Tag: ಬಿರುಗಾಳಿ

  • ರಾಜ್ಯಾದ್ಯಂತ ಭಾರೀ ಮಳೆ- ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸಿಡಿಲಿಗೆ ಬಲಿ

    ರಾಜ್ಯಾದ್ಯಂತ ಭಾರೀ ಮಳೆ- ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸಿಡಿಲಿಗೆ ಬಲಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದೆ. ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ಸ್ಕೈಮೆಟ್ ಪ್ರಕಾರ ಸೋಮವಾರವೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದೆ. ಆದರೆ ಹವಾಮಾನ ಇಲಾಖೆ ಪ್ರಕಾರ ಇವತ್ತು ಅಧಿಕೃತವಾಗಿ ಮಾನ್ಸೂನ್ ವರ್ಷಧಾರೆ ಶುರುವಾಗಲಿದೆ.

    ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಬೆಳಗಾವಿ ಹಾಗೂ ಮಂಡ್ಯದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಉಡುಪಿ, ಚಾಮರಾಜನಗರ, ತುಮಕೂರು, ಕಾರವಾರದಲ್ಲೂ ಭಾರೀ ಮಳೆಯಿಂದ ಹಾನಿ ಸಂಭವಿಸಿದೆ.

    ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಹೊರವಲಯದಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಶಾಂತಪ್ಪ ಚುಳಕಿ(18) ಸಾವನ್ನಪ್ಪಿದ ಯುವಕನಾಗಿದ್ದು, ಈತ ಮರದ ಕೆಳಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕಿತ್ತೂರ ತಹಶಿಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ರೈತ ಮಹಿಳೆ ಗಿರಿಜಮ್ಮ(35) ಬಲಿಯಾಗಿದ್ದಾರೆ. ಸಂಜೆ ಆರು ಗಂಟೆಯಲ್ಲಿ ಈ ಅವಘಡ ನಡೆದಿದೆ. ಮನೆಯ ಹಿಂದಿನ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಡುಪಿಯಲ್ಲಿಯೂ ವರ್ಷಧಾರೆ ಮತ್ತೆ ಮುಂದುವರಿದಿದೆ. ದಿನವಿಡೀ ಮೋಡ ಕವಿದಿದ್ದ ವಾತಾವರಣವಿದ್ದು, ಸೋಮವಾರ ತಡರಾತ್ರಿ ಗಾಳಿ ಸಹಿತ ಭಾರೀ ಮಳೆಯಾಗಿತ್ತು. ಸಂಜೆಯಾಗುತ್ತಿದ್ದಂತೆಯೇ ಮಳೆ ಸುರಿದಿದ್ದು, 24 ಗಂಟೆ ವಿದ್ಯುತ್ ಸಂಪರ್ಕವಿರಲಿಲ್ಲ. ಉಡುಪಿ, ಕಾಪು ತಾಲೂಕಿನಲ್ಲಿ ಇನ್ನೂ ವಿದ್ಯುತ್ ಪೂರೈಕೆ ಲಭ್ಯವಾಗಿಲ್ಲ. ಸದ್ಯ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ರಿಪೇರಿಯಲ್ಲಿ ತೊಡಗಿದ್ದಾರೆ. ಮುಂದುವರೆದ ಮಳೆಯಿಂದಾಗಿ ಕರ್ತವ್ಯಕ್ಕೆ ಅಡ್ಡಿಯಾಗಿದ್ದು, ನಾಳೆಯವರೆಗೂ ವಿದ್ಯುತ್ ಪೂರೈಕೆ ಅಲಭ್ಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಕಳೆದ ಒಂದು ವಾರದಿಂದ ಚಾಮರಾಜನಗರ ಜಿಲ್ಲೆಯಾದ್ಯಂತ ವರುಣ ಆರ್ಭಟ ಜೋರಾಗಿದೆ. ಮಳೆಯ ಆರ್ಭಟದಿಂದ ಜಿಲ್ಲೆಯ ಪ್ರಕೃತಿ ಸಂಪತ್ತು ಹಸಿರಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನೂ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಗಳು ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತ ಕಾರಣ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.

    ಬಿಸಿಲ ಧಗೆಯಿಂದ ಬಸವಳಿದಿದ್ದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕಳೆದ ಎರಡು ದಿನದಿಂದ ವರುಣ ಕೃಪೆ ತೋರಿದ್ದಾನೆ. ಕಾರವಾರ ಜಿಲ್ಲೆಯಾದ್ಯಾಂತ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಕಾರವಾರ ನಗರದ ನಂದನಗದ್ದಾ ಅಂಬೇಡ್ಕರ್ ಕಾಲೋನಿಯ ದೀಪಕ್ ಗಣಪತಿ ಉಳ್ಸವಾರ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು, ಮನೆಯ ಮಾಡಿ ಸಂಪೂರ್ಣ ಜಖಂ ಆಗಿದೆ. ಪರಿಣಾಮ ಒಂದು ಲಕ್ಷ ರುಪಾಯಿಯಷ್ಟು ಹಾನಿಯಾಗಿದೆ. ಇನ್ನೂ ಕಾರವಾರ ಕಡಲತೀರದಲ್ಲಿ ಬಿರುಸಿನ ಗಾಳಿ ಬೀಸುತಿದ್ದು, 5 ಅಡಿಗಳಷ್ಟು ಅಲೆಗಳು ಅಪ್ಪಳಿಸುತ್ತಿದ್ದು, ಪ್ರವಾಸಿಗರಿಗೆ ಹಾಗೂ ಮೀನುಗಾರರಿಗೆ ಸಮುದ್ರದ ಬಳಿ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ತುಮಕೂರು ಜಿಲ್ಲೆಯಲ್ಲಿ ಬಿರುಗಾಳಿ ಅವಾಂತರ ಸೃಷ್ಠಿಸಿದ್ದು, ತುರುವೇಕೆರೆ ತಾಲೂಕಿನ ದುಂಡಾ ಗ್ರಾಮದಲ್ಲಿ ಮರ ಮುರಿದು ಓರ್ವ ಸಾವು, ಮತ್ತೊರ್ವನಿಗೆ ಗಾಯ ಹಾಗೂ ಎರಡು ಎಮ್ಮೆಗಳು ಮೃತಪಟ್ಟಿವೆ. ನಡೆದಿದೆ. ಹೇಮಂತ್(38) ಸ್ಥಳದಲ್ಲೇ ಸಾವನ್ನಪ್ಪಿದ ಯುವಕನಾಗಿದ್ದು, ಮರ ಮುರಿದು ತಲೆ ಮೇಲೆ ಬಿದ್ದ ಪರಿಣಾಮ ಹೇಮಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೋಟದಿಂದ ಮನೆಗೆ ನಡೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ. ಇನ್ನೂ ಚೇಳೂರಿನಲ್ಲಿ ಎರಡು ಗುಡಿಸಲು ಮೇಲೆ ಬೇವಿನ ಮರ ಮುರಿದು ಬಿದ್ದಿದ್ದು, ರಂಗನಾಥ ಎಂಬವರಿಗೆ ಗಾಯ, ಎರಡು ಎಮ್ಮೆ-ಕರುಗಳು ಮೃತಪಟ್ಟಿದೆ. ಸೋಮವಾರ ರಾತ್ರಿ ಬಿಸಿದ ಬಿರುಗಾಳಿಯಲ್ಲಿ ಈ ಅವಘಡ ಸಂಭವಿಸಿದೆ.

  • ತಡರಾತ್ರಿ ಬಿರುಗಾಳಿ ಮಳೆ ರೌದ್ರಾವತಾರ – ಉಡುಪಿ ಜನಜೀವನ ಅಸ್ತವ್ಯಸ್ಥ

    ತಡರಾತ್ರಿ ಬಿರುಗಾಳಿ ಮಳೆ ರೌದ್ರಾವತಾರ – ಉಡುಪಿ ಜನಜೀವನ ಅಸ್ತವ್ಯಸ್ಥ

    ಉಡುಪಿ: ಭಾನುವಾರ ತಡರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಗುಡುಗು ಸಿಡಿಲಿನಿಂದ ಕೂಡಿದ ಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಭಾರೀ ಗಾಳಿಗೆ ವಿದ್ಯುತ್ ಕಂಬಗಳೂ ಬಿದ್ದಿದೆ. ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.

    ಶಿರಿಬೀಡು ಸಮೀಪ ಕೆಲವು ಮನೆಗಳಿಗೆ ನೀರು ನುಗ್ಗಿದೆ. ದೊಡ್ಡಣಗುಡ್ಡೆಯಲ್ಲಿ ನೂರಾರು ಮರಗಳು ರಸ್ತೆಗೆ ಬಿದ್ದಿದ್ದು ಇದರಿಂದ ಸಂಚಾರ ಅಸ್ತವ್ಯಸ್ಥಗೊಂಡಿದೆ. ತಡರಾತ್ರಿಯ ಬಿರುಗಾಳಿ ಮಳೆ ರೌದ್ರಾವತಾರ ತೋರಿತ್ತು. ಉಡುಪಿಯ ಜನತೆ ಬಂದ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಬಂದ್ ಗೆ ಜಿಲ್ಲಾ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದರೂ, ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದಿವೆ.

    ಬ್ರಹ್ಮಗಿರಿ, ಅಂಬಾಗಿಲುವಿನಲ್ಲಿ ಮರಗಳು ಉರುಳಿದ್ದು, ಟ್ರಾನ್ಸ್ ಫಾರ್ಮರ್ ಕೂಡ ರಸ್ತೆಗೆ ಉರುಳಿದೆ. ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಿಲ್ಲೆಯಲ್ಲಿ ಉರುಳಿ ವಿದ್ಯುತ್ ವ್ಯತ್ಯಯವಾಗಿದೆ. ಮಳೆಯಿಂದ ಮೆಸ್ಕಾಂ ಸಿಬ್ಬಂದಿಗಳು ಪರದಾಟ ನಡೆಸುತ್ತಿದ್ದಾರೆ.

  • ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

    ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

    ಕಲಬುರಗಿ: ನಗರದಲ್ಲಿ ಶನಿವಾರ ಸಂಜೆ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೀಸಿದ ಬಿರುಗಾಳಿಗೆ ಜನ ಭಯಭೀತರಾಗಿದ್ದಾರೆ.

    ಕಲಬುರಗಿಯ ರಟಕಲ್ ದೇವಸ್ಥಾನದಲ್ಲಿರುವ 56 ಅಡಿಯ ರೇವಣ್ಣ ಸಿದ್ದೇಶ್ವರ ಮೂರ್ತಿ ಧರೆಗುಳಿದಿದೆ. ಅದೃಷ್ಟವಶಾತ್ ಮಳೆಯ ಹಿನ್ನೆಲೆಯಿಂದಾಗಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ.

    ನಗರದ ಸೇಡಂ ರಸ್ತೆಯ ಇಎಸ್ ಐ ಆಸ್ಪತ್ರೆ ಸುತ್ತಮುತ್ತ ಬೀಸಿದ ಭಾರೀ ಬಿರುಗಾಳಿ ಭಯಂಕರ ಧೂಳೆಬ್ಬಿಸಿದ್ದು, ಸ್ಥಳೀಯರು ಈ ಭಯಂಕರ ಬಿರುಗಾಳಿ ಬೀಸುವ ದೃಶ್ಯ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಯೆಮೆನ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಮೆಕ್ನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಗೂ ಹಬ್ಬಿದ್ದು, ಕಡಲತಡಿಯ ನಿವಾಸಿಗಳು ಆತಂಕದಲ್ಲಿದ್ದಾರೆ. 2 ದಿನಗಳಿಂದ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಗೆ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • ದಾವಣಗೆರೆ, ಕೊಪ್ಪಳದಲ್ಲಿ ವರುಣನ ಆರ್ಭಟ – ಜೋಳಿಗೆಯಲ್ಲಿದ್ದ ಮಗು 20 ಮೀಟರ್ ಹಾರಿ ಬದುಕುಳೀತು

    ದಾವಣಗೆರೆ, ಕೊಪ್ಪಳದಲ್ಲಿ ವರುಣನ ಆರ್ಭಟ – ಜೋಳಿಗೆಯಲ್ಲಿದ್ದ ಮಗು 20 ಮೀಟರ್ ಹಾರಿ ಬದುಕುಳೀತು

    ದಾವಣಗೆರೆ/ಕೊಪ್ಪಳ: ಜಿಲ್ಲೆಯ ಎರಡು ಕಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆಗೆ ಜೋಳಿಗೆಯಲ್ಲಿ ಹಾಕಿದ್ದ ಮಗುವೊಂದು ಮನೆಯಿಂದ 20 ಮೀಟರ್ ಹಾರಿ ಹೋಗಿ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ತಾಲೂಕಿನ ಆಚಲಾಪೂರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಏಕಾಏಕಿ ಭಾರೀ ಬಿರುಗಾಳಿ ಬಿಸಿದೆ. ಈ ವೇಳೆಯಲ್ಲಿ ಶಿವಪ್ಪ ಅನ್ನೋರ ಮಗ ಒಂದೂವರೆ ವರ್ಷದ ಸಾಗರ್ ಮನೆಯಲ್ಲಿ ಕಬ್ಬಿಣದ ಪಟ್ಟಿಗೆ ಜೋಳಿಗೆ ಕಟ್ಟಿ ಅದರಲ್ಲಿ ಮಲಗಿಸಲಾಗಿತ್ತು. ಬೀಸಿದ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಯಿಂದ 20 ಮೀಟರ್ ದೂರದ ಕಲ್ಲಿನ ಪೊದೆಯಲ್ಲಿ ಸಾಗರ್ ಬಿದ್ದಿದ್ದಾನೆ.

    ಆಗ ಮನೆಯವರು ಕತ್ತಲಿನಲ್ಲಿ ಹುಡುಕಾಡಿದಾಗ ಸಾಗರ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಎಲ್ಲರೂ ಸಾಗರ್ ಸಾವನ್ನಪ್ಪಿದ್ದ ಎಂದು ತಿಳಿದಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷೆ ಮಾಡಿ ಮಗುವಿಗೆ ಏನು ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಅಚ್ಚರಿಗೊಂಡಿದ್ದಾರೆ.

    ಇತ್ತ ಬಿರುಗಾಳಿ ಸಹಿತ ಮಳೆಗೆ ತಾಂಡಾದ ಬಹುತೇಕ ಮನೆಗಳ ಮೇಲ್ಛಾವಣಿಗಳು ಎಲ್ಲೆಂದರಲ್ಲಿ ಹಾರಿ ಹೋಗಿವೆ. ಇದರಿಂದಾಗಿ ಮನೆಯಲ್ಲಿನ ದವಸ ಧಾನ್ಯಗಳು ನೀರಿಗಾಹುತಿ ಆಗಿದ್ದು, ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ತಾಂಡಾದಲ್ಲಿ ವಿದ್ಯುತ್ ಕೈಕೊಟ್ಟಿದೆ. ತಾಂಡಾದ ಜನರು ಮನೆಗಳ ಮೇಲ್ಛಾವಣಿ ಹಾರಿ ಹೋಗಿರುವುದರಿಂದ ಮಕ್ಕಳು, ವೃದ್ಧರಿಗೆ ವಾಸ ಮಾಡಲು ಮನೆಯಿಲ್ಲದೆ ಬಯಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಕೂಡಲೇ ಜಿಲ್ಲಾ ಆಡಳಿತ ಸೂರು ಕಲ್ಪಿಸಬೇಕೆಂದು ಸಂತ್ರಸ್ಥರು ಒತ್ತಾಯಿಸಿದ್ದಾರೆ.

    ಇನ್ನು ದಾವಣಗೆರೆಯ ಹರಪನಹಳ್ಳಿ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆಗೆ ಮನೆಗಳ ಮೇಲೆ ಮರಗಳು ಬಿದ್ದಿವೆ. ಉಪ್ಪಾರಗೇರೆ, ಕೊಟ್ಟೂರು ರಸ್ತೆ, ಹುಲಿಕಟ್ಟೆ ರಸ್ತೆಯಲ್ಲಿ ಬಿದ್ದಿರುವ ಮನೆಗಳ ಮೇಲೆ ಬಿದ್ದಿವೆ. ಉಪ್ಪಾರಗೆರೆಯಲ್ಲಿ ಮಾಡ್ಲಗೇರೆ ಉಮೇಶ, ಕೆ.ಲಕ್ಕಪ್ಪ, ಕೆ. ಪರಸಪ್ಪ ಅವರ ಮನೆಗಳು ಜಖಂ ಆಗಿವೆ. ಆದರೆ ಈ ಮಳೆಯ ಅವಘಡದಿಂದ ಜನರು ಮತ್ತು ದನದ ಕೊಟ್ಟಿಗೆಯಲ್ಲಿದ್ದ ಕರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಳೆಯಿಂದ ಚರ್ಚ್ ಆವರಣದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಹರಪನಹಳ್ಳಿಗೆ ಬುಧವಾರ ರಾತ್ರಿ ಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾಹಿತಿ ತಿಳಿದ ಬೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಬಂದು ಜೆಸಿಬಿ ಬಳಸಿ ಮರಗಳನ್ನು ತೆರವುಗೊಳಿಸಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ-ಧರೆಗುರುಳಿದ 30ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ-ಧರೆಗುರುಳಿದ 30ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು

    ಬೆಂಗಳೂರು: ಕಳೆದ ಮೂರು ದಿನಗಳಿಂದ ವರುಣದೇವ ರಾಜ್ಯದಲ್ಲೆಡೆ ಅಬ್ಬರಿಸುತ್ತಿದ್ದಾನೆ. ಬುಧವಾರ ಸಂಜೆ ಆರಂಭವಾದ ಬಿರುಗಾಳಿ ಸಹಿತ ಮಳೆ ಜನಜೀವನ್ನು ಅಸ್ತವ್ಯಸ್ಥವನ್ನಾಗಿ ಮಾಡಿತು. ನಗರದ ವಿದ್ಯಾರಣ್ಯಪುರ, ಎಚ್‍ಎಂ.ಟಿ ಲೇಔಟ್, ಯಲಹಂಕ ನ್ಯೂಟೌನ್, ಜ್ಯೂಡಿಷಿಯಲ್ ಲೇಔಟ್ ಸುತ್ತ-ಮುತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರಿ ಗಾತ್ರದ ಮರಗಳು ಗಾಳಿಯ ರಭಸಕ್ಕೆ ನೆಲ ಕಚ್ಚಿವೆ. ಕೆಲವೆಡೆ ಮನೆಗಳ ಮೇಲೆ ಕಾಂಪೌಂಡ್‍ಗಳ ಮೇಲೆ ಉರುಳಿಬಿದ್ದಿದೆ.

    ಬಿರುಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿರುವದರಿಂದ ಇಡೀ ರಾತ್ರಿ ವಿದ್ಯಾರಣ್ಯಪುರ ಹಾಗೂ ಸುತ್ತ-ಮುತ್ತಲ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅರಣ್ಯಘಟಕದ ಸಿಬ್ಬಂದಿ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ರು. ಆದ್ರೆ ಕತ್ತಲಿದ್ದ ಪರಿಣಾಮ ಕಡಿತಗೊಂಡ ವಿದ್ಯುತ್ ತಂತಿ ಮರುಜೋಡಣೆ ಸಾಧ್ಯವಾಗ್ಲಿಲ್ಲ. ಅಷ್ಟಾಗಿ ಮಳೆ ಇಲ್ಲದಿದ್ದರೂ ಏಕಾಏಕಿಯಾಗಿ ಬಂದ ಭಾರಿ ರಭಸದ ಗಾಳಿ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ಆನೇಕಲ್ ನಲ್ಲಿಯೂ ಸಹ ಗಾಳಿ ಸಹಿತ ಮಳೆಯಾಗಿದೆ. ಬೀಸಿದ ಭಾರಿ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಬಿದ್ದು ಒಂದು ಕಾರು ಜಖಂಗೊಂಡಿದ್ದು, ಹತ್ತಾರು ವಿದ್ಯುತ್ ಕಂಬಗಳು, ಮರಗಳು ಸೇರಿದಂತೆ ಮೊಬೈಲ್ ಟವರ್ ಧರೆಗುರುಳಿವೆ. ನೆಲಮಂಗಲ ಸುತ್ತಮುತ್ತ ಸ್ವಲ್ಪ ಸಮಯದ ಕಾಲ ಭಾರಿ ಬಿರುಗಾಳಿ ಬೀಸಿದ್ದು, ಗಾಳಿಯ ರಭಸಕ್ಕೆ ಕಾರು ಜಖಂಗೊಂಡಿದೆ. ಶಿವನಪುರದಲ್ಲಿ ಏರ್‍ಟೆಲ್ ಮೊಬೈಲ್ ಟವರ್ ಮುರಿದು ಬಿದ್ದಿದೆ. ಇತ್ತ ದೊಂಬರಹಳ್ಳಿಯಲ್ಲಿ 100 ಕೆವಿ ಟ್ರಾನ್ಸ್ ಫಾರ್ಮರ್ ನೆಲಕ್ಕೆ ಅಪ್ಪಳಿಸಿದ್ದು, ಕುದುರುಗೆರೆ ಗುಡ್ಡದಹಳ್ಳಿಯಲ್ಲಿ ಆರು ವಿದ್ಯುತ್ ಕಂಬ ಸೇರಿದಂತೆ ಅನೇಕ ಬೃಹತ್ ಮರಗಳು ಧರೆಗುರುಳಿವೆ.

    ಕೋಲಾರ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಸೇರಿದಂತೆ ವಿವಿಧೆಡೆ ವರುಣನ ಆರ್ಭಟ ಜೋರಾಗಿದ್ದು, ಆಲಿಕಲ್ಲು ಮಳೆಗೆ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಅರಹಳ್ಳಿ, ಮೂರಾಂಡಹಳ್ಳಿ ಭಾಗದಲ್ಲಿ ನರ್ಸರಿ ಫಾರಂ, ಸೇರಿದಂತೆ ಮನೆಯ ಮೇಲ್ಛಾವಣಿಗಳು ಗಾಳಿ ಮಳೆಗೆ ಹಾರಿ ಹೋಗಿದ್ದು, ಬೃಹತ್ ಗಾತ್ರದ ಮರಗಳು ನೆಲಕಚ್ಚಿವೆ. ಆಲಿಕಲ್ಲು ಮಳೆಯಿಂದ ಟೊಮೊಟೋ ಸೇರಿದಂತೆ ಲಕ್ಷಾಂತರ ರೂಪಾಯಿ ತೋಟಗಾರಿಕಾ ಬೆಳೆಗಳು ನಾಶವಾಗಿವೆ.

  • ಭಾರೀ ಬಿರುಗಾಳಿ: ಗಾಳಿಯಲ್ಲಿ ಹಾರಾಡಿದ ಜನರು-ವಿಡಿಯೋ ನೋಡಿ

    ಭಾರೀ ಬಿರುಗಾಳಿ: ಗಾಳಿಯಲ್ಲಿ ಹಾರಾಡಿದ ಜನರು-ವಿಡಿಯೋ ನೋಡಿ

    ಆ್ಯಮಸ್ಟರ್‍ಡ್ಯಾಮ್: ಯುರೋಪ್‍ನ ಉತ್ತರ ನೆದರ್‍ಲ್ಯಾಂಡಿನಲ್ಲಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಗಾಳಿಯ ತೀವ್ರತೆಗೆ ಮೂವರು ಮೃತಪಟ್ಟಿದ್ದಾರೆ.

    ಉತ್ತರ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ರಭಸವಾಗಿ ಬೀಸುತ್ತಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು, ನಗರದಲ್ಲಿಯ ಕಟ್ಟಡಗಳ ಮೇಲ್ಚಾವಣಿ, ಪಾರ್ಕ್ ಮಾಡಿದ್ದ ವಾಹನಗಳು ಗಾಳಿಗೆ ಹಾರಾಡುತ್ತಿವೆ. ಈಗಾಗಲೇ ಆಮಸ್ಟರ್ ಡ್ಯಾಮ್ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 260 ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ.

    ನಗರದಲ್ಲಿ ರೈಲ್ವೆ ಮತ್ತು ಬಸ್ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿದೆ. ಬಿರುಗಾಳಿಗೆ ಈಗಾಗಲೇ ಏಳು ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ಲೇನ್‍ಗಳು ಲ್ಯಾಂಡ್ ಆಗುವ ವೇಳೆ ಗಾಳಿಯಲ್ಲಿ ತೇಲಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಜರ್ಮಿನಿಯ ಡಚ್ ಬಾರ್ಡರ್ ಬಳಿ ಮರವೊಂದು ಬಿದ್ದ ಪರಿಣಾಮ 59 ವರ್ಷದ ವ್ಯಕ್ತಿ ಮೃತಪಟ್ಟರೆ, ಪಶ್ಚಿಮ ಜರ್ಮಿನಿಯ ಲಿಪ್‍ಸ್ಟಾಡತ್ ಬಳಿ ಲಾರಿ ಚಾಲಕ ಮತ್ತು ನಾರ್ಥ್ ರಿಹಿನೆಯಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ನಾರ್ಥ್ ರಿಹಿನೆ ಪ್ರದೇಶದ 1 ಲಕ್ಷಕ್ಕೂ ಅಧಿಕಜನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಪೊಲೀಸ್ ಇಲಾಖೆ ತಿಳಿಸಿದೆ.

    ಜರ್ಮನ್ ರೈಲ್ವೆ ಕೂಡ ದೀರ್ಘ ಪ್ರಯಾಣದ ರೈಲುಗಳ ಸಂಚಾರವನ್ನು ನಿಲ್ಲಿಸಿದೆ. 2010ರ ಬಳಿಕ ಜರ್ಮನ್ ರೈಲ್ವೆ ಮೊದಲ ಬಾರಿಗೆ ತನ್ನ ಸಂಚಾರವನ್ನು ಕಡಿತಗೊಳಿಸಿದೆ.

     

  • ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

    ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

    ಜೈಪುರ: ಭಾರೀ ಮಳೆ ಹಾಗೂ ಚಂಡಮಾರುತದಿಂದಾಗಿ ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಲ್ಲಿನ ಭರತ್‍ಪುರ ಜಿಲ್ಲೆಯ ಸೆವರ್ ರೋಡ್‍ನ ಅನ್ನಪೂರ್ಣ ಮ್ಯಾರೇಜ್ ಹೋಮ್‍ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ, ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, 28 ಮಂದಿಗೆ ಗಂಭೀರ ಗಾಯಗಳಾಗಿದೆ.

    ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಚಂಡಮಾರುತ ಅಪ್ಪಳಿಸಿದೆ. ಮಳೆಯಿಂದಾಗಿ ಕೆಲವರು ಮಂಟಪದ ಪಕ್ಕದಲ್ಲಿದ್ದ ಶೆಡ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಮಂಟಪದ ಗೋಡೆ ಇದ್ದಕ್ಕಿದ್ದಂತೆ ಶೆಡ್ ಮೇಲೆ ಕುಸಿದು ಬಿದ್ದಿದ್ದು, 26 ಮಂದಿಯನ್ನ ಬಲಿ ಪಡೆದಿದೆ. ಮೃತಪಟ್ಟವರಲ್ಲಿ 11 ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಟಪದ ಗೋಡೆ ಸುಮಾರು 90 ಅಡಿ ಉದ್ದ ಹಾಗೂ 12-13 ಅಡಿ ಎತ್ತರವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹವಾಮಾನ ಇದ್ದಕ್ಕಿದ್ದಂತೆ ಬದಲಾಗಿ ಬಿರುಗಾಳಿ ಶುರುವಾಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

    ದುರಂತಕ್ಕೆ ಮುಖ್ಯಮಂತ್ರಿ ವಸುಂಧರಾ ರಾಜೆ ವಿಷಾದ ವ್ಯಕ್ತಪಡಿಸಿದ್ದಾರೆ.

  • ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    -ಬಳ್ಳಾರಿಯಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ರಾಯಚೂರು/ಬಳ್ಳಾರಿ: ಬಿರುಬಿಸಿಲ ಮಧ್ಯದಲ್ಲೇ ಬಿಸಿಲನಾಡು ರಾಯಚೂರಿನಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ರಾತ್ರಿಯಿಡಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮೂಲಕ ಜಿಲ್ಲೆ ತಂಪಾಗಿದೆ. ಲಿಂಗಸುಗೂರು, ಸಿಂಧನೂರು, ಮಾನ್ವಿ ಸೇರಿ ಎಲ್ಲೆಡೆ ಮಳೆಯಾಗಿದ್ದು ಅಲ್ಲಲ್ಲಿ ಮಳೆಹಾನಿಯೂ ಆಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಕೆಲವೆಡೆ ಹಾನಿ ಸಂಭವಿಸಿದೆ.

    ಲಿಂಗಸುಗೂರಿನಲ್ಲಿ ಸುರಿದ ಮಳೆಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ. ಲಿಂಗಸುಗೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ದಾಳಿಂಬೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸುಮಾರು 100 ಎಕರೆಯಷ್ಟು ಬೆಳೆ ಹಾನಿ ಸಂಭವಿಸಿದೆ. ಈ ಬೇಸಿಗೆ ಮಳೆ ನೇರವಾಗಿ ತೋಟಗರಿಕಾ ಬೆಳೆಯ ಮೇಲೆ ಪರಿಣಾಮ ಬೀರಿದೆ.

    ಇನ್ನೂ ಬಿರುಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗುರಳಿದ್ದು, 15 ವಿದ್ಯುತ್ ಕಂಬಗಳು ಬಿದ್ದಿವೆ. ಗುಡಿಸಲು ಹಾಗೂ ಗೂಡಂಗಡಿಗಳು ಹಾರಿಹೋಗಿವೆ. ಮಾನ್ವಿ, ಸಿಂಧನೂರು, ರಾಯಚೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ರಾಯಚೂರು ನಗರದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾದ್ರು ಬೇಸಿಗೆಯ ಮಳೆಗೆ ಜನ ಖುಷಿಯಾಗಿದ್ದಾರೆ.

    ಬಳ್ಳಾರಿಯಲ್ಲೂ ಮಳೆ: ಗಣಿನಾಡು ಬಳ್ಳಾರಿಯಲ್ಲೂ ರಾತ್ರಿ ಮಳೆಯಾಗಿದೆ. ಮಳೆಯಾದ ಪರಿಣಾಮ ಬಳ್ಳಾರಿಯ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿಯ ಹೊಸ ಬಸ ನಿಲ್ದಾಣದ ಬಳಿಯ ಅಂಡರ್ ಬ್ರೀಡ್ಜ್ ಬಳಿ ನೀರು ಶೇಖರಣೆಯಾದ ಪರಿಣಾಮ ಇಂದು ಮುಂಜಾನೆ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕ್ಯಾದಿಗೇನಹಳ್ಳಿ ಎಂಬಲ್ಲಿ ಗೋಣೆಪ್ಪ ಎಂಬವರಿಗೆ ಸೇರಿದ 14 ಕುರಿ ಹಾಗೂ ಒಂದು ನಾಯಿ ಸಿಡಿಲು ಬಡಿದು ಸಾವನ್ನಪ್ಪಿವೆ.