Tag: ಬಿ. ಜಯಶ್ರೀ

  • ‘ಮಾರಿಗುಡ್ಡದ ಗಡ್ಡಧಾರಿಗಳಿ’ಗಾಗಿ ಹಾಡಿದ ಬಿ.ಜಯಶ್ರೀ

    ‘ಮಾರಿಗುಡ್ಡದ ಗಡ್ಡಧಾರಿಗಳಿ’ಗಾಗಿ ಹಾಡಿದ ಬಿ.ಜಯಶ್ರೀ

    ರಾಜೀವ್‌ ಚಂದ್ರಕಾಂತ್ ಈ ಹಿಂದೆ ನಾಗಾಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇದೆ. ಇದರಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆ ಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ’ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿ ಖತರ್‌ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

    ಒಂದು ವಿಶೇಷ ಸನ್ನಿವೇಶದಲ್ಲಿ ಬರುವ ’ಸಂಜೇಲಿ ಹೊಯ್ದಾವೋ ಮಂಜಿನ ಚಿತ್ತಾರ, ಗಾಟಿಯ ಏರಿಳಿದು ಹೋಯ್ತಾವೋ ನೇಸಾರ’ ಸಾಲಿನ ಗೀತೆಗೆ ನಟಿ, ಪದ್ಮಶ್ರೀ ಬಿ.ಜಯಶ್ರೀ ಹಾಡುವ ಗೀತೆಯನ್ನು ನಾದಬ್ರಹ್ಮ ಹಂಸಲೇಖಾ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನಡೆಸಲಾಯಿತು.  ಸಂಗೀತ ಕೆ.ಎಂ.ಇಂದ್ರ ಅವರದಾಗಿದೆ. ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ 1990ರಂದು ನಡೆಯುವ ಕಾಲ್ಪನಿಕ ಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿ ಏರುಪೇರು ಉಂಟಾಗುತ್ತದೆ. ಅದು ಏನೆಂಬುದನ್ನು ಕುತೂಹಲದ ಮೂಲಕ ತೋರಿಸಲಾಗುವುದು. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ತಾರಗಣದಲ್ಲಿ ಪ್ರವೀಣ್, ನಮ್ರತಾ, ಗಣೇಶ್‌ರಾವ್, ಅವಿನಾಶ್, ರಮೇಶ್‌ಭಟ್, ಬೆನಕನಂಜಪ್ಪ, ಪ್ರಶಾಂತ್‌ಸಿದ್ದಿ,ನಂಜುಂಡ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ವೀರೇಶ್, ಸಾಹಸ ಪಳನಿ-ಜಾಗ್ವಾರ್‌ಸಣ್ಣಪ್ಪ ಅವರದಾಗಿದೆ. ಕೆ.ಜಿ.ಎಫ್, ಕೋಲಾರ ಕಡೆಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

    ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

    ಹೊಸಬರ ತಂಡದ ಮೇಲೆ ಕನ್ನಡ ಪ್ರೇಕ್ಷಕರಲ್ಲಿರೋ ನಂಬಿಕೆ ಮತ್ತೊಮ್ಮೆ ನಿಜವಾಗಿದೆ. ಇದೀಗ ಬಿಡುಗಡೆಯಾಗಿರೋ ಚಿತ್ರಕಥಾ ಹೊಸಾ ತಂಡವೊಂದು ರೂಪಿಸಿರೋ ಚಿತ್ರ. ಆದರೆ ಆರಂಭ ಕಾಲದಿಂದಲೂ ಈ ಸಿನಿಮಾ ಪೋಸ್ಟರ್ ಮುಂತಾದ ಕ್ರಿಯೇಟಿವ್ ಅಂಶಗಳೊಂದಿಗೆ ಪ್ರೇಕ್ಷಕರನ್ನು ಆಕರ್ಶಿಸುತ್ತಲೇ ಸಾಗಿ ಬಂದಿತ್ತು. ಅದೇ ಬಿಸಿಯಲ್ಲಿ ಬಿಡುಗಡೆಯಾಗಿರೋ ಚಿತ್ರಕಥಾ ಕಡೇಯವರೆಗೂ ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಮೂಲಕ ಪ್ರೇಕ್ಷಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿದೆ.

    ಇದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರವೆಂದು ಬಿಂಬಿಸಲ್ಪಡುತ್ತಲೇ ಅದರಲ್ಲಿಯೂ ವಿಶೇಷವಾದುದೇನನ್ನೋ ಬಚ್ಚಿಟ್ಟುಕೊಂಡಿರುವಂಥಾ ಸೂಚನೆ ರವಾನಿಸುತ್ತಾ ಬಂದಿದ್ದ ಚಿತ್ರ. ಚಿತ್ರತಂಡ ಜಾಹೀರು ಮಾಡಿದ್ದ ಒಂದೊಂದು ಸಣ್ಣ ಸಣ್ಣ ಸುಳಿವುಗಳೂ ಸಹ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದವು. ಒಂದು ಸಶಕ್ತ ತಾರಾಗಣದೊಂದಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸತನದ ಸುಳಿವಿನೊಂದಿಗೆ ಸಾಗಿ ಬಂದಿದ್ದ ಚಿತ್ರಕಥಾದ ನವೀನ ಶೈಲಿಯ ಕಥೆ, ನಿರೂಪಣಾ ಶೈಲಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇಡೀ ಚಿತ್ರ ಮೂಡಿ ಬಂದಿರೋ ರೀತಿಯೇ ಅದಕ್ಕೆ ತಕ್ಕುದಾಗಿದೆ.

    ಇದು ಓರ್ವ ಕಲಾವಿದ ಮತ್ತು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಕಟ್ಟಿಕೊಂಡಿರೋ ಹುಡುಗನೊಬ್ಬನ ಸುತ್ತಾ ಸುತ್ತುವ ಕಥಾಹಂದರ ಹೊಂದಿರುವ ಚಿತ್ರ. ಇಲ್ಲಿ ಸುಜಿತ್ ರಾಥೋಡ್ ರಾಣಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಣಾ ಚಿತ್ರರಂಗದ ಬಗ್ಗೆ ಬಣ್ಣದ ಕನಸುಗಳನ್ನು ತುಂಬಿಕೊಂಡು ನಿರ್ದೇಶಕನಾಗೋ ಆಸೆಯಿಂದ ಜೀವಿಸೋ ಹುಡುಗ. ಆದರೆ ಈ ಹಾದಿಯಲ್ಲಿ ಎಲ್ಲ ಪ್ರಯತ್ನಗಳಾಚೆಗೂ ನಿರಾಸೆಗಳೇ ಆತನ ಕೈ ಹಿಡಿಯುತ್ತವೆ. ತಾನು ನಿರ್ದೇಶಕನಾಗಲು ಕಾಲ ಕೂಡಿ ಬಂದಿಲ್ಲವಲ್ಲಾ ಎಂಬ ಚಿಂತೆಯಲ್ಲಿರುವಾಗಲೇ ಪ್ರೀತಿಯ ಹುಡುಗಿಯೂ ಕೈಬಿಟ್ಟು ನಡೆದು ಹೋಗುತ್ತಾಳೆ. ಆ ಕ್ಷಣಗಳಲ್ಲಿ ರಾಣಾನನ್ನು ಇಡಿಯಾಗಿ ತಬ್ಬಿ ನಿಲ್ಲೋದು ಗಾಢವಾದ ಹತಾಶೆ ಮಾತ್ರ.

    ಇಂಥಾ ಸ್ಟೇಜಿನಲ್ಲಿರೋ ಹುಡುಗರಿಗೆ ಬಾರಿನ ಸ್ಟೆಪ್ಪುಗಳೇ ಮೊದಲನೆಯದಾಗಿ ಸ್ವಾಗತಿಸುತ್ತವೆ. ರಾಣಾ ಕೂಡಾ ಹತಾಶೆಯ ಮಡುವಿಗೆ ಬಿದ್ದು ಬಾರು ಸೇರಿಕೊಳ್ಳುತ್ತಾನೆ. ಇಂಥಾ ಘಳಿಗೆಯಲ್ಲಿಯೇ ಕಲಾವಿದನೊಬ್ಬ ಬಿಡಿಸಿದ ಚಿತ್ರ ಅಘೋರಿಯ ರೂಪದಲ್ಲಿ ಆತನನ್ನು ಕಾಡಲು ಶುರುವಿಡುತ್ತದೆ. ಇದು ಭ್ರಮೆಯಾ ವಾಸ್ತವವಾ ಎಂಬ ಸತ್ಯವನ್ನು ನಶೆಯಲ್ಲಿ ತಡಕಾಡುತ್ತಿರುವಾಗಲೇ ಸಾಕ್ಷಾತ್ತು ಅಘೋರಿಯೇ ರಾಣಾನೆದುರು ಪ್ರತ್ಯಕ್ಷವಾಗುತ್ತಾನೆ. ಕೊಲ್ಲಲೂ ಮುಂದಾಗುತ್ತಾನೆ. ನಂತರ ರಾಣಾ ಹೋದಲ್ಲಿ ಬಂದಲ್ಲಿ ಕೊಲ್ಲಲು ಹವಣಿಸೋ ಅಘೋರಿಯದ್ದೇ ಕಾಟ. ರಾಣಾನನ್ನು ಕಾಡುತ್ತಿರೋ ಅಘೋರಿಯ ಮೂಲ ಹುಡುಕುತ್ತಾ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಸುಧಾರಾಣಿ ಎಂಟ್ರಿ ಕೊಡುತ್ತಾರೆ. ಆ ನಂತರದ್ದು ನಿಜಕ್ಕೂ ರೋಚಕ ಜರ್ನಿ.

    ಹಾಗಾದರೆ ಈ ಅಘೋರಿಯ ಚಿತ್ರ ಬಿಡಿಸಿದ ಕಲಾವಿದನ್ಯಾರು, ಆ ಕಲಾವಿದನಿಗೂ ರಾಣಾಗೂ ಇರುವ ನಂಟ್ಯಾವುದು, ಯಾಕೆ ಆ ಅಘೋರಿ ನಾಯಕನ ಬೆಂಬಿದ್ದು ಕೊಲ್ಲಲು ಹವಣಿಸುತ್ತಾನೆಂಬ ಪ್ರಶ್ನೆಗಳಿಗೆ ಕ್ಲೈಮ್ಯಾಕ್ಸ್ ವರೆಗೂ ಕುತೂಹಲ ಬಿಗಿಯಾಗಿಟ್ಟುಕೊಳ್ಳುವ ಉತ್ತರವೊಂದು ಚಿತ್ರಕಥಾದಲ್ಲಿದೆ. ಮತ್ತದು ಮಜವಾದ ಅನುಭವಗಳನ್ನೇ ನೋಡುಗರೆಲ್ಲರಿಗೂ ಕಡೆಯವರೆಗೂ ಕಟ್ಟಿ ಕೊಡುತ್ತದೆ. ಆ ಅನುಭವ ಕೂಡಾ ಸಾಮಾನ್ಯ ಸೈಕಾಲಾಜಿಕಲ್ ಥ್ರಿಲ್ಲರ್ ಕಥನಗಳಿಗಿಂತ ಭಿನ್ನವಾಗಿದೆ ಎಂಬುದೇ ಚಿತ್ರಕಥಾ ಆಪ್ತವಾಗೋದರ ಹಿಂದಿರುವ ಅಸಲೀ ಗುಟ್ಟು.

    ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಮೊದಲ ಚಿತ್ರ. ಆದರೆ ಅವರು ಇಡೀ ಚಿತ್ರವನ್ನು ಪಳಗಿದ ನಿರ್ದೇಶಕನಂತೆ ನಿಭಾಯಿಸಿದ ರೀತಿ ಇಷ್ಟವಾಗುವಂತಿದೆ. ಇಲ್ಲಿ ಒಂದು ಹಂತದಲ್ಲಿ ಪಾತ್ರಗಳೇ ವಿಹ್ವಲಗೊಳ್ಳುತ್ತವೆ. ಗೊಂದಲಕ್ಕೆ ಬೀಳುತ್ತವೆ. ಚೂರೇ ಚೂರು ಆಚೀಚೆಯಾದರೂ ಅದು ಪ್ರೇಕ್ಷಕರಿಗೂ ದಾಟಿಕೊಳ್ಳುವ ಅಪಾಯವೂ ಇದ್ದೇ ಇತ್ತು. ಆದರೆ ಅದನ್ನೂ ಕೂಡಾ ಕುತೂಹಲವಾಗಿ ಮಾರ್ಪಾಟು ಮಾಡಿರೋದು ಯಶಸ್ವಿ ಬಾಲಾದಿತ್ಯರ ಟ್ಯಾಲೆಂಟಿಗೆ ಸಾಕ್ಷಿಯಂತಿದೆ. ಸುಧಾರಾಣಿ, ಬಿ. ಜಯಶ್ರೀ, ದಿಲೀಪ್ ರಾಜ್, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿಸಿದ್ದಾರೆ. ಸುಜಿತ್ ರಾಥೋಡ್ ಕೂಡಾ ಇದು ಮೊದಲ ಚಿತ್ರವೆಂಬುದನ್ನೇ ಮರೆಮಾಚುವಂಥಾ ಮಾಗಿದ ನಟನೆ ಕೊಟ್ಟಿದ್ದಾರೆ.

    ಅಂತೂ ಚಿತ್ರಕಥಾ ಪ್ರತೀ ಪ್ರೇಕ್ಷಕರಲ್ಲಿಯೂ ವಿಭಿನ್ನ ಅನುಭೂತಿಯೊಂದನ್ನು ಮೂಡಿಸಿಸುತ್ತಲೆ. ಖುದ್ದು ನೋಡುಗರೇ ಭ್ರಮ ಮತ್ತು ವಾಸ್ತವದ ನಡುವಿನ ತೊಳಲಾಟದಲ್ಲಿ ಅರೆಕ್ಷಣ ಕಂಗಾಲಾಗುವಂತೆ ಮಾಡುವಷ್ಟು ಸಶಕ್ತವಾಗಿ ಇಲ್ಲಿನ ದೃಶ್ಯಗಳು ಮೂಡಿ ಬಂದಿವೆ. ಈ ಸಿನಿಮಾವನ್ನು ನೋಡುವ ಮೂಲಕ ಅಂಥಾ ವಿಶಿಷ್ಟ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

    ರೇಟಿಂಗ್: 3.5/5

  • ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಕಡೇಯ ಕ್ಷಣಗಳಲ್ಲಿ ಈ ಸಿನಿಮಾ ಕುರಿತಾದ ಒಂದೊಂದೇ ಕುತೂಹಲಕರ ಅಂಶಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ಅದರಲ್ಲಿ ತಾರಾಗಣದ ಗುಟ್ಟುಗಳೂ ಸೇರಿಕೊಂಡಿವೆ. ಸುಧಾರಾಣಿ, ತಬಲಾ ನಾಣಿ, ದಿಲೀಪ್ ರಾಜ್, ಅನುಷಾ ರಾವ್ ಸೇರಿದಂತೆ ಅನೇಕರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ರಂಗಭೂಮಿ ನಟಿ ನಿರ್ವಹಿಸಿರೋ ಕೊರವಂಜಿ ಪಾತ್ರವಂತೂ ಬಹಳಷ್ಟು ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿದೆಯಂತೆ.

    ಸುಜಿತ್ ರಾಥೋಡ್ ಮುಖ್ಯ ಪಾತ್ರದಲ್ಲಿ ನಟಿಸಿರೋ ಈ ಚಿತ್ರವನ್ನು ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಆದರೆ ಇದುವರೆಗೂ ಬಂದಿರೋ ಈ ಜಾನರಿನ ಚಿತ್ರಗಳ ಸಾಲಿನಲ್ಲಿಯೇ ಇದನ್ನೂ ದಾಖಲಿಸುವಂತೆಲ್ಲ. ಯಾಕೆಂದರೆ ಇದು ಕಮರ್ಶಿಯಲ್ ಅಂಶಗಳೊಂದಿಗೆ ಪ್ರಯೋಗಾತ್ಮಕ ಪಟ್ಟುಗಳನ್ನು ಹೊಂದಿರೋ ಚಿತ್ರ.

    ಕಲಾವಿದನೊಬ್ಬ ಬಿಡಿದಿಸಿ ಅಪರಿಚಿತನ ಚಿತ್ರವೇ ಅಘೋರಿಯ ರೂಪದಲ್ಲಿ ಕಾಡೋ ಈ ಸಿನಿಮಾ ಕಥೆ ನಾನಾ ದಿಕ್ಕುಗಳಲ್ಲಿ ಚಲಿಸುತ್ತೆ. ಅಂಥಾ ಸಿಕ್ಕುಗಳನ್ನು ಬಿಡಿಸು ಪಾತ್ರಗಳಿಗೆ ಮತ್ತಷ್ಟು ಓಘ ನೀಓಡೋ ಪಾತ್ರವನ್ನು ಸುಧಾರಾಣಿ ನಿರ್ವಹಿಸಿದರೆ, ಇಡೀ ಚಿತ್ರಪಕ್ಕೆ ಬೇರೆ ದಿಕ್ಕು ತೋರಿಸುವ ಕೊರವಂಜಿಯ ಪಾತ್ರದಲ್ಲಿ ಬಿ ಜಯಶ್ರೀಯವರು ನಟಿಸಿದ್ದಾರೆ. ಇದು ಹೆಚ್ಚು ಅವಧಿಯಲ್ಲೇನೂ ತೆರೆ ಮೇಲಿರೋದಿಲ್ಲ. ಆದರೆ ಅದು ಅಷ್ಟು ಸಲೀಸಾಗಿ ಪ್ರೇಕ್ಷಕರ ಮನದಿಂದ ಮರೆಯಾಗುವುದೂ ಇಲ್ಲ. ನಿಜಕ್ಕೂ ಈ ಪಾತ್ರದಲ್ಲಿ ಅಂಥಾ ವಿಶೇಷಗಳೇನಿವೆ ಎಂಬುದು ಹ್ನ್ನೆರಡನೇ ತಾರೀಕು ಅಂದರೆ ಈ ವಾರ ಗೊತ್ತಾಗಲಿದೆ.

  • ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಈ ಚಿತ್ರ ವಿಭಿನ್ನವಾದ ಪೋಸ್ಟರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಚಿತ್ರೀಕರಣದ ಹಂತದಲ್ಲಿಯೇ ಚಿತ್ರಕಥಾ ವೆರೈಟಿ ಪೋಸ್ಟರ್‍ಗಳ ಮೂಲಕ ಸದ್ದು ಮಾಡಿತ್ತು. ಇಡೀ ಚಿತ್ರದ ನವೀನ ಕಥೆಯ ಸುಳಿವು ಇಂಥಾ ಪೋಸ್ಟರ್‍ಗಳ ಮೂಲಕವೇ ಸಿಕ್ಕಿ ಬಿಟ್ಟಿತ್ತು. ಆ ನಂತರದಲ್ಲಿ ಶ್ರೀಮುರುಳಿ ಬಿಡುಗಡೆ ಮಾಡಿದ್ದ ಟ್ರೈಲರ್ ಮೂಲಕವೇ ಈ ಸಿನಿಮಾ ಪಡೆದುಕೊಂಡ ಪ್ರಚಾರ ಅಚ್ಚರಿದಾಯಕವಾದದ್ದು.

    ಪ್ರಜ್ವಲ್ ಎಂ ರಾಜ ನಿರ್ಮಾಣ ಮಾಡಿರೋ ಈ ಚಿತ್ರದ ತುಂಬಾ ಯುವ ಆವೇಗವೇ ತುಂಬಿಕೊಂಡಿದೆ. ಆದರೆ ಹೊಸಬರೇ ಇದ್ದರೂ ಚಿತ್ರ ಮಾತ್ರ ಮಾಗಿದ ಕಥೆಯನ್ನೊಳಗೊಂಡಿದೆ ಎಂಬ ವಿಚಾರ ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಈ ಮೂಲಕವೇ ಯುವ ಪ್ರತಿಭೆ ಸುಜಿತ್ ರಾಥೋಡ್ ನಾಯಕನಾಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಇದೇ ರೀತಿ ಸದರಿ ಚಿತ್ರ ತಾಂತ್ರಿಕವಾಗಿಯೂ ಮಾಂತ್ರಿಕ ಮೋಡಿ ಮಾಡಲು ರೆಡಿಯಾಗಿದೆ.

    ಈ ಚಿತ್ರದ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಹಿಂದೆ ಹಲವಾರು ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿಯೂ ಅನುಭವ ಹೊಂದಿರುವವರು. ಹಾಗೆ ಸಾಗಿ ಬಂದು ನಿರ್ದೇಶಕರಾಗಿರೋ ಅವರು ತಮ್ಮ ಚೊಚ್ಚಲ ಚಿತ್ರವನ್ನು ತಾಂತ್ರಿಕವಾಗಿಯೂ ಬೆರಗಾಗುವಂಥಾ ಶೈಲಿಯಲ್ಲು ರೂಪಿಸಿದ ಭರವಸೆಯಿಂದಿದ್ದಾರೆ. ಸ್ಕ್ರೀನ್ ಪ್ಲೇ ಸೇರಿದಂತೆ ಎಲ್ಲದರಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಹೊಂದಿರೋ ಈ ಚಿತ್ರ ಕಮರ್ಶಿಯಲ್ ಚಹರೆಯೊಂದಿಗೆ ಮ್ಯಾಜಿಕ್ ಮಾಡುವ ತಯಾರಿಯಲ್ಲಿದೆ.

    ಇದೆಲ್ಲ ವಿಶೇಷತೆಗಳ ಜೊತೆಯಲ್ಲಿಯೇ ಭರ್ಜರಿಯಾದ ತಾರಾಗಣದ ಸಾಥ್ ಕೂಡಾ ಈ ಚಿತ್ರಕ್ಕಿದೆ. ತಬಲಾ ನಾಣಿ, ಸುಧಾ ರಾಣಿ, ಬಿ ಜಯಶ್ರೀ, ದಿಲೀಪ್ ರಾಜ್ ಮತ್ತು ಅಗ್ನಿಸಾಕ್ಷಿ ರಾಧಿಕಾ ಸೇರಿದಂತೆ ಅನೇಕ ಕಲಾವಿದರು ಈ ತಾರಾಗಣದಲ್ಲಿದ್ದಾರೆ. ಹೀಗೆ ಎಲ್ಲ ಥರದಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಚಿತ್ರಕಥಾ ಇದೇ ವಾರ ಅಂದರೆ ಹನ್ನೆರಡನೇ ತಾರೀಕಿನಂದು ಬಿಡುಗಡೆಯಾಗಲಿದೆ.

  • ತಮಗಾದ ಮೀಟೂವಿನ ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದೆ ಬಿ.ಜಯಶ್ರೀ

    ತಮಗಾದ ಮೀಟೂವಿನ ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದೆ ಬಿ.ಜಯಶ್ರೀ

    ತುಮಕೂರು: ನನಗೂ ಮೀಟೂ ಅನುಭವಾಗಿದೆ ನಾನು ಅದನ್ನು ಹೇಳಿಕೊಳ್ಳುತ್ತೇನೆ. ಆದರೆ ನನಗೆ ನ್ಯಾಯ ಸಿಗಲಿ ಎಂದಲ್ಲ. ನನಗಾದ ಕಷ್ಟ ನೋಡಿ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಅಂತ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿಕೊಂಡಿದ್ದಾರೆ.

    ತುಮಕೂರು ನಗರದ ರಾಜರಾಜೇಶ್ವರಿ ನೃತ್ಯ ಕಲಾಮಂದಿರದಲ್ಲಿ ಹಿರಿಯ ರಂಗಕರ್ಮಿ ರಾಮನ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಆ ಅನುಭವವಾಗಿದೆ. ಅದು ನನಗೆ ಗೊತ್ತು, ದೌರ್ಜನ್ಯ ಮಾಡಿದವರಿಗೆ ಗೊತ್ತು. ಅಷ್ಟಕ್ಕೆ ಅದನ್ನು ಮುಗಿಸಬೇಕು ಪುನ: ಕೆದಕಬಾರದು. ನನಗಾದ ಅನ್ಯಾಯದ ಬಗ್ಗೆ ಮಾತನಾಡಿದ್ದೇನೆ. ನನಗೆ ನ್ಯಾಯ ಸಿಗಲಿ ಎಂದು ಹೇಳಿಕೊಂಡಿಲ್ಲ. ನನಗೆ ಬಂದ ಕಷ್ಟ ಬೇರೊಬ್ಬರಿಗೆ ಬಾರದಿರಲಿ ಎಂದು ಹೇಳಿಕೊಂಡಿದ್ದೆ ಎಂದು ಬಿ.ಜಯಶ್ರೀ ಪ್ರತಿಕ್ರಿಯಿಸಿದ್ದಾರೆ.

    ಮೀಟೂ ಆರೋಪದ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಳ್ಳುವುದು ತಪ್ಪು ಎಂದು ನಾನು ದೇವರಾಣೆ ಹೇಳಲ್ಲ. ಆದರೆ ಅದಕ್ಕೂ ಒಂದು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು ಎಂದು ಬಿ.ಜಯಶ್ರೀ ಅವರು ಸಲಹೆ ನೀಡಿದ್ದಾರೆ.

    ಕೆಲವೊಮ್ಮೆ ನನ್ನ ಖಾಸಗಿವಿಚಾರ ಯಾಕೆ ಹೇಳಲಿ ಅಂದುಕೊಳ್ಳುತ್ತೇನೆ. ನನ್ನಿಂದ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಎಂದು ಹೇಳುತ್ತೇನೆ. ನನ್ನ ಪುಸ್ತಕ `ಕಣ್ಣಮುಚ್ಚೆ ಕಾಡೆಗೂಡೆ’ಯಲ್ಲಿ ಎಲ್ಲವನ್ನೂ ಬರೆದಿದ್ದೇನೆ. ಜನ್ಮ ಕೊಟ್ಟ ಮಗುವಿನ ತಂದೆ ಯಾರೂ ಅಂತ ತಾಯಿಗೆ ಮಾತ್ರ ಗೊತ್ತಿರುತ್ತದೆ. ತಂದೆಗೆ ಗೊತ್ತಾಗಲ್ಲ. ಹಾಗಾಗಿ ಅವರವರ ನೋವುಗಳು ಅವರವರಿಗೆ ಮಾತ್ರ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

    ನಾವು ನೋವು ಹೇಳಿಕೊಂಡರೂ ಜನ ನಮಗೆ ಎಷ್ಟು ಬೆಂಬಲ ನೀಡುತ್ತಾರೆ ಅನ್ನೋದು ಮುಖ್ಯವಾಗತ್ತದೆ. ನಾನು ನ್ಯಾಯಕ್ಕಾಗಿ ಅನ್ಯಾಯ ಹೇಳಿಕೊಂಡಿಲ್ಲ. ನನ್ನಿಂದ ಬೇರೆಯವರು ಎಚ್ಚೆತ್ತುಕೊಳ್ಳಲಿ ಅನ್ನೋದು ನನ್ನ ಉದ್ದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews