Tag: ಬಿಲ್ಲವ ಸಮಾವೇಶ

  • ಸ್ನೇಹದ ಬದಲು ಕರಾವಳಿಯಲ್ಲಿ ಸಂಘರ್ಷ ಸೃಷ್ಟಿಸಿದ ಮುಸ್ಲಿಂ ಬಿಲ್ಲವ ಸಮಾವೇಶ

    ಸ್ನೇಹದ ಬದಲು ಕರಾವಳಿಯಲ್ಲಿ ಸಂಘರ್ಷ ಸೃಷ್ಟಿಸಿದ ಮುಸ್ಲಿಂ ಬಿಲ್ಲವ ಸಮಾವೇಶ

    ಉಡುಪಿ: ಕರಾವಳಿಯ ಪ್ರಬಲ ಸಮುದಾಯ ಬಿಲ್ಲವರ ಜೊತೆ ಮುಸಲ್ಮಾನ ಸ್ನೇಹ ಸಮ್ಮಿಲನ ಮಾಡಲು ಮಾಜಿ ಸಚಿವ ಸೊರಕೆ ಮುಂದಾಗಿದ್ದರು. ಬಿಜೆಪಿ ನಾಯಕರನ್ನು ಕರೆದು ಒಂದು ದಿನದ ಸಭೆ ನಡೆಸಲು ಚಿಂತನೆ ನಡೆಸಿದ್ದರು. ಆದರೆ ಸೊರಕೆ ಪ್ಲ್ಯಾನ್ ಎಲ್ಲಾ ಉಲ್ಟಾ ಆಗಿದ್ದು, ಬಿಲ್ಲವರೇ ತಮ್ಮ ನಾಯಕನ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಮುಸ್ಲಿಂ ಬಿಲ್ಲವ ಸ್ನೇಹ ಸಮ್ಮಿಲನ. ಕರಾವಳಿಯಲ್ಲಿ ಬಹಳ ಚರ್ಚೆ, ವಿವಾದಕ್ಕೆ ಕಾರಣವಾದ ಕಾರ್ಯಕ್ರಮ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಜನವರಿ 11ಕ್ಕೆ ಕಾರ್ಯಕ್ರಮ ನಡೆಯಬೇಕಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪ್ರಬಂಧ ಮಂಡಿಸಬೇಕಿತ್ತು. ಆದರೆ ಬಿಲ್ಲವ ಮುಖಂಡರ ವಿರೋಧದಿಂದ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮ ರದ್ದಾದ್ರೂ ಆಕ್ರೋಶದ ಕಿಡಿ ಕಮ್ಮಿಯಾಗಿಲ್ಲ. ಸಮಾವೇಶ ಮಾಡುವುದಾದ್ರೆ ಮಾಡಿ ನಮ್ಮದೇನೂ ತಕರಾರಿಲ್ಲ. ನಿಮ್ಮ ಸಂಪ್ರದಾಯವನ್ನು ಬಿಡುತ್ತೀರಾ? ದನಕಳ್ಳತನ ಮಾಡುವವರನ್ನು ಶಿಕ್ಷಿಸಿ ಸಮಾಜದಿಂದ ಹೊರಗಿಡ್ತೀರಾ ಎಂಬೆಲ್ಲಾ ಸವಾಲುಗಳನ್ನು ಹಾಕಿದ್ದಾರೆ.

    ಬಿಲ್ಲವ ಮುಖಂಡ ಅಚ್ಯುತ ಕಲ್ಮಾಡಿ ಮಾತನಾಡಿ, ಮುಸಲ್ಮಾನರಿಂದ ಬಿಲ್ಲವರು ಕಲಿಯುವಂತದ್ದೇನಿಲ್ಲ. ಮೊದಲು ಅವರ ಯುವಕರನ್ನು ಸರಿ ದಾರಿಗೆ ತರಲಿ ಎಂದು ಹೇಳಿದ್ದಾರೆ. ಮಾಜಿ ಸಚಿವ ಬಿಲ್ಲವ ಮುಖಂಡ ವಿನಯ್ ಕುಮಾರ್ ಸೊರಕೆ ಈ ಕಾರ್ಯಕ್ರಮದ ಅಧ್ಯಕ್ಷ. ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮದ ಮುಖ್ಯ ಅತಿಥಿ. ವಿರೋಧ ಶುರುವಾಗುತ್ತಲೇ ಕೋಟ ಕಣದಿಂದ ಹಿಂದೆ ಸರಿದಿದ್ದರು.

    ಕೋಟ ಶ್ರೀನಿವಾಸ್ ಪೂಜಾರಿ ಹಿಂದೆ ಸರಿದ ನಂತರ ಪ್ರಮುಖ ಬಿಲ್ಲವರು ಕಾರ್ಯಕ್ರಮಕ್ಕೆ ಕೈಕೊಡುತ್ತಾ ಬಂದರು. ಆರು ತಾಲೂಕು ಮೀಟಿಂಗಲ್ಲಿ ಸಿಕ್ಕ ಬೆಂಬಲ ಕೊನೆಯ ಹಂತದವರೆಗೆ ಬಾಳಲಿಲ್ಲ. ಈ ನಡುವೆ ಸ್ನೇಹ ಸಮ್ಮಿಲನ ಸಂಘರ್ಷದ ಕಡೆ ತಿರುಗುತ್ತಿದೆ ಎಂದಾಗ ಕಾರ್ಯಕ್ರಮ ರದ್ಧಾಗಿದೆ. ವಿರೋಧ ವ್ಯಕ್ತಪಡಿಸಿದ ಬಿಲ್ಲವ ಮುಖಂಡರ ಮೇಲೆ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಜಯಕುಮಾರ್ ಸೊರಕೆ, ಬಿಜೆಪಿ ಮತ್ತು ಅದರ ಪರಿವಾರ ಸಂಘಟನೆಗಳಿಗೆ ಕೋಮು ಸೌಹಾರ್ದತೆ ಬೇಕಿಲ್ಲ. ಕರಾವಳಿಯ ಎರಡು ಧರ್ಮಗಳ ನಡುವೆ ಸದಾ ವೈರತ್ವ ಉಳಿಸಲು ಪ್ರಯತ್ನ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಜನ ಬುದ್ಧಿವಂತರಿದ್ದಾರೆ. ಸ್ನೇಹಹಸ್ತಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಿಲ್ಲವರು ಕರಾವಳಿಯ ಪ್ರಬಲ ವೋಟ್ ಬ್ಯಾಂಕ್. ಬಿಜೆಪಿ ಕಡೆ ಇರುವ ಶಕ್ತಿಯನ್ನು ಬಳಸಿ ಕಾಂಗ್ರೆಸ್ ತನ್ನೆಡೆ ಸೆಳೆಯಲು ಈ ಯತ್ನ ಮಾಡಿ ವಿಫಲವಾಗಿದೆ. ಈ ಬೆಳವಣಿಗೆ ನಂತರ ಬಿಲ್ಲವರು ಕಾಂಗ್ರೆಸ್‍ನಿಂದ ಮತ್ತಷ್ಟು ದೂರ ಉಳಿದರು ಆಶ್ಚರ್ಯವಿಲ್ಲ.