Tag: ಬಿ.ಎಸ್.ಯಡಿಯೂಪ್ಪ

  • ಕೆ.ಶಿವರಾಮ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಮಾಜಿ ಸಿಎಂ ಯಡಿಯೂರಪ್ಪ

    ಕೆ.ಶಿವರಾಮ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಮಾಜಿ ಸಿಎಂ ಯಡಿಯೂರಪ್ಪ

    ಎಎಸ್ ಅಧಿಕಾರಿ ಕಮ್ ‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ಕೆ.ಶಿವರಾಮ್ (K.Shivaram) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಆರೋಗ್ಯ ವಿಚಾರಿಸಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B. S. Yediyurappa), ಮಾಜಿಮಂತ್ರಿ ಸೋಮಣ್ಣ ಸೇರಿದಂತೆ ಮತ್ತಿತರರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

    ಶಿವರಾಮ್ ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಳಿಯ ಪ್ರದೀಪ್ (Actor Pradeep) ನಿನ್ನೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಕಂಡೀಷನ್ ಕ್ರಿಟಿಕಲ್ ಆಗಿದೆ ಎಂದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಫೆ.3ರಂದು ಕೆ.ಶಿವರಾಮ್ ಅವರನ್ನು ದಾಖಲಾಗಿದ್ದರು. ಕಳೆದ 6 ದಿನಗಳ ಹಿಂದೆ ಶಿವರಾಮ್‌ಗೆ ಹೃದಯಾಘಾತವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ. ಇದೀಗ ಮಾವನನ್ನು ನೋಡಲು ನಟ ಪ್ರದೀಪ್ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ, ಬಿಪಿ ಏರುಪೇರಾಗಿತ್ತು. ಈಗಲೂ ಅವರ ಬಿಪಿ ನಾರ್ಮಲ್ ಆಗ್ತಿಲ್ಲ. ಅವರ ಸ್ಥಿತಿ ಕ್ರಿಟಿಕಲ್ ಆಗಿದೆ ಎಂದು ನಟ ಪ್ರದೀಪ್ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯಕ್ಕಾಗಿ ಇಷ್ಟಪಡುವಂತಹ ಅಭಿಮಾನಿಗಳು ದೇವರನ್ನು ಪ್ರಾರ್ಥಿಸಿ ಎಂದು ಪ್ರದೀಪ್ ಮನವಿ ಮಾಡಿದ್ದಾರೆ.

    ಎಚ್.ಸಿ.ಜಿ ಆಸ್ಪತ್ರೆಯಲ್ಲಿ (Hospital) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

     

    ನಂತರ ‘ಬಾ ನಲ್ಲೆ ಮಧುಚಂದ್ರಕೆ’, ವಸಂತ ಕಾವ್ಯದಂತಹ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಾಂಗ್ಲಿಯಾನ 3 ಚಿತ್ರದಲ್ಲಿ ಇವರದ್ದು ಖಳನಾಯಕನ ಪಾತ್ರ. ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವರಾಮ್, ತಮ್ಮ ಮಗಳನ್ನು ನಟ ಪ್ರದೀಪ್ ಅವರಿಗೆ ಧಾರೆಯರೆದಿದ್ದರು.

  • ರಾಜಾಹುಲಿ ಮನತುಂಬಿದ ನಗುವಿನ ಹಿಂದೆ ಅವರು..!

    ರಾಜಾಹುಲಿ ಮನತುಂಬಿದ ನಗುವಿನ ಹಿಂದೆ ಅವರು..!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇಂದು ರಾಹಾಹುಲಿ ಒಂದು ಫೋಟೋ ಸಾಕಷ್ಟು ಆಕರ್ಷಣೆಯಾಗಿ ಚರ್ಚೆ ಹುಟ್ಟುಹಾಕಿದೆ. ಮನತುಂಬಿದ ನಗುವಿನ ಫೋಟೋ ಹಿಂದೆ ಏನಾದ್ರೂ ಸ್ಪೆಷಲ್ ಇದೆಯಾ..!? ಎಂಬ ಕುತೂಹಲ ಮನೆ ಮಾಡಿದೆ. ಯಡಿಯೂರಪ್ಪ ನಗುವಿನ ಹಿಂದೆ ಇದ್ದವರು ಅಂಗನವಾಡಿ ಕಾರ್ಯಕರ್ತೆಯ ಪ್ರೀತಿ ತುಂಬಿದ ಮಾತತಂತೆ.

    ಯೆಸ್, ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಇತ್ತು. ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಆಗ ಯಡಿಯೂರಪ್ಪ ಅವರ ಜೊತೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾತನಾಡುವಾಗ ಸಂತಸಗೊಂಡು ನಿಮ್ಮ ಜೊತೆ ನಾನು ಮಾತಾಡೋದಾ..! ಯಡಿಯೂರಪ್ಪ ಸಾಹೇಬ್ರೆ ನನಗೆ ಖುಷಿ ಆಗ್ತಿದೆ ಅಂದ್ರಂತೆ. ಆಗ ಯಡಿಯೂರಪ್ಪ ಮನತುಂಬಿ ನಗುವ ಮೂಲಕ ಹೇಳಮ್ಮಾ ಏನ್ ಸಮಾಚಾರ ಅಂತಾ ಕೇಳಿದ ಫೋಟೋ ಅಂತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಲಸಿಕೆ ಅಭಿಯಾನ: ನಾರಾಯಣಗೌಡ

    ಅಂದಹಾಗೆ ಯಡಿಯೂರಪ್ಪ ನಗುವುದೇ ಅಪರೂಪ. ಸದಾ ಕಡುಕೋಪವನ್ನೇ ಹೊತ್ತು ಮುಖ ಗಂಟು ಹಾಕಿಕೊಂಡು ಗಂಭೀರವಾಗಿ ಇರುವ ರಾಜಾಹುಲಿ ನಗುವುದೇ ಕಷ್ಟ. ನಕ್ಕರೆ ಅದೇ ಸ್ಪೆಷಲ್. ಕುರ್ಚಿ ಕಾದಾಟ, ಪದೇ ಪದೇ ನಾಯಕತ್ವದ ಗೊಂದಲದಿಂದ ಮನ ಕದಡಿರುವ ಯಡಿಯೂರಪ್ಪ ಮುಖದಲ್ಲಿ ಇಂದು ನಗು ಕಂಡವರು ಏನೋ ಸ್ಪೆಷಲ್ ಇದೆ ಅಂತಾ ಮಾತಾಡಿಕೊಳ್ತಿರೋದಂತು ಸತ್ಯ. ಆ ನಗುವಿನ ಸ್ಪೆಷಲ್ ಅಂಗನವಾಡಿ ಕಾರ್ಯಕರ್ತೆಯ ಖುಷಿ ಅನ್ನೋದು ಅಷ್ಟೇ ಸತ್ಯ.

  • ಕದನದಲ್ಲಿಯೇ ಕಮರಿ ಹೋಯಿತು ಕಲಾಪ

    ಕದನದಲ್ಲಿಯೇ ಕಮರಿ ಹೋಯಿತು ಕಲಾಪ

    – ಸಿಎಂ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದ ಬಿಜೆಪಿ ನಾಯಕು
    – ಮೂರು ಬಾರಿ ಅರ್ಧ ಗಂಟೆ ವಿರಾಮ ಕೊಟ್ರು ನಿಲ್ಲಲಿಲ್ಲ ಪ್ರತಿಭಟನೆ
    – ಸರ್ಕಾರ ಬುರುಡೆ ಬುರುಡೆ ಎಂದು ಹೊರ ನಡೆದ ವಿಪಕ್ಷದ ಶಾಸಕರು

    ಬೆಳಗಾವಿ: ಆಡಳಿತ ಪಕ್ಷದ ವಿರುದ್ಧದ ಘೋಷಣೆ, ಪ್ರತಿಪಕ್ಷದ ಪ್ರತಿಭಟನೆಯಿಂದಾಗಿ ಮಧ್ಯಹ್ನಾದವರೆಗೂ ಕಲಾಪವೇ ನಡೆಯದ ಪ್ರಸಂಗ ಇಂದು ನಡೆಯಿತು.

    ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಸಿಎಂ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರ ಕ್ಷಮೆ ಕೇಳಬೇಕು ಎಂದು ನಿನ್ನೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಅದನ್ನು ಇಂದೂ ಕೂಡ ಮುಂದುವರಿಸಿ ಸದನದ ಬಾವಿಯಲ್ಲಿ ನಿಂತು ಧರಣಿ ಮುಂದುವರಿಸಿದ್ದಾರೆ.

    ರೈತರ ಸಾಲಮನ್ನಾ ಮಾಡಲೇಬೇಕು. ಕುಮಾರಸ್ವಾಮಿ ಅವರು ಬಿ.ಎಸ್.ಯಡಿರೂರಪ್ಪ ಅವರ ಕ್ಷಮೆ ಕೇಳಲೇಬೇಕು ಎಂದು ಘೋಷನೆ ಕೂಗಿದರು. ಶಾಸಕರ ಪ್ರತಿಭಟನೆಯಿಂದಾಗಿ ವಿಧಾನಸಭಾ ಕಲಾಪ ಗೊಂದಲದ ಗೂಡಾಯಿತು. ಈ ವೇಳೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷದ ನಾಯಕರು ಕಿತ್ತಾಡಿಕೊಂಡ ಪ್ರಸಂಗಗಳು ಕಂಡು ಬಂದವು.

    ಬಿಜೆಪಿ ಶಾಸಕ ಮಧುಸ್ವಾಮಿ ಮಾತನಾಡುತ್ತಿದ್ದಾಗ ಕೆಲವು ಆಡಳಿತ ಪಕ್ಷದ ಶಾಸಕರು ಮಧ್ಯ ಪ್ರವೇಶ ಮಾಡಿದರು. ಈ ವೇಳೆ ಕೋಪಗೊಂಡ ಮುಧುಸ್ವಾಮಿ, ರೀ ಬಾಯಿ ಮುಚಗೊಂಡು ಕುಳಿತುಕೊಳ್ರೀ ಎಂದು ಕಿಡಿಕಾರಿ, ಸಿಎಂ ಕ್ಷಮೆ ಕೇಳಬೇಕು, ಸಾಲಮನ್ನಾ ಕುರಿತು ಸಮರ್ಪಕ ಉತ್ತರ ಕೊಟ್ಟ ಬಳಿಕ ಸದನ ನಡೆಸುವುದಕ್ಕೆ ಸಹಕಾರ ಕೊಡುತ್ತೇವೆ ಎಂದರು.

    ಸಿಎಂ ವಿರುದ್ಧ ಬಿಎಸ್‍ವೈ ಕಿಡಿ:
    ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಆರು ತಿಂಗಳಲ್ಲಿ ನಿಮ್ಮ ಸಾಧನೆ ಏನು? ಸಾಲಮನ್ನಾ ಮಾಡಿಲ್ಲ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಲಿದೆ. ಸಹಕಾರ ಕ್ಷೇತ್ರ ಏನಾಗಿದೆ ಅಂತಾ ನಿಮಗೆ ಗೊತ್ತಿದೆ. ಕುಮಾರಸ್ವಾಮಿ ಅವರು ಇದುವರೆಗೂ ಒಂದು ದಿನ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಭತ್ತ ಉತ್ತಲು ಹೋದರು. ಆದರೆ ಬರ ಪ್ರದೇಶಕ್ಕೆ ಹೋಗಲಿಲ್ಲ. ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು ಬಿಟ್ಟರೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ಕುಟುಕಿದರು.

    ತೊಗರಿ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕುಮಾರಸ್ವಾಮಿ ಅವರು ನಿನ್ನೆ ಅರ್ಧಂಬರ್ಧ ಉತ್ತರ ಕೊಟ್ಟು ಮುಗಿತು ಅಂತ ಹೇಳಿಬಿಟ್ಟರು. ಹೀಗೆ ಮಾಡಿದರೆ ಹೇಗೆ? ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಕಲಾಪದಲ್ಲಿ ಸರ್ಕಾರವು ಯಾವುದೇ ಚರ್ಚೆಯ ಕುರಿತು ಸಮರ್ಥ ರೀತಿಯಲ್ಲಿ ಉತ್ತರ ಕೊಡುತ್ತಿಲ್ಲ ಎಂದು ಆರೋಪಿಸಿದರು.

    ಬಿಜೆಪಿ ಶಾಸಕರ ಪ್ರತಿಭಟನೆಯಿಂದಾಗಿ ಅರ್ಧ ಗಂಟೆ ಸದನವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು. ಬಳಿಕ ಆರಂಭವಾದ ಕಲಾಪದಲ್ಲಿಯೂ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಘೋಷಣೆ ಜೋತಾಗಿತ್ತು. ಮಧ್ಯ ಪ್ರವೇಶ ಮಾಡಿದ ಸಚಿವ ಆರ್.ವಿ.ದೇಶಪಾಂಡೆ ಅವರು ಸದನ ನಡೆಸಲು ಅನುಮತಿ ಮಾಡಿಕೊಡುವಂತೆ ಕೈಮುಗಿದು ಮನವಿ ಮಾಡಿಕೊಂಡರು. ಇದಕ್ಕೆ ಬಿಜೆಪಿ ನಾಯಕರು ಒಪ್ಪಲಿಲ್ಲ. ಈ ವೇಳೆ ಏರು ಧ್ವನಿಯಲ್ಲಿ ಶಾಸಕರೊಬ್ಬರು, ನಿಮ್ಮ ಹಣೆಬರಹಕ್ಕಂತೂ ರೈತರ ಒಂದು ರೂಪಾಯಿ ಕೂಡ ಸಾಲಮನ್ನಾ ಮಾಡಲಿಲ್ಲ. ನಾವು ಮಾಡಿದರೂ ನೆಮ್ಮದಿ ಇಲ್ಲ ನಿಮಗೆ. ಸುಮ್ಮನೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತೀರಿ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಅಥವಾ ತಾವು ಅಸಂಸದೀಯ ಪದ ಬಳಕೆ ಮಾಡಿದರೆ ಸೂಚನೆ ಕೊಡುತ್ತೇವೆ. ನೀವು ಪ್ರತಿಭಟನೆ ಕೈಬಿಡಬೇಕು ಎಂದು ಯಡಿಯೂಪ್ಪ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಒಪ್ಪದೆ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರಿಸಿದರು. ಗದ್ದಲ, ಧರಣಿ ಹಿನ್ನೆಲೆ ಮತ್ತೆ ಅರ್ಧಗಂಟೆ ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು. ಬಳಿಕವೂ ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನ ಮೂರು ಗಂಟೆಗೆ ಕಲಾಪ ಮುಂದೂಡಿದರು. ಈ ವೇಳೆ ಸರ್ಕಾರ ಬುರುಡೆ ಬುರುಡೆ ಎಂದು ಬಿಜೆಪಿ ಶಾಸಕರು ಕೂಗುತ್ತ ಹೊರನಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಗೆಳೆಯನ ಲೈಂಗಿಕ ಪ್ರಕರಣ ಕೆದಕಿ ಟಾಂಗ್ ಕೊಟ್ಟ ಬೇಳೂರು ಗೋಪಾಲಕೃಷ್ಣ

    ಮಾಜಿ ಗೆಳೆಯನ ಲೈಂಗಿಕ ಪ್ರಕರಣ ಕೆದಕಿ ಟಾಂಗ್ ಕೊಟ್ಟ ಬೇಳೂರು ಗೋಪಾಲಕೃಷ್ಣ

    ಶಿವಮೊಗ್ಗ: ಕ್ಷೇತ್ರದಲ್ಲಿ ಉಪಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತನಾಗಿದ್ದ ಶಾಸಕ ಹರತಾಳು ಹಾಲಪ್ಪ ಅವರ ಲೈಂಗಿಕ ಪ್ರಕರಣವನ್ನು ಕೆದಕಿ ಬೇಳೂರು ಗೋಪಾಲಕೃಷ್ಣ ಟಾಂಗ್ ಕೊಟ್ಟಿದ್ದಾರೆ.

    ಲೈಂಗಿಕ ಹಗರಣದಲ್ಲಿ ಸಾಕ್ಷಿ ಮುಚ್ಚಿ ಹರತಾಳು ಹಾಲಪ್ಪ ಅವರು ಜಯ ಸಾಧಿಸಿರಬಹುದು. ಆದರೆ ಆಕೆಯೊಂದಿಗೆ ಅವರು ಸಂಬಂಧ ಹೊಂದಿರಲಿಲ್ಲವೇ? ಒಂದು ವೇಳೆ ಸಂಬಂಧ ಇಲ್ಲ ಅಂತಾ ಹೇಳುವುದಾದರೆ ಸಿಗಂದೂರಿಗೆ ಬಂದು ಪ್ರಮಾಣ ಮಾಡಲಿ. ನಾನು, ಮಧು ಬಂಗಾರಪ್ಪ ಅವರನ್ನು ಕರೆದುಕೊಂಡು ಬಂದು, ಶರಾವತಿ ಡೆಂಟಲ್ ಕಾಲೇಜು ವಿಷಯ ಬಗ್ಗೆ ಪ್ರಮಾಣ ಮಾಡಿಸುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

    ಕುಮಾರ್ ಬಂಗಾರಪ್ಪ ಅವರು ಡೆಂಟಲ್ ಕಾಲೇಜು ಅಧ್ಯಕ್ಷರಾಗಿದ್ದರು. ಆಗ ಅಧ್ಯಕ್ಷ ಸ್ಥಾನ ಈಡಿಗರಿಗೆ ಸೇರಬೇಕು ಎಂಬುದು ಮರೆತುಹೋಗಿತ್ತಾ? ಅಥವಾ ನಿಮ್ಮ ಬಾಯಲ್ಲಿ ಕಡುಬು ಹಾಕಿಕೊಂಡಿದ್ದರಾ ಎಂದು ಪ್ರಶ್ನಿಸಿ ಕಿರಿಕಾರಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮನಸ್ಥಿತಿ ಕಳೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದ ಕುರಿತಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಕುಟುಕಿದರು.

    ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಅವರು ನಕಲಿ ಸಹಿ ಮಾಡಿ, ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದರು. ಆದರೆ ಈ ವಿಚಾರವನ್ನು ಹೇಳಿಕೊಳ್ಳದೇ ಮಕ್ಕಳನ್ನು ಶಿಕ್ಷೆಯಿಂದ ತಪ್ಪಿಸಿ ತಾವೇ ಜೈಲಿಗೆ ಹೋದರು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಬಿಜೆಪಿ ನಾಯಕರ ಬಗ್ಗೆ ತಿಳಿದುಕೊಂಡಿದ್ದಾರೆ. ಯಾರನ್ನು ಹತ್ತಿಕ್ಕಬೇಕು, ಮುಗಿಸಬೇಕು ಅಂತಾ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಬಿಸಿ ಈಗ ಬಿ.ಎಸ್.ಯಡಿಯೂಪ್ಪನವರಿಗೂ ತಟ್ಟಿದ್ದು, ಒದ್ದಾಡುವಂತಾಗಿದೆ. ಪ್ರಧಾನಿ ಮೋದಿ ಹೀಗೆ ಮಾಡದಿದ್ದರೇ ಸಂಸದೆ ಶೋಭಾ ಕರಂದ್ಲಾಜೆ ಮೇಡಂ ಎಂದೋ ಹೊಸ ಪಕ್ಷ ಕಟ್ಟಲು ಸಿದ್ಧರಾಗಿದ್ದರು ಎಂದು ಲೇವಡಿ ಮಾಡಿದರು.

    ಬಿಜೆಪಿಯವರಿಗೆ ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇಲ್ಲ. ಸುಳ್ಳು-ಡೊಂಗಿ ಅವರ ಬಾಯಲ್ಲಿ ಬರುತ್ತವೆ. ಸಿಗಂದೂರು ದೇವಾಲಯ ಸಮೀಪದಲ್ಲಿ ತುಮರಿ ಸೇತುವೆ ನಿರ್ಮಿಸುತ್ತೇವೆ ಅಂತಾ 2008ರಲ್ಲಿ ಭರವಸೆ ನೀಡಿದ್ದರು. ಆದರೆ ಹತ್ತು ವರ್ಷ ಕಳೆದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ ಎಂದು ದೂರಿದರು.

    ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ, ಈಡಿ, ಐಟಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ದೊಡ್ಡ ದೊಡ್ಡ ನಾಯಕರನ್ನು ಬಗ್ಗು ಬಡಿಯಲು ಪಿತೂರಿ ನಡೆಸಿದ್ದಾರೆ. ಕುತಂತ್ರದ ಮೂಲಕ ಎಲ್ಲರನ್ನು ಹೆದರಿಸಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಆಟ ಆಡುತ್ತಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv