Tag: ಬಿ.ಎಸ್.ಯಡಿಯುರಪ್ಪ

  • ಸಿದ್ದರಾಮಯ್ಯರ ಧಿಮಾಕಿನ ಮಾತಿಗೆ ಬೆಲೆಯಿಲ್ಲ: ಬಿಎಸ್‌ವೈ

    ಸಿದ್ದರಾಮಯ್ಯರ ಧಿಮಾಕಿನ ಮಾತಿಗೆ ಬೆಲೆಯಿಲ್ಲ: ಬಿಎಸ್‌ವೈ

    ದಾವಣಗೆರೆ: ಸಿದ್ದರಾಮಯ್ಯ ಅವರು ವಿಪಕ್ಷದ ನಾಯಕರೆಂಬುದನ್ನು ಮರೆತು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಸೊಕ್ಕಿನ, ಧಿಮಾಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ದಾವಣಗೆರೆಯ ಆನಗೋಡು ಗ್ರಾಮದಲ್ಲಿ ನಡೆದ ಪರಿಷತ್ ಚುನಾವಣೆಯ ಪ್ರಚಾರ ಸಭೆಗೆ ಹಾಜರಾಗುವ ಮುನ್ನ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಎನ್ನುವುದನ್ನು ಮರೆತಿದ್ದಾರೆ. ಫಲಿತಾಂಶ ನಂತರ ಅವರಿಗೆ ತಿಳಿಯುತ್ತದೆ. ಅವರ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ, ಮತದಾರರು ಇದೀಗ ಜಾಗೃತರಾಗಿದ್ದಾರೆ. ಅವರಿಗೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುತ್ತಿದೆ ಎಂದು ಟಾಂಗ್ ನೀಡಿದರು.

    ಮೈಸೂರಿನ ಚಾಮುಂಡೇಶ್ವರಿ ಮತ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ ಅವರು ಇಷ್ಟೊಂದು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುವಂತದ್ದಲ್ಲ. ಸೋತರೂ ಬುದ್ಧಿ ಕಲಿಯದ ಸಿದ್ದರಾಮಯ್ಯ ಇನ್ನಾದರೂ ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕಾಗಿದೆ ಎಂದರು.

    ಸಂಪುಟ ಪುನರಚನೆ ಮಾಡುವುದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರವಾಗಿದೆ. ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸಿಎಂ ನಿರ್ಧರಿಸುತ್ತಾರೆ. ಸಂಪುಟ ಪುನರ್‌ರಚನೆಯಾಗ ಬಹುದೆಂಬ ನಿರೀಕ್ಷೆ ಇದೆ. ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಲ್ಲದ ಸ್ಥಳದಲ್ಲಿ ಬೆಂಬಲಿಸುವಂತೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆಚ್‌ಡಿ ದೇವೇಗೌಡ ಅವರು ಭೇಟಿ ಆಗಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ. ಚುನಾವಣೆಗೂ, ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ಪರಿಷತ್ ಚುನಾವಣೆಯಲ್ಲಿ ನಾವು 15 ಸ್ಥಾನ ಗೆಲ್ಲುತ್ತೇವೆ. ಬುದ್ಧಿವಂತ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂಬ ನಂಬಿಕೆ ಇದೆ. ಕೇವಲ ಹಣದ ಬಲದಿಂದ ಚುನಾವಣೆ ಗೆಲ್ಲುತ್ತೇನೆ ಎಂದು ಹೋದರೆ ಅವರು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್‌ಗೆ ಟಾಂಗ್ ನೀಡಿದರು. ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ವಂಚನೆ- ಸಿಸಿಎಫ್ ಮೇಲೆ ದೂರು

  • ಖರೀದಿಸಿದ ಮನೆ ಸಾಮಾನುಗಳನ್ನು ತಲೆ ಮೇಲೆ ಹೊತ್ತೊಯ್ಯಬೇಕೆ, ಸಾಮಾನ್ಯ ಜ್ಞಾನ ಬೇಡವೇ- ಸಿದ್ದರಾಮಯ್ಯ ಕಿಡಿ

    ಖರೀದಿಸಿದ ಮನೆ ಸಾಮಾನುಗಳನ್ನು ತಲೆ ಮೇಲೆ ಹೊತ್ತೊಯ್ಯಬೇಕೆ, ಸಾಮಾನ್ಯ ಜ್ಞಾನ ಬೇಡವೇ- ಸಿದ್ದರಾಮಯ್ಯ ಕಿಡಿ

    – ಅಂಗಡಿ ತೆರೆದಿರುತ್ತವೆ, ವಾಹನ ಸಂಚಾರ ಮಾತ್ರ ನಿಷೇಧ- ಮುರ್ಖತನದ ನಿರ್ಧಾರ
    – ರೋಗಗ್ರಸ್ತ ಸರ್ಕಾರದಿಂದ ಜನತೆ ಬವಣೆ ಪಡುವಂತಾಗಿದೆ

    ಬೆಂಗಳೂರು: ರಾಜ್ಯ ಸರ್ಕಾರದ ನೂತನ ಲಾಕ್‍ಡೌನ್ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಬೆಳಗ್ಗೆ ಅಂಗಡಿ, ಮುಂಗಟ್ಟು ತೆರೆಯಲು ಅವಕಾಶ ನೀಡಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಖರೀದಿಸಿದ ಮನೆ ಸಾಮಾನುಗಳನ್ನು ಹೇಗೆ ಕೊಂಡೊಯ್ಯಬೇಕು? ಹಳ್ಳಿಗಳಲ್ಲಿ ಅಂಗಡಿಗಳು ದೂರ ಇರುತ್ತವೆ ಅವರು ತಲೆ ಮೇಲೆ ಹೊತ್ತೊಯ್ಯಬೇಕೆ ಎಂಬ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಕಟುವಾಗಿ ಟೀಕಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ರೋಗಕ್ಕಿಂತ ಹೆಚ್ಚಾಗಿ ಇಲ್ಲಿನ ರೋಗಗ್ರಸ್ತ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಬವಣೆ ಪಡುವಂತಾಗಿದೆ. ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‍ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪರಿಷ್ಕೃತ ಲಾಕ್‍ಡೌನ್ ಅನ್ವಯ ಬೆಳಗ್ಗೆ ಆರರಿಂದ ಹತ್ತರ ವರೆಗೆ ದಿನಸಿ, ತರಕಾರಿ, ಮೀನು-ಮಾಂಸದ ಅಂಗಡಿಗಳು ತೆರೆಯಲು ಅವಕಾಶ ನೀಡಿ, ಈ ಅವಧಿಯಲ್ಲಿ ವಾಹನ ಸಂಚಾರ ಮಾತ್ರ ನಿಷೇಧಿಸಿರುವುದು ಸರ್ಕಾರದ ಮೂರ್ಖತನದ ನಿರ್ಧಾರ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು 2-3 ಕಿ.ಮೀ.ದೂರದಲ್ಲಿವೆ. ಅಲ್ಲಿಂದ ಮನೆ ಸಾಮಾನುಗಳನ್ನು ಹಿರಿಯರು, ಅಶಕ್ತರು ಹೊತ್ತುಕೊಂಡು ಬರಬೇಕೇ ಮುಖ್ಯಮಂತ್ರಿಗಳೇ? ಆಯಾಸ-ಪ್ರಯಾಸದಿಂದ ಅವರಿಗೇನಾದರೂ ಆಗಿಬಿಟ್ಟರೆ ಯಾರು ಹೊಣೆ? ಈ ಸಾಮಾನ್ಯ ಜ್ಞಾನವೂ ಆಡಳಿತ ನಡೆಸುವವರಿಗೆ ಬೇಡವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಹೊಸ ಲಾಕ್‍ಡೌನ್ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್, ಎಟಿಎಂ, ಆಸ್ಪತ್ರೆ ತೆರೆದಿರುತ್ತದೆ. ಆದರೆ ಅಲ್ಲಿಗೆ ಗ್ರಾಹಕರು ಮತ್ತು ಅಸ್ವಸ್ಥರು ವಾಹನ ಬಳಸಲು ನಿಷೇಧ ಇದೆ. ಹೊಟೇಲ್‍ನಲ್ಲಿ ಪಾರ್ಸಲ್‍ಗೆ ಅವಕಾಶ ಇದೆ. ವಾಹನ ಮಾತ್ರ ಬಳಸುವಂತಿಲ್ಲ. ಇದೆಂತಹ ತುಘಲಕ್ ಸರ್ಕಾರ ಎಂದು ಕಿಡಿಕಾರಿದ್ದಾರೆ.

    ಹೊಸ ಲಾಕ್‍ಡೌನ್ ಜಾರಿಗೆ ತರಲು ಹೊರಟಿರುವ ರಾಜ್ಯದ ಆಡಳಿತಗಾರರು ಮತ್ತು ಅಧಿಕಾರಿಗಳು ಮೊದಲು ಬೆಂಗಳೂರಿನ ಹವಾನಿಯಂತ್ರಿತ ಕಚೇರಿಯಿಂದ ಹೊರಬಂದು ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲಿ. ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯ ಆಗಿರುವುದು ನಿಜ. ಆದರೆ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ ಜಿಲ್ಲಾಧಿಕಾರಿಗಳಿಂದ ವಾಸ್ತವ ಸ್ಥಿತಿಯ ವರದಿ ಪಡೆಯಬೇಕಾಗಿತ್ತು. ಇದರಿಂದ ಪೊಲೀಸರು ಮತ್ತು ಜನತೆಯ ನಡುವಿನ ಸಂಘರ್ಷವನ್ನು ತಪ್ಪಿಸಿದಂತಾಗುತ್ತಿತ್ತು ಎಂದು ತಿಳಿಸಿದ್ದಾರೆ.