Tag: ಬಿಸಿ ಕಾವಲಿ

  • ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಹೈದರಾಬಾದ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಯಿತೆಂದು ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಮಗುವನ್ನ ಬಿಸಿ ಕಾವಲಿಯ ಮೇಲೆ ಕೂರಿಸಿದ ಘಟನೆ ತೆಲಂಗಾಣದ ಎಸ್‍ಆರ್ ನಗರದಲ್ಲಿ ಭಾನುವಾರದಂದು ನಡೆದಿದೆ.

    ಮೂಲತಃ ಶ್ರೀಕಾಕುಲಂ ಜಿಲ್ಲೆಯವಳಾದ ಲಲಿತಾ ಅದೇ ಜಿಲ್ಲೆಯವನಾದ ಪ್ರಕಾಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ತೊರೆದಿದ್ದ ಲಲಿತಾ 4 ವರ್ಷದ ಮಗಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು. 9 ತಿಂಗಳ ಹಿಂದೆ ಇಬ್ಬರೂ ಹೈದರಾಬಾದ್‍ಗೆ ಬಂದಿದ್ದರು. ಅಂದಿನಿಂದ ಲಲಿತಾ ಎಸ್‍ಆರ್ ನಗರದ ಶ್ರೀನಿವಾಸ್ ನಗರದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಪ್ರಕಾಶ್ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆದ್ರೆ ಮಗಳು ರೂಪಳನ್ನ ದೂರ ಮಾಡುವಂತೆ ಪ್ರಕಾಶ್ ಲಲಿತಾಗೆ ಹೇಳುತ್ತಲೇ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಈ ಮಧ್ಯೆ ಲಲಿತಾ ತನ್ನ ಮಗಳನ್ನ ಬಿಸಿಯಾದ ಕಾವಲಿ ಮೇಲೆ ಕೂರಿಸಿ, ನಂತರ ಅದರ ಮೇಲೆ ನಿಲ್ಲಿಸಿ ವಿಕೃತಿ ಮೆರೆದಿದ್ದಾಳೆ. ಈ ಜೋಡಿ ಮಗುವನ್ನ ಮಹಿಳಾ ಮತ್ತು ಮಕ್ಕಳ ಕೇಂದ್ರವಾದ ಭರೋಸಾಗೆ ಕರೆದುಕೊಂಡು ಹೋಗಿದ್ದು, ಇದು ಅನಾಥ ಮಗು. ರಸ್ತೆ ಬದಿಯಲ್ಲಿ ಸಿಕ್ಕಿತು ಎಂದು ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಭರೋಸಾ ಸಿಬ್ಬಂದಿ ಅಧಿಕೃತವಾಗಿ ದೂರು ದಾಖಲಿಸಲು ಮೂವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ದೇಹದ ಮೇಲೆ ಗಾಯದ ಗುರುತುಗಳನ್ನ ನೋಡಿದ ಪೊಲೀಸರಿಗೆ ಅನುಮಾನ ಬಂದಿದ್ದು, ಎಸ್‍ಆರ್ ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

    ಪ್ರಕಾಶ್ ಹಾಗೂ ಲಲಿತಾ ಮಗುವಿನಿಂದ ಮುಕ್ತಿ ಪಡೆಯಲು ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಸಂಬಂಧಕ್ಕೆ ಮಗು ಅಡ್ಡಿಯಾಯಿತೆಂದು ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿ ಹಿಂಸೆ ನೀಡಿದ್ದಾರೆ.

    ಸದ್ಯ ಪೊಲೀಸರು ಲಲಿತಾ ಹಾಗೂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.