Tag: ಬೀದಿಬದಿ ವ್ಯಾಪಾರ

  • ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಬೆಂಗಳೂರು: ಕಳೆದ ಒಂದು ವಾರದಿಂದ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಬಿಸಿ ಈಗ ಮಲ್ಲೇಶ್ವರಂ ಮಾರ್ಕೆಟ್‌ಗೂ (Malleshwaram Market) ತಟ್ಟಿದ್ದು, ಬೀದಿಬದಿ ವ್ಯಾಪಾರಿಗಳ (Street Vendors) ಗೋಳು ಹೇಳತೀರದಂತಿದೆ.

    ಬೆಂಗಳೂರಿನಲ್ಲಿ (Bengaluru) ಕಳೆದ ಒಂದು ವಾರದಿಂದ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮಲ್ಲೇಶ್ವರಂ ಮಾರ್ಕೆಟ್‌ಗೂ ಕಾಲಿಟ್ಟಿದೆ. ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ಅಂಗಡಿಗಳನ್ನು ಎತ್ತಿಸಲಾಗಿದ್ದು, ವ್ಯಾಪಾರಿಗಳು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ – ಬಿಲ್ ಕಟ್ಟೋಕೆ ಹೋದ್ರೆ ಅಕೌಂಟ್‌ನಲ್ಲಿದ್ದ ಹಣ ಮಾಯ

    ನಗರದ ಬೇರೆ ಬೇರೆ ಕಡೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಆರಂಭಿಸಿರುವ ಬಿಬಿಎಂಪಿ ಬುಧವಾರ ಸಂಜೆ ದಿಢೀರ್ ಅಂತಾ ಮಲ್ಲೇಶ್ವರಂ 8ನೇ ಕ್ರಾಸ್‌ನ ಮಾರ್ಕೆಟ್‌ನಲ್ಲೂ ಕಾರ್ಯಚರಣೆ ಆರಂಭಿಸಿತ್ತು. ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ಮತ್ತು ಮಾರ್ಷಲ್‌ಗಳ ಸಹಾಯದಿಂದ ತೆರವು ಮಾಡಲಾಯಿತು. ಆರಂಭದಲ್ಲಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಆದರೆ ಪೊಲೀಸರು ದೊಡ್ಡ ಮಟ್ಟದ ವಿರೋಧಕ್ಕೆ ಆಸ್ಪದ ನೀಡದೆ ಸಂಪೂರ್ಣ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ವ್ಯಾಪಾರಿಗಳು ಕೂಡ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್

    ಈ ಮಧ್ಯೆ ವ್ಯಾಪಾರಿಗಳ ತೆರವು ವಿಚಾರ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಜಿಎಸ್‌ಟಿ ವ್ಯಾಪ್ತಿಗೆ ಬರುವ ವಸ್ತುಗಳನ್ನು ಫುಟ್‌ಪಾತ್‌ನಲ್ಲಿ ಮಾರುತ್ತಿದ್ದಾರೆ. ತಾವು ಬೀದಿಬದಿ ವ್ಯಾಪಾರಿ ಅಂತಾ ಗುರುತಿನ ಚೀಟಿ ಇದ್ದರೆ ವ್ಯಾಪಾರ ಮಾಡಬಹುದು. ರಸ್ತೆಯಿಂದ 10 ಮೀಟರ್ ದೂರದಲ್ಲಿ ಪಾದಚಾರಿಗಳಿಗೆ ತೊಂದರೆ ಆಗದಂತೆ ಮಾಡಬಹುದು ಎಂದಿದ್ದಾರೆ. ಆದರೆ, ಈ ಮಧ್ಯೆ ಕಾರ್ಡ್ ಇರುವ ಭಾಗಗಳಲ್ಲೂ ತೆರವು ಕಾರ್ಯ ನಡೆಯುತ್ತಿದ್ದು, ಬಿಬಿಎಂಪಿ ಕಮಿಷನರ್ ಹುಸಿ ಭರವಸೆ ನೀಡುತ್ತಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆ – 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ಮಲ್ಲೇಶ್ವರಂ, ಜಯನಗರ (Jayanagar), ಸೇರಿ ಹಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸುತ್ತಿರುವುದನ್ನು ಖಂಡಿಸಿ ಇಂದು ಬೀದಿಬದಿ ವ್ಯಾಪಾರಿಗಳ ಸಂಘ ಪ್ರತಿಭಟನೆ ನಡೆಸುತ್ತಿದೆ. ಬೆಳಗ್ಗೆ 11 ಘಂಟೆಗೆ ಜಯನಗರ 4 ಬ್ಲಾಕ್‌ನಲ್ಲಿ ಬಿಡಿಎ ಮಾರ್ಕೆಟ್ ಕಾಂಪ್ಲೆಕ್ಸ್ ಹತ್ತಿರ ಬಿಬಿಎಂಪಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಒಟ್ಟಾರೆ ಬಿಬಿಎಂಪಿ ನಿರ್ಧಾರ ಬೀದಿಬದಿಯಲ್ಲಿ ಜೀವನ ಮಾಡುತ್ತಿದ್ದ ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಿರುವುದಂತು ಸತ್ಯ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ

  • ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ:  ಗುಜರಾತ್‌ ಸಿಎಂ ಸಮರ್ಥನೆ

    ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ

    – ಬಿಜೆಪಿ ಸರ್ಕಾರಕ್ಕೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ಅಸಮಾಧಾನ ಇಲ್ಲ

    ಗಾಂಧಿನಗರ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧವಿದೆ. ಆದರೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಬಿಜೆಪಿ ಸರ್ಕಾರಕ್ಕೆ ಅಸಮಧಾನವಾಗಲೀ, ತೊಂದರೆಯಾಗಲೀ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

    ಆನಂದ್ ಜಿಲ್ಲೆಯ ಬಂಧಾನಿ ಗ್ರಾಮದಲ್ಲಿ ಬಿಜೆಪಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಒಂದಷ್ಟು ಜನರು ಸಸ್ಯಾಹಾರ ತಿನ್ನುತ್ತಾರೆ. ಇನ್ನೊಂದಷ್ಟು ಮಂದಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಆದರೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಬಿಜೆಪಿ ಸರ್ಕಾರಕ್ಕೆ ಅಸಮಧಾನವಾಗಲೀ, ತೊಂದರೆಯಾಗಲೀ ಇಲ್ಲ. ಆದರೆ ಕೆಲವು ಸ್ಥಳಗಳಲ್ಲಿ ಇರುವ ಆಹಾರ ಮಾರಾಟ ಅಂಗಡಿ, ಕೈಗಾಡಿಗಳನ್ನು ತೆಗೆಯಬೇಕೆಂದು ಬೇಡಿಕೆ ಇದೆ. ಹೀಗಾಗಿ ಈ ಆದೇಶ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.

    ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ಅನೇಕರು ಸ್ವಚ್ಛತೆ ನಿರ್ವಹಣೆ ಮಾಡದಿರುವುದು ನಮಗೆ ಆತಂಕ ತಂದಿದೆ. ವಾಹನ ಮತ್ತು ಜನರ ಸಂಚಾರಕ್ಕೆ ಅನಾನೂಕೂಲ ಮಾಡುವ ಕೈಗಾಡಿಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    ಬಿಜೆಪಿ ಅಧಿಕಾರದಲ್ಲಿರುವ ಅಹ್ಮದಾಬಾದ್ ನಗರಾಡಳಿತ ಹೀಗೊಂದು ರೂಲ್ಸ್ ಮಾಡಿದೆ. ರಸ್ತೆ ಬದಿಯಲ್ಲಿ ಮತ್ತು ಶಾಲೆ, ಧಾರ್ಮಿಕ ಸ್ಥಳಗಳಿಂದ 100 ಮೀಟರ್ ಅಂತರದಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಅದನ್ನು ಈ ಹೇಳಿಕೆಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಬರೀ ಅಹ್ಮದಾಬಾದ್ ಅಷ್ಟೇ ಅಲ್ಲ, ವಡೋದರ, ರಾಜಕೋಟ್, ಭಾವ್‍ನಗರಗಳಲ್ಲೂ ಸ್ಥಳೀಯ ರಾಜಕೀಯ ಮುಖಂಡರು ಇದೇ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್