Tag: ಬೀಟೆ ಮರ

  • ತೋಟದಲ್ಲಿದ್ದ ಬೀಟೆ ಮರ ಕಳವು – ಮೂವರ ಬಂಧನ

    ತೋಟದಲ್ಲಿದ್ದ ಬೀಟೆ ಮರ ಕಳವು – ಮೂವರ ಬಂಧನ

    ಮಡಿಕೇರಿ: ಕಳೆದ ವರ್ಷ ವ್ಯಕ್ತಿಯೊಬ್ಬರ ತೋಟದಲ್ಲಿದ್ದ ಬೀಟೆ ಮರವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಡಿಕೇರಿಯ ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ.ಬೋಪಯ್ಯ ಎಂಬುವರು ತಮ್ಮ ತೋಟದಲ್ಲಿದ್ದ 80 ಅಡಿ ಉದ್ದದ 5 ಅಡಿ ದಪ್ಪದ ಬೀಟೆ ಮರ ಕಳವಾಗಿದೆ ಎಂದು 2020 ನವೆಂಬರ್ ತಿಂಗಳಿನಲ್ಲಿ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಾಲ್ಲೂರು-ತ್ತಾಗತ್ತೂರು ಗ್ರಾಮದ ವ್ಯಾಪಾರಿ ಇಬ್ರಾಹಿಂ(27), ಸಿದ್ದಾಪುರದ ವ್ಯಾಪಾರಿ ಉಮ್ಮರ್ ಎಂ.ಕೆ(33) ಹಾಗೂ ಮೈಸೂರು ನಗರದ ಚಾಲಕ ವೃತ್ತಿಯ ವಾಸಿಂ ಅಕ್ರಂ(25) ಎಂಬವರನ್ನು ಕೊಡಗು ಗ್ರಾಮಾಂತರ ಪೊಲೀಸರು ಬಂಧಿಸಿ 1.50 ಲಕ್ಷ ರೂ. ಮೌಲ್ಯದ ಬೀಟೆ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನ ಎಸ್‍ಪಿ ಖಜಾನೆಯಿಂದ 16.96 ಲಕ್ಷ ಕಳ್ಳತನ- ಪೊಲೀಸರಿಂದಲೇ ದರೋಡೆ?

    ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ನಿರ್ದೇಶನದಂತೆ ಉಪ ವಿಭಾಗದ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಶೈಲೇಂದ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ಮಾಡಲಾಯಿತು. ಮಡಿಕೇರಿ ಗ್ರಾಮಾಂತರ ಠಾಣಾ ನಿರೀಕ್ಷಕ ರವಿಕುಮಾರ್ ಕೆ.ಜೆ, ಸಿಬ್ಬಂದಿಗಳಾದ ಮಹೇಶ್ ಎಂ.ಕೆ. ದಿನೇಶ್, ಡಿಸಿಐಬಿ ಘಟಕದ ಯೋಗೇಶ್, ನಿರಂಜನ್, ಅನಿಲ್ ಕುಮಾರ್, ಶರತ್ ರೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  • ಅಕ್ರಮವಾಗಿ ಸಾಗಿಸ್ತಿದ್ದ ಬೀಟೆ ಮರ, ವಾಹನ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

    ಅಕ್ರಮವಾಗಿ ಸಾಗಿಸ್ತಿದ್ದ ಬೀಟೆ ಮರ, ವಾಹನ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಿಂದ ಕುಶಾಲನಗರ ಮಾರ್ಗವಾಗಿ ಗೂಡ್ಸ್ ಜೀಪಿನಲ್ಲಿ ಅಕ್ರಮವಾಗಿ ಬೀಟೆ ನಾಟಾಗಳನ್ನು ಸಾಗಿಸುತ್ತಿರುವ ವಾಹನ ಹಾಗೂ ಮರದ ನಾಟಾಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಸಿದ್ದಾಪುರ ಭಾಗದಿಂದ ಗೂಡ್ಸ್ ಜೀಪಿನಲ್ಲಿ (ಕೆಎ 18 ಬಿ 9888) ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ತುಂಬಿಸಿಕೊಂಡು ಕುಶಾಲನಗರದತ್ತ ಬೆಳಗ್ಗಿನ ಜಾವ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಬಗ್ಗೆ ಖಚಿತ ಸುಳಿವಿನ ಮೇರೆಗೆ ಕುಶಾಲನಗರ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಸಿಬ್ಬಂದಿ ವಾಹನವನ್ನು ಹಿಂಬಾಲಿಸಿಕೊಂಡು ಬೆನ್ನಟ್ಟಿ ಸೆರೆಹಿಡಿಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ನಂಜರಾಯಪಟ್ಟಣ ಗ್ರಾಮದ ದುಬಾರೆ ಬಳಿ ಜೀಪು ಚಾಲಕ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ದುಬಾರೆ ಗದ್ದೆಯಲ್ಲಿ ನಿಲ್ಲಿಸಿ ಆರೋಪಿ ಪರಾರಿಯಾಗಿದ್ದಾನೆ.

    ಅರಣ್ಯ ಸಿಬ್ಬಂದಿ ಜೀಪು ಹಾಗೂ 1.50 ಲಕ್ಷ ಮೌಲ್ಯದ ಮರ ಸೇರಿದಂತೆ ಒಟ್ಟು ರೂ.6 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.