Tag: ಬಿರುಗಾಳಿ

  • ರಾಜ್ಯದಲ್ಲಿ ಭಾರೀ ಮಳೆ – ರಸ್ತೆಗೆ ಬಂತು ಸಿಂಟೆಕ್ಸ್ ಟ್ಯಾಂಕ್, ಸಿಡಿಲಿಗೆ ನಾಲ್ವರು ಸಾವು

    ರಾಜ್ಯದಲ್ಲಿ ಭಾರೀ ಮಳೆ – ರಸ್ತೆಗೆ ಬಂತು ಸಿಂಟೆಕ್ಸ್ ಟ್ಯಾಂಕ್, ಸಿಡಿಲಿಗೆ ನಾಲ್ವರು ಸಾವು

    ಬೆಂಗಳೂರು: ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಒಂದು ಎತ್ತು ಹಾಗೂ ನಾಲ್ಕು ಜನ ರೈತರು ಮೃತಪಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗಲಲ್ಲು ಗಟ್ಟಿಯ ರೈತ ಬಾಲಜ್ಜರ ಚಂದ್ರಪ್ಪ (55), ಯಾದಗಿರಿ ಜಿಲ್ಲೆಯ ಗುರುಮೀಠಕಲ್ ತಾಲೂಕಿನ ಮಧ್ವಾರ ಗ್ರಾಮದ ಶೇಖರ ಪೂಜಾರಿ (35) ಹಾಗೂ ಶೇಖರ ಚೌಕಿದಾರ (34), ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ತಳವಾಡಕೆ ಗ್ರಾಮದ ಮಾದಪ್ಪ (55) ಸಿಡಿಲಿಗೆ ಬಲಿಯಾಗಿದ್ದಾರೆ.

    ಬಿಸಿಲಿನಿಂದ ಕಂಗೆಟ್ಟ ದಾವಣಗೆರೆ ಜನತೆಗೆ ವರುಣ ತಂಪು ಎರೆದಿದ್ದಾನೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಳೆಯ ಸಿಂಚನವಾಗಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಿದೆ. ಆದರೆ ಜಗಳೂರು ತಾಲೂಕಿನ ಅಣಬೂರು ಗಲಲ್ಲುಗಟ್ಟಿ ಗ್ರಾಮದ ಕಣದಲ್ಲಿ ಕೆಲಸ ಮಾಡುತ್ತಿದ್ದ ಬಾಲಜ್ಜರ ಚಂದ್ರಪ್ಪ (55) ಸಿಡಿಲು ಬಡಿದು ಪ್ರಾಣ ಬಿಟ್ಟಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

    ಬೀದರ್ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾಲ್ಕಿ ತಾಲೂಕಿನ ತಳವಾಡಕೆ ಗ್ರಾಮದ ಮಾದಪ್ಪ ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಟಪಟ್ಟಿದ್ದಾರೆ. ಅವರ ಜೊತೆಗಿದ್ದ ಒಂದು ಎತ್ತು ಕೂಡ ಸಾವನ್ನಪ್ಪಿದೆ. ಮೃತ ಮಾದಪ್ಪ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭಾಲ್ಕಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಯಾದಗಿರಿ ಜಿಲ್ಲೆಯ ವಿವಿಧೆಡೆ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಿದೆ. ಗುರುಮೀಠಕಲ್ ತಾಲೂಕಿನ ಮಧ್ವಾರ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಶೇಖರ ಪೂಜಾರಿ ಹಾಗೂ ಶೇಖರ ಚೌಕಿದಾರ ಮೃತಪಟ್ಟಿದ್ದಾರೆ. ಮತ್ತೊರ್ವ ಗಾಯಾಳನ್ನು ಸೈದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ತಪ್ಪಿದ ಭಾರೀ ಅನಾಹುತ:
    ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಭೀಕರ ಗಾಳಿ ಸಮೇತ ಮಳೆಯಾಗಿದೆ. ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀದಪ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ನೀರಿನ ಸಿಂಟೆಕ್ಸ್ ಟ್ಯಾಂಕ್ ಗಳು ಗಾಳಿಯ ವೇಗಕ್ಕೆ ಹಾರಿ ಹೋಗಿ ರಸ್ತೆ ಬೀಳುತ್ತಿದ್ದವು. ಇದೇ ವೇಳೆ ಅಂಗಡಿಯ ಮುಂದೆ ಚಲಿಸುತ್ತಿದ್ದ ಬೈಕ್‍ಗೆ ಸಿಂಟೆಕ್ಸ್ ಅಪ್ಪಳಿಸಿದ ಪರಿಣಾಮ ಸವಾರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲಿಯೇ ಸಮೀಪದಲ್ಲಿ ನಿಂತಿದ್ದ ವ್ಯಕ್ತಿಗೆ ಮೂರು ಸಿಂಟೆಕ್ಸ್ ಟ್ಯಾಂಕ್ ಗಳು ವೇಗವಾಗಿ ಬಂದು ಅಪ್ಪಳಿಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

    ಕೊಡಗು ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಅಬ್ಬರ ಜೋರಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ದ್ವಿಚಕ್ರ ವಾಹನ ಸವಾರರು, ಜನಸಾಮಾನ್ಯರ ಪರದಾಡಿದ್ದಾರೆ.

    ಬಿಸಿಲನಾಡಿಗೆ ತಂಪೆರೆದ ವರುಣ:
    ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಬಳ್ಳಾರಿಯ ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದ ಬಳಿ ಆಲಿಕಲ್ಲು ಮಳೆಯಾಗಿದ್ದು ಗದ್ದೆ ಹಾಗೂ ಮನೆಯ ಅಂಗಳದಲ್ಲಿ ಮುತ್ತಿನ ರಾಶಿಯಂತೆ ಬಿದ್ದಿದೆ.

    ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದೆ. ಗಾಳಿಯ ಹೊಡೆತಕ್ಕೆ ಕುಷ್ಟಗಿ ಹೊರವಲಯದ ಟೋಲ್ ಗೇಟ್ ಕಿತ್ತುಹೋಗಿದೆ. ಇದರಿಂದಾಗಿ ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿ ಸವಾರರು ಪರದಾಡುವಂತಾಯಿತು. ವಿಜಯಪುರ ಜಿಲ್ಲೆಗೂ ವರುಣನ ಸಿಂಚನವಾಗಿದೆ.

  • ವರುಣನ ಆರ್ಭಟಕ್ಕೆ ಹಾರಿದ ಶೀಟ್‍ಗಳು, ನೆಲಕ್ಕೆ ಉರುಳಿದ ಮರಗಳು

    ವರುಣನ ಆರ್ಭಟಕ್ಕೆ ಹಾರಿದ ಶೀಟ್‍ಗಳು, ನೆಲಕ್ಕೆ ಉರುಳಿದ ಮರಗಳು

    ಬೆಂಗಳೂರು: ಚಾಮರಾಜನಗರ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆರಾಯ ಅಬ್ಬರಿಸಿದ್ದು, ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕೆಲವು ಕಡೆಗಳಲ್ಲಿ ಮಳೆ ಸಹಿತ ಬಿರುಗಾಳಿಯಿಂದಾಗಿ ಮನೆ ಹಾಗೂ ಅಂಗಡಿಯ ಶೀಟ್‍ಗಳು ಹಾರಿ ಹೋಗಿವೆ.

    ಬೆಂಗಳೂರಿನ ಮೆಜೆಸ್ಟಿಕ್, ಯಶವಂತಪುರ, ಕೊಡಗೇನಹಳ್ಳಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಆರ್ ಎಂವಿ 2ನೇ ಹಂತದ 7ನೇ ಅಡ್ಡರಸ್ತೆಯಲ್ಲಿ ಮರವೊಂದು ಬುಡಸಮೇತ ಧರೆಗೆ ಉರುಳಿದೆ. ರಾಜ್ಯದಾದ್ಯಂತ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ ಸಂಭವವಿದೆ. ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ನೆಲಮಂಗಲ ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಬಿರುಗಾಳಿ ಸಹಿತ ಮಳೆಯಿಂದಾಗಿ ಪೆಂಡಾಲ್ ನೆಲಸಮವಾಗಿದೆ. ಇತ್ತ ಕೆಲವು ಅಂಗಡಿಗಳ ಶೀಟ್‍ಗಳು ಗಾಳಿಗೆ ಹಾರಿಹೋಗಿವೆ. ನೆಲಮಂಗಲ ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದ್ದು, ವ್ಯಾಪಾರಸ್ಥರು ಮತ್ತು ಗ್ರಾಹಕರು ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ಎಂ.ಜಿ.ರಸ್ತೆ ಬದಿಯ ರಾಜಕಾಲುವೆ ತುಂಬಿಹರಿಯುತ್ತಿದ್ದು, ರಸ್ತೆ ಜಲಾವೃತವಾಗಿದ್ದು, ಮನೆ, ಅಂಗಡಿಗಳಿಗೆ ಕೊಳಚೆ ನೀರು ನುಗ್ಗುತ್ತಿದೆ.

    ನೆಲಮಂಗಲ ತಾಲೂಕಿನ ಮಲ್ಲಾಪುರ ಗ್ರಾಮದ ಶಿವಣ್ಣ ಎಂಬವರ ಮನೆಯ ಶೀಟುಗಳು ಹಾರಿ ಅನಾಹುತ ಉಂಟಾಗಿದೆ. ತಕ್ಷಣವೇ ಸ್ಥಳೀಯರು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದ್ದು, ಮನೆಯಲ್ಲಿ ನೀರು ತುಂಬಿ ವಸ್ತುಗಳು ಹಾಳಾಗಿವೆ. ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಇಂಡ್ಲಬೆಲೆ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ಆನೇಕಲ್ ಪಟ್ಟಣ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಿದೆ. ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ. ಮಳೆ ಬರುತ್ತಿದ್ದರಿಂದ ಬೆಂಕಿ ನಂದಿ, ಭಾರೀ ಅನಾಹುತ ತಪ್ಪಿದೆ.

    ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗುತ್ತಿದ್ದು, ಮಳೆಗೆ ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ನೆಲಕ್ಕುರುಳಿವೆ. ಜಿಲ್ಲೆಯ ಕೋಲಾರ, ಮಾಲೂರು, ಬಂಗಾರಪೇಟೆ, ಮುಳಬಾಗಲು ಹಾಗೂ ಕೆಜಿಎಫ್ ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮಾಲೂರು ತಾಲೂಕಿನ ದೊಡ್ಡ ಕಡತೂರು ಗ್ರಾಮದ ಸಪ್ತಗಿರಿ ಎಂಬವರ ಪಾಲಿ ಹೌಸ್ ಗಾಳಿ, ಮಳೆಗೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿಯ ವಿವಿಧ ಬೆಳೆಗಳು ಹಾಳಾಗಿವೆ.

    ಉತ್ತಮ ಭರಣಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ರೈತರು ಉಳುಮೆ ಮಾಡಲು ಅನುಕೂಲವಾದ ಮಳೆಯಾಗಿದೆ. ಸುಮಾರು ಒಂದುವರೆ ಗಂಟೆಯಿಂದ ಬಿಡದೆ ಸುರಿದ ಮಳೆಗೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರಿಳಿವೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡುತ್ತಿದ್ದು, ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಮನೆ ಮೇಲೆ ತೆಂಗನ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದೆ. ಸರಿಯಾದ ಸಮಯಕ್ಕೆ ವಿದ್ಯುತ್ ಕಡಿತವಾಗಿದ್ದು ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳೆಲ್ಲಾ ಹೊಂಡಗಳಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಸಿದ್ದಾಪುರ ಸೇರಿದಂತೆ ವಿವಿಧಡೆ ಮಳೆರಾಯ ತಂಪೆರೆದಿದ್ದಾನೆ. ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಮೈಸೂರು ನಗರ ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರ ಪರದಾಟ, ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

  • ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ- ಹಾರಿಹೋದ ಮೇಲ್ಛಾವಣಿ, ಧರೆಗೆ ಉರುಳಿದ ವಿದ್ಯುತ್ ಕಂಬಗಳು

    ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ- ಹಾರಿಹೋದ ಮೇಲ್ಛಾವಣಿ, ಧರೆಗೆ ಉರುಳಿದ ವಿದ್ಯುತ್ ಕಂಬಗಳು

    ಹಾವೇರಿ/ಮಂಡ್ಯ/ಕೋಲಾರ: ರಾಜ್ಯದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಲವೆಡೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಶಿರಬಡಗಿ, ಹತ್ತಿಮತ್ತೂರು, ಜಲ್ಲಾಪುರ, ಕಡಕೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಕೆಲಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಅಲ್ಲದೆ ಶಿರಬಡಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದರಿಂದ 50 ವರ್ಷದ ಶಂಕ್ರಪ್ಪ ಲಮಾಣಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಮಂಡ್ಯದಲ್ಲಿ ಬೀಸಿದ ಬಿರುಗಾಳಿಗೆ ಹಲವೆಡೆ ಅವಾಂತರವಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮ ಮತ್ತು ಮಂಡ್ಯ ತಾಲೂಕು ದುದ್ದ ಹೋಬಳಿ ಬಿಲ್ಲೇನಹಳ್ಳಿ ಗ್ರಾಮದಲ್ಲಿ ಲೈಟ್ ಕಂಬಗಳು ಧರೆಗುರುಳಿದೆ. ಅಲ್ಲದೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

    ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಹಾಗೂ ಮಳೆಗೆ ಬೆಳೆ ನಾಶವಾಗಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ರೈತ ಗವಿಗೌಡರ ಮೂರು ಎಕರೆ ಪಪ್ಪಾಯಿ ಬೆಳೆ ನಾಶವಾಗಿದೆ. ರವಿ ಎಂಬವವರ ಎರಡು ಎಕರೆ ಪಪ್ಪಾಯಿ ಬೆಳೆ ನಾಶವಾಗಿದ್ದು, ರೈತ ಚಲುವೇಗೌಡರ ನಿರ್ಮಾಣ ಹಂತದಲ್ಲಿದ್ದ ಕೋಳಿಫಾರಂ ಧರೆಗುರುಳಿದೆ. ಸುಮಾರು 20 ಲಕ್ಷ ರೂ.ಗೆ ಹೆಚ್ಚು ನಷ್ಟವಾಗಿದೆ. ಬಿರುಗಾಳಿ ಮಳೆಗೆ ರೈತ ಕಂಗಾಲಾಗಿದ್ದಾರೆ.

    ಕೋಲಾರದಲ್ಲೂ ಬೀಸಿದ ಬಿರುಗಾಳಿಗೆ ನೂರು ವರ್ಷಗಳಷ್ಟು ಪುರಾತನ ಅರಳಿ ಮರ ಧರೆಗೆ ಬಿದ್ದಿದೆ. ಕೋಲಾರ ತಾಲೂಕು ಕೆ. ಮಲ್ಲಾಂಡಹಳ್ಳಿ ಗ್ರಾಮದ ಅಶ್ವಥ ಕಟ್ಟೆಯಲ್ಲಿದ್ದ ಅರಳಿಮರ ಕಳೆದ ರಾತ್ರಿ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಮರ ಗ್ರಾಮದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಗ್ರಾಮದ ಜನರಿಗೆ ರಸ್ತೆ ಸಂಪರ್ಕ ಬಂದ್ ಆಗಿದೆ. ಕೂಡಲೇ ಅರಣ್ಯ ಇಲಾಖೆಯವರು ಮರ ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

  • ಐದು ನಿಮಿಷ ಬೀಸಿದ ಬಿರುಗಾಳಿಗೆ ಉಡುಪಿ ಅಲ್ಲೋಲ ಕಲ್ಲೋಲ – ವಿಡಿಯೋ ನೋಡಿ

    ಐದು ನಿಮಿಷ ಬೀಸಿದ ಬಿರುಗಾಳಿಗೆ ಉಡುಪಿ ಅಲ್ಲೋಲ ಕಲ್ಲೋಲ – ವಿಡಿಯೋ ನೋಡಿ

    ಉಡುಪಿ: ಜಿಲ್ಲೆಯಲ್ಲಿ 5 ನಿಮಿಷ ಬೀಸಿದ ಭಾರೀ ಗಾಳಿ ಎಲ್ಲರನ್ನೂ ತಬ್ಬಿಬ್ಬು ಮಾಡಿದೆ. ಎರಡು ದಿನಗಳ ಹಿಂದೆ ಮಳೆಗೂ ಮುನ್ನ ಬಂದ ಬಿರುಗಾಳಿ ಜನ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ವಿಡಿಯೋ ನೋಡಿದರೆ ಒಂದು ಕ್ಷಣ ಎದೆ ಝಲ್ ಎನಿಸುತ್ತದೆ.

    ಏಕಾಏಕಿ ಬೀಸಿದ ಭಾರೀ ಗಾಳಿಯ ಕೆಲ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಈ ದೃಶ್ಯಗಳು ನಡುಕ ಹುಟ್ಟಿಸುವಂತಿದೆ. ಉಡುಪಿಯ ಮಲ್ಪೆಯಲ್ಲಿ ಬೀಸಿದ ಭಾರೀ ಗಾಳಿಗೆ ಎದ್ದ ಧೂಳು ಇಡೀ ಪರಿಸರವನ್ನೇ ಕೆಂಪಾಗಿಸಿತ್ತು. ಬೋರ್ಡ್ ಬ್ಯಾನರ್ ಗಳು ಗಾಳಿಯ ರಭಸಕ್ಕೆ ಕಿತ್ತು ಹಾರಿಹೋಗಿದೆ. ಇನ್ನೊಂದೆಡೆ ಭಾರಿ ಬಿರುಗಾಳಿ ತೆಂಗಿನ ಮರಗಳ ಆಕಾರವೇ ಬದಲಿಸಿದಂತೆ ಕಾಣುತಿತ್ತು.

    ಮಣಿಪಾಲದಲ್ಲಿ ಬೀಸಿದ ಭಾರೀ ಗಾಳಿಗೆ ದ್ವಿಚಕ್ರ ಸವಾರರು, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ತಬ್ಬಿಬ್ಬಾಗುವಂತಹ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಅಂಗಡಿಗಳಿಗೆ ಅಳವಡಿಸಿರುವ ಕಬ್ಬಿಣದ ಶೀಟ್‍ಗಳು, ಅಂಗಡಿಯ ಬೋರ್ಡ್ ಗಳು ಹಾರಿ ಹೋಗಿ ಆಟೋ ಹಾಗೂ ಇತರೇ ವಾಹನಗಳ ಮೇಲೆ ಬಿದ್ದ ಶಬ್ದಕ್ಕೆ ಜನರು ಭೂಕಂಪದ ಆಗುತ್ತಿದೆಯೋ ಏನೋ ಎನ್ನುವ ರೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಭಯಾನಕ ದೃಶ್ಯವನ್ನು ಕಾರಿನ ಚಾಲಕರೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದು ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅದರಲ್ಲೂ ಉಡುಪಿಯ ಉದ್ಯಾವರ ಸಮೀಪದ ಪಿತ್ರೋಡಿಯಲ್ಲಿ ಸಂಜೆ ಹೊತ್ತು ಆಟವಾಡುತ್ತಿರುವ ವೇಳೆ ಬೀಸಿದ ಗಾಳಿಯ ರಭಸಕ್ಕೆ ಮಕ್ಕಳು ಕಂಗಾಲಾಗಿ ಓಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗಾಳಿಯ ಅಬ್ಬರ ಎಷ್ಟಿತ್ತೆಂದರೆ ವಾಲಿ ಬಾಲ್ ನೆಟ್ ಹರಿದು ಹಾರಿ ಹೋಗಿದೆ. ಮೈದಾನದಲ್ಲಿದ್ದ ಮಕ್ಕಳಿಗೆ ಏನಾಗುತ್ತಿದೆ ಅಂತ ಗೊತ್ತಾಗದೇ ಬಿರುಗಾಳಿಗೆ ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಇಂತಹ ಗಾಳಿ ಬಂದಿರುವ ಬಗ್ಗೆ ದಾಖಲಾಗಿರಲಿಲ್ಲ. ಸುಮಾರು 10 ನಿಮಿಷಗಳ ಕಾಲ ಮಳೆ ಸುರಿದಿ ಬಳಿಕ ಗಾಳಿಯ ವೇಗ ಹತೋಟಿಗೆ ಬಂದಿದೆ. ಕೆಲ ನಿಮಿಷಗಳಷ್ಟೇ ಬೀಸಿದ ಭಾರೀ ಗಾಳಿಗೆ ಜನರು ತತ್ತರಿಸಿ ಹೋಗಿದ್ದು, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.

  • ಬಿರುಗಾಳಿ ಸಹಿತ ಭಾರೀ ಮಳೆ- ಮೇಲ್ಛಾವಣಿ ಕುಸಿದು ವೃದ್ಧೆ ಸಾವು!

    ಬಿರುಗಾಳಿ ಸಹಿತ ಭಾರೀ ಮಳೆ- ಮೇಲ್ಛಾವಣಿ ಕುಸಿದು ವೃದ್ಧೆ ಸಾವು!

    ಮೈಸೂರು: ಮಂಗಳವಾರ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹನಗೂಡು ಹೋಬಳಿಯಲ್ಲಿ ನಡೆದಿದೆ.

    ಹನಗೂಡಿನಲ್ಲಿ ಭಾರೀ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಭಾರೀ ಮಳೆಗೆ ವೃದ್ಧೆ ದೊಡ್ಡತಾಯಮ್ಮ(70) ಸಾವನ್ನಪ್ಪಿದ್ದಾರೆ. ಹನಗೂಡು ಹೋಬಳಿಯಾದ್ಯಂತ ಮಳೆರಾಯನ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಭಾರೀ ಬಿರುಗಾಳಿಗೆ 50ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿದೆ. ಮಳೆಗೆ ತಟ್ಟೆಕೆರೆ, ಅರಸು ಕಲ್ಲಹಳ್ಳಿ, ಹುಣಸೆಗಾಲದಲ್ಲಿ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಅಲ್ಲದೆ ರಾತ್ರಿ ಸುರಿದ ಮಳೆಗೆ ಕೆಲವು ಗಂಟೆಗಳ ಕಾಲ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

  • ಒಡಿಶಾ, ಆಂಧ್ರ ಕರಾವಳಿಯಲ್ಲಿ ತಿತ್ಲಿ ಅಬ್ಬರ – ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ!

    ಒಡಿಶಾ, ಆಂಧ್ರ ಕರಾವಳಿಯಲ್ಲಿ ತಿತ್ಲಿ ಅಬ್ಬರ – ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ!

    ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಒಡಿಶಾ, ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತ ತೀವ್ರಗೊಂಡಿದೆ. ಗಂಟೆಗೆ 145 ಕಿಮೀ ವೇಗದಲ್ಲಿ ಗಾಳಿ ಬೀಸ್ತಿದೆ. ಮುಂದಿನ 18 ಗಂಟೆಗಳಲ್ಲಿ ಅದು ಮತ್ತಷ್ಟು ತೀವ್ರಗೊಳ್ಳಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ಸರ್ಕಾರ ಕರಾವಳಿಯ ತಟದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಅಲ್ಲದೇ ಶಾಲೆ-ಕಾಲೇಜಿಗೂ ರಜೆ ಘೋಷಿಸಲಾಗಿದೆ. ಈ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರದಲ್ಲಿ ಕರಾವಳಿ ತೀರದಲ್ಲಿ ಕಡಲಬ್ಬರ ಜೋರಾಗಿದೆ.

    ಉಲ್ಲಾಳದಲ್ಲಿ ಮನೆ ಮಸೀದಿಗಳಿಗೆ ನೀರು ನುಗ್ಗಿದೆ. ಅಲೆಗಳ ಹೊಡೆತ ತಾಳಲಾರದೆ ಮುಕ್ಕಚ್ಚೇರಿ ಕಿಲೇರಿಯಾ ನಗರ, ಕೈಕೋದ ಎಂಟು ಮನೆ ಮಂದಿ ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಯಾರು ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಒಡಿಶಾದ ಗೋಪಾಲ್ಪುರ ಹಾಗೂ ಆಂಧ್ರ ಪ್ರದೇಶದ ಕಳಿಂಗಪಟ್ಟಣಂ ನಡುವೆ ಗುರುವಾರ ಬೆಳಗ್ಗೆ 145 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಸಲಾಗಿತ್ತು. ತಿತ್ಲಿ ಗಂಟೆಗೆ 10 ಕಿ.ಮೀ. ವೇಗದಲ್ಲಿ ಬೀಸಲಿದ್ದು ಚಂಡಮಾರುತ ಪ್ರಭಾವವು ಒಡಿಶಾದ ಗೋಪಾಲ್ಪುರದಿಂದ 370 ಕಿಮೀ ಆಗ್ನೇಯಕ್ಕೆ ಹೆಚ್ಚಾಗಿರಲಿದೆ ಎಂದು ಐಎಂಡಿ ಬುಲೆಟಿನ್ ನಲ್ಲಿ ಹೇಳಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಡೆಗೋಡೆ ಸಮೇತ ಕುಸಿದು ಬಿದ್ದ ರಸ್ತೆ: ಮಡಿಕೇರಿ-ಕೇರಳ ಸಂಪರ್ಕ ಕಟ್

    ತಡೆಗೋಡೆ ಸಮೇತ ಕುಸಿದು ಬಿದ್ದ ರಸ್ತೆ: ಮಡಿಕೇರಿ-ಕೇರಳ ಸಂಪರ್ಕ ಕಟ್

    ಮಡಿಕೇರಿ: ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕೊಡಗು ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 89 ಯನ್ನು ಬಂದ್ ಮಾಡಲಾಗಿದೆ.

    ವಿರಾಜಪೇಟೆ ತಾಲೂಕಿನ ಗೊಣಿಕೊಪ್ಪ, ಶ್ರಿಮಂಗಲ ಕ್ಯಾಲಿಕಟ್ ಸಂಪರ್ಕ ಕಲ್ಪಿಸುವ ರಸ್ತೆಯ ಪೊಕಳತೊಡು ಎಂಬಲ್ಲಿ ತಡೆಗೋಡೆ ಸಮೇತ ರಸ್ತೆ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದೀಗ ಸ್ಥಳೀಯ ನಿವಾಸಿಗಳಲ್ಲಿನ ಆತಂಕ ಮತ್ತಷ್ಟು ಹೆಚ್ಚಿದೆ.

    ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳುವ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಮೊಬೈಲ್ ನೆಟವರ್ಕ್ ಇಲ್ಲದೆ ಗರುವಾರದಿಂದ ಮನೆಯರನ್ನು ಸಂಪರ್ಕಿಸಲು ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಹಾಮಳೆಗೆ ಧರೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕ ಕಟ್

    ಮಹಾಮಳೆಯಿಂದ ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಸೇನಾ ಪಡೆಯ ಎರಡು ತುಕಡಿಯ ಸಹಾಯದಿಂದ ಇಂದು ನಡೆಯುತ್ತಿದೆ. ಈಗಾಗಲೇ ಮಳೆಯಲ್ಲಿ ನಿರಾಶ್ರಿತರಾದವರಿಗೆ 10 ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಗುಡ್ಡದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ. ಕೊಡಗಿನಲ್ಲಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಕ್ಕೆ ಕಾರಣವಾಗಿರುವ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯ ಉಪವಿಭಾಗೀಯ ಕಚೇರಿಯನ್ನೇ ಮಡಿಕೇರಿಯಲ್ಲಿ ಇಂದಿನಿಂದ ತೆರೆಯಲಾಗುತ್ತಿದೆ.

    7 ದಿನಗಳಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡು ಈಗಾಗಲೇ ಸಂಪರ್ಕ ಕಳೆದುಕೊಂಡ ರಸ್ತೆಗಳ ದುರಸ್ತಿ ನಡೆಸಲಾಗುವುದು. ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ಆದ್ಯತೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮಳೆ ಕಡಮೆಯಾದ ಕೂಡಲೇ ಹಾಳಾಗಿರುವ ರಸ್ತೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

    ಈಗಾಗಲೇ ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ನೀರು ಹರಿವು ಹೆಚ್ಚಾಗಿರುವ ಕಡೆಗಳಿಗೆ ತೆರಳಲು ಅಸಾಧ್ಯವಾಗಿರುವ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕಿದೆ ಅದರೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಅ ಸ್ಥಳಗಳಿಗೆ ತಲುಪಲು ಕಷ್ಟಕರವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ಕಲಬುರಗಿ: ವೆಲ್ಡಿಂಗ್ ಕೆಲಸದ ವೇಳೆ ಏಕಾಏಕಿ ಬೀಸಿದ ಬಿರುಗಾಳಿಗೆ ಕ್ರೇನ್ ಕುಸಿದು ಬಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಈ ಘಟನೆ ನಡೆದಿದೆ.

    ಬಿಹಾರ್ ಮೂಲದ ತಬಾರಕ್ ಅಲಿ(25) ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಐವರು ಯುವಕರನ್ನು ಬಿಪಿನ್, ಅಜಯ್, ಜುಬೇರ್, ಸುಧಾಕರ್ ಮತ್ತು ಕೋಕಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಓರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಮೃತ ಕಾರ್ಮಿಕರು ಬೃಹತ್ ಕ್ರೇನ್ ಮೇಲೆ ಹತ್ತಿ ವೆಲ್ಡಿಂಗ್ ಮಾಡುತ್ತಿದ್ದು, ಬಿರುಗಾಳಿ ಹಾಗೂ ಮಳೆಗೆ ಏಕಾಏಕಿ ಕ್ರೆನ್ ಕುಸಿದುಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

  • ಧೂಳಿಗೆ 7 ದುರ್ಮರಣ, 21 ಮಂದಿಗೆ ಗಾಯ!

    ಧೂಳಿಗೆ 7 ದುರ್ಮರಣ, 21 ಮಂದಿಗೆ ಗಾಯ!

    ಲಕ್ನೋ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಧೂಳಿನ ಬಿರುಗಾಳಿಗೆ ಏಳು ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ ಧೂಳಿನ ಬಿರುಗಾಳಿಯಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಗೋಂಡಾ ಮತ್ತು ಸೀತಾಪುರದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಫೈಜಾಬಾದ್ ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವಕ್ತಾರರು ಲಕ್ನೋದಲ್ಲಿ ಹೇಳಿದ್ದಾರೆ.

    ಇನ್ನು ಫೈಜಾಬಾದ್ ನಲ್ಲಿ 11 ಮಂದಿ ಹಾಗೂ ಸೀತಾಪುರದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಪಡೆದಿದ್ದು, ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ ಧೂಳಿನ ಬಿರುಗಾಳಿಯಿಂದ ಮೃತಪಟ್ಟವರಿಗೆ ಪರಿಹಾರ ಧನವನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ರಾಜ್ಯ ಸರ್ಕಾರವು ಧೂಳಿನ ಬಿರುಗಾಳಿ ಮತ್ತು ಇತರೆ ಸಂಬಂಧಿತ ಘಟನೆಗಳಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಎಲ್ಲಾ ಸಹಾಯವನ್ನು ವಿಸ್ತರಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

  • ಬಿರುಗಾಳಿಯೊಂದಿಗೆ ಭಾರೀ ಮಳೆ- ಮರದ ಕೊಂಬೆ ಬಿದ್ದು ಯುವಕ ಸಾವು

    ಬಿರುಗಾಳಿಯೊಂದಿಗೆ ಭಾರೀ ಮಳೆ- ಮರದ ಕೊಂಬೆ ಬಿದ್ದು ಯುವಕ ಸಾವು

    ಚಿಕ್ಕಬಳ್ಳಾಪುರ: ಭಾರೀ ಬಿರುಗಾಳಿಗೆ ಬೃಹತ್ ಗಾತ್ರದ ಅರಳಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ, ಯುವಕನೊರ್ವ ಮೃತಪಟ್ಟ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.

    ಹಿರೇಬಿದನೂರು ನಿವಾಸಿ ಅಂಜುಂ (20) ಮೃತ ಯುವಕ. ಗೌರಿಬಿದನೂರು-ಚಿಕ್ಕಬಳ್ಳಾಪುರ ಮಾರ್ಗದ ಸುಮಂಗಲಿ ಕಲ್ಯಾಣ ಮಂಟಪದ ಸಮೀಪದಲ್ಲಿ ಘಟನೆ ನಡೆದಿದೆ.

    ಅರಳಿ ಮರವು ಸುಮಾರು ನೂರು ವರ್ಷದ ಮರವಾಗಿದ್ದು, ಬಿರುಗಾಳಿಗೆ ಮೊದಲ ಬಾರಿ ಕೊಂಬೆ ಬಿದ್ದಾಗ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಆದರೆ, ತೂಗು ಬಿದ್ದಿದ್ದ ಮತ್ತೊಂದು ಕೊಂಬೆ ಮುರಿದು ಬಿದ್ದ ಪರಿಣಾಮ ಕೆಳಗೆ ಹೋಗುತ್ತಿದ್ದ ಅಂಜುಂ ಸಿಲುಕಿಕೊಂಡಿದ್ದಾರೆ. ಗಂಭೀರವಾಗಿ ಗಾಯವಾಗಿದ್ದ ಅಂಜುಂನನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಂಜುಂ ಮೃತಪಟ್ಟಿದ್ದಾರೆ.

    ಮೃತ ಅಂಜುಂ ಸಂಬಂಧಿಕರು, ಸ್ನೇಹಿತರು, ಗೌರಿಬಿದನೂರು-ಚಿಕ್ಕಬಳ್ಳಾಪುರ ಮಾರ್ಗದ ರಸ್ತೆ ಸಂಚಾರ ತಡೆದು, ಪ್ರತಿಭಟನೆ ನಡೆಸಿದ್ದು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಪ್ರತಿಭಟನಾಕಾರರ ಮನವೊಲಿಸಿ, ಪರಿಹಾರ ಕೊಡಿಸವುದಾಗಿ ಭರವಸೆ ನೀಡಿದ್ದರಿಂದ ಮೃತನ ಸಂಬಂಧಿಕರು ಪ್ರತಿಭಟನೆ ವಾಪಾಸ್ ಪಡೆದಿದರು.