂರ ಸರಿಯುವ ರೀತಿಯಾಗಿತ್ತು. ಕಣ್ಣಿದ್ದವರು ಹೇಗೋ ವಾಸಿಯಾಗಿ ಬಿಡುತ್ತಾರೆ. ಆದರೆ ಜಗತ್ತೇ ಕತ್ತಲಾಗಿದ್ದವರ ಗತಿ ಏನು? ಹೀಗಾಗಿ ಹುಚ್ಚು ನಾಯಿ ಕಡಿತಕ್ಕೊಳಗಾದ ಅಂಧ ಶಾಲಾ ಶಿಕ್ಷಕಿ ಹೇಮಾವತಿ ಹಾಗೂ ಸ್ಥಳೀಯರು ಹುಚ್ಚು ನಾಯಿ, ಬೀದಿ ನಾಯಿಗಳ ಹಾವಳಿಯಿಂದ ನಮ್ಮನ್ನು ರಕ್ಷಿಸಿ, ಮೇಲಿಂದ ಮೇಲೆ ನಾಯಿ ದಾಳಿ ನಡೆಯುತ್ತಿದೆ. ಭಯದಲ್ಲೇ ಜೀವನ ಮಾಡಬೇಕಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತ, ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.

    ಇತ್ತೀಚೆಗೆ ಬಾಗಲಕೋಟೆ ನಗರದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿ ಅಂಶಗಳೇ ಹೇಳುತ್ತಿವೆ.ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 1669 ಜನರಿಗೆ ನಾಯಿ ಕಡಿತವಾಗಿದೆ.ಇದನ್ನೂ ಓದಿ: Bengaluru | ಆಟೋಗೆ ಕಸ ನೀಡದ ಮನೆಗಳಿಗೆ ನೋಟಿಸ್

    ಸಾಂದರ್ಭಿಕ ಚಿತ್ರ

    ಪ್ರತಿ ತಿಂಗಳು ಸರಾಸರಿ 200 ಜನ ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇಬ್ಬರೂ ನಾಯಿ ಕಡಿತದಿಂದ ಸಾವನ್ನಪ್ಪಿದ್ದು ಭಯ ಮೂಡಿಸುತ್ತದೆ. ಒಂದೇ ತಿಂಗಳಲ್ಲಿ ಬಾಗಲಕೋಟೆ ನಗರದಲ್ಲಷ್ಟೇ 30ಕ್ಕೂ ಹೆಚ್ಚು ಜನರ ಮಾರಣಾಂತಿಕ ನಾಯಿ ದಾಳಿಗೆ ಒಳಗಾಗಿದ್ದಾರೆ.

    ಬಾಗಲಕೋಟೆ ಮತ್ತು ಇಳಕಲ್‌ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ ಕಡಿತದ ಪ್ರಕರಣ ಬೆಳಕಿಗೆ ಬಂದಿದೆ. ಹುಚ್ಚು ಹಿಡಿದ ಹಿನ್ನೆಲೆ ನಾಯಿಯನ್ನು ಯಾರೋ ಬೀದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಮಹೇಶ್ ಕೋಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು

    ಜಿಲ್ಲಾಸ್ಪತ್ರೆಗೆ ಮೂರು ಕೆಟಗೆರಿಗೆಯಲ್ಲಿ ಪ್ರಕರಣ ದಾಖಲಾಗುತ್ತವೆ. ಕೆಟಗೆರಿ ಮೂರರ ಪ್ರಕರಣಗಳೇ ಜಿಲ್ಲಾಸ್ಪತ್ರೆಗೆ ಹೆಚ್ಚು ದಾಖಲಾಗಿವೆ. ಮೊದಲ ಕೆಟಗೆರಿಯಲ್ಲಿ ಕೇವಲ ಟಿಟಿ ಇಂಜೆಕ್ಷನ್ ಮಾತ್ರ, ಎರಡರಲ್ಲಿ ಟಿಟಿ+ಇಂಟ್ರಾ ಮಸಿಕ್ಯೂಲರ್ ಇಂಜೆಕ್ಷನ್ ಕೊಡಲಾಗುತ್ತೆ. ಕೆಟಗರಿ ಮೂರರ ವ್ಯಕ್ತಿಗಳಿಗೆ ಟಿಟಿ,ಇಂಟ್ರಾ ಮಸಿಕ್ಯೂಲರ್, ಎಆರ್ 5 ಡೋಸ್‌ ಇಂಜೆಕ್ಷನ್ ಕೊಡಲಾಗುತ್ತೆ ಎಂದು ನಾಯಿ ಕಡಿತಕ್ಕೆ ಒಳಗಾಗು ವ್ಯಕ್ತಿಗಳ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.

    ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ ಮತ್ತು ಪಸು ಸಂಗೋಪನೆ ಇಲಾಖೆಯಿಂದ ತಂಡ ರಚನೆ ಮಾಡಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಾಗಿ ಮಹೇಶ್ ಕೋಣಿ ತಿಳಿಸಿದರು.

  • ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

    ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

    – ಆಕ್ರಮಣಕಾರಿ, ಅನಾರೋಗ್ಯ ನಾಯಿಗಳನ್ನ ಮಾತ್ರ ಸ್ಥಳಾಂತರಿಸಿ
    – ಸಾರ್ವಜನಿಕವಾಗಿ ಆಹಾರ ಕೊಟ್ರೆ ಕಟ್ಟುನಿಟ್ಟಿನ ಕ್ರಮ

    ನವದೆಹಲಿ: ದೆಹಲಿ ಮತ್ತು‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಶಾಶ್ವತವಾಗಿ‌ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂ ತನ್ನದೇ ಸುಪ್ರೀಂ ಕೋರ್ಟ್‌ (Supreme Court) ತಿದ್ದುಪಡಿ ತಂದಿದೆ. ಬೀದಿ ನಾಯಿಗಳನ್ನು (Stray Dogs) ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಅವುಗಳನ್ನು ಬಿಡುಗಡೆ ಮಾಡಿ, ಆಕ್ರಮಣಕಾರಿ, ಅನಾರೋಗ್ಯ ಇರುವ ನಾಯಿಗಳನ್ನು ಮಾತ್ರ ಶೆಡ್‌ಗಳಿಗೆ ಸ್ಥಳಾಂತರಿಸುವಂತೆ ಕೋರ್ಟ್‌ ನಿರ್ದೇಶನ ನೀಡಿದೆ. ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

    ನ್ಯಾ. ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ. ಎನ್‌.ವಿ ಅಂಜಾರಿಯಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದ್ದು, ಆಗಸ್ಟ್‌ 11ರಂದು ಹೊರಡಿಸಿದ್ದ ತೀರ್ಪಿನಲ್ಲಿ ತಿದ್ದುಪಡಿ ಮಾಡಿದೆ. ನ್ಯಾ. ಪಾರ್ದಿವಾಲಾ ಪೀಠದ ಆದೇಶಕ್ಕೆ ಶ್ವಾನಪ್ರಿಯರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಪ್ರಕರಣ ವಿಚಾರಣೆಯನ್ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಕಾನ್ಸ್‌ಟೇಬಲ್‌ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದ 6 ಪೊಲೀಸರು ಅರೆಸ್ಟ್‌

    ಈ ಮೊದಲು ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಿಗೆ (ಶೆಡ್‌) ಸ್ಥಳಾಂತರಿಸಬೇಕು ಎಂದು ಹೇಳಿದ್ದ ಸುಪ್ರೀಂ ಈಗ, ಅನಾರೋಗ್ಯ ಮತ್ತು ಆಕ್ರಮಣಕಾರಿ ಬೀದಿ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಇರಿಸುವಂತೆ ಸೂಚಿಸಿದೆ. ಉಳಿದ ನಾಯಿಗಳನ್ನು ಹಿಡಿದು, ಸಂತಾನಹರಣ ಚಿಕಿತ್ಸೆ, ಜಂತುಹುಳು ನಿವಾರಣಾ ಲಸಿಕೆ ಹಾಕಿದ ಬಳಿಕ ಅವುಗಳನ್ನು ಹಿಡಿದ ಪ್ರದೇಶದಲ್ಲೇ ಬಿಡುವಂತೆ ತಿಳಿಸಿದೆ.  ಇದನ್ನೂ ಓದಿ: ಮತಗಳವು ಆರೋಪ – ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

    ಮುಂದುವರಿದು… ರೇಬೀಸ್ ಅಥವಾ ಅನಾರೋಗ್ಯವುಳ್ಳ ನಾಯಿಗಳು ಹಾಗೂ ಆಕ್ರಮಣಕಾರಿ ನಾಯಿಗಳನ್ನ ಮಾತ್ರ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯತಾಣಗಳಲ್ಲಿ ಇರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಇದನ್ನೂ ಓದಿ: ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ
    ಮುಂದುವರಿದು… ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದಕ್ಕೆ ಸುಪ್ರೀಂ ನಿಷೇಧ ಹೇರಿದೆ. ನಿಮಯ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ. ಸಾರ್ವಜನಿಕವಾಗಿ ಅವುಗಳಿಗೆ ಆಹಾರ ನೀಡುವುದಕ್ಕೆ ಅನುಮತಿಯಿಲ್ಲ, ಪ್ರತ್ಯೇಕ ಮೀಸಲಾದ ಆಹಾರ ಸ್ಥಳಗಳನ್ನ ರಚಿಸಲಾಗುವುದು, ಅಲ್ಲಿ ಮಾತ್ರ ಆಹಾರ ನೀಡಬೇಕು ಎಂದು ಕೋರ್ಟ್‌ ಹೇಳಿದೆ.

    ಇನ್ನೂ ಪ್ರಾಣಿ ಪ್ರಿಯರು ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್‌, ದತ್ತು ಪಡೆದ ನಾಯಿಗಳನ್ನು ಮರಳಿ ಬೀದಿಗಳಿಗೆ ಹಿಂತಿರುಗಿಸದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅದಕ್ಕಾಗಿ ಪ್ರತಿ ಅರ್ಜಿದಾರ 25,000 ರೂ. ಮತ್ತು ಎನ್‌ಜಿಒಗಳು 2 ಲಕ್ಷ ರೂ. ಠೇವಣಿ ಇಡಬೇಕು ಎಂದು ನಿರ್ದೇಶಿಸಿತು. ಮುಖ್ಯವಾಗಿ ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಲು ಸೂಚಿಸಿತು. ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

  • ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

    ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಬೀದಿ ನಾಯಿಗಳನ್ನು (Street Dogs) ಆಶ್ರಯ ತಾಣಗಳಿಗೆ ಸ್ಥಳಾಂತರ ಸಂಬಂಧ ದೆಹಲಿ ಮಹಾನಗರ ಪಾಲಿಕೆ (MCD) ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.

    ಈ ಸಂಬಂಧ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ ನಂತರ, ನ್ಯಾ.ಜೆ.ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠವು ತುರ್ತು ವಿಚಾರಣೆಯನ್ನು ನಡೆಸಲು ನಿರಾಕರಿಸಿದೆ.ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆಗೆ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ನ್ಯಾ. ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

    ನ್ಯಾ.ಜೆಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು, ಆ.11ರಂದು ದೆಹಲಿ-ಎನ್‌ಸಿಆರ್ ಸುತ್ತಮುತ್ತಲಿನ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಈ ನಿರ್ದೇಶನಗಳಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು ಕಾಯ್ದಿರಿಸಿತ್ತು. ಬೀದಿ ನಾಯಿಗಳ ಸಂಪೂರ್ಣ ಸಮಸ್ಯೆಗೆ ಸ್ಥಳೀಯ ಅಧಿಕಾರಿಗಳ ನಿಷ್ಕ್ರಿಯತೆಯೇ ಕಾರಣ ಎಂದು ಹೇಳಿತ್ತು.

    ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿ ಕಡಿತವು ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್‌ಗೆ ಕಾರಣವಾದ ಬಗ್ಗೆ ದಾಖಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಜು.28 ರಂದು ಪ್ರಾರಂಭವಾಗಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಹಲವಾರು ನಿರ್ದೇಶನಗಳನ್ನು ನೀಡಿತ್ತು.ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭ

  • ಬೀದಿ ನಾಯಿಗಳ ಜನನ ನಿಯಂತ್ರಣ ವಿಫಲವಾಗಿದ್ದೇಕೆ? – ಸಂತಾನಹರಣ ನಾಯಿಗಳಿಗೆ ಟ್ರ್ಯಾಕಿಂಗ್‌ಗೆ ಚಿಪ್‌ ಅಳವಡಿಸಬೇಕೆ?

    ಬೀದಿ ನಾಯಿಗಳ ಜನನ ನಿಯಂತ್ರಣ ವಿಫಲವಾಗಿದ್ದೇಕೆ? – ಸಂತಾನಹರಣ ನಾಯಿಗಳಿಗೆ ಟ್ರ್ಯಾಕಿಂಗ್‌ಗೆ ಚಿಪ್‌ ಅಳವಡಿಸಬೇಕೆ?

    ನಾಯಿ ದಾಳಿಯ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ವೆ. ರಸ್ತೆಯಲ್ಲಿ ಓಡಾಡುವವರ ಮೇಲೆ, ಶಾಲಾ ಮಕ್ಕಳ ಮೇಲೆ ಅದ್ರಲ್ಲೂ ಬೆಳಗ್ಗಿನ ಜಾವ, ಮಟ ಮಟ ಮಧ್ಯಾಹ್ನ, ತಡರಾತ್ರಿಗಳಲ್ಲಿ ಒಬ್ಬಂಟಿಗರು ಸಿಕ್ಕಿಬಿಟ್ರೆ ಕಥೆ ಮುಗಿಯಿತು. ಐದಾರು ನಾಯಿಗಳು (Stray Dogs) ಒಟ್ಟಿಗೆ ಮೈಮೇಲೆ ಎರಗಿಬಿಡುತ್ತವೆ. ಇದಕ್ಕೆ ಗ್ರಾಮೀಣ ಪ್ರದೇಶಗಳೂ ಹೊರತಾಗಿಲ್ಲ. ಬೆಂಗಳೂರಿನ ಮಹಾನಗರಗಳಲ್ಲಂತೂ ಕೇಳಂಗೇ ಇಲ್ಲ. ಇದೆಲ್ಲ ಕ್ವಾಟ್ಲೆಗಳಿಗೆ ಕಡಿವಾಣ ಹಾಕಬೇಕು ಅಂತಾನೇ ಸುಪ್ರೀಂ ಕೋರ್ಟ್‌ (Supreme Court) ಹೊಸ ನೀತಿಯೊಂದನ್ನ ರೂಪಿಸಿದೆ.

    ಹಾವಳಿ ತಡೆಗೆ ನಿರ್ದಿಷ್ಟ ನೀತಿ ರೂಪಿಸಿ ರಾಜಧಾನಿ ದೆಹಲಿ ಮತ್ತು NCR (ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶ) ವಲಯದ ಎಲ್ಲ ಪ್ರದೇಶದಿಂದ ಬೀದಿ ನಾಯಿಗಳನ್ನು ಹಿಡಿದು ಶೆಡ್‌ಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ-1960 ಹಾಗೂ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 (ABC) ರೀತಿಯ ಕಾನೂನುಗಳು, ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಕಾನೂನು ಮನುಷ್ಯರ ಹಿತರಕ್ಷಣೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ಹೇಗೆ ಎನ್ನುವ ಬಗ್ಗೆಯೂ ತಿಳಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ನ್ಯಾ. ಜೆ.ಬಿ ಪಾರ್ದಿವಾಲಾ ಮತ್ತು ಆರ್.‌ ಮಹಾದೇವನ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಬೀದಿನಾಯಿಗಳ ನಿಯಂತ್ರಣಕ್ಕೆ ಈ ಆದೇಶ ಕೊಟ್ಟಿದೆ.

    ಇನ್ನೂ ಕರ್ನಾಟಕದ ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ತಗ್ಗಿದ್ದರೂ, ಕಡಿತ ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇವೆ. 2023ರ ಗಣತಿ ಪ್ರಕಾರ, ನಗರದಲ್ಲಿ ಶೇ 71.85ರಷ್ಟು ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷ ಜನವರಿಯಿಂದ ಜೂನ್‌ವರೆಗೆ 13,000ಕ್ಕೂ ಹೆಚ್ಚು ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿಯಾಗಿದೆ. ಕಳೆದ 60 ವರ್ಷಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜನನ ನಿಯಂತ್ರಣ ವೈಫಲ್ಯಕ್ಕೆ ಕಾರಣವೇನು? ಎಂಬುದನ್ನ ತಿಳಿಯಬೇಕಿದ್ರೆ ಮುಂದೆ ಓದಿ…

    ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಶುರುವಾಗಿದ್ದು ಹೇಗೆ?
    1966ರಲ್ಲಿ ಚೆನ್ನೈನಲ್ಲಿ ಪ್ರಾಣಿಗಳಿಗೆ ಮೊದಲ ಉಚಿತ ಸಂತಾನಹರಣ ಚಿಕಿತ್ಸಾಲಯ ತೆರೆಯಲಾಯಿತು. ಅದಾದ 30 ವರ್ಷಗಳ ನಂತ್ರ ಬ್ಲೂ ಕ್ರಾಸ್‌ ಎಂಬ ಪ್ರಾಣಿ ಕಲ್ಯಾಣ ದತ್ತಿ ಸಂಸ್ಥೆಯು ಚೆನ್ನೈ ನಗರ ಪಾಲಿಕೆಗೆ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಆರಂಭಿಸುವಂತೆ ಮನವೊಲಿಸಿತು. ಈ ಕಾರ್ಯಕ್ರಮ ಯಶಸ್ವಿಯಾದ ನಂತರ 2001ರಲ್ಲಿ ಇದನ್ನ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿಸಲಾಯಿತು. ಆದಗ್ಯೂ ಬೀದಿನಾಯಿಗಳ ಸಂಖ್ಯೆ ಬೆಳೆಯುತ್ತಾ ಹೋಯ್ತು.. ಅದರಂತೆ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಹೋಯ್ತು.

    ಜನನ ನಿಯಂತ್ರಣ ವಿಫಲವಾಗಿದ್ದೇಕೆ?
    WHO ನ ಮಾಜಿ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಹೇಳುವಂತೆ, ಈ ಕಾರ್ಯಕ್ರಮ ಯಾರನ್ನೂ ನಿರ್ದಿಷ್ಟ ಹೊಣೆಗಾರರನ್ನಾಗಿ ಮಾಡೋದಿಲ್ಲ. ಏಕೆಂದರೆ, ಈ ಕೆಲಸಕ್ಕೆ ಪಶುವೈದ್ಯರು, ಮೌಲ ಸೌಕರ್ಯ, ಹಣಕಾಸು ಹಾಗೂ ಮಾನವಶಕ್ತಿಯ ಕೊರತೆಯಿದೆ. ಲಸಿಕೆಗಳ ಸಂಖ್ಯೆ, ಶಸ್ತ್ರಚಿಕಿತ್ಸೆಗಳ ಸಂಖ್ಯೆ. ಅದರ ಪರಿಣಾಮದ ಬಗ್ಗೆ ಯಾವುದೇ ರಾಷ್ಟ್ರೀಯ ದತ್ತಾಂಶಗಳಿಲ್ಲ. ಹಣವನ್ನ ವಿವೇಚನೆಯಿಂದ ಬಳಸಲಾಗಿದೆಯೇ ಎಂಬುದನ್ನ ತೋರಿಸಲು ಫಲಿತಾಂಶ, ಅಧ್ಯಯನಗಳಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಸೆಂಟ್ರಲ್ ಡ್ರಗ್ಸ್ ಕಂಟ್ರೋಲ್ ಲ್ಯಾಬೊರೇಟರಿಯ ಮಾಜಿ ಮುಖ್ಯಸ್ಥ ಸುರಿಂದರ್ ಸಿಂಗ್ ಮಾತನಾಡ್ತಾ, ಈ ಕೆಲಸ ಶುರುವಾದಾಗ ಚೆನ್ನಾಗಿತ್ತು. ಕನಿಷ್ಠ 1 ದಶಕದ ಕಾಲ ಬೀದಿ ನಾಯಿಗಳಿಗೆ ನಿರಂತರ ಸಂತಾನಹರಣ ಚಿಕಿತ್ಸೆ ಮಾಡಿದ್ದಿದ್ದರೆ ಭಾರತವು ರೇಬಿಸ್‌ನಂತಹ ಕಾಯಿಲೆಯನ್ನು ತೊಡೆದುಹಾಕಬಹುದಿತ್ತು. ಆದ್ರೆ ಮೊದಲ 2 ವರ್ಷಗಳ ನಂತ್ರ ಅವುಗಳನ್ನು ಮೂಲ ಸೌಕರ್ಯವನ್ನು ಕೊಳ್ಳಲು ಹಣಕಾಸಿನ ಸಮಸ್ಯೆ ಎದುರಾಯ್ತು. ಆ ಬಳಿಕ ಕೆಲಸದ ವೇಗವು ಕುಂಟಿತಗೊಂಡದ್ದರಿಂದ ಜನನ ನಿಯಂತ್ರಣ ಕ್ರಮವು ವಿಫಲವಾಯ್ತು ಎಂದಿದ್ದಾರೆ.

    ದೇಶದಲ್ಲೇ ಅತಿಹೆಚ್ಚು ಬೀದಿ ನಾಯಿಗಳಿರುವ ಟಾಪ್‌-10 ಜಿಲ್ಲೆಗಳಾವುವು?
    ದೇಶದಲ್ಲೇ ಅತಿಹೆಚ್ಚು ನಾಯಿಗಳಿರುವ 10 ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ನಗರ ಹಾಗೂ ಮೈಸೂರು ಸ್ಥಾನ ಪಡೆದುಕೊಂಡಿವೆ. ಒಡಿಶಾದ ಕಲಾಹಂಡಿಯಲ್ಲಿ 10.6 ಲಕ್ಷ ನಾಯಿಗಳಿದ್ದರೆ ಮಹಾರಾಷ್ಟ್ರದಲ್ಲಿ 2.1 ಲಕ್ಷ ನಾಯಿಗಳಿವೆ. ಇನ್ನೂ 3ನೇ ಸ್ಥಾನದಲ್ಲಿ ಬೆಂಗಳೂರು ನಗರ ಇದ್ದು, 1.4 ಲಕ್ಷ ಬೀದಿನಾಯಿ ಹೊಂದೆ. ಇನ್ನುಳಿದಂತೆ ಪ.ಬಂಗಾಳದ ಮುರ್ಷಿದಾಬಾದ್‌ 1.1 ಲಕ್ಷ, ಪಶ್ಚಿಮ ಮಿಡ್ನಾಪುರ್‌, ಪಶ್ಚಿಮ ಬುರ್ದ್ವಾನ್‌, ಪೂರ್ವ ಬುರ್ದ್ವಾನ್‌ನಲ್ಲಿ ತಲಾ 1 ಲಕ್ಷ, ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ 90 ಸಾವಿರ, ಪ.ಬಂಗಳದ ಉತ್ತರ 24 ಪರಗಣಗಳಲ್ಲಿ 90 ಸಾವಿರ ಮತ್ತು ಜಮ್ಮುವಿನಲ್ಲಿ 90 ಸಾವಿರ ಬೀದಿ ನಾಯಿಗಳಿವೆ ಎಂದು ತಿಳಿದುಬಂದಿದೆ.

    ಮಹಾರಾಷ್ಟ್ರದಲ್ಲೇ ನಾಯಿ ಕಡಿತ ಕೇಸ್‌ ಹೆಚ್ಚು 
    ದೇಶದ ಹಲವು ರಾಜ್ಯಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 2024ರಲ್ಲಿ ಮಹಾರಾಷ್ಟ್ರದಲ್ಲಿ 4.85 ಲಕ್ಷ, ತಮಿಳುನಾಡಿನಲ್ಲಿ 4.80 ಲಕ್ಷ, ಗುಜರಾತ್‌ನಲ್ಲಿ 3.92 ಲಕ್ಷ, ಕರ್ನಾಟಕದಲ್ಲಿ 3.61 ಲಕ್ಷ, ಬಿಹಾರದಲ್ಲಿ 2.63 ಲಕ್ಷ, ಆಂಧ್ರಪ್ರದೇಶದಲ್ಲಿ 2.45 ಲಕ್ಷ, ಅಸ್ಸಾಂನಲ್ಲಿ 1.66 ಲಕ್ಷ, ಉತ್ತರ ಪ್ರದೇಶದಲ್ಲಿ 1.64 ಲಕ್ಷ, ರಾಜಸ್ಥಾನದಲ್ಲಿ 1.40 ಲಕ್ಷ, ಬಿಹಾರದಲ್ಲಿ ಪ್ರಕರಣಗಳು ವರದಿಯಾಗಿವೆ.

    2025ರ ಅಂಕಿಅಂಶ ಗಮನಿಸುವುದಾದ್ರೆ, ಕಳೆದ 6 ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು.

    ಜನನ ನಿಯಂತ್ರಣಕ್ಕೆ ಏನು ಮಾಡಬೇಕು?
    ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮಕ್ಕೆ ಸೂಕ್ತ ಹಣಕಾಸು ಒದಗಿಸದೇ ಇರುವುದೇ ಕಳವಳಕ್ಕೆ ಕಾರಣವಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರತಿ ನಾಯಿಗೆ 1,650 ರೂ.ಗಳ ವರೆಗೆ ಶಿಫಾರಸು ಮಾಡಿದೆ. ಇದರಲ್ಲಿ ನಾಯಿ ಹಿಡಿಯುವವರಿಗೆ, ಸಂತಾನಹರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನಂತರದ ನಿರ್ವಹಣೆ ಮತ್ತು ಲಸಿಕೆಗಾಗಿ ಪ್ರತಿ ನಾಯಿಗೆ ನಿಗದಿಪಡಿಸಿರುವ 200 ರೂ. ಇದರಲ್ಲೇ ಬರುತ್ತದೆ. ಅಂದಾಜಿನ ಪ್ರಕಾರ ದೇಶಾದ್ಯಂತ 6 ಕೋಟಿ ಬೀದಿ ನಾಯಿಗಳಿದ್ದು, ಮಂಡಳಿ ನಿಗದಿ ಮಾಡಿದ ಹಣದಿಂದ ಜನನ ನಿಯಂತ್ರಣಕ್ಕೆ ಕಡಿವಾಣ ಹಾಕುವುದು ಕಷ್ಟಕರ ಹೀಗಾಗಿ ಸ್ಮಾರ್ಟ್‌ ನವೀನ ವಿದಾನಗಳನ್ನು ಹುಡುಕಬೇಕಿದೆ ಎನ್ನುತ್ತಾರೆ ತಜ್ಞರು.

    ಜನನ ನಿಯಂತ್ರಣಕ್ಕೆ ತಜ್ಞರ ಸಲಹೆಗಳೇನು?
    * ಹೆಣ್ಣು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಜೊತೆಗೆ ಜನರು ಮತ್ತು ಸಂಘಸಂಸ್ಥೆಗಳು ನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಅವುಗಳ ಜವಾಬ್ದಾರಿ ನಿರ್ವಹಿಸುವಂತೆ ಸರ್ಕಾರ ಮಾಡಬೇಕು.
    * ಬಹಳ ಜನಕ್ಕೆ ತಮ್ಮ ಸ್ಥಳೀಯ ನಾಯಿಗಳ ಮೌಲ್ಯ ತಿಳಿದಿರುವುದಿಲ್ಲ. ಸ್ವಲ್ಪ ಮಟ್ಟಿಗೆ ಅವುಗಳ ಮೌಲ್ಯ ಕಂಡುಕೊಂಡ್ರೆ ಭದ್ರತೆ ಅಥವಾ ಬಾಂಬ್‌ ಸ್ಕ್ವಾಡ್‌ಗಳಿಗೆ ಬಳಸಬಹುದಲ್ಲವೇ?
    * ದೆಹಲಿ, ಚೆನ್ನೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಂತಾನಹರಣಗೊಂಡ ಪ್ರಾಣಿಗಳನ್ನು ಟ್ರ್ಯಾಕಿಂಗ್‌ ಮೂಲಕ ಖಚಿಪಡಿಸಿಕೊಳ್ಳಬೇಕು. ಅದಕ್ಕಾಗಿ ಮೈಕ್ರೋಚಿಪ್‌ಗಳಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. RFID ಸಾಧನವಾದ ಮೈಕ್ರೋಚಿಪ್ ಶಾಶ್ವತ ID ಯಾಗಿ ಕಾರ್ಯನಿರ್ವಹಿಸುತ್ತದೆ. ನಾಯಿಯ ಚರ್ಮದ ಅಡಿಯಲ್ಲಿ ಈ ಚಿಪ್‌ ಅಳವಡಿಸಬಹುದಾಗಿದೆ.
    * ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್ (HSI) ನಂತಹ ಸಂಸ್ಥೆಗಳು ಸಂಪೂರ್ಣ ABC ಪ್ರಕ್ರಿಯೆ ಸುಗಮಗೊಳಿಸಲು ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕಿದೆ ಅನ್ನೋದು ತಜ್ಞರ ಸಲಹೆ. ಇದರೊಂದಿಗೆ ಸಂತಾನೋತ್ಪತ್ತಿ ಪ್ರಕ್ರಿಯೆ ತಡೆಯುವ ಪ್ರತಿಕಾಯಗಳನ್ನು ಉತ್ಪಾದಿಸುವ ಇಮ್ಯುನೊಕಾಂಟ್ರಾಸೆಪ್ಷನ್ ಸೇರಿದಂತೆ ಶಸ್ತ್ರಚಿಕಿತ್ಸೆಯಲ್ಲದ ಗರ್ಭನಿರೋಧಕಗಳ ಪತ್ತೆ ಕಾರ್ಯದಲ್ಲಿ ಹೆಚ್‌ಎಸ್‌ಐ ತೊಡಗಿದೆ.

  • ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    – ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ನಾಯಿಗಳಿಗೆ ಬಾಡೂಟ

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ಬೀದಿನಾಯಿಗಳಿಗೆ ಕಾಂಗ್ರೆಸ್ (Congress) ಸರ್ಕಾರ ಬಾಡೂಟದ ಭಾಗ್ಯ ಕಲ್ಪಿಸುತ್ತಿದೆ.ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!

    ಕಾಂಗ್ರೆಸ್ ಸರ್ಕಾರ ಬೀದಿ ನಾಯಿಗಳಿಗೂ (Street Dogs) ಗ್ಯಾರಂಟಿ ಯೋಜನೆಯನ್ನು ಕೊಡುತ್ತಿದೆ. ಈ ಮೂಲಕ ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್‌ರೈಸ್ ನೀಡಲಾಗುತ್ತದೆ. ಪಾಲಿಕೆಯ 8 ವಲಯಗಳಲ್ಲಿ ನಿತ್ಯ 600-700 ಬೀದಿ ನಾಯಿಗಳಿಗೆ ಬಾಡೂಟ ನೀಡಲು ಬಿಬಿಎಂಪಿ (BBMP)  2.80 ಕೋಟಿ ರೂ. ಟೆಂಡರ್ ಕರೆದಿದೆ.

    ಕಾಂಗ್ರೆಸ್ ಸರ್ಕಾರದ ಈ ಬಾಡೂಟ ಭಾಗ್ಯಕ್ಕೆ ತೆರಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಬೀದಿನಾಯಿಗೆ ಬಾಡೂಟ ಕೊಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾ ಮಾಡಿದ್ದಾರೆ. ನಾಯಿಗಳ ಮೇಲೆ ಪ್ರೀತಿ ಇರಲಿ, ಆದರೆ ಇದೆಲ್ಲಾ ಹೇಗೆ? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ

  • ಗದಗ| ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ

    ಗದಗ| ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ

    ಗದಗ: ಬೀದಿ ನಾಯಿಗಳ(Street Dog) ದಾಳಿಯಿಂದ ಮಹಿಳೆಗೆ ಗಂಭೀರ ಗಾಯವಾದ ಘಟನೆ ಜಿಲ್ಲೆ ರೋಣ(Rona) ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.

    ಜನ್ನತಬೀ (45) ಗಾಯಗೊಂಡ ಮಹಿಳೆ. ಗಾಡಗೋಳಿ ಗ್ರಾಮದ ಹೊಳೆ ಆಲೂರ ರಸ್ತೆಯಲ್ಲಿ ನಾಯಿಗಳ ಕಾದಾಟ ನಡೆದಿತ್ತು. ಆ ಸಂದರ್ಭದಲ್ಲಿ ಮಹಿಳೆ ಮನೆಯಿಂದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದರು. ಕಾದಾಡಿಕೊಂಡು ಬಂದ ಶ್ವಾನಗಳ ಗುಂಪು ಏಕಾಏಕಿ ಮಹಿಳೆಯ ಮೇಲೆ ಎರಗಿವೆ. ಈ ಪರಿಣಾಮ ಮಹಿಳೆ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಮಹಿಳೆ ಕೆಳಗೆ ಬಿದ್ದ ಕೂಡಲೇ ನಾಯಿಗಳು ಎಲ್ಲೆಂದರಲ್ಲಿ ಕಚ್ಚಿವೆ. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ರಂಜಾನ್ ಹಬ್ಬಕ್ಕೆ ಬೆಂಗಳೂರಿನಿಂದ ತವರೂರು ಗಾಡಗೋಳಿಗೆ ಆಗಮಿಸಿದ್ದರು. ಇದನ್ನೂ ಓದಿ: ಚಿತ್ರದುರ್ಗ| ಜಮೀನಿನ ಬದು ಬಳಿ ಬೆಂಕಿಯಿಟ್ಟ ವಿಚಾರಕ್ಕೆ ಗುಂಪು ಘರ್ಷಣೆ – ಮೂವರಿಗೆ ಗಾಯ

    ಘಟನೆಯ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದರು.

  • ಬಾಲಕನ ಮೇಲೆ ಬೀದಿ ನಾಯಿ ದಾಳಿ – ಹರಿದು ಹೋಯ್ತು ತುಟಿ

    ಬಾಲಕನ ಮೇಲೆ ಬೀದಿ ನಾಯಿ ದಾಳಿ – ಹರಿದು ಹೋಯ್ತು ತುಟಿ

    ಗದಗ: ಮನೆ‌ ಮುಂದೆ ಆಟವಾಡುತ್ತಿದ್ದ ಬಾಲಕನ (Boy) ಮೇಲೆ ಬೀದಿ ನಾಯಿ (Stray Dogs) ಮನಬಂದಂತೆ ದಾಳಿಮಾಡಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಮುಂಡರಗಿ (Mundargi) ಪಟ್ಟಣದ ವಾರ್ಡ್ ‌ನಂಬರ್ 20 ದರ್ಗಾ ಬಳಿ ನಡೆದಿದೆ.

    ಎರಡೂವರೆ ವರ್ಷದ ರುದ್ರೇಶ್ ದೊಡ್ಡಕಾಳೆಯ ತಲೆ, ಮುಖ, ತುಟಿ ಕಚ್ಚಿ ಗಾಯಗೊಳಿಸಿದೆ. ನಾಯಿ ಕಚ್ಚಿದ್ದರಿಂದ ತುಟಿ ಹರಿದುಹೋಗಿದೆ. ಹಲ್ಲು ಮುರಿತವಾಗಿದೆ. ಬಾಲಕನ ಚಿರಾಟ, ನರಳಾಟ ನೋಡಿದ ಮನೆಯವರು ಓಡಿಬಂದು ಬಿಡಿಸುವಷ್ಟರಲ್ಲಿ ಸಾಕಷ್ಟು ಗಾಯಗೊಳಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎಸ್‌ಪಿ ಬಿಜೆಪಿಯ ಬಿ ಟೀಂ – ಆದಿತ್ಯ ಠಾಕ್ರೆ ಆಕ್ರೋಶ

     

    ಈ ಬೀದಿ ನಾಯಿ ಹಾವಳಿಯಿಂದ ಸ್ಥಳಿಯರು ಬೇಸತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಸುಮಾರು ನಾಲ್ಕೈದು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.

    ಗಾಯಾಳು ಬಾಲಕನಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕೇಳಿ ರೊಚ್ಚಿಗೆದ್ದ ಜನರು ಬಾಲಕನ ಮೇಲೆ ದಾಳಿ ಮಾಡಿದ ನಾಯಿಯನ್ನು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದಾರೆ.

    ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿರುವ ಕುರಿತು ಮಾಧ್ಯಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಿಯ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈಗ ಇತರೇ ಬೀದಿ ನಾಯಿಗಳ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪುರಸಭೆ ಸಿಬ್ಬಂದಿ, ಸ್ಥಳಿಯರು ಒಟ್ಟಾಗಿ ಬಲೆಯ ಮೂಲಕ ಬೀದಿ ನಾಯಿ ಹಿಡಿಯುತ್ತಿದ್ದಾರೆ.

    ರವಿವಾರ ಮಧ್ಯಾಹ್ನದಿಂದ ನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದು, ಇಂದು ಸುಮಾರು ಹತ್ತಾರು ಬೀದಿ ಕಾಯಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

     

  • ಇಳಕಲ್‌ನಲ್ಲಿ 4 ವರ್ಷದ ಬಾಲಕನ ಮೇಲೆ ನಾಯಿ ದಾಳಿ

    ಇಳಕಲ್‌ನಲ್ಲಿ 4 ವರ್ಷದ ಬಾಲಕನ ಮೇಲೆ ನಾಯಿ ದಾಳಿ

    ಬಾಗಲಕೋಟೆ: ಇಳಕಲ್ ನಗರದಲ್ಲಿ (Ilkal City) ಬೀದಿ ನಾಯಿಗಳ (Street Dog) ಹಾವಳಿ ಮಿತಿ ಮೀರಿದ್ದು ನಾಲ್ಕು ವರ್ಷದ ಬಾಲಕ (Boy) ಮೇಲೆ ದಾಳಿ ಮಾಡಿದೆ.

    ವಿದ್ಯಾನಗರದಲ್ಲಿ ಮನೆ ಮುಂದೆ ಆಟವಾಡಲು ಬಂದ ಬಾಲಕನ ಮೇಲೆ ಎರಗಿದೆ. ಕಾಲು, ಹೊಟ್ಟೆ ಭಾಗಕ್ಕೆ ಕಚ್ಚಿದ್ದರಿಂದ ಬಾಲಕ ಕೆಳಗೆ ಬಿದ್ದು ಒದ್ದಾಡಿದ್ದಾನೆ. ಬಾಲಕನ ಮೇಲೆ ದಾಳಿ ಮಾಡಿ ಕಚ್ಚುತ್ತಿರುವ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

    ಬಾಲಕ ಮನೆ ಗೇಟ್ ದಾಟಿ ರಸ್ತೆಗೆ ಬರುತ್ತಿದ್ದಂತೆ ಬೀದಿಯಲ್ಲಿ ಮಲಗಿದ್ದ ಶ್ವಾನ ಒಮ್ಮೆಲೆ ಎರಗಿದೆ. ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಆತನ ಅಜ್ಜಿ ಬಂದು ನಾಯಿಯನ್ನು ಓಡಿಸಿದ್ದಾರೆ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸೇವಾ ಶುಲ್ಕ ಹೆಚ್ಚಳ ಆಸ್ಪತ್ರೆಗಳ ಅಭಿವೃದ್ಧಿಗೆ ಹೊರತು ಗ್ಯಾರಂಟಿಗಲ್ಲ: ದಿನೇಶ್ ಗುಂಡೂರಾವ್ ಸಮರ್ಥನೆ

    ಕೆಲ ದಿನಗಳ ಹಿಂದೆಯೂ ಇತರೆ ಮಕ್ಕಳ ಮೇಲೂ ನಡೆದ ಶ್ವಾನಗಳು ದಾಳಿ ಮಾಡಿತ್ತು. ಈ ವೇಳೆ ಇಳಕಲ್ ನಗರಸಭೆ ಕಾರ್ಯಾಚರಣೆ ನಡೆಸಿದ ಬಳಿಕ ಸ್ವಲ್ಪ ನಿಯಂತ್ರಣಕ್ಕೆ ಬಂದಿತ್ತು. ಈಗ ಮತ್ತೆ ಬೀದಿನಾಯಿಗಳ ಹಾವಳಿ ಆರಂಭವಾಗಿದೆ. ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

     

  • ಜಾಲಹಳ್ಳಿ ಏರ್ಫೋರ್ಸ್ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ –  ಮಹಿಳೆ ಸಾವು

    ಜಾಲಹಳ್ಳಿ ಏರ್ಫೋರ್ಸ್ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ – ಮಹಿಳೆ ಸಾವು

    ಬೆಂಗಳೂರು: ಬೀದಿ ನಾಯಿಗಳ (Stray Dogs Attack) ಅಟ್ಟಹಾಸಕ್ಕೆ ಮಹಿಳೆಯೊಬ್ಬರು ಬಲಿಯಾದ ಘಟನೆ ಜಾಲಹಳ್ಳಿ ಏರ್ಫೋರ್ಸ್ ಕ್ಯಾಂಪಸ್‌ನಲ್ಲಿ (Jalahalli Airforce  Campus) ಬುಧವಾರ ನಡೆದಿದೆ.

    ಸುಮಾರು 60 ವರ್ಷದ ಮಹಿಳೆ (Woman) ಕ್ಯಾಂಪಸ್‌ನಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭ ಏಳೆಂಟು ಬೀದಿ ನಾಯಿಗಳು ಅವರ ಮೇಲೆ ಎರಗಿ ದಾಳಿ ನಡೆಸಿವೆ. ಘಟನೆಯ ಪರಿಣಾಮ ಮಹಿಳೆಯ ತಲೆ ಹಿಂಭಾಗ, ಮುಖ, ಕೈ ಹಾಗೂ ಕತ್ತಿನ ಭಾಗ ಛಿದ್ರ ಛಿದ್ರಗೊಂಡಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್‌ ವಿಶೇಷ ಆತಿಥ್ಯಕ್ಕೆ ಪ್ರಭಾವಿ ಸಚಿವರ ಆದೇಶ?

    ಮೃತ ಮಹಿಳೆಯ ಅಳಿಯ ಏರ್ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಳಿಯ-ಮಗಳನ್ನ ಭೇಟಿಯಾಗಲು ಮಹಿಳೆ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು. ಬುಧವಾರ ಬೆಳಗ್ಗೆ ವಾಕ್ ಮಾಡುವಾಗ ಈ ಘಟನೆ ನಡೆದಿದೆ. ಮಹಿಳೆ ಮೃತದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಹಿಂದೆಯೂ ಇದೇ ಕ್ಯಾಂಪಸ್‌ನಲ್ಲಿ ನಾಲ್ಕೈದು ಜನರ ಮೇಲೆ ದಾಳಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೆಚ್ಚಾದ ಮಂಕಿಪಾಕ್ಸ್ – ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶ