Tag: ಬಿಸಿಯೂಟ ಕಾರ್ಯಕರ್ತೆಯರು

  • ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಗಮನ ಸೆಳೆದ ಅಜ್ಜಿ

    ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಗಮನ ಸೆಳೆದ ಅಜ್ಜಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಕಿಚ್ಚು ಜೋರಾಗಿದ್ದು, ಪ್ರತಿಭಟನೆಯಲ್ಲಿ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.

    ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯ ಸ್ವರೂಪ ಹೆಚ್ಚಾಗುತ್ತಿದ್ದಂತೆ ಪ್ರತಿಭಟನೆಯಲ್ಲಿದ್ದ ವೃದ್ದೆಯೊಬ್ಬರ ಆಕ್ರೋಶವೂ ಹೆಚ್ಚಾಗಿತ್ತು. ತಮ್ಮ ನೋವು, ಸಂಕಟವನ್ನ ವಿಭಿನ್ನ ಶೈಲಿಯ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ವ್ಯಕ್ತಪಡಿಸಿದರು. ಪೊಲೀಸರೇ ಬರಲಿ, ಯಾರೇ ಬರಲಿ. ನಮಗೆ ನ್ಯಾಯ ಬೇಕು ಅಂತ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ವಿಭಿನ್ನವಾಗಿತ್ತು. ಅಜ್ಜಿಯ ಈ ಆರ್ಥನಾದ ಎಲ್ಲರ ಗಮನ ಸೆಳೆಯಿತು.

    ಪ್ರತಿಭಟನೆ ಯಾಕೆ?
    ಸಿಲಿಕಾನ್ ಸಿಟಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಮತ್ತೆ ರಾಜಧಾನಿಯಲ್ಲಿ ಪ್ರತಿಭಟನೆಯ ಧ್ವನಿ ಮೊಳಗಿಸಿದ್ದಾರೆ. ಕನಿಷ್ಠ ಕೂಲಿ ಹೆಚ್ಚಳವಾಗಬೇಕು. ನಿವೃತ್ತಿ ವೇತನ ನೀಡಬೇಕು. ಖಾಸಗಿಕರಣ ಕೈಬಿಡಬೇಕು, ಹೀಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರತಿಭಟನೆಯ ಕಿಚ್ಚು ಹೆಚ್ಚಾಗ್ತಿದೆ. ಬಿಸಿಯೂಟ ಕಾರ್ಯಕರ್ತೆಯರ ಆಕ್ರೋಶ ಮುಗಿಲು ಮುಟ್ಟಿದೆ. ಹೊಡಿಲಿ, ಬಡಿಲಿ, ಅರೆಸ್ಟ್ ಮಾಡಿದರೂ ಪರವಾಗಿಲ್ಲ. ನಾವು ಇಲ್ಲಿಂದ ಹೋಗಲ್ಲ ಅಂತ ಬಿಸಿಯೂಟ ಕಾರ್ಯಕರ್ತೆಯರು ಬಿಗಿಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿಯನ್ನ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಮೆಜಸ್ಟಿಕ್‍ನಿಂದ ಫ್ರೀಡಂಪಾರ್ಕ್‍ಗೆ ರ್‍ಯಾಲಿ ಹೋಗಲು ಪ್ರತಿಭಟನಾಕಾರರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ನಿನ್ನೆಯೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನೆಗೆ ಅನುಮತಿ ನೀಡದೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಬಿಸಿಯೂಟ ಕಾರ್ಯಕರ್ತರನ್ನ ಅಲ್ಲಿಯೇ ತಡೆಯಿರಿ ಅಂತ ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದರು. ಈ ನಡುವೆಯೂ ಪ್ರತಿಭಟನಾಕಾರರು ಫ್ರೀಡಂಪಾರ್ಕ್‍ಗೆ ರ್‍ಯಾಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೇ, ರೈಲ್ವೆ ನಿಲ್ದಾಣದ ಬಳಿಯೇ ತಡೆದರು.

    ನಿಷೇಧಾಜ್ಞೆ ನಡುವೆಯೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅಕ್ಷರ ದಾಸೋಹ ನೌಕರರು ವಿವಿಧ ಜಿಲ್ಲೆಗಳಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆನೇ ಬಂದಿಳಿದು, ಪ್ರತಿಭನೆಯಲ್ಲಿ ಭಾಗಿಯಾಗಿದ್ದಾರೆ.

  • ರೋಡಿಗಿಳಿದ ಬಿಸಿಯೂಟ ಕಾರ್ಯಕರ್ತೆಯರು – ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ದಿಗ್ಬಂಧನ

    ರೋಡಿಗಿಳಿದ ಬಿಸಿಯೂಟ ಕಾರ್ಯಕರ್ತೆಯರು – ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ದಿಗ್ಬಂಧನ

    -ಲಾಠಿಚಾರ್ಜ್ ಆದ್ರೂ ಜಗಲ್ಲ ಅಂದ ಕಾರ್ಯಕರ್ತೆಯರು
    -ಪ್ರತಿಭಟನೆಗೆ ಅವಕಾಶ ನಿರಾಕರಣೆ

    ಬೆಂಗಳೂರು: ಇಂದು ಬೆಂಗಳೂರಿಗೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ತಟ್ಟಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಆಗಮಿಸಿರುವ ಕಾರ್ಯಕರ್ತೆಯರು ಸಿಐಟಿಯು ನಾಯಕಿ ವರಲಕ್ಷ್ಮಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಲಿದ್ದಾರೆ. ಆದರೆ ಇದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ.

    ಮುಂಜಾಗ್ರತೆಯಿಂದ ಸಿಐಟಿಯುನ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಮೆಜೆಸ್ಟಿಕ್‍ನ ರೈಲ್ವೇ ನಿಲ್ದಾಣಕ್ಕೆ ಬಂದಿರೋ ಕಾರ್ಯಕರ್ತೆಯರಿಗೆ ಪೊಲೀಸರು ದಿಗ್ಬಂಧನ ಹಾಕಿದ್ದಾರೆ. ಅತ್ತ ಫ್ರೀಡಂ ಪಾರ್ಕ್‍ಗೆ ಬರುತ್ತಿದ್ದ ಸಾವಿರಾರು ಕಾರ್ಯಕರ್ತೆಯರನ್ನು ಪೀಣ್ಯದ ಬಳಿಯೇ ತಡೆಯಲಾಗಿದೆ. ಖಾಸಗೀಕರಣ ಕೈ ಬಿಡಬೇಕು. ಕನಿಷ್ಟ ಕೂಲಿ ಹೆಚ್ಚಳದೊಂದಿಗೆ ನಿವೃತ್ತಿ ವೇತನ ನೀಡಬೇಕು ಎಂದು ಕಾರ್ಯಕರ್ತೆಯರು ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

    ಪ್ರತಿಭಟನೆಗೆ ಅವಕಾಶ ನಿರಾಕರಣೆಗೆ ಕಾರಣಗಳು:
    * ಈ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಸೂಚನೆ ಪಾಲಿಸದಿರುವುದು.
    * ಶೇಷಾದ್ರಿ ರಸ್ತೆಯಲ್ಲಿ ಕುಳಿತಿದ್ರಿಂದ ಅಕ್ಕಪಕ್ಕದ ರಸ್ತೆಗಳು ಜಾಮ್ ಆಗಿದ್ದು.
    * ಆಂಬುಲೆನ್ಸ್ ಓಡಾಟಕ್ಕು ಸಹ ತೊಂದರೆ ಆಗಿತ್ತು.
    * 15,000 ಅಂಗನವಾಡಿ ಕಾರ್ಯಕರ್ತೆಯರು ಸೇರ್ತಾರೆ ಅಂತಾ ಅರ್ಜಿ ನೀಡಿರುವುದು.
    * ಫ್ರೀಡಂ ಪಾರ್ಕ್ ಸಾಮರ್ಥ್ಯ ಕೇವಲ ಎರಡರಿಂದ ಮೂರು ಸಾವಿರ ಮಾತ್ರ ಇರೋದು.
    * ಪ್ರತಿಭಟನೆಗೆ ಕುಳಿತು ಜಾಮ್ ಮಾಡೋದ್ರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ.
    * ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರೋದು.

  • ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ – ಕ್ಯಾರೇ ಎನ್ನದ ಇಲಾಖೆ ಅಧಿಕಾರಿಗಳು

    ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ – ಕ್ಯಾರೇ ಎನ್ನದ ಇಲಾಖೆ ಅಧಿಕಾರಿಗಳು

    ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆಯನ್ನ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಮಾಡುತ್ತಿದ್ದಾರೆ.

    ಬೆಳಗ್ಗೆಯೇ ದೂರದ ಊರುಗಳಿಂದ ಬೆಂಗಳೂರಿಗೆ ಬಂದ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ರ‍್ಯಾಲಿ ಮೂಲಕ ಆಗಮಿಸಿ, ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ.

    ಕೆಲ ಕಾರ್ಯಕರ್ತೆಯರು ಪುಟ್ಟ ಕಂದಮ್ಮಗಳನ್ನು ಮಡಿಲಲ್ಲಿ ಇಟ್ಟುಕೊಂಡೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕರ್ತೆಯರು ಬೆಳಗ್ಗೆಯಿಂದ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲಿವರೆಗೆ ಬಂದಿಲ್ಲ. ಮಂತ್ರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪ್ರತಿಭಟನಾ ಸ್ಥಳಕ್ಕೆ ಬಂದು ಕಾರ್ಯಕರ್ತೆಯರ ಅಳಲು ಕೇಳಿಲ್ಲ.

    ಹೀಗಾಗಿ ತಮ್ಮ ಪ್ರತಿಭಟನೆಗೆ ಕ್ಯಾರೇ ಅನ್ನದೆ, ಯಾವುದೇ ಭರವಸೆ ನೀಡದ ಸರ್ಕಾರದ ಧೋರಣೆಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಸ್ಥಳದಿಂದ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.

  • ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಳ್ಳೋ ಸಾಧ್ಯತೆ- ಈ ಬಾರಿಯ ಬಜೆಟ್‍ನಲ್ಲಿ ಸಿಗುತ್ತಾ ಭರ್ಜರಿ ಗಿಫ್ಟ್?

    ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಳ್ಳೋ ಸಾಧ್ಯತೆ- ಈ ಬಾರಿಯ ಬಜೆಟ್‍ನಲ್ಲಿ ಸಿಗುತ್ತಾ ಭರ್ಜರಿ ಗಿಫ್ಟ್?

    ಬೆಂಗಳೂರು: ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮತ್ತೆ ಮಂಗಳವಾರ ಕೂಡ ಬಿಸಿಯೂಟ ಕಾರ್ಯಕರ್ತೆಯರು ಬೀದಿಗಳಿದ್ದು, ಇಂದೂ ಕೂಡ ಮುಂದುವರೆಯುವ ಸಾಧ್ಯತೆಗಳಿವೆ.

    ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಬೀದಿಗಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ರು. ಮಂಗಳವಾರ ಸ್ವತಃ ಸಚಿವ ತನ್ವೀರ್ ಸೇಠ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಜೊತೆ ಮಾತಾನಾಡಿ ಸಂಜೆ 6 ಗಂಟೆಯೊಳಗೆ ಬೇಡಿಕೆ ಈಡೆರಿಸುತ್ತೇವೆ ಅಂತಾ ಭರವಸೆ ನೀಡಿದ್ರು.

    ಆದ್ರೆ ಭರವಸೆ ನೀಡಿ ತೆರಳಿದ ಸಚಿವ ತನ್ವೀರ್ ಸೇಠ್ ಆ ಕಡೆ ತಲೆ ಹಾಕಲೇ ಇಲ್ಲ. ಹೀಗಾಗಿ ಇದೀಗ ಪ್ರತಿಭಟನಾಕಾರರು ಸುಳ್ಳು ಭರವಸೆ ನೀಡಿ ಓಡುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 15 ಸಾವಿರ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ 2100 ರೂ. ಸಂಬಳ ನೀಡುತ್ತಿರುವ ಸರ್ಕಾರ, ಕಳೆದ ಎರಡು ತಿಂಗಳಿನಿಂದ ಸಂಬಳವೂ ಪಾವತಿ ಮಾಡಿಲ್ಲ. ಹೀಗಾಗಿ ಲಿಖಿತ ಭರವಸೆ ಕೊಟ್ಟರೆ ಮಾತ್ರ ಧರಣಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೇ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಈ ಹಿಂದೆ ಹಲವು ಬಾರಿ ಕನಿಷ್ಠ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೀದಿಗೆ ಇಳಿದ್ರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೀಗಾಗಿ ಬಿಸಿಯೂಟ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲೇ ಅಹೋರತ್ರಿ ಧರಣಿ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ ಅಂತಾ ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇಂದು ರಾಜ್ಯದ ವಿವಿಧ ಭಾಗಗಳಿಂದ ಮತ್ತಷ್ಟು ಕಾರ್ಯಕರ್ತೆಯರು ಆಗಮಿಸಲಿದ್ದು, ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ.