Tag: ಬಿ.ಜೆ.ಪುಟ್ಟಸ್ವಾಮಿ

  • ಮೇ 6ರಂದು ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ ಸನ್ಯಾಸ ದೀಕ್ಷೆ ಸ್ವೀಕಾರ

    ಮೇ 6ರಂದು ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ ಸನ್ಯಾಸ ದೀಕ್ಷೆ ಸ್ವೀಕಾರ

    ಬೆಂಗಳೂರು: 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತಿದ್ದೇನೆ. ಲೌಕಿಕ ಜೀವನದಿಂದ ಆಧ್ಯಾತ್ಮಿಕ ಜೀವನದತ್ತ ಹೆಜ್ಜೆಯನ್ನಿಡುತ್ತಿದ್ದೇನೆ. ಇದೇ ತಿಂಗಳ ಮೇ 6ರಂದು ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಶ್ರೀ ಶ್ರೀ ಶ್ರೀ ಜಯೇಂದ್ರ ತೀರ್ಥ ಪುರಿ ಮಹಾಸ್ವಾಮಿಜಿಯವರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲಿದ್ದೇನೆ ಎಂದು ಮಾಜಿ ಸಚಿವ ಹಾಗೂ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.

    ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30ರಂದು ರಾಜೀನಾಮೆ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ಆತ್ಮತೃಪ್ತಿಯಲ್ಲಿ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ತಿಳಿಸಿದರು.

    ನನ್ನ ಸಮುದಾಯಕ್ಕೆ ಶಾಶ್ವತವಾದ ಸಂಸ್ಥೆ ಕಟ್ಟಬೇಕು ಎಂದಾಗ ನಾನು ರಾಜಕೀಯ ಕಾರ್ಯದರ್ಶೀಯಾಗಿದ್ದಾಗ ಬಿ.ಎಸ್ ಯಡಿಯೂರಪ್ಪನವರು ಎಂಟು ಎಕರೆ ಜಮೀನು ಮತ್ತು ಐದು ಕೋಟಿ ಅನುದಾನ ಕೊಟ್ಟಿದ್ದರು. ಅದನ್ನ ಬಳಸಿಕೊಂಡು ನನ್ನ ಕೈಯಲ್ಲಾದ ಹಣ ಮತ್ತು ಜನರಿಂದ ಅಲ್ಪಸ್ವಲ್ಪ ಹಣ ಪಡೆದು ಒಂದು ಗುರು ಪೀಠವನ್ನು ಕಟ್ಟಿದ್ದೇನೆ. ಹಾಸ್ಟೆಲ್, ಸಮುದಾಯ ಭವನವನ್ನು ಕಟ್ಟಿದ್ದೇನೆ. ನಮ್ಮ ಜನಾಂಗಕ್ಕೂ ಒಂದು ಗುರುಪೀಠ ಮಾಡಬೇಕು ಎಂದುಕೊಂಡು ಮೂವರು ಯುವಕರನ್ನ ಸಿದ್ದಗಂಗಾ ಮಠ, ಮುರುಗ ರಾಜೇಂದ್ರ ಮಠ, ರಾಜರಾಜೇಶ್ವರಿ ಮಠದಲ್ಲಿ ನಾನು ಸೇರಿಸಿದ್ದೆ. ಆದರೆ ಕಾರಣಾಂತರಗಳಿಂದ ಅವರು ಹೊರಟು ಹೋದರು. ಕೊನೆಯದಾಗಿ ರಾಜರಾಜೇಶ್ವರಿ ಮಠದಲ್ಲಿ ಜಯತೀರ್ಥ ಸ್ವಾಮೀಜಿಗಳು ಯಾಗ ಮಾಡುತ್ತಿದ್ದಾಗ ನನ್ನನ್ನು ಕರೆದು ಪೀಠಾಧಿಪತಿ ಆಗಬೇಕಿದ್ದರೇ ಬದ್ಧತೆ ಇರಬೇಕು. ಹೀಗಾಗಿ ನೀವೇ ಮೊದಲ ಪೀಠಾಧ್ಯಕ್ಷರಾಗಿ ಆನಂತರ ಯೋಗ್ಯ ಶಿಷ್ಯರು ಬಂದಾಗ ಅವರನ್ನ ಪೀಠಾಧಿಪತಿ ಮಾಡಿ ಎಂದು ಆದೇಶಿಸಿದರು. ಅದರಂತೆ ನಾನೇ ಪೀಠಾಧ್ಯಕ್ಷನಾಗಲಿದ್ದೇನೆ ಎಂದು ಅವರು ಹೇಳಿದ್ರು.

    ನಾನು ಓದಿರುವ ಪ್ರಕಾರ, ಸ್ವಾಮೀಜಿಗಳಲ್ಲಿ ಮಾಂತ್ರಿಕ ಸ್ವಾಮೀಜಿ, ವೈದಿಕ ಸ್ವಾಮೀಜಿ, ಸ್ವಾರ್ಥ ಸ್ವಾಮೀಜಿ, ಆಶೀರ್ವಾದ ಸ್ವಾಮೀಜಿಗಳಿರುತ್ತಾರೆ. ಕೊನೆದಾಗಿ ಸಮಾಜ ಸುಧಾರಣಾ ಸ್ವಾಮೀಜಿಗಳು ಇರುತ್ತಾರೆ. ನಾನು ಸಮಾಜ ಸುಧಾರಣಾ ಸ್ವಾಮೀಜಿಯಾಗಿ ದೀಕ್ಷೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಪುಟ್ಟಸ್ವಾಮಿ ವಿವರಿಸಿದರು. ನಾನು ಸಚಿವ ಸಂಪುಟ ದರ್ಜೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೆ ನನಗೆ ಅಧಿಕಾರಕ್ಕಿಂತ ಹೆಚ್ಚಾಗಿ ನಮ್ಮ ಜನಾಂಗದ ಭವಿಷ್ಯ ಮುಖ್ಯ. ಹೀಗಾಗಿ ನಮ್ಮ ಜನಾಂಗದ ಭವಿಷ್ಯಕ್ಕಾಗಿ ನನ್ನ ಜೀವಾವಧಿಯಲ್ಲಿ ಗುರುಪೀಠವನ್ನು ಸ್ಥಾಪನೆ ಮಾಡಿ ಜನರ ಅಭಿಪ್ರಾಯ ಪಡೆದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ರು.

    ನಾನು ಕಟ್ಟಿರುವ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಕೆ ವಿದ್ಯೆ ದಾಸೋಹ ಮತ್ತು ಅನ್ನ ದಾಸೋಹ ಮಾಡುತ್ತಾ ನನ್ನ ಜೀವನ ಕಳಿಯಬೇಕು ಎಂಬ ತೀರ್ಮಾಕ್ಕೆ ಬಂದಿದ್ದೇನೆ. ನಾನು ಹಿಂದುಳಿದ ವರ್ಗಗಳ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿರುವವನು. ನಾನು ಹಿಂದುಳಿದ ಸಂಘಟನೆಯಲ್ಲಿ ಹೋರಾಟ ಮಾಡುತ್ತಿದ್ದೆ. ಬಿ.ಎಸ್.ಯಡಿಯೂರಪ್ಪನವರು ಎಂಎಲ್ ಸಿ, ಮಂತ್ರಿಯನ್ನಾಗಿ ಮಾಡಿದರು. ಇಡೀ ದೇಶದಲ್ಲಿ ಸಹಕಾರ ವಲಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಸ್ವಲ್ಪ ಸಮಯದಲ್ಲಿ ಎರಡು ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದು ಸಾರ್ಥಕವಾಗಿದೆ ಎಂದರು.

    ಮೇ 4ರಂದು ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಕೈಲಾಸ ಮಠಕ್ಕೆ ಹೋಗುತ್ತಿದ್ದೇನೆ. ಮೇ 5ರಂದು ಹೋಮ ಇದ್ದು, 6ರಂದು ನನಗೆ ದೀಕ್ಷೆಯನ್ನ ಕೊಡುತ್ತಿದ್ದಾರೆ. ದೀಕ್ಷೆ ಕೊಟ್ಟ ಬಳಿಕ ನಾನು ಮೇ 8ರಂದು ನಮ್ಮ ಮಠಕ್ಕೆ ತೆರಳುತ್ತೇನೆ. ಮೇ 15ರಂದು ನನಗೆ ಪಟ್ಟಾಭಿಷೇಕವನ್ನು ಕೈಲಾಸ ಮಠದ ಶ್ರೀ ಶ್ರೀ ಶ್ರೀ ಜಯತೀರ್ಥಸ್ವಾಮೀಜಿಗಳು ನೆರವೇರಿಸಿಕೊಡಲಿದ್ದಾರೆ ಎಂದು ಹೆಳಿದರು.

    ಮೇ 15 ರಂದು ಬೆಂಗಳೂರಿನ ಮಾದನಾಯ್ಕನಹಳ್ಳಿಯಲ್ಲಿರುವ ಶ್ರೀ ಕ್ಷೇ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಿ ಅಲಂಕೃತಗೊಳ್ಳಿಲಿದ್ದಾರೆ. ಈ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಎಸ್ ಎಂ ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಆದ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಸಚಿವರು ಭಾಗವಹಿಸಲಿದ್ದಾರೆ. ಮುಖ್ಯವಾಗಿ 20 ಮಠಾಧೀಕ್ಷರು ದಿವ್ಯ ಸಾನಿಧ್ಯವನ್ನ ವಹಿಸಿಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್, ಶ್ರೀ ಕ್ಷೇ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಟ್ರಸ್ಟ್ ನ ಸದಸ್ಯರು ಭಾಗವಹಿಸಿದ್ದರು.

  • ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ

    ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ

    ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತರಾದ ಬಿಜೆಪಿ ಮಾಜಿ ಸಚಿವ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಮಠಧೀಶರಾಗುತ್ತಿದ್ದಾರೆ.

    ಹೌದು. ಪುಟ್ಟಸ್ವಾಮಿ ಅವರು ಖಾದಿ ತೊರೆದು ಕಾವಿ ತೊಡಲಿದ್ದು, ಇನ್ನು ಮುಂದೆ ಪೂರ್ಣಾನಂದ ಪುರಿ ಸ್ವಾಮೀಜಿಯಾಗಲಿದ್ದಾರೆ. ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿಯ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಗಳಾಗಲಿದ್ದಾರೆ. ಮೇ 6 ರಂದು ಸನ್ಯಾಸತ್ವದ ದೀಕ್ಷೆ ಪಡೆಯಲಿದ್ದು, ಮೇ 15 ರಂದು ಪೀಠಾಧಿಪತಿಯ ಪಟ್ಟಾಭಿಷೇಕ ನೆರವೇರಲಿದೆ.

    ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಿದ್ದಾರೆ. ಇವರನ್ನು ಪುಟ್ಟಸ್ವಾಮಿ ಅವರೇ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲೆ ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದು, 82 ವರ್ಷ ವಯಸ್ಸಿನಲ್ಲಿ ಸ್ವಾಮೀಜಿಯಾಗುತ್ತಿದ್ದಾರೆ. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

    ದಿಢೀರ್ ತೀರ್ಮಾನವಲ್ಲ:
    ಮಂಗಳವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಪುಟ್ಟಸ್ವಾಮಿ ಅವರು, ಇದು ಧೀಡಿರ್ ಎಂದು ಕೈಗೊಂಡ ತೀರ್ಮಾನವಲ್ಲ. ಜೀವಮಾನದಲ್ಲಿ ಜ್ಞಾನ ಬಂದ ಮೇಲೆ ಗಾಣಿಗ ಸಮಾಜಕ್ಕೆ ಏನಾದರೂ ಮಾಡಬೇಕು ಮತ್ತು ಶಾಶ್ವತವಾದ ಸಂಸ್ಥೆಯೊಂದನ್ನು ಕಟ್ಟಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. 1972ರಲ್ಲಿ ಗಾಣಿಗ ಸಮುದಾಯದ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘ ಸ್ಥಾಪಿಸಿ ಅಧ್ಯಕ್ಷನಾಗಿದ್ದೆ ಎಂದು ಹೇಳಿದರು.

    ಎಲ್ಲರಲ್ಲಿಯೂ ಸಾಮರಸ್ಯ ಮೂಡಿಸಿದ್ದೆ. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ರಾಜಕೀಯ ಕಾರ್ಯದರ್ಶಿಯಾಗಿದ್ದ ವೇಳೆ ಅವರ ಬಳಿ ಆದಾಯ ಬರುವಂತಹದ್ದು ಏನನ್ನೂ ಪಡೆದಿಲ್ಲ. ಯಾವುದಕ್ಕೂ ಆಸೆ ಪಟ್ಟಿಲ್ಲ. ಜನಾಂಗಕ್ಕೆ ಸಂಸ್ಥೆಯೊಂದನ್ನು ಕಟ್ಟಲು ಜಮೀನು ನೀಡುವಂತೆ ಕೇಳಿದ್ದೆ ಎಂದರು.

  • ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

    ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

    ಬೆಂಗಳೂರು: ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮುದಿ ಎತ್ತು ಎಂದು ಹೇಳಿದ್ದ ಬಿಜೆಪಿಯ ನಾಯಕರ ಹೇಳಿಕೆಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಟಿ.ಬಿ.ಜಯಚಂದ್ರ ಅವರಿಗೆ ವಯಸ್ಸಾಗಿದೆ ಅಂದ್ರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ ಎಂದು ಪ್ರಶ್ನೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ನಮ್ಮ ಪಕ್ಷದ ಅಭ್ಯರ್ಥಿ ಜಯಚಂದ್ರ ಅವರನ್ನು ಬಿಜೆಪಿ ನಾಯಕರು ಮುದಿ ಎತ್ತು ಎಂದು ಹೀಗಳೆದಿದ್ದಾರೆ. ಹಾಗಾದರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ?. ಚುನಾವಣೆಯನ್ನು ಸಾಧನೆ ಮತ್ತು ಸಿದ್ಧಾಂತದ ಮೂಲಕ ಎದುರಿಸಲಾಗದವರು ಮಾತ್ರ ಸೋಲಿನ ಭೀತಿಯಿಂದ ಈ ರೀತಿ ಚಾರಿತ್ರ್ಯಹರಣ, ಗೂಂಡಾಗಿರಿ, ಹಣ ಹಂಚುವುದು ಮೊದಲಾದ ಅಡ್ಡದಾರಿ ಹಿಡಿಯುವುದು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

    ಮಂಗಳವಾರ ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿದ್ದರಲ್ಲದೆ, ನಾನು ವಾಪಾಸು ತೆರಳುವಾಗ ವಾಹನ ಅಡ್ಡಗಟ್ಟಿ ಬೆದರಿಸುವ ಪ್ರಯತ್ನ ಮಾಡಿದ್ದರು. ಇದು ಬಿಜೆಪಿಯವರ ರಾಜಕಾರಣದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ ಎಂದು ಆರೋಪಿಸಿದ್ದಾರೆ.

    ಆರ್.ಆರ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದ ಮುನಿರತ್ನ ಅವರೆ ಅಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಮೂಲ ಕಾರಣ. ಸೋಲಿನ ಭಯದಿಂದ ಜಿ.ಕೆ ವೆಂಕಟೇಶ್ ಅಂಥವರನ್ನು ಮುಂದೆ ಬಿಟ್ಟು ಮುನಿರತ್ನ ಅವರೆ ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ. ಕೆಲವರು ಅಭಿಮಾನದಿಂದ ಇವ್ರೆ ನಮ್ಮ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ, ಅವರಿಗೆಲ್ಲ ಮಾತಾಡ್ಬೇಡಿ ಅಂತ ಹೇಳೋಕಾಗುತ್ತಾ ಎಂದು ತಮ್ಮ ಆಪ್ತರ ಹೇಳಿಕೆಯನ್ನ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡರು.

    ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದೇನು?: ಯುವ ಎತ್ತಿಗೆ ಶಿರಾ ಜನತೆ ಮತ ನೀಡಿದ್ರೆ ಪ್ರಯೋಜನೆ. ಏಳು ಬಾರಿ ಗೆದ್ದಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಯುವಕರು. ಹಾಗಾಗಿ ಯುವ ಎತ್ತಿಗೆ ಮತ ನೀಡಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷದಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಯ್ತು. ಸರ್ಕಾರ ಬಿದ್ದು ಒಂದು ವರ್ಷ ಕಳೆದರೂ ಇಬ್ಬರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದರು.

  • ಶಿರಾ ‘ಕೈ’ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು: ಬಿ.ಜೆ.ಪುಟ್ಟಸ್ವಾಮಿ

    ಶಿರಾ ‘ಕೈ’ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು: ಬಿ.ಜೆ.ಪುಟ್ಟಸ್ವಾಮಿ

    – ಬಿಜೆಪಿಯ ರಾಜೇಶ್ ಗೌಡ ಯುವ ಎತ್ತು
    – ಶಿರಾದಲ್ಲಿ ಮರಿ ರಾಜಾಹುಲಿ ಪ್ರಚಾರ

    ತುಮಕೂರು: ಶಿರಾದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿ ರಾಜೇಶ್ ಗೌಡ ಯುವ ಎತ್ತು ಎಂದು ರಾಜ್ಯ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಜೆ.ಪುಟ್ಟಸ್ವಾಮಿ, ಯುವ ಎತ್ತಿಗೆ ಶಿರಾ ಜನತೆ ಮತ ನೀಡಿದ್ರೆ ಪ್ರಯೋಜನೆ. ಏಳು ಬಾರಿ ಗೆದ್ದಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಯುವಕರು. ಹಾಗಾಗಿ ಯುವ ಎತ್ತಿಗೆ ಮತ ನೀಡಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷದಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಯ್ತು. ಸರ್ಕಾರ ಬಿದ್ದು ಒಂದು ವರ್ಷ ಕಳೆದರೂ ಇಬ್ಬರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ವೇಳೆ ದೇಶಕ್ಕೆ ಪ್ರಧಾನಿ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ ಇರದಿದ್ರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಸಿಎಂ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯತೆ ಮತ್ತು ಆರ್ಥಿಕ ನೆರವು ನೀಡಿದ್ದಾರೆ. ರಾಜಾಹುಲಿ ಯಡಿಯೂರಪ್ಪನವರ ಪುತ್ರ ಮರಿ ರಾಜಾಹುಲಿ ವಿಜಯೇಂದ್ರ ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಅಭ್ಯರ್ಥಿಗೆ ಗೆದ್ದರೆ ಈ ಕ್ಷೇತ್ರ ಅಭಿವೃದ್ಧಿಯಾಗಲಿದ್ದು, ಬಿಜೆಪಿಗೆ ಮತ ನೀಡಿ ಎಂದು ಮತದಾರರ ಬಳಿ ಬಿ.ಜೆ.ಪುಟ್ಟಸ್ವಾಮಿ ಮನವಿ ಮಾಡಿಕೊಂಡರು.